ಏಡಿ ಕಾಲಿಗೆ ‘ಚಾವಿ ಹಾಕುವ’ ಸಾಣಿಕಟ್ಟೆ ಗಣಪಣ್ಣ!

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ, ಭಾಷೆ ಅಂತನ್ನಬಹುದೇನೊ. ಅಲ್ಲಿನವರು ಮಾತನಾಡುವುದೂ ಹಾಗೆ ತೆರೆ ಅಲೆಅಲೆಯಾಗಿ..

ರೇಣುಕಾ ರಮಾನಂದ ಅವರು ಕೂಡ ಇದಕ್ಕೆ ಹೊರತಲ್ಲ.ಇಂಥ ಸಮುದ್ರದಂಚಿನ ಊರಲ್ಲಿರುವ ರೇಣುಕಾ ರಮಾನಂದ ಇಷ್ಟು ದಿನ ನಮಗೆ ‘ಮೀನುಪೇಟೆಯ ತಿರುವಿನಲ್ಲಿ’ ಸಿಗುತ್ತಿದ್ದರು. ಇನ್ನು ಮುಂದೆ ಪ್ರತಿ ಶುಕ್ರವಾರ ‘ಅವಧಿ’ಯ ‘ನನ್ನ ಶಾಲ್ಮಲೆ’ ಅಂಕಣದಲ್ಲಿ ಸಿಗಲಿದ್ದಾರೆ.

ಅಂಕೋಲೆಯ ಮೀನುಪೇಟೆಯ ತಿರುವಿನ ಔಷಧಿ ಅಂಗಡಿಯಲ್ಲಿ ಸಾಣೆಕಟ್ಟೆಯ ಗಣಪು ಗೌಡ ಯಾರಿಗೋ ಮೀನು ಪಾರ್ಸೆಲ್ ಮಾಡಲು ಒಂದು ಖಾಲಿ ಥರ್ಮೊಕೋಲ್ ಬಾಕ್ಸು ಕೊಳ್ಳುತ್ತಿದ್ದ. ಅಂಗಡಿಯವರು ಕೊಟ್ಟ ಮೂರು ನಮೂನೆ ಸೈಜಿನ ಬಾಕ್ಸನ್ನು ‘ಯಾವುದಾದೀತು’ ಎಂದು ಸರಿಯಾಗಿ ನೋಡಲು ರಸ್ತೆ ಕಡೆಯ ಖುಲ್ಲಾ ಬೆಳಕಿಗೆ ಹಿಡಿದು ಕಣ್ಣು ಸಣ್ಣ ಮಾಡಿ ಅದರ ಒಳಗಿನ ಹಿಡಿಪು ಚೆಕ್ ಮಾಡುತ್ತಿದ್ದ. ಅವನು ಎರಡು ಮೂರು ಸಲ ಆಕಡೆ ಈಕಡೆ ತಿರಗೋದು ಮಾಡುತ್ತಿದ್ದನಾದ ಕಾರಣ ಅಲ್ಲೇ ಸ್ವಲ್ಪ ದೂರದಲ್ಲಿ ನಿಂತು ಹಣ್ಣು ಕೊಳ್ಳುತ್ತಿದ್ದ ಅಥವಾ ಹಣ್ಣಿನವ ನೋಟಿನ ಚಿಲ್ಲರೆಗಾಗಿ ಬೇರೆ ಬದಿ ಹೋದ ವೇಳೆಯಲ್ಲಿ ಬೇಕಾರು ನಿಂತ ನನ್ನ ಕಣ್ಣು ಅವನ ಮೇಲೆ ಬಿತ್ತು.

ಇದು ಗಣಪಣ್ಣನಲ್ಲವಾ? ಅದೆಷ್ಟು ವರ್ಷವಾಯ್ತು ಅವನನ್ನು ನೋಡಿ… ನಮ್ಮನ್ನೆಲ್ಲ ಮರ್ತೆ ಬಿಟ್ಟಿನಾ ಹೆಂಗೆ ಎನ್ನಿಸಿ ಹತ್ರ ಹೋಗಿ “ಗಣಪಣ್ಣಾ.. ಏನಾ.. ಗುತ್ತಾತಿದಾ?” ಅಂದೆ.

ಖರೆ ಹೇಳ್ತೇನೆ ನಾನು ಹೇಳಿದ ಹೊರತೂ ಅಂವನಿಗೆ ಗುತ್ತಾಗಲಿಲ್ಲ. ತಲೆತುಂಬ ಮೆತ್ತಿಕೊಂಡ ಎಣ್ಣೆ ಬಿಸಿಲಿಗೆ ಕಣ್ಣಿಗಿಳಿದು ಕಾಲರ್ ಹಿಂದೆ ಕುತ್ತಿಗೆಗೆ ಬೆವರಿಗೆಂದು ಅಡ್ಡ ಹಾಕಿದ ಟುವಾಲು ತೆಗೆದು ಕಣ್ಣು ಮುಖ ಒರೆಸಿಕೊಳ್ಳುತ್ತ “ತಂಗೀ ಗುತ್ತಾಗಲಿಲ್ಲ.. ಬ್ಯಾಜಾರ್ ಮಾಡಬೇಡ್ವೆ..” ಅಂದ.

ಪಟ್ಟಾಪಟ್ಟಿ ಚಡ್ಡಿ ಮೇಲೆ ಚೌಕುಳಿ ಮುಂಡು ಎದೆತಂಕ ಉಟ್ಟು ಪ್ಯಾರಗಾನ್ ಹವಾಯಿ ಹಾಕಿ-

“ಸಾಣಿಕಟ್ಟೆಯ ಶೆಣತಂಗಿ ಮುಗುವೆ ಶೆಟ್ಲಿನ ತಂದಿಯೇನೇ..?
ಹಾಸುಗಲ್ಲಮ್ಯೆನೆ ಗಾಳ ಹಾಕುವವ್ನು ನಿನ್ನ ಗಂಡನೇನೆ..?
ಕುದ್ರೆ ಹಳದಲಿ ಜಿಗ್ಗ ಮಾಡುವವ್ಳು ನಿನ್ನ ಅತ್ತೆಯೇನೆ..?
ನಾಗರಬೈಲಲಿ ದನಾ ಕಾಯುವವ್ನು ನಿನ್ನ ಮಾವನೇನೆ..?”

ಎಂಬಿವೇ ಮುಂತಾದ ಪಕ್ಕಾ ಲೋಕಲ್ ಕಿಚಾವಣೆ ಹಾಡನ್ನು ಹಾದಿ ತುಂಬ ಕುಣಿದುಕೊಂಡೇ ಹಾಡುತ್ತ ಬರುತ್ತಿದ್ದ ಗಣಪಣ್ಣ ಹಸಿ ಹಿಡಿಕಡ್ಡಿಯ ಗಂಟಲವರೆಗೂ ಕುರಡೆ, ಕೆಂಸ, ಬೈಗೆ, ಏರಿ, ಕಾಂಗ್ಲಸಿ, ಮಡ್ಲಿ, ಮಂಡ್ಲಿ, ಕುರ್ಡಿ, ವಡಚ್ಲಿ, ಮಂಗಣಿ, ಒಡ್ತಿ, ನೆಪ್ಪೆ, ಕುರುಡೆ ಮುಂತಾದ ಮಿಡುಕಾಡೋ ಹಿನ್ನೀರು ಮೀನು ಸುರಿದುಕೊಂಡು ಬರುತ್ತಿದ್ದ.

ಈಗ ನೋಡಿದರೆ ವೇಷಭೂಷಣದಲ್ಲಿ ಪೂರ ಬದಲಾಗಿದ್ದ. ಬಿಳಿ ದಪ್ಪ ಟೆರಿಕಾಟು ಹಾಫ್ ಶರ್ಟು, ಪೈಜಾಮಾ, ಬೆರಳಿಗೊಂದೆರಡು ಗುಮ್ಮಟೆಯಂತಹ ಉಂಗುರ, ಕಿಶೆಯಲ್ಲಿ ಮಡಚಿಟ್ಟುಕೊಂಡ ಸೋವಿಯದೆನ್ನಿಸುವ ಒಂದು ಕೂಲಿಂಗ್ ಗ್ಲಾಸು, ಮಣ್ಣುಬಣ್ಣದ ಕವರ್ರಿನ ಒಂದು ಎಂಡ್ರಾಯ್ಡು ಫೋನಿನೊಂದಿಗೆ ಇಲ್ಲಿ ಹೀಗೆ ಮೀನು ಕೊಂಡು ಕಳಿಸಲು ಬಾಕ್ಸು ಕೊಳ್ಳುತ್ತಿದ್ದ.

“ಬೇಕಾದೋರು ಒಬ್ರಿಗೆ ಶಿರ್ಸಿಗೆ ಮೀನು ಕಳ್ಸಬೇಕಾಗಿತ್ತು.. ಊರಿಗೆಲ್ಲ ನಾನೇ ಮೀನು ಹಿಡ್ಕಂಡು ಪುಕ್ಕಟ್ ಕೊಡ್ತಿದ್ದೆ ಆಗ.. ಈಗ್ ನೋಡು ನಾನೇ ಈ ಮುಗ್ಗಿದ ಮೀನು ಕೊಂಡು ಬೇರೊಬ್ರಿಗೆ ಕಳಿಸು ಪರಿಸ್ಥಿತಿ ಬಂದೀದು..

ತೋಡಿ ನುಕ್ಕೇಡಿ ತಂದಿದ್ದೆ.. ನಿಂಗ್ ನಾಕು ಗಾಡಿಬಾಕ್ಸಿಗೆ ಹಾಕಿಕೊಡ್ತೆ ತಕ್ಕಂಡೋಗು” ಅಂದ.

ಯಾರಾದ್ರೂ ಅಪರೂಪದವರು ಸಿಕ್ಕರೆ ಅಂಕೋಲೆಯವರು ಸಿಂಗಲ್ ಬಟಾಟೆವಡೆ ಮತ್ತು ಚಾ ಕುಡಿಯಲು “ಗುತ್ತಿದೊ ನಿನ್ನ ದೊಡ್ಡಸ್ತಿಕೆ.. ಬಾರೊ ಚಾ ಕುಡಿಯುಕೆ.. ” ಅಂತ ಹೊಟೇಲಿಗೆ ಆಹ್ವಾನಿಸುವುದು ರೂಢಿ. ನಾನು ಪುಟ್ಟ ಮಗುವಾದಾಗಿನಿಂದ ಹಿಡಿದು ಹತ್ತಿಪ್ಪತ್ತು ವರ್ಷದವರೆಗೆ ತಿಂಗಳಿಗೊಮ್ಮೆಯಾದರೂ ಪೊತ್ತೆ ಪೊತ್ತೆ ಮೀನು ಮನೆಗೆ ತಂದು ತೋಪಿಗೆ ಸುರುವಿ ಹೋಗುತ್ತಿದ್ದ ಗಣಪಣ್ಣನ ಹಾಗೇ ಹೋಗಲು ಬಿಟ್ಟರೆ ನನಗೆ ಪಾಪ ಬಂದೀತು. ಪಕ್ಕದ ಕಿರಾಣಿ ಅಂಗಡಿಯಲ್ಲಿ ನಾನು ನಿಂತದ್ದು ಕಂಡರೂ.. “ತಂಗೀ ಒಂದು ಎಳ್ಳ್‌ನೀರು ಕುಡಿದು ಹೋಗು ಬಾರೆ..”ಎಂದು ಕರೆವ ಗೋಪಾಲಣ್ಣನ ಅಂಗಡಿಗೆ ಹೋಗಿ ಒಂದು ಮಸಾಲೆ ದೋಸೆ ಮತ್ತೊಂದು ವಡಾ ಆರ್ಡರ್ರು ಮಾಡಿ ಕುಳಿತೆವು.

ಈಗೆಂತ ಕೆಲ್ಸ ಮಾಡ್ಕಂಡಿದ್ದೀ ಗಣಪಣ್ಣ ಅಂದರೆ

“ಏಡಿ ಕಾಲಿಗೆ ಚಾವಿ ಹಾಕುವುದು” ಅಂದ.

ನುಕ್ಕೇಡಿ – mud crab ಗೆ ಚಾವಿ..

ಎರಡೂವರೆ ಸಾವಿರ ಎಕರೆಗೂ ಮೇಲ್ಪಟ್ಟ ಅಘನಾಶಿನಿಯ ಹಿನ್ನೀರು ಗಜನಿಯಲ್ಲಿ ಮತ್ತು ಗಂಗಾವಳಿ ಗಜನಿಯಲ್ಲೂ ಕೂಡ ನುಕ್ ಎಸಡಿ ಎಂಬ ಜಾತಿಯ ಅರಲು ಬಣ್ಣದ ದೊಡ್ಡ ಗಾತ್ರದ ಏಡಿಗಳು ಸಿಗುತ್ತವೆ. ಲುಕ್ಕೇರಿ ಎಸಡಿ, ಕಾಂಡ್ಲ ಎಸಡಿ, ಕುರ್ಲೆ ಮುಂತಾದ ಹೆಸರಿನಿಂದಲೂ ಕರೆವ ಇದನ್ನು ಇಪ್ಪತ್ತು ವರ್ಷದ ಹಿಂದೆ ಸ್ಥಳೀಯರಾರೂ ತಿನ್ನುತ್ತಿರಲಿಲ್ಲ.

ಸಿಹಿನೀರಿನ ಹಳ್ಳ ಹೊಳೆಗಳ ಸಮೀಪದ ಕಲ್ಲೊಟ್ಟೆಯ ಕಲ್ಲೆಸಡಿ ಮತ್ತು ಸಮುದ್ರಜಾಲಿ ಮಾತ್ರ ತಿಂದು ಗೊತ್ತಿತ್ತು ನಮಗೆ. ಈ ನುಕ್ಕೆಸಡಿಯನ್ನು ಗಜನಿ ಅರಲಲ್ಲಿ, ಅಥವಾ ಆ ಅರಲಲ್ಲಿ ಹುಗಿದ ಕಲ್ಲೊಟ್ಟೆಯೊಳಗೆ ಹೋಗಿ ತೆಗೆಯುವುದು ಅಷ್ಟು ಸರಳಿಲ್ಲದ ಕಾರಣವೋ, ರುಚಿ ಗೊತ್ತಿಲ್ಲದ ಕಾರಣಕ್ಕೋ ಅಥವಾ ಅರಲಿನ ಬಣ್ಣದ್ದೇ ಮೈ ಕೈ ಕೊಂಬು ಹೊಂದಿ ಕಾಣಲು ಕಂಠಾಳವಾಗಿ ಇದ್ದ ಕಾರಣಕ್ಕೋ ಏನೋ.. ಸಾವಿರಾರು ಎಕರೆ ಗಜನಿ ಪ್ರದೇಶದ ಕಾಂಡ್ಲಾ ಬೇರುಗಳಲ್ಲಿ,ಒಟ್ಟೆಗಳಲ್ಲಿ ಬಿಜಿಗುಡುತ್ತಿದ್ದ ಈ ಏಡಿ ಕಡೆ ಜನ ತಿರುಗಿಯೂ ನೋಡುತ್ತಿರಲಿಲ್ಲ.

ಹೈಸ್ಕೂಲು ಹುಡುಗ/ಗಿಯರೆಲ್ಲ ಶಾಲೆಗೆ ಹೋಗುವುದಕ್ಕೂ ಮೊದಲು ಹಿನ್ನೀರು ಗಜನಿಯಲ್ಲಿ ದನಕ್ಕೆ ಒಂದು ಹೊರೆ ಹಣ್ಣಿ ಹುಲ್ಲು ಕೊಯ್ದಿಟ್ಟು (ಅಣ್ಣನೋ ಅಪ್ಪನೋ ಬಂದು ಈ ಹೊರೆ ಮನೆಗೆ ಹೊತ್ತೊಯ್ಯುತ್ತಿದ್ದರು) ತದನಂದರ ಟೋಳಿಗಳಲ್ಲಿ ಸಿಗಡಿ ಬೇಟೆಗೆ ಸೊಂಟದವರೆಗಿನ ಅರಲು ನೀರಿಗೆ ಇಳಿಯುತ್ತಿದ್ದರು. ಒಮ್ಮೆ ಕೈ ಹಾಕಿದರೆ ಗೇಣಿಗಿಂತ ಉದ್ದದ ಟೈಗರ್ ಶೆಟ್ಲಿ, ಕಾಯ್ ಶೆಟ್ಲಿ, ಬಿಳಿ ಶೆಟ್ಲಿ, ಬೊಂಡೆಕಾನ್ ಶೆಟ್ಲಿ, ಮೊದಲಾದ ವೈವಿಧ್ಯಮಯ ಮುಷ್ಟಿ ಮುಷ್ಟಿ ಸಿಗಡಿಗಳು. 

ಸ್ಕರ್ಟ್ ಎಂಬುದು ಅರ್ಧತಾಸಿನಲ್ಲಿ ಮಡಿವಾಳನ ಬೆನ್ನಿನ ಮೂಟೆಯಂತಾಗುತ್ತಿತ್ತು. ಅದನ್ನು ಮನೆಯಲ್ಲಿ ಸುರುವಿ ಮಿಂದು ಶಾಲೆಗೆ ಹೋದರೆ ಸಂಜೆ ಬಂದಾಗ ಕಗ್ಗ ಭತ್ತದ ಕುಚಲಕ್ಕಿ ಅನ್ನ.. ತಾಜಾ ಸಿಗಡಿ ಸಾರು ಘಮಾಡಿಸಿ ಅವರನ್ನು ಸ್ವಾಗತಿಸುತ್ತಿತ್ತು..

ಹಿನ್ನೀರು ಪ್ರದೇಶ ನೈಸರ್ಗಿಕವಾಗಿ ಮತ್ಸ್ಯ ಸಂಪತ್ತಿನ ಆಗರ. ಸಮುದ್ರ ಮೀನಿಗಿಂತ ಇಲ್ಲಿನ ಮೀನಿಗೆ, ಮೃದ್ವಂಗಿಗಳಿಗೆ ಜನರ ಖಾಯಿಸ್ ಹೆಚ್ಚು. ನಿರಂತರ ಮೀನುಬೇಟೆ, ಗಜನಿ ಬಂಡು ಒಡೆದು ಹೋದದ್ದು, ಜಂತ್ರಡಿ ನಾಶ ಮುಂತಾದವುಗಳಿಂದ ಉಪ್ಪು ನೀರು ಊರುಕೇರಿಯವರೆಗೂ ಹೊಕ್ಕಿ, ಸಲೀಸಾಗಿ ಸರಿದಾಡಿ ಈಗ ಮೀನು ಬೆಳೆವ ನೈಸರ್ಗಿಕ ವಾತಾವರಣ ಬಹುತೇಕ ನಷ್ಟವಾಗುತ್ತಿದೆ. ಮೊಟ್ಟೆ ಮರಿಗಳು ಕೊಚ್ಚಿ ಹೋಗುತ್ತಿವೆ. ಆದರೆ ಕಾಂಡ್ಲಾಬೇರು, ಕಲ್ಲು, ಅರಲು, ಒಟ್ಟೆಗಳಲ್ಲಿ ಬಿರುಸು ಮತ್ತು ದೃಢವಾಗಿ ಇರುವ ನುಕ್ಕೇಡಿಗಳ ವಂಶಾಭಿವೃದ್ಧಿಗೆ ಬರ ಬಂದಿಲ್ಲ.

ಹತ್ತಾರು ವರ್ಷದ ಹಿಂದೆ ಕೇರಳ ಮೀನು ವ್ಯಾಪಾರಸ್ಥರು ನಮ್ಮ ಈ ಹಿನ್ನೀರು ಪ್ರದೇಶದಲ್ಲಿ ಸುತ್ತಾಡುವಾಗ ನುಕ್ಕೇಡಿಗೆ ಸಿಂಗಾಪುರದಲ್ಲಿ ಭಾರೀ ಬೇಡಿಕೆ ಇರುವುದು ಪತ್ತೆ ಹಚ್ಚಿ ವ್ಯಾಪಾರದ ದಾರಿ ತೋರಿಸಿದರು. ಅದೀಗ ನಮ್ಮೂರಿನಿಂದ ಈ ನುಕ್ಕೇಡಿಗಳು ಗೋವಾ ಅಥವಾ ಬೆಂಗಳೂರು.. ಚೆನ್ನೈಗೆ ಬಸ್ಸುಗಳಲ್ಲಿ ಸಾಗಿ ಅಲ್ಲಿಂದ ವಿಮಾನವೇರಿ ಸಿಂಗಾಪುರಕ್ಕೆ ಹೋಗುತ್ತಿವೆ.

ಎರಡು ಮೂರು ಕಿಲೋವರೆಗೂ ತೂಗುವ ನುಕ್ಕೇಡಿಯ ಬೆಲೆ ಇಲ್ಲಿ ಊರಲ್ಲಿ ಕೇಜಿಗೆ ನಲವತ್ತೈವತ್ತು ರೂಪಾಯಿ ಇದ್ದರೆ ಸಿಂಗಪುರದಲ್ಲಿ ಸುಮಾರು 450 ರೂಗಳಿಗಿಂತ ಮಿಗಿಲು ಬೆಲೆಯಂತೆ. ಹೀಗಾಗಿ ದೊಡ್ಡ ಸೈಜಿನ ಏಡಿಗಳನ್ನು ಅಲ್ಲಿಗೆ ಸಾಗಿಸುವುದು ಉದ್ಯಮವಾಗಿ ಬೆಳೆದಿದೆ.. ಎರಡು ಏಡಿ ಹಿಡಿದರೂ ಬೆಸ್ತನ ಮನೆಯ ಗಂಜಿಗೆ ಸೋಲಿಲ್ಲ.

ಆದರೆ ಈ ಏಡಿಗಳನ್ನು ಮೀನು, ಸಿಗಡಿಗಳಂತೆ ಐಸ್‌ನಲ್ಲಿ ಪ್ಯಾಕ್ ಮಾಡಿ ಅಲ್ಲಿಗೆ  ಕಳಿಸುವಂತಿಲ್ಲ. ಸಿಂಗಪುರದಲ್ಲಿ ಬೇಡಿಕೆ ಇರುವುದು ಜೀವಂತ ಏಡಿಗಳಿಗೆ. ಅವು ಬದುಕಿರಬೇಕು ಮತ್ತವಕ್ಕೆ ಕೊಂಬುಗಳು ಸರಿಯಾಗಿರಬೇಕು. ಅವುಗಳ ಕೊಂಬಿಗೆ ಧಕ್ಕೆಯಾಗದಂತೆ ಹಿಡಿದು ನೀಟಾಗಿ ಮಡಚಿ ದೇಹಕ್ಕೆ ಒತ್ತಿಸಿ ಪ್ಲಾಸ್ಟಿಕ್ ದಾರದಿಂದ ಕಟ್ಟುವ ವಿಧಾನಕ್ಕೆ “ಚಾವಿ ಹಾಕುವುದು” ಅನ್ನುತ್ತಾರೆ. ಇದಕ್ಕೆ ಅಪಾರ ಪರಿಣಿತಿ ಬೇಕು.. ಎಚ್ಚರ ಕೂಡ ಬೇಕು.. ಕಲ್ಲೇಡಿ ನುಕ್ಕೇಡಿಗಳ ದೇಹಕ್ಕಿಂತ ಕೊಂಬು ಬಲ.. ಬೆರಳು ಸಿಕ್ಕರೆ ಎರಡು ತುಂಡೇ.. ಈ ಕೊಂಬಿನ ಮಾಂಸ ಬಹಳ ರುಚಿ.. ಹಾಗಾಗಿ ಸಿಂಗಪುರದಲ್ಲಿ ಕೊಂಬು ಕಡ್ಡಾಯ.. ಪಟ್ಟರಿತು ಚಾವಿ ಹಾಕಿದ ಏಡಿಗಳು ನಾಲ್ಕು ದಿನಗಳ ಕಾಲ ಬದುಕಿರುತ್ತವೆ..

ಚಾವಿ ಹಾಕಿದ ತಕ್ಷಣ ಅವನ್ನು ಸಾಗಿಸಲಾಗುತ್ತದೆ. ಬಲೆಹಾಕಿ ಅಥವಾ ಕೈಯಿಂದ ಹಿಡಿದಂತೆ ಕೆಸರಿನಲ್ಲಿ ಬಿಲಗಳಲ್ಲಿ ಇರುವ ಈ ಏಡಿಗಳನ್ನು ಹಿಡಿಯುವುದು ಕಷ್ಟ.. ಏಡಿಗಳ ಬಿಲದೊಳಗೆ ಕಬ್ಬಿಣದ ಸರಳು ಅಥವಾ ಬಾರೀಕು ಕೋಲನ್ನು ಹಾಕುತ್ತಾರೆ. ಏಡಿ ಅದನ್ನು ಕಚ್ಚಿ ಹಿಡಿಯುತ್ತದೆ. ಸರಳನ್ನು/ಕೋಲನ್ನು ಹೊರಕ್ಕೆ ಎಳೆದಾಗ ಏಡಿಯೂ ಹೊರಬರುತ್ತದೆ. ಆಗ ಅದನ್ನು ಚಾಕಚಕ್ಯತೆಯಿಂದ ಹಿಡಿದು ಚಾವಿ ಹಾಕುತ್ತಾರೆ/ಹಾಕಿಸುತ್ತಾರೆ. ಪರಿಣಿತರು ಕೈಯಿಂದ ಹಿಡಿಯುವುದಿದ್ದರೆ ಮೊದಲು ಕೊಂಬಿಗೇ ಕೈ ಹಾಕಿ ಮಡಚಿ ಹಿಡಿದು ಅಲ್ಲೇ ದಾರಸುತ್ತಿ ಬೆತ್ತದ ಬುಟ್ಟಿಗೆ ಹಾಕುತ್ತಾರೆ.

ಅಂಬಿಗರು, ಹರಿಕಂತ್ರು, ದಾಲ್ದೇರರು ಹೀಗೆ ಬಹುತೇಕ ಜಮೀನಿಲ್ಲದ ಬೆಸ್ತರ ಜೀವನವನ್ನಷ್ಟೇ ಅಲ್ಲದೇ ಮೀನು ಹಿಡಿಯಲು ಬರುವ ಎಲ್ಲರ ಬದುಕನ್ನೂ ಗಂಗಾವಳಿ, ಅಘನಾಶಿನಿ, ಕಾಳಿ ನದಿಯ ಹಿನ್ನೀರು ಪ್ರದೇಶಗಳು ಹಸನು ಮಾಡಿವೆ.

ಜೂನ್ ತಿಂಗಳಿಂದ ಅಕ್ಟೋಬರ್ ವರೆಗೆ ಗಜನಿಯಲ್ಲಿ ಕಗ್ಗ ಭತ್ತ ಬೇಸಾಯ ಹೆಚ್ಚು ಮಾಡುತ್ತಿದ್ದರು. ಈಗ ಪ್ರಮಾಣ ಕಮ್ಮಿ.. ಈ ನಾಲ್ಕು ತಿಂಗಳಲ್ಲಿ ಕ್ಷೇತ್ರ ಕಮ್ಮಿಯಾಗುತ್ತದೆ ಬಿಟ್ರೆ ಬಾಕಿ ಸಮಯದಲ್ಲಿ ಹಿನ್ನೀರಿನಲ್ಲಿ ಗೋರುವುದು, ಕುಳೆ ಹಾಕುವುದು, ಕಂಟ್ಲೆ ಹಾಕುವುದು, ಸಣ್ಣ ಬಲೆ ಬೀಸುವುದು, ಗಾಳ ಹಾಕುವುದು, ಬಳಚು ತೆಗೆಯುವುದು, ಕಲ್ಗ ಒಡೆಯುವುದು ಹೀಗೆ ತರತರದಲ್ಲಿ ಮೀನುಗಾರಿಕೆ ಮಾಡಿಕೊಂಡೇ ಬದುಕುವ ಇಪ್ಪತೈದು ಸಾವಿರಕ್ಕೂ ಹೆಚ್ಚಿನ ಕುಟುಂಬಗಳು ನದಿಯಗುಂಟ ಇವೆ.

“ಚೆನ್ನೈದಲ್ಲಿ, ಆಂಧ್ರದಲ್ಲಿ ನುಕ್ಕೇಡಿ ಬೇಸಾಯ ಮಾಡ್ತಾರಂತೆ.. ಏನ್ ಬೇಸಾಯ ಮಾಡಿದ್ರೂ ನಮ್ಮ ಕಾಂಡ್ಲಾವನದ, ಗಜನಿ ಭೂಮಿಯ ನುಕ್ಕೇಡಿ ರುಚಿ ಬರೂದೆ..? ಕುಮಟೆಯಿಂದ ಕಾರವಾರ ಸದಾಶಿವಗಡ ತನಕ ಇದೇ ವ್ಯಾಪಾರ ಈಗ ಜೋರು.. ಕೇರಳ ಜನಾ ಚಾವಿ ಹಾಕಿದ ನುಕ್ಕೇಡಿ ತಕ್ಕೊಳ್ಳಲು ಅಲ್ಲಲ್ಲಿ ಅಂಗ್ಡಿ ಇಟ್ಟಾರೆ… ವೇಳೆಗೆ ಸರಿಯಾಗಿ ಅವರಿಗೆ ಅದನ್ನು ದಿನಾ ತಲುಪಿಸ್ಬೇಕು.. ಅವರಲ್ಲಿಂದ ಬಸ್ಸಲ್ಲಿ ಬೆಂಗಳೂರು ಅಥ್ವ ಗೋವೆಗೆ ಮುಟ್ಟಿಸ್ತಾರೆ.

ಒಂದು ಸಣ್ಣ ವ್ಯಾನ್ ಮಾಡ್ಕಂಡಿ ಈಗ ನಾನು ಏಡಿ ಹಿಡಿವಲ್ಲಿ ಹೋಗಿ ಹೋಲ್ ಸೇಲ್ ಕೊಂಡು ಪಟಾಪಟಾ ಚಾವಿ ಹಾಕಿ/ಸಿ ಸಾಗಾಟ ಮಾಡುದು.. ನಾಕ್ ಜನ ಹುಡುಗರಿದ್ದಾರೆ.. ದಿನಕೆ ಒಂದೆರಡು ಸಾವಿರ ಲಾಭಕ್ಕೇನೂ ಮೋಸ ಇಲ್ವೆ.. ಆದ್ರೆ ಮೀನ್ ಮಾತ್ರ ಕಮ್ಮಿ ಈಗೆ ಮೊದ್ಲನಂಗ್ ಇಲ್ಲ.. ನಂಗೂ ಈ ಏಡಿ ಕೆಲ್ಸ ಹಿಡ್ಕಂಡ ಮೇಲೆ ಮೀನು ಹಿಡೂಕ್ ಹೋಗೂದೂ ಕಮ್ಮಿಯಾಗಿ ಹೋಗಿದು ಅನ್ನು… ಬೆಳಚು, ಕೊಂಡಗ, ಕಲ್ಗ ಈಗೂ ಬೇಕಟ್ಟೀದು.. ಈಗಿನ ಪೋರಗೋಳಿಗೆ ಗಜನಿಗೆ, ಹಿನ್ನೀರ್ಗೆ ಇಳ್ದು ಇವೆಲ್ಲ ತೆಗೂಕೆ ಆಳಸಿತನ.. ಬರೀ ಬೆಂಗ್ಳೂರು.. ಗೋವೆ.. ಹುಬ್ಬಳ್ಳಿ ಅಂತೇ ಮೂರ್ಕಾಸಿನ ಸಂಬ್ಳದ ನಿಸ್ತೇಜು ಕೆಲ್ಸಕ್ಕೆ ಸಿಟಿಗೆ ಹೋಗ್ತವೆ ಬಡ್ಡಿಮಕ್ಳು.. ಶ್ರಮದ ಕೆಲ್ಸವೇ ಬ್ಯಾಡ ಈಗಿನ ಜನಕ್ಕೆ…

ಗಣಪಣ್ಣ ಇಷ್ಟು ಹೊತ್ತು ಇವೆಲ್ಲವನ್ನು ಹೇಳುತ್ತಿದ್ದರೆ ಗೋಪಾಲಣ್ಣ ಗಲ್ಲೆ ಬಿಟ್ಟು ನಾಕೈದು ಸಲ ತಾನೂ ಹೆರಕೈ ಕಟ್ಟಿ ಸುಮ್ಮಗೆ ನಿಂತು ಮಾತು ಆಲಿಸಿಕೊಂಡು ಹೋಗಿದ್ದ.. ಹೋದಮೇಲೂ ಕಿವಿ ಇಲ್ಲೇ ಇಟ್ಟು ಅಲ್ಲಿಂದೇ ನನ್ನ ಹೆಸರು ಕೂಗಿ.. “ನಮ್ಮೂರ್ ವಿಷ್ಯವೇ ನಮಗೆ ಎಷ್ಟೊಂದೀದು ಗುತ್ತಾಗುದು.. ಈ ನಿಸರ್ಗದ ಮುಂದೆ ನಾವು ಟಾಕಿ ನೀರಿನ ಕಪ್ಪೆಗಳು ನೋಡು ರೇಣುಕಾ ಅಂದ..”

ಅವನು ಹೀಗನ್ನುವಾಗ ನನಗೆ ಅಜ್ಜ ಅಜ್ಜಿಯಾದಿಯಾಗಿ ಊರಿನವರೆಲ್ಲ ಗಜನಿಯ ಸೊಂಟದವರೆಗಿನ ಅರಲು ನೀರಿಗಿಳಿದು ಬೆಳೆಯುತ್ತಿದ್ದ  ಅಪಾರ ಪೌಷ್ಟಿಕಾಂಶಗಳ ಆಗರ ಕ್ಷಾರಸ್ನೇಹಿ.. ಉಪ್ಪುನೀರು ಸಹಿಷ್ಣು ಆರ್ಯ, ಹಳಗ, ಬಿಳಿಕಗ್ಗ, ಕರಿ ಕಗ್ಗ ಭತ್ತದ ತಳಿಗಳ ನೆನಪಾಯ್ತು.. 

|ಮುಂದಿನ ಸಂಚಿಕೆಯಲ್ಲಿ|

January 22, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. ಗೀತಾ ಎನ್ ಸ್ವಾಮಿ

    ಏಡಿ, ಮೀನು,ಸೀಗ್ಡಿ ಎಲ್ಲವುಗಳನ್ನು ಎಳೆವಯಸ್ಸಿನಿಂದ ಹೆಚ್ಚೆಚ್ಚು ನೋಡುತ್ತಲೇ ಬೆಳೆದ ನನಗೆ ನಿಮ್ಮ ಬರಹ ಇನ್ನೂ ಹೆಚ್ಚು ಜಲಜೀವಿಗಳ ಕುರಿತಾದ ಸೋಜಿಗಗಳನ್ನು ಪರಿಚಯಿಸಿತು ರೇಣುಕಾ ಮೇಡಂ. ಅದ್ಬುತವಾಗಿ ಬರೆದಿದ್ದೀರಿ. ಅಂಕೋಲೆಯ ಜೀವನಕ್ರಮಗಳು ಎದುರೇ ಇದ್ದಂತಾಗುತ್ತದೆ.

    ಪ್ರತಿಕ್ರಿಯೆ
  2. ವಾಸುದೇವ ಶರ್ಮಾ

    “ನಮ್ಮ ಊರಿನ ವಿಷಯ ನಮಗೇ ಗೊತ್ತೊಲ್ಲ” ಹೊಸ ಲೋಕದರ್ಶನ!

    ಪ್ರತಿಕ್ರಿಯೆ
  3. ರೇಣುಕಾ ರಮಾನಂದ

    ಗೀತಾ ಮೇಡಂ ನಿಮ್ಮ ಓದಿಗೆ ಧನ್ಯವಾದಗಳು.. ನಮ್ಮ ಅಂಕಣವೂ ಬಲು ಚಂದ..ಮಿಸ್ ಮಾಡದೇ ಓದುತ್ತೇನೆ ನಾನು..ನಿಮ್ಮೂರ ನೆಲಜಲದ ಪರಿಚಯ ನಿಮ್ಮ ನಿರೂಪಣೆಯಲ್ಲಿ ಅತ್ಯದ್ಧುತ..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: