ಸಿನಿಮಾ ವಿರೋಧಿ ರಾಷ್ಟ್ರದಲ್ಲಿ ಸಿನಿಮಾ ಸ್ನೇಹಿ ಪ್ರಶಸ್ತಿ!!

k puttaswamy

ಕೆ ಪುಟ್ಟಸ್ವಾಮಿ 

ಈ ಬಾರಿಯರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಬಗ್ಗೆ ಪತ್ರಕರ್ತೆ ಚಾರ್ಮಿ ಹರಿಕೃಷ್ಣನ್ ಅವರು ದಿ ಎಕಾನಾಮಿಕ್ ಟೈಂಸ್‌ನ ೩೧.೦೩.೨೦೧೬ರ ಸಂಚಿಕೆಯಲ್ಲಿ ಬರೆದಿರುವ ಲೇಖನದ ಸಂಕ್ಷಿಪ್ತರೂಪ.

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಕಳೆದ ಐದಾರು ವರ್ಷಗಳಿಂದ ಹಿಡಿದಿರುವ ಪತನದ ಹಾದಿಯನ್ನು ಈ ಲೇಖನ ಸ್ಪಷ್ಟವಾಗಿ ಗ್ರಹಿಸಿದೆಯೆಂದು ಭಾವಿಸಿ ಅದರ ಆಶಯ ಕೆಡದ ಸಂಕ್ಷಿಪ್ತ ರೂಪವನ್ನಿಲ್ಲಿ ಕೊಡುತ್ತಿದ್ದೇನೆ.

Senior Assistant Editor The Economic Times

Senior Assistant Editor
The Economic Times

ರಮೇಶ್ ಸಿಪ್ಪಿಯವರು ತಾವು ನಿರ್ದೇಶಿಸಿರುವ ಹತ್ತು ಚಲನಚಿತ್ರಗಳಲ್ಲಿ ಒಂದಕ್ಕೂ ರಾಷ್ಟ್ರೀಯ ಪ್ರಶಸ್ತಿ ಪಡೆಯಲಿಲ್ಲ. ಇದನ್ನು ಅವರಿಗೆ ವಿರುದ್ಧವಾಗಿ ಬಳಸಲು ಹೇಳುತ್ತಿಲ್ಲ. ಯಾಕೆಂದರೆ ಚಲನಚಿತ್ರ ಪ್ರಶಸ್ತಿಗಳಿಗೆ ಯಾವುದೇ ಕಿಮ್ಮತ್ತಿಲ ಎಂಬುದನ್ನು ಅವರು ೬೩ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ನೀಡಲು ಆಯ್ಕೆ ಮಾಡಿದ ತೀರ್ಪುಗಾರ ಮಂಡಳಿಯ ಅಧ್ಯಕ್ಷರಾಗಿ ಸ್ಪಟಿಕದಷ್ಟು ಪಾರದರ್ಶಕವಾಗಿ ನಿರೂಪಿಸಿದ್ದಾರೆ. ಆದರೆ ೨೦೧೫ನೇ ಸಾಲಿಗೆ ರಾಜಮೌಳಿಯವರ ’ಬಾಹುಬಲಿ’ ಸರ್ವಶ್ರೇಷ್ಟಚಿತ್ರವಾದರೆ, ’ಬಾಜಿರಾವ್ ಮಸ್ತಾನಿ’ಯ ಸಂಜಯಲೀಲಾ ಬನ್ಸಾಲಿ ಅತ್ಯುತ್ತಮ ನಿರ್ದೇಶಕನಾಗಿ ಆಯ್ಕೆಯಾದರೆ, ನಾವೆಲ್ಲ ಸಂಕಷ್ಟದಲ್ಲಿದ್ದೇವೆ ಎಂದರ್ಥ.

ಅದ್ದೂರಿ ಸೆಟ್‌ಗಳಿದ್ದರೆ ಉತ್ತಮ ಚಿತ್ರಗಳೆಂದೂ, ಬಾಲಿವುಡ್ ನಿರ್ಮಿಸುವ ಒಂದು ನಿರ್ದಿಷ್ಟ ಬಗೆಯ ಸೂತ್ರದಲ್ಲಿ ಹೆಣೆದ ದೃಶ್ಯ ವೈಭವಗಳಿರುವ ಚಿತ್ರಗಳೇ ನಿಜವಾದ ಭಾರತೀಯ ಚಿತ್ರಗಳೆಂದು ನಾವು ತಪ್ಪಾಗಿ ಅರ್ಥೈಸಿಕೊಂಡಿದ್ದೇವೆ. ಭಾರತೀಯ ಸಿನಿಮಾದ ಭಿತ್ತಿ ವ್ಯಾಪಕವಾದದ್ದು; ಬೃಹತ್ತಾದದ್ದು; ಬಾಲಿವುಡ್ ಚಿತ್ರಗಳಿಗಿಂತ ಹೆಚ್ಚು ಸುಂದರವಾದದ್ದು ಮತ್ತು ವೈವಿಧ್ಯವಾದದ್ದು.

ಪ್ರಶಸ್ತಿಗಳನ್ನು ನೀಡಲು ರಮೇಶ್ ಸಿಪ್ಪಿ ಮತ್ತವರ ತೀರ್ಪುಗಾರ ಮಂಡಳಿ ಸದಸ್ಯರು ೧೯ ದಿನಗಳಲ್ಲಿ ನೋಡಿರುವ ೧೯೭ ಸಿನಿಮಾಗಳನ್ನು ನಾನು ನೋಡಿಲ್ಲ. ಆದರೆ ಅವುಗಳಲ್ಲಿ ಸಾಕಷ್ಟು ಸಿನಿಮಾಗಳನ್ನು ನೋಡಿದ್ದೇನೆ. ಅವು ೨೦೧೫ರಲ್ಲಿ ನಾನು ನೋಡಿದ ಚಿತ್ರಗಳಲ್ಲಿ ಅತ್ಯಂತ ಕಳಪೆ ಚಿತ್ರಗಳು.

‘ಬಾಹುಬಲಿ’ ಈ ಹಿಂದೆ ಬರುತ್ತಿದ್ದ ‘ಭಕ್ತ ಪ್ರಹ್ಲಾದ’ನಂತಹ ಪೌರಾಣಿಕ ಚಿತ್ರಗಳ ಸವಕಲು ಮಾದರಿ. ಬೇಕಾದಷ್ಟು ಸ್ಪೆಷಲ್ ಎಫೆಕ್ಟ್‌ಗಳನ್ನು ಮತ್ತು ನಟ ಪ್ರಭಾಸ್‌ನ ಸ್ನಾಯುಗಳನ್ನು ಬೆರೆಸಿ ತಯಾರಿಸಿದ ಚಿತ್ರ. ಬನ್ಸಾಲಿಯವರ ಸಿನಿಮಾ ತಾತ್ವಿಕತೆ ಒಬ್ಬ ಕುಶಲಿ ದರ್ಜಿ ಸಿದ್ಧಪಡಿಸುವ ವಸ್ತ್ರಗಳು ಮತ್ತು ಇಂಟೀರಿಯರ್ ಡಿಸೈನ್ ಒಬ್ಬರು ನಿರ್ಮಿಸುವ ಅಲಂಕಾರದ ಅತಿ ನಾಜೂಕು ಮತ್ತು ಅಂದಗೊಳಿಸುವ ಕೌಶಲ್ಯದ ಮೇಲೆ ನಿಂತಿದೆ. ಇಲ್ಲಿ ಬಾಗಿಲುಗಳ ಬಣ್ಣವನ್ನು ವಿಶಾಲವಾದ ಮತ್ತು ಚಿತ್ತಾರದ ನೆಲ ಹಾಗೂ ಕಿಟಕಿಯ ಪರದೆಗಳು, ಗೋಡೆಗಳ ಬಣ್ಣಕ್ಕೆ ಸೂಕ್ತವಾಗಿ ಹೊಂದಿಕೊಳ್ಳುಂತೆ (ಮ್ಯಾಚಿಂಗ್) ಮಾಡಿರುವ ಕುಶಲತೆ ಎದ್ದುಕಾಣುತ್ತದೆ.

ಮಲೆಯಾಳಂನ ನಿರ್ದೇಶಕ ಸನಲ್‌ಕುಮಾರ್ ಶಶಿಧರನ್ ತಮ್ಮ ಒಳಿದಿವುದಿವಸತೆ ಕಳಿಯಲ್ಲಿ ಚಿತ್ರದ ಫ್ರೇಮ್‌ಗಳನ್ನು ಕಲಕಿ ಇರುಸು ಮುರುಸಾಗುವ priyamanasam movieಪ್ರಶ್ನೆಗಳನ್ನು ಮುಂದಿಡುತ್ತಾ, ಸಿದ್ಧ ಮಾದರಿಗಳಿಗೆ ಸವಾಲೆಸೆಯುವ ಸಿನಿಮಾ ನಿರ್ದೇಶಿಸಿದ್ದಾರೆ. ಅಂಥ ಚಿತ್ರಗಳನ್ನು ಮೆಚ್ಚಲಾರದಷ್ಟು ಆಳಕ್ಕೆ ಸಿಪ್ಪಿಯವರು ಬಾಲಿವುಡ್‌ನ ಹಾಡು-ನೃತ್ಯದ ಕೊಳದಲ್ಲಿ ಮುಳುಗಿಹೋಗಿರುವ ಅನುಮಾನಗಳಿವೆ. ಅಂಥ ಚಿತ್ರಗಳ ರಾಜಕೀಯ ನಿಲುವು ಮತ್ತು ಅಂದದರಿಮೆ (ಈಸ್ತೆಟಿಕ್ಸ್) ಪ್ರಜ್ಞಾಪೂರ್ವಕವಾಗಿ ಅಲಂಕರಿಸಿದ ಬಾಜಿರಾವ್ ಮಸ್ತಾನಿಗಿಂತ ಹೆಚ್ಚು ಸಂಗತವೂ, ಧ್ವನಿಪೂರ್ಣವೂ ಆಗಿದೆ.

ಮಲಯಾಳಂ ಭಾಷೆಯ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಾಥೆಮಾರಿ ಚಿತ್ರಕ್ಕೆ ಸಿಕ್ಕಿದೆ. ಮಲಯಾಳಿಗಳು ಕೊಲ್ಲಿ ರಾಷ್ಟ್ರಕ್ಕೆ ಆರಂಭದಲ್ಲಿ ವಲಸೆ ಹೋದ ಮಹತ್ವದ ಕಥಾನಕ ಇದಾಗಬೇಕಿತ್ತು. ಆದರೆ ಅದು ಮಲೆಯಾಳಿಗಳು ಪ್ರಯಾಣಿಸುವ ಲಡಕಾಸಿ ದೋಣಿಯಷ್ಟೇ ಶಿಥಿಲವಾಗಿದೆ. ಅದೇರೀತಿ ಅತ್ಯುತ್ತಮ ಸಾಮಾಜಿಕ ವಿಷಯ ಕುರಿತ ಚಿತ್ರ ಪ್ರಶಸ್ತಿ ಮತ್ತೊಂದು ಮಲಯಾಳಿ ಚಿತ್ರ ’ನಿರ್ಣಾಯಕಂ’ಗೆ ಸಿಕ್ಕಿದೆ. ಆ ಚಿತ್ರವನ್ನು ೪೫ ನಿಮಿಷ ನೋಡಿದ ನಂತರ ಸಾಧ್ಯವಾಗದೆ ಎದ್ದು ಹೊರಬಂದೆ. ಸಿಪ್ಪಿ ಮತ್ತವರ ತಂಡ ಆಚಿತ್ರದ ಉಳಿದ ಒಂದೂ ಒಂದೂವರೆ ಗಂಟೆಯ ಅವಧಿಯಲ್ಲಿ ಭಾಗದಲ್ಲಿ ಕಂಡುಕೊಂಡ ಸಿನಿಮಾ ಮಹತ್ವವನ್ನು ಹೇಳಬೇಕಿದೆ.

ಈ ವರ್ಷ ರಾಷ್ಟ್ರೀಯ ಪ್ರಶಸ್ತಿಗಳಲ್ಲಿ ಹೊಸ ವಿಭಾಗವೊಂದಿದೆ. ಅದೇ ಅತ್ಯುತ್ತಮ ಸಂಸ್ಕೃತ ಭಾಷಾಚಿತ್ರ. ’ಪ್ರಿಯಮಾನಸಂ’ ಚಿತ್ರಕ್ಕೆ ನೀಡಲಾಗಿದೆ. ಹದಿನೇಳನೇ ಶತಮಾನದ ಕಥಕ್ಕಳಿ, ನಾಟಕಕಾರ, ವಿದ್ವಾಂಸ ಕವಿ ಉನ್ನಯಿ ವಾರಿಯರ್ ಜೀವನವನ್ನು ಕುರಿತ ಚಿತ್ರ. ಕಳೆದ ಬಾರಿಯ ಗೋವಾದಲ್ಲಿ ನಡೆದ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣುವ ಮೂಲಕ ಅದರ ಅದೃಷ್ಟ ಖುಲಾಯಿಸಿದೆ. ಭಾರತೀಯ ಪನೋರಮಾದ ಇತಿಹಾಸದಲ್ಲಿಯೇ ಉದ್ಘಾಟನೆಯ ಚಿತ್ರವಾಗಿದ್ದ ಅತ್ಯಂತ ಕಳಪೆ ಗುಣಮಟ್ಟದ ಈ ಚಿತ್ರ ಒಬ್ಬ ಸಾಧಾರಣ ಮಲಯಾಳಿ ಮಹಿಳೆ ಸಂಸ್ಕೃತ ಭಾಷೆಯಲ್ಲಿ ಮಾತನಾಡುವುದರಿಂದ ಅಸಂಗತವಾಗಿ court movieಆರಂಭವಾಗುತ್ತದೆ. ಆದರೆ ನಮ್ಮ ವೈಭವದ ಭಾಷೆಯಲ್ಲಿ ಚಿತ್ರೀಕರಣ ಮಾಡಿದ ಬಹುದೊಡ್ಡ ಪ್ರಯತ್ನವೆಂದು ಸಚಿವರು ಶ್ಲಾಘಿಸಿದರು. ಆದರೆ ಸ್ಪರ್ಧೆಯಲ್ಲಿ ಒಂದೇ ಒಂದು ಸಂಸ್ಕೃತ ಚಿತ್ರವಿದ್ದರೆ ಅದನ್ನು ಸಂಸ್ಕೃತ ಭಾಷೆಯ ಅತ್ಯುತ್ತಮ ಚಿತ್ರವೆಂದು ಆಯ್ಕೆ ಮಾಡಲಾದೀತೆ? ಪ್ರಾಯಶ: ಅದಕ್ಕೆ ಕೊಡಬಹುದಾಗಿದ್ದ ಮನ್ನಣೆಯೆಂದರೆ ಏಕೈಕ ಸಂಸ್ಕೃತ ಭಾಷಾಚಿತ್ರ ಎಂಬ ಪ್ರಶಸ್ತಿ.

ಈ ವರ್ಷ ಆರಂಭವಾದ ಅತ್ಯಂತ ಸಿನಿಮಾ ಸ್ನೇಹಿ ರಾಜ್ಯ ಪ್ರಶಸ್ತಿ ವಿಭಾಗವು ಕೇಂದ್ರ ಸರ್ಕಾರ ಮಾತ್ರ ಸಿನಿಮಾ ಸಂಸ್ಕೃತಿಗೆ ಕೊಡಬಹುದಾದ ಹಾಸ್ಯಾಸ್ಪದ ಪರಿಕಲ್ಪನೆ. ಅದೂ ಒಬ್ಬ ಪ್ರೇಕ್ಷಕನನ್ನು ನೀತಿಪಾಠ ಕೇಳಲು ತಕ್ಕದಾದ ಮಗು ಎಂದು ಭಾವಿಸುವ, ಚುಂಬನ ದೃಶ್ಯಗಳಿಗೆ ಕತ್ತರಿ ಹಾಕುವ, ಗುಂಪು ಘರ್ಷಣೆಯ ದೃಶ್ಯಗಳಿದ್ದರೆ ನಿಷೇಧಿಸುವ, ನಗ್ನ ದೃಶ್ಯಗಳಿದ್ದರೆ ಅದೃಶ್ಯವಾಗಿಸುವ, ’ಸಲಿಂಗ’ ಎಂಬ ಶಬ್ದವನ್ನೂ ನಿಶ್ಶಬ್ದಗೊಳಿಸುವ ಸಿನಿಮಾ ವಿರೋಧಿ ರಾಷ್ಟ್ರದಲ್ಲಿ ಸಿನಿಮಾ ಸ್ನೇಹಿ ಪ್ರಶಸ್ತಿ!!!

ರಾಷ್ಟ್ರೀಯ ಪ್ರಶಸ್ತಿಗಳ ಬಗ್ಗೆ ಹತಾಶೆ ಮೂಡಿದಂತಹ ಸಂದರ್ಭದಲ್ಲಿ ಕಳೆದ ವರ್ಷ ಅರ್ಹ ಮರಾಠಿ ಸಿನಿಮಾ ’ಕೋರ್ಟ್’ಗೆ ಸರ್ವಶ್ರೇಷ್ಠ ಸಿನಿಮಾ ಪ್ರಶಸ್ತಿ ದೊರೆತು ಪ್ರಶಸ್ತಿಗಳ ಬಗ್ಗೆ ಮತ್ತೆ ಆಶೆ ಮರುಕಳಿಸಿತು. ಆದರೆ ಈಗ ಸಿಪ್ಪಿ ಮತ್ತವರ ಮಂಡಲಿ ಚಿತ್ರ ಪ್ರಶಸ್ತಿಗಳನ್ನು ಹಲವು ದಶಕಗಳ ಹಿಂದಕ್ಕೆ ತೆಗೆದುಕೊಂಡು ಹೋಗಿದೆ. ಬಹುಶಃ ಅವರ ಚಿತ್ರ ಸೀತಾ ಔರ್‌ ಗೀತಾ ಬಿಡುಗಡೆಯಾದ ೧೯೭೨ರ ಕಾಲಕ್ಕೆ ತಂದು ಕೂರಿಸಿದ್ದಾರೆ. ವಿಚಿತ್ರವೆಂದರೆ ೧೯೭೨ರಲ್ಲಿ ಮಲೆಯಾಳಂನ ನಿರ್ದೇಶಕ ಅಡೂರ್ ಗೋಪಾಲ್‌ಕೃಷ್ಣನ್ ಅವರ ಚೊಚ್ಚಲ ಚಿತ್ರ ’ಸ್ವಯಂವರಂ’ ರಾಷ್ಟ್ರೀಯ ಅತ್ಯುತ್ತಮ ಚಿತ್ರ ಪ್ರಶಸ್ತಿ ಗಳಿಸಿತ್ತು.

adoorಸತ್ಯಜಿತ್ ರೇ, ಅಡೂರು ರವರಂಥ ಚಿತ್ರ ನಿರ್ದೇಶಕರು ಆರಂಭದಲ್ಲಿ ಬಾಲಿವುಡ್ ಚಿತ್ರಗಳ ಅದೇ ಹಳೇ ನಮೂನೆಯ ಸೂತ್ರಗಳನ್ನು ಧಿಕ್ಕರಿಸಿ ಚಿತ್ರಗಳನ್ನು ತೆಗೆದರೆ ಪ್ರಸ್ತುತ ಚಲನಚಿತ್ರ ಕ್ಷೇತ್ರ ಹೆಚ್ಚು ವಿಶಾಲ ಹಾಗೂ ಉತ್ತಮವಾದ ಪರಿಸರವನ್ನು ಕಂಡಿದೆ. ಈಗ ಒಳ್ಳೆಯ ಚಿತ್ರಗಳು ’ಆರ್ಟ್ ಸಿನಿಮಾ’ ಎಂಬ ಹಣೆಪಟ್ಟಿ ಅಂಟಿಸಿಕೊಳ್ಳಬೇಕಿಲ್ಲ. ಸಮಕಾಲೀನ ದೃಶ್ಯ ವ್ಯಾಕರಣದಲ್ಲಿ ಕಥನಕಟ್ಟುವ ಪ್ರತಿಭಾವಂತ ನಿರ್ದೇಶಕರುಎಲ್ಲ ಭಾಷೆಗಳಲ್ಲೂ ಇದ್ದಾರೆ.
ಹಾಗಾಗಿಯೇ ಭಾರತೀಯ ಸಿನಿಮಾಗಳನ್ನು ವರ್ಣರಂಜಿತ ಉಡುಪುಗಳು, ಅದ್ದೂರಿ ಸೆಟ್‌ಗಳ ಚಿತ್ರಗಳೆಂದು ಪರಿಗಣಿಸುವುದು, ಚಿತ್ರರಂಗವನ್ನು ಮಿತಿಗೊಳಿಸುವುದು ಮಾತ್ರವಲ್ಲ ಅನಾಚಾರ ಸಹ.

ಹಾಗಾಗಿಯೇ ಬಾಹುಬಲಿ ಸರ್ವಶ್ರೇಷ್ಠ ಚಿತ್ರವಾದರೆ, ಬನ್ಸಾಲಿ ಸರ್ವೋತ್ತಮ ನಿರ್ದೇಶಕರಾದರೆ, ಬಾಲಿವುಡ್‌ನ ಪರಂಪರೆಯಿಂದ ಹೆಕ್ಕಿ ಈ ಮಾತನ್ನು- ನನ್ನ ತಲೆ ಕಡಿದು ನಿಮ್ಮ ಪಾದಗಳಿಗೆ ಅರ್ಪಿಸುವೆ ಹೇಳಬಯಸುತ್ತೇನೆ. ಇದು ಸ್ಮೃತಿ ಇರಾಣಿ ಅವರ ಸಾಸ್-ಬಹು ದೂರದರ್ಶನ ಸರಣಿಯಿಂದ ಎರವಲು ಪಡೆದ ಸಾಲಲ್ಲ. ಬದಲು ಅವರು ಸಂಸತ್ತಿನ ಕಲಾಪದಲ್ಲಿನ ಚರ್ಚೆಯಿಂದ ಎತ್ತಿಕೊಂಡ ಸಾಲುಗಳು.

ಈ ರೀತಿಯ ಭಾಷೆ ಮತ್ತು ನಟನೆ ದಿನನಿತ್ಯದ ರಾಜಕೀಯದ ಭಾಗವಾಗಿರುವಂಥ ಈ ಕಾಲದಲ್ಲಿ ನಮ್ಮ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಿಂದ ಮತ್ತೇನನ್ನು ನಿರೀಕ್ಷಿಸಲು ಸಾಧ್ಯ?

‍ಲೇಖಕರು admin

April 4, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: