ಲಂಕೇಶ್ ಮೇಷ್ಟ್ರು: ಮೂರಕ್ಕೆ ಮುಕ್ತಾಯ

ಮೂರು ಸಲ ಮೇಷ್ಟ್ರನ್ನು ಕಂಡಿದ್ದೆ……

nagaraja harapanahalli

ನಾಗರಾಜ ಹರಪನಹಳ್ಳಿ

ಮಾಕಳಿ ಗಂಗಾಧರಯ್ಯ ಅವರು ಲಂಕೇಶ್ ಅವರ ಊರಿಗೆ ಭೇಟಿ ನೀಡಿ, ಅ‍ಲ್ಲಿನ ಭಾವಚಿತ್ರಗಳನ್ನು ಹತ್ತು ನಿಮಿಷ ನೋಡಿದ ಮೇಲೆ, ಮೇಷ್ಟ್ರು ಅವರ ಕುರಿತು ಎರಡು ಮಾತು ದಾಖಲಿಸಲೇಬೇಕು ಅನ್ನಿಸಿ, ಬರೆಯುತ್ತಿದ್ದೇನೆ.

lankesh konagavalli

ಮೊದಲ ಸಲ:

ಲಂಕೇಶ್ ಅವರನ್ನು ನಾನು ಮೊದಲು ನೋಡಿದ್ದು ಧಾರವಾಡದ ಕಲಾಭವನದ ಮೈದಾನದಲ್ಲಿ.

ಅವರು ಪ್ರಗತಿರಂಗ ಕಟ್ಟಿಕೊಂಡು ಅದರ ಪ್ರಚಾರದಲ್ಲಿ ತೊಡ‍ಗಿದ್ದರು. ಪ್ರಗತಿ ರಂಗವನ್ನು ರಾಜಕೀಯ ಪಕ್ಷವಾಗಿ ಅಸ್ಸಾಂ ಗಣಪರಿಷತ್ ಮಾದರಿಯಲ್ಲಿ ಕರ್ನಾಟಕದಲ್ಲಿ ಪರ್ಯಾಯ ರಾಜಕೀಯ ನೆಲೆಯೊಂದನ್ನು ಕಟ್ಟಬೇಕೆಂಬ ಕನಸು ಅವರಲ್ಲಿ ಇತ್ತು ಅಂತ ಕಾಣುತ್ತೆ.

ನಾನಾಗ ಧಾರವಾಡದಲ್ಲಿ ಡಿಗ್ರಿ ಓದುತ್ತಿದ್ದೆ. ಕರ್ನಾಟಕ ಕಾಲೇಜಿನ ವಿದ್ಯಾರ್ಥಿ. ಆಗ ತಾನೇ ಲಂಕೇಶ್ ಪತ್ರಿಕೆಯನ್ನು ಧಾರವಾಡದ ಐಎಂಎ ಲೈಬ್ರರಿಯಲ್ಲಿ ಓದಲು ಪ್ರಾರಂಭಿಸಿದ್ದೆ. ಕಲಾಭವನದ ಮೈದಾನದಲ್ಲಿ ಲಂಕೇಶ್ ಅವರ ಭಾಷಣ ಇತ್ತು. ಬಹಿರಂಗ ಸಭೆ ಇತ್ತು. ಅವರು ಕಲಾಭವನಕ್ಕೆ ಬಂದು ಮಾತು ಆರಂಭಿಸುತ್ತಿದ್ದಂತೆ ಸಣ್ಣಗೆ ಮಳೆ ಪ್ರಾರಂಭವಾಯಿತು.

ಲಂಕೇಶ್ ಮಾತು ಆರಂಭಿಸಿದ್ರು. “ಮಳೆ ಬರುವಾಗ ಹೆಚ್ಚು ಮಾತನಾಡಬಾರದು. ಹಸಿದವನ ಎದುರು ಸಹ ಮಾತು ನಿರರ್ಥಕ. ಮಳೆ ಬರುವಾಗ ನೀವೆಲ್ಲಾ ಮಳೆಯಲ್ಲಿ ನಿಂತುಕೊಂಡು , ನಾನು ಮಾತನಾಡುವುದೆಂದರೆ ಹಿಂಸೆಯಾಗುತ್ತದೆ. ಮಾತು ಹಿಂಸೆ ಆಗಬಾರದು” ಎಂದರು. ಪ್ರಗತಿರಂಗದ ಉದ್ದೇಶಗಳನ್ನು ಹೇಳುತ್ತಲೇ, ` ರಾಜಕೀಯ ಪಕ್ಷ ಅಂದರೆ ನಮ್ಮ ಸುತ್ತ ಅನೇಕ ಭ್ರಷ್ಟರು ನುಸುಳಿರುತ್ತಾರೆ. ನಾವು ಎಚ್ಚರದಿಂದಿರಬೇಕು’ ಎಂದರು. ಅಷ್ಟು ನೈತಿಕ ಪ್ರಜ್ಞೆ ಅವರನ್ನು ಸದಾ ಕಾಡುತ್ತಿತ್ತು.

ಎರಡನೇ ಸಲ:

lankesh konagavalli treeಲಂಕೇಶ್ ಅವರ ‘ಕಲ್ಲು ಕರಗುವ ಸಮಯ’ ಕೃತಿ ಇರಬೇಕು. ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ ಬಂದಿತ್ತು. ದಾವಣಗೆರೆ ಡೆಂಟಲ್ ಕಾಲೇಜು ಸಭಾ ಭವನ ಇರಬೇಕು. ಅಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ. ಕಾರಂತಜ್ಜ ಪ್ರಶಸ್ತಿ ಪ್ರಧಾನ ಮಾಡಲು ಬಂದಿದ್ದ ನೆನಪು. ( 1991ರ ಸಮಯ).

ಆ ವಾರ ಲಂಕೇಶ್ ಪತ್ರಿಕೆಯಲ್ಲಿ ಕರೀಗೌಡ ಬೀಚನಳ್ಳಿ ಅವರ ‘ಗುಬ್ಬಚ್ಚಿ’ ಕತೆ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ನಾನಾಗಲೇ ಲಂಕೇಶ್ ಪತ್ರಿಕೆಯನ್ನು ನಿರಂತರವಾಗಿ ಓದಲು ಆರಂಭಿಸಿದ್ದೆ. ಮೇಷ್ಟ್ರನ್ನು ಕಂಡ ನಾನು `ಸರ್, ಗುಬ್ಬಚ್ಚಿಗಳು ಕತೆ ತುಂಬಾ ಚೆನ್ನಾಗಿದೆ’ ಎಂದೆ. ಅಲ್ಲೇ ಇದ್ದ ಕರೀಗೌಡ ಬೀಚನಳ್ಳಿ ಅವರತ್ತ ತಿರುಗಿದ ಲಂಕೇಶ್ ರು, ‘ನೋಡಪ ಕರೀಗೌಡ, ನಿನ್ನ ಕತೆ ಬಗ್ಗೆ ಈ ಹುಡುಗ ಮಾತಾಡುತ್ತಿದ್ದ. ಮೆಚ್ಚಿಗೆ ಆಯಿತಂತೆ’ ಎಂದ್ರು.

ಇಷ್ಟೇ ನಾನು ಲಂಕೇಶ್ ಅವರ ಜೊತೆ ಮಾತನಾಡಿದ್ದು . ಉಳಿದಂತೆ ಅವರ ಕತೆ `ಮಾರಲಾಗದ ನೆಲ’ ಹಾಗೂ ಇತರ ಕತೆಗಳು ನಾಟಕ ಸಂಕ್ರಾತಿ, ಗುಣಮುಖ, ಟೀಕೆ ಟಿಪ್ಪಣಿ, ಮರೆಯುವ ಮುನ್ನ ಜೊತೆ ಮಾತನಾಡಿದ್ದೇ ಹೆಚ್ಚು.

ಕೊನೆಯ ಸಲ:

lankesh konagavalli home

ಲಂಕೇಶ್ ನಿಧನರಾದ ಸುದ್ದಿ ರೇಡಿಯೋದಲ್ಲಿ ಮತ್ತು ಟಿ.ವಿ.ಯಲ್ಲಿ ಕೇಳಿದೆ. ತಕ್ಷಣ ಹೊನ್ನಾವರದಲ್ಲಿದ್ದ ಗೆಳೆಯ ಸುರೇಶ್ ತಾಂಡೇಲ್ ಗೆ ಪೂನ್ ಮಾಡಿದೆ. ನಾನಾಗ ಕಾರವಾರದಲ್ಲಿದ್ದೆ. ‘ಜನವಾಹಿನಿ’ ವರದಿಗಾರನಾಗಿದ್ದೆ. ಹೊನ್ನಾವರದಲ್ಲಿದ್ದ ಸುರೇಶ್ ಮತ್ತು ನಾನು ಬಸ್ ನಲ್ಲಿ ಬೆಂಗಳೂರಿಗೆ ಪಯಣಿಸಿದೆವು. ಮರುದಿನ ತೋಟದ ಮನೆಯತ್ತ ಅವರ ಅಂತಿಮ ಪಯಣವಿತ್ತು. ಪತ್ರಿಕೆಯ ಕಚೇರಿಯಲ್ಲಿ ಲಂಕೇಶ್ ಚಿರನಿದ್ರೆಗೆ ಜಾರಿದ್ದರು.

ಅವರನ್ನು ಹತ್ತಿರದಿಂದ ನೋಡಿದೆ. ಧೀಘ್ರ ನಿದ್ರೆಯಲ್ಲಿದ್ದರು. ಏನು ಮಾತಾಡಲು ಆಗಲಿಲ್ಲ. ಎಲ್ಲರೂ ಮೌನವಾಗಿದ್ದರು. ತೋಟದ ಮನೆಯತ್ತ ಹೋದೆವು. ಲಂಕೇಶ್ ಅವರನ್ನು ಲಿಂಗಾಯತ ಸಂಪ್ರದಾಯದಂತೆ ಮಣ್ಣು ಕೊಡಲಾಯಿತು. ಕೊನಗವಳ್ಳಿ ಯಿಂದ ಬಂದಿದ್ದವರ ಹಠದಂತೆ ಶವ ಸಂಸ್ಕಾರ ನಡೆಯಿತು. ಅಪರಾಹ್ನದ ವೇಳೆಗೆ ಎಲ್ಲವೂ ಮುಗಿಯಿತು.

ನಂತರ ಲಂಕೇಶ್ ಪತ್ರಿಕೆಯ ಕಚೇರಿಯಲ್ಲಿ ಸಭೆ. ಲಂಕೇಶ್ ಪತ್ರಿಕೆಯನ್ನು ಮುಂದುವರಿಸಿಕೊಂಡು ಹೋಗುವ ಕುರಿತು ಚರ್ಚೆ. ನಟರಾಜ್ ಹುಳಿಯಾರ, ಬಸವರಾಜು, ಸಿ.ಎಸ್.ದ್ವಾರಕನಾಥ ಸರ್ ಸೇರಿದಂತೆ ಹಲವರಿದ್ದ ನೆನಪು. ಲಂಕೇಶ್ ಪತ್ರಿಕೆಗೆ ಸತತ ಬರೆಯುತ್ತಿದ್ದವರು ಇದ್ದರು. ಕವಿತಾ ಮೇಡಂ ಮತ್ತು ಗೌರಿ ಮೇಡಂ ಕ್ಷಣ ಹೊತ್ತು ಇದ್ದು, ನೀವೆಲ್ಲಾ ಆಲೋಚಿಸಿ, ಮುಂದಿನ ಹೆಜ್ಜೆಯನ್ನು ನಿರ್ಧರಿಸಿ ಎಂದು ಹೇಳಿ ಹೋಗಿದ್ದರು. ಸ್ವಲ್ಪ ಹೊತ್ತು ಪತ್ರಿಕೆ ಕಚೇರಿಯಲ್ಲಿದ್ದು, ನಾವು ಸಹ ಹೊರಟೆವು.

ಲಂಕೇಶ್ ಅವರ ನಿಷ್ಠುರತೆಯನ್ನು ಸ್ಮರಿಸಿಕೊಳ್ಳುತ್ತಾ ಮೆಜೆಸ್ಟಿಕ್ ಹತ್ತಿರ ಬಸ್ ನಿಲ್ದಾಣಕ್ಕೆ ಬಂದು ಬೆಂಗಳೂರಿನಿಂದ ಹೊನ್ನಾವರ ಮಾರ್ಗವಾಗಿ ಕಾರವಾರಕ್ಕೆ ಬರುವ ಬಸ್ ಹತ್ತಿದೆವು.

ಲಂಕೇಶ್ ಮೇಷ್ಟ್ರ ನಿಧನರಾದಾಗ ಒಂದು ಆಟೋದ ಹಿಂದೆ ಒಂದು ಬ್ಯಾನರ್ ಕಟ್ಟಲಾಗಿತ್ತು. ಲಂಕೇಶ್ ಅಮರರಾದರು ಎಂದು ಬರೆದ ನೆನಪು ನನಗೆ. ಹೌದು ಲಂಕೇಶ್ ಅವರು ಇಂದಿಗೂ ನಮ್ಮ ಬದುಕಿನಲ್ಲಿ ಎಚ್ಚರವಾಗಿದ್ದಾರೆ. ಸದಾ ಎಚ್ಚರಿಸುತ್ತಲೇ ಇರುತ್ತಾರೆ….

‍ಲೇಖಕರು admin

April 4, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಆನಂದ್ ಋಗ್ವೇದಿ

    ದಾವಣಗೆರೆಯಲ್ಲಿ ನಡೆದ 1991 ರ ಸಾಲಿನ ಕರ್ಸಾನಾಟಕ ಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಭೀಷ್ಮ ಸಹಾನಿ ಬಂದಿದ್ದರು ಅಂತ ನನ್ನ ನೆನಪು!

    ಪ್ರತಿಕ್ರಿಯೆ
  2. nagraj harapanahalli

    ನಿಜ. ನೆನಪಾಯಿತು. ಭೀಷ್ಮ ಸಹಾನಿ ಬಂದಿದ್ದರು . ರಾಮಚಂದ್ರ ಶರ್ಮ ಅವರ ಪತ್ನಿ ಸಹ ಬಂದಿದ್ದರು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: