‘ಆಕ್ಟ್ 1978’ ಅದೊಂದು ಸಿನಿಮಾನಾ?

ಶರಣು ಹುಲ್ಲೂರು

ಸಿನಿಮಾ ಎನ್ನುವುದು ನೋಡುವ ರಸಿಕನ ಎದೆಗೆ ತಾಕಿ, ಅದು ಭಾವವಾಗಿ ಕಾಡಬೇಕು. ಮಮತೆಯೋ, ಮಮಕಾರದ ಉತ್ಕಟವೋ ಕಾಸಿ, ಸೋಸಿ ಸರಿಗಮ ಹೇಳಬೇಕು. ಅಥವಾ ಥೋ ಇದೆಂತಹ ಸಿನಿಮಾ ಎನ್ನುವ ಕನಿಷ್ಠ ಶಬ್ದವೋ ಆಚೆ ಬರಬೇಕು. ಅದು ಕಲೆಯ ತಾಕತ್ತು.

ಇಂಥದ್ದೊಂದು ಕಲೆಯ ತಕಧಿಮಿತಾ ನಮ್ಮೊಳಗೆ ಆಗದೇ ಇದ್ದರೆ ಅದು ಫೆಲ್ಯುವರ್. ಸಿನಿಮಾದ ಅಥವಾ ಪ್ರೇಕ್ಷಕನ ಫೆಲ್ಯುವರ್. ಎರಡೂ ಒಂದಾದರೆ ಅದು ಸಕ್ಸಸ್. ಅಂಥದ್ದೊಂದು ಗೆಲುವು ಆಕ್ಟ್ 1978 ಸಿನಿಮಾದಲ್ಲಿ ಹದವಾಗಿ ಬೆರೆತಿದೆ.

ಈ ಸಿನಿಮಾದ ಕಥೆ ಯಾರದ್ದೋ ಅಲ್ಲ. ಅದು ನಮ್ಮದೇ. ನಮ್ಮದೇ ಅನ್ನುವಾಗ ಅದು ಕಥೆ ಹೇಗಾದೀತು? ಹಾಗಾಗಿ ನಮ್ಮ ಮುಂದಿನ ದರ್ಪಣಕ್ಕೆ ನಮ್ಮದೇ ಮುಖ.

ಜಿಡ್ಡುಗಟ್ಟಿದ ವ್ಯವಸ್ಥೆಯೊಳಗೆ ಹಲವು ಪಾತ್ರಗಳು, ನೂರಾರು ಸನ್ನಿವೇಶಗಳು. ಆ ಪಾತ್ರಗಳು ನಾವೇ. ಸನ್ನಿವೇಶಗಳು ನಮ್ಮವೇ.  ನಮ್ಮನ್ನೇ ಪಾತ್ರವಾಗಿಸಿ, ನಮ್ಮದೇ ರಂಗದ ಮೇಲೆ ನಿಜದ ಬಟ್ಟೆ ಬಿಚ್ಚಿದ್ದಾರೆ ನಿರ್ದೇಶಕ ಮಂಸೋರೆ.

ಎಲ್ಲವೂ ನಾವೇ ಆಗಿರುವ, ನಮ್ಮದೇ ಜೀವನವನ್ನು ತೆರೆಗೆ ತಂದಾಗ ಅದರಲ್ಲೇನು ಮಜಾ ಅನಿಸಬಹುದು. ಆದರೆ, ಆ ಒಂದು ನೋವು, ಹೋರಾಟದ ಚುಂಗು ಇನ್ನಿತರರ ಎದೆಗೆ ಇರಿದ ಬಗೆಯನ್ನು ನಾವು ಕಾಣದೇ ಇದ್ದರೆ ಮನುಷ್ಯರಾಗುವುದು ಹೇಗೆ? ಆ ಮನುಷ್ಯತ್ವದ ಮಜಲುಗಳೇ ಇಡಿ ಸಿನಿಮಾದ ಜೀವಾಂಶ.

ಮೇಲ್ನೋಟಕ್ಕೆ ಇದು ಸರಕಾರಿ ವ್ಯವಸ್ಥೆಯ ವಿರುದ್ಧ ಸೆಡ್ಡು ಹೊಡೆಯುವ ಸಿನಿಮಾವಾದರೂ, ವ್ಯವಸ್ಥೆಯನ್ನು ರೂಪಿಸಿದ ಮನುಷ್ಯ ಮತ್ತೊಬ್ಬ ಮನುಷ್ಯನನ್ನೇ ತಿಂದುಣ್ಣುವ ಕೆಟ್ಟ ಸುಖದ ಕರಾಳ ಮುಖವನ್ನು ನಮ್ಮುಂದಿಟ್ಟು ಬೆಚ್ಚಿ ಬೀಳಿಸುತ್ತದೆ.

ತಂದೆಯ ಸಾವಿನ ಪರಿಹಾರದ ಹಣಕ್ಕಾಗಿ ಸರಕಾರಿ ಕಛೇರಿಗೆ ಎಡತಾಕುವ ಅಸಹಾಯಕಿ ಗೀತಾ, ಕೊನೆಗೊಂದು ದಿನ ಇಡೀ ವ್ಯವಸ್ಥೆಯನ್ನು ಹೇಗೆ ತನ್ನ ಕಪಿಮುಷ್ಠಿಯಲ್ಲಿ ಹಿಡಿದಿಟ್ಟುಕೊಂಡು ಗಿರಿಗಿಟ್ಲಿ ಆಡಿಸುತ್ತಾಳೆ ಎನ್ನುವುದು ಇಡೀ ಚಿತ್ರದ ಆಶಯ. ಇದಿಷ್ಟೇ ಸಿನಿಮಾವಲ್ಲ, ಅವಳ ಹೋರಾಟಕ್ಕೆ ಕಟ್ಟಿದ ರೆಕ್ಕೆಪುಕ್ಕಗಳು ವಿಶಿಷ್ಟ, ವಿಭಿನ್ನ. ಒಂದು ಪುಟದಲ್ಲಿ ಹೇಳಿಬಿಡಬಹುದಾದ ಕಥೆಯನ್ನು ಎರಡು ಗಂಟೆಗಳ ಕಾಲ ಹಿಡಿದಿಟ್ಟ ಕ್ರಮವೇ ಸಿನಿಮಾದ ಸಾಧ್ಯತೆ.

ಅಸಲಿಗೆ ಅದು ಗೀತಾಳ ಹೋರಾಟವಾದರೂ, ಅದರಿಂದ ರೂಪಗೊಳ್ಳುವ ಕ್ರಿಯೆ ಅವಳದ್ದಲ್ಲ. ಒಂದು ಘಟನೆಗೆ ಅವಕಾಶಗಳು ಹೇಗೆ ನಿಮಿರಿ ನಿಲ್ಲುತ್ತವೆ ಎನ್ನುವುದಕ್ಕೆ ಹಲವಾರು ದೃಷ್ಟಾಂತಗಳನ್ನು ನೀಡಿದ್ದಾರೆ ನಿರ್ದೇಶಕರು. ಮಾಧ್ಯಮದ ಸುದ್ದಿ ದಾಹಕ್ಕೆ “ನಾನು ಹೇಳಿದ್ದೆ ನ್ಯೂಸ್‍” ಎನ್ನುವ ಪತ್ರಕರ್ತೆ,  “ಆಕೆ ಬಸಿರೆಯಾದರೂ ಅಡ್ಜಸ್ಟ್ ಮಾಡಿಕೋ” ಎನ್ನುವ ದೇಹದಾಹಿ ಅಧಿಕಾರಿ.

ಹೋರಾಟಕ್ಕೆ ಕಟ್ಟುವ ಇತರ ಬಣ್ಣಗಳು. ರಾಜಕಾರಣ, ಕಾನೂನು ಹೀಗೆ ಗೀತಾಳ ಘಟನೆಯ ಸುತ್ತ ಅನೇಕ ಟಿಸಿಲುಗಳು. ಇಷ್ಟೊಂದು ಸಿಕ್ಕುಗಳನ್ನು ನಾಜೂಕಾಗಿ ತೆರೆಯ ಮೇಲೆ ತಂದಿದ್ದಾರೆ ನಿರ್ದೇಶಕರು. ಈ ಕಾರಣಕ್ಕಾಗಿ ಅವರಿಗೊಂದು ಸಲಾಂ.

ಹೇಳಿಕೇಳಿ ಮಂಸೋರೆ ಚಿತ್ರ ನಿರ್ದೇಶಕ ಮಾತ್ರವಲ್ಲ, ಕುಂಚಕಲಾವಿದ. ಚಿತ್ರಕಥೆ ಬರೆದ ಟಿ.ಕೆ.ದಯಾನಂದ್ ಮತ್ತು ವೀರು ಮಲ್ಲಣ್ಣನವರ ವಿಭಿನ್ನವಾಗಿ ಆಲೋಚಿಸುವ ಮನಸ್ಸುಗಳು. ಈ ಕಾರಣದಿಂದಾಗಿ ಸಿನಿಮಾ ಸಿದ್ಧ ಮಾದರಿಯನ್ನು ದಾಟುತ್ತಾ ಸಾಗುತ್ತಿದೆ. ಹಲವು ರೂಪಕಗಳ ಮೂಲಕ ಸೆಳೆಯುತ್ತದೆ. ಮೌನ ಮಾತಾಗುತ್ತದೆ. ಮಾತಾಡಿಸಿ, ಮರುಚಿಂತನೆಗೆ ಹಚ್ಚುತ್ತದೆ.

ಸಿನಿಮಾದಿಂದಾಚೆಗೆ ಪ್ರೇಕ್ಷಕ ಜಿಗಿಯದಂತೆ ತಗೆದುಕೊಂಡು ಎಚ್ಚರಿಕೆಯಿದೆಯಲ್ಲ, ಅದು ನಮ್ಮ ಸೋಕಾಲ್ಡ್‍ ಕಮರ್ಷಿಯಲ್ ಸಿನಿಮಾದ ಫಾರ್ಮುಲಾದ ತಲೆಗೆ ಕುಟ್ಟುತ್ತದೆ. ಅಷ್ಟರ ಮಟ್ಟಿಗೆ ಈ ಸಿನಿಮಾ ಸಶಕ್ತವಾಗಿ ಮೂಡಿ ಬಂದಿದೆ.

ಸಿನಿಮಾದ ಶುರುವಿಗೆ ಕಥಾ ನಾಯಕಿ ಗೀತಾ ಮನೆಯಿಂದ ಹೊರಡುವಾಗ ತನ್ನ ಗಂಡನ ಫೋಟೋ ಮುಂದೆ ಬಂದು ನಿಲ್ಲುತ್ತಾಳೆ. ಅವಳು ಅಲ್ಲಿಂದ ಎಲ್ಲಿಗೆ ಹೋಗುತ್ತಾಳೆ, ಅಲ್ಲೇನು ಮಾಡುತ್ತಾಳೆ ಎನ್ನುವುದು ನಂತರದ ವಿಚಾರ. ಆದರೆ, ಆ ಸನ್ನಿವೇಶದಲ್ಲಿ ಸೊಳ್ಳೆ ಬ್ಯಾಟಿನ ರೂಪಕವೊಂದು ಹಾದು ಹೋಗುತ್ತದೆ.

ಸೊಳ್ಳೆ ಬ್ಯಾಟಿಗೆ ಸಿಕ್ಕ ಸೊಳ್ಳೆಯ ಚಿಟ್ ಚಟ್ ಎಂಬ ಶಬ್ದ. ಚಿಟ್ ಎನ್ನುವುದು ವ್ಯವಸ್ಥೆಯಿಂದಾಗಿ ತಾನೂ ಚಿಟ್ ಆಗಿದ್ದೇನೆ ಅಂತಲೋ ಅಥವಾ ನನ್ನ ಮುಂದಿನ ಗುರಿಗೆ ಅವರು ಚಟ್ ಅನ್ನುತ್ತಾರೆ ಅಂತಲೋ, ಎರಡೆರಡು ಧ್ವನಿಗಳು ಏಳುತ್ತವೆ. ಸಿನಿಮಾದುದ್ದಕ್ಕೂ ಮಾತೇ ಆಡದ ಶರಣಪ್ಪ, ಮುನ್ನೂರು ಚಿಲ್ರೆ ದಿನ ಸರಕಾರಿ ಕಛೇರಿ ಮುಂದೆ ಹೋರಾಟಕ್ಕೆ ಕೂತ ಗಾಂಧಿ ವೇಷಧಾರಿ, ಶಾಂತಿ ಮತ್ತು ಹಿಂಸೆಯ ತಾಕಲಾಟ ಹೀಗೆ ಚಿತ್ರದುದ್ದಕ್ಕೂ ರೂಪಕಗಳದ್ದೇ ಸಂತೆ.

ಇಂಥದ್ದೊಂದು ಸೂಕ್ಷ್ಮ ವಿಷಯವನ್ನು ಇಂದಿನ ವಿಷಮ ಪರಿಸ್ಥಿತಿಯಲ್ಲಿ ಪ್ರೇಕ್ಷಕರಿಗೆ ನಾಟುವಂತೆ ಹೇಳುವುದು ಸುಲಭವಲ್ಲ. ಅದೂ ಎಲ್ಲ ವರ್ಗದ ನೋಡುಗನಿಗೆ ತಲುಪಿಸುವುದು ಇನ್ನೂ ಘೋರ. ಈ ಎರಡೂ ಅಪಾಯವನ್ನು ದಾಟಿಕೊಂಡು ಎಲ್ಲರಿಗೂ ಇಷ್ಟವಾಗುವಂತೆ ಚಿತ್ರ ಮಾಡಿದ್ದಾರೆ ನಿರ್ದೇಶಕರು. ಚೂರು ನಗುತ್ತಾ, ಒಂದಷ್ಟು ಶಪಿಸುತ್ತಾ, ತುಂಬಾ ಹೊತ್ತು ಭಾವುಕ ಪ್ರಪಂಚಕ್ಕೆ ಕರೆದೊಯ್ಯುತ್ತಾರೆ. ವ್ಯವಸ್ಥೆಯ ವಿರುದ್ಧ ಸಿಡಿದೆದ್ದ ಹಲವಾರು ಸಿನಿಮಾಗಳು ಈಗಾಗಲೇ ಬಂದಿದ್ದರೂ, ಕಟ್ಟಿದ ಕ್ರಮ ಹೊಸದು. ಹಾಗಾಗಿ ಪ್ರೇಕ್ಷಕನಿಗೆ ಹೊಸ ಅನುಭವ ಗ್ಯಾರಂಟಿ.

ಗೀತಾ ಎನ್ನುವ ಹೆಣ್ಣುಮಗಳು ಯಾರೋ ಅಲ್ಲ, ಅದು ತಾನೇ ಎನ್ನುವಂತೆ ಪಾತ್ರ ಮಾಡಿದ್ದಾರೆ ಯಜ್ಞಾ ಶೆಟ್ಟಿ. ನಮ್ಮಲ್ಲಿ ನಟಿಯರು ಇದ್ದಾರೆ ಕಲಾವಿದೆಯರಿಲ್ಲ ಎನ್ನುವ ಕೊರಗಿತ್ತು. ಈಗ ಅದು ಕೊಂಚ ಕರಗಿತು.

ನಿರ್ದೇಶಕ, ನಟ ಬಿ.ಸುರೇಶ ನಿಮಗೆ ನೀವೇ ಸಾಟಿ. ಅಚ್ಯುತ್ ಕುಮಾರ್, ದತ್ತಣ್ಣ, ಶ್ರುತಿ, ಪ್ರಮೋದ್ ಶೆಟ್ಟಿ, ಶೋಭರಾಜ್, ನಂದಗೋಪಾಲ್, ರಾಘು ಶಿವಮೊಗ್ಗ, ಶರಣ್ಯ, ಕಿರಣ್ ನಾಯಕ್, ಸಂಚಾರಿ ವಿಜಯ್, ಪಿ.ಡಿ.ಸತೀಶ್‍ ಹೀಗೆ ನಲವತ್ತಕ್ಕೂ ಹೆಚ್ಚು ಪಾತ್ರಗಳು. ಪ್ರತಿ ಪಾತ್ರವೂ ತನ್ನ ಪಾತ್ರಧಾರಿಯೊಂದಿಗೆ ಜೀವಿಸಿದೆ. ಅಷ್ಟರ ಮಟ್ಟಿಗೆ ಪ್ರತಿಭಾವಂತ ಕಲಾವಿದರ ಆಯ್ಕೆ ಗೆದ್ದಿದೆ.

ಈ ಕಥೆ ನಮ್ಮೊಳಗೆ ಅಷ್ಟು ತೀವ್ರವಾಗಿ ಕಾಡಲು ಮತ್ತಷ್ಟು ಕಾರಣ, ಸಿನಿಮಾಟೋಗ್ರಫಿ, ಕಲಾ ನಿರ್ದೇಶನ ಮತ್ತು ಸಂಗೀತ. ಬಹುತೇಕ ಸಿನಿಮಾ ನಡೆಯುವುದು ಪುಟ್ಟದೊಂದು ಆಫೀಸ್ ನಲ್ಲಿ. ಅದೆಂತಹ ನೆರಳು ಬೆಳಕಿನಾಟ ನಿಮ್ಮದು ಸತ್ಯ ಹೆಗಡೆ. ಸಿನಿಮಾದೊಳಗೆ ನಾವೇ ಇಳಿದು ಬಿಟ್ಟಿದ್ದೇವೆ ಅನ್ನುವಷ್ಟು ಗಾಢವಾಗಿ ದೃಶ್ಯವನ್ನು ಕಟ್ಟಿಕೊಟ್ಟಿದ್ದೀರಿ. ಈ ದೃಶ್ಯಗಳು ನೈಜವಾಗಿಸೋಕೆ ಕಲಾ ನಿರ್ದೇಶಕನ ಜಾಣ್ಮೆ ಮತ್ತು ಹಿನ್ನೆಲೆ ಸಂಗೀತದ ಬಲ ಎದ್ದು ಕಾಣುತ್ತದೆ. ನಾಗೇಂದ್ರ ಉಜ್ಜನಿ ಅವರ ಸಂಕಲನದ ಚಮತ್ಕಾರ ಸಿನಿಮಾವನ್ನು ಮತ್ತೊಂದು ಹಂತಕ್ಕೆ ತಗೆದುಕೊಂಡು ಹೋಗಿದೆ.

ಗೀತಾ ಪಾತ್ರ ಮತ್ತೆ ಮತ್ತೆ ಕಾಡುವಂತೆ ಆಗಲು ಆಕೆಯ ನೋವು ದ್ವಿಗುಣ ಆಗಬೇಕಿತ್ತು. ಸಡನ್ನಾಗಿ ಆ ಭಾವ ಕೊನೆಯಲ್ಲಿ ಮಿಸ್ ಆಗುತ್ತದೆ. ಕಣ್ಣೀರೆ ಭಾವುಕತೆಗೆ ಅಂತಿಮವಲ್ಲ ಎನ್ನುವುದು ನಿರ್ದೇಶಕರ ನಿರ್ಧಾರ ಆಗಿದ್ದರೆ ಕ್ಷಮಿಸಿ.

ಸಿನಿಮಾ ನೋಡಿ ಆಚೆ ಬಂದ ಮೇಲೆ ಪ್ರತಿ ಪ್ರೇಕ್ಷಕನಿಗೂ ಅನಿಸೋದು ಒಂದೇ “ಆಕ್ಟ್ 1978 ಅದೊಂದು ಸಿನಿಮಾನಾ? ಅಲ್ಲರೀ ಅದು ನಿಜ ಜೀವನ”..

ಒಂದೊಳ್ಳೆ ಸಿನಿಮಾ ನೀಡಿದ ತಂಡಕ್ಕೆ ಶುಭಾಶಯ. ಇಂಥದ್ದೊಂದು ಸಿನಿಮಾಗೆ ಹಣ ಹಾಕಲು ಧೈರ್ಯ ಮಾಡಿದ ನಿರ್ಮಾಪಕ ದೇವರಾಜ್ ಅವರಂಥಹ ಸಂತತಿ ಹೆಚ್ಚಾಗಲಿ.

‍ಲೇಖಕರು avadhi

November 20, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: