‘ಸಿನಿಮಾ ಬಂಡಿ’ ಹಿಂದಕ್ಕೆ ಉರುಳಿದಾಗ

ಗೊರೂರು ಶಿವೇಶ್

ನೆಟ್ ಫ್ಲಿಕ್ಸ್ ಓಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಬಿಡುಗಡೆಯಾಗಿ ಸದ್ದು ಮಾಡುತ್ತಿರುವ ಚಿತ್ರ ಸಿನಿಮಾ ಬಂಡಿ. ಚಿತ್ರದ ಬಾಡಿ ತೆಲುಗಿನದಾದರೂ ಗಾಡಿಯ ಮೂಕಿ ಕನ್ನಡದ್ದೆ. ಕರ್ನಾಟಕದ ಕೋಲಾರದ ಗಡಿಪ್ರದೇಶದಲ್ಲಿ ಚಿತ್ರೀಕರಣಗೊಂಡಿರುವ ಚಿತ್ರದ ಪ್ರಮುಖ ಪಾತ್ರಧಾರಿಗಳು ಕನ್ನಡ ಮೂಲದವರಾಗಿದ್ದು ಭಾಷೆಯು ತೆಲುಗು ಮಿಶ್ರಿತ ಕನ್ನಡ ವಾಗಿರುವುದು ಚಿತ್ರದ ವಿಶೇಷ.

ಚಿತ್ರತಂಡ ಕನ್ನಡದ ಯಶಸ್ವಿ ತಿಥಿ ಚಿತ್ರದಿಂದ ಪ್ರೇರಣೆಗೊಂಡಿರುವುದಕ್ಕೆ ಚಿತ್ರದಲ್ಲಿ ಅನೇಕ ಸಾಕ್ಷಿಗಳು ಸಿಗುತ್ತವೆ. ಆ ಚಿತ್ರದ ಸೊಗಡು ಇಲ್ಲಿ ಇದೆಯಾದರೂ ಅದರಷ್ಟು ಪ್ರಭಾವ ಬೀರುತ್ತದೆಯೇ ಎಂದರೆ ಇಲ್ಲವೆಂದೇ ಹೇಳಬೇಕು.

ತನ್ನ ಊರಿಂದ ಜನರನ್ನು ನಗರಕ್ಕೆ ಕರೆತರುವ, ಕರೆದೊಯ್ಯುವ ಆಟೋ ಚಾಲಕ ನಾಯಕನಿಗೆ ಅನಿರೀಕ್ಷಿತವಾಗಿ ದೊರೆಯುವ ವಿಡಿಯೋ ಕ್ಯಾಮೆರಾ, ಅದನ್ನು ಬಳಸಿಕೊಂಡು ಸ್ಥಳೀಯ ಪ್ರತಿಭೆಗಳನ್ನು ಜೊತೆಗೆ ಆತನ ಸಿನಿಮಾ ಮಾಡುವ ಸಾಹಸ ಚಿತ್ರದ ಹೂರಣ. ಈ ಚಿತ್ರವನ್ನು ನೋಡುತ್ತಿದ್ದಾಗ ಚಿತ್ರದ ನಾಯಕ ನಮ್ಮೂರಿನ ಕೃಷ್ಣ ಅಥವಾ ರೊಡ್ಡೆ ಕೃಷ್ಣನನ್ನ ಹೋಲುವುದು ಹಾಗೂ ಚಿತ್ರ ನಿರ್ಮಾಣದ ಪ್ರಸಂಗಗಳು ನನ್ನ ಅಣ್ಣ ಫೋಟೋ ಕಾಮಿಕ್ಸ್ ಒಂದನ್ನು ತಯಾರಿಸಲು ಪಡಿಪಾಟಲು ಪಟ್ಟಿದ್ದನ್ನು ನೆನಪಿಸಿತು. ಆ ಸಮಯದ ಅನೇಕ ದೃಶ್ಯಾವಳಿಗಳು ಕಣ್ಣ ಮುಂದೆ ಹಾದುಹೋದವು. 

ಕೃಷ್ಣನ ಹಿರಿಯರು ಮೂಲತಃ ತಮಿಳುನಾಡಿನ ವರಾಗಿದ್ದು ಬಹಳ ವರ್ಷಗಳ ಹಿಂದೆ ನಮ್ಮೂರಿನ ಡ್ಯಾಮ್ ನಿರ್ಮಾಣ ಮಾಡುವಾಗಬಂದು ನೆಲೆನಿಂತ ನೂರಾರು ಕುಟುಂಬಗಳಲ್ಲಿ ಅವರ ಕುಟುಂಬವೂ ಒಂದು. ಅವರ ಸಂಸಾರ ತುಂಬಾ ದೊಡ್ಡದು. ಅವರು 9 10 ಮಕ್ಕಳಿರಬಹುದು. ದೊಡ್ಡ ಸಂಸಾರ ನಿಭಾಯಿಸಲು ಸಣ್ಣದೊಂದು ಹೋಟೆಲನ್ನು ಕೃಷ್ಣನ ತಾಯಿ ರಾಧಮ್ಮ ತಾವಿದ್ದ ಗುಡಿಸಿಲಿನಲ್ಲಿ ಆರಂಭಿಸಿದರು. ಮುಂದೆ ಅದು ಗುಡ್ಲುಹೋಟ್ಲು ಎಂದೇ ಪ್ರಸಿದ್ಧಿ ಆಯಿತು. ಕಡಿಮೆ ದುಡ್ಡು, ಫುಲ್ಲು ಊಟ, ಆದುದರಿಂದ ಜನ ಮುಗಿಬೀಳುತ್ತಿದ್ದರು.

ಕೃಷ್ಣ ನಾವು ಬಾಲ್ ಬ್ಯಾಡ್ಮಿಂಟನ್ ಆಡುವಾಗ ಸಂಜೆ ಅಲ್ಲಿಗೆ ಬರುತ್ತಿದ್ದ. ತಂಡದ ನಾಯಕ ಹಾಗೂ ಪೋಷಕ ಶ್ರೀಕಾಂತರವರ ಬಳಿ ಸದಾ ಇರುತ್ತಿದ್ದ ಎಕ್ಸ್ಟ್ರಾ ಬ್ಯಾಟ್ ನಲ್ಲಿ ಇವನ ಆಟ. ಸರಿ ಸುಮಾರು ಆರಡಿ ಎತ್ತರ ಇದ್ದ ಆತ ಸುಮ್ಮನೆ ಬ್ಯಾಟನ್ನು ನೆಟ್ಟಿನಿಂದ ಮುಂದೆ ದಬ್ಬಿದರು ಸಾಕು ಆ ತಂಡಕ್ಕೆ ಪಾಯಿಂಟ್ ಸಿಗುತ್ತಿತ್ತು. ಮುಂದೆ ನಾನು ಉದ್ಯೋಗಕ್ಕೆಂದು ಬೇರೆ ಊರಿಗೆ ಹೋದೆ. ನಡುನಡುವೆ ಊರಿಗೆ ಬಂದಾಗ ಬ್ಯಾಡ್ಮಿಟನ್ ಬಿಟ್ಟು ಶಟಲ್ ಬ್ಯಾಡ್ಮಿಂಟನ್ ನಲ್ಲಿ ವಿರಾಜಮಾನನಾಗಿದ್ದನ್ನು ಕಂಡಿದ್ದೆ.   

ಗೊರೂರಿನಲ್ಲಿ ಪ್ರತಿವರ್ಷ ನಡೆಯುತ್ತಿದ್ದ ಬ್ಯಾಡ್ಮಿಂಟನ್ ಟೂರ್ನಮೆಂಟ್ ಗೆ ಹಾಸನ ಮೈಸೂರು ತುಮಕೂರು ಅಲ್ಲದೆ ಇತರ ಸ್ಥಳಗಳಿಂದಲೂ ಆಟಗಾರರು ಬರುತ್ತಿದ್ದರು. ಆ ಕಾಲಕ್ಕೆ ಸುಸಜ್ಜಿತ ಶಟಲ್ ಬ್ಯಾಡ್ಮಿಂಟನ್ ಕೋರ್ಟ್ ಗಳ ಸಂಖ್ಯೆ ಕಡಿಮೆ ಎಂದು ಹೇಳಬಹುದು. ಅದು ಒಳಾಂಗಣ ಕ್ರೀಡೆಯಾಗಿದ್ದು ಎತ್ತರ ಹಾಗೂ ಪಿಲ್ಲರ್ ಗಳಿಲ್ಲದ ವಿಶಾಲವಾದ ಭವನ ಅದಕ್ಕೆ ಬೇಕಾಗಿತ್ತು. ಇಂಥವುಗಳ ಸಂಖ್ಯೆ ಆಗ ರಾಜ್ಯಮಟ್ಟದಲ್ಲೂ ಕಡಿಮೆ.

ಅದೃಷ್ಟವಶಾತ್ ಗೊರೂರಿನಲ್ಲಿ ಅಷ್ಟು ಎತ್ತರ ಅಲ್ಲದಿದ್ದರೂ ಆಡಬಹುದಾದ ಮನರಂಜನಾ ಮಂದಿರ ಇತ್ತು. ಅದರ ಜೊತೆಗೆ ಲಾನ್ ಟೆನಿಸ್ ಕೊರ್ಟ್ ಇದ್ದಿದ್ದರಿಂದ ದುಬಾರಿ ಟೆನಿಸ್ ಬಾಲ್ ಹಾಗೂ ಶಟಲ್ ಕಾಕ್ ಗಳನ್ನು ತರಲು ಆಫೀಸರ್ಸ್ ಕ್ಲಬ್ ನಲ್ಲಿ ಪ್ರಾವಿಸನ್ ಇದ್ದ ಕಾರಣ ಸಾಕಷ್ಟು ಉದಯೋನ್ಮುಖ ಆಟಗಾರರು ಬೆಳೆಯಲು ಸಹಾಯಕವಾಯಿತು. ಅಲ್ಲಿ ನಡೆಯುತ್ತಿದ್ದ ಟೂರ್ನಮೆಂಟ್ ನಲ್ಲಿ ಬಹುತೇಕ ನಮ್ಮ ಊರಿನವರೇ ಚಾಂಪಿಯನ್ ಗಳಾಗುತ್ತಿದ್ದರು. ನೀಳವಾದ ಕೈಕಾಲುಗಳು ಇದ್ದ ಕೃಷ್ಣ ಘಟಾನುಘಟಿಗಳನ್ನು ಸೋಲಿಸಿ ಒಮ್ಮೆ ಅಲ್ಲಿಯ ಚಾಂಪಿಯನ್ ಆಗಿದ್ದ.

ಆ ಸಂದರ್ಭದಲ್ಲಿ ಸಿಕ್ಕಾಗಲೆಲ್ಲ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಿ ಆತ ಮೈಸೂರುಯುನಿವರ್ಸಿಟಿ ಹಂತಕ್ಕೆ ಆಡಲು ಸಾಧ್ಯವಾದರೂ ಮುಂದೊಮ್ಮೆ ಬ್ಯಾಂಕ್ನಲ್ಲಿ ಒಳ್ಳೆಯ ಕಡೆ ಉದ್ಯೋಗ ಸಿಗಬಹುದು ಇಲ್ಲದಿದ್ದರೆ ಎಚ್ಎಂಟಿ ಬಿಇಎಂಲ್ ನಲ್ಲಿ ಕೆಲಸ ಸಿಗಬಹುದು ಎಂದು ಆತನಿಗೆ ಹೇಳುತ್ತಿದ್ದೆ. ಆಗಿನ ಕಾಲಕ್ಕೆ ಅನೇಕ ಕ್ರಿಕೆಟ್ ಹಾಗೂ ಇತರ ಕ್ರೀಡೆಗಳ ಆಟಗಾರರು ಬ್ಯಾಂಕಿಗೆಇಲ್ಲವೇ ಇತರೆ ಕಂಪನಿಗಳಿಗೆ ಆಯ್ಕೆಯಾಗಿದ್ದರು. 

ಮುಂದೆ ನಾನು ಅಧ್ಯಾಪಕನಾಗಿ ನಮ್ಮೂರಿಗೆ ಬಂದಾಗ ನೋಡಿದರೆ ಕೃಷ್ಣ ಅದೇ ಹೋಟೆಲ್ ನಲ್ಲಿ ಮುಂದುವರಿದಿದ್ದ. ಆಗ ಅದು ಒಂದು ಜನನಿಬಿಡ ಹೋಟೆಲ್ ಆಗಿತ್ತು. ಹೇಮಾವತಿ ಪ್ರಾಜೆಕ್ಟ್ ನ ಕಛೇರಿಗಳಿಗೆ ವಿವಿಧ ಕೆಲಸಗಳಿಗೆ ಬಂದವರು ಊಟ ತಿಂಡಿ ಗಾಗಿ ಅಲ್ಲಿಗೆ ಎಡತಾಕುತ್ತಿದ್ದರು. ಹತ್ತು ನಿಮಿಷದ ಮೇಲೆ ಅಲ್ಲಿ ಊಟಕ್ಕೆ ಕೂಡಲಾಗುತ್ತಿರಲಿಲ್ಲ. ಅಲ್ಲಿ ಬಿಟ್ಟರೆ ನಾನು ಆ ಸಂದಣಿ ನೋಡಿದ್ದು ಹಾಸನದ ಪಿಳ್ಳೆ ಮೆಸ್ ನಲ್ಲಿ ಮಾತ್ರ.

ಅಲ್ಲಿದ್ದ ಊಟವಾದರೂ ಏನು? ಉಪ್ಪಿನಕಾಯಿ, ಮಜ್ಜಿಗೆ, ಸೊಪ್ಪಿನ ಪಲ್ಯ, ಅನ್ನ ಸಾಂಬಾರ್ ಶಟಲ್ ನಲ್ಲಿ ಮಿಂಚಿನಂತೆ ಹಿಂದೆ ಮುಂದೆ ಸರಿಯುತ್ತಿದ್ದ ಕೈಕಾಲುಗಳು ಈಗ ಅದೇ ದಾಟಿಯಲ್ಲಿ ಊಟವನ್ನು ಚಕಚಕನೆ ಬಡಿಸುತ್ತಿದ್ದನ್ನು ಕಂಡಾಗ ಕನಿಷ್ಠ ರಾಜ್ಯಮಟ್ಟದಲ್ಲಾದರೂ ಎದುರಾಳಿಗಳಿಗೆ ಶಟಲ್ ಸರ್ವ್ ಮಾಡಬಹುದಾಗಿದ್ದ ಪ್ರತಿಭೆ ಹೋಟೆಲ್ ನಲ್ಲಿ ಊಟ ಸರ್ವ್ ಮಾಡುತ್ತಿದ್ದನ್ನು ಕಂಡು ನನಗೆ ವಿಷಾದ ವೆನಿಸಿದರೂ ಆತನಿಗೆ ಏನೋ ಮಹತ್ವವಾದದ್ದನ್ನು  ಕಳೆದುಕೊಂಡ ಭಾವನೆ ಇರಲಿಲ್ಲ. ಈಗ ಕೆಲ ದಿನಗಳ ಹಿಂದೆ ನಾನು ಹೋದಾಗ ಹಳೆ ಹೋಟೆಲನ್ನು ಬಿಟ್ಟು ಈಗ ಸಣ್ಣದೊಂದು ಟೀ ಶಾಪನ್ನು ನಡೆಸುತ್ತಿದ್ದ. ಲೈಟಾಗಿ ಸ್ಟ್ರೋಕ್ ಆದ ಪರಿಣಾಮ ಎಂದು ತಿಳಿಸಿದ. ನನ್ನಣ್ಣ ಗೊರೂರುಅನಂತರಾಜು ಎತ್ತಿದ್ದ ವಿವಿಧ ಅವತಾರಗಳಲ್ಲಿ ತೊಡಗಿಸಿಕೊಂಡ ವಿವಿಧ ಚಟುವಟಿಕೆಗಳಲ್ಲಿ ಫೋಟೋ ಕಾಮಿಕ್ಸ್ ಕೂಡ ಒಂದು. 

ಆಗ ಸುಧಾದಲ್ಲಿ ವಾರಪತ್ರಿಕೆಯಲ್ಲಿ ಆಗ ತಾನೆ ಹೊಸದಾಗಿ  ಫೋಟೋಗಳ ಕಥಾಮಾಲಿಕೆ ಬರುತ್ತಿತ್ತು. ಅದು ಯಾರು ಯಾವಾಗ ಈತನಿಗೆ ಪ್ರೇರಣೆ ನೀಡಿದರೋ ಅಥವಾ ಅವನಿಗೆ ಹೊಳೆಯಿತೋ ಆತನದೇ ಕತೆಯೊಂದನ್ನು ಫೋಟೋ ಕಥಾಮಾಲಿಕೆ ಮಾಡಲು ಹೊರಟ. ಅದಕ್ಕೆ ಮಾಮೂಲಿನಂತೆ ಮನೆಯವರ ವಿರೋಧವಿದ್ದರೂ ಅದನ್ನು ಸೈಡಿಗೆ ಇಟ್ಟು ಅರಕಲಗೂಡು ನಿಂದ ಪ್ರಕಾಶ್ ಸ್ಟುಡಿಯೋದ ಪ್ರಕಾಶನನ್ನು ಮಗ್ಗೆ  ಕೊಣನೂರು ಕಡೆಯ ಸ್ನೇಹಿತರನ್ನು ಕಲಾವಿದರನ್ನು ಫೋಟೋಶೂಟ್ ಆರಂಭಿಸಿಯೇ ಬಿಟ್ಟ.

ದೇವಸ್ಥಾನದ ಬಳಿಯ ಹೊಳೆಯ ಪಕ್ಕ ಬಾಡಿ ಸಿಕ್ಕಿದೆ ಎಂಬುದೇ ಆರಂಭದ ದೃಶ್ಯ. ಹುಳುಕು ಹಲ್ಲಿನ ಪರಮೇಶನನ್ನು ಬಾಡಿ ಮಾಡಿ ದೇವಸ್ಥಾನದ ಸಮೀಪದಲ್ಲಿ ಹರಿಯುವ ಹೇಮಾವತಿ ಹೊಳೆಯ ಎಮ್ಮೆ ಗುಂಡಿಯಬಂಡೆಯ ಮೇಲೆ ಮಲಗಿಸಿ ಮರ್ಡರ್ ಮಿಸ್ಟರಿ ‘ಚೆಂಗುಲಾಬಿ’ ಕಥೆಯ ಚಿತ್ರೀಕರಣ ಆರಂಭವಾಯಿತು. ಬೇಸಿಗೆಯ ರಜೆಗೆಂದು ಬಂದಿದ್ದು ಕುತೂಹಲಕ್ಕೆಂದು ಅಲ್ಲಿ ಹೋಗಿದ್ದ ನನಗೆ ಪೊಲೀಸ್ ಇನ್ಸ್ ಪೆಕ್ಟರ್‌ ನ ಹಿಂದೆ ನಿಂತ ಪೊಲೀಸ್ ಪೇದೆ ಮಾಡಿ ಒಂದು ಫೋಟೋ ಕ್ಲಿಕ್ಕಿಸಲಾಯಿತು.

ಮುಂದೆ ಎಲ್ಲೆಲ್ಲಿಯೋ ವಾರಗಟ್ಟಲೆ ಚಿತ್ರೀಕರಣವೂ ಆಯ್ತು. ಮುಂದೆ ಫೋಟೋ ಆಲ್ಬಮ್ ಮಾಡಿ ಅವುಗಳಿಗೆ ಚಿತ್ರ ವಿವರಣೆಯನ್ನು ನೀಡಿ ಕಥೆಯನ್ನು ಜೋಡಿಸಿ ಸುಧಾ ಸೇರಿದಂತೆ ವಿವಿಧ ಪತ್ರಿಕೆಗಳಿಗೆ ಕಳಿಸಿದರೂ ವಿಷಾದಪತ್ರದೊಂದಿಗೆ ಅವು ವಾಪಸ್ ಬಂದವು. ನಮ್ಮ ಚಿಕ್ಕಪ್ಪ ಲೇಖಕ ಗೊರೂರು ಸೋಮಶೇಖರ್ ನಾನು ಸಿಕ್ಕಾಗಲೆಲ್ಲಾ ಎಲ್ಲಿಗೆ ಬಂತಪ್ಪ ಕೆಂಗನ ಗುಲಾಬಿ (ನನ್ನ ಅಣ್ಣ ಕೆಂಪಾಗಿದ್ದ. ಕಾರಣ ಆತನಿಗೆ ಕೆಂದ ಮತ್ತೆ ಕೆಂಗ ಎಂಬ ಅಡ್ಡ ಹೆಸರಿನಿಂದ  ಅವರು ಕರೆಯುತ್ತಿದ್ದರು) ಎಂದು ಛೇಡಿಸುತ್ತಿದ್ದರು. ಕೊನೆಗೂ ಸ್ಥಳೀಯವಾಗಿ ಆರಂಭವಾಗಿದ್ದ ವಾರಪತ್ರಿಕೆಯೊಂದರಲ್ಲಿ ಮುಂದೆ ಅದು ಪ್ರಕಟವಾಯಿತು. 

ಸಿಗಬಹುದಾದ ಅವಕಾಶ ಬಳಸಿಕೊಳ್ಳದ ನಿರಾಸಕ್ತ ಕೃಷ್ಣ, ಹೊಸ ಹೊಸ ಅವಕಾಶಗಳ ಸೃಷ್ಟಿಸುವ ಕಡೆ ಆಸಕ್ತ ಸಹೋದರ, ಇಬ್ಬರು ಆ ಬಂಡಿಯ ಚಕ್ರಗಳಂತೆ ಭಾಸವಾಯಿತು.

‍ಲೇಖಕರು Avadhi

June 8, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: