ಅಬ್ಬಾ.. ಆ ತುಂಟಾಟ

ಎನ್ ಶೈಲಜಾ ಹಾಸನ

ಮಕ್ಕಳು ಏನು ಮಾಡಿದರೂ ಚಂದವೇ. ಅವರ ಆಟ, ಪಾಠ,  ತುಂಟಾಟ ಎಲ್ಲವೂ ಚಂದವೇ. ಆದರೆ ಆ ಆಟ, ತುಂಟಾಟ ಮನೆಯವರಿಗೆ ಮುದ ನೀಡಿದ ಹಾಗೆ ಮುಜುಗರ, ಅಸಹನೆ, ಕೋಪ ಕೂಡ ತರಿಸುತ್ತದೆ. ಅದಕ್ಕೆ ನಮ್ಮ ಮನೆಯೇ ಉದಾಹರಣೆ. ನಮ್ಮ ಅಣ್ಣ ಮಹಾ ತುಂಟ. ಅವನ ಲೀಲೆಗಳು ಒಂದೇ ಎರಡೇ. ಅವನು ಸಣ್ಣ ಮಗುವಿದ್ದಾಗಲೇ ಮನೆಯಲ್ಲಿ ಸದಾ ರಗಳೆ ಮಾಡಿ ಅತ್ತು ಅತ್ತು ಅಮ್ಮನನ್ನು ಗೋಳು ಹೊಯ್ದುಕೊಳ್ಳುವುದರಿಂದ ಹಿಡಿದು ದೊಡ್ಡವನಾಗುವ ತನಕ ಮಾಡಿದ್ದ ಎಲ್ಲ ತುಂಟಾಟವನ್ನೂ ಅಮ್ಮ ಪದೇ ಪದೇ ಹೇಳುತ್ತಿದ್ದರು.

ಒಂದು ವರ್ಷದವನಾಗಿದ್ದಾಗ ತಟ್ಟೆಗೆ ಅನ್ನ ತುಪ್ಪ ಕಲಸಿ ತಿನ್ನಲು ಅವನ ಮುಂದಿಟ್ಟು ಅಮ್ಮ ಹೊರಬಂದಿದ್ದರಂತೆ. ಅಮ್ಮ ಹೊರ ಹೋಗುವುದನ್ನೆ ಕಾದು ಅಮ್ಮ ಹೋದತ್ತಲೇ ನೋಡುತ್ತಾ ಪಕ್ಕದಲ್ಲೇ ಇದ್ದ ತುಪ್ಪದ ಜಾಡಿಗೆ ಕೈಹಾಕಿ ದೊಗೆದು ದೊಗೆದು ಕಳ್ಳ ಕೃಷ್ಣನಂತೆ ಮುಕ್ಕುತ್ತಿದ್ದಾನೆ. ‘ಇನ್ನೂ ಒಂದು ವರ್ಷವಾಗಿಲ್ಲ ಆಗಲೇ ನಾನು ಹೋದ ಮೇಲೆ ತುಪ್ಪ ತಗೋಬೇಕು ಅಂತ ಗೊತ್ತಾಗುತ್ತಾ  ಕಳ್ಳ ಕೃಷ್ಣ’ ಅಂತ ಮುದ್ದಾಡಿದ್ದರಂತೆ. ಅವನು ಬೆಳೆಯುತ್ತ ಹೋದಂತೆ ಅವನ ಆರ್ಭಟ ಜಾಸ್ತಿ ಆಗ್ತಾನೆ ಹೋಯಿತು. ಅವನ ಪ್ರತಾಪ ಒಂದಾ ಎರಡಾ ಹೇಳುತ್ತಾ ಹೋದರೆ ಒಂದು ಕಾದಂಬರಿಯೇ ಆದೀತು. ಅವನು ಸಣ್ಣವನಿದ್ದಾಗ ತಲೆ ಕೂದಲು ಕಟ್ ಮಾಡಿಸುವಾಗಲಂತೂ ನೇಣುಗಂಬಕ್ಕೆ ಏರುವಂತೆ ಗೋಳಾಡುತ್ತಿದ್ದ.

ಎರಡೂ ಕೈಗೂ ಕೈತುಂಬಿಸುವಷ್ಟು ಚಾಕಲೇಟ್ ಇರಿಸಿ ಕಟಿಂಗ್ ಮಾಡಿಸಬೇಕಿತ್ತು. ನಿಜವಾಗಿಯೂ ಭಯವಾಗಿ ಅಳುತ್ತಿದ್ದನೊ ಅಥವಾ ಎರಡೂ ಕೈ ತುಂಬಾ ಸಿಗುವ ಚಾಕಲೇಟ್ ಗಾಗಿ ನಾಟಕದ ಅಳುವೊ, ಅದು ಅವನಿಗೆ ಮಾತ್ರ ಗೊತ್ತು. ನಮ್ಮಣ್ಣ ಮನೆಗೆ ಹಿರಿಯ ಮಗ. ಹಾಗಾಗಿ ತುಂಬಾ ಮುದ್ದಾಗಿ ಬೆಳೆಸುತ್ತಿದ್ದರು. ಮುದ್ದು ಜಾಸ್ತಿ ಆಗಿ ಪುಂಡಾಟ ಕೂಡಾ ಜಾಸ್ತಿ ಆಗಿತ್ತು. ಅವನ ಹಿಂದೆ ನಾವು ಮೂವರು ಹುಟ್ಟಿದರೂ ಅವನ ಪ್ರಾಬಲ್ಯವೇನು ಕಡಿಮೆ ಆಗಿರಲಿಲ್ಲ.

ನಾವುಗಳು ಅವನ ಕೈಗೆ ಸಿಕ್ಕ ಆಟಿಕೆ ನಾವಾಗಿದ್ದೆವು. ನಮ್ಮನ್ನಂತೂ ಹುರಿದು ಮುಕ್ಕುತ್ತಿದ್ದ. ನಮ್ಮನ್ನು ಅಣ್ಣನಾ ಉಸ್ತುವಾರಿಯಲ್ಲಿ ಬಿಟ್ಟು ಅಮ್ಮ, ಅಪ್ಪ ಪೇಟೆಗೊ, ಸಿನಿಮಾಗೊ ಆಗಾಗ್ಗೆ ಹೋಗುತ್ತಲೇ ಇರುತ್ತಿದ್ದರು. ನಾಲ್ಕು ಮಕ್ಕಳ ಕಪಿ ಸೈನ್ಯವನ್ನು ಎಲ್ಲ ಕಡೆ ಕರೆದೊಯ್ಯಲು ಸಾಧ್ಯವೆ. ನಾವು ಮೂವರು ಮಾಡುವ ತುಂಟಾಟವನ್ನು ಅಣ್ಣ ಒಬ್ಬನೇ ಮಾಡುತ್ತಿದ್ದ. ನಮ್ಮನ್ನು ಸಹಿಸಿದರೂ ಅಣ್ಣನನ್ನು  ಸಹಿಸಲು ಸಾಧ್ಯವಾಗದೆ ಚೇಳಿಗೆ ಪಾರುಪತ್ಯ ಕೊಟ್ಟಂತೆ ವಿಧಿ ಇಲ್ಲದೆ ನಮ್ಮನ್ನೆಲ್ಲ ಅವನ ಸುಪರ್ಧಿಗೆ ಬಿಟ್ಟು ಹೋಗುತ್ತಿದ್ದರು.

ಅಪ್ಪ ಅಮ್ಮ ಹೊರಗೆ ಹೋಗುವ ತನಕ ಮಹಾ ಮುಗ್ಧನಂತೆ ಸುಮ್ಮನೆ ಇರುತ್ತಿದ್ದ ಅಣ್ಣ, ಅವರು ಹೋದ ಕೂಡಲೆ ಮುಂಬಾಗಿಲಿನ ಬಾಗಿಲು ಹಾಕಿ ನಮ್ಮನ್ನೆಲ್ಲ ಸದೆ ಬಡಿಯುತ್ತಿದ್ದ. ಅವನು ನಮಗೆ ಹೊಡೆಯಲು ಕಾರಣಗಳೇ ಬೇಕಾಗಿರಲಿಲ್ಲ. ಅವನು ಹೇಳಿದಂತೆ ನಾವು ಕೇಳಬೇಕಿತ್ತು. ಅವನು ಕೇಳುವುದನ್ನೇಲ್ಲ ಕೊಡಬೇಕಿತ್ತು. ಅವನು ಹೇಳುವುದನ್ನು ಕೇಳದಿದ್ದರೆ ನಾನು ದೊಡ್ಡವನು ನಾನು ಹೇಳಿದ ಮಾತು ಕೇಳುವುದಿಲ್ಲವೆ ಅಂತ ಹೊಡೆಯುತ್ತಿದ್ದ. ಅವನ ಏಟು ತಾಳಲಾರದೆ ಜೋರಾಗಿ ಕಿರುಚುತ್ತಿದ್ದೆವು. ಅಕ್ಕ ಪಕ್ಕದ ಮನೆಯರಿಗೆಲ್ಲ ಆಗ ಗೊತ್ತಾಗುತ್ತಿತ್ತು ಮನೆಯಲ್ಲಿ ದೊಡ್ಡವರಿಲ್ಲ.

ಮನೆಯಲ್ಲಿ ಮಕ್ಕಳು ಮಾತ್ರ ಇದ್ದಾರೆ. ಕುರಿ ಕಾಯಲು ತೋಳವನ್ನು ನೇಮಿಸಿದ್ದಾರೆ ಅಂತ. ಅಯ್ಯೋ ಪಾಪ ಈ ಮಕ್ಕಳಿಗೆ ನರಕ ತೋರಿಸುತ್ತಿದ್ದಾನೆ ಅಂತ ಬುದ್ಧಿ ಹೇಳಲು ಬಾಗಿಲು ಬಡಿದರೆ ಜಪ್ಪಯ್ಯ ಅಂದ್ರೂ ಬಾಗಿಲು ತೆಗೆಯುತ್ತಿರಲಿಲ್ಲ. ಅವರು ಅಲ್ಲಿ ಇರುವ ತನಕ ನಾವ್ಯಾರು ಜೋರಾಗಿ ಅಳುವುದಾಗಲಿ ಕಿರುಚೋದಾಗಲಿ ಮಾಡುವಂತಿರಲ್ಲ. ಸ್ವಲ್ಪ ಹೊತ್ತು ನಿಂತಿದ್ದು ಗಲಾಟೆ ಕಡಿಮೆಯಾಯಿತೆಂದು ಅವರು ಅಲ್ಲಿಂದ ಹೋಗಿ ಬಿಡುತ್ತಿದ್ದರು. ಅವರು ಹೋದರು ಅಂತ ಗೊತ್ತಾಗುವುದು ತನಕ ಮಾತಾಡದೆ ಗಂಭೀರ ವಾಗಿರುತ್ತಿದ್ದ ಅಣ್ಣ ಜೋರಾಗಿ ಕಿರುಚ್ತಾ ಎಲ್ಲರೂ ಕೇಳಿಸಿಕೊಳ್ಳುವಂತೆ ಮಾಡ್ತೀರಾ ಅಂತ ಮತ್ತಷ್ಟು ಹೊಡೆಯುತ್ತಿದ್ದ. ನಮಗೊ ಸಾಕಾಗಿ ಹೋಗಿ ಎದುರು ಬೀಳುತ್ತಿದ್ದೆವು. ಆಗ ಎರಡು ಪಕ್ಷವಾಗುತ್ತಿತ್ತು.

ನಾನೂ ನನ್ನ ದೊಡ್ಡ ತಮ್ಮ ಒಂದು ಪಕ್ಷ. ಅಣ್ಣ ಮತ್ತು ಚಿಕ್ಕ ತಮ್ಮ ಇನ್ನೊಂದು ಪಕ್ಷ. ಚೆನ್ನಾಗಿ ಹೊಡೆದಾಡುತ್ತಿದ್ದೆವು. ನಾನು, ನನ್ನ ದೊಡ್ಡ ತಮ್ಮ ಎಷ್ಟೇ ಹೋರಾಟ ಮಾಡಿದರೊ ಗೆಲುವು ಅಣ್ಣನ ಪಕ್ಷಕ್ಕೆ. ಅಪ್ಪ ಅಮ್ಮ ಬರುವ  ತನಕ ಹೀಗೆ ಹೊಡೆದಾಡಿಕೊಳ್ಳುತ್ತಾ ಕೂಗಾಡಿ ಕಿರುಚಾಡಿ ಮನೆ ಮಠ ಒಂದು ಮಾಡಿ ಅಕ್ಕ ಪಕ್ಕದ ಮನೆಯವರಿಗೆಲ್ಲ ಬೇಸರ ತರಿಸಿ, ಅಪ್ಪ ಅಮ್ಮ ಬರುವ ಹೊತ್ತಿಗೆ ಏನು ಅರಿಯದ ಮಳ್ಳರಂತೆ ಪುಸ್ತಕ ಹಿಡಿದು ಓದುವಂತೆ ನಟಿಸುತ್ತಾ ಕೂರುತ್ತಿದ್ದೆವು.

ಅಮ್ಮ ಅಪ್ಪ ಬಂದು ಪಾಪ ಮಕ್ಕಳು ಗಲಾಟೆ ಮಾಡದೆ ಓದಿಕೊಳ್ಳುತ್ತಿದ್ದಾರೆ ಅಂತ ನೆಮ್ಮದಿಯಿಂದ ಉಸಿರು ಬಿಡುವಷ್ಪರಲ್ಲಿ ಅಕ್ಕ ಪಕ್ಕದ ಮನೆಯವರಲ್ಲಿ ಯಾರಾದರೊಬ್ಬರು ಮನೆಗೆ ಬಂದು ‘ನಿಮ್ಮ ದೊಡ್ಡ ಮಗನ ಜೊತೆಗೆ ಈ ಮಕ್ಕಳನ್ನು ಯಾಕೆ ಬಿಟ್ಟು ಹೋಗ್ತೀರಾ. ಹೊಡೆದು ಬಡಿದು ಆ ಮಕ್ಕಳ ಬಾಡಿ ಪಾರ್ಟುಗಳನ್ನೇಲ್ಲ ಬೇರೆ ಬೇರೆ ಮಾಡಿರುತ್ತಾನೆ ನೀವು ಬರುವೊದ್ರೊಳಗೆ’ ಅಂತ ಚಾಡಿ ಹೇಳಿ ಅವರ ನೆಮ್ಮದಿಗೆ ಭಂಗ ತಂದು ಇದ್ದ ಸತ್ಯವನ್ನು ಹೇಳಿ ಬಿಡುತ್ತಿದ್ದರು. ‘ಹೌದೇನೋ ಬಡವ, ಮಕ್ಕಳನ್ನು ಸರಿಯಾಗಿ ನೋಡಿಕೊಂಡು ಜವಾಬ್ದಾರಿಯಿಂದ ಇರು ಅಂದರೆ, ದೊಡ್ಡವನಾಗಿ ನೀನೇ ಮಕ್ಕಳಿಗೆ ಹೊಡೆದು ಬಡಿದು ಮಾಡ್ತೀಯಾ’ ಅಂತ ಅಪ್ಪ ಅಣ್ಣನಿಗೆ ಹೊಡೆಯಲು ಹೋದರೆ ಅಮ್ಮ ‘ಹೋಗಲಿ ಬಿಡಿ, ಇವು ಏನೂ ಮಾಡಿರುತ್ತವೆ. ಅದಕ್ಕೆ ಹೊಡೆದಿರುತ್ತಾನೆ’ ಅಂತ ಹೊಡೆಯದಂತೆ ತಡೆಯುತ್ತಿದ್ದಳು. ಆಗ ಅಣ್ಣನಿಗೆ ಏಟು ತಪ್ಪಿತ್ತಲ್ಲ ಅಂತ ನಮಗೆ ನಿರಾಶೆ ಆಗುತ್ತಿತ್ತು.

ಅಣ್ಣ ನಮಗೆ ಮಾತ್ರ ರೌಡಿಯಾಗಿರಲಿಲ್ಲ. ನಮ್ಮ ಬೀದಿಯ ಎಲ್ಲ ಮಕ್ಕಳಿಗೂ ಸಿಂಹಸ್ವಪ್ನವಾಗಿದ್ದ. ಪ್ರತಿದಿನ ಒಬ್ಬೊಬ್ಬ ಪೋಷಕರು ಮನೆಯ ಹತ್ತಿರ ದೂರು ತರಲಾರಂಭಿಸಿದರು. ಒಂದು ದಿನ ನಮ್ಮ ಮಗನ ಕೈ ಮುರಿದ ಅಂತ ಒಬ್ಬರು ಮತ್ತೊಂದು ದಿನ ನಮ್ಮ ಮಗನ ತಲೆಗೆ ಕಲ್ಲಿನಿಂದ ಹೊಡೆದು ತೂತಾಗಿದೆ. ಹೊಲಿಗೆ ಹಾಕಿಸಿದ್ದೆವೆ. ನಿಮ್ಮಮಗನಿಗೆ ಬುದ್ಧಿ ಕಲಿಸಿ ಅಂತ ಮತ್ತೊಬ್ಬರು ಬೈಯ್ದು ಹೋಗುತ್ತಿದ್ದರು. ಅಪ್ಪನಿಗೂ ದಿನಾ ಇದನ್ನು ನೋಡಿ ನೋಡಿ ಸಾಕಾಗಿ ಹೋಗಿತ್ತು. ಹಾಗೆ ದೂರು ಬಂದ ಒಂದು ದಿನ. ಕೋಪದಿಂದ ಅಣ್ಣನಿಗೆ ಸಾಕಷ್ಟು ಥಳಿಸಿ ಅವನನ್ನು ತಲೆ ಕೆಳಕಾಗಿ ಸೀಲೀಂಗ್ ಗೆ ಕಟ್ಟಿ ಕೆಳಗೆ ಮೆಣಸಿನಕಾಯಿ ಹೊಗೆ ಕೊಟ್ಟು ನಮ್ಮನ್ನೆಲ್ಲ ಹೊರಗೆ ಕಳಿಸಿದ್ದರು. ಅಣ್ಣ ಘಾಟು ತಡೆಯಲಾರದೆ ಕೆಮ್ಮುತ್ತಾ ತಪ್ಪಾಯ್ತು ಇನ್ನೂಂದು ಸಲ ಹೀಗೆ ಮಾಡಲ್ಲ ಬಿಡಪ್ಪ ಅಂತ  ಅಳುತ್ತ ಕಿರುಚಾಡುತ್ತ ಗೋಗರೆದರೂ ಬೇಡಿ ಕೊಂಡರೂ ಅಪ್ಪ ಕನಿಕರ ತೋರದೆ ಕಟುವಾಗಿಯೇ ಇದ್ದರು. ಎಷ್ಟು ಹೊತ್ತಾದರೂ ಅಣ್ಣನನ್ನು ಕೆಳಗೆ ಇಳಿಸಿರಲಿಲ್ಲ.

ನಾವಂತೂ ಅಪ್ಪನ ಉಗ್ರ ಕೋಪ ಕಂಡು ಹೆದರಿ ಹೋಗಿದ್ದವು. ಕೊನೆಗೆ ಅಮ್ಮ ಅತ್ತು ಕರೆದು ಅಪ್ಪನ ಕೋಪ ತಣಿಯುವಂತೆ ಮಾಡಿ ಅಣ್ಣನಿಗೆ ಮೆಣಸಿನಕಾಯಿ ಘಾಟಿನಿಂದ ಪಾರು ಮಾಡಿದ್ದಳು. ಇಡೀ ರಾತ್ರಿ ಅಣ್ಣ ನರಳುತ್ತಲೆ ಕಳೆದಿದ್ದ. ಅಮ್ಮ ಅಂತೂ ಅವನ ಬಿಟ್ಟು ಅಲ್ಲಾಡಿರಲಿಲ್ಲ. ಬೆಳಗಾಗುವ ತನಕ ಅಣ್ಣನಿಗೆ ಬುದ್ದಿ ಹೇಳುತ್ತಾ ಹಾಗೆಲ್ಲ ಮಕ್ಕಳಿಗೆಲ್ಲ ಹೊಡೆಯಬಾರದು. ಅವರೇನಾದರೂ ಪೋಲೀಸರಿಗೆ ಕಂಪ್ಲೇಂಟ್ ಕೊಟ್ಟಿದ್ದರೇ ನಿನ್ನ ಜೈಲ್ ಗೆ ಹಾಕುತ್ತಾರೆ. ಅಲ್ಲಿ ಚೆನ್ನಾಗಿ ನಿನ್ನ ಹೊಡೆದು ಸಾಯಿಸೇ ಬಿಡುತ್ತಾರೆ ಅಂತೆಲ್ಲಾ ಹೇಳಿ ಹೆದರಿಸಲು ಪ್ರಯತ್ನಿಸಿದ್ದಳು. ಅವನೂ ಹೆದರಿದಂತೆ ಕಾಣಿಸಿತು. ಅಥವಾ ಹಾಗೆ ನಟಿಸಿದ್ದ. ನಾಯಿಯಂತೆ ಬಾಲ ಡೊಂಕು ತಾನೆ.

ಮಾರನೆ ದಿನವೇ ಅಪ್ಪನಿಗೆ ಚಾಡಿ ಹೇಳಿದ್ದ ಆ ಮನೆಯವರ ಹಿತ್ತಲಿಗೆ ನುಗ್ಗಿ ಅವರು ಬೆಳೆಸಿದ್ದರ ಹೂ ಮತ್ತು ತರಕಾರಿ ಗಿಡಗಳನ್ನು ಕಿತ್ತು ಹಾಕಿ ಸೋರೆಗಿಡದ ಬಳ್ಳಿ, ಪಪ್ಪಾಯಿ ಮರದ ಹೂ ಹೀಚು ಕಾಯಿ ಮುರಿದು ಹಾಕಿ ತನ್ನ ಸೇಡು ಕೋಪ ತೀರಿಸಿ ಕೊಂಡಿದ್ದ. ಅದು ಆ ಮನೆಯವರಿಂದ ತಿಳಿದು ಸಂಜೆ ಮತ್ತೆ ಅಣ್ಣನಿಗೆ ಮಹಾ ಪೂಜೆ. ಆವತ್ತು ಅಪ್ಪ ಅಣ್ಣನಾ ಬೆನ್ನು ಮೇಲೆ ದೊಡ್ಡ ಅಕ್ಕಿ ಡಬ್ಬವನ್ನು ಹೊರಿಸಿ ರಾತ್ರಿಯ ತನಕ ನಿಲ್ಲಿಸಿದ್ದರು. ಕಮ್ ಕಿಮ್ ಎನ್ನದೆ ಅಷ್ಟು ಭಾರವನ್ನು ಬೆನ್ನನ ಮೇಲೆ ಹೊತ್ತು ನಿಂತಿದ್ದ ಜಗಮೊಂಡ.

ಅಮ್ಮ ನಮ್ಮನ್ನು ಅಡುಗೆ ಕೋಣಿಯಲ್ಲಿ ಕೂರಿಸಿಕೊಂಡು ಮುಸಿ ಮುಸಿ ಅಳುತ್ತಾ ‘ಇಂತ ಮಗ ಯಾಕಾದರೂ ಹುಟ್ಟಿದನೋ’ ಅಂತ ಮಗನನ್ನು ಒಮ್ಮೆ ಬೈಯುತ್ತ ‘ಆ ಜನಗಳೇಕೆ ಬಂದು ಬಂದು ಚಾಡಿ ಹೇಳಿ ಮಗನಿಗೆ ಶಿಕ್ಷಿಸುವಂತೆ ಮಾಡುತ್ತಾರೊ’ ಅಂತ ಚಾಡಿ ಹೇಳಿದವರನ್ನು ಶಪಿಸುತ್ತಾ ಇದ್ದಳು. ಅತ್ತ ಅಪ್ಪನಿಗೇ ಅಯ್ಯೋ ಅನಿಸಿ ಅಣ್ಣನ ಬೆನ್ನು ಮೇಲಿನ ಭಾರ ಇಳಿಸಿದ್ದರು. ಹೀಗೆ ಅಣ್ಣನ ಆಟ ತುಂಟಾಟಗಳು ಅಪ್ಪ ಅಮ್ಮನಿಗೆ ಬೇಸರ, ಕೋಪ ತರಿಸಿ ಸಾಕು ಸಾಕು ಮಾಡಿದ್ದವು.

‍ಲೇಖಕರು Avadhi

June 8, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ರಾಜೇಶ್ವರಿ ಹುಲ್ಲೇನಹಳ್ಳಿ

    ಎನ್ ಶೈಲಜಾ ಹಾಸನ್ ರವರ ಅಬ್ಬಾ! ತುಂಟಾಟ ನಮ್ಮ ಬಾಲ್ಯವನ್ನು ಮೆಲುಕು ಹಾಕಿಸಿತು. ನೈಜ ಅನುಭವವನ್ನು ಸುಂದರವಾಗಿ ಬಿಚ್ಚಿಟ್ಟಿದ್ದಾರೆ.ಹೌದು ಒಬ್ಬೊಬ್ಬರ ಮನೆಯಲ್ಲಿ ಒಬ್ಬೊಬ್ಬರು ಬಲಾಢ್ಯರು ಇರುತ್ತಾರೆ. ಆಗೆಲ್ಲ ಮನೆಯಲ್ಲಿಯೇ ನಾಲ್ಕು ಐದು ಮಕ್ಕಳು ತಾನೇ. ಸಣ್ಣ ಪುಟ್ಟ ಜಗಳಗಳು ಸರ್ವೇ ಸಾಮಾನ್ಯ ಆದರೆ ಎಲ್ಲರನ್ನೂ ಥಳಸುವುದು ಅಬ್ಬಾ !
    ರಾಜೇಶ್ವರಿ ಹುಲ್ಲೇನಹಳ್ಳಿ
    ಹಾಸನ

    ಪ್ರತಿಕ್ರಿಯೆ
    • Shylajahassan

      ನಿಮ್ಮ ಅಭಿಮಾನದ ಪ್ರತಿಕ್ರಿಯೆಗೆ ಧನ್ಯವಾದಗಳು ರಾಜೇಶ್ವರಿ

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: