ಸಿನಿಮಾದಲ್ಲಿ ಕಾರಂತರ 'ಮೂಕಜ್ಜಿ'

ಕರ್ನಾಟಕ ಪತ್ರಕರ್ತೆಯರ ಸಂಘ, ಚಲನಚಿತ್ರ ಅಕಾಡೆಮಿ ಜಂಟಿಯಾಗಿ ಬೆಂಗಳೂರಿನಲ್ಲಿ ‘ಮೂಕಜ್ಜಿಯ ಕನಸುಗಳು’ ಚಿತ್ರ ಪ್ರದರ್ಶನವನ್ನು ಹಮ್ಮಿಕೊಂಡಿತ್ತು. 
ಪತ್ರಕರ್ತೆ ಸುರೇಖಾ ಹೆಗ್ಡೆ ಅವರು ತೆರೆಯ ಮೇಲೆ ಮೂಕಜ್ಜಿಯನ್ನು ಕಂಡಾಗ ಆದ ಅನುಭವವನ್ನು ಬಣ್ಣಿಸಿದ್ದಾರೆ.
ಸುರೇಖಾ ಹೆಗ್ಡೆ 
ಜ್ಞಾನಪೀಠ ಪ್ರಶಸ್ತಿಯಂಥ ಸರ್ವಶ್ರೇಷ್ಠ ಮೆಚ್ಚುಗೆಗೆ ಪಾತ್ರವಾದ ಕೃತಿ “ಮೂಕಜ್ಜಿಯ ಕನಸುಗಳು’. ವಿವಿಧ ಸನ್ನಿವೇಶಗಳ ನೇಯ್ಗೆಯ ಮೂಲಕ ಸಾಗುವ ಈ ಕಾದಂಬರಿ ಅರ್ಥವಾಗುವುದು ತುಸು ಕಷ್ಟವೇ. ಪ್ರಶಸ್ತಿ ಪುರಸ್ಕೃತ ಕೃತಿ ಎನ್ನುವ ಕಾರಣಕ್ಕೆ ಬಾಲ್ಯದಲ್ಲಿ “ಮೂಕಜ್ಜಿಯ ಕನಸುಗಳು’ ನಮ್ಮಗಳ ಕೈಸೇರುತ್ತಿತ್ತು. ಆದರೆ ಶೀರ್ಷಿಕೆ ಬಿಟ್ಟು ಬೇರಾವುದೂ ಅರ್ಥವಾಗುತ್ತಿರಲಿಲ್ಲ. ಹೀಗಾಗಿ ಇತ್ತೀಚೆಗೆ ಇನ್ನೊಮ್ಮೆ ಮೂಕಜ್ಜಿಯನ್ನು ಅರಿಯಬೇಕು ಎಂದು ಪುಸ್ತಕ ಓದಿದ್ದೆ. ಮೊದಲಿಗಿಂತ ಚೆನ್ನಾಗಿ ಆಕೆ ನನ್ನ ಬೌದ್ಧಿಕ ಸಾಮರ್ಥ್ಯಕ್ಕೆ ಹೊಂದಿಕೊಂಡಳು ಎಂದು ಖುಷಿಸುವ ಹೊತ್ತಿಗೆ “ಮೂಕಜ್ಜಿಯ ಕನಸುಗಳು’ ಸಿನಿಮಾವಾಗಿ ತೆರೆಗೆ ಬರುತ್ತಿದ್ದಾಳೆ ಎನ್ನುವ ವಿಷಯ ಹುರಿದುಂಬಿಸಿತ್ತು.
ಬಾಲ್ಯ ವಿವಾಹ, ಅರಿಯದ ವಯಸ್ಸಿನಲ್ಲಿ ಆವರಿಸುವ ವೈಧವ್ಯ, ಅವುಗಳೊಂದಿಗೇ ಅಂಟಿಕೊಳ್ಳುವ ಮೌಢ್ಯಗಳ ಕುಣಿಕೆ, ಪುರುಷ ಪ್ರಾಧಾನ್ಯ ಸಮಾಜದಲ್ಲಿ ಬೆಳೆದೂ ನಂಬಿಕೆಗಳನ್ನು ಪ್ರಶ್ನಿಸುವ ಧೈರ್ಯ ತೋರುವ ಅಜ್ಜಿ, ದೇವರನ್ನೇ ಪ್ರಶ್ನಿಸುವ ಆಕೆಯ ಗಟ್ಟಿತನ, ಪ್ರಶ್ನಿಸುವ ಮನೋಭಾವನೆಯನ್ನೇ ಹತ್ತಿಕ್ಕಲು ಎತ್ನಿಸುವಾಗ ಮೌನಕ್ಕೆ ಶರಣಾಗಲೇ ಬೇಕಾದ ಅನಿವಾರ್ಯತೆ, ಮನೆಯಲ್ಲೇ ಕೂತು ಎಲ್ಲೆಲ್ಲೋ, ಎಂದೋ ನಡೆದ ಘಟನೆಗಳನ್ನು ಕಂಡಂತೆ ನುಡಿಯುವ ಆಕೆಯ ಶಕ್ತಿ, ಬದುಕಿನ ಸಂಪೂರ್ಣ ಭಾಗವನ್ನು ಒಬ್ಬಂಟಿಯಾಗೇ ಕಳೆದರೂ ಇತರರ ನಡವಳಿಕೆಯನ್ನು ಸಕಾರಾತ್ಮಕವಾಗಿ ಒಪ್ಪಿಕೊಳ್ಳುವ ಮನೋಭಾವಗಳು ಆಕೆಯನ್ನು ಇತರರಿಗಿಂತ ವಿಶಿಷ್ಟವಾಗಿ ನಿಲ್ಲಿಸುತ್ತವೆ.
ಒಂದೇ ಕಥೆಯ ಓಘವಿಲ್ಲದೆ, ವಿಭಿನ್ನ ಸನ್ನಿವೇಶಗಳ ಜೋಡಣೆಯಲ್ಲೇ ಓಡುವ ಈ ಕೃತಿಯನ್ನು ಪರಿಣಾಮಕಾರಿಯಾಗಿ ದೃಶ್ಯವಾಗಿಸಿ ಸಿನಿಮಾ ರೂಪು ನೀಡಿದ್ದು ನಿರ್ದೇಶಕ ಪಿ. ಶೇಷಾದ್ರಿ ಅವರ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿ.
ಓದಿ ಅರ್ಥೈಸಿಕೊಳ್ಳುವುದಕ್ಕೇ ಕಷ್ಟವಾಗಿದ್ದ ಮೂಕಜ್ಜಿ ಸಿನಿಮಾದಲ್ಲಿ ಹೇಗೆ ಕಾಣಿಸಿಕೊಂಡಿರಬಹುದು ಎಂಬುದು ನನ್ನ ಕುತೂಹಲವಾಗಿತ್ತು. ವಿಷಯವನ್ನು ಬರಹ ರೂಪದಲ್ಲಿ ಹೇಳುವುದೇ ಬೇರೆ, ದೃಶ್ಯಕ್ಕೆ ಇಳಿಸುವ ರೀತಿಯೇ ಬೇರೆ. ಹೀಗಾಗಿ ಸಿನಿಮಾಕ್ಕಾಗಿ ಮೂಕಜ್ಜಿಯೂ ಸಾಕಷ್ಟು ಬದಲಾಗಿರುತ್ತಾಳೆ ಎಂಬುದು ನನ್ನ ಸಹಜ ನಿರ್ಧಾರವಾಗಿತ್ತು. ಆದರೆ ಮೂಲ ಕಥೆಯಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳದೆ ಸುಂದರವಾಗಿ ನಿರೂಪಿಸಿದ್ದಾರೆ ನಿರ್ದೇಶಕರು. ಕಾದಂಬರಿ ಓದುವಾಗ ಮನಸ್ಸಿನಲ್ಲಿ ಮೂಡುವ ಚಿತ್ರಗಳೇ ಸಿನಿಮಾದಲ್ಲಿ ಪಾತ್ರಗಳಾಗಿವೆ ಎನ್ನುವಷ್ಟು ಅದ್ಭುತವಾಗಿ ದೃಶ್ಯಗಳನ್ನು ಹಿಡಿದಿಡಲಾಗಿದೆ. ಸಿನಿಮಾದಲ್ಲಿ ಮೂಡಿಬಂದ ಪ್ರತಿ ದೃಶ್ಯ, ಸನ್ನಿವೇಶ, ಸಂಭಾಷಣೆ ನೈಜತೆಯ ಪ್ರತಿರೂಪವಾಗಿ ಕಾಣುತ್ತವೆ. ಸನ್ನಿವೇಶಗಳನ್ನು ಪ್ರಭಾವಿಯಾಗಿ ಜನರ ಮುಂದಿಟ್ಟ ಕ್ಯಾಮರಾ ಕಣ್ಣು (ಜಿ.ಎಸ್. ಭಾಸ್ಕರ್ ಛಾಯಾಗ್ರಹಣ) ಬೆರಗು ಮೂಡಿಸುತ್ತದೆ. ಚಿತ್ರದ ಸಂಕಲನ (ಬಿ.ಎಸ್.ಕೆಂಪರಾಜು) ಕೂಡ ಅದ್ಭುತ ಅನುಭವ ನೀಡುತ್ತದೆ.

“ಮೂಕಜ್ಜಿಯ ಕನಸುಗಳು’ವಿನಲ್ಲಿ ಬರುವ ಪ್ರತಿ ಪಾತ್ರಧಾರಿಗಳು ಸಹಜ ಅಭಿನಯದ ಮೂಲಕ ಮನಸೆಳೆಯುತ್ತಾರೆ. ಕುತೂಹಲಗಳನ್ನೇ ಹೊತ್ತು ಸಾಗುವ ಕಥಾನಕಗಳ ಮಧ್ಯೆ ಮಧ್ಯೆ ಮಕ್ಕಳ ಅಭಿನಯ ಇರುವ ಸನ್ನಿವೇಶಗಳು ಮುದ ನೀಡುತ್ತವೆ. ಬಾಲ್ಯದ ಮುಗ್ಧ ಬದುಕು ಅಪ್ಯಾಯಮಾನವಾಗಿ ಅನಾವರಣಗೊಂಡಿದೆ. ಹಲವಾರು ವರ್ಷಗಳ ನಂತರ ಭೇಟಿಯಾಗುವ ಅಜ್ಜಿಯರು, ಅವರ ನಡುವಿನ ಸ್ನೇಹ, ಪ್ರೀತಿಯ ಕ್ಷಣಗಳು, ತಿಪ್ಪಿ ಸಾಯುವಾಗಿನ ದೃಶ್ಯಗಳು ಮನಕಲಕುತ್ತವೆ.
ಬೆಟ್ಟದ ಗುಹೆಯಲ್ಲಿ ಸಿಕ್ಕ ಆಯುಧ, ಧರ್ಮಗಳ ನಡುವಿನ ತಿಕ್ಕಾಟದಲ್ಲಿ ಬಲಿಯಾಗುವ ಜೀವ, ಹೆಣ್ಣು ಗಂಡು ಕೂಡುವಿಕೆಯ ಕನಸಿನ ದೃಶ್ಯಗಳನ್ನು ನೆರಳು ಬೆಳಕಿನ ಪರದೆಯಲ್ಲಿ ಹಿಡಿದಿಟ್ಟಿದ್ದು ಸಿನಿಮಾದ ಇನ್ನೊಂದು ವೈಶಿಷ್ಟ್ಯ. ಕಥೆಗೆ ಕೊಂಡಿಯಾಗಿ ಪ್ರಮುಖವೆನಿಸುವ ಕೆಲವು ಸನ್ನಿವೇಶಗಳನ್ನು ಕ್ರಿಯಾಶೀಲವಾಗಿ ಮನಮುಟ್ಟುವಂತೆ ಹೇಳಲು ನೆರಳು ಬೆಳಕಿನ ಕಲಾ ಮಾಧ್ಯಮವನ್ನೂ ಪ್ರಭಾವಿಯಾಗಿ ದುಡಿಸಿಕೊಳ್ಳಬಹುದು ಎನ್ನುವುದಕ್ಕೆ ಈ ಚಿತ್ರ ಸಾಕ್ಷಿಯಾಗುತ್ತದೆ. ಜೊತೆಗೆ ದೃಶ್ಯಗಳಿಗೆ ಪುಷ್ಟಿ ನೀಡುವಂತೆ, ಸನ್ನಿವೇಶಗಳು ಇನ್ನಷ್ಟು ಪರಿಣಾಮಕಾರಿಯಾಗಿ ಮನಸಿಗೆ ಇಳಿಯುವಂತೆ ಮಾಡುವಲ್ಲಿ ಪ್ರವೀಣ್ ಗೋಡ್ಖಿಂಡಿ ಅವರ ಮಾಧುರ್ಯಪೂರ್ಣ ತಿಳಿ ಸಂಗೀತವೂ ಆಹ್ಲಾದ ನೀಡುತ್ತಿತ್ತು.
ಸಿನಿಮಾದಲ್ಲಿ ಬಳಸಲಾದ ಕ್ಯಾಮರಾ ಕಣ್ಣು ಸೂಕ್ಷ್ಮವಾಗಿರುವುದರಿಂದ ಕೆಲವು ತಪ್ಪುಗಳು ಎದ್ದು ಕಾಣುವಂತಿತ್ತು ಎನ್ನುವುದನ್ನೂ ಇಲ್ಲಿ ಗಮನಿಸಬೇಕು. ಅಶ್ವತ್ಥ ಕಟ್ಟೆಯ ಮೇಲೆ ಕುಳಿತು ಕಾಫಿ ಸೇವಿಸುವ ಅಜ್ಜಿ ಮೊಮ್ಮಗ ಅದನ್ನು ನೆಲಕ್ಕಿಟ್ಟಾಗ ಬರುವ ಶಬ್ದದಿಂದ ಲೋಟದಲ್ಲಿ ಕಾಫಿ ಇಲ್ಲ. ಅದು ಕೇವಲ ಅಭಿನಯದ ವಸ್ತು ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಸಿನಿಮಾದುದ್ದಕ್ಕೂ ಸ್ಥಳೀಯ ಸೊಗಡಿನ ಕುಂದಾಪುರ ಕನ್ನಡವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗಿದೆಯಆದರೂ ಮಧ್ಯೆ ಮಧ್ಯೆ ಕುಂದಾಪುರ ಸೊಗಡು ಬಿಟ್ಟು ಇಂದಿನ ಶೈಲಿಯ ಕನ್ನಡ ಅಲ್ಲಲ್ಲಿ ನುಗ್ಗುತಿದ್ದುದು ಹೈಲೈಟ್ ಆಗುತ್ತಿತ್ತು.

ಮಕ್ಕಳೂ ಈ ಸಿನಿಮಾವನ್ನು ಎಂಜಾಯ್ ಮಾಡಬಲ್ಲಷ್ಟು ಸರಳವಾಗಿ ಹಾಗೂ ಮನೋಜ್ಞವಾಗಿದೆ ನಿರೂಪಣೆಯ ಶೈಲಿ. ಅಜ್ಜಿ ಎಂದರೇ ಮಕ್ಕಳಿಗೆ ಕುತೂಹಲ. ಜೊತೆಗೆ ಆಕೆಯ ಕಥೆಗಳೇ ಅವರ ಪ್ರಪಂಚ. ಕಥೆ ಹೇಳುತ್ತಾ, ಎಲ್ಲರಿಗೂ ಪ್ರೀತಿ ಹಂಚುವ ಮೂಕಜ್ಜಿ ಮಕ್ಕಳಿಗೆ ವಿಸ್ಮಯದ ಮೂರ್ತಿಯಾಗಿ ಕಾಣುತ್ತಾಳೆ. ಜೊತೆಗೆ ಚಿತ್ರದ ದೃಶ್ಯಗಳು ಮಕ್ಕಳಲ್ಲಿ ಕುತೂಹಲವನ್ನು ಮೂಡಿಸುವುದರೊಂದಿಗೆ ವಿವಿಧ ವಿಷಯಗಳ ಬಗ್ಗೆ ಪ್ರಶ್ನೆಗಳನ್ನೂ ಹುಟ್ಟುಹಾಕುತ್ತವೆ. ಅಜ್ಜಿಯ ಮೂಲಕ ಕಾರಂತರ ಬರವಣಿಗೆ, ಅಂದಿನ ಸಾಮಾಜಿಕ ಸ್ಥಿತಿಗತಿಯ ಅರಿವನ್ನೂ ಮಕ್ಕಳಲ್ಲಿ ಮೂಡಿಸಲು ಈ ಸಿನಿಮಾ ಅದ್ಭುತ ಮಾಧ್ಯಮವಾಗಬಲ್ಲುದು.
ಕೆ.ಶಿವರಾಮ ಕಾರಂತರ ಮೂಕಜ್ಜಿಯ ಕನಸು ಕಾದಂಬರಿ ಓದಿದವರು ಸಿನಿಮಾದಲ್ಲಿ ಮೂಕಜ್ಜಿ ಹೇಗೆ ಕಾಣಿಸಿಕೊಂಡಿದ್ದಾಳೆ ಎನ್ನುವ ಕುತೂಹಲಕ್ಕೆ ಚಿತ್ರ ನೋಡಬಹುದು. ಓದದೇ ಇದ್ದವರು ಕಥೆಯನ್ನು ದೃಶ್ಯರೂಪದಲ್ಲೇ ಓದುವ ಅನುಭವ ಪಡೆಯುವ ಸಲುವಾಗಿ ನೋಡಲೇ ಬೇಕಾದ ಸಿನಿಮಾವಿದು. ಕಾದಂಬರಿಯ ವಿಷಯಗಳನ್ನು ಸಿನಿಮಾಕ್ಕಿಳಿಸುವ ಕಲೆಯನ್ನು ಸಿದ್ಧಿಸಿಕೊಂಡ ನಿರ್ದೇಶಕರಿಗೆ ಹ್ಯಾಟ್ಸ್ ಆಫ್ ಹೇಳಲೇಬೇಕು.

‍ಲೇಖಕರು avadhi

December 19, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: