ಸಿದ್ಧರಾಮಯ್ಯನವರಿಗಾಗಿ ಕರ್ನಾಟಕ ಬಹಳ ಕಾಲ ಕಾಯಬೇಕಾದೀತು.

ಪುರುಷೋತ್ತಮ ಬಿಳಿಮಲೆ 

ಕರ್ನಾಟಕದ ಸಮಾಜವಾದೀ ಚಳುವಳಿಯ ಕೊನೆಯ ನಾಯಕ : ಶ್ರೀ ಸಿದ್ದರಾಮಯ್ಯ

ಸ್ವಾತಂತ್ರ್ಯೋತ್ತರ ಭಾರತವು ಸಾಮಾಜಿಕ ನ್ಯಾಯಕ್ಕಾಗಿ ನಿರಂತರವಾಗಿ ಹೋರಾಡುತ್ತಲೇ ಬಂದಿದೆ. ಅನೇಕ ಅಡ್ಡಿ ಆತಂಕಗಳ ನಡುವೆ ನಿರೀಕ್ಷಿಸಿದ ಸಾಧನೆ ಆಗಿಲ್ಲವಾದರೂ ಅದರ ಪರವಾದ ಒಂದು ಧ್ವನಿಯನ್ನು ಅದು ಎಂದೂ ಬಿಟ್ಟುಕೊಟ್ಟಿಲ್ಲ. ಈ ವಿಷಯದಲ್ಲಿ ಕರ್ನಾಟಕವು ಭಾರತದ ಇತರ ರಾಜ್ಯಗಳಿಂದ ತುಂಬ ಮುಂದಿದೆ.

ವಚನ ಚಳುವಳಿಯು ಸಾಮಾಜಿಕ ನ್ಯಾಯದ ಕೂಗಿಗೆ ಭದ್ರವಾದ ತಳಹದಿಯನ್ನು 12ನೇ ಶತಮಾನದಷ್ಟು ಹಿಂದೆಯೇ  ಕರ್ನಾಟಕದಲ್ಲಿ ಹಾಕಿಕೊಟ್ಟಿತು. ಜಾತಿಯ ವಿಷಮತೆ, ಲಿಂಗಾಧರಿತ ಸಮಾಜದ ಅಮಾನುಷತೆ ಮತ್ತು ಧಾರ್ಮಿಕ ಡಾಂಭಿಕತೆಗಳ ವಿರುದ್ಧಅವರು ಎತ್ತಿದ ಪ್ರಶ್ನೆಗಳು ಈಗಲೂ ಪ್ರಸ್ತುತ.

ಬಳ್ಳಾರಿಯ ಪಾಳೇಗಾರರ ಹೋರಾಟ, ಸುಳ್ಯದ ಕಲ್ಯಾಣಪ್ಪನ ಹೋರಾಟ, ಸಂಗೊಳ್ಳಿ ರಾಯಣ್ಣ, ಹಲಗಲಿಯ ಬೇಡರು , ಅಂಕೋಲದ ಉಪ್ಪಿನ ಸತ್ಯಾಗ್ರಹ , ಕಾಗೋಡು ಸತ್ಯಾಗ್ರಹ, ಸಂಡೂರು ಚಳುವಳಿ, ನರಗುಂದ ರೈತ ಹೋರಾಟ, ಕರ್ನಾಟಕ ರಾಜ್ಯ ರೈತ ಸಂಘ ನಡೆಸಿದ ಚಳುವಳಿ –ಇತ್ಯಾದಿಗಳು ಕರ್ನಾಟಕದ ಸಾಮಾಜಿಕ ಬದ್ಧತೆಯನ್ನು ದೇಶಕ್ಕೆ ಹಾಗೂ ವಿಶ್ವಕ್ಕೆ ಪರಿಸರಿಸಿದ ಅನುಪಮ ಘಟನೆಗಳು.

ಮೈಸೂರು ಅರಸರ ಆಳ್ವಿಕೆಯ ಕಾಲದಲ್ಲಿ 1851ರಷ್ಟು ಹಿಂದೆ ಆರಂಭವಾದ ಹಿಂದುಳಿದ ವರ್ಗದವರ ಚಳುವಳಿ ಬೇರೆ ಬೇರೆ ಅವಸ್ಥಾಂತರಗಳನ್ನು ಹೊಂದುತ್ತಾ ಇವತ್ತಿನವರೆಗೆ ನಡೆದು ಬಂದಿದೆ. ದಲಿತರು ಅನೇಕ ವೈರುಧ್ಯಗಳ ನಡುವೆಯೂ  ನಿರಂತರವಾಗಿ ತಮ್ಮ ಹೋರಾಟಗಳನ್ನು ರೂಪಿಸುತ್ತಲೇ ಬಂದಿದ್ದಾರೆ.

1918ರಲ್ಲಿ ರಚಿತವಾದ ಸರ್ ಲೆಸ್ಲಿ ಮಿಲ್ಲರ್ ಕಮಿಟಿಯಿಂದ ಸುರು ಆದ (ನಾಗನ ಗೌಡ ಸಮಿತಿ, ಹಾವನೂರು ವರದಿ, ಚಿನ್ನಪ್ಪ ರೆಡ್ಡಿ ಸಮಿತಿ, ವೆಂಕಟಸ್ವಾಮಿ ಸಮಿತಿ, ನ್ಯಾಯಮೂರ್ತಿ ಸದಾಶಿವ ಆಯೋಗ, ನಾಗಮೋಹನ್ ದಾಸ್ ಸಮಿತಿ ಇತ್ಯಾದಿ) ಅನೇಕ ಸಮಿತಿಗಳು ಕಾಲಕಾಲಕ್ಕೆ ಸಮಾಜದ ಸರ್ವತೋಮುಖ ಅಭಿವೃದ್ಧಿಯನ್ನು ಗಮನದಲ್ಲಿರಿಸಿಕೊಂಡು  ತಮ್ಮ ವರದಿಗಳನ್ನು ನೀಡಿ ಸಾಮಾಜಿಕ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿವೆ.

19ನೇ ಶತಮಾನದ ಉತ್ತರಾರ್ಧದಲ್ಲಿ ಕಾಣಿಸಿಕೊಂಡು, 20ನೇ ಶತಮಾನದಾದ್ಯಂತ ವಿಸ್ತರಿಸಿಕೊಂಡ ಕರ್ನಾಟಕ ಏಕೀಕರಣ ಚಳುವಳಿಯು ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಬಹುದೊಡ್ಡ ಕಾಣಿಕೆ ನೀಡಿದೆ. ಕರಾವಳಿಯನ್ನು ಹೊರತು ಪಡಿಸಿದರೆ ಬಹುತೇಕ ಕರ್ನಾಟವನ್ನು ಒಂದುಗೂಡಿಸಿದ ಇನ್ನೊಂದು ಚಳುವಳಿಯೆಂದರೆ ಗೋಕಾಕ ಚಳುವಳಿ. ಸರೋಜಿನಿ ಮಹಿಷಿ ವರದಿಯಿಂದ ಬರಗೂರು ರಾಮಚಂದ್ರಪ್ಪ ವರದಿವರೆಗೆ ಅನೇಕ ವರದಿಗಳು ಕನ್ನಡವನ್ನು ಬಲಗೊಳಿಸಲು ಅನೇಕ ಶಿಫಾರಸುಗಳನ್ನು ಸರಕಾರಕ್ಕೆ ತಲುಪಿಸಿವೆ.

ಆದರೆ ಕಳೆದ ಕೆಲವು ವರ್ಷಗಳಿಂದ ಚಳುವಳಿಗಳ ದಿಕ್ಕು ದಿಶೆ ಬದಲಾಗಿದೆ. ಅಯೋಧ್ಯಾ ಚಳುವಳಿ, ಬಾಬಾ ಬುಡಾನ್ ಗಿರಿ ಚಳುವಳಿ, ಟಿಪ್ಪೂ ವಿರುದ್ಧ ಚಳುವಳಿ, ಮುಷ್ಟಿ ಅಕ್ಕಿ ಚಳುವಳಿಗಳಂಥ ಧರ್ಮ ಮತ್ತು ರಾಜಕೀಯಾಧರಿತ ಚಳುವಳಿಗಳು ಸುದೀರ್ಘ ಇತಿಹಾಸವಿರುವ ಸಾಮಾಜಿಕ ಚಳುವಳಿಗಳನ್ನು ಹಿಂದೆ ತಳ್ಳಿವೆ.

ಇಂದಿನ ಭಾರತದ ಪ್ರಜಾಪ್ರಭುತ್ವವು ಬ್ರಷ್ಟಾಚಾರಿಗಳನ್ನು ಸಂರಕ್ಷಿಸುವ, ಕೊಲೆಗಡುಕರನ್ನು ಅಧಿಕಾರಕ್ಕೆ ತರುವ, ಲೇಖಕ ಬರೆಹಗಾರರನ್ನು ಅವಮಾನಿಸುವ, ನೈಜ ಹೋರಾಟಗಾರರನ್ನು ತಿರಸ್ಕರಿಸಿ, ಹುಸಿ ಹೋರಾಟಗಾರರನ್ನು ಬೆಂಬಲಿಸುವ ಪ್ರಹಸನಕ್ಕೆ ಎಡೆಮಾಡಿಕೊಡುತ್ತಿದೆ.

ಅಂಬೇಡ್ಕರ್ ಅವರು ಇಂಥ ಬೆಳವಣಿಗೆಯನ್ನು 1930ರ ದಶಕದಲ್ಲಿಯೇ ಊಹಿಸಿದ್ದರು. ಇಂಥ ದಯನೀಯ ಸಂದರ್ಭದಲ್ಲಿ ಹೋರಾಟದಿಂದ ಪಡೆದ ರಾಜ್ಯಾಧಿಕಾರವನ್ನು ಜನರ ಕಲ್ಯಾಣಕ್ಕೆ ಬಳಸಿದ ಬಹುಶಃ ಕೊನೆಯ ಸಮಾಜವಾದಿ  ನಾಯಕ ಶ್ರೀ ಸಿದ್ಧರಾಮಯ್ಯನವರೆಂದು ತೋರುತ್ತದೆ.

ಅವರಿಗೆ ಸಮಾಜವಾದೀ ಚಳುವಳಿಯ ಹಿನ್ನೆಲೆಯಿತ್ತು. ಕನ್ನಡ ಭಾಷೆಯಂತ ಪ್ರಾದೇಶಿಕ ಭಾಷೆಗಳ ಬಗ್ಗೆ ಒಲವಿತ್ತು. ಹಿಂದುಳಿದ ವರ್ಗಗಳ ಬಗ್ಗೆ ಅನುಭವಾಧರಿತ ಮತ್ತು ಅಧ್ಯಯನಾಧರಿತ ತಿಳುವಳಿಕೆಯಿತ್ತು. ಕೃತಕ ನಯನಾಜೂಕಿನ ಅನೇಕರಿಗಿಂತ  ಅವರ ಒರಟುತನ ನನಗೆ ಹೆಚ್ಚು ಇಷ್ಟವಾಗಿದೆ.

ರಾಜಕೀಯ ಮತ್ತೆ ಮುಂದರಿಯುತ್ತದೆ. ಹೊಸ ನಾಯಕರು ಆವಿರ್ಭವಿಸುತ್ತಾರೆ. ಆದರೆ ಸಿದ್ಧರಾಮಯ್ಯರಂಥ ನಾಯಕ ನಮಗೆ ಸಿಗಲು ಕರ್ನಾಟಕ ಬಹಳ ಕಾಲ ಕಾಯಬೇಕಾದೀತು.

ಒಬ್ಬ ಕನ್ನಡಿಗನಾಗಿ ಅವರಿಗೆ ಕೃತಜ್ಞತೆಗಳನ್ನು ಅರ್ಪಿಸುವುದು ನನ್ನ ಕರ್ತವ್ಯ

‍ಲೇಖಕರು avadhi

May 29, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. C.P.Nagaraja

    ತುಂಬಾ ಒಳ್ಳೆಯ ಬರಹ. ಕೆಲವೇ ಮಾತುಗಳಲ್ಲಿ ಕರ್ನಾಟಕದ 800 ವರ್ಷಗಳ ಸಾಮಾಜಿಕ ಮತ್ತು ರಾಜಕೀಯ ಚರಿತ್ರೆಯನ್ನು ಕಣ್ಣ ಮುಂದೆ ತಂದು ನಿಲ್ಲಿಸಿತು. ಸಿ.ಪಿ.ನಾಗರಾಜ

    ಪ್ರತಿಕ್ರಿಯೆ
  2. ಶ್ರೀರಂಗ ಯಲಹಂಕ

    1. ಸಿದ್ಧರಾಮಯ್ಯನವರ ‘ಅಹಿಂದ’ ಜಾತಿಯ ವಿಷಮತೆಯನ್ನು ಕಡಿಮೆ ಮಾಡಿತೆ ಅಥವಾ ಹೆಚ್ಚಿಸಿತೆ?
    2.ಅವರನ್ನು ಕೇವಲ ‘ಅವರ ಪಂಗಡದ’ ನಾಯಕ ಎಂಬುದನ್ನು ಬಹುಸಂಖ್ಯಾತರಾದ ಗೌಡರು ಮತ್ತು ಲಿಂಗಾಯತರು ಭಾವಿಸಿದ್ದು ಸುಳ್ಳೆ?
    3.ಅವರನ್ನು ಅವರ ಪಕ್ಷದ ಹಿರಿಯರಾದ ಎಚ್.ವಿಶ್ವನಾಥ್, ಜನಾರ್ದನ ಪೂಜಾರಿಯವರು ಬಹಿರಂಗವಾಗಿ ಟೀಕಿಸುತ್ತಿದ್ದಾಗ ಸರ್ಕಾರದಲ್ಲಿದ್ದ ಅವರ ಸಹೋದ್ಯೋಗಿಗಳು ಏಕೆ ಸುಮ್ಮನಿದ್ದರು?
    4.ಅವರ ಸರ್ಕಾರದಲ್ಲಿ ‘ಮೂಲ ಕಾಂಗ್ರೇಸಿಗರಿಗಿಂತ’ ವಲಸೆ ಕಾಂಗ್ರೇಸಿಗರಿಗೇ ಹೆಚ್ಚಿನ ಮನ್ನಣೆ ದೊರಕಿದ್ದು ಸುಳ್ಳೆ?
    5.ಮೇಲಿನ ಅಷ್ಟೂ ಕಾರಣಗಳೂ ಸುಳ್ಳು ಎನ್ನುವುದಾದರೆ ಅವರಿಗೆ ಅಧಿಕಾರದಲ್ಲಿದ್ದೂ ಸಹ ಸರಳ ಬಹುಮತವೂ ಸಿಗದೆಯಿರಲು ಕಾರಣವೇನು?
    (Cont’d)

    ಪ್ರತಿಕ್ರಿಯೆ
  3. ಶ್ರೀರಂಗ ಯಲಹಂಕ

    * ರಾಜ್ಯದಲ್ಲಿ ಅಧಿಕಾರ ವಿರೋಧಿ ಅಲೆ ಇದ್ದದ್ದು ಸುಳ್ಳೆ?
    ** ಬಹುತ್ವದ ಪ್ರತಿಪಾದಕರಾದ ತಾವು ಸಿದ್ಧರಾಮಯ್ಯನವರು ಕೆಲವೊಂದು ವಿಷಯಗಳಲ್ಲಿ ಮುಂದಿನ ಚುನಾವಣೆಯಲ್ಲಿ ವೋಟ್ ತಂದುಕೊಡಬಹುದು ಎಂದು ಭಾವಿಸಿ ಆ ಬಹುತ್ವದ ಅಭಿಪ್ರಾಯವನ್ನು ಕಡೆಗಣಿಸಿದ್ದು ಸುಳ್ಳೇ?
    *** ಒಬ್ಬ ಮನುಷ್ಯನ ಸ್ವಂತ ವ್ಯಕ್ತಿತ್ವ, ನಡತೆ ಹೇಗೇ ಇರಲಿ ಆತ ಸಾರ್ವಜನಿಕ ಜೀವನಕ್ಕೆ , ಅದರಲ್ಲೂ ಜನರ ನಡುವೆಯೇ ಇರಬೇಕಾದ ರಾಜಕಾರಣಕ್ಕೆ ಬಂದ ಮೇಲೆ ಅದನ್ನು ಪ್ರಯತ್ನಪೂರ್ವಕವಾಗಿ ಬದಲಾಯಿಸಿಕೊಳ್ಳಲೇಬೇಕು.ಸಿದ್ಧರಾಮಯ್ಯನವರು ಅದನ್ನು ಮಾಡದೇಯಿದ್ದುದಕ್ಕೆ ಚುನಾವಣೆಯ ಫಲಿತಾಂಶವೇ ಸಾಕ್ಷಿ ಅಲ್ಲವೆ?

    ಪ್ರತಿಕ್ರಿಯೆ
  4. Siddu yalimeli

    Dhanyavadagalu sir , tumba arthapurnavada baraha . Siddaramayya avranta CM barodike tumba dinagalu beku .

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: