ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಿಟ್ಟು ಬಂತ ನಿನಗೆ? ಬರಲಿಬಿಡು..

ಅಪೀಲು

ಅವಿಜ್ಞಾನಿ / ಮಂಗಳೂರು

ನಿನ್ನ ಏಕಾಂತವನ್ನು
ನೀ ಸಂಧಿಸಿದಾಗ
ಹೇಳಲೇನಾದರೂ ಉಳಿಸಿಕೋ
ದೂರದ ಬೆಟ್ಟದಲ್ಲಿ ಘಮ
ಬಿಟ್ಟು ಹೋಗುವ ಹೂವು
ಸಾಹುಕಾರರ ಷಹರದ
ತೊಟ್ಟಿಯಲ್ಲಿ ಎಷ್ಟೋ ಹಸಿವ ಕೊಂದು
ಸಾಯುವ ಬ್ರೆಡ್ಡ್ ತುಂಡು
ಇನ್ನೂ ಕನ್ಯತ್ವ ಕಳೆದುಕೊಳ್ಳದೇ
ಸವೆಸಿದ ಯುವತಿಯ ಯೌವನ
ನಿನ್ನ ಏಕಾಂತದ
ಒಂಟಿತನದಲ್ಲಿ ಮಾತುಗಳಾಗಿಬಿಡಲಿ


ನಿನ್ನ ಸರಕಾರಗಳು
ಕೆಂಪು ಲೈಟಿನ ಗೂಟದ
ಕಾರುಗಳನ್ನಷ್ಟೇ ಓಡಿಸುತ್ತದೆ
ಸಿಟ್ಟು ಬಂತ ನಿನಗೆ?
ಬರಲಿಬಿಡು ನಿನ್ನಜ್ಜ
ಮುತ್ತಜ್ಜರ ಕಾಲದ ಭೂಮಿಯನ್ನೆಲ್ಲ ಬಗೆದು
ನಿನ್ನ ಮೊಮ್ಮಗ ಮರಿಮಕ್ಕಳಿಗೆ
ಏನೂ ಉಳಿಸಿಕೊಳ್ಳದ್ದರ ಬಗೆಗೆ
ನೀನೀಗ ಪ್ರಾಯಶ್ಚಿತ ಪಡು


ನಾನೂ ಈ ದೇಶದ ಪ್ರಜೆ
ಯಾವ ನಾಗರೀಕತೆಯ
ಇತಿಹಾಸಗಳನ್ನೂ ಓದದ
ಸಾಧಾರಣ ವ್ಯಕ್ತಿ
ಕೂಲಿ ಮಾಡುತ್ತೇನೆ
ನಿನ್ನಂತೆ ಅದ್ಯಾವ ಧರ್ಮ
ದೇವರ ನೆಲೆಗೊಳ್ಳಿಸುವ
ಹುಂಬ ವ್ಯರ್ಥ
ಹುಚ್ಚುತನದ ಸೋಗಲಾಡಿತನಕ್ಕಲ್ಲ
ಮಗಳಿಗೆ ಒಂದು ಪೆನ್ಸಿಲ್
ತೆಗೆಯುವಾಗಲೂ ಜಿಎಸ್ಟಿ
ಕಟ್ಟುವ ಉಮೇದಿಗೆ
ಕೋಪ ಬರುತ್ತದೆಯಾ?
ಬರಲಿಬಿಡು ನಿನ್ನ
ಏಕಾಂತವನ್ನು ಸಮೀಪಿಸುವಾಗ
ಇದೊಂದು ಹಪಹಪಿಯಿರಲಿ


ನನಗೂ ದುಃಖವಾಗುತ್ತದೆ
ಈ ರಾಜಕೀಯದಲ್ಲಿ
ಧರ್ಮದ ಅಫೀಮಿನಲ್ಲಿ
ನಿನ್ನ ಮತಿಗೆಟ್ಟ ದೇಶಪ್ರೇಮದ
ನಾಟಕದಲ್ಲಿ ಅರಳದೇ
ಇರುವ ಮೊಗ್ಗುಗಳು
ಬಾಡುವಾಗ
ನಿನ್ನ ಸರಕಾರಗಳು
ಕಲ್ಲುಗಳನ್ನಷ್ಟೇ ಎತ್ತರವಾಗಿಸಿ
ಹೃದಯಗಳು ಕಲ್ಲಾಗುವಾಗ
ಕೋಪಿಸಿಕೊಂಡಿಯ ನೀನು?
ಇರಲಿಬಿಡು
ನಿನ್ನತನವನ್ನು ನೀ ಕಂಡಾಗ
ಆದರೆ….
ನನ್ನ ಸಾವಿನ ಕುರಿತು ತರ್ಕಿಸು..!

‍ಲೇಖಕರು avadhi

4 July, 2019

4 Comments

  1. ಚಂದ್ರಪ್ರಭ ಕಠಾರಿ

    ಕವನ ಅರ್ಥಗರ್ಭಿತವಾಗಿದೆ. ಓದಿದಷ್ಟು ಚಿಂತನೆಗೆ ಹಚ್ಚುತ್ತದೆ.

    • ಅವಿಜ್ಞಾನಿ

      ಧನ್ಯವಾದ ಸರ್

  2. Sridhar

    Can this be compared to Egyptian mummies

  3. Shivanand Kadalagi

    ಅರ್ಥಪೂರ್ಣವಾದ ಸಾಲುಗಳು..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading