ಆರ್ಟಿಕಲ್ 15: ಅದೊಂದು ಸಿನಿಮಾ ಅಲ್ಲ, ‘ವಿಚಾರಧಾರೆ’

“ಮೇ ಔರ್ ತುಮ್ ಇನ್ಕೂ ದಿಖಾಯಿ ನಹೀ ದೇತಿಯೇ
ಕಭೀ ಹಮ್ ಹರಿಜನ್ ವೋಜಾತೆಯೇ
ಕಭಿ ಬಹುಜನ್ ವೋಜಾತೆಯೇ
ಬಸ್ ಜನ್ ನಹೀ ಬನ್‌ಪಾರೆಯೇ
ಜಬ್ ಜನ್‌ಗಣಮನ್ ಮೇ ಹಮಾರಿಭಿ ಗಿನ್ತಿ ವೋಜಾಯೇ..”

(“ನಾನು -ನೀವು ‘ಅವರಿಗೆ’ ಕಾಣಿಸೋದೇ ಇಲ್ಲ
ಕೆಲವೊಮ್ಮೆ ನಾವು ಹರಿಜನ ಆಗ್ತೀವಿ
ಕೆಲವೊಮ್ಮೆ ಬಹುಜನರಾಗ್ತೇವೆ
ಆದರೆ ಜನರಾಗಿ ಕಾಣುತ್ತಿಲ್ಲ. ಹಾಗೊಮ್ಮೆ ಆದಾಗ ಜನಮನಗಣದಲ್ಲಿ ನಮ್ಮನ್ನು ಲೆಕ್ಕ ಹಾಕಲಾಗುವುದು.”)

ಆರ್ಟಿಕಲ್ 15 ( ರಾಜ್ಯದ ನಾಗರೀಕನನ್ನು ಲಿಂಗ, ಜಾತಿ, ಧರ್ಮ, ವಂಶ, ಹುಟ್ಟಿದ ಸ್ಥಳದ ಆಧಾರದ ಮೇಲೆ ಬೇಧಭಾವವೆಸಗುವಂತಿಲ್ಲ.) ಸಿನಿಮಾದ ಈ ಒಂದು ಬ್ಯಾಕ್ ಡ್ರಾಪ್ ಡೈಲಾಗ್ ಈ ದೇಶದ ಚಾರಿತ್ರಿಕವಷ್ಟೇ ಅಲ್ಲದೆ ವರ್ತಮಾನದ ಸಾಮಾಜಿಕ, ರಾಜಕೀಯವನ್ನೂ ಸ್ಪಷ್ಟವಾಗಿ ಕಟ್ಟಿಕೊಡುತ್ತದೆ. ಒಂದು ಸಿನಿಮಾವನ್ನು ಸಿನಿಮಾದಂತೆಯೇ ನೋಡಲಾಗದಷ್ಟು ವಾಸ್ತವವಾಗಿ ನಮ್ಮನ್ನು ಆವರಿಸಿಕೊಳ್ಳುವ ಆರ್ಟಿಕಲ್ 15 ಸಿನಿಮಾ ಅಸ್ಪೃಶ್ಯ ಭಾರತದ ನಿಚ್ಚಳ ಕನ್ನಡಿ.

ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದ ಸಂವಿಧಾನ ಸೂತ್ರ ದ ಸ್ವತಂತ್ರ ಭಾರತದಲ್ಲಿ ೧೯೬೬ರ ತಮಿಳುನಾಡಿನ ಕಿಲ್ವೇನ್ಮಣಿಯಿಂದ ಆರಂಭಗೊಂಡು ೨೦೧೪ರ ಉತ್ತರ ಪ್ರದೇಶದ ಬುದ್ವಾನ್ ಜಿಲ್ಲೆಯ ಇಬ್ಬರೂ ಅಪ್ರಾಪ್ತ ದಲಿತ ಹೆಣ್ಣುಮಕ್ಕಳ ಗ್ಯಾಂಗ್ ರೇಪ್ ಮತ್ತು ಹತ್ಯೆಯವರೆಗೂ ನಡೆದ ಅಮಾನುಷ ಅತ್ಯಾಚಾರ, ಹತ್ಯೆಯಂತಹ ಜಾತಿ ಆಧಾರಿತ ಕ್ರೌರ್ಯ ಕೊನೆಗೊಂಡಿಲ್ಲ.

ಈ ದೇಶದ ಬಹುಸಂಖ್ಯಾತ ಜನಸಮುದಾಯ ತನ್ನದೆ ನೆಲದಲ್ಲಿ ಪರಕೀಯರಂತೆ ಗುಲಾಮರಾಗಿ, ಬಲಿಗಳಾಗಿ , ಜೀವವಿದ್ದೂ ನಿರ್ಜವ ಜಂತುಗಳಂತೆ ಬದುಕಬೇಕಾಗಿರುವುದನ್ನು ಎಂಬುದನ್ನು ಆರ್ಟಿಕಲ್ 15 ನ ಈ ಡೈಲಾಗ್‌ಗಳು, ಸಿನಿಮಾದಲ್ಲಿ ತೋರುವ ದೃಶ್ಯಗಳು ಹೇಳುತ್ತವೆ. ಸಂವಿಧಾನ ನಿರೂಪಿತ ಆರ್ಟಿಕಲ್ 15 ನ ಆಶಯಕ್ಕೆ ವಿರುದ್ದವಾಗಿ ಜಾತಿ, ಧರ್ಮ, ಲಿಂಗ, ಜನ್ಮಸ್ಥಳದ ಆಧಾರದ ತರತಮದಿಂದ ಅಗ್ನಿಕುಂಡದಲ್ಲಿ ಬೇಯುತ್ತಾ ಬಹುಜನಸಮುದಾಯವೊಂದು ಈ ದೇಶದಲ್ಲಿ ಬದುಕಬೇಕಾಗಿರುವುದು ಮತ್ತು ಹಾಗೆ ನಡೆಸಿಕೊಳ್ಳುತ್ತಿರುವ ಹುಸಿ ಪ್ರಜಾಪ್ರಭುತ್ವವೊಂದು ದೇಶದಲ್ಲಿ ಇನ್ನಷ್ಟು ಬಲಗೊಳ್ಳುತ್ತಿರುವುದು ದುಗುಡದ ಸಂಗತಿ.

ಉತ್ತರ ಪ್ರದೇಶದ ಬುದ್ವಾನ್ ಗ್ರಾಮದಲ್ಲಿ ೨೦೧೪ ರಲ್ಲಿ ನಡೆದ ಇಬ್ಬರು ಅಪ್ರಾಪ್ತ ದಲಿತ ಹೆಣ್ಣುಮಕ್ಕಳ ಮೇಲೆ ಬಲಾಢ್ಯ ಜಾತಿಗಳ ವ್ಯಕ್ತಿಗಳು ಗ್ಯಾಂಗ್ ರೇಪ್ ನಡೆಸಿ ಮರಕ್ಕೆ ನೇಣು ಬಿಗಿದು ಇದೊಂದು ಮರ್ಯಾದಾ ಹತ್ಯೆ ಎಂಬ ಲೇಬಲ್ ಹಚ್ಚಿ ಮುಚ್ಚಿಹಾಕುವ ವಿಫಲ ಪ್ರಯತ್ನವು ನಡೆಯುತ್ತದೆ. ಈ ಕಥೆಯನ್ನು ಇಟ್ಟುಕೊಂಡು ನಿರ್ದೇಶಕ ಅನುಭವ್ ಸಿನ್ಹ ಭಾರತದ ಜಾತಿ ಕ್ರೌರ್ಯ ಎಂಬ ರಣ ಸೋಂಕಿನ ರೋಗವನ್ನು ಪರದೆ ಮೇಲೆ ಬಿಚ್ಚಿಟ್ಟಿದ್ದಾರೆ.

ಸತ್ಯವನ್ನು ಹೇಳಿದರೆ ದೇಶದ್ರೋಹಿಯಾಗಿ ಜೈಲು ಸೇರಬೇಕಾದ ಅಥವಾ ಶಂಕಿತ ಭಯೋತ್ಪಾದಕನೋ ಇಲ್ಲವೇ ನಕ್ಸಲೈಟ್ ಆಗಿಯೋ ಗುಂಡಿಗೆ ಬಲಿಯಾಗಬೇಕಾದ ಇವತ್ತಿನ ಸನ್ನಿವೇಶದಲ್ಲಿ ಅನುಭವ ಸಿನ್ಹ ಧೈರ್ಯದಿಂದ ಅಸ್ಪೃಶ್ಯ ಭಾರತದ ರಣರೋಗಕ್ಕೆ ಕನ್ನಡಿ ಹಿಡಿದ್ದಿದ್ದಾರೆ. ಈ ಕಾರಣಕ್ಕಾಗಿ ಸಿನ್ಹ ಅವರನ್ನು ಮತ್ತು ಚಿತ್ರದ ನಾಯಕನಾಗಿ ನಟಿಸಿರುವ ಆಯುಷ್ಮಾನ್ ಕುರಾನ ಅವರ ಬದ್ದತೆ, ಧೈರ್ಯವನ್ನು ಮೆಚ್ಚಲೇ ಬೇಕು.

ಪರಂಪರಾಗತವಾಗಿ ನಡೆದುಕೊಂಡು ಬಂದ ಜಾತಿ ವ್ಯವಸ್ಥೆ ಈ ದೇಶದಲ್ಲಿ ನಾಶವಾಗಿಲ್ಲ. ಅದು ರಾಜಕೀಯ ಕಾರಣಕ್ಕಾಗಿ ದಲಿತರ ಮನೆಯಲ್ಲಿ ಸ್ವಾಮೀಜಿಯೊಬ್ಬ, ಮೇಲ್ಜಾತಿ ರಾಜಕಾರಣಿಯೊಬ್ಬ ಸಹಭೋಜನ ಮಾಡುವ ಮೂಲಕ ಹುಸಿತನದ ಒಳಗೊಳ್ಳುವಿಕೆ ನಡೆದರೂ ವಾಸ್ತವವಾಗಿ ಜಾತಿ ಶ್ರೇಷ್ಠತೆಯ ರೋಗ ಒಳಗೊಳಗೆ ನಂಜು ಸ್ರವಿಸುತ್ತಲೆ ಇದೆ.

ಎಸ್ಪಿ ಕಚೇರಿಯ ಮುಂದಿನ ಕಟ್ಟಿಕೊಂಡ ಮಲಗುಂಡಿಯನ್ನು ಸ್ವಚ್ಛಗೊಳಿಸಲು ಜಾಡಮಾಲಿಯೊಬ್ಬ ಮುಳುಗಿ ಮೇಲೇಳುವ ದೃಶ್ಯವಂತೂ ಕನಿಷ್ಠ ಗುಲಗಂಜಿಯಷ್ಟು ಸಂವೇದನೆಯುಳ್ಳ ಮನುಷ್ಯರನ್ನು ನಡುಗಿಸಿಬಿಡುತ್ತದೆ. ಉಸಿರು ಬಿಗಿಹಿಡಿಸುತ್ತದೆ. ಸಿನಿಮಾದ ಕೊನೆ ಭಾಗದಲ್ಲಿ ದಲಿತ ಹೋರಾಟಗಾರ ನಿಶಾದ್ ತನ್ನ ಸಹವರ್ತಿಯ ಸಂಚಿನಿಂದಲೇ ಪ್ರಭುತ್ವದ ಎನ್‌ಕೌಂಟರ್ ಗೆ ತುತ್ತಾಗಿ ಆತನ ಪ್ರೇಯಸಿ ಗೌರಾ ಪೊಲೀಸ್ ಅಧಿಕಾರಿಯೊಂದಿಗೆ ಅತ್ತುಬಿಡುವ ಧಾರುಣ ದುಃಖದ ದೃಶ್ಯವೊಂದು ನೋಡುಗರ ಕಣ್ಣುಗಳನ್ನು ತೇವಗೊಳಿಸದೆ ಇರಲಾರದು. ದಲಿತೋದ್ಧಾರದ ನೆವದಲ್ಲಿ ನಡೆಯುವ ದಲಿತ ರಾಜಕಾರಣ ಮತ್ತು ಬಲಿತ ರಾಜಕಾರಣದ ಮರಾಮೋಸದ ಒಳ ಒಪ್ಪಂದಗಳನ್ನು ಪರದೆ ಮೇಲೆ ಬಿಚ್ಚಿಡಲಾಗಿದೆ.

ಕಳೆದ ಐದು ವರ್ಷಗಳ ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಘೋಷಣೆಯಲ್ಲಿ ಶೃಂಗಾರಗೊಂಡ ಭಾರತದ ಅಸಲಿ ತನವನ್ನು ಆರ್ಟಿಕಲ್ 15 ನಲ್ಲಿ ನೀವು ನೋಡಬಹುದು.

ಈ ಸಿನಿಮಾ ಬಿಡುಗಡೆಗೆ ಮುಂಚೆಯೇ ದೊಡ್ಡ ವಿವಾದಕ್ಕೆ ಗುರಿ ಮಾಡುವ ಕೆಲಸ ನಡೆದು ಹೋಯಿತು. ಬ್ರಾಹ್ಮಣ, ದಲಿತ, ಓಬಿಸಿ ಜಾತಿಗಳ ನಡುವೆ ದೊಡ್ಡ ಕಂದಕ ತೋಡುವ ಕೆಲಸ ಸಿನಿಮಾದಲ್ಲಿ ನಡೆದಿದೆ ಎಂದು ಬೊಬ್ಬೆ ಹಾಕಲಾಯಿತು. ಸಿನಿಮಾ ರಿಲೀಸ್ ಆದ ಮೇಲೂ ಇದು ನಿಂತಿಲ್ಲ. ಬ್ರಾಹ್ಮಣರನ್ನು ಅವಮಾನಕ್ಕೀಡು ಮಾಡಲಾಗಿದೆ ಎಂದು ಕರ್ಣಿ ಸೇನಾದ ಬೆದರಿಕೆ ನಿಂತಿಲ್ಲ.

ಅಸಲಿಗೆ ಅಂತದ್ದೇನಿದೆ ಈ ಚಿತ್ರದಲ್ಲಿ ಎಂದು ನೋಡ ಹೊರಟಾಗ ಅದೊಂದು ಸಿನಿಮಾವೇ ಅಲ್ಲ.! ಸ್ವತಂತ್ರ ಭಾರತದೊಳಗಿನ ಅಸಲಿ ಅಸ್ಪೃಶ್ಯ ಭಾರತದ ನೇರದರ್ಶನ. ಗಾಂಧಿಗೆ ಮುಖಾಮುಖಿಯಾದ ಬಾಬಾ ಸಾಹೇಬ್ ಅಂಬೇಡ್ಕರ್ ಅವರು “ಈ ದೇಶದ ಬಾಹ್ಯ ಸ್ವಾತಂತ್ರ್ಯಕ್ಕಿಂತ ಈ ದೇಶದ ಆಂತರಿಕ ಸ್ವಾತಂತ್ರ್ಯ ನನಗೆ ಬಹಳ ಮುಖ್ಯವಾಗುತ್ತದೆ ಬಾಪೂ..” ಎಂದು ಸ್ವಾತಂತ್ರ್ಯ ಸಂಗ್ರಾಮದ ಕಾಲಘಟ್ಟದಲ್ಲಿ ಹೇಳುತ್ತಾರೆ. ನಿಜ, ಈ ದೇಶಕ್ಕೆ ಬಾಹ್ಯ ಸ್ವಾತಂತ್ರ್ಯವೇನೋ ಸಿಕ್ಕಿದೆ. ಆದರೆ ಆಂತರಿಕ ಸ್ವಾತಂತ್ರ್ಯ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ. ಈ ದೇಶಕ್ಕೊಂದು ಗ್ರಂಥವಿದೆ. ಅದನ್ನು ಸಂವಿಧಾನ ಎಂದು ಕರೆಯಲಾಗುತ್ತದೆ. ಆದರೆ ಈ ದೇಶದ ಜನ ಅದನ್ನು ನಡೆಯಲು ಬಿಡುತ್ತಿಲ್ಲ.

ಇದೇ ಬಾಲಿವುಡ್ ನಲ್ಲಿ ೨೦೧೧ ರಲ್ಲಿ ‘ಆರಕ್ಷಣ್’(ಮೀಸಲಾತಿ) , ನಂತರ ‘ಆಕ್ರೋಶ್’ ನಂತಹ ಕ್ಯಾಸ್ಟ್ ಇಶ್ಯೂ ಆಧಾರಿತ ಸಿನಿಮಾಗಳು ಬಂದಿದ್ದವು. ಆಗಲೂ ವಿರೋಧ ವ್ಯಕ್ತವಾಗಿತ್ತು. ಅಷ್ಟಕ್ಕೂ ಇಂತಹ ಕಥೆಗಳ ಆಧಾರಿತ ಸಿನಿಮಾ, ನಾಟಕ ಮತ್ತು ಪುಸ್ತಕಗಳನ್ನು ವಿರೋಧಿಸುವವರು ಯಾರು ಎಂದು ನೀವು ನೋಡಿದಾಗ ಈ ದೇಶದ ಪರಂಪರಾಗತವಾಗಿ ಹತ್ಯೆ, ಅತ್ಯಾಚಾರ, ಜಾತಿಯ ಕ್ರೌರ್ಯಗಳಿಗೆ ಯಾರು ಹೊಣೆಗಾರರು ಎಂಬುದು ಗೊತ್ತಾಗಿಬಿಡುತ್ತದೆ. ಅಧಿಕಾರ ದಂಡ ಹಿಡಿದವರು ಯಾರಾದರೂ ಈ ಚಿತ್ರದಲ್ಲಿ ಪಾತ್ರವಾಗಿ ಕಂಡಿದ್ದರೆ ಅದು ಅವರಲ್ಲಿನ ದೋಷವಷ್ಟೆ. ಈ ದೇಶದ ನಾಯಕರು ನಾಚಿ ತಲೆತಗ್ಗಿಸಬೇಕು.

ಆರ್ಟಿಕಲ್ 15 ಒಂದು ಸಿನಿಮಾ ಅಲ್ಲ ಅದೊಂದು ‘ವಿಚಾರಧಾರೆ’. ಇದು ಹಳ್ಳಿ, ಪಟ್ಟಣ, ಯಾವುದೋ ಒಂದು ನಗರದ ಸಮಸ್ಯೆಯಲ್ಲ ಇಡೀ ದೇಶದ ಸಮಸ್ಯೆ. ಈ ಸಿನಿಮಾದ ಸಂದೇಶ ಇವತ್ತಲ್ಲದಿದ್ದರೆ ಇನ್ಯಾವುತ್ತೂ ಇರಲಾರದು. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ಬರೆದು ೭೦ ವರ್ಷಕ್ಕೂ ಹೆಚ್ಚು ಕಾಲ ಕಳೆದಿದೆ ಆದರೂ ನಾವು ಅದನ್ನು ಗೌರವಿಸಲಿಲ್ಲ. ಈಗಲೂ ಕಾಲಮಿಂಚಿಲ್ಲ.

“ಇನ್ಸಾಫ್ ಕೀ ಬೀಕ್ ಮತ್ ಮಾಂಗೋ
ಬಹುತ್ ಮಾಂಗ್ ಚುಕಿ ವೋ..”
( ನ್ಯಾಯದ ಭಿಕ್ಷೆಯನ್ನು ಕೇಳಬೇಡಿ
ಈಗಾಗಲೆ ಬಹಳ ಕೇಳಿದ್ದಾಗಿದೆ)

‍ಲೇಖಕರು avadhi

July 4, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: