ಸಾ ದಯಾ ಓದಿದ ‘ತಾಯ ಮುಖ ಕಾಣದಲ್ಲಾ’

ಸಾ ದಯಾ

“ಚಂದ್ರ ಚೂಡನ
ವ್ಯೋಮಕೇಶನ
ವಿಶ್ಶವನೆ ವ್ಯಾಪಿಸುತ ತುಂಬಿರುವ ಜಡೆ
ಜಡೆಯಾಚೆ ತಿರುಗಿಸಿದ ತಾಯ ಮುಖ ಮಾತ್ರ ಇಂದಿಗೂ
ಕಾಣದಲ್ಲ!”
ಜಿ. ಎಸ್. ಶಿವರುದ್ರಪ್ಪ ಅವರ ‘ಚೆಲುವು ಒಲವು’ ಸಂಕಲನದ ‘ಜಡೆ’ ಕವಿತೆಯ ಸಾಲುಗಳಿವು.

“ಸಂಜೆಯಲಿ ಹಗಲು ಕೆದರುವ ಕತ್ತಲೆಯ
ಕಾಳ ಜಡೆ
ಬೆಳಗಿನಲಿ ಇರುಳು ಬಿಚ್ಚುವ ಬೆಳ್ಳನೆಯ
ಬೆಳಕು ಜಡೆ”
ಜಡೆ, ಇಲ್ಲಿ ಹೆಣ್ಣಿನ ಪ್ರತೀಕವಾಗಿ, ಪ್ರತಿಮೆಯಾಗಿ ನಮ್ಮನ್ನು ಆವರಿಸುವ ಪರಿ ಅನನ್ಯವಾದುದು.

ಇಂತಹ ಹೆಣ್ಣನ್ನು ಶಕ್ತಿಯಾಗಿಸಿ, ದೇವಿಯಾಗಿಸಿ ಸಂಪ್ರದಾಯದ ಹೆಸರಿನಲ್ಲಿ ಪಿತೃ ಪ್ರಧಾನ ವ್ಯವಸ್ಥೆ ತಲೆತಲಾಂತರಗಳಿಂದ ಬಂಧನದಲ್ಲಿರಿಸಿದೆ. ಆ ಕದಂಬ ಬಾಹುಗಳಿಂದ ಉಸಿರು ಬಿಡಲು, ಬಿಡಿಸಿಕೊಳ್ಳಲು ಪ್ರಯತ್ನಿಸಿದ ಫಲಸ್ವರೂಪವೆ ಮುಂದೆ ಸಾಹಿತ್ಯದಲ್ಲಿ ‘ಸ್ತ್ರೀ ಸಂವೇದನೆ’ ಕವಲೊಡೆದು ಬಂತು. ಸ್ತ್ರೀ ಸಂವೇದನೆ ಅಥವಾ ಮಹಿಳಾ ಸಂವೇದನೆಯ ಅಗತ್ಯತೆಯ ಬಗ್ಗೆ ಬಹಳಷ್ಟು ಹೇಳಿಕೆಗಳು ಬಂದಿವೆ; ಚರ್ಚೆಗಳು ನಡೆದಿವೆ. ಹೌದು, ಹೆಣ್ಣು ದೈಹಿಕವಾಗಿಯೂ, ಮಾನಸಿಕವಾಗಿಯೂ ಪುರುಷನಿಗಿಂತ ಬೇರೆಯಾದವಳು. ಅದಕ್ಕೆ ತಕ್ಕಂತೆ ಆಕೆಯ ಸಂವೇದನೆಯೂ ಆತನಿಗಿಂತ ಭಿನ್ನ ರೀತಿಯದು. ಇಂತಹ ಜಾಡನ್ನು ಹಿಡಿದು ಕನ್ನಡ ಸಾಹಿತ್ಯದಲ್ಲೂ ಸ್ತ್ರೀವಾದಿ ವಿಮರ್ಶೆ ಬೆಳೆದು ಬಂದಿರುವುದನ್ನು ನಾವು ಕಾಣಬಹುದು. ಸ್ತ್ರೀ ವಾದಿ ಅಥವಾ ಮಹಿಳಾ ವಾದಿ ವಿಮರ್ಶೆ ಎಂದಾಕ್ಷಣ ಮಹಿಳೆ ಸ್ವಚ್ಛಂದದ ಸ್ವಾತಂತ್ರದ ಬಗ್ಗೆ ಅಥವಾ ಪುರುಷ ಸಮಾಜವನ್ನೇ ಖಂಡಿಸುವುದು ಎಂದರ್ಥವಲ್ಲ. ‘ಬೆವರಿನಲಿ ಧೂಳಿನಲಿ ನೆನೆದಂಟಿಕೊಂಡಿರುವ ಗಂಟುಗಟ್ಟಿದ ಜಡೆ’ಯನ್ನು, ಅದರ ಹಿಂದಿರುವ ‘ಮಾತೃ ಮಮತಾ ವೃಕ್ಷ’ವನ್ನು ಕಾಣುವುದೇ ನಿಜವಾದ ಸ್ತ್ರೀನಿಷ್ಠ ವಿಮರ್ಶೆ. ಆದುದರಿಂದಲೇ ತಮ್ಮ ವಿಮರ್ಶಾ ಕೃತಿಗೆ ಡಾ. ಗಿರಿಜಾ ಶಾಸ್ತ್ರಿ ಅವರು “ತಾಯ ಮುಖ ಕಾಣದಲ್ಲಾ” ಎಂದು ಹೆಸರಿಟ್ಟಿರಬಹುದು.

ತಮ್ಮ ಮಹಾಪ್ರಬಂಧದ ಕೃತಿರೂಪ ‘ಕಥಾ ಮಾನಸಿ’ಯ ನಂತರ ಬಂದ ಪ್ರಥಮ ವಿಮರ್ಶಾ ಕೃತಿ ಇದಾಗಿದೆ.

ಸುಮಾರು ಇನ್ನೂರ ಎಂಬತ್ತೈದು ಪುಟಗಳಲ್ಲಿ ಹರಡಿಕೊಂಡಿರುವ ಇಲ್ಲಿನ 37 ಬರಹಗಳನ್ನು ಲೇಖಕಿ ಐದು ಭಾಗಗಳಾಗಿ ವಿಂಗಡಿಸಿದ್ದಾರೆ. ‘ತಾಯ ಮುಖ ಕಾಣದಲ್ಲಾ’ ಎಂದು ಪ್ರಾರಂಭವಾಗುವ ‘ಸ್ತ್ರೀ ಆಲೋಕ’ ದಲ್ಲಿ ‘ಪ್ರೀತಿ ನದಿಯಂತೆ’ ಎಂದು ಕಾವ್ಯಾತ್ಮಕವಾಗಿ ಹೇಳುತ್ತಾ, ಆ ‘ಅದಮ್ಯ ಪ್ರೀತಿಯ ಶಕ್ತಿಯ ಅರಿವಿಗಿಂದು ವಿಸ್ಮೃತಿ ಒದಗಿಬಂದಿರುವು’ದನ್ನು, ಅದು ಮೂಲೆಯ ಕೋಣೆಯಲ್ಲಿ ಹಾಕಿಟ್ಟ ಕಸದಂತೆ ಮುಂದೊಮ್ಮೆ ಇಡೀ ಮನೆಯನ್ನು – ಮೈ ಮನವನ್ನು ಆವರಿಸಿಬಿಡುವ ಸಾಧ್ಯತೆ ಇದೆ. ಆದ್ದರಿಂದ ಆಮೂಲಾಗ್ರವಾಗಿ, ಅಖಂಡವಾಗಿ ಶುದ್ಧಿಕಾರ್ಯ ಆಗಬೇಕಾದ ಜರೂರಿಯನ್ನು ಲೇಖಕಿ ಒತ್ತಿ ಹೇಳುತ್ತಾರೆ.

ಇಲ್ಲಿಂದ ಮುಂದೆ ವಿಭಿನ್ನ ನೆಲೆಗಳಲ್ಲಿ ಮಹಿಳೆಯ ಬಗ್ಗೆ ಅಧ್ಯಯನ ಪೂರ್ಣ ಲೇಖನಗಳು ಹರಿದು ಬರುವುದನ್ನು ಕಾಣುತ್ತೇವೆ.

ಸೊಪ್ಪು, ಸದೆ ಸೌತೇಕಾಯಿ,
ಎಲ್ಲ ಅಡರಿಸಿಕೊಂಡು ತನ್ನೊಳಗೆ
ಅದುಮಿಟ್ಟು ಹಬೆಯಲ್ಲಿ ಬೇಯುತ್ತದೆ ಕುಕ್ಕರ್
ಕುದಿಯುವ ಸುಳಿವೇ ಸಿಕ್ಕದಂತೆ.
‘ಪ್ರೆಷರ್ ಕುಕ್ಕರ್’ ಕವಿತೆಯಲ್ಲಿ “ಹೆಣ್ಣೊಬ್ಬಳ ದನಿ” ಹೇಗೆ ಸಮಸ್ತ ಹೆಣ್ಣುಗಳ ದನಿಯಾಗುತ್ತದೆ ಎಂಬುದನ್ನು ನಾವು ಗುರುತಿಸಬಹುದು. ಆ ‘ದನಿ’ ಮತ್ತೆ ಇಲ್ಲಿ ವಿಸ್ತೃತ ಗೊಂಡಿರುವುದನ್ನು ನಾವು ಕಾಣಬಹುದು. ಆದ್ದರಿಂದಲೇ ಲೇಖಕಿ ಸ್ತ್ರೀನಿಷ್ಠ ಹೋರಾಟಗಳಿಗೆ ಮತ್ತು ಅವುಗಳ ಅಧ್ಯಯನಗಳಿಗೆ ಸ್ತ್ರೀವಾದಿ ಅನ್ನುವುದಕ್ಕಿಂತಲೂ ‘ಮಹಿಳಾವಾದ’ ಸೂಕ್ತವಾಗಿದೆ ಎನ್ನುತ್ತಾರೆ. ಏಕೆಂದರೆ ಡಾ. ಗಿರಿಜಾ ಅವರ ಅಧ್ಯಯನದ ಉದ್ದೇಶ ವಾದ-ವಿವಾದಗಳ ಚೌಕಟ್ಟಿನಲ್ಲಿ ಮಹಿಳಾ ಲೋಕವನ್ನು ಬಂಧಿಸುವುದಲ್ಲ. ಬದಲಾಗಿ ಆ ಲೋಕದ ಅಘೋಷಿತವಾದ, ಗುಪ್ತವಾದ ಅನನ್ಯ ರೂಪಗಳನ್ನು ಪ್ರಕಟಿಸುವುದಾಗಿದೆ. ಏಕೆಂದರೆ, ‘ಸ್ತ್ರೀ-ಪುರುಷರು ಸಮಾನರಲ್ಲ. ಅವರು ಅಸಮಾನರೂ ಅಲ್ಲ. ಅವರಿಬ್ಬರೂ ಅನುಪಮರು; ವಿಭಿನ್ನರು, ವಿಶಿಷ್ಟರು.’ ಎಂದು ಓಶೋನ ವಿಚಾರಗಳ ಧಾರೆಯಲ್ಲಿ ತಮ್ಮ ವಿಚಾರವನ್ನು, ನಿಲುವನ್ನು ಸ್ಪಷ್ಟಪಡಿಸುತ್ತಾರೆ.

ಗಂಡು ಜಗತ್ತನ್ನು ಗ್ರಹಿಸುವ ರೀತಿಗೂ, ಹೆಣ್ಣು ಜಗತ್ತನ್ನು ಗ್ರಹಿಸುವ ರೀತಿಗೂ ಮೂಲಭೂತವಾಗಿಯೇ ವ್ಯತ್ಯಾಸವಿರುವುದನ್ನು ಗಮನಿಸಿರುವ ವಿಮರ್ಶಕಿ, ಪಿತೃಪ್ರಧಾನ ವ್ಯವಸ್ಥೆಯಲ್ಲಿ, ‘ಅಬಲಾ ಪ್ರಜ್ಞೆಯಿಂದಲೇ ಹೊರಬಂದ ಹೆಣ್ಣಿನ ಮಾನಸಿಕ ರಚನೆ ಏಕರೂಪದ್ದಾದರೂ ಅವಳ ಅನುಭವ ಲೋಕವನ್ನು ನಿಯಂತ್ರಿಸುವ ವ್ಯವಸ್ಥೆ ಬೇರೆಯೇ’ ಎಂದು ಗುರುತಿಸುತ್ತಾರೆ.

ಕೆಳವರ್ಗ ಮತ್ತು ಶ್ರೀಮಂತ ಮಹಿಳೆಗಿಂತ ಮಧ್ಯಮ ವರ್ಗದ ದುಡಿಯುವ ಮಹಿಳೆ ಈ ಲೇಖಕಿಯನ್ನು ಹೆಚ್ಚಾಗಿ ತಟ್ಟಿದೆ. ಅವಳ ಕರ್ತವ್ಯ, ಜವಾಬ್ದಾರಿಗಳು ಹೇಗೆ ಆಕೆ ಅನಿವಾರ್ಯವಾಗಿ ತನ್ನ ನೌಕರಿಯ ಕ್ಷೇತ್ರದಲ್ಲಿ ರಾಜಿ ಒಪ್ಪಂದ ಮಾಡಿಕೊಳ್ಳಬೇಕ್ಕಾಗಿದೆ ಎಂದು ವಿವರಿಸುತ್ತಾ, ಇದು ಸಮಾಜಕ್ಕೆ ಹಾದರವಗಿ ಕಂಡಿರುವುದನ್ನು, ಮಾತ್ರವಲ್ಲದೆ ಕೊನೆಗೆ, ‘ಗುರಾಣಿ ಇಲ್ಲದೆ ಹೋರಾಟಕ್ಕೆ ಇಳಿದ ಯೋಧರಂತೆ’ ಅಸಹಾಯಕರಾಗುವ ಸ್ಥಿತಿಯನ್ನು ಮನೋವೈಜ್ಞಾನಿಕ ನೆಲೆಯಲ್ಲಿ ಚಿಂತಿಸುತ್ತಾ, ‘ಮಹಿಳೆ ಇಂದು ಹಳೆಯ ಮೌಲ್ಯಗಳನ್ನು ಮುರಿಯಲೂ ಆಗದೆ ಹೊಸ ಪರ್ಯಾಯಗಳನ್ನು ಕಂಡುಕೊಳ್ಳಲೂ ಆಗದೆ ಡೊಂಬರಾಟ ನಡೆಸಬೇಕಾದ’ ದಾರುಣ ಸ್ಥಿತಿಯನ್ನು ಚಿತ್ರಿಸುತ್ತಾರೆ. ಇಂತಹ ‘ಬಿಲ’ಗಳಿಂದ ‘ಬಯಲಿಗೆ’ ಬರುವ ಹಲವಾರು ದಾರಿಗಳ ಹುಡುಕಾಟದ ಬೇರುಗಳನ್ನು ನಾವು ಈ ಕೃತಿಯುದ್ದಕ್ಕೂ ಕಾಣಬಹುದು. ಯಾಕೆಂದರೆ ಅನಾದಿ ಕಾಲದಿಂದಲೂ ಮಹಿಳೆಯನ್ನು ಕಾಣಿಸುವುದು ಒಂದು ರೀತಿಯಾದರೆ ಆಕೆಯ ಇರುವುವಿಕೆ ಒಂದು ರೀತಿಯಾಗಿದೆ. ‘ಈ ಇರುವಿಕೆ’ಯ ಮತ್ತು ‘ಆ ಇರುವಿಕೆ’ಯ ಬಿಲದಿಂದ ಹೊರಬಂದು ಆಕೆ ನಿಜವಾಗಿ ಕಾಣಬೇಕಾಗಿರುವುದರ ಹಂಬಲ ಇಲ್ಲಿ ನಾವು ಕಾಣಬಹುದು. ಏಕೆಂದರೆ ಇಂದಿನ ‘ಮಾರುಕಟ್ಟೆಯ ಈ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಮಾರಲ್ಪಡುವುದು ಕೇವಲ ಮಾರುಕಟ್ಟೆಯ ಉತ್ಪನ್ನಗಳಲ್ಲ, ಬದಲಾಗಿ ಮಾನವೀಯ ಮೌಲ್ಯಗಳು, ಅವುಗಳ ಪರಿಕಲ್ಪನೆ ಮತ್ತು ಪ್ರತಿಮೆಗಳು’ ಎಂದು ಇಂದಿನ ಜಾಹೀರಾತು ಯುಗದಲ್ಲಿ ಹೆಣ್ಣನ್ನೇ ಮಾರಾಟದ ವಸ್ತುವಾಗಿಸುವ ಪರಿಯನ್ನು ಬಯಲು ಮಾಡುತ್ತಾರೆ. ನಾವಿಂದು ಕಾಣುತ್ತಿರುವ ಮಾರುಕಟ್ಟೆಯ ಜಾಹಿರಾತುಗಳನ್ನು ಕಂಡು ‘ಯಶಸ್ಸು, ಯೋಗ್ಯತೆ, ಜನಪ್ರಿಯತೆ, ಪ್ರೀತಿ ಮತ್ತು ಲೈಂಗಿಕತೆ ಇವುಗಳನ್ನು ಈ ಬೃಹತ್ ಮಾರುಕಟ್ಟೆಯಲ್ಲಿ ಮಾರಾಟಕ್ಕಿಟ್ಟಿರುವುದನ್ನು’ ಬೊಟ್ಟು ಮಾಡಿರುವ ಲೇಖಕಿ ನಮ್ಮ ಸಾಂಸ್ಕೃತಿಕ ದುರಂತವನ್ನು ನಮ್ಮ ಮುಂದಿಡುತ್ತಾರೆ.

‘ದೈವ, ಸಮಾಜ ಹಾಗೂ ನಿಸರ್ಗದ ವಿಧಿಗಳು ಮನುಷ್ಯನನ್ನು ಎಲ್ಲೆಡೆಯಿಂದಲೂ ಸುತ್ತುವರಿದು ಬೇಟೆಯಾಡುತ್ತವೆ. ಮನುಷ್ಯ ಚರಿತ್ರೆಯೆಂಬುದು ಈ ಮೂರರ ಸಂಘರ್ಷಗಳಿಗೆ ಸಿಲುಕಿ ಹೋರಾಡಿದ ಕಥೆಯೇ ಆಗಿದೆ’ ಎಂದು ಹೇಳುತ್ತಾ ಜನ್ನ ತನ್ನ ಯಶೋಧರ ಚರಿತೆಯಲ್ಲಿ ಈ ಮೂರು ವಿಧಿಗಳ ಬಲೆಯೊಳಗೆ ಸಿಕ್ಕಿದ ಜೀವ ಅಮೃತಮತಿಯನ್ನು ಬೇಟೆಯಾಡಿ ಘೋರವಾದ ವಿನಾಶದ ಅಂಚಿಗೆ ತಳ್ಳಲ್ಪಡುವುದನ್ನು ಜನ್ನನಷ್ಟು ಪರಿಣಾಮಕಾರಿಯಾಗಿ ಇನ್ನಾರೂ ಹೇಳಲು ಸಾಧ್ಯವಿಲ್ಲ ಎಂದು ಕೆಲವೊಂದು ಹೊಸ ನೋಟುಗಳನ್ನು ಇಲ್ಲಿ ಲೇಖಕಿ ನೀಡುತ್ತಾರೆ.

ನಾಲ್ಕು ಗೋಡೆಗಳ ಮಧ್ಯೆ ಸಂಪ್ರದಾಯದ ಬಂಧನದಲ್ಲಿ ಬದುಕುತ್ತಿದ್ದ ಭಾರತೀಯ ನಾರಿ ಇಂದು ಶಿಕ್ಷಣ ಪಡೆದು ಎಲ್ಲಾ ರಂಗಗಳಲ್ಲೂ ತನ್ನತನತೆಯ ಛಾಪು ಒತ್ತುತ್ತಿರುವುದನ್ನು ಹೆಮ್ಮೆಯಿಂದ ಗುರುತಿಸುವ ಲೇಖಕಿ, ‘ಭ್ರಷ್ಟಾಚಾರ ತಾಂಡವವಾಡುತ್ತಿರುವ ಈ ದೇಶದಲ್ಲಿ ಅಧಿಕಾರಿಗಳ ಮನವೊಲಿಸಿ ಅವರನ್ನು ಬದಲಾಯಿಸುವ ಕೆಲಸವನ್ನು ಈ ಮಹಿಳೆಯರು ಮಾಡಿದ್ದೇ ಆದರೆ ಗಾಂಧೀಜಿಯವರ ಕನಸು ನನಸಾದೀತು’ ಎಂದು ಆಧುನಿಕ ಮಹಿಳೆಗೆ ಕಿವಿ ಮಾತು ಹಾಗೂ ಪಿತೃಪ್ರಧಾನ ವ್ಯವಸ್ಥೆಗೆ ಸಡ್ಡು ಹೊಡೆಯಬೇಕಾದ ಜರೂರಿಯನ್ನು ಧ್ವನಿಸುತ್ತಾರೆ.

ಕೃತಿಯ ಎರಡನೇ ಭಾಗ ಕಾವ್ಯ ಲೋಕದಲ್ಲಿ, ವಚನಕಾರರಿಂದ ಮೊದಲ್ಗೊಂಡು ಬೇಂದ್ರೆಯವರ ಜೋಗಿಯನ್ನು ಹಾದು ಯಶವಂತ ಚಿತ್ತಾಲರ ಲ.ಬ.ಸಾ.ವರೆಗೆ ಕನ್ನಡ ಕಾವ್ಯ ಪ್ರಪಂಚದ ಒಳನೋಟಗಳನ್ನು ನೀಡುವಲ್ಲಿ ಲೇಖಕಿ ಯಶಸ್ವಿಯಾಗಿದ್ದಾರೆ.

ಶರಣರ ವಚನಗಳಲ್ಲಿ ಶಿವನಿಗಿಂತ ಕಾಯಕವೇ ಮುಖ್ಯವಾಗಿರುವುದನ್ನು ಗಮನಿಸಿರುವ ಡಾ. ಗಿರಿಜಾ, ‘ಆದ್ದರಿಂದಲೇ ಶಿವನನ್ನು ಮೀರಿ ಈ ಭಕ್ತರು ಬೆಳೆಯುತ್ತಾರೆ’ ಎನ್ನುತ್ತಾರೆ. ಮುಂದುವರಿದು ಲಾಲಸೆ ಮತ್ತು ದೈಹಿಕ ಕ್ಷಮತೆಗಳ ನಡುವೆ ಸಮತೋಲ ಸಾಧಿಸಲಾರದ ಆಧುನಿಕ ಮನುಷ್ಯನ ಬದುಕೆಂಬುದು ಇಂದು ತೂತು ಕೊರೆದ ದೋಣಿಯಲ್ಲಿನ ಪ್ರಯಾಣವಾಗಿದೆ ಎನ್ನುತ್ತಾರೆ. ಇದು ಆಧುನಿಕತೆ, ತಂತ್ರ ವಿಜ್ಞಾನ, ಅತಿಯಾದ ನಾಗರೀಕರಣದ, ಪಾಶ್ಚಾತ್ಯ ಅಂಧಾನುಕರಣೆಯ ಫಲಶ್ರುತಿ. ಆದುದರಿಂದ, ‘ನಮ್ಮ ಶರಣ ಪರಂಪರೆಯಿಂದ ಆಧುನಿಕ ಮನುಷ್ಯ ಪಾಠ ಕಲಿತುಕೊಳ್ಳದಿದ್ದರೆ ಅವನು ನೀರುಪಾಲಾಗುವುದರಲ್ಲಿ ಆಶ್ಚರ್ಯವಿಲ್ಲ’ ಎಂದು ಕರೆಗಂಟೆಯನ್ನು ಬಾರಿಸಿದ್ದಾರೆ.

‘ಕಿನ್ನರಿಗೆ ಒಡೆತನ ಹಾಗೂ ಅಧಿಕಾರವನ್ನು ನಿರಾಕರಿಸುವ ತಾಕತ್ತಿದೆ’ ಎಂದು ಹೇಳುವ ಲೇಖಕಿ, ‘ಏಕತಾನತೆಯಿಂದ ಸಂಬಂಧಗಳ ಹಳತಾಗುವ ವಾಸನೆ ಮೂಗಿಗೆ ಹತ್ತುವ ಮೊದಲೇ ಅದನ್ನು ನವೀಕರಿಸಿಕೊಳ್ಳುವ ಉಪಾಯಗಳನ್ನು ನಮಗೆ ಪ್ರಕೃತಿ ಕಲಿಸುತ್ತದೆ’ ಎಂದು ನಮಗೆ ತಿಳಿಯಪಡಿಸುತ್ತಾರೆ.

ಭರತೇಶ ವೈಭವದಲ್ಲಿ ಸ್ತ್ರೀ ಪಾತ್ರಗಳ ಕುರಿತು ಬರೆಯುವಾಗ, ‘ದಾರ್ಶನಿಕನಾದ ಒಬ್ಬ ಕವಿಗೆ ಮಾತ್ರ ಬದುಕು, ಸಮಾಜ ಇರುವ ಹಾಗೆ ಮಾತ್ರವಲ್ಲ ಇರಬೇಕಾದುದರ ಹಾಗೆಯೂ ಕಾಣುವ ಕಣ್ಣುಗಳಿರುತ್ತದೆ’ ಎನ್ನುವ ಲೇಖಕಿ, ‘ಭರತನನ್ನು ಒಬ್ಬ ಆದರ್ಶ ಮಾನವನನ್ನಾಗಿ ಮಾಡುವ ಹುಮ್ಮಸ್ಸಿನಲ್ಲಿ ಅಲ್ಲಿನ ಹೆಂಗಳೆಯರಿಗೆ ಒದಗಿಸಿರುವ ನ್ಯಾಯ ಬೆರಗು ಹುಟ್ಟಿಸುತ್ತವೆ’ ಎಂದು ಕೃತಿಯ ಒಳಹೊಕ್ಕು ವಿಶ್ಲೇಷಿಸಿದ್ದಾರೆ.

‘ಬಂಧನದ ಅನುಭವ ಮತ್ತು ಬಿಡುಗಡೆಯ ಹಂಬಲ ಈ ಎರಡರ ವಿರುದ್ಧ ಸೆಳೆತಗಳಲ್ಲಿ ಸಿಕ್ಕ ಮನುಷ್ಯನ ಚಡಪಡಿಕೆಯನ್ನು ಬೇಂದ್ರೆಯವರ ಜೋಗಿ ಕವಿತೆ ಉದ್ದೇಶಿಸುತ್ತಿದೆ’ ಎಂದು ಸರಿಯಾಗಿಯೇ ಗುರುತಿಸಿರುವ ಲೇಖಕಿ, ಒಂದು ಭ್ರಮೆಯ ಜಗತ್ತಿನಿಂದ ನಿಜದ ಜಗತ್ತಿಗೆ ಒಯ್ಯುವ ಸೇತುವೆಯಾಗಿ ಇಲ್ಲಿ ‘ಜೋಗಿ’ ಬಂದಿರುವುದನ್ನು ಸೋದಾಹರಣವಾಗಿ ವಿವರಿಸಿದ್ದಾರೆ.

‘ಕಾವ್ಯ ಮತ್ತು ಕವಿಯ ನಡುವೆ ಇರುವ ಗಂಡು ಹೆಣ್ಣಿನ ಸಂಬಂಧವೂ ಆಧ್ಯಾತ್ಮಿಕವಾದುದು. ಹಾಗೆ ಆದಾಗ ಮಾತ್ರ ಗಂಡು ಹೆಣ್ಣಿನ ಯೋಗ ಅರಿವಾಗುವುದು.’ ಎಂದು ಸುಮತೀಂದ್ರ ನಾಡಿಗರ ದಾಂಪತ್ಯ ಗೀತೆಗಳ ಬಗ್ಗೆ ಬರೆಯುತ್ತಾ, ದಾಂಪತ್ಯವನ್ನು ಕಂಪಾಸಿಗೆ ಕವಿ ಹೋಲಿಸಿದ ಪರಿಯನ್ನು ವಿಶಿಷ್ಟ ರೀತಿಯಲ್ಲಿ ಲೇಖಕಿ ನಮ್ಮ ಮುಂದಿಡುತ್ತಾರೆ. ಈ ದಾಂಪತ್ಯ ಗೀತೆಗಳಲ್ಲಿ ಹೆಂಡತಿಯನ್ನೇ ಹೆಚ್ಚು ಶಕ್ತಿಯುತಳನ್ನಾಗಿ ಮಾಡಲಾಗಿರುವುದನ್ನು ಗುರುತಿಸಿರುವ ಲೇಖಕಿ ಈ ಕವಿತೆಗಳನ್ನು, ‘ದಾಂಪತ್ಯ ದೀಪಿಕೆ ಎಂದೂ ಕರೆಯ ಬಹುದೇನೋ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರೆ, ಚಿತ್ತಾಲರ ಲ.ಬ.ಸಾ.ಗಳನ್ನು ಕುರಿತು, ‘ಇಲ್ಲಿನ ರಚನೆಗಳು ಮಗುತನಕ್ಕೆ ಮೊಗಚಿಕೊಳ್ಳುತ್ತಿರುವುದರ ಪ್ರತೀಕವಾಗಿ ಕಾಣಿಸುತ್ತದೆ’ ಎಂದು ಉದ್ಗರಿಸುತ್ತಾರೆ. ಕನ್ನಡ ಕಾವ್ಯಲೋಕಕ್ಕೆ ಹೊಸ ಸೇರ್ಪಡೆಯಾದ ಚಿತ್ತಾಲರ ಈ ಲ.ಬ.ಸಾ. ‘ನಮ್ಮ ಅವಸರದ ಬದುಕಿನ ಈ ಸಮಕಾಲೀನ ಸಂದರ್ಭ ಹೊಸ ಬಗೆಯ ಕವಿತಾ ಪ್ರಕಾರಕ್ಕೆ ಕಾಯುತ್ತಿದೆಯೇನೋ. ಅದನ್ನು ಪೂರ್ಣಗೊಳಿಸುವ ಸಲುವಾಗಿಯೋ ಎನ್ನುವಂತೆ ಚಿತ್ತಾಲರು ಕನ್ನಡ ಸಾಹಿತ್ಯದ ಪರಂಪರೆಯೊಳಗೆ ಹೊಸದೊಂದು ಸಾಹಿತ್ಯ ಪ್ರಕಾರವನ್ನು ಹರಿಯಬಿಟ್ಟಿದ್ದಾರೆ’ ಎಂಬ ಅರ್ಥಪೂರ್ಣ ಹೇಳಿಕೆಯನ್ನು ನೀಡಿದ್ದಾರೆ.

ಕಪ್ಪು ಪಾರಿಜಾತದ ಕವಿತೆಯಲ್ಲಿ ಬಿಳಿ ಪಾರಿಜಾತ ಕಪ್ಪಾದುದು; ಅದಲ್ಲಿನ ‘ಕಡು ವಾಸನೆ’ – ಈ ಜಾಡನ್ನು ಹಿಡಿದು ಹೊರಟ ಲೇಖಕಿ ಚಿಕ್ಕ ಕವಿತೆಯೊಂದು ತನ್ನ ಒಡಲಾಳದಲ್ಲಿ ಉದುಗಿರಿಸಿಕೊಳ್ಳಬಹುದಾದ ಅರ್ಥ ಸಾಧ್ಯತೆಗಳನ್ನು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ.

ಕಥಾಲೋಕದಲ್ಲಿ ಮಾಸ್ತಿ, ಬಲ್ಲಾಳ, ಕೆ. ಸತ್ಯನಾರಾಯಣ, ಕಾಳೇಗೌಡ, ಮಣಿಮಾಲಿನಿ, ಮಾಲತಿ ನಾಡಿಗ್ – ಮೊದಲಾದವರ ಕತೆಗಳಲ್ಲಿ ಸ್ತ್ರೀ-ಬದುಕು ಅನಾವರಣಗೊಂಡಿರುವುದನ್ನು ಶೋಧಿಸುವ ಲೇಖನಗಳು ಇಲ್ಲಿವೆ.

ಮಾಸ್ತಿಯವರ ಕತೆಗಳಲ್ಲಿ ಬರುವ ಸ್ತ್ರೀಗಳನ್ನು ಪೌರಾಣಿಕ, ಸಾಮಾಜಿಕ, ಐತಿಹಾಸಿಕ ಹಾಗೂ ವಿದೇಶೀಯ ಎಂಬ ನಾಲ್ಕು ಭಾಗಗಳಾಗಿ ವಿಭಾಗಿಸಿರುವುದು ಲೇಖಕಿಯ ಸೃಜನಶೀಲ ವಿಮರ್ಶೆಗೆ ಸಾಕ್ಷಿ. ಅವರ ‘ಪೌರಾಣಿಕ ಪಾತ್ರಗಳು ಪುರಾಣದ ಪರಿವೇಶವನ್ನು ಕಳೆದುಕೊಂಡು ಮಾನವೀಯವಾಗುವುದು ಪಾಶ್ಚಾತ್ಯ ಮೂಲ ವಾಸ್ತವವಾದಿ ಲಕ್ಷಣ’ ಎಂದು ಗುರುತಿಸಿರುವ ಲೇಖಕಿ, ತಮ್ಮ ಸಾಮಾಜಿಕ ಕತೆಗಳಲ್ಲಿ ಹೆಣ್ಣನ್ನು ಸಾಂಪ್ರದಾಯಿಕ ಹಾಗೂ ಆಧುನಿಕ ಎರಡೂ ನೆಲೆಗಳಲ್ಲಿ ಗ್ರಹಿಸಿರುವುದನ್ನು ಬೋಟ್ಟುಮಾಡಿದ್ದಾರೆ.

ಬಲ್ಲಾಳರ ಕತೆಗಳ ಅಧ್ಯಯನ ಮಾಡಿರುವ ಲೇಖಕಿ, ‘ಪ್ರಗತಿಶೀಲರ ಕಾಲದಲ್ಲಿ ಬರೆಯಲಾರಂಭಿಸಿದ ಬಲ್ಲಾಳರು ನಿರಂಜನರಂತೆ ಬಹುಶಃ ಉಳಿದ ಎಲ್ಲ ಲೇಖಕರಿಗಿಂತ ಭಿನ್ನವಾಗಿ ಉಳಿಯುವುದು, ಅವರು ಸೃಷ್ಟಿಸಿದ ವಿಶಿಷ್ಟ ಸ್ತ್ರೀ ಪಾತ್ರಗಳ ಕಾರಣಕ್ಕಾಗಿಯೇ’ ಎಂದು ಬಲ್ಲಾಳರ ಕತೆಗಳಲ್ಲಿ ಬರುವ ಸ್ತ್ರೀ ಪಾತ್ರಗಳ ಒಳತೋಟಿಗಳನ್ನು ಬೀಚ್ಚಿಡುತ್ತಾರೆ. ‘ಮರಾಠಿಗೆ ದಳವಿಯವರಿದ್ದಂತೆ ಕನ್ನಡಕ್ಕೆ ಬಲ್ಲಾಳರು’ ಎಂದಿರುವ ಮಾತನ್ನು ಕನ್ನಡದ ವಿಮರ್ಶಾಲೋಕ ಇನ್ನಾದರೂ ತನ್ನ ಅರಿವಿಗೆ ತೆಗೆದುಕೊಳ್ಳಬೇಕು.

ಕನ್ನಡ ಕಥಾ ಲೋಕದ ಪ್ರಥಮ ಮಹಿಳೆ ಎಂದು ರಾಜಲಕ್ಷ್ಮಿ ಅವರನ್ನು ಗುರುತಿಸಿರುವ ಡಾ. ಗಿರಿಜಾ, ‘ರಾಜಲಕ್ಷ್ಮಿಯವರ ಕಥೆ ಕೇಳುತ್ತಿದ್ದರೆ ನನಗೆ ಒಳಗೆಲ್ಲೋ ಅಕ್ಕಮಹಾದೇವಿ ನುಡಿದಂತಾಗುತ್ತದೆ’ ಎಂದು ತನಗಾದ ವಿಶಿಷ್ಟ ಅನುಭವವನ್ನು ಓದುಗರೊಂದಿಗೆ ಹಂಚಿಕೊಳ್ಳುತ್ತಾರೆ. ‘ಪ್ರಥಮ ಬಾರಿಗೆ ಕನ್ನಡ ಕಥಾ ಸಾಹಿತ್ಯದಲ್ಲಿ ಮಹಿಳೆ ತನ್ನ ಅನೇಕ ಸಾಧ್ಯತೆಗಳೊಂದಿಗೆ, ಸಂವೇದನೆಗಳೊಂದಿಗೆ ಪ್ರಕಟವಾದದ್ದು ಇಲ್ಲಿಯೇ’ ಎಂದು ಕತೆಗಳ ವಿಶ್ಲೇಷಣೆಯಲ್ಲಿ ತೊಡಗುವ ಲೇಖಕಿ, ‘ರಾಜಲಕ್ಷ್ಮಿ ಅವರದ್ದು ಕನ್ನಡ ಕಥಾ ಸಾಹಿತ್ಯದಲ್ಲಿ ರಾಜರಸ್ತೆ’ ಎಂದು ಸಮರ್ಪಕವಾಗಿ ಗುರುತಿಸಿದ್ದಾರೆ. ಆದರೆ, ‘ರಾಜಲಕ್ಷ್ಮಿಯವರು ಮಾತ್ರ ಈ ಬದುಕನ್ನು ಪ್ರೀತಿಸಲಿಲ್ಲ, ತಾವು ಪ್ರೀತಿಸಿದ್ದ ಕತೆಗಳನ್ನು ಪೋಣಿಸದೇ ಒಣಗಿಸಿ ಬಿಟ್ಟರು’ ಎಂದು ಮಹಾನ್ ಪ್ರತಿಭೆಯೊಂದು ಮುರುಟಿಹೋದ ವಿಪರ್ಯಾಸವನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಾರೆ; ರಾಜಲಕ್ಷ್ಮಿ ಅವರ ಕತೆಗಳ ಓದಿಗೆ, ಅಧ್ಯಯನಕ್ಕೆ ನಿಮ್ಮನ್ನು ಪ್ರೇರೇಪಿಸುತ್ತಾರೆ.

ಸ್ತ್ರೀಪ್ರಜ್ಞೆಯ ನಾಲ್ಕು ಸಮಕಾಲೀನ ಕತೆಗಾರ್ತಿಯರಾದ ವೀಣಾ ಶಾಂತೇಶ್ವರ, ವೈದೇಹಿ, ಸಾರಾ ಅಬೂಬಕರ್, ಬಾನು ಮುಷ್ತಾಕ್ ಇವರ ಕತೆಗಳಲ್ಲಿನ ವಿಶ್ಲೇಷಣೆಗೆ ತೊಡಗುವ ಲೇಖಕಿ, ‘ಸ್ತ್ರೀ ತನ್ನ ಮೌನವೃತದ ಏಕೈಕ ನಿಷ್ಠೆಯನ್ನು ಬದಿಗೊತ್ತಿ ಪಿಸುಗುಡಲು ತೊಡಗಿರುವುದ’ನ್ನು ವಿಶ್ಲೇಷಿಸುತ್ತಾರೆ.

ಕೆ. ಸತ್ಯನಾರಾಯಣ ಅವರ ಕತೆಗಳ ಬಗ್ಗೆ ಬರೆಯುತ್ತಾ, ‘ಮನುಷ್ಯ ನಿಸರ್ಗದಿಂದ ದೂರವಾಗುತ್ತಾ, ಪಿತೃಪ್ರಧಾನ ವ್ಯವಸ್ಥೆಯೊಳಗೆ ತನ್ನನ್ನು ರೂಪಿಸಿಕೊಳ್ಳುತ್ತಾ ಹೋದಂತೆ ಗೂಡು ಮತ್ತು ಪ್ರಪಂಚಗಳ ನಡುವಿನ ಅಂತರ ಹೆಚ್ಚಾಗುತ್ತಾ ಬಂದಿರುವುದು ಚರಿತ್ರೆಯಲ್ಲಿ ಸರ್ವವಿಧಿತ’ ಎಂದು ಹೇಳುವ ಡಾ. ಗಿರಿಜಾ, ‘ನಮ್ಮ ಸಂಸ್ಕೃತಿಯಲ್ಲಿ ಗೂಡಿನಿಂದಲೇ ಲೋಕವನ್ನು ವೀಕ್ಷಿಸಲಾಗಿದೆಯೇ ಹೊರತು, ಹೊರಗಿನಿಂದ ಗೂಡನ್ನು ವೀಕ್ಷಿಸಲಾಗಿಲ್ಲ’ ಎಂದು ಸರಿಯಾಗಿಯೇ ಗುರುತಿಸಿದ್ದಾರೆ. ಯಾಕೆಂದರೆ ನಮ್ಮ ಸಮಾಜ, ಪರಂಪರೆ, ಸಾಂಸ್ಕೃತಿಕ – ಧಾರ್ಮಿಕ ಚಹರೆಗಳು ಗೂಡಿನ ಅಡ್ಡ ಬಾಗಿಲಾಗಿ ನಿಂತಿದೆ. ಆ ಅಡ್ಡ ಬಾಗಿಲನ್ನು ಸರಿಸಿ ಆಕಾಶಕ್ಕೆ ನೆಗೆವ ಪ್ರಯತ್ನ ಅಲ್ಲಿ ಇಲ್ಲಿ ನಡೆದಿದೆ. ಇದನ್ನು ಕೆ. ಸತ್ಯನಾರಾಯಣ ಅವರ ಕತೆಗಳ ಕೆಲವೊಂದು ಪಾತ್ರಗಳ ಮೂಲಕ ನಮ್ಮ ಮುಂದಿಟ್ಟಿದ್ದಾರೆ.

ಮುಂಬಯಿ ಕಥಾ ಸಾಹಿತ್ಯ ದರ್ಶನದಲ್ಲಿ ಲೇಖಕಿ ಚಿತ್ತಾಲ, ಬಲ್ಲಾಳ, ಜಯಂತ ಮೊದಲಾದವರ ಕತೆಗಳನ್ನು ಮುಖ್ಯವಾಗಿಟ್ಟುಕೊಂಡು ವಿಶ್ಲೇಷಣೆಗೆ ತೊಡಗಿದ್ದಾರೆ. ‘ಈ ಮೂವರ ಜೀವನ ದೃಷ್ಟಿಯೊಂದು ಆತುಕೊಳ್ಳುವ ನೆಲೆ ಮಾನವೀಯ ಕಾಳಜಿಗಳ ಹುಡುಕಾಟದ ನೆಲೆ. ಕಾಂಕ್ರೀಟ್ ಕಾಡುಗಳಲ್ಲಿನ ಯಂತ್ರ ಮನುಷ್ಯ ಹೃದಯಗಳಲ್ಲಿಯೂ ಸೆಲೆಯೊಡೆದು ಚಿಮ್ಮುವ ಸೃಜನಾತ್ಮಕ ಸೆಲೆಗಳ ಶೋಧನೆಯೇ ಇವರ ಸಾಹಿತ್ಯ ಕೃತಿಗಳ ಮುಖ್ಯ ವಸ್ತು’ ಆಗಿರುವುದನ್ನು ಗುರುತಿಸುತ್ತಾರೆ. ಜತೆಗೆ, ಗ್ರಾಮೀಣ ಪರಿಸರದ ದಟ್ಟ ಪ್ರಭಾವ ಹಾಗೂ ಯಂತ್ರ ಜಗತ್ತಿನೊಡನೆ ಮುಖಾಮುಖಿ ಏಕ ಕಾಲಕ್ಕೆ ಈ ಎರಡರ ನಿರ್ವಹಣೆಗೊಳ್ಳುವ ಕತೆಗಳು; ಕೋಮು ಗಲಭೆಯ ನಡುವೆ ಅರಳಿಕೊಳ್ಳುವ ಸೌಹಾರ್ದತೆಯನ್ನು ಸಾರುವ ಸನದಿ, ಮಿತ್ರಾ ಅವರ ಕತೆಗಳು; ಇಲ್ಲಿನ ಭೂಗತ ಜಗತ್ತಿನ ಎರಡನೆಯ ಮುಖಗಳನ್ನು ವಿಶ್ವನಾಥ್ ಕಾರ್ನಾಡ್, ಸಂಜೀವ ಶೆಟ್ಟಿ, ವಿದ್ಯಾಧರ ಮುತಾಲಿಕ ದೇಸಾಯಿ ಮೊದಲಾದವರು ಕಟ್ಟಿಕೊಟ್ಟಿರುವುದನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಜತೆಗೆ ಮಧ್ಯಮ ವರ್ಗದ ಬೇಸರ, ಏಕತಾನತೆಯನ್ನು ಮೀರುವ ರೋಮ್ಯಾಂಟಿಕ್ ಪ್ರಪಂಚ ಮುಕುಂದ ಜೋಶಿಯವರಂತಹ ಲೇಖಕರ ಕೃತಿಗಳಲ್ಲಿರುವುದನ್ನು ಇಲ್ಲಿ ಗುರುತಿಸಲಾಗಿದೆ.

ಆದರೆ, ಮುಂಬಯಿ ರೂಪಿಸಿದ ಕತೆಗಾರ್ತಿಯರನ್ನು ಮರೆಯದೆ ಇಲ್ಲಿ ಗುರುತಿಸಿರುವುದನ್ನು ನಾವು ಕಾಣಬಹುದು. ಮಣಿಮಾಲಿನಿ ಅವರ ‘ಬಾಜೀರ ಕಂಬ’ ಕೃತಿಯನ್ನು ತೆಗೆದುಕೊಂಡು ವಿಶ್ಲೇಷಣೆಗೆ ತೊಡಗುವ ಡಾ. ಗಿರಿಜಾ, “ಮಣಿಮಾಲಿನಿಯವರನ್ನೂ ಮುಂಬಯಿ ಕನ್ನಡ ನೆಲ ಬೆಳೆಸಿತು. ಎಷ್ಟೆಂದರೆ ವೇದಿಕೆ ಏರಿದರೆ ‘ಸ್ಟೇಜಿಗೇ fear ಎಂಬಷ್ಟು ಬೆಳೆದರು’ ಎಂದು ರೂಪಕವಾಗಿ ಬರೆಯುತ್ತಾರೆ. ‘ಬಾಜೀರ ಕಂಬದ’ ಭಾಷೆಯ ಬಗ್ಗೆ ಬರೆಯುತ್ತಾ, ‘ಆತ್ಮದ ಭಾಷೆ ಬೇರೆಯೇ ಆದುದು. ಅದು ಅನುಭವ ಜನ್ಯವಾದುದು’ ಎಂದು ಅಲ್ಲಿನ ಭಾಷೆ ತನಗೆ ಸಂಹನಗೊಂಡ ಬಗೆಯನ್ನು ಇಲ್ಲಿ ಉಲ್ಲೇಖಿಸುತ್ತಾರೆ. ಮಾಲತಿ ನಾಡಿಗ್ ಅವರ ಸಮಾನತೆ ಕತಾ ಸಂಕಲನದ ಕುರಿತು ಬರೆಯುತ್ತಾ, ‘ಅವರ ಸಮಾನತೆ ಕಥಾಸಂಕಲನದ ಕಥೆಗಳು ಕುಟುಂಬ ನಲುಗುವ ಪರಿಯನ್ನು ಅನಾವರಣ ಗೊಳಿಸುತ್ತವೆ’ ಎಂದು ವಿವಿಧ ಕತೆಗಳ ಮೂಲಕ ವಿಶ್ಲೇಷಿಸಿದ್ದಾರೆ.

‘ಶಿಷ್ಟ ಸಾಹಿತ್ಯದಲ್ಲಿ ಮಹಿಳೆಯ ಗೈರುಹಾಜರಿ ಪ್ರಧಾನವಾಗಿ ಕಾಣುವಂತ್ತಿದ್ದರೆ, ಜಾನಪದ ಸಾಹಿತ್ಯದಲ್ಲಿ ಅವಳದೇ ರಾಜ್ಯ’ ಎಂದು ಬೊಟ್ಟು ಮಾಡಿರುವ ಲೇಖಕಿ, ಕಾಳೇಗೌಡ ಅವರ ಕತೆಗಳಲ್ಲಿ ಜಾನಪದ ಜಗತ್ತು ಚಲಿಸುವುದನ್ನು ಅಲ್ಲಿನ ಸ್ತ್ರೀಯರು ಪ್ರೇಮ ಸಂಬಂಧಕ್ಕಾಗಿ ಸ್ಥಾಪಿತ ಮೌಲ್ಯಗಳನ್ನು ದಿಕ್ಕರಿಸುವುದನ್ನು ಗುರುತಿಸಿದ್ದಾರೆ. ಕಾಳೇಗೌಡರ ಕೃತಿಗಳಲ್ಲಿ ಸ್ತ್ರೀಯರು ತೋರುವ ಬಂಡಾಯವನ್ನು ‘ಮೆಲುದನಿಯ ಬಂಡಾಯ; ಮಾನವ ಪ್ರೀತಿ ಅದರ ಕೊನೆಯ ನೆಲೆ’ ಎಂಬುವುದನ್ನು ಗುರುತಿಸಿದ್ದಾರೆ.

ನಾಲ್ಕನೇ ಭಾಗ – ಕಾದಂಬರಿ ಲೋಕದಲ್ಲಿ ಕನ್ನಡದ ಮೊತ್ತ ಮೊದಲ ಕಾದಂಬರಿಯನ್ನಿತ್ತ ಶಾಂತಾಬಾಯಿ ನೀಲಗಾರ ಅವರ ‘ಸದ್ಗುಣಿ ಕೃಷ್ಣಾಬಾಯಿ’ಯ ವಿಶ್ಲೇಷಣೆ ಇದೆ. ಅದು ಹುಟ್ಟಿಕೊಂಡ ಕಾಲ ಹಾಗೂ ಅಂದಿನ ಸಾಮಾಜಿಕ ಹಿನ್ನೆಲೆಯಿಂದ ಇದು ಹೇಗೆ ಕನ್ನಡ ಸಾಹಿತ್ಯ ಲೋಕದಲ್ಲಿ ಅನನ್ಯ ಸ್ಥಾನವನ್ನು ಗಳಿಸಿದೆ ಎಂದು ವಿವರಿಸಿರುವುದನ್ನು ನಾವು ಕಾಣಬಹುದು.

ಕೆ. ಸತ್ಯನಾರಾಯಣ ಅವರ ‘ವಿಚ್ಛೇದನಾ’, ಕುಸುಮಾಕರ ಅವರ ವಿಶಿಷ್ಟ ಕಾದಂಬರಿ ‘ನಿರಿಂದ್ರಿಯ’, ಅನಂತ ಮೂರ್ತಿ ಅವರ ‘ಪ್ರೀತಿ ಮತ್ತು ಭಯ’ ಮೊದಲಾದ ಕೃತಿಗಳನ್ನು ಇಲ್ಲಿ ವಿಶ್ಲೇಷಿಸಿರುವುದನ್ನು ಕಾಣಬಹುದು. “ಗೋರಿಯಿಂದೆದ್ದು ಬಂದು ಹೆಣವೂ ವಿಚ್ಛೇದನದ ಅರ್ಜಿಯನ್ನು ಹಿಡಿದುಕೊಂಡು ಬಂದಿದೆ” ಎನ್ನುವ ಇಂದಿನ ಕಟುಸತ್ಯವನ್ನು ವಿಡಂಬನಾತ್ಮಕವಾಗಿ ‘ವಿಚ್ಛೇದನದ’ಲ್ಲಿ ಲೇಖಕರು ಕಟ್ಟಿಕೊಟ್ಟರೆ, ‘ನಿರಿಂದ್ರಿಯ’ದಲ್ಲಿ ಲೇಖಕ ಒಬ್ಬ ಪುರುಷನಾಗಿ ತನ್ನ ಹೆಣ್ಣು ಪಾತ್ರದೊಳಗೆ ಇಳಿಯುವ ಅದ್ಭುತದ ಬಗೆಯನ್ನು, ವಿಸ್ಮಯವನ್ನು ನಮ್ಮ ಮುಂದಿಟ್ಟು, “ಅದೇ ಎಲ್ಲಾ ನವ್ಯ ಕಾದಂಬರಿಗಳಿಂದ ಈ ಕಾದಂಬರಿಯನ್ನು ಬೇರೆಯಾಗಿಸಿದ” ಪರಿಯನ್ನು ಬಣ್ಣಿಸುತ್ತಾರೆ.

“ಭಾರತೀಯ ಸಂಸ್ಕೃತಿ ತೆರೆದ ಶೌಚಾಲಯವಾಗಿ ಕಂಡ ಸಂದರ್ಭದಲ್ಲಿಯೇ, ಅನಂತ ಮೂರ್ತಿಯವರು ಭಾರತೀಯ ನೆಲೆಯಲ್ಲಿ ಸಾವಿನ ಜಿಜ್ಞಾಸೆ ಮತ್ತು ದುಃಖದ ಪರಿಕಲ್ಪನೆಗಳನ್ನು ನಿರ್ದೇಶಿಸಿ ಕೃತಿ ರಚಿಸಿದ” ಸೋಜಿಗವನ್ನು ನಮ್ಮ ಮುಂದೆ ತೆರೆದಿಡುವ ಲೇಖಕಿ, ‘ಒಂದು ಕೃತಿ ತನ್ನ ಕಾಲವನ್ನು ತಾನೇ ಕಂಡುಕೊಳ್ಳುವಂತೆ ತನ್ನ ಸಂದರ್ಭಕ್ಕಾಗಿ ಕಾದು ಪ್ರಕಟವಾಗಿರುವುದು ಒಂದು ಕಾಕತಾಳೀಯ ಯೋಗವಾಗಿದೆ’ ಎಂದು ಉದ್ಗರಿಸುತ್ತಾರೆ.

ಅಂತಿಮ ಭಾಗ – ನಾಟಕ ಲೋಕದಲ್ಲಿ ಆರು ರಂಗಕೃತಿಗಳ ಹಾಗೂ ಒಂದು ನಾಟಕ ಸಾಹಿತ್ಯ ಕೃತಿಯ ಅನಿಸಿಕೆ ಇದೆ.

ಸದಾನಂದ ಸುವರ್ಣ ಅವರ ‘ಕೋರ್ಟ್ ಮಾರ್ಷಲ್’ ಹಾಗೂ ‘ಮಳೆ ನಿಲ್ಲುವವರೆಗೆ’ ರಂಗ ಕೃತಿಗಳ ಬಗ್ಗೆ ಬರೆಯುತ್ತಾ, ‘ಸತ್ಯ ಮತ್ತು ಸುಳ್ಳುಗಳ ನಡುವಿನ ಗೆರೆಯನ್ನೇ ಅಳಿಸಿಹಾಕಿ ಬಿಡುವ ಕೋರ್ಟ್ ಮಾರ್ಷಲ್ ಇನ್ನಿಲ್ಲದಂತೆ ಪ್ರೇಕ್ಷಕರ ಮನದಲ್ಲಿ ಉಳಿದುಬಿಡುತ್ತದೆ’ ಎನ್ನುತ್ತಾರೆ. ಅವರ ಎರಡನೇ ನಾಟಕದಲ್ಲಿ ‘ವ್ಯವಸ್ಥಿತವಾಗಿ ನಡೆಯುವ ಚಾರಿತ್ರ್ಯ ಹನನದ ಸ್ವರೂಪವನ್ನು’ ಶಕ್ತಿಶಾಲಿಯಾಗಿ ತೋರಿಸಿರುವುದನ್ನು ವಿವರಿಸುತ್ತಾರೆ.

‘ಸಾವು ಹಾಗೂ ಅದರ ಎದುರು ನಿಂತಿರುವ ಬದುಕು ಇವು ಮುಖ್ಯ ಪಾತ್ರಗಳಾಗಿ’ ಲೇಖಕಿಗೆ ಕಾಣಿಸಿಕೊಂಡ ‘ಹದ್ದು ಮೀರಿದ ಹಾದಿ’ಯ ವಿಶ್ಲೇಷಣೆಯೂ ಇಲ್ಲಿ ಇದೆ. ವಸುಮತಿ ಉಡುಪರ, ಭರತ್ ಕುಮಾರ್ ಪೊಲಿಪು ನಿರ್ದೇಶನದ ‘ಮೃಗತೃಷ್ಣಾ’ ನಾಟಕದ ರಸಸ್ವಾದವನ್ನು ನಮ್ಮೊಂದಿಗೆ ಹಂಚಿಕೊಳ್ಳುವ ಲೇಖಕಿ ಅಮರತ್ವದ ಬಯಕೆಯಲಿ ಮನುಷ್ಯ ಹುಳುವಾಗಿ ವಿಲಿವಿಲಿ ಪರಿತಪಿಸುವುದನ್ನು; ಈ ನಾಟಕ ತೀವ್ರವಾಗಿ ಕಟ್ಟಿಕೊಡುವುದನ್ನು ನಮ್ಮೆದುರು ಬಿಚ್ಚಿಡುತ್ತಾರೆ. ‘ಧರ್ಮದ ಅಪಮೌಲೀಕರಣವೆನ್ನುವುದು ಸಂಸ್ಕೃತಿಯ ವಿನಾಶಕ್ಕೆ ಹೇಗೆ ಕಾರಣವಾಗಿದೆ ಎಂಬುದನ್ನು ಚಿತ್ರಿಸುವ ಮಾಂಟೋ ಕತೆಗಳ ಆಧಾರದ ‘ಮಿಸ್ಟೇಕ್’ ನಾಟಕದ ರಸ ಸ್ವಾದವೂ ಇಲ್ಲಿ ಇದೆ.

ಇಲ್ಲಿ ಕೆಲವೊಂದು ವಿಚಾರಗಳು ಪುನರಾವರ್ತನೆಗೊಂಡಿದೆ. ಆದರೆ ಲೇಖನದ ವಿಷಯಗಳ ಆಳಕ್ಕಿಳಿಯಲು ಇದು ಸಹಜವೆಂಬಂತೆ ಬಂದಿರುವುದರಿಂದ ಇಲ್ಲಿ ದೋಷ ಎಂದೆನಿಸುವುದಿಲ್ಲ.

ನಾಟಕ ರಂಗ ಕೃತಿಯಾಗಿ ‌ಹಾಗೂ ಸಾಹಿತ್ಯ ಕೃತಿಯಾಗಿ ಬೇರೆಯೇ ಆಗಿರುವುದರಿಂದ ಎರಡರ ವಿಮರ್ಶೆಯೂ ಬೇರೆ ಬೇರೆ ರೀತಿಯದ್ದಾಗಿರುತ್ತದೆ. ರಂಗಕೃತಿಯ ಬಗ್ಗೆ ಬರೆಯುವಾಗ ನಾವು ಅದು ಒಳಗೊಂಡಿರುವ ರಂಗ ಪರಿಕರ, ವಿನ್ಯಾಸ, ಬೆಳಕು, ಸಂಗೀತ, ಅಭಿನಯ ಇತ್ಯಾದಿ ಎಲ್ಲವನ್ನೂ ಗಮನಿಸಬೇಕಾಗಿದೆ. ಏಕೆಂದರೆ ಇವೆಲ್ಲವೂ ಪಾತ್ರಗಳ ಒಳತೋಟಿ; ನಾಟಕದ ಒಟ್ಟು ಆಶಯವನ್ನು ದಾಟಿಸುವಲ್ಲಿ ಎಷ್ಟು ಸಹಕಾರಿಯಾಗಿದೆ ಎಂಬುವುದು ಬಹಳ ಮುಖ್ಯ. ಇದನ್ನು ಲೇಖಕಿ ಮುಂದಿನ ತಮ್ಮ ರಂಗಕೃತಿಯ ವಿಶ್ಲೇಷಣೆಯ ಸಂದರ್ಭದಲ್ಲಿ ಗಮನಿಸಬಹುದು.

ಇಲ್ಲಿನ ಕಾವ್ಯಾತ್ಮಕ ಭಾಷೆ, ಹಲವು ಕೃತಿಗಳ ಆಳವಾದ ಅಧ್ಯಯನ, ದಟ್ಟ ಜೀವನಾನುಭವ, ತಮ್ಮ ಸ್ಪಷ್ಟವಾದ ವೈಚಾರಿಕ ನಿಲುವು “ತಾಯ ಮುಖ ಕಾಣದಲ್ಲಾ” ಎಂಬ ವಿಮರ್ಶಾ ಕೃತಿಯನ್ನು ಗಟ್ಟಿಗೊಳಿಸಿದೆ. ಒಟ್ಟಾರೆಯಾಗಿ ಹೇಳುವುದಾದರೆ ಗಂಡಿನೊಳಗಿನ ಹೆಣ್ಣನ್ನು ಹಾಗೂ ಹೆಣ್ಣಿನೊಳಗಿನ ಗಂಡನ್ನು ಹುಡುಕುವ ಪ್ರಯತ್ನ ಈ ಕೃತಿಯುದ್ದಕ್ಕೂ ನಾವು ಗುರುತಿಸಬಹುದು. ಆ ಮೂಲಕ ಸ್ತ್ರೀ-ಪುರುಷ ಭೇದರಹಿತ ಸಮಾಜದ ನಿರ್ಮಾಣ ಸಾಧ್ಯ ಎನ್ನುವ ಇಲ್ಲಿನ ತುಡಿತವೂ ಹೌದು.

ಕೊನೆಯದಾಗಿ ಲೇಖಕಿಯ ಇತ್ತೀಚಿನ ಒಂದು ಕವಿತೆ ಧ್ವನಿಸುವಂತೆ: ದುಃಖ ದುಮ್ಮಾನ, ತುಮುಲಗಳನ್ನು ಮರೆಮಾಚಲು ಅವಳಿಗಾದರೋ ಸೆರಗಿನ ಅಂಚಿದೆ. ಆತನಿಗೆ ಅದೂ ಇಲ್ಲ. – ಇಲ್ಲಿ ನಾವು ಲೇಖಕಿಯ ಒಟ್ಟು ಆಶಯವನ್ನು ಸ್ಪಷ್ಟವಾಗಿ ಗುರುತಿಸಬಹುದು.

‍ಲೇಖಕರು Admin

December 20, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: