ಬಸವನಗೌಡ ಹೆಬ್ಬಳಗೆರೆ ಕವಿತೆ – ಬದುಕಿನ‌ ಲೆಕ್ಕ..

ಬಸವನಗೌಡ ಹೆಬ್ಬಳಗೆರೆ

ಜನರಲ್ ವಾರ್ಡಿಗೂ
ಶುಲ್ಕ ಕಟ್ಟಲಾರದ ದೈನೇಸಿ ಸ್ಥಿತಿ!
ಆತನ ಮನೆಯವರು
ಅಲ್ಲಿ, ಇಲ್ಲಿ ಬೇಡುತ್ತಿದ್ದಾರೆ ಸಾಲಕ್ಕೆ
ಬಡ್ಡಿಗೋ, ಬಂಗಾರ ಅಡವಿಟ್ಟೋ!
ಹುಡುಕುತ್ತಿದ್ದಾರೆ ಬಿಲ್ ಮನ್ನಾ ಮಾಡುವ,
ಶುಲ್ಕದಲಿ ಡಿಸ್ಕೌಂಟ್ ಸಿಗುವ
ಆರೋಗ್ಯದ ಸ್ಕೀಂಗಳ.

ಕೆಲವರಂತೂ ಲೆಕ್ಕಿಸುತ್ತಿದ್ದಾರೆ
ರೋಗಿ ಸತ್ತರೆ ಸಿಗುವ
ಆಸ್ತಿ,ಹಣದ ಪಾಲಿನ ಬಗ್ಗೆ!
ಇನ್ನೂ ಕೆಲವರು ಉತ್ತರ ಕ್ರಿಯಾದಿಗಳನು
ಯಾರು ಮಾಡಬೇಕೆಂದು?
ಎಲ್ಲಿ ಮಣ್ಣು ಮಾಡಬೇಕೆಂದು!
ಅತ್ತಂತೆ ನಟಿಸುತಿಹರಷ್ಟೇ.
ಒಳಗೊಳಗೇ ಖುಷಿ..

ಇನ್ನೂ ಕೆಲವರು ಬಾಯ್ಮಾತಿಗೆ
‘ಪಾಪ’ ಎಂದು.
ಮನದಲ್ಲಿ
ಮಾಡಿದ ಪಾಪ ಅನುಭವಿಸಲಿ ಬಿಡು
ಎಂದು ಆಡಿಕೊಳ್ಳುತ್ತಿದ್ದಾರೆ.

ಪಕ್ಕದ ಹೋಟೆಲ್ಲಿನವನು
ಆಸ್ಪತ್ರೆ ಆಗಂತುಕರು ಹೆಚ್ಚಿಹರೆಂದು
ಸಾಂಬಾರ್ ಕಮ್ಮಿಯಾಗಬಹುದೆಂಬ
ಅನುಮಾನದಲಿ ಮತ್ತಷ್ಟು ನೀರು ಸುರಿದು
ಉಪ್ಪು ಕಾರ ಹಾಕುತ್ತಿದ್ದಾನೆ.
ಅವನೂ ಬೇಡುತ್ತಿದ್ದಾನೆ ದೇವರಲ್ಲಿ
“ದೇವರೇ, ವ್ಯಾಪಾರ ಹೆಚ್ಚಲಿ
ಪ್ರತಿದಿನವೂ ಗಿರಾಕಿಗಳು ಹೆಚ್ಚು ಮಾಡೆಂದು!!”

ಅದೇ ಸ್ಯಾಲರಿ,ಓಟಿ ಮಾತ್ರ ಸಿಗುವುದು
ರೋಗಿಗಳ ಲೆಕ್ಕ,ಬಿಲ್ಲಿನ ಲೆಕ್ಕದಲಿ
ಇನ್ಸೆಂಟೀವ್ ಸಿಗಲಾರದು…
ಸುಮ್ಮನೇ ಮೈಮುರಿದುಕೊಳ್ಳಬೇಕು
ಎಂದು ಮನದಲ್ಲೇ ನೊಂದುಕೊಳ್ಳುತ್ತಾ
ಆಸ್ಪತ್ರೆಯ ನರ್ಸ್,ಆಯಾಗಳು
ಕಾಯಕ ಮಾಡುತ್ತಿದ್ದಾರೆ…

ಟೈ,ಶೂ ಹಾಕಿ ನೋಡುವವರ ಕಣ್ಣಿಗೆ
ಚೆಂದನೆ ಕಾಣುವ
ಬ್ಯಾಗ್ ನೇತು ಹಾಕಿ ಟ್ಯಾಬ್ಲೆಟ್ ಪ್ರಿಸ್ಕ್ರಿಪ್ಷನ್ ಗೆ
ಬಂದ ಮೆಡಿಕಲ್ ರೆಪ್ಪುಗಳು
ಈ ತಿಂಗಳ ಸೇಲ್ ನ ಬಗ್ಗೆ
ಡಾಕ್ಟರ್ ಬರೆಯುವ ಬ್ರಾಂಡಿನ ಬಗ್ಗೆ
ಮಾಹಿತಿ ಹೆಕ್ಕುತ್ತಿದ್ದಾರೆ…

ಡಿಸ್ಚಾರ್ಜ್ ಆದ ಕೆಲವರಲ್ಲಿ
ಮನೆಗೆ ಹೊಸ ಅತಿಥಿ
ಆಗಮನದ ಖುಷಿಯಲ್ಲಿ ತೆರಳಿದರೆ
ಕೆಲವರು ಮನೆ ಸದಸ್ಯನೊಬ್ಬನ
ಕಳೆದುಕೊಂಡ ದುಃಖದಲ್ಲಿ
ತೆರಳುತ್ತಿದ್ದಾರೆ…

ಡಾಕ್ಟರ್ ಕೂಡ
ಮೆಡಿಕಲ್ ಸ್ಟೋರ್
ಎಕ್ಸ್ ರೇ,ಸ್ಕ್ಯಾನಿಂಗ್ ಸೆಂಟರ್ ನಿಂದ
ಸಿಗುವ ಕೊಡುಗೆಯ ಬಗ್ಗೆ
ಲೆಕ್ಕ ಹಾಕುತ್ತಿದ್ದಾರೆ…

ಊರಲ್ಲಿ ಗುದ್ದು ತೋಡುವವರಿಗೂ
ಮೊದಲೇ ಪೀಕಬೇಕು ಹಣ
ಹೆಣಕ್ಕೆ ಹೆಗಲು ಕೊಡುವವರಿಲ್ಲ..
ತೆರೆದ ವಾಹನದಲಿ‌ ಮೆರವಣಿಗೆ…

ಲೆಕ್ಕಾಚಾರದ ಬದುಕಷ್ಟೇ…
ನನಗೆಷ್ಟು ಸಿಗುವುದು?
ಅವನಿಂದ ನನಗೇನು ಲಾಭ?
ಅಳದಿದ್ದರೆ ಏನೆಂದುಕೊಳ್ಳುವರೋ
ಎಂಬ ಅಳುಕಿನಲಿ ಕೆಲವರು
ಕಣ್ಣೀರು ಹಾಕುತ್ತಿದ್ದಾರೆ…
ಸತ್ತವನ ಆತ್ಮ ಮಾತ್ರ
“ನಾನು ನನಗಾಗಿಯೇ ಬದುಕಬೇಕಿತ್ತು
ಪುಣ್ಯದ ಕಾರ್ಯ ಮಾಡುತ್ತಾ.
ಏಟೊಂದು ದುಡಿದೆ,ಕೂಡಿಟ್ಟೆ
ಎಂಜಲ ಕೈಲೂ ಕಾಗೆ ಓಡಿಸದೇ!
ಈಗ ಮೈಮೇಲಿನ ಉಡುದಾರವನೂ
ಬಿಡುತ್ತಿಲ್ಲ!
ನನ್ನ ಜೊತೆ ಬರೀ ಪುಣ್ಯ ಪಾಪದ ಮೂಟೆ
ಮಾತ್ರ ಬಂದಿದೆ..
ಪಾಪದ ಮೂಟೆಯ ಹೊರೆಯೇ ಜಾಸ್ತಿ!
ಎಂದು ಹಲುಬುತ್ತಿದೆ…

ಸತ್ತ ಮೂರೇ ದಿನಕ್ಕೆ
ಇದ್ದವರು ಸಿಹಿ ತಿನ್ನುತ್ತಿದ್ದಾರೆ…
ನಮ್ಮದೂ ಇದೇ ಸ್ಥಿತಿ
ಎಂದು ಅರಿಯದವರಾಗಿದ್ದಾರೆ
ಕಾಂಚಾಣದ ಹಿಂದೆ ಬೆನ್ನತ್ತಿದ್ದಾರೆ
ಆರೋಗ್ಯದ ಬಗ್ಗೆ ಕಾಳಜಿಯಿಲ್ಲದೇ!
ಇತ್ತ ಆಸ್ಪತ್ರೆಗಳು ನಾಯಿ ಕೊಡೆಗಳಂತೆ
ಬೆಳೆಯುತ್ತಿವೆ…
ಪ್ರತಿಷ್ಠಿತ ಆಸ್ಪತ್ರೆಗಳೆನಿಸಿಕೊಂಡವು
ವರ್ಷದಿಂದ ವರ್ಷಕ್ಕೆ
ಆಗಸದೆತ್ತರಕ್ಕೆ ಬೆಳೆಯುತ್ತಿವೆ!!

‍ಲೇಖಕರು Admin

December 20, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Manjunatha nayaka N R

    ಮಗ ಆಸ್ಪತ್ರೆ ಸೇರಿದ್ದ
    ಸತ್ತು ಬದುಕುವ ಹೋರಾಟ
    ನಿತ್ಯ ಚಿಕಿತ್ಸೆ ಕೊಂಚ ಕೊಂಚ
    ಏನೂ ಹೇಳಲಾಗದು
    ದೇವರಿದ್ದಾನೆ ಎನ್ನುತ್ತಿದ್ದಾರೆ

    ಇತ್ತ ತಾಯಿ ಸ್ವರ್ಗ ಪ್ರಾಪ್ತಿ
    ದುಡ್ಡಿಗೆ ಪರದಾಟ
    ಕೈ ಹಿಡಿದ ಸ್ಕೀಮ್ಗಳು
    ಬದುಕಿಸಿ ಕೊಡಲಿಲ್ಲ
    ನಿತ್ಯ ಕಣ್ಣೀರು ನೆನೆಸಿಕೊಂಡಾಗೆಲ್ಲಾ

    ಮೈತುಂಬ ಸಾಲಾ
    ಆಸ್ಪತ್ರೆಗೆ ಕಟ್ಟಿದ್ದ
    ಇನ್ನೂ ಅರಗಿಸಿ ಕೊಳ್ಳಲಾಗಿಲ್ಲಾ
    ಶವ ಎತ್ತಲು 16 ಸಾವಿರ ಬಾಕಿ
    ಕೊನೆಗೆ ಕೈ ಹಿಡಿದ ಆರೋಗ್ಯ ಅಕ್ಷಯ

    ಸುಂದರ ವಾಸ್ತವತೆಯ ಕವನ ಸರ್

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: