ಸಾಹಸಪ್ರಿಯರ  ಮನಗೆಲ್ಲುವ ‘ತಾನಾಜಿ’    

ಗೊರೂರು ಶಿವೇಶ್ 

ಕದನಗಳನ್ನು ಸೋತರೂ ಪರವಾಗಿಲ್ಲ ಯುದ್ಧವನ್ನು ಗೆಲ್ಲಲೇಬೇಕು ಇದು ನೆಪೋಲಿಯನ್ ಬೋನಾಪಾರ್ಟೆಯ ಪ್ರಸಿದ್ಧ ಮಾತು. ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳನ್ನು ಎಚ್ಚರಿಸಲು ಈ ಹೇಳಿಕೆಯನ್ನು ಬಳಸಿಕೊಳ್ಳುವುದುಂಟು .ಕಿರುಪರೀಕ್ಷೆ ಕದನವಾದರೆ ವಾರ್ಷಿಕ , ಪಬ್ಲಿಕ್ ಪರೀಕ್ಷೆಗಳು ಯುದ್ಧ ಇದ್ದಂತೆ, ಅದನ್ನು ಗೆಲ್ಲಲೇಬೇಕು ಎಂಬುದು ಹೇಳಿಕೆಯ ಸಾರಾಂಶ.

ಹಾಗಾದರೆ ಕದನಗಳು ಹೇಗಿರುತ್ತದೆ ಲಕ್ಷಾಂತರ ಜನ ಭಾಗವಹಿಸುವ  ಹೋರಾಟಗಳು ಯುದ್ಧ ರೂಪ ಪಡೆದರೆ ಒಂದೆರಡು ಸಾವಿರ ಸೈನಿಕರ ನಡುವಿನ ಹೋರಾಟ ಕದನದ ರೂಪನ್ನು ಕೊಡುತ್ತದೆ. ಇತಿಹಾಸ ಓದಿದವರಿಗೆ ಇಂಥ ನೂರಾರು ಕದನಗಳ ಮೆರವಣಿಗೆ ಕಣ್ಣ ಮುಂದೆ ಹಾದು ಹೋಗುತ್ತದೆ. ಭಾರತ ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ಪಾಣಿಪತ್, ಪ್ಲಾಸಿ, ಬಕ್ಸಾರ್, ತಾಳಿಕೋಟೆ ಹೀಗೆ ಅದೆಷ್ಟು ಕದನಗಳು ನೆನಪಿಗೆ ಬರಬಹುದು. ಈ ಕದನಗಳು ಹೊಸ ರಾಜ ಹಾಗೂ ರಾಜ್ಯದ ನವೋದಯಕ್ಕೆ  ಕಾರಣವಾದ ರೀತಿಯಲ್ಲಿ  ಅನೇಕ ರಾಜ್ಯ  ಮನೆತನಗಳ ಅವನತಿಗೆ ಕಾರಣವಾಗಿದೆ. ಕದನಗಳ ಹಿಂದೆ ರಾಜವಂಶಸ್ಥರ, ಅವರ ಮಂತ್ರಿ, ಸೈನಿಕರ ಸಾಹಸ, ಬಲಿದಾನ, ಪಿತೂರಿ, ನಯವಂಚಕತನ, ತ್ಯಾಗ, ರಾಜ್ಯ,ರಾಜನಿಷ್ಠೆ, ಸಮರ ಯೋಜನೆ, ಅದನ್ನು ಕಾರ್ಯಗತಗೊಳಿಸುವಿಕೆ..ಓದುಗರಿಗೆ ನೋಡುಗರಿಗೆ ರೋಚಕ ಅನುಭವ ನೀಡುತ್ತದೆ.

ಕನ್ನಡದಲ್ಲಿ ತರಾಸು ಅವರ ಅನೇಕ ಕಾದಂಬರಿಗಳು ಹಗಲುಗನಸು, ತಿರುಗುಬಾಣ, ರಕ್ತರಾತ್ರಿ, ದುರ್ಗಾಸ್ತಮಾನ, ಮಾಸ್ತಿಯವರ ಚಿಕವೀರರಾಜೇಂದ್ರ, ಭಾರತೀಸುತರ ಹುಲಿಯ ಹಾಲಿನ ಮೇವು… ಇಂತಹ ಕದನದ ಹಿನ್ನೆಲೆಯ ಕಥೆಗಳನ್ನು ನೆನಪಿಸುತ್ತದೆ. ಅದರಲ್ಲೂ  ಭಾರತೀಸುತರ ಕಾದಂಬರಿ ಸಿನಿಮಾವಾಗಿ ಗೆದ್ದಿದೆ. ಕದನದ ಹೋರಾಟಗಳು ಹಿಂದಿ ಸಿನಿಮಾ ರಂಗವನ್ನು ತಟ್ಟದೆ ಬಿಟ್ಟಿಲ್ಲ. ಅದರಲ್ಲೂ ಬಾಹುಬಲಿ ಚಿತ್ರದ ಅದ್ಭುತ ಯಶಸ್ಸಿನ ನಂತರ ಅನೇಕ ನಿರ್ಮಾಪಕ-ನಿರ್ದೇಶಕರು ಇಂತಹ ಚಿತ್ರಗಳ ಹಿಂದೆ ಬಿದ್ದಿದ್ದಾರೆ. ಕಳೆದ ವರ್ಷ ಪಾಣಿಪತ್, ಪದ್ಮಾವತಿ ಚಿತ್ರಗಳ ನಂತರ ಇದೀಗ ತಾನಾಜಿ ತೆರೆಗೆ ಅಪ್ಪಳಿಸಿದೆ. ಬಿಡುಗಡೆಯಾದ ಎರಡು ವಾರಕ್ಕೆ 200 ಕೋಟಿಗಳ ಗಳಿಕೆಯ ಚಿತ್ರ ಮುಂದೆ ಗಳಿಕೆಯಲ್ಲಿ ಯಾವ ಮಟ್ಟ ತಲುಪಲಿದೆ ಎಂಬುದನ್ನು ಕಾದುನೋಡಬೇಕಾಗಿದೆ .

ನಾವು ಪ್ರೌಢಶಾಲೆಯಲ್ಲಿದ್ದಾಗ ಓದಿದ ಭಾರತೀಯ ರಾಜರ ಕಥೆಗಳಲ್ಲಿ  ಶಿವಾಜಿ ಮತ್ತು ಔರಂಗಜೇಬರ ಸೆಣಸಾಟದ ಕಥೆಗಳು ವಿಶಿಷ್ಟವಾದವು. ಸೆರೆಸಿಕ್ಕ ಶಿವಾಜಿ ಹಣ್ಣಿನ ಬುಟ್ಟಿಯಲ್ಲಿ ಕುಳಿತು ತಪ್ಪಿಸಿಕೊಂಡಿದ್ದು, ಸಿಂಹಗಢದ ಕಡಿದಾದ ಕೋಟೆಯನ್ನು ಹತ್ತಲು ಉಡ ಒಂದಕ್ಕೆ ಹಗ್ಗವನ್ನು ಕಟ್ಟಿ, ಕೋಟೆಯ ಮೇಲೆ  ಬಿಟ್ಟು ಅದರ ಬಿಗಿಯಾದ ಹಿಡಿತದಿಂದ ಸೈನಿಕರು ಕೋಟೆ ಹತ್ತಿ  ಹೋರಾಟ ಮಾಡಿದ್ದು, ಕದನವನ್ನು ಗೆದ್ದರೂ ತಾನಾಜಿಯನ್ನು ಕಳೆದುಕೊಂಡ ಸಂದರ್ಭದಲ್ಲಿ ನಾವು ಸಿಂಹಗಢವನ್ನು ಗೆದ್ದೆವು ಆದರೆ ಸಿಂಹವನ್ನು ಕಳೆದುಕೊಂಡವು ಎಂದು ಉದ್ಗರಿಸಿದ್ದು ನೆನಪಿಗೆ ಬರುತ್ತದೆ .

ತಾನಾಜಿ ಹೆಸರೇ ಹೇಳುವಂತೆ ಮರಾಠರ ಪ್ರಸಿದ್ಧ ದೊರೆ ಛತ್ರಪತಿ ಶಿವಾಜಿಯ ಬಳಿ ಸುಬೇದಾರ್ ಅಥವಾ ದಳವಾಯಿ ಆಗಿ ಕದನವನ್ನು ಮುನ್ನಡೆಸಿದ  ತಾನಾಜಿ ಕಥೆ. 350 ವರ್ಷಗಳ ಹಿಂದೆ ದೆಹಲಿಯ ಸುಲ್ತಾನ ಔರಂಗಜೇಬನು ಮರಾಠರನ್ನು ಮಣಿಸಿ ಪಡೆದ ಸಿಂಹಗಢವನ್ನು ರಜಪೂತರ ಸಾಮಂತ ದೊರೆ ಉದಯಭಾನುವಿಗೆ ನೀಡಿದ್ದನ್ನು ಮತ್ತೆ ಪಡೆಯಲು ನಡೆಸುವ ಹೋರಾಟದ  ರೋಚಕ ಕಥೆ. ತಾನಾಜಿ ಆತನ ರಾಜ ಹಾಗೂ ರಾಜ್ಯ ಪ್ರೇಮ, ಹೋರಾಟದ ತಂತ್ರ ,ವೈಯಕ್ತಿಕ ಜೀವನ  ಆತನ ಶಕ್ತಿ-ಯುಕ್ತಿಯನ್ನು ಎರಡು ಗಂಟೆಗಳ ಕಾಲ, ಚಿತ್ರ ಹಿಡಿದಿಟ್ಟಿದೆ. ಕೋಟೆಕೊತ್ತಲಗಳು, ಕಡಿದಾದ ದುರ್ಗಮ ಮಾರ್ಗ, ಎಲ್ಲೋ ಕಂಡು ಮರೆಯಾಗುವ ಸುರಂಗಮಾರ್ಗ, ಹೃದಯ ಬಾಯಿಗೆ ಬಂದಂತೆ ಅನ್ನಿಸುವ  ಕಮರಿಗಳು, ಮೂರು ಶತಮಾನಗಳ ಹಿಂದೆ ವಿದ್ಯುಚ್ಛಕ್ತಿ ಇಲ್ಲದ  ದೀಪದ ಬೆಳಕಲ್ಲಿ ಮುನ್ನಡೆಯಬೇಕಾದ ಸಂದರ್ಭ.. ಶೌರ್ಯ ಮತ್ತು ಚಾತುರ್ಯದ ಘಟನೆಗಳನ್ನು ಆಧುನಿಕ ತಂತ್ರಜ್ಞಾನದಲ್ಲಿ  ತ್ರೀಡಿ ತಂತ್ರದ ಮೂಲಕ ತಂದಿರುವುದು ಪ್ರೇಕ್ಷಕರನ್ನು ಸೀಟಿನ ತುದಿಯಲ್ಲಿ ಕೂರಿಸುವುದು ಸುಳ್ಳಲ್ಲ.

ಚಿತ್ರಕಥೆ ಹೆಣೆದಿರುವ ರೀತಿ ಆಸಕ್ತಿ ಕುತೂಹಲದಿಂದ ಸಾಗುತ್ತಾ ಪ್ರೇಕ್ಷಕರನ್ನು ಹಿಡಿದಿಡುತ್ತದೆ. ಇದಕ್ಕೆ ಮೈನವಿರೇಳಿಸುವ ಅನೇಕ ದೃಶ್ಯಗಳು ಸಾಥ್ ನೀಡಿದೆ. ತ್ರೀಡಿ ತಂತ್ರಜ್ಞಾನ ಕದನ ಹೋರಾಟಗಳಿಗೆ ನೆರವಿಗೆ ಬಂದಿದ್ದು ಅದನ್ನು  ಮನೆಯಲ್ಲಿ ಕುಳಿತು ನೋಡುವ ಅನುಭವಕ್ಕಿಂತ ಥಿಯೇಟರ್ನಲ್ಲಿ ನೋಡುವ ಖುಷಿಗಾಗಿ ಚಿತ್ರ ಪ್ರೇಕ್ಷಕರನ್ನು ಸೆಳೆಯುತ್ತದೆ. ಅಜಯ್ ದೇವಗನ್ ಚಿತ್ರಕ್ಕೆ ಬಂಡವಾಳ ಹಾಕಿರುವುದಲ್ಲದೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಆದರೆ ಚಿತ್ರದಲ್ಲಿ ಗಮನ ಸೆಳೆಯುವ ಅಭಿನಯ ನೀಡಿರುವುದು ಉದಯಭಾನು ಪಾತ್ರದಲ್ಲಿ ಅಭಿನಯಿಸಿರುವ ಸೈಫ್ ಆಲಿಖಾನ್. ಕನ್ನಡದಲ್ಲಿ ಚಿತ್ರದುರ್ಗದ ಪಾಳೆಗಾರರ ಕುರಿತಾದ ಕೃತಿಗಳನ್ನು ತೆರೆಗೆ ತಂದರೆ ಪ್ರೇಕ್ಷಕರಿಗೂ ಕೂಡ ಇದೇ ರೀತಿಯ ರೋಚಕ ಅನುಭವವನ್ನು ನೀಡಬಹುದು. ಒಟ್ಟಾರೆ ಇತಿಹಾಸ, ದೇಶಪ್ರೇಮ, ಯುದ್ಧ ಚಿತ್ರಣ ಚಿತ್ರದಲ್ಲಿ ಕಣ್ಣಿಗೆ ಹಬ್ಬದಂತೆ ಮೂಡಿಬಂದಿರುವುದು ಈ ಚಿತ್ರದ ಹೆಗ್ಗಳಿಕೆ.

‍ಲೇಖಕರು avadhi

January 24, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: