ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಾಹಸದ ಕಥೆಗಳು..

ಶಿವಾನಂದ ಹೊಂಬಳ ಅವರ ‘ಮೊಸಳೆ ಗೆಳೆಯರು ಮತ್ತು ಕಲರಿ ಪಟ್ ಹುಡುಗಿಯರು’

ಈ ಕೃತಿಯನ್ನು ‘ನಲುಮೆ ಪ್ರಕಾಶನ’ ಪ್ರಕಟಿಸಿದೆ.

ಈ ಕೃತಿಯ ಕುರಿತು ತಮ್ಮಣ್ಣ ಬೀಗಾರ ಅವರ ಒಂದು ನೋಟ ಇಲ್ಲಿದೆ.

-ತಮ್ಮಣ್ಣ ಬೀಗಾರ

“ಮೊಸಳೆ ಗೆಳೆಯರು” ಎನ್ನುವ ಮೊದಲ ಕಥೆ ದಾಸರಹಳ್ಳಿಯಲ್ಲಿ ಆರು ವಿಕ್ರಮರ ತಂಡ ಎನ್ನುವ ಒಂದು ಗುಂಪಿದೆ ಎಂದು ಪ್ರಾರಂಭವಾಗುತ್ತದೆ.  ಈ ಕಥೆಯಲ್ಲಿ ಏನೋ ಸಾಹಸ ನಡೆಯುತ್ತದೆ ಎಂಬುದನ್ನು ಮೇಲಿನ ಮಾತೇ ಸೂಚಿಸುತ್ತದೆ. ಬೇಸಿಗೆ ರಜಾ ಕಾಲದ ಒಂದು ದಿನ ಮಕ್ಕಳು ಕಾಡಿನಲ್ಲಿರುವ ಸಂಪಿಗೆ ಹಳ್ಳಕ್ಕೆ ಈಜಲು ಹೋಗುತ್ತಾರೆ. ಸೈಕಲ್ ಸವಾರಿಯಲ್ಲಿ ಮಕ್ಕಳು ಉತ್ಸಾಹದಿಂದ…

“ಅಪ್ಪನು ಕೊಡಿಸಿದ ಸೈಕಲ್ಲು/ ಸವಾರಿ ಹೋಗ್ತೀವಿ ಎಲ್ಲೆಲ್ಲೂ/ ಪೆಟ್ರೋಲ್ ಡೀಸೆಲ್ ಬೇಕಿಲ್ಲ/ ರೀಚಾರ್ಜ್ ಮಾಡುವ ಗೋಜಿಲ್ಲ” ಎಂದು ಹಾಡುವ ಹಾಡೆಲ್ಲ ಓದುವವರ ಖುಷಿಯನ್ನು ಹೆಚ್ಚಿಸುವಂತಿವೆ. ಹೀಗೆ ಸಾಗುವ ಮಕ್ಕಳು ಸಂಪಿಗೆ ಹಳ್ಳಕ್ಕೆ ಹೋಗಿ ಈಜಲು ಇಳಿದಾಗ ರವಿ ಎನ್ನುವ ಹುಡುಗನ ಕಾಲನ್ನು ಮೊಸಳೆ ಹಿಡಿದುಕೊಳ್ಳುವುದು ಕತೆಗೆ ರೋಚಕತೆಯನ್ನು ಉಂಟುಮಾಡುತ್ತದೆ. ಮೊದಲೇ ಹೇಳಿದಂತೆ ಸಾಹಸಿಗರಾದ ಅವರು ಮೊಸಳೆಯಿಂದ ಹೇಗೆ ಪಾರಾಗುತ್ತಾರೆ ಎನ್ನುವುದನ್ನು ಓದಿಯೇ ನೋಡಬೇಕು.

ಒಂದೊಂದೇ ಹೆಜ್ಜೆ ಹಾಕುತ್ತಾ ತಂಪಾದ ನೀರಿಗೆ ಇಳಿಯುವ ರೀತಿ, ನೀರಿಗೆ ಇಳಿದಾಗ ಒಬ್ಬರ ಮೇಲೊಬ್ಬರು ನೀರು ಎರಚುವುದು, ಅವರು ಆಡುವ ನೀರಾಟದ ವರ್ಣನೆಗಳೆಲ್ಲ ಸಹಜವಾಗಿ ಬಂದಿದ್ದು ಕಥೆಯು ಓದುಗರನ್ನು ಹಿಡಿದಿಡುವಂತಿದೆ. ಮಕ್ಕಳು ಸಾಹಸ ಪಟ್ಟು ಮೊಸಳೆಯಿಂದ ಬಿಡಿಸಿಕೊಂಡರೂ ಮನೆಗೆ ಬಂದಾಗ ತಂದೆ ತಾಯಿಗಳಿಗೆ ಆಗುವ ಸಂಕಟ, ಜನರೆಲ್ಲ ಸೇರಿ ಮಾಡುವ ಸಮಾಧಾನ ಮಕ್ಕಳಿಗೂ ನೋವನ್ನು ದಾಟಿಸುವುದು ಒಂದೆಡೆಯಾದರೆ ಊರ ಜಾತ್ರೆಯಲ್ಲಿ ಮಕ್ಕಳ ಸಾಹಸ ನೆನೆದು ಸನ್ಮಾನಿಸುವುದು, ಶಾಲೆ ಪ್ರಾರಂಭವಾದಾಗ ಗುರುಗಳು ಸಂಭ್ರಮಿಸಿ ಶಾಲೆಯಲ್ಲಿ ಹೊಗಳಿದ್ದು… ಸಾಹಸ ಮಾಡಿದ ಮಕ್ಕಳು ತಮ್ಮ ಸಾಹಸದ ಕಾದಂಬರಿಯೊಂದನ್ನು ಬರೆಯುವ ಮಾತಾಡಿದ್ದೆಲ್ಲ ಕಥೆಯನ್ನು ವಿಸ್ತರಿಸಿ ಮಕ್ಕಳ ಸಾಹಸವನ್ನು ಓದುಗರಲ್ಲಿ ನೆಲೆಗೊಳಿಸುವಂತೆ ಮಾಡಿದೆ.

“ಕಲರಿಪಟ್ ಹುಡುಗಿಯರು” ಎನ್ನುವುದು ಈ ಸಂಕಲನದ ಮತ್ತೊಂದು ಕಥೆ. ಈ ಕಥೆಯಲ್ಲಿ ಅವಧೂತ ವೀರಪ್ಪಯ್ಯನ ಜಾತ್ರೆಗೆ ಹೋಗುವ ಏಳು ಹುಡುಗಿಯರು ಮಾಡುವ ಸಾಹಸ ಇದೆ. ಇತಿಹಾಸ ಅಧ್ಯಯನ, ಪ್ರವಾಸ, ಸಾಹಸ ಮುಂತಾದವುಗಳಲ್ಲಿ ಆಸಕ್ತಿ ಹೊಂದಿದ್ದ ಹುಡುಗಿಯರ ತಂಡ ಜಾತ್ರೆ ನಡೆಯುವ ಸ್ಥಳದ ಹಿಂಬದಿಯ ಬೆಟ್ಟಕ್ಕೆ ಹೋಗುವುದು ನಂತರ ಹಿಂದಿರುಗುವಾಗ ದಾರಿತಪ್ಪಿ ಹಳೆ ಕಟ್ಟಡ ಪ್ರವೇಶಿಸುವುದು, ಅಲ್ಲಿ ಕಳ್ಳರನ್ನು ಎದುರಿಸಿ ಅವರನ್ನು ಹಿಡಿದು ಪೊಲೀಸರ ವಶಕ್ಕೆ ನೀಡುವುದು ಇದೆ. ಈ ಕಥೆಯಲ್ಲಿಯ ಹೆಣ್ಣು ಮಕ್ಕಳು ತುಂಬಾ ಧೈರ್ಯದಿಂದ ಮಾತಾಡುವುದು, ಕಳ್ಳರೊಂದಿಗೆ ಹೋರಾಟ ಮಾಡುವುದು, ಸಂದರ್ಭಕ್ಕೆ ತಕ್ಕಂತೆ ತಂತ್ರ ಬಳಸಿ ಅವರನ್ನು ಮಣಿಸುವುದೆಲ್ಲ ಸಹಜವಾಗಿ ಬಂದಿದೆ.

ಎರಡೂ ನೀಳ್ಗತೆಗಳು ಮಕ್ಕಳನ್ನು ಸಾಹಸಕ್ಕೆ ಕರೆಯುತ್ತಾ ಒಟ್ಟಾಗಿ ಇರುವ, ಧೈರ್ಯ ತುಂಬುವ, ಒಳ್ಳೆಯ ಹವ್ಯಾಸದಲ್ಲಿ ತೊಡಗುವ ತನ್ಮೂಲಕ ತಾನೇ ತಾನಾಗಿ ಜನಮನ್ನಣೆ ಗಳಿಸುವ ಮಾತಾಡುತ್ತವೆ. ಕಥೆಯ ಕೊನೆಯಲ್ಲಿ ಮಕ್ಕಳಿಗೆ ತಿಳಿಸಲೆಂದೇ ತರುವ ಶಾಲಾ ಸನ್ನಿವೇಶಗಳು ಲೇಖಕರಲ್ಲಿ ಇರುವ ಮಕ್ಕಳ ಕಾಳಜಿಯ ಪ್ರತಿರೂಪವಾಗಿದೆ.

ಎರಡೂ ಕಥೆಗಳಲ್ಲಿ ಬರುವ ಊರುಗಳ ಇತಿಹಾಸದ ಕುರಿತು ಬರೆದಿರುವುದು ವಿಶೇಷ. ಎಲ್ಲರೂ ಒಮ್ಮೆ ಓದಬೇಕೆನಿಸುವ ಪುಸ್ತಕ.

‍ಲೇಖಕರು Admin

20 November, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading