ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಾವಿತ್ರಿ ಶ್ಯಾನಭಾಗ್ ಓದಿದ ‘ಹುಲಿವೇಷ’

ಸಾವಿತ್ರಿ ಶ್ಯಾನಭಾಗ್

*

ಪುಸ್ತಕ: ಹುಲಿವೇಷ -ಕತೆಗಳು

ಲೇಖಕರು :ವಿಠ್ಠಲ್ ಶೆಣೈ

ಬೆಲೆ: ೧೬೦

ಪುಟ: ೨೦೫

ಪ್ರಕಾಶನ: ಟೋಟಲ್ ಕನ್ನಡ

ನಾಡಿನ ಹೆಮ್ಮೆಯ ‘ಹುಲಿವೇಷ’ ಯಾರಿಗೆ ಗೊತ್ತಿಲ್ಲ.ಹುಲಿವೇಷಕ್ಕೆ ಬಣ್ಣ ಹಚ್ಚುವ ಪರಿಯನ್ನು ವರ್ಣಿಸುತ್ತಾ,ಭಾನು ಶೆಟ್ಟಿ ತನ್ನ ತಾತ ಸ್ಥಾಪಿಸಿದ ಹುಲಿವೇಷ ಸಂಘವನ್ನು ಮುನ್ನಡೆಸಿಕೊಂಡು ಸಾಗುತ್ತಾ ೭೫ ನೇ ವರ್ಷದ ಹುಲಿವೇಷದ ತಯಾರಿ ನಡೆಸುವ ಪರಿ,ಅದರ ನಡುವೆ ರಾಜ್ಯದ ಚುನಾವಣೆ ನಡೆದು ಪಕ್ಷಾಂತರಗೊಂಡಾರೆಂಬ ಹೆದರಿಕೆಯಲ್ಲಿ ರೆಸಾರ್ಟ್ ನಲ್ಲಿ ಬಂದಿಯಾಗಿರುವ ಎಮ್.ಎಲ್.ಎ ಗಳು,ಅವರ ಬಗ್ಗೆ ಕ್ಷಣಕ್ಣಣಕ್ಕೊಮ್ಮೆ ಚಾನೆಲುಗಳಲ್ಲಿ ಸುದ್ದಿ, ಅದನ್ನು ವೀಕ್ಷಿಸುವ ಭಾನುವಿನ ತಂಡ ಹೀಗೆ ನಡೆಯುತ್ತಾ ಸಾಗುವ ಕಥೆ ‘ಹುಲಿ ವೇಷ -ಕತೆಗಳು’ ಪುಸ್ತಕದಲ್ಲಿ ನಮ್ಮ ಮನಸೆಳೆಯುತ್ತದೆ.ಕಥೆಗಾರ ವಿಠ್ಠಲ ಶೆಣೈಯವರು ಈ‌ ಪುಸ್ತಕ ಬರೆದಿದ್ದಾರೆ.

   ಮಂಗಳೂರಿನ ದಸರಾ,ಅಲ್ಲಿಯ ಶಾರದೆ,ಹುಲಿವೇಷ ಇವನ್ನೆಲ್ಲಾ ನೋಡಲು ಎರಡು ಕಣ್ಣು ಸಾಲದು.ಹುಲಿವೇಷಕ್ಕಾಗಿ ತಾಲೀಮು,ಸಂಘ ಕಟ್ಟಲು ಸಿದ್ಧತೆ,ಒಗ್ಗಟ್ಟಿನಲ್ಲಿ ನೃತ್ಯ ಮಾಡುವ ಪರಿ,ಬಣ್ಣ ಹಚ್ಚಲು ತಯಾರಿ,ಅದಕ್ಕಾಗಿ ಹಣಸಂಗ್ರಹ,ಬಣ್ಣ ಹಚ್ಚುವಾಗ ಅಷ್ಟು ಹೊತ್ತು ನಿಲ್ಲುವ ತಾಳ್ಮೆ,(ಹಚ್ಚಿಕೊಳ್ಳುವವನಿಗೆ,ಅಷ್ಟೇ ಅಲ್ಲ ಹಚ್ಚುವವನಿಗೂ),ನಂತರ ಬಣ್ಣ ಹೋಗದಂತೆ ಬಾಳೆ ಎಲೆಯ ಮೇಲೆ ಮಲಗುವ ವ್ಯವಸ್ಥೆ, ಹೀಗೆ ಹುಲಿವೇಷದ ತಯಾರಿಯ ಕುರಿತೇ ಅಧ್ಯಯನ ನಡೆಸಿ ಓದುಗರಿಗೆ ತಿಳಿಸಿದ್ದಾರೆ.

   ಸಾಫ್ಟ್‌ವೇರ್ ಉದ್ಯೋಗಿಗಳ ಕಥೆ,ನಿದ್ರಾಹೀನತೆ ಯಿಂದ ಬಳಲುವವರ ಕಥೆ ಹೀಗೆ ಒಟ್ಟು ೭ಕಥೆಗಳನ್ನು ಹೊಂದಿರುವ ಈ‌ಪುಸ್ತಕದಲ್ಲಿ ಎಲ್ಲಾ ಕಥೆಗಳೂ ಓದಿಸಿಕೊಂಡು ಹೋಗುವುದರಲ್ಲಿ ಸಂಶಯವಿಲ್ಲ.ಸರ್ಪದೋಷವನ್ನು ಹೊಂದಿರುವ ವ್ಯಕ್ತಿಯೊಬ್ಬ ನಾಸ್ತಿಕ,ಸ್ವಪ್ರಯತ್ನದಲ್ಲಿ‌ ನಂಬಿಕೆ ಹೊಂದಿದ್ದು ಅದರಂತೆ ಸಾಗುತಿರಲು ಅವನ ವಿದೇಶಿ ಪ್ರಯಾಣ ರದ್ದುಗೊಳಿಸಿದ ನಾಗ ನಿಜವಾಗಿಯೂ ಅವನಿಗೆ ಸರ್ಪದೋಷ ನೆನಪಿಸಲು ಬಂದಿದೆ ಎಂದು ವಾದಿಸುವ ಹೆಂಡತಿ ಒಂದು ಕಡೆ,ದೇವರು ಇದ್ದರೆ ನನ್ನ ಕನಸನ್ನು ನನಸುಮಾಡಲು ಅಡ್ಡಬರುತ್ತಿರಲಿಲ್ಲ ಎಂದು ವಾದಿಸುತ್ತಾ ಸಾಗುವ ನಾಯಕ.ದೇವರು ಇದ್ದಾನೆಯೇ?ನಾಗದೋಷ ನಿವಾರಣೆಗೆ ಪೂಜೆಪುನಸ್ಕಾರಗಳು ಅನಿವಾರ್ಯವೇ? ಈ ಪ್ರಶ್ನೆಗಳಿಗೆ ಉತ್ತರವಿಲ್ಲದಿದ್ದರೂ ಯಾವುದೋ ಅಜ್ಞಾತ ಶಕ್ತಿ ನಮ್ಮನ್ನು ನಡೆಸುತ್ತಿರುವ ವಿಷಯವನ್ನು ಕಥೆಗಾರ ಎತ್ತಿಹಿಡಿಯುತ್ತಾರೆ.

     ಬಂಗಾರದ ಬಳೆ ಕೊಡಿಸಬೇಕೆಂಬ ಆಸೆಯಿಂದ ರಿಕ್ಷಾಚಾಲಕ ಕನಸು ಕಾಣುತ್ತಿದ್ದರೆ ಉಬರ್,ಓಲಾ ವ್ಯವಸ್ಥೆಯಿಂದ ಜನ ಕ್ಯಾಬ್ ಕೇಳುವ ಪರಿಸ್ಥಿತಿ ಬಂದಾಗ ಸಾಲ ಮಾಡಿ ಕಾರುಕೊಂಡರೆ ಲಾಭವಾದೀತೆ?ಆ ಹಣದಿಂದ ಚಿನ್ನ ಕೊಳ್ಳುವುದೋ?ಸಾಲ ತುಂಬುವುದೋ?ಜೀವನ ನಡೆಸುವುದೋ?ಬೆಂಗಳೂರಿನ ಟ್ರಾಫಿಕ್ ನಲ್ಲಿ ಕಾರು ಓಡಿಸುತ್ತಾ ನಿದ್ರೆ,ಹಸಿವು ಇವನೆಲ್ಲ ಮರೆಯಬೇಕೇನೋ?ಅವನ ಆರೋಗ್ಯದ ಗತಿಯೇನು?ಕುಟುಂಬದ ಕಥೆಯೇನು?ಇದರ ಸುತ್ತಲೂ ಕಥೆ ಹೆಣೆದಿದ್ದಾರೆ.

   ಹೀಗೆ ಸಾಗುತ್ತಾ ಸಾಗುವ ಕಥೆಗಳನ್ನು ಓದಿ ರಸದೌತಣ ಸಿಗುವುದರಲ್ಲಿ ಸಂಶಯವಿಲ್ಲ.

‍ಲೇಖಕರು avadhi

20 February, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading