ಸಾಲ ಮನ್ನಾ ಎಂಬ ತುಟಿತುಪ್ಪ!

ಅಪ್ಪ ಯಾವುದೋ ಕಾಲದಲ್ಲಿ ಎರಡೆಕರೆ ಬಗರ್ ಹುಕುಂ ಜಮೀನು  ಹಸನು ಮಾಡಿ ಗೇಯಲು ಆಗದೆ ಪೇಟೆ ಸೇರಿಕೊಂಡಿದ್ದ. ಪಲ್ಲ ರಾಗಿಗೆ ಗುತ್ತಿಗೆ ಕೊಟ್ಟು ಪೇಟೆಯಲ್ಲಿ ಗುತ್ತಿಗೆ ಜಾಡುಮಾಲಿಯಾಗಿ ದುಡಿಯುತ್ತಿದ್ದ ಅಪ್ಪ ಸತ್ತು ೧೦ ವರ್ಷಗಳ ನಂತರ ಒಂದು ಸುತ್ತು ಜಮೀನು ನೋಡಿಕೊಂಡು ಬಂದ ನನ್ನಣ್ಣ ಜಮೀನು ಮಾಡುವ ಆಸೆ ಗೆ ಬಿದ್ದು ಗುತ್ತಿಗೆ ಬಿಡಿಸಿಕೊಂಡು ಗೇಯಲು ನಿಂತ.

ಅವನಿಗೂ ಆಸೆ ಇತ್ತು ತಾನು ಜಮೀನ್ದಾರ ಎಂದು ಕರೆಸಿಕೊಳ್ಳುವುದು. ಹೇಗೂ ಮಳೆಯಾಶ್ರಿತ ಭೂಮಿ ಅದು, ಬೇಸಾಯ ಮಾಡಿಯೇ ಸಿದ್ಧ ಎಂಬ ಹುಮ್ಮಸ್ಸಿನಿಂದ ಭೂಮಿಗೆ ಮುತ್ತಿಟ್ಟು ಮೈದಡವಿ ಅಪ್ಪನ ನೆನಪಿನಲ್ಲಿ ನೇಗಿಲು ಹೂಡಿದ್ದಾಯಿತು.

ಒಂದು ಬದಿಗೆ ಮೆಕ್ಕೆ ಜೋಳ, ಮತ್ತೊಂದು ಬದಿಗೆ ರಾಗಿ ಹಾಕಿ ಮನೆ-ಮಕ್ಕಳೆಲ್ಲಾ ಓಡಾಡಿದೆವು ಸಡಗರದಿಂದ. ಎರಡು ವರ್ಷಕ್ಕೆ ನಮ್ಮ ಉತ್ಸಾಹ, ಹುಮ್ಮಸ್ಸು ಎಲ್ಲಾ ಬತ್ತಿಹೋಗಿತ್ತು. ನಷ್ಟದ ಬಾಬತ್ತೇ ತಲೆ ಮೇಲಿತ್ತು. ಬಿತ್ತ ಬೀಜವೂ ಕಳಪೆ- ಬೆಳೆದ ಬೆಳೆಯ ಬೆಲೆಯೂ ಕಳಪೆಯಾಗಿ ಬಂಡವಾಳವೂ ಉಳಿಯದೆ ಬರಿಗೈ ನೋಡಿಕೊಳ್ಳುವಂತಾಗಿತ್ತು.

ಜಮೀನು ಮತ್ತೆ ಗುತ್ತಿಗೆ ಕೊಟ್ಟು ಮುಖ ತಿರುಗಿಸಿಕೊಂಡೆವು. ಇದು ಒಕ್ಕಲುತನದ ಸಣ್ಣ ಅನುಭವದ ಮಾತಷ್ಟೇ.

ಒಂದು ಉತ್ಪನ್ನಕ್ಕೆ ಮಾರುಕಟ್ಟೆಯೇ ಇಲ್ಲದೆ ಗೊಬ್ಬರ, ಔಷಧ, ಬೀಜ ಎಲ್ಲವೂ ಬಹುರಾಷ್ಟ್ರೀಯ ಕಂಪನಿಗಳ ಗುತ್ತಿಗೆಯಾಗಿರುವಾಗ ಭಾರತದ ರೈತ ವಸಾಹತುಶಾಹಿಯ ಸರಕಾಗಿ  ಉಳಿದಿದ್ದಾನೆಯೇ ಹೊರತು, ನಿಜಾರ್ಥದ ಅನ್ನದಾತನಾಗಿ ಉಳಿದಿಲ್ಲ. ಅವನು ಜಾಗತಿಕ ಪ್ರೇರಿತ ಶೋಷಣೆಗೆ, ದೇಶಿಯ ರಾಜಕಾರಣದ ಪಗಡೆಯಾಟಕ್ಕೆ ದಾಳವಾಗಿದ್ದಾನೆ ಅಷ್ಟೇ.
ಆದರೆ ಕೃಷಿ ಸಂಬಂಧಿ ಉಪವೃತ್ತಿ/ ಸಹವೃತ್ತಿಗಳಲ್ಲಿ ನೇರಾನೇರ ಈ ರೀತಿಯ ದಾಳಗಳಾಗಿ ಸೋತು ಸೊಪ್ಪಾಗಿರುವುದು ಕಡಿಮೆ, ಅಥವಾ ಇಲ್ಲವೆಂದರೂ ಬಹುತೇಕ ತಪ್ಪಿಲ್ಲ.

ಉದಾಹರಣೆಗೆ ಹೈನೋದ್ಯಮ. ಹೈನೋದ್ಯಮ ಹೇಗೆ ಲಾಭದಲ್ಲಿದೆ? ಹೈನುಗಾರರು ಹೇಗೆ ನೆಮ್ಮದಿಯಿಂದ ಬದುಕು ಸಾಗಿಸುತ್ತಿದ್ದಾರೆ? ಯಾಕೆ ಹಸು- ಎಮ್ಮೆ ಸಾಕಿದವರಿಗೆ ಆರ್ಥಿಕ ಸಂಕಷ್ಟ ಬಂದಿಲ್ಲ? ಇದನ್ಯಾಕೆ ನಮ್ಮ ವ್ಯವಸ್ಥೆ ಯೋಚನೆ ಮಾಡುವುದಿಲ್ಲ.
*

ಶಿವರಾಮ ಕಾರಂತರ ‘ಚೋಮ’ ನೆನಪಿರಬೇಕು. ತನ್ನ ಜೀವನದಲ್ಲಿ  ಗೇಣಿದಾರನಾಗದ ತಾನು ಒಂದಿಷ್ಟು ಭೂಮಿಗೆ ಮಾಲೀಕ ಆಗಬೇಕು ಎನ್ನುವ ಕನವರಿಕೆ ಜೀವನದುದ್ದಕ್ಕೂ ಸಾಕಾರಗೊಳ್ಳಲಿಲ್ಲ. ಅದಕ್ಕೆ ಕುಡಿದು ಕುಡಿದು… ರಾತ್ರಿ ಇಡೀ ದುಡಿ ನುಡಿಸಿ ಕೊನೆ ಉಸಿರು ಎಳೆದೇ ಬಿಟ್ಟ.

ಎಂತಹ ಅದ್ಭುತ ಕತೆ, ವಾಸ್ತವಕ್ಕೆ ಎಷ್ಟು ಹತ್ತಿರವಾಗಿದೆ. ದೇಶದ ಯಾವುದೇ ಮೂಲೆಯಲ್ಲಿ ಹೋದರೂ ಅರ್ಧ ಎಕರೆಯಷ್ಟಾದರೂ ಕೃಷಿ ಭೂಮಿಯ ಪಹಣಿ ನನ್ನ ಹೆಸರಿಗೆ ಇರಬೇಕು ಎನ್ನುವುದು ಎಲ್ಲಾ ಭೂ ರಹಿತರ ಬಯಕೆ. ರಾಜ್ಯದಲ್ಲಿ ಭೂ ಮಾಲೀಕರಿಗಿಂತ ಭೂರಹಿತರ ಪ್ರಮಾಣವೇ ಹೆಚ್ಚಿದೆ. ಆದರೆ ಭೂಮಾಲೀಕರು ಸಾಲದ ಶೂಲಕ್ಕೆ ಬೆದರಿ ಆತ್ಮಹತ್ಯೆಗೆ ತುತ್ತಾಗುತ್ತಿದ್ದಾರೆ.

ಭೂ ಮಾಲೀಕ ಕೃಷಿಕನಿಗೆ ಅಂತಿಮ ಆಯ್ಕೆ ಆತ್ಮಹತ್ಯೆ ಏಕಾಗುತ್ತದೆ? ಎಂಬ ಪ್ರಶ್ನೆ ಎಡಬಿಡದೆ ಎದುರಾಗುವುದು ಸಹಜ.
ಇದಕ್ಕೆ ಉತ್ತರ ; ಪ್ರಗತಿಯ ಮೇಲಾಟದಲ್ಲಿ ರೂಢಿಸಿಕೊಂಡಿರುವ ‘ಬೇಡ’ದ ಉಪದ್ಯಾಪಗಳು. ಬೇಕಾದ್ದು ಒಂದೂ ಇಲ್ಲ ಇಲ್ಲಿ!

ಅದಕ್ಕೆ ನಮ್ಮ ವ್ಯವಸ್ಥೆಯ ನೂರಾರು ಲೋಪ ದೋಷಗಳೇ ಕಾರಣವಾಗುತ್ತವೆ. ಯಾವ ಬೆಳೆಗೆ ಸಮರ್ಪಕ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಫಿಸಲಾಗಿದೆ. ಮಾರುಕಟ್ಟೆ ಇದ್ದರೂ ನ್ಯಾಯಯುತ ಬೆಲೆ ಎಲ್ಲಿ ನಿಗದಿಯಾಗುತ್ತದೆ? ಬಹುತೇಕ ಕೃಷಿ ಉತ್ಪನ್ನಗಳು ಮಧ್ಯವರ್ತಿಗಳ ಪಾಲಾಗುತ್ತಿದೆ. ಇದರ ಸುಧಾರಣೆ ಕ್ರಮದ ಬಗ್ಗೆ ಯೋಚಿಸದ ಸರ್ಕಾರಗಳು ರೈತ ಸಾಲ ಮನ್ನಾದಂತಹ ಅಪ್ರಯೋಜಕ ಜನಪ್ರಿಯ ಕಾರ್ಯಕ್ರಮವನ್ನು ಏಕೆ ರೂಪಿಸಿಕೊಳ್ಳುತ್ತಿವೆ.

ಒಬ್ಬ ಭೂ ಮಾಲೀಕನ ಆತ್ಮ ವಿಶ್ವಾಸವನ್ನು ಹಾಳು ಮಾಡುವ ನಿಟ್ಟಿನಲ್ಲಿ ಈ ಸಾಲ ಮನ್ನಾ ಜನಪ್ರಿಯ ಕಾರ್ಯ ಯೋಜನೆ ಎಂದು ನನಗೆ ಗೋಚರಿಸುತ್ತದೆ. ಈ ಮೂಲಕ ಕೃಷಿಕನನ್ನು ಮತ್ತಷ್ಟು ಮಾನಸಿಕವಾಗಿ ಗುಲಾಮನನ್ನಾಗಿ ಮಾಡಲಾಗುತ್ತಿದೆ.

ಕಳೆದ ಐದು ವರ್ಷಗಳಲ್ಲಿ ಕರ್ನಾಟಕದಲ್ಲಿ  ೩೫೧೫ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇತ್ತೀಚೆಗಷ್ಟೇ  ಸರ್ಕಾರ ಸಹಕಾರ ಸಂಘಗಳಲ್ಲಿನ ೫೦ ಸಾವಿರವರೆಗಿನ ಕೃಷಿ ಸಾಲವನ್ನು ಮನ್ನಾ ಮಾಡಿತ್ತು. ಈಗ ಅದನ್ನು ಮತ್ತಷ್ಟು ವಿಸ್ತರಿಸಿ ರಾಷ್ಟ್ರೀಯ ಬ್ಯಾಂಕುಗಳ ಸಾಲವನ್ನು ಮನ್ನಾ ಮಾಡುವ ಯೋಜನೆ. ಸಂಕಷ್ಟದಲ್ಲಿ ಇರುವ ರೈತರನ್ನು ಕಾಪಾಡಲು ಒಳ್ಳೆಯ ಯೋಜನೆ ಎಂದು ತಕ್ಷಣಕ್ಕೆ ಅನ್ನಿಸಿತ್ತಾದರೂ ‘ ಅದು ತಕ್ಷಣಕ್ಕೆ’ ಮಾತ್ರ, ನಿಜವಾದ ಸಮಸ್ಯೆಯ ಪರಿಹಾರಕವಲ್ಲ ಎಂದು ವಿದಿತವಾಗುತ್ತದೆ.

ನಿರಂತರವಾಗಿ ಸಾಲ ಶೂಲದಲ್ಲಿ ನಲುಗಿರುವ ಅವನಿಗೆ ಶಾಶ್ವತ ಋಣ ಮುಕ್ತನಾಗುವ ಯೋಜನೆಗಳು, ಯೋಚನೆಗಳು ಸರ್ಕಾರಗಳ ಜನಪ್ರಿಯ ಬತ್ತಳಿಕೆಯಲ್ಲಿ ಇಲ್ಲ. ಜಾಗೃತಿಗೊಳಿಸಬೇಕಾದ ಪ್ರಭುತ್ವ ತಾನೇ ವಿಸ್ಮೃತಿಯಲ್ಲಿದೆ. ನಿಜವಾದ ಸಮಸ್ಯೆ- ಪರಿಹಾರದ ಬಗ್ಗೆ ತಿಳಿದುಕೊಳ್ಳುವ ಯತ್ನ ಮಾಡದಿರುವುದೇ  ವ್ಯವಸ್ಥೆಯ ಬಹುದೊಡ್ಡ ಲೋಪ.

ರೈತ ಯಾವುದಕ್ಕೆ ಸಾಲ ಮಾಡಿದ. ಏಕೆ ಅವನಿಗೆ ರಸಗೊಬ್ಬರ, ರಸಾಯನಿಕ ಉತ್ಪನ್ನಗಳ ವ್ಯಸನಿಯನ್ನಾಗಿ ರೂಪಿಸಲಾಗಿದೆ. ಬೀಜೋತ್ಪಾದನೆಯಲ್ಲಿಯೂ ಅಸಹಾಯಕನಾದದ್ದು ಏಕೆ.. ದುಬಾರಿ ಬೆಲೆಯಲ್ಲಿ ಬಿತ್ತನೆ ಬೀಜದಿಂದ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕವನ್ನು ಖರೀದಿಸುವ ಅನಿವಾರ್ಯತೆ ಹೇಗೆ ಸೃಷ್ಟಿಯಾಯಿತು. ಅವುಗಳ ಉತ್ಪಾದಕ ಬಹುರಾಷ್ಟ್ರೀಯ ಕಂಪನಿಗಳು ಮಾತ್ರ ಮತ್ತಷ್ಟು ಶ್ರೀಮಂತವಾಗುತ್ತಾ ಬೆಳೆದರೆ ಅವುಗಳನ್ನು ಬೆಳೆಸುವ ರೈತನೇಕೆ ಬಡವನಾಗುತ್ತಿದ್ದಾನೆ? ಇಂತಹ ಆರ್ಥಿಕ ಮತ್ತು ವೈಜ್ಞಾನಿಕ ಸತ್ಯಗಳನ್ನು ಏಕೆ ನಮ್ಮ ಸರ್ಕಾರಗಳು ಅರ್ಥಮಾಡಿಕೊಳ್ಳುವುದಿಲ್ಲ.

ಬೇಕಾಬಿಟ್ಟಿಯಾಗಿ ನಡೆದುಕೊಳ್ಳುವುದರಿಂದ ಸಂಕಷ್ಟ ಪರಿಹಾರವಾಗಿ ನಾಡು ಸುಭಿಕ್ಷ ವಾಗಲು ಹೇಗೆತಾನೆ ಸಾಧ್ಯ? ಕೃಷಿ ಸಾಲಮನ್ನಾದಿಂದ ಆಗುವ ಪ್ರಯೋಜನ ಬ್ಯಾಂಕುಗಳ ಸಾಲದಿಂದ ಮುಕ್ತಿ ಸಿಗಬಹುದೇ ಹೊರತು ಬೇರೆ ಇನ್ನಾವ ಲಾಭವೂ ಸಾಧ್ಯವಿಲ್ಲ.

ರೈತ ಸಂಘಗಳು ಸಾಲಮನ್ನಾ ಎಂಬ ತುಟಿತುಪ್ಪವನ್ನು ಖಡಾಖಂಡಿತವಾಗಿ ನಿರಾಕರಿಸಿ ರೈತನ ಬದುಕಿಗೆ ಭದ್ರವಾದ, ಶಾಶ್ವತವಾದ ಪರಿಹಾರ ಕೇಳುವಲ್ಲಿ ಬೆನ್ನು ತೋರಿಸಿ ಯಾವುದೋ ಕಾಲವಾಗಿದೆ. ಅವೀಗ ರಾಜಕೀಯ ಪಡಸಾಲೆಯ ಕರೆಗಂಟೆಗಳಾಗಿವೆ. ಡಾ. ಸಿದ್ದನಗೌಡ ಪಾಟೀಲ್ ಹೇಳಿದಂತೆ ಇಂದು ರೈತ ಸಂಘಟನೆಗಳಿವೆ. ಚಳವಳಿಗಳಿಲ್ಲ.
ಅಷ್ಟಕ್ಕೂ ಸಾಲವನ್ನು ಮನ್ನಾ ಮಾಡಿಯೇ ತೀರುತ್ತೇನೆ ಅದು ನನ್ನ ಚುನಾವಣೆ ಪೂರ್ವ ಒಡಂಬಡಿಕೆ ಎಂದು ಸರ್ಕಾರ ತನ್ನ ಬದ್ಧತೆಯನ್ನು ಪ್ರದರ್ಶಿಸಬಹುದು. ಜನಾಪೇಕ್ಷೆ ಸಾಲ ಮನ್ನಾ ಮಾಡಬೇಕೆಂದಿದೆ. ಅದಕ್ಕೆ ನಾನು ಮಾಡುತ್ತೇನೆ ಎನ್ನುವ ಸಿದ್ಧ ಉತ್ತರ ಕೊಡಬಹುದು.

ಅದರಂತೆ ಸದ್ಯ ರೈತರ ಸಾಲ ೫೫,೦೦೦ ಕೋಟಿ ರೂಪಾಯಿಗಳನ್ನು ಮನ್ನಾ ಕೂಡ ಮಾಡಬಹುದು. ಅದರ ನಂತರ ಉಂಟಾಗುವ ಆರ್ಥಿಕ ಹೊರೆಯನ್ನು ನಿಭಾಯಿಸುವ ಲಾಗಾಟ ಒಂದು ಕಡೆ ! ಇದಕ್ಕೆ ‘ಅರ್ಥ’ ಪಂಡಿತರೇ ಉತ್ತರಿಸಬೇಕು.   ಉತ್ತರ ಇಲ್ಲ! ಇದೊಂದು ಯಥಾಪ್ರಕಾರ ರಾಜಕೀಯ ಆಟದಂಗಳದ ಅಪ್ರಾಯೋಗಿಕ ಯೋಜನೆ.

ಇಂಥವುಗಳನ್ನು ಏಕೆ ರಾಜಕೀಯ ಪಕ್ಷಗಳು ಗಂಭೀರವಾಗಿ ವ್ಯವಸ್ಥಿತವಾಗಿ ವೈಜ್ಞಾನಿಕ ನೆಲೆಗಟ್ಟಿನಲ್ಲಿ ತರಲು ಯೋಚಿಸುವುದಿಲ್ಲ. ಈ ಹಿಂದೆ ಲೋಕಸಭೆ ಚುನಾವಣೆ ವೇಳೆ ಪ್ರಧಾನಿ ಮೋದಿ ಅವರು ಕಪ್ಪು ಹಣ ತಂದು ತಲಾ ೧೫ ಲಕ್ಷ ಹಂಚುತ್ತೇನೆ ಎನ್ನುವ ಅರ್ಥಹೀನ ಹೇಳಿಕೆಗಿಂತ ಇದು ಭಿನ್ನವೆನಿಸದು. ಸರ್ಕಾರ ಏನಾದರೂ ಸರ್ಕಸ್ ಮಾಡಿ ಸಾಲ ಮನ್ನಾ ಮಾಡಿತು ಎಂದಿಟ್ಟುಕೊಂಡರೆ ಅದಕ್ಕೆ ಪರ್ಯಾಯ ಆರ್ಥಿಕ ಪರಿಸ್ಥಿತಿ ರೂಪಿಸಿಕೊಳ್ಳುವ ಯೋಜನೆ ಇದೆಯೇ…
ಅಥವಾ ಮತ್ತೆ ಪ್ರಜೆಗಳಿಗೆ ನಾನಾ ಸುಂಕದ ಸಂಚಿಯ ಬಳುವಳಿಯೇ…

ಇಂತಹ ಜನಪ್ರಿಯ ಯೋಜನೆಗಳ ಫಲಾನುಭವಿಗಳಾದರೂ ಯಾರಾಗುತ್ತಾರೆ? ಆಗಿಂದಾಗ್ಗೆ ಇಂತಹ ಯೋಜನೆಗಳನ್ನು ಧಾರೆ ಎರೆದರೆ ಅದರ ಫಲಾನುಭವಿಗಳು ಯಾರಾಗುತ್ತಾರೆ? ಅದರಲ್ಲಿ ಗೇಣಿ ಕೊಟ್ಟು ಲೆಕ್ಕದ ಬುಕ್ಕಿನಲ್ಲಿ ರೈತರಾಗಿ ಉಳಿದಿರುವ ಭೂಮಾಲೀಕರ ಪಾಲು ಎಷ್ಟು? ಈ ಹಿಂದೆ ಯಾವ ಯಾವ ರೈತರು ಸರ್ಕಾರದ ಸಾಲ ಮನ್ನಾ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಗೇಣಿದಾರ ರೈತನಿಗೆ ಆಗಿರುವ ಕಷ್ಟ? ನಷ್ಟಗಳೇನು? ಇಂತಹ ಸರಮಾಲೆಯ ಪ್ರಶ್ನೆಗಳಿಗೆ ಯಾವ ಉತ್ತರವನ್ನೂ ಕಂಡುಕೊಳ್ಳದೆ ಸಾಲ ಮನ್ನಾ ಮಾಡುವುದರಿಂದ ಕೇಂದ್ರ ಸರ್ಕಾರ ನೋಟು ರದ್ಧತಿಯಿಂದ ಉಂಟುಮಾಡಿದ ಆರ್ಥಿಕ ಸಂಕಷ್ಟವನ್ನು ಮೀರಿ ರಾಜ್ಯದ ಬೊಕ್ಕಸ ನಡುಗಬೇಕಾಗುತ್ತದೆ. ಬರಿದಾದ ಬೊಕ್ಕಸದಿಂದ ಮತ್ತೆ ಯಾವ ಜನಪರ ಕಾರ್ಯ ರೂಪಿಸಲು ಸಾಧ್ಯ?..

ಮುಖ್ಯಮಂತ್ರಿ ಕುಮಾರಸ್ವಾಮಿ ಅವರಲ್ಲಿ ಈ ಎಲ್ಲಾ ಪ್ರಶ್ನೆಗಳಿಗೆ  ಉತ್ತರವೆಂಬಂತೆ ನೀಲಿ ನಕ್ಷೆಯೊಂದು ಇರಬಹುದು. ಅದು ಕತ್ತಲಿಗಿಡಿದ ಮಿಣುಕು ದೀಪದ  ಹೊಳಹು ಎಂದೇ ಭಾವಿಸುತ್ತೇನೆ. ಆದರೆ  ಕಾರ‍್ಯರೂಪಕ್ಕೆ ತರುವುದು ಕುಮಾರಸ್ವಾಮಿ ಅವರಿಗೆ ಸವಾಲೇ ಸರಿ. ಸವಾಲುಗಳಿಗೆ ದಿಟ್ಟ ಉತ್ತರ ಕಂಡುಕೊಳ್ಳದಿದ್ದರೆ  ಕುಮಾರಸ್ವಾಮಿ ಅವರು ಹಾಗೆ ಬಂದು ಹೀಗೆ ಹೋದ ಮುಖ್ಯಮಂತ್ರಿಗಳ ಸಾಲಿನಲ್ಲಿ ಮಾತ್ರ ಉಳಿದು ಬಿಡುತ್ತಾರೆ.

ಕಳೆದ ನಾಲ್ಕಾರು ದಿನಗಳಿಂದ ರೈತರು  ದಲ್ಲಾಳಿ  ಮುಕ್ತ ಮಾರುಕಟ್ಟೆಯೊಂದರಲ್ಲಿ  ಫಸಲು ಮಾರಿ ಮಡಿಲು ತುಂಬಾ ದುಡ್ಡು, ಕಣ್ಣ ತುಂಬಾ ಖುಷಿ ತುಂಬಿಕೊಂಡು ಮನೆಗೆ ಹೋಗುತ್ತಿರುವ. ಮನೆಯೊಳಗೆ ಸೂರ ಜಂತಿ ಹೂ ಬಿಟ್ಟ ಬಳ್ಳಿಯಂತಾಗಿ, ದನಕರುಗಳ ಮಿಣಿ ಚಿನ್ನದ ಸರವಾಗಿ ಹೊಳೆಯುತ್ತಿರುವ ಕನಸೆ ಬೀಳುತ್ತಿದೆ…

ಇದು ನನಸಾಗಲಿ.

‍ಲೇಖಕರು avadhi

June 4, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. ಶ್ರೀರಂಗ ಯಲಹಂಕ

    ಸಣ್ಣ ಮತ್ತು ಮಧ್ಯಮ ವರ್ಗದ ರೈತರ ಸಮಸ್ಯೆಗಳನ್ನು ಕೇವಲ ಭಾವನಾತ್ಮಕವಾಗಿ ನೋಡುವುದರಿಂದ ಪರಿಹಾರ ಸಾಧ್ಯವಿಲ್ಲ. ‘ಅವಧಿಯಲ್ಲಿ’ ಹೋದವಾರ ಸಾಲಮನ್ನಾ ಬಗ್ಗೆ ಒಂದು ಲೇಖನ ಪ್ರಕಟವಾಗಿತ್ತು. ಅದಕ್ಕೆ ನಾನು ಬರೆದ ಪ್ರತಿಕ್ರಿಯೆಯನ್ನು ಪುನಃ ವಿಸ್ತೃತವಾಗಿ ಬರೆಯುವುದು ಸರಿಯಲ್ಲ. ನೀರಾವರಿ ಇಲ್ಲದ, ಮಳೆಯೂ ತೀರಾ ಕಡಿಮೆ ಬೀಳುವ ಕೋಲಾರದಂತಹ ಪ್ರದೇಶಗಳಲ್ಲಿ ಇರುವ ನೀರನ್ನೇ ಬಳಸಿ ಯಶಸ್ವಿಯಾದ ರೈತರ ಬಗ್ಗೆ ಸಂದರ್ಶನಗಳು ಟಿವಿಯಲ್ಲಿ, ಲೇಖನಗಳು ಪತ್ರಿಕೆಗಳಲ್ಲಿ ಆಗಾಗ ಬರುತ್ತಿರುತ್ತವೆ. ಅಂತಹವರನ್ನು ನಮ್ಮ ಗ್ರಾಮಗಳ ಪಂಚಾಯತಿ ಸದಸರೋ ಇಲ್ಲವೆ ಸ್ವತಃ ರೈತರೋ ಭೇಟಿಮಾಡಿ ವಿಷಯ ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು. ಜತೆಗೆ ತಮಗೆ ಇದ್ದಷ್ಟೇ ಜಮೀನಿನಲ್ಲಿ ಅವರ ಹಿರಿಯರು ಅದನ್ನೇ ರೂಢಿಸಿಕೊಂಡು ಸಂಸಾರ ನಡೆಸಿದ್ದರಲ್ಲ; ನಮಗೇಕೆ ಆಗುತ್ತಿಲ್ಲ ಎಂದು ಸ್ವಲ್ಪ ಯೋಚಿಸಬೇಕು.

    ಪ್ರತಿಕ್ರಿಯೆ
  2. ಶ್ರೀರಂಗ ಯಲಹಂಕ

    ಎಂ.ಎಸ್‌. ಶ್ರೀರಾಮ್ ಅವರ ಆ ಎರಡೂ ಲೇಖನಗಳನ್ನು ನಾನು ಓದಿರುವೆ. ರೈತರ ಸಾಲಮನ್ನಾ‌ ಬಗ್ಗೆ ತುಂಬಾ ಚೆನ್ನಾಗಿ ಬರೆದಿದ್ದಾರೆ. ಅದು ನಮ್ಮ ರೈತರಿಗೆ, ರಾಜಕೀಯದವರಿಗೆ ಅರ್ಥವಾಗಿ ಅದರಂತೆ ನಡೆದರೆ ಯಾವ ಜಂಜಾಟವೂ ಇರುವುದಿಲ್ಲ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: