ಸಾಮಾಜಿಕ ಎಚ್ಚರದ ಕೈಗನ್ನಡಿ 'ಅತೀತ' – ಎನ್ ಎಸ್ ಶ್ರೀಧರ ಮೂರ್ತಿ

DSC_2053

– ಎನ್ ಎಸ್ ಶ್ರೀಧರ ಮೂರ್ತಿ

ಸಾಮಾಜಿಕ ರಂಗದಲ್ಲಿ ಸಂವೇದನಾಶೀಲತೆ ಕಳೆದು ಹೋಗುತ್ತಿದೆ ಎನ್ನುವ ಆತಂಕ ಕಾಡುತ್ತಿರುವಂತೆಯೇ ಸಮುದಾಯದ ಸಾಕ್ಷಿಪ್ರಜ್ಞೆಯಾಗ ಬೇಕಿದ್ದ ಮಾಧ್ಯಮ ಕೂಡ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ ಎನ್ನುವ ಆತಂಕ ನಮ್ಮನ್ನು ಕಾಡುತ್ತಿದೆ. ಈ ಹೊತ್ತಿನಲ್ಲಿ ತಮ್ಮ ಚಿಂತನಶೀಲ ನಾಟಕಗಳಿಂದ ಗಮನ ಸೆಳೆಯುತ್ತಾ ಬಂದಿರುವ ಎಸ್.ಎನ್.ಸೇತೂರಾಂ ಅವರ ಹೊಸ ನಾಟಕ ಅತೀತ ಮಹತ್ವನ್ನು ಪಡೆದು ಕೊಳ್ಳುತ್ತದೆ. ನಾಟಕ ಪ್ರಸಿದ್ಧ ವಕೀಲನೊಬ್ಬನ ಆತ್ಮಕಥೆಯನ್ನು ಬರೆಯುತ್ತೇನೆ ಎಂದು ತರುಣಿಯೊಬ್ಬಳು ಬರುವುದರೊಂದಿಗೆ ಅನಾವರಣಗೊಳುತ್ತದೆ. ಸಾಮಾಜಿಕ ಬದುಕಿನಿಂತ ನಾನು ನಿವೃತ್ತನಾಗಿದ್ದೇನೆ ಎನ್ನುವ ಅವನು ಆತ್ಮಕಥೆಯ ಮೂಲಕ ಬದುಕನ್ನು ಬಿಚ್ಚಿಟ್ಟುಕೊಳ್ಳುವುದನ್ನು ಬಯಸುವುದಿಲ್ಲ. ಆದರೆ ತರುಣಿ ಬಿಡುವುದಿಲ್ಲ ಕೆಣಕುತ್ತಾಳೆ, ಕಾಡುತ್ತಾಳೆ ಆ ಮೂಲಕವೇ ಒಪ್ಪಿಸುತ್ತಾಳೆ. ಇಲ್ಲಿಂದ ಮುಂದೆ ವಕೀಲನ ಜೀವನದ ಅನಾವರಣ ಆರಂಭವಾಗುತ್ತದೆ. ಈ ತಂತ್ರ ನಾಟಕಕ್ಕೆ ವ್ಯಕ್ತಿ ಮತ್ತು ಸಮುದಾಯದ ಆಯಾಮವನ್ನು ಏಕಕಾಲಕ್ಕೆ ತಂದು ಕೊಡುತ್ತದೆ.
ವಕೀಲ ಆತ್ಮಕಥೆ ಹೇಳುವಾಗ ಸಾಕ್ಷಿಯೊಬ್ಬನನ್ನು ಜೊತೆಗಿರಿಸಿಕೊಳ್ಳುತ್ತಾನೆ. ಆರಂಭದಲ್ಲಿ ಆತ ವಿದೂಷಕನಂತೆ ನಂತರ ವಕೀಲನ ಆತ್ಮಪ್ರಶಂಸೆಯ ವಿಸ್ತರಣೆಯಂತೆ ಭಾಸವಾದರೂ ಕ್ರಮೇಣ ವಕೀಲನ ಸುಂದರ ಸುಳ್ಳುಗಳ ಬಲೂನಿಗೆ ಚುಚ್ಚಿಕೊಳ್ಳುವ ಗುಂಡುಸೂಜಿಯಂತಾಗುತ್ತಾನೆ. ರೋಚಕವಾಗಲಿ ಎಂದು ಸಾಕ್ಷಿ ಹೇಳುವ ಸುಳ್ಳು ಕಥೆಗಳೇ ವಕೀಲನ ಸತ್ಯವನ್ನು ಅನಾವರಣಗೊಳಿಸುತ್ತವೆ. ಈ ಪ್ರಸಿದ್ಧ ವಕೀಲ ಓದುವ ಆಸೆಯಿಂದ ತಾತ ಇರಿಸಿಕೊಂಡಿದ್ದ ದೇವಸ್ಥಾನದ ಒಡವೆಗಳನ್ನು ಕದ್ದು ಓಡಿದ್ದಾನೆ. ಮೊಮ್ಮಗ ಕಳ್ಳನಾದ ಎನ್ನುವ ನೋವಿನಿಲ್ಲಿ ತಾತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದರೆ ತಾತನ ಸಾವಿಗೆ ನಾನು ಕಾರಣನಾದೆ ಎನ್ನುವ ಪಾಪಪ್ರಜ್ಞೆ ವಕೀಲವನ್ನು ಕಾಡುವುದಿಲ್ಲ ಬದಲಾಗಿ ತಾತ ಕಾನೂನಿನ ಮೂಲಕ ಅದನ್ನು ಎದುರಿಸ ಬಹುದಾಗಿತ್ತು ಎಂದು ವಕಾಲತ್ತು ಮಂಡಿಸುತ್ತಾನೆ. ಇದು ಇಂದಿನ ರಾಜಕಾರಣಿಗಳ ಮನಸ್ಥಿತಿಗೆ ರೂಪಕದಂತೆ ಬೆಳೆಯುತ್ತದೆ. ಆತ್ಮಸಾಕ್ಷಿಯನ್ನು ಕಳೆದುಕೊಂಡು ಆತ್ಮರತಿಯಲ್ಲಿ ಮುಳುಗಿ ಹೋಗುವುದು ಸಹಜ ಎನ್ನುವಂತಾಗಿರುವ ಸ್ಥಿತಿಯಲ್ಲಿನ ಮೌಲ್ಯಪಲ್ಲಟಗಳ ಬಗ್ಗೆ ಈ ಆಯಾಮ ಬೆಳಕನ್ನು ಚೆಲ್ಲುತ್ತದೆ. ಸಾಕ್ಷಿಗೇ ಈ ರಂಜಿತ ಅಯಾಮಗಳ ಪೊಳ್ಳತನದಲ್ಲಿ ತನ್ನ ಸ್ವಂತಿಕೆ ಕಳೆದುಹೋದ ಚಡಪಡಿಕೆ ಕಾಡಿ ಅಸ್ತಿತ್ವದ ಪ್ರಶ್ನೆಯಾಗಿ ಈ ಅಂಶ ಕಾಡಿದರೂ ಪ್ರಸಿದ್ಧ ವಕೀಲ ತಾನು ಸೃಷ್ಟಿಸಿಕೊಂಡ ಅಯಾಮಗಳಿಂದ ಕಿಂಚಿತ್ತೂ ವಿಚಲಿತನಾಗುವುದಿಲ್ಲ.
10987304_820619381367863_2818983957744397375_n
ಈ ಅಂಶ ನಾಟಕಕ್ಕೆ ಬಹಳ ಮುಖ್ಯವಾದ ಚಲನಶೀಲತೆ ಮತ್ತು ಬಹುತ್ವವನ್ನು ತಂದು ಕೊಡುತ್ತದೆ.
ವಕೀಲ ತನ್ನ ಜ್ಯೂನಿಯರ್ ಜೊತೆಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾನೆ. ಅವಳಿಗೆ ಮದುವೆ ಮಾಡಿ, ಮನೆ ಕಟ್ಟಿಕೊಟ್ಟು, ಮಕ್ಕಳ ಬೆಳವಣಿಗೆಗೆ ನೆರವಾಗಿರುವುದರಿಂದ ಇದು ತಪ್ಪಲ್ಲ ಎನ್ನುವುದು ಅವನ ವಾದ. ಅಷ್ಟೇ ಅಲ್ಲ ಹೀಗೆ ಅಕ್ರಮ ಸಂಬಂಧ ಇಟ್ಟುಕೊಳ್ಳುವುದು ಸ್ಟೇಟಸ್ ಕೂಡ ಎನ್ನುವ ವಾದ ಮಂಡಿಸುತ್ತಾನೆ. ಅವನ ಜ್ಯೂನಿಯರ್ ಇದರಿಂದ ತಾನು ಪಡುತ್ತಿರುವ ಸಂಕಟಗಳನ್ನು ಬಿಡಿಸಿಡುತ್ತಾಳೆ. ಸೌಂದರ್ಯ ತನಗೆ ಶಾಪವಾದದ್ದನ್ನು ನೋವಿನಿಂದಲೇ ಹೇಳಿಕೊಳ್ಳುತ್ತಾಳೆ. ಆದರೆ ವಕೀಲನ ಜೊತೆ ಅಕ್ರಮ ಸಂಬಂದ ಎನ್ನುವುದು ಆತ ಮೊಮ್ಮಗಳನ್ನು ಕಳೆದುಕೊಂಡ ನೋವಿನಿಂದ ನರಳುತ್ತಿರುವಾಗ ತನ್ನಲ್ಲಿನ ತಾಯಿ ಎಚ್ಚೆತ್ತು ಅವನನ್ನು ಸಮಾಧಾನ ಮಾಡಲು ಹೊರಟಾಗ ಅವನೊಳಗಿನ ಮೃಗ ಜಾಗೃತವಾಗಿದ್ದರಿಂದ ಆದ ಘಟನೆ ಎಂದು ಸಮರ್ಥಿಸಿಕೊಳ್ಳುತ್ತಾಳೆ. ಇಷ್ಟು ದಿನ ನೀನು ಮಲಗಿದ್ದು ನಿನ್ನ ತಾಯಿಯೊಡನೆ ಎಂದು ಅದನ್ನು ಆದರ್ಶದ ನೆಲೆಗೂ ಕರೆದುಕೊಂಡು ಹೋಗುತ್ತಾಳೆ. ಈ ಅಯಾಮ ಅಲ್ಲಿಯವರೆಗೂ ನಾಟಕ ರೂಪಿಸಿದ್ದ ಚಿಂತನಶೀಲತೆಯ ಗಹನತೆ ಚದುರಲು ಕಾರಣವಾಗುತ್ತದೆ. ಹೆಣ್ಣು ಇಂತಹ ಸಂಬಂಧಗಳಲ್ಲಿ ಪಡುವ ಅಸಹಾಯಕತೆಯನ್ನು ಸೇತೂರಾಂ ನಿರ್ಲಕ್ಷಿಸಿ ಬಿಡುತ್ತಾರೆ. ಆ ಮೂಲಕ ದೊರಕ ಬಹುದಾಗಿದ್ದ ಸ್ತ್ರೀವಾದಿ ನೆಲೆಗಳನ್ನು ಕಳೆದುಕೊಳ್ಳುತ್ತಾರೆ. ಹೆಣ್ಣು, ದೇವಿಯಾಗಿಯೂ ದೆವ್ವವಾಗಿಯೂ ಅಸ್ಥಿತ್ವವನ್ನು ಕಂಡು ಕೊಳ್ಳ ಬೇಕಾದ ಕ್ಲೀಷೆಯ ಮಾದರಿ ಇಲ್ಲಿ ಕೂಡ ಕಾಣಿಸುತ್ತದೆ. ವಕೀಲನ ಹೆಂಡತಿ ಅವನಿಗೆ ಸ್ಟೇಟಸ್ಗೆ ಧಕ್ಕೆಯಾಗಲಿರುವ ಗರ್ಭವನ್ನು ಐದನೇ ತಿಂಗಳಿನಲ್ಲಿ ತೆಗೆಸಿಕೊಳ್ಳಲು ಹೋಗಿ ಸಾವಿಗೀಡಾಗಿದ್ದಾಳೆ. ಈ ಅಂಶ ಅವನ ಹೊಣೆಗಾರಿಕೆಯ ಮೇಲೆ ಬೆಳಕು ಚೆಲ್ಲಿದರೂ ಅವಳು ತನ್ನ ಸ್ವಂತಿಕೆಯನ್ನು ಏಕೆ ಉಳಿಸಿಕೊಳ್ಳಲಿಲ್ಲ ಎನ್ನುವ ಪ್ರಶ್ನೆಯನ್ನು ಜೀವಂತವಾಗಿಡುತ್ತದೆ.
ನಾಟಕದ ಪ್ರಧಾನ ಚಾಲಕ ಶಕ್ತಿಯಾಗಿ ಕೆಲಸ ಮಾಡುವುದು ಆತ್ಮಚರಿತ್ರೆಯನ್ನು ದಾಖಲಿಸಲು ಬಂದು ಹುಡುಗಿಯ ಜೀವನದಲ್ಲಿಯೂ ವಕೀಲನಿಗೆ ಸಂಬಂಧಿಸಿದ ದುರಂತವೊಂದಿದೆ ಎನ್ನುವ ಅಂಶ. ವಕೀಲ ತನ್ನ 63 ವರ್ಷಗಳಲ್ಲಿ ಸೋತ ಏಕೈಕ ಕೇಸ್ ಅತ್ಯಾಚಾರಕ್ಕೆ ಒಳಗಾದ ಸುರಭಿ ಎನ್ನುವ ಹುಡುಗಿಯದು. ಅವನು ಪ್ರತಿಷ್ಠಿತರ ಮಕ್ಕಳಿಂದ ನಡೆದ ಈ ಅತ್ಯಾಚಾರದ ಆರೋಪದಿಂದ ಅವರನ್ನು ಪಾರು ಮಾಡುವ ಉದ್ದೇಶದಿಂದಲೇ ಕೇಸನ್ನು ಸೋತಿದ್ದಾನೆ. ಅದನ್ನು ಹೈಕೋರ್ಟ್  ಸುಪ್ರಿಂ ಕೋರ್ಟ್ ನವರೆಗೂ ತೆಗೆದುಕೊಂಡು ಹೋಗಿ ಸೋಲುವ ತನ್ನ ಉದ್ದೇಶವನ್ನು ಸಾಧಿಸಿಕೊಂಡಿದ್ದಾನೆ. ಇದರಿಂದ ಅವನಿಗೆ ‘ಸಾಮಾಜಿಕ ಸ್ಥಾನಮಾನಗಳೂ’ದೊರಕಿವೆ. ಇದು ನಮ್ಮ ಸಾಮಾಜಿಕ ಹೋರಾಟಗಳ ಪೊಳ್ಳುತನಕ್ಕೆ ರೂಪಕದಂತೆ ಕಾಣಿಸುವ ಸಮರ್ಥ ನೆಲೆಯಗಿದೆ. ಆತ್ಮ ಚರಿತ್ರೆ ದಾಖಲಿಸಲು ಬಂದ ಹುಡುಗಿ ಸುರಭಿಯ ಮಗಳು ಎನ್ನುವದಲ್ಲಿ ನಾಟಕ ಹೊಸ ನೆಲೆಯನ್ನು ತಲುಪುತ್ತದೆ.
ನಮ್ಮಲ್ಲಿ ಇಂದು ಕಂಡು ಬರುವ ಬಹಳಷ್ಟು ಆತ್ಮಚರಿತ್ರೆಗಳು ಸತ್ಯವನ್ನು ಮರೆಮಾಚಿದ ಸುಳ್ಳುಗಳ ವೈಭವೀಕರಣವೇ ಆಗಿರುವುದರಿಂದ ಇದರ ಅರ್ಥವ್ಯಾಪ್ತಿ ಗಮನಾರ್ಹವಾಗಿ ಹಿಗ್ಗುತ್ತದೆ. ಆತ್ಮವೇ ಇಲ್ಲದೆಡೆ ಆತ್ಮಚರಿತ್ರೆ ಹೇಗೆ ಮೂಡಿ ಬರುತ್ತದೆ ಎನ್ನವು ವ್ಯಂಗ್ಯ ನಾಟಕದ ಆಶಯ ಕೂಡ ಆಗಿದೆ. ನ್ಯಾಯಾಂಗ, ಶಾಸಕಾಂಗ, ಪತ್ರಿಕೋದ್ಯಮ ಎಲ್ಲವೂ ರಾಜಕಾರಣದಂತೆ ಆತ್ಮವಂಚನೆ ನೆಲೆಗಳೇ ಆಗಿ ಸಮಾಜದ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿರುವಾಗ ‘ಅತೀತ ಈ ಕುರಿತು ನಮ್ಮೊಳಗಿನ ಸಾಮಾಜಿಕ ಕಾಳಜಿಯನ್ನು ಎಚ್ಚರಿಸುವ ಪ್ರಾಮಾಣಿಕ ಪ್ರಯತ್ನವಾಗಿದೆ. ಅತೀತ ಎನ್ನುವುದು ಅಧ್ಯಾತ್ಮದ ನೆಲೆಯ ಶಬ್ದ. ಲೌಕಿಕ ಆಯಾಮಗಳೆಲ್ಲವನ್ನೂ ಮೀರಿದ ಅವಧೂತ ಸ್ಥಿತಿಯನ್ನು ಈ ಪದ ವರ್ಣಿಸುತ್ತದೆ. ನಾಟಕದಲ್ಲಿ ಈ ಮೀರುವ ಕ್ರಿಯೆ ಉನ್ನತಿಯ ಬದಲು ಪತನದ ಕಡೆ ಇದೆ. ಇಂದು ಪ್ರಸಿದ್ಧರು ಎನ್ನಿಸಿಕೊಂಡ ಬರಹಗಾರರಲ್ಲಿ ಕೂಡ ಇಂತಹ ಪತನ ಢಾಳಾಗಿ ಕಾಣುತ್ತಿರುವುದರಿಂದ ನಾಟಕದ ಪ್ರಸ್ತುತೆ ಇನ್ನಷ್ಟು ಹೆಚ್ಚಿದೆ.
ಸೇತೂರಂ ಅವರ ನಿರುದ್ವಿಗ್ನಶೈಲಿಯ ಸಂಭಾಷಣೆ ಹೇಳುವ ಕ್ರಮ ಅವರ ಅನನ್ಯತೆ. ಒಂದು ರೀತಿಯಲ್ಲಿ ಅವರ ಗುರುತು ಕೂಡ ಎನ್ನಿಸಿಕೊಂಡು ಬಿಟ್ಟಿರುವ ಈ ಶೈಲಿ ಚಿಂತನಾಶೀಲತೆಯ ಸಂವಹನಕ್ಕೆ ನೆರವು ನೀಡಿದೆ. ಈ ನಾಟಕದ ನಾಯಕ ಇಂತಹ ಭಾವರಹಿತ ವ್ಯಕ್ತಿತ್ವದವನೇ ಆಗಿರುವುದರಿಂದ ಸೇತೂರಂ ಅವರ ಅಭಿನಯದ ಪರಿಣಾಮಕಾರಿ ಎನ್ನಿಸುತ್ತದೆ. ಅವರ ಬೇರೆ ನಾಟಕ, ಧಾರಾವಾಹಿಗಳಲ್ಲಿ ಎಲ್ಲಾ ಪಾತ್ರಗಳೂ ಇದೇ ಶೈಲಿಯಲ್ಲಿ ಮಾತನಾಡುವುದು ಅಭಾಸ ಎನ್ನಿಸಿ ಪರಿಣಾಮ ಈ ಹಿನ್ನೆಲೆಯಲ್ಲಿ ಗಮನಾರ್ಹವಾಗಿ ಕುಗ್ಗುತ್ತಿತ್ತು. ಆದರೆ ಈ ನಾಟಕದಲ್ಲಿ ಹಾಗಾಗಿಲ್ಲ. ಸಾಕ್ಷಿಪಾತ್ರವನ್ನು ನಿರ್ವಹಿಸಿರುವ ಶ್ರೀಪತಿ ಮಂಜನ ಬೈಲು ಹಾಸ್ಯವನ್ನೂ ಕೂಡ ಅಂಡರ್ ಪ್ಲೇ ಮಾಡಿ ಪಾತ್ರವನ್ನು ಗಮನಾರ್ಹವಾಗಿಸಿದ್ದಾರೆ. ಹಾಸ್ಯ ರಂಜನೆ ಬದಲು ಬ್ಲಾಕ್ ಕಾಮಿಡಿ ಕಡೆ ತಿರುಗುವುದು ಇದರಿಂದ ಸಾಧ್ಯವಾಗಿದೆ. ನಾಟಕದುದ್ದಕ್ಕೂ ವಕೀಲನಿಗೆ ಸಂವಾದ ನಡೆಸುವ ತರುಣಿಯಾಗಿ ದೀಪ ಭಾಸ್ಕರ್ ಹದವರಿತು ಅಭಿನಯಿಸಿದ್ದಾರೆ. ತುಂಟತನ, ಹತಾಶೆ, ವ್ಯಂಗ್ಯ ಹೀಗೆ ಹಲವು ಭಾವಗಳನ್ನು ಏಕಸೂತ್ರದಲ್ಲಿ ಹಿಡಿದಿಡುವುದು ಅವರಿಗೆ ಈ ಕಾರಣದಿಂದಲೇ ಸಾಧ್ಯವಾಗಿದೆ. ಮಗನ ಪಾತ್ರದಲ್ಲಿ ಶರತ್ ಪರ್ವತವಾಣಿ ಗಮನ ಸೆಳೆದರೂ ಅಲ್ಲಲ್ಲಿ ಅಬ್ಬರದ ನೆಲೆ ತಲುವುದು ತೊಡಕು ಎನ್ನಿಸುತ್ತದೆ. ಜ್ಯೂನಿಯರ್ ಪಾತ್ರದಲ್ಲಿ ಉಷಾ ಭಂಡಾರಿಯವರು ಪಾತ್ರದ ನೆಲೆಗಳನ್ನು ಮೆಲೋಡ್ರಾಮದ ಕಡೆ ವಿಸ್ತರಿಸಿ ನಾಟಕದ ಚೌಕಟ್ಟಿನಿಂದ ಆಚೆಗೆ ತೆಗೆದುಕೊಂಡು ಹೋಗಿದ್ದಾರೆ, ಈ ಪಾತ್ರದ ಪರಿಕಲ್ಪನೆಯಲ್ಲಿಯೇ ಅಸ್ಟಷ್ಟತೆ ಇರುವುದು ಅವರ ಅಭಿನಯದ ಅಸಮಪರ್ಕತೆಗೆ ಕೂಡ ಕಾರಣವಾಗಿದೆ.
ಅತೀತದಂತಹ ನಾಟಕದ ಮೂಲಕ ನಮ್ಮಲ್ಲಿ ಹಿನ್ನೆಲೆಗೆ ಹೋಗಿರುವ ಸಾಮಾಜಿಕ ಕಾಳಜಿ ನಾಟಕ ಪರಂಪರೆಗೆ ಚಾಲನೆ ದೊರಕಿದರೆ ಅದು ಆರೋಗ್ಯಕರ ಬೆಳವಣಿಗೆ ಕೂಡ ಎನ್ನಿಸಿಕೊಳ್ಳುತ್ತದೆ. ಇಂದು ಎಲ್ಲಾ ಪ್ರದರ್ಶನ ಕಲೆಗಳಲ್ಲಿಯೂ ರಂಜನೆಗೆ ಅತಿಯಾದ ಮಹತ್ವ ದೊರಕಿ ಬದ್ದತೆಯ ಪ್ರಶ್ನೆ ಹಿನ್ನೆಲೆಗೆ ಸರಿದಿದೆ. ಸಮಾಜದ ಅಯಾಮಗಳನ್ನು ಪರಿಶೀಲಿಸುವ ಸಾಧ್ಯತೆ ಇರಲಿ ಚಿಂತನಶೀಲತೆ ಕೂಡ ಇಲ್ಲಿ ಕಾಣದಂತಾಗಿದೆ. ಈ ಕಾರಣದಿಂದಲೇ ಸೇತೂರಂ ಅವರು ತಮ್ಮ ನಾಟಕಗಳ ಮೂಲಕ ನಡೆಸುತ್ತಿರುವ ಅನ್ವೇಷಣೆ ಗಮನ ಸೆಳೆದುಕೊಳ್ಳುತ್ತದೆ.

‍ಲೇಖಕರು G

August 7, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Geetha b u

    While reviewing the drama, the reviewer should not have revealed the entire story …many interesting twists and turns are now lost to the new viewer of the play.

    ಪ್ರತಿಕ್ರಿಯೆ
  2. Naveen

    Why reveal the entire story? Doesn’t it spoil the experience of watching for others?

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: