ಡೈಲಿ ಬುಕ್ : ಪ್ರಕಾಶ್ ಬಿ ಜಾಲಹಳ್ಳಿ ’ನಲವತ್ತು ಗಜ಼ಲ್‌ಗಳು’

ಕನಸಿಡಿದು ಧ್ಯಾನಕೆ ಕೂತ ಗಜಲ್ ಸಾಲುಗಳು

DSC_0250 copy

– ರೇಣುಕಾ ಎ ಕಠಾರಿ

ಗಜಲ್ ಅನ್ನು ಉರ್ದು ಕಾವ್ಯದ ಮುಕುಟವೆಂದು ಹಿಂದಿನಿಂದ ಕರೆಯುತ್ತಾ ಬಂದಿದ್ದಾರೆ, ಭಾರತೀಯ ಕಾವ್ಯ ಲೋಕದಲ್ಲಿಯೇ ಅತ್ಯಂತ ವಿಶಿಷ್ಟವಾದ ಪ್ರಕಾರವೆಂದು ಇದನ್ನು ಕರೆಯುವುದುಂಟು. ಕಾವ್ಯ ಮಾದ್ಯಮಕ್ಕೆ ಅತ್ಯಂತ ಸಶಕ್ತ ಸಂವಹನವುಳ್ಳುದ್ದು ಭಾಷೆ. ಜಾಗತಿಕ ಭಾಷೆಗಳಲ್ಲಿ ಉರ್ದು ಒಂದು. ತನ್ನದೇ ಆದ ಸೂಕ್ಷ್ಮ ಸಂವೇದನೆಗಳಿಗೆ ತಕ್ಕ ಮೃದುತ್ವ ಮತ್ತು ಮಾರ್ದವತೆಯನ್ನು ಉಳ್ಳದ್ದಾಗಿದೆ. ಉದರ್ು ಭಾಷಾ ಪರಂಪರೆಯಲ್ಲಿ ಗಜಲ್ ತನ್ನ ಚೆಲುವಿನಿಂದಾಗಿಯೆ ಬಹುಮುಖ್ಯವಾದದ್ದು. ಅಂತೆಯೇ ವಿದ್ವಾಂಸರು ಹೇಳುವ ಹಾಗೆ `ಗಜಲ್ ಉರ್ದು ಕಾವ್ಯದ ರಾಣಿ’ ಎಂದು ಬಣ್ಣಿಸಿದ್ದಾರೆ. ಗಜಲ್ನಲ್ಲಿ ಪ್ರೇಮಕ್ಕೆ ಹೆಚ್ಚಿನ ಪ್ರಾಧಾನ್ಯತೆಯಿದೆ.
ಮೊದಲೆಲ್ಲ ಗಜಲ್ ಕೇವಲ ಪ್ರೇಮ-ಮೋಹ-ಅನುರಾಗ-ಪ್ರಣಯಗಳಿಗೆ ಮಾತ್ರ ಸೀಮಿತವಾಗಿತ್ತು. ಕಾಲಾನಂತರ ಗಜಲ್ನ ವಸ್ತು ಭಿನ್ನ-ಭಿನ್ನ ನೆಲೆಗಳಲ್ಲಿ ಮೈ ಪಡೆದುಕೊಂಡಿತು. ಇದು ಹಾಡುಗಬ್ಬ ಮತ್ತು ಓದು ಗಬ್ಬವು ಹೌದು. ಗಜಲ್ ಅನ್ನು ಅರ್ಥೈಸುವುದಾದರೆ ಹೆಂಗಸರೊಡನೆ ಮಾತನಾಡುವುದು ಇಲ್ಲವೆ ಸಂಭಾಷಿಸುವುದು; ಪ್ರೇಮ-ಮೋಹ ಅನುರಾಗಗಳನ್ನು ವ್ಯಕ್ತಪಡಿಸುವುದೇ ಆಗಿದೆ. ಗಜಲ್ ಪರಂಪರೆಯನ್ನು ಕನ್ನಡ ಸಾಹಿತ್ಯದಲ್ಲಿ ಉಳಿಸಿ ಬೆಳೆಸಿಕೊಂಡು ಬಂದವರಲ್ಲಿ ಮುಖ್ಯ ಪಾತ್ರ ವಹಿಸಿದವರು; ಶಾಂತರಸ, ಮುಕ್ತಾಯಕ್ಕ, ಜಂಬಣ್ಣ ಅಮರಚಿಂತ, ಚಿದಾನಂದ ಸಾಲಿ, ಕಾಶೀನಾಥ ಅಂಬಲಗೆ, ಬಸವರಾಜ ಸಬರದ, ಅಲ್ಲಾಗಿರಿರಾಜ್ ಕನಕಗಿರಿ ಹೀಗೆ ಮೊದಲಾದವರು. ಇತ್ತಿಚಿನ ದಿನಗಳಲ್ಲಿ ‘ಗಜಲ್’ದಲ್ಲಿ ತಮ್ಮದೆ ಆದ ಛಾಪನ್ನು ಹಾಕಿಕೊಂಡವರಲ್ಲಿ ಪ್ರಕಾಶ ಬಿ. ಅವರು ಒಬ್ಬರಾಗಿದ್ದಾರೆ. ಇವರ ಮೊದಲ ಗಜಲ್ ಸಂಕಲನ ವಿಶೇಷವಾಗಿ ಕನಸಿಡಿದು ಹೊರಟ ಪಯಣವಾಗಿದೆ. ಗಜಲ್ನಲ್ಲಿ ಕಲ್ಪನೆಗಳೆ ಮುಖ್ಯವಾಗಿವೆ. ಆದರೂ ಕೂಡ, ಸಂದರ್ಭಕ್ಕೆ ತಕ್ಕಂತೆ ವಾಸ್ತವತೆಯ ಮುಖವನ್ನು ತಮ್ಮ ಸಾಲುಗಳಲ್ಲಿ ಬಿಂಬಿಸಿದ್ದಾರೆ. ಕನಸುಗಳನ್ನು ಕಾಣುವುದು ಸಹಜ ಆದರೆ ಇಲ್ಲಿ ಗಜಲ್ ಕವಿಯು ಕನಸು ಕಾಣುವುದಕ್ಕಿಂತ ಕಟ್ಟುವುದು ಬಹು ಮುಖ್ಯ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ತಮ್ಮಲ್ಲಿ ಅಡಗಿದ್ದ ಧ್ಯಾನದ ಒಂದು ರೂಪವನ್ನು ವೇದನೆಯಲ್ಲಿಟ್ಟು ಸಮತೂಗಿಸುವ ಪ್ರಯತ್ನವನ್ನು ಈ ಸಂಕಲನದಲ್ಲಿ ಮಾಡಿದ್ದಾರೆ.
49
ಇಲ್ಲಿ ಸ್ನೇಹ, ಪ್ರೇಮ, ಪ್ರಣಯ, ವಿರಹ ಮೊದಲಾದವುಗಳನ್ನು ಮರಕ್ಕೆ ಎಲೆ ಮೂಡುವಷ್ಟು ಸಹಜವಾಗಿ ಅಭಿವ್ಯಕ್ತಿಸಿದ್ದಾರೆ. ನೆನಪು ಮತ್ತು ಬದುಕಿನ ವಾಸ್ತವಗಳ ಒಂದು ಮುಷ್ಟಿಯಲ್ಲಿ ಹಾಗೂ ಪ್ರೇಮದ ಹಿಡಿತ ಮತ್ತು ಸೆಳೆತ ಮತ್ತೊಂದು ಮುಷ್ಟಿಯಲ್ಲಿ ದಕ್ಕಿಸಿಕೊಂಡು ಗಜಲ್ ಜಗತ್ತಿಗೆ ಹನಿ ಹನಿಯಾಗಿ ಸಿಂಪಡಿಸಿದ್ದಾರೆ.
ಪ್ರೀತಿಯಲಿ ಎಲ್ಲ ಮರೆತಿರುವ ಕವಿ ಪ್ರೇಯಸಿಯ ಕುರಿತು ಹೇಳುವ ಮಾತು ಇಲ್ಲಿ ಮುಖ್ಯವಾಗಿದೆ.
”ತಂತಿಯಂತೆ ನನ್ನಂತರಂಗವ ಹುರಿಗೊಳಿಸಿ ಹಾಡಿಬಿಡು ಬಯಲೊಳಗೆ
ನಿನ್ನ ಬೆರಳ ಸ್ಪರ್ಶದಿ ಹುಟ್ಟುವ ರಾಗದಿಂದಲೇ ನನ್ನೊಳಗೆ ಧ್ಯಾನಿಸುತ್ತಿದ್ದೇನೆ”
ಇಲ್ಲಿ ಕವಿ ತಮ್ಮನ್ನೇ ತಾವು ಅರ್ಪಿಸಿಕೊಳ್ಳುವ ರೀತಿ-ನೀತಿ ಮುಖ್ಯವಾಗಿ ಕಾಣುತ್ತದೆ. ಅಂತರಂಗದಲ್ಲಿ ಹುಟ್ಟುವ ರಾಗವನ್ನು ಪ್ರೀತಿಯ ಮೂಲಕ ಸ್ಪರ್ಷಿಸುವ ತವಕವನ್ನು ಅರ್ಥಪೂರ್ಣ ವಾಗಿಸಿದ್ದಾರೆ. ಬಯಲು ಅನ್ನುವ ಪದವು ತುಂಬಾ ವಿಶಾಲವಾದ ಅರ್ಥವನ್ನೊಳಗೊಂಡಿದೆ. ನಿಜಕ್ಕೂ ಕವಿ ಸಹಜವಾಗಿ ಅದನ್ನು ಇಲ್ಲಿ ಬಳಸಿದ್ದಾರೆ.
”ನಾಳೆಗಾಗಿ ತೇಲುವ ಬದುಕ ಹಡಗಿಗೆ ಹುಟ್ಟೆ ಇಲ್ಲದಾಗಿದೆ ಗೆಳತಿ
ಹೃದಯ, ಹೃದಯದ ನಡುವೆ ವಿಶ್ವಾಸವೇ ನಿಲ್ಲದಾಗಿದೆ ಗೆಳತಿ
ಹಚ್ಚಿಟ್ಟ ಬತ್ತಿ ಒಂದಾಗಿ ಬೆಳಕ ನೀಡುತ್ತಿದೆ ಲೋಕದಲಿ
ಗುಡಿ, ಚರ್ಚು, ಮಸೀದಿಗಳ ಒಂದಾಗಿಸುವ ಪ್ರೀತಿ `ಪ್ರಕಾಶ’ವ ಬೆಳಗಬೇಕಾಗಿದೆ ಗೆಳತಿ”
ಪ್ರೀತಿಯು ಯಾವ ಧರ್ಮದ ಮುಖೇನವಲ್ಲ, ಅದು ಯಾರ ಹೃದಯದಲ್ಲಿ ಮಿಡಿಯುತ್ತದೆಯೋ ಅಲ್ಲಿ ಮಿಂಚುವುದಂತು ಸತ್ಯ. ಅಂತಹ ನಾಳೆಗಾಗಿ ಜೀವನವೆಂಬ ನೌಕೆಯನ್ನು ವಿಶ್ವಾಸದ ಮೂಲಕ ಸಾಗಿಸಬೇಕು. ಕೂಡಿದ ಬತ್ತಿಗಳು ಹೇಗೆ ನಿತ್ಯ ಬೆಳಗುವವೋ ಹಾಗೇ ಪ್ರೀತಿಯನ್ನು ಒಂದಾಗಿಸುವ ಪ್ರಯತ್ನವನ್ನು ಇಲ್ಲಿ ಕಾಣುತ್ತೇವೆ.
”ಬಾ ನೀನೊಮ್ಮೆ `ಪ್ರಕಾಶ’ನ ಮೈ ಚರ್ಮ ಸುಲಿದು ತಂತಿ ಮಾಡಿ ನುಡಿಸಿ ಬಿಡು
ಏಕತಾರಿಯ ಗುಂಗಿನಲಿ ಸಾವ ಮರೆತು ಬಿಡುವೆ ಖುಷಿಯಿಂದಲೇ ನನ್ನೊಳಗೆ ಧ್ಯಾನಿಸುತ್ತಿದ್ದೇನೆ
ಖಾಲಿಯಿದ್ದ ಗೋಡೆಯ ತುಂಬ ನಿನ್ನದೆ ಬಿತ್ತಿಗಳು ನನ್ನ ನೋಡಿ ಅಣುಕಿಸುತ್ತಿವೆ
ಮೊಂಬತ್ತಿಯ `ಪ್ರಕಾಶ’ವು ಕಣ್ಣೀರ ಸುರಿಸಿದಲ್ಲಿ ಮೂಡದ ಭಾವನೆಯೀಗ ಏನೆಂದು ಬರೆಯಲಿ”
ಒಬ್ಬ ಕವಿಗೆ ಮುಖ್ಯವಾಗಿ ಬೇಕಾಗಿರುವುದು ಏಕಾಗ್ರತೆಯ ಧ್ಯಾನ. ಆ ನಿಟ್ಟಿನಲ್ಲಿ ಕಲ್ಪನೆಯನ್ನು ಕಣ್ಮುಂದೆ ಕಟ್ಟುವ ಜವಾಬ್ದಾರಿಯು ಅಷ್ಟೇ ಮುಖ್ಯ. ಕವಿ ತಮ್ಮನ್ನೆ ತಾವು ತೊಡಗಿಸಿಕೊಂಡಿರುವುದನ್ನು ಕಾಣುತ್ತೇವೆ. ಮೈಚರ್ಮ ಮತ್ತು ಏಕತಾರಿ, ಗೋಡೆ ಮತ್ತು ಮೊಂಬತ್ತಿ ಎಂಬ ಪ್ರತಿಮೆಗಳ ಮೂಲಕ ಭಾವನೆಗಳನ್ನು ಸೆರೆ ಹಿಡಿದ ಪರಿ ವಿಶಿಷ್ಟವಾಗಿದೆ.
”ನಿನ್ನ ಕನಸು ಪುಟ ತುಂಬಿರುವಾಗ ಏನೆಂದು ಬರೆಯಲಿ
ಮನದ ತುಂಬ ಮೌನ ತುಂಬಿರುವಾಗ ಏನೆಂದು ಬರೆಯಲಿ
ಮೀಸಲ ಕಣ್ಣುಗಳಲ್ಲೀಗ ಕನಸುಗಳು ಹೆಚ್ಚುತ್ತಿವೆ ನಿನದೆ ನೆನಪಲ್ಲಿ
ಮೌನದ ವೀಣೆಯೊಂದು ರಾಗಗಳ ಬೇಡುತ್ತಿವೆ ನಿನದೆ ನೆನಪಲ್ಲಿ”
ಗಜಲ್ನಲ್ಲಿ ಪ್ರೀತಿಗೆ ಇರುವ ಸ್ಥಾನ ತುಂಬಾ ದೊಡ್ಡದು, ಅದರಿಂದ ಪ್ರಕಾಶರ ಗಜಲ್ ಹೊರತಾಗಿಲ್ಲ, ಮೌನದ ಹಿಂದೆ ಸಾವಿರಾರು ಅರ್ಥಗಳು ಅಡಗಿರುತ್ತವೆ ಎಂಬುವುದನ್ನು ವೀಣೆಯ ರಾಗದ ಮೂಲಕ ಆರಂಭಿಸಿ ಹೊಸ ಹೊಸ ಕನಸುಗಳನ್ನು ನೆನೆದು ಬಯಸುತ್ತಿದ್ದಾರೆ.
”ಡೊಂಕು ತುಂಬಿದ ಲೋಕವೆಲ್ಲ ಬಂಡಾಟದ ಹಾದಿ ಹಿಡಿದಿದೆ ಈಗ
ತಿದ್ದಿ ತೀಡಿದರೂ ಗುಲಾಮನಾಗದ ಗುರುವಿಗೆ ನೂರೆಂಟು ನಾಯಿ ಬೊಗಳಿದರೇನು
ಧರ್ಮ ಧರ್ಮಗಳವು ಭಾಯಿ-ಭಾಯಿಗಳಾಗದೆ ಸೋತು ಹೋಗುತ್ತಿವೆ
ದಾರಿ ತೋರುವ ದೇವರುಗಳೇ ಜಗಳ ಹಚ್ಚುವುದಾದರೆ ಸಾವೆ ಬಂದು ಬಿಡು”
ಕವಿಗೆ ಸಮಾಜವನ್ನು ತಿದ್ದುವ ಹೊಣೆ ಇರುತ್ತದೆ. ಅಂತೆಯೇ ಧರ್ಮಗಳು ಸಮಾಜಕ್ಕ (ಜನರಿಗೆ) ದಾರಿ ತೋರಿಸಬೇಕು ವಿನಹ ಜಗಳವನ್ನು ತರಬಾರದು ತರುವುದಾದರೆ, ತಮಗೆ ಸಾವು ಬಂದು ಬಿಡಲಿ ಎನ್ನುವ ಆಶಯವನ್ನು ಮೆಚ್ಚಲೇಬೇಕು.
”ಇಬ್ಬರಲ್ಲೂ ಮೂಡಿದ್ದೂ ಪ್ರೀತಿಯೆಂದು ಗೊತ್ತಿಲ್ಲವೆ ನಿನಗೆ
ಒಬ್ಬರಿಗೊಬ್ಬರು ನೋಡದೆ ಇರಲಾರೆವೆಂದು ಗೊತ್ತಿಲ್ಲವೆ ನಿನಗೆ
ವಿಧಿಯೂರಿನ ದಾರಿಯಲ್ಲೀಗ ನಿನ್ನದೆ ಹೆಸರು ಅರ್ಧ ಆಯುಷ್ಯವೆಂದೆ ಉಸಿರು
ತೀರಿ ಹೋಗುವ ಕೊನೆಯಲ್ಲೂ ನಮ್ಮಿಬ್ಬರ ನಡುವಿನ ಪ್ರೀತಿಯನ್ನು ಇವತ್ತಿನವರೆಗೂ ಯಾರಿಗೂ ಹೇಳಿಲ್ಲ.”
‘ಪ್ರೀತಿ ಇಲ್ಲದ ಮೇಲೆ ಹೂವು ಅರಳಿತು ಹೇಗೆ’ ಎಂದು ಜಿ.ಎಸ್.ಶಿವರುದ್ರಪ್ಪ ನವರು ಪ್ರಶ್ನಿಸಿದ್ದು ನಿಜಕ್ಕೂ ಅರ್ಥವತ್ತಾಗಿದೆ. ಹಾಗೆಯೇ ಗಜಲ್ನಲ್ಲಿ ಕವಿಯು ಕಲ್ಪನೆಯಲ್ಲಿಯಲ್ಲಿ ಕಟ್ಟಿದ ಪ್ರೀತಿಗಾಗಿ ನಿನ್ನ ಹೆಸರನ್ನೇ ಉಸಿರಾಗಿಸಿಕೊಂಡಿದ್ದೇನೆ ಎನ್ನುವಲ್ಲಿ ಹಾಗೂ ಮನದಿ ಮೂಡಿದ ಪ್ರೀತಿ ಕೊನೆಯವರೆಗೂ ಬಿಟ್ಟು ಇರಲಾರದು ಎಂದು ಕನವರೆಸಿರುವುದುನ್ನು ಕಾಣುತ್ತೆವೆ.
”ಇಲ್ಲದ್ದರ ನಡುವೆಯೆ ಎಲ್ಲ ಏಲ್ಲೆಗಳ ಮೀರಿದವರು ನಾವೇನು ಕಮ್ಮಿ
ಇದ್ದ ಹಿರಿತನಗಳನ್ನು ಮನದ ತುಂಬ ಬೆಳಸಿದವರು ನಾವೇನು ಕಮ್ಮಿ
ಬಿಸಿಲೂರಿನ ಬೆವರನ್ನು ಬೆಳದಿಂಗಳ ಇಬ್ಬನಿಯೆಂದು ಮೆಚ್ಚಿದವರು
ಎಲ್ಲ ಎಲ್ಲದರಲ್ಲೂ ಗೆಜ್ಜೆ ಕಟ್ಟಿದ ಹೆಜ್ಜೆಯಿಡಲು ಸಾಗಿದವರು ನಾವೇನು ಕಮ್ಮಿ”
ಹಸಿರು ಹಸಿರು ನಡುವೆ ಎಲ್ಲ ಇದ್ದಾಗಲೂ ಕೂಡಾ ನಾವುಗಳು ಸಾಧಿಸಬೇಕಾದುದು ಸಾಕಷ್ಟಿದೆ, ಆದರೆ ಹೈದ್ರಾಬಾದ ಗಡಿ ಪ್ರದೇಶದಲ್ಲಿ ಅರಳಿದ ಪ್ರತಿಭೆ ಪ್ರಕಾಶರು ಒಂದು ಸಾಕ್ಷಿ ಪ್ರಜ್ಞೆಯಾಗಿ ತಮ್ಮ ಭಾಗದ ನೋವು, ನಲಿವುಗಳನ್ನು ತಮ್ಮ ಗಜಲ್ ಸಾಲುಗಳ ಮೂಲಕ ಹೇಳಲು ಪ್ರಯತ್ನಿಸಿದ್ದಾರೆ. ಬಿಸಿಲಿನಲ್ಲಿಯೂ ಇಬ್ಬನಿಯನ್ನು ಕಾಣುವ ತವಕವನ್ನು ವೈಶಿಷ್ಟಪೂರ್ಣವಾಗಿದೆ.
ಪ್ರಕಾಶರವರ ಗಜಲ್ಗಳು ಬರಿ ಕನಸು, ಪ್ರೀತಿಯ ಸುತ್ತಲೇ ಗಿರಕಿ ಹೊಡೆಯದೆ ವರ್ತಮಾನಕ್ಕೆ ಮುಖಾ-ಮುಖಾಮುಖಿಯಾಗಿಸುವ ಪ್ರಯತ್ನವನ್ನು ಮಾಡಿರುವುದನ್ನು ಕಾಣುತ್ತೇವೆ. ಕೆಲವು ಗಜಲ್ಗಳು ನಾವೀನ್ಯತೆಯ ರೀತಿಯಲ್ಲಿ ಹೊಸ ಹೊಸ ಅರ್ಥ ಸ್ಪುರಿಸುತ್ತವ.ೆ ಹೊಸ ಪದಗಳ ವಾತಾವರಣವನ್ನು ಜನರ ಮನದಲ್ಲಿ ಬಿತ್ತುತ್ತವೆ. ತವಕತನ, ಗರಿಗದರಿಕೆ, ಚಡಪಡಿಕೆ. ನವಿರು ನೋಟ ಹೀಗೆ ಸಾಕಷ್ಟು ಚಿಲುಮೆಗಳು ಪ್ರಕಾಶರ ಗಜಲ್ಗಳಲ್ಲಿ ಎದ್ದು ಕಾಣುತ್ತವೆ. ವಚನದ ಆಶಯವನ್ನು ಗಜಲ್ನಲ್ಲಿ ತರುವ ಪ್ರಯತ್ನ ಮಾಡಿದ್ದನ್ನು ಸ್ವೀಕರಿಸಲೇಬೇಕು. ಕೆಲವು ಗಜಲ್ ಸಾಲುಗಳು ನಿರಸನದಿಂದ ಕೂಡಿದ್ದರೂ ಇನ್ನೂ ಹಲವು ಗಜಲ್ಗಳ ಆಶಾದಾಯಕವಾಗಿವೆ. ಕವಿಯ ಭಾವ ಸಾಂಸ್ಕೃತಿಕ ವ್ಯಕ್ತಿತ್ವವನ್ನು ಗಜಲ್ಗಳಲ್ಲಿ ಗಮನಿಸಬಹುದು. ಹೊಸ ತಲೆಮಾರಿಗೆ, ಪರಂಪರೆಗೆ ಹೊಸ ದಾರಿಯ ಪಯಣವನ್ನು ಹಾಕಿ ಪ್ರೇಮ, ಪ್ರಣಯ, ವಿರಹದತ್ತ ಕೊಂಡೊಯ್ಯುತ್ತಿರುವ ಕವಿ ಗಜಲ್ ಕಾವ್ಯ ಪ್ರಕಾರದ ಮೂಲಕ ಹೊಸ ಸಾಧ್ಯತೆಗಳೊಂದಿಗೆ ಗಜಲ್ ಪ್ರಕಾರವನ್ನು ಮತ್ತಷ್ಟು ಶ್ರೀಮಂತಗೊಳಿಸಲಿ.
 

‍ಲೇಖಕರು G

August 8, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. ರಮೇಶ ಗಬ್ಬೂರು

    ವಿಮರ್ಶೆ ಬಹಳ ನಾಜೂಕಿನದು . ಆದರೂ ರೇರೇಣುಕಾ ಮೇಡಂ ಬಹಳ
    ಸೊಗಸಾಗಿ ಮೂಡಿಬಂದಿದೆ

    ಪ್ರತಿಕ್ರಿಯೆ
  2. gundurao

    ಮಿತ್ರ ಪ್ರಕಾಶರ ಮೊದಲ ಗಜಲ್ ಸಂಕಲನದ ಬಗ್ಗೆ ಉತ್ತಮ ವಿಮರ್ಶೆ ಬರೆದಿದ್ದೀರಿ. ಧನ್ಯವಾದಗಳು

    ಪ್ರತಿಕ್ರಿಯೆ
  3. mahesh kalal

    ಕವಿಯ ಭಾವ ಸಾಂಸ್ಕೃತಿಕ ವ್ಯಕ್ತಿತ್ವವನ್ನು ಗಜಲ್ಗಳಲ್ಲಿ ಗಮನಿಸಬಹುದು. ಹೊಸ ತಲೆಮಾರಿಗೆ, ಪರಂಪರೆಗೆ ಹೊಸ ದಾರಿಯ ಪಯಣವನ್ನು ಹಾಕಿ ಪ್ರೇಮ, ಪ್ರಣಯ, ವಿರಹದತ್ತ ಕೊಂಡೊಯ್ಯುತ್ತಿರುವ ಕವಿ ಗಜಲ್ ಕಾವ್ಯ ಪ್ರಕಾರದ ಮೂಲಕ ಹೊಸ ಸಾಧ್ಯತೆಗಳೊಂದಿಗೆ ಗಜಲ್ ಪ್ರಕಾರವನ್ನು ಮತ್ತಷ್ಟು ಶ್ರೀಮಂತಗೊಳಿಸಲಿ. uttama vimrshe madiddiri dhannyavadagalu

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: