ಸಾಧನೆಯ ಉತ್ತುಂಗವು, ನಡೆದ ದಾರಿಯ ಸುಖವು..

ಉಷಾ ನರಸಿಂಹನ್

ನನ್ನ ಗಮ್ಯ ಬಹಳ ದೂರದಲ್ಲಿತ್ತು. ನಾನದನ್ನು ಹೇಗಾದರೂ ಮುಟ್ಟಲೇಬೇಕಿತ್ತು. ಏಕಾಂಗಿಯಾಗಿ ನಾನದನ್ನು ಪಡೆಯಹೊರಟಿದ್ದೆ. ಯಾವುದೇ ಸಹಾಯ, ಮಾರ್ಗದರ್ಶನ ನನಗಿರಲಿಲ್ಲ. ನನಗೆ ಆ ದಾರಿ ಹೊಸದಾಗಿತ್ತು. ನಾನೆಂದೂ ಕಂಡಿರದ, ಕೇಳಿರದ ಹಾದಿಯದು. ನನಗೇ ಏನು, ಬಹುತೇಕ ಎಲ್ಲರಿಗೂ ಅದು ಹೊಸದು. ಯಾರೂ ನಡೆಯದ ದಾರಿಯನ್ನು ಆರಿಸಿಕೊಂಡಾಗ ಒಂದಿಷ್ಟು ಆತ್ಮಪ್ರತ್ಯಯ, ಛಲ ಹೆಚ್ಚೇ ಇರಬೇಕಾಗುತ್ತದೆ.

ನಿಜವಾಗಿ ಹೇಳಿದರೆ ಅದು ದಾರಿಯೇ ಅಲ್ಲ, ಬಟಾ ಬಯಲು. ಬಯಲಲ್ಲಿ ದಾರಿಯನ್ನು ನಾನೇ ಹುಡುಕಿಕೊಳ್ಳಬೇಕಾಗಿತ್ತು. ಯಾರದೇ ಹೆಜ್ಜೆ ಗುರುತುಗಳಿಲ್ಲದ ದಾರಿಯದು. ನಡೆಯುತ್ತ ಹೋದಂತೆಲ್ಲ ನನ್ನದೇ ಹೆಜ್ಜೆಗಳು ಗುರುತಾಗಿ ಮೂಡತೊಡಗಿದವು. ಇಷ್ಟಾಗಿ ನಾನು ಯಶಸ್ವಿಯಾಗುವೆನೆಂಬ ಭರವಸೆ ಇದ್ದರೂ ಯಾವಾಗ ಎಂಬ ಸ್ಪಷ್ಟತೆ ನನಗಿರಲಿಲ್ಲ. ಸಮಯದೊಂದಿಗೆ ಕಳೆದು ಹೋಗಬಹುದಾದ ಆತ್ಮಪ್ರತ್ಯಯವನ್ನು ಕಾಪಿಟ್ಟುಕೊಳ್ಳುವುದೇ ಸವಾಲಾಗಿತ್ತು. ಬಹು ಕಠಿಣತಮವಾದ ಆ ದಾರಿಯ ದಿವ್ಯಕ್ಕೆ ನನ್ನನ್ನು ನಾನು ಒಪ್ಪಿಸಿಕೊಂಡೆ.

ಹಾಗೇನು ನಾನು ನಡೆವ ಹಾದಿ ಸುಲಭವೆಂದು ಭಾವಿಸಿರಲಿಲ್ಲ. ಆರಂಭಿಕ ಆತಂಕ, ಭಯಗಳನ್ನು ನಿಧಾನವಾಗಿ ಸವರಿ ಸಾವರಿಸಿಕೊಳ್ಳತೊಡಗಿದೆ. ಕ್ರಮೇಣ ಏಕಾಂಗಿತನ ರೂಢಿಯಾಗತೊಡಗಿತು. ಹಳ್ಳ ದಿಬ್ಬಗಳ ದಾರಿ ಸಹನೀಯವಾಗತೊಡಗಿತು. ಮುಳ್ಳು-ಕಲ್ಲು-ಕಾರೆ-ಕಂಟಿಗಳು ನನ್ನನ್ನು ಬಾಧಿಸುವುದನ್ನು ನಿಲ್ಲಿಸಿದವು. ಆಗಸದ ತಾರೆಗಳನ್ನು, ಸೂರ್ಯ-ಚಂದ್ರರನ್ನು ನಂಬಿ ದಿಕ್ಕನ್ನು ನಿರ್ಧರಿಸಿಕೊಂಡೆ. ಮೆಲ್ಲನೆ ತೀಡುತ್ತಿದ್ದ ತಂಗಾಳಿ ಕಂಗೊಳಿಸುತ್ತಿದ್ದ ಹಸಿರು ನನ್ನ ಪ್ರಾಣ ಚೇತನಗಳನ್ನು ಹುರಿದುಂಬಿಸತೊಡಗಿದವು. ಅದಕ್ಕಾಗಿ ವ್ಯಯಿಸಿದ ಕಾಲವೂ ಕಡಿಮೆ ಏನಿರಲಿಲ್ಲ.

ನದಿ-ಸರಸಿಗಳ ನೀರೇ ನನ್ನ ಜೀವಾಮೃತವಾಯಿತು. ಕ್ರಮೇಣ ಕಷ್ಟದ ಹಾದಿ ಆಹ್ಲಾದಜನಕವಾಯಿತು. ಆ ಹಾದಿಯನ್ನು ಅದೆಷ್ಟು ಪ್ರೀತಿಸತೊಡಗಿದೆನೆಂದರೆ.. ನಾನೀ ಹಾದಿಯಲ್ಲದೆ ಬೇರೆ ಎಲ್ಲೇ ಹೋಗಿದ್ದರು ನನ್ನೊಳಗು ನಾಶವಾಗುತ್ತಿತ್ತು ಅನ್ನಿಸಹತ್ತಿತು. ಮತ್ತೂ ಮುಂದುವರಿದೆ..

ನನ್ನ ಗಮ್ಯ ತುಂಬ ಹತ್ತಿರದಲ್ಲಿದೆ ಅಂತ ಗೊತ್ತಾಯಿತು. ನಾನದೆಷ್ಟೊ ದೂರ ಬಂದಿದ್ದೆ. ನಿಶ್ಚಲವಾಗಿ ಕಾಣುವಷ್ಟು ಹತ್ತಿರದಿಂದ ಅದನ್ನು ನೋಡಿದೆ. ಇನ್ನೇನು ತಲುಪಿದೆ ಅನ್ನಿಸಿದಾಗ… ದಿಗಿಲೊಂದು ಬೃಹದಾಕಾರವಾಗಿ ಕಣ್ಣೆದುರು ನಿಂತು ಅಣಕಿಸತೊಡಗಿತು. ಅಯ್ಯೋ… ನಾನಿಷ್ಟು ಹಂಬಲಿಸಿದ ಗಮ್ಯ ಇಷ್ಟು ಹತ್ತಿರದಲ್ಲಿದೆಯೆ? ಒಂದು ವೇಳೆ ನಾನು ಅಲ್ಲಿಹೋಗಿ ಮುಟ್ಟಿದ ಮೇಲೆ ಈ ಹಾದಿಗೆ ಮರಳಿ ಬರಬಹುದೆ ಎಂದು ಚಿಂತಿಸಿದೆ. ಇಲ್ಲ ಸಾಧ್ಯವೇ ಇಲ್ಲ. ಸಾಧನೆಯ ಸುಖ ಎತ್ತರದಲ್ಲಿರುತ್ತದೆ, ಉತ್ತುಂಗದಲ್ಲಿರುತ್ತದೆ, ಅದು ಲೋಕಕ್ಕೆಲ್ಲ ಕಾಣುತ್ತದೆ. ಢಣಾಡಂಗೂರ ಹೊಡೆಯುತ್ತಾ ನಡೆದ ದಾರಿಯನ್ನ ಅರುಹುತ್ತದೆ. ಅಲ್ಲಿ ಹಾರ, ತುರಾಯಿ, ಜನಜಂಗುಳಿ… ಮುಖ್ಯವಾಗಿ ಕಪ್ಪು-ಬಿಳುಪುಗಳ ಮಿಶ್ರಣ ಮಾತ್ರವಿರುತ್ತದೆ.

ನಾನು ನಡೆದ ಹಾದಿಯ ಏಕಾಂತ, ಹೂವು, ಹಸಿರು, ಸ್ವಚ್ಛಗಾಳಿ, ಸಮಚಿತ್ತತೆ ಯಾವುದೂ ಇರುವುದಿಲ್ಲ. ಕೊಂಬು ಕಹಳೆ ತುತ್ತೂರಿಗಳಿಂದ ನೂರಾರು ಜನರನ್ನು ಆ ಹಾದಿಗೆ ತಂದು ಬಿಡುತ್ತದೆ. ಅದಿನ್ನು ಯಾವ ಕಾರಣಕ್ಕೂ ಏಕಾಂತದ ಅಜ್ಞಾತವಾದ ಸಾಧನೆಯ ಪಥವಾಗಿ ಉಳಿಯುವುದಿಲ್ಲ!

ಹೌದು, ನನಗೆ ಬೇರೆ ವಿಧಿ ಇರಲಿಲ್ಲ. ಸಾಧನೆಯ ಎತ್ತರಕ್ಕೆ ಒಲಿದರೆ ಸಾಧಕನ ದಾರಿಯ ಸುಖವನ್ನು ಶಾಶ್ವತವಾಗಿ ಕಳೆದುಕೊಳ್ಳುತ್ತೇನೆಂದು ಗೊತ್ತಾಗಿ ಹೋಯಿತು! ಈ ಎತ್ತರವನ್ನು ಕಾಣದವರಿಗೆ ಅದೊಂದು ಹೊಸ ದಾರಿಯನ್ನು, ಕನಸನ್ನು ತೆರೆಯಬಹುದೆಂಬ ಅಹಂಕಾರವು ದಾಂಗುಡಿಯಿಟ್ಟಿತು.

ಏನೇ ಆಗಲಿ… ಎತ್ತರದ ಸೆಳೆತದಿಂದ ತಪ್ಪಿಸಿಕೊಳ್ಳಲಾಗಲಿಲ್ಲ, ಎತ್ತರದಲ್ಲಿ ನಿಂತಾಗ ನಕ್ಷತ್ರಗಳು ಕೆಳಗಿಳಿದು ಒಂದು ನಮ್ಮ ಅಲಂಕರಣವಾಗುವುದು ನನಗೆ ಗೊತ್ತಿದ್ದ ಸಂಗತಿಯೇ. ಆ ಉತ್ತುಂಗದಲ್ಲಿ ನಿಂತು ತಾರೆಗಳ ಕಿರೀಟ ತೊಡದಿರಲು ನಾನೇನು ತಪಸ್ವಿಯೇ? ತಪಸ್ವಿಯಾಗಿದ್ದರೆ ಆ ದಾರಿ ಬಿಟ್ಟು ಎತ್ತರಕ್ಕೆ ಹಂಬಲಿಸುತ್ತಲೇ ಇರಲಿಲ್ಲವೇನೋ! ಕಡೆಗೂ ದಾರಿಯ ಶಾಶ್ವತ ಸುಖವನ್ನು ತೊರೆದು ಉತ್ತುಂಗದ ಭ್ರಮೆಗೆ ತೆತ್ತುಕೊಂಡೆ.

‍ಲೇಖಕರು Avadhi

December 16, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: