ಪ್ರೇಮ ಪತ್ರದ ಆಫೀಸು ಮತ್ತು ಅವಳು‌

‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು.

ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ.

ಬೆಂಗಳೂರಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿರುವ ಇವರ ಟೈಪಿಸ್ಟ್ ತಿರಸ್ಕರಿಸಿದ ಕಥೆಯನ್ನು ಬಹುರೂಪಿಪ್ರಕಟಿಸಿದೆ. ಇವರು ಇಂಗ್ಲಿಷ್ ಕುರಿತೇ ವಿಜಯ ಕರ್ನಾಟಕದಲ್ಲಿ ಬರೆಯುವ ಅಂಕಣ ಅತ್ಯಂತ ಜನಪ್ರಿಯ 

ಪ್ರತಿ ಬುಧವಾರದ ‘ಮಾವಲಿ ರಿಟರ್ನ್ಸ್’ನಲ್ಲಿ ಅವರುಂಟು ನೀವುಂಟು.

‘ಇಲ್ಲಿ ಪ್ರೇಮ ಪತ್ರಗಳನ್ನು ಬರೆದು ಕೊಡಲಾಗುತ್ತದೆ’ ಎಂದು ಬೋರ್ಡ್ ನೇತು ಹಾಕಿಕೊಂಡು ಕೂತವನ ಬಳಿ ಯಾರೊಬ್ಬರೂ ಸುಳಿಯಲಿಲ್ಲ. ಲೋಕದಲ್ಲಿ ಎಷ್ಟೊಂದು ಪ್ರೇಮವಿದೆ, ಎಷ್ಟೋಂದು ಪ್ರೇಮಿಗಳಿದ್ದಾರೆ. ಹಾಗಿದ್ದೂ ಏಕೆ ಯಾರೂ ತನ್ನ ಬಳಿ ಬರುತ್ತಿಲ್ಲ? ಎಲ್ಲರಿಗೂ ಖುದ್ದಾಗಿ ಪ್ರೇಮ ಪತ್ರಗಳನ್ನು ಬರೆಯುವಷ್ಟು ಸಮಯ ಮತ್ತು ಸಂಯಮ ಇರುವುದಾದರೂ ಸಾಧ್ಯವೆ? ಎಂದು ಯೋಚಿಸಿ ತನ್ನ ಊಹೆ ಬುಡಮೇಲಾಗುತ್ತದೇನೋ ಅನ್ನಿಸಿ, ಇನ್ನೇನು ಈ ಆಫೀಸು ಮುಚ್ಚುವುದೇ ಒಳ್ಳೆಯದೇನೋ ಎಂಬ ತೀರ್ಮಾನಕ್ಕೆ ಬರುವವನಿದ್ದ. ಅಷ್ಟರಲ್ಲಿ ಒಬ್ಬ ಮೂವತ್ತರ ಆಸುಪಾಸಿನ ಹುಡುಗಿ ಆ ಆಫೀಸಿಗೆ ಬಂದು, ಒಂದು ಪ್ರೇಮ ಪತ್ರ ಬರೆದು ಕೊಡಬೇಕೆಂದು ಬೇಡಿಕೆಯಿಟ್ಟಳು. ಅವನಿಗೋ ಖುಷಿಯೋ ಖುಷಿ.

‘ನಿಮಗೆ ಯಾವ ರೀತಿಯ ಪ್ರೇಮ ಪತ್ರ ಬರೆದು ಕೊಡಬೇಕು ಹೇಳಿ ?’ ಎಂದು ಕೇಳಿದನವನು.
ಪ್ರೇಮ ಪತ್ರದಲ್ಲೂ ಪ್ರಕಾರಗಳಿವೆಯಾ ಎಂದು ಅವಾಕ್ಕಾದಳು ಅವಳು.
‘ಅಂದರೆ ?’ ಎಂದಳಷ್ಟೆ.
‘ಬಾಯ್ ಫ್ರೆಂಡ್ ಟು ಗರ್ಲ್ ಫ್ರೆಂಡ್
ಗರ್ಲ್ ಫ್ರೆಂಡ್ ಟು ಬಾಯ್ ಫ್ರೆಂಡ್
ಗಂಡನಿಂದ ಹೆಂಡತಿಗೆ
ಹೆಂಡತಿಯಿಂದ ಗಂಡನಿಗೆ
ಅಜ್ಜನಿಂದ ಅಜ್ಜಿಗೆ
ಅಜ್ಜಿಯಿಂದ ಅಜ್ಜನಿಗೆ
ಹರೆಯದ ಹುಡುಗ/ ಹುಡುಗಿಯರ ಅಸ್ಪಷ್ಟ ಪ್ರೇಮಿಗೆ
ಸೀಕ್ರೆಟ್ ಅಡ್ಮೈರರ್ ಗೆ
ಭಾವೀ ಪ್ರೇಮಿಯಾಗುವವರಿಗೆ (Prospective Beloved)
ಹೀಗೆ ಇನ್ನೂ ಏನೇನೋ ಪ್ರಕಾರಗಳಿವೆ. ನಿಮಗೆ ಯಾವುದು ಬೇಕು?’ ಎಂದು ತನ್ನ ಬಳಿ ಲಭ್ಯವಿರುವ ಸೇವೆಗಳ ಪಟ್ಟಿಯನ್ನೇ ಮುಂದಿಟ್ಟನಾತ.

ಏನೂ ಹೇಳದೆ ವಾಪಸ್ಸು ಹೊರಟು ಬಿಟ್ಟಳವಳು. ಅವಳನ್ನು ತಡೆದು ನಿಲ್ಲಿಸಿದಾತ, ‘ಏಕೆ ಹಾಗೇ ಹೋಗುತ್ತಿದ್ದೀರಿ?’ ಎಂದ.

‘ಈ ಥರದ ಯಾವ ಪತ್ರಗಳೂ ನನಗೆ ಬೇಡ. ಅಲ್ಲದೆ ನನಗೆ ಉದ್ದುದ್ದದ ಪತ್ರಗಳೂ ಬೇಡ. ಕೇವಲ ಎರಡು ಮೂರು ಸಾಲಿನಲ್ಲಿ ಮಾತ್ರ ಬರೆದು ಕೊಡಬೇಕು. ಜೊತೆಗೆ ನೀವು ಹೇಳಿರುವಂತೆ ಯಾವ ಪ್ರಕಾರ ಎಂದು ತಿಳಿದು ನೀವು ಬರೆಯಬೇಕಾಗಿಲ್ಲ. ‘ಪ್ರೇಮ’ವೆಂದರೆ ಎಲ್ಲವೂ ಒಂದೇ. ಒಬ್ಬ ಪ್ರೇಮಿಯಾಗಿ ಮಾತ್ರ ಬರೆದರೆ ಸಾಕು. ಆದರೆ ಆ ಥರದ ಆಯ್ಕೆ ನಿಮ್ಮಲ್ಲಿ ಇಲ್ಲವಲ್ಲ ಹಾಗಾಗಿ ವಾಪಾಸ್ಸು ಹೊರಟೆ’

‘ಡೋಂಟ್ ವರಿ. ಹಾಗೆಯೇ ಬರೆದು ಕೊಡುತ್ತೇನೆ. ಒಂದು ದಿನ ಸಮಯ ಕೊಡಿ’

‘ಆಗಲಿ. ನಾಳೆ ಬರುತ್ತೇನೆ ‘

* * *

ನಾಳೆ ನನಗೆ ಪತ್ರ ಸಿಗುತ್ತದೆ ಎಂಬ ಖುಷಿಯಲ್ಲಿ ಅವಳು ರಾತ್ರಿಯನ್ನು ಕಳೆದರೆ, ಯಾರದ್ದೋ ಪ್ರೇಮಿಯನ್ನು ನೆನೆದು ಹೇಗೆ ಪತ್ರ ಬರೆಯುವುದೆಂದು ಚಿಂತಿಸುತ್ತಾ ಇವನು ರಾತ್ರಿಯಿಡೀ ಯೋಚಿಸಿದ. ಅವಳು ಹುಮ್ಮಸ್ಸಿನಲ್ಲಿ ಪ್ರೇಮ ಪತ್ರದ ಆಫೀಸಿಗೆ ಮರುದಿನ ಬಂದಳು.

‘ನಿಮ್ಮ ಪತ್ರ ರೆಡಿ ಇದೆ’ ಎಂದು ಲಕೋಟೆಯೊಂದನ್ನು ಅವಳ ಮುಂದಿಟ್ಟ.

ಅವಳು ಇದರ ಬೆಲೆ ಎಷ್ಟು ಎಂದಳು. ಅದಕ್ಕವನು, ‘ಮನೆಗೆ ಹೋಗಿ ಪತ್ರ ಓದಿ ನೋಡಿ ಹೇಳಿ. ನೀವು ನನ್ನ ಮೊದಲ ಕಸ್ಟಮರ್. ಓಪನಿಂಗ್ ಆಫರ್ ಅಂತ ಈ ಪತ್ರಕ್ಕೆ ದುಡ್ಡು ತಗೊಳಲ್ಲ. ಇಷ್ಟ ಆದರೆ ನೀವು ಮತ್ತೆ ಬರ್ತೀರ. ಆಗ ದುಡ್ಡು ತಗೋತಿನಿ’ ಎಂದ.

ಪ್ರೇಮ ಪತ್ರಗಳನ್ನು ತುಂಬಾ ಕಾದು ಓದಲಾದೀತೆ? ಮನೆಗೆ ಹೋಗುವವರೆಗೆ ಕಾಯದೆ, ದಾರಿಯಲ್ಲೇ ಲಕೋಟೆ ತೆಗೆದಳು.

“ತನಗಾಗಿ ತಾನು ಏನನ್ನೂ ಮಾಡಿಕೊಳ್ಳದ ನೀರಿನಂತೆ ನಾನು ನಿನ್ನನ್ನು ಪ್ರೀತಿಸುತ್ತೇನೆ” ಎಂದು ಬರೆದಿದ್ದ ಪತ್ರವನ್ನು ಓದಿದ ಅವಳಿಗೆ ಅದು ಬಹಳ ಮೆಚ್ಚುಗೆಯಾಯಿತು. ಅಷ್ಟರಲ್ಲಿ ಆ ಆಫೀಸಿಗೆ ಸರಿಸುಮಾರು ಅದೇ ವಯಸ್ಸಿನ ಹುಡುಗನೊಬ್ಬ ಬಂದ. ತನಗೂ ಒಂದು ಪತ್ರ ಬೇಕೆಂದು ಬೇಡಿಕೆಯಿಟ್ಟ.

ಈ ಬಾರಿ ಮಾಲೀಕ ಅವನ ಬಳಿ ಎಂಥ ಪತ್ರ ಬೇಕೆಂದು ಕೇಳಲಿಲ್ಲ. ಆದರೆ ಆ ಹುಡುಗನೇ ಹೇಳಿದ; ನೋಡಿ ದೀರ್ಘವಾಗಿ ಬರೆದರೆ ಈಗೆಲ್ಲ ಯಾರೂ ಓದಲ್ಲ. ಒಂದೆರೆಡು ಸಾಲುಗಳಲ್ಲೇ ಮನಸ್ಸಿಗೆ ನಾಟುವಂಥ ಪತ್ರ ಬರೆದು ಕೊಡಿ. Nothing Personal. ಆದರೆ ಓದಿದಾಗ ಮಾತ್ರ ಇದು ನನಗೇ ಬರೆದದ್ದು ಅನ್ನಿಸುವಂತಿರಬೇಕು.

ಕೆಲ ಹೊತ್ತು ಕಾಯಲು ಹೇಳಿ ಪತ್ರ ಸಿದ್ಧಪಡಿಸಿ ತಂದು ಅವನ ಕೈಗಿಟ್ಟ.

“ಲೋಕ ಏನಾದರೂ ಅಂದುಕೊಳ್ಳಲಿ. ಮುಳ್ಳಿನ ಜೊತೆಯೇ ಇರುವ ಗುಲಾಬಿ ಹೂವಿನಂತೆ ನಾನು ನಿನ್ನನ್ನು ಪ್ರೀತಿಸುತ್ತೇನೆ”

ಎಂಬ ಸಾಲುಗಳನ್ನು ಓದಿಕೊಂಡ ಆ ಹುಡುಗ ಓಡೋಡಿ ಹೋಗಿ ತನ್ನ ಗೆಳತಿಯ ಕೈಯಲ್ಲಿ ಆ ಪತ್ರ ಇಟ್ಟಿದ್ದ. ಆ ಇಬ್ಬರೂ ಆವತ್ತಿನಿಂದ ಅವನ ಖಾಯಂ ಗಿರಾಕಿಗಳಾದರು. ಹೀಗೆ ಅವನು ತನ್ನ ಎರಡು ಸಾಲುಗಳ ಪ್ರೇಮ ಪತ್ರಗಳಿಂದಾಗಿ ನೂರಾರು ಗಿರಾಕಿಗಳನ್ನು ಪಡೆದ. ಬಂದ ಯಾವ ಪ್ರೇಮಿಗಳಲ್ಲೂ ಆತ ಅವರ ಪ್ರೇಮ ವೃತ್ತಾಂತವನ್ನು ಕೇಳುತ್ತಿರಲಿಲ್ಲ. ಅವನು ಬರೆಯುವ ಉತ್ಕಟವಾದ ಎರಡು ಸಾಲುಗಳಿಗಾಗಿ ಅವನು ಕೇಳಿದಷ್ಟು ಹಣವನ್ನು ಜನ ಕೊಡುತ್ತಿದ್ದರು.

ಒಂದು ದಿನ ಒಬ್ಬ ಗಿರಾಕಿ, ನನ್ನವಳು ನನ್ನನ್ನು ಎಷ್ಟು ದಿನ ಹೀಗೆಯೇ ಪ್ರೀತಿಸುತ್ತೀಯ ಎನ್ನುತ್ತಾಳೆ. ಅವಳಿಗೊಂದು ನಿಖರವಾದ ಉತ್ತರ ಬೇಕಂತೆ. ಏನು ಬರೆದು ಕೊಡುತ್ತೀರಿ ಎಂದದ್ದಕ್ಕೆ , “ಸಾಗರಗಳು ಬತ್ತುವವರೆಗೂ ನಿನ್ನ ಪ್ರೇಮಿಸುತ್ತಲೇ ಇರುತ್ತೇನೆ” ಎಂದು ಬರೆದು ಕೊಟ್ಟಿದ್ದ.

ಅವನ ಮೊದಲ ಗಿರಾಕಿ ಒಂದು ದಿನ ಅವನನ್ನು ಕೇಳಿದಳು, ‘ವ್ಯಾಪಾರಕ್ಕಾಗಿಯೇ ಇಷ್ಟೊಂದು ಚೆನ್ನಾಗಿ ಪ್ರೇಮ ಪತ್ರಗಳನ್ನು ಬರೆಯುವ ನೀವು ನಿಮ್ಮ ಪ್ರೇಯಸಿಗೆ ಇನ್ನೆಂಥ ಗಾಢವಾದ ಪ್ರೇಮ ಪತ್ರಗಳನ್ನು ಬರೆದಿರಬಹುದು? ನೀವು ತಪ್ಪು ತಿಳಿಯುವುದಿಲ್ಲ ಎಂದಾದರೆ ಅವುಗಳನ್ನು ನನಗೆ ಓದಲು ಕೊಡುತ್ತೀರ?’

‘ನನಗೆ ಯಾವ ಪ್ರೇಯಸಿಯೂ ಇಲ್ಲ’ ಎಂದು ಅವನು ಹೇಳಿದಾಗ ಅವಳಿಗೆ ಆಶ್ಚರ್ಯವಾಯಿತು.

‘ನನಗೂ ಯಾವ ಪ್ರೇಮಿಯೂ ಇಲ್ಲ’ ಎಂದು ಮೆಲ್ಲಗೆ ಹೇಳಿದಳಾಕೆ.

ಏನಿಲ್ಲವೆಂದರೂ ನೂರು ಪತ್ರಗಳನ್ನು ಬರೆಸಿಕೊಂಡಿದ್ದ ಆಕೆ ತನಗೆ ಪ್ರೇಮಿಯೇ ಇಲ್ಲ ಎಂದು ಹೇಳಿದಾಗ ಆಶ್ಚರ್ಯ ಪಡುವುದು ಅವನ ಸರದಿಯಾಗಿತ್ತು.

‘ಮತ್ತೇಕೆ ನೀವು ನನ್ನ ಬಳಿ ಪತ್ರಗಳನ್ನು ಕೊಳ್ಳುತ್ತಿದ್ದದ್ದು?’ ಎಂದ.

‘ನಾಳೆ ನಮ್ಮ ಮನೆಗೆ ಬಂದರೆ ತಿಳಿದುಕೊಳ್ಳಬಹುದು’ ಎಂದು ಹೇಳಿ ಮನೆಯ ವಿಳಾಸವನ್ನು ಅಲ್ಲಿಟ್ಟು ಹೊರಟು ಹೋದಳು.

ಇವನಿಗೆ ಅವಳ ಮನೆಗೆ ಹೋಗಬೇಕೋ ಬೇಡವೋ ಎಂಬುದು ಸರಿಯಾಗಿ ತೋಚಲಿಲ್ಲ. ಅವಳು ನನ್ನಿಂದ ಪತ್ರ ಬರೆಸಿಕೊಂಡ ಒಬ್ಬ ಗಿರಾಕಿಯಷ್ಟೆ. ಅದಕ್ಕಾಗಿ ಆಕೆ ಹಣವನ್ನೂ ಕೊಟ್ಟಿದ್ದಾಳೆ. ನಾನೇಕೆ ಅವಳ ಜೀವನದ ಬಗ್ಗೆ ಉತ್ಸುಕನಾಗಬೇಕು ಎಂದೆಲ್ಲ ಯೋಚಿಸಿದ. ಆದರೆ ತನ್ನತ್ತ ಯಾರೊಬ್ಬರೂ ತಿರುಗಿ ನೋಡದಿದ್ದಾಗ ನನ್ನ ಪ್ರೇಮ ಪತ್ರದ ಆಫೀಸಿಗೆ ಬಂದ ಮೊದಲ ಗಿರಾಕಿ ಅವಳಾದ್ದರಿಂದ ಒಮ್ಮೆ ಹೋಗಿ ಬರೋಣ ಎಂದು ನಿರ್ಧರಿಸಿದ. ನಿರ್ಧರಿಸಿದಂತೆಯೇ ನಡೆದುಕೊಂಡ. ಅವಳು, ಇವನು ಬಂದೇ ಬರುತ್ತಾನೆಂದು ಪ್ರೇಮ ನಿವೇದನೆಗೆ ತಯಾರಾಗಿ ಹೋಗುವ ಹುಡುಗಿಯಂತೆ ಕಾಯುತ್ತಿದ್ದಳು. ಅವನನ್ನು ಸ್ವಾಗತಿಸಿ ತನ್ನ ಮನೆಯನ್ನೆಲ್ಲ ಸುತ್ತಾಡಿಸಿದಳು.

‘ನೀವು ಒಬ್ರೆ ಇರೋದಾ ಇಲ್ಲಿ?’ ಎಂದ.

‘ಹೌದು. ಇಲ್ಲಿ ಅಂತ ಅಲ್ಲ, ಎಲ್ಲಿಲ್ಲಿಯೂ ನಾನೊಬ್ಬಳೇ ಇರೋದು’

‘ಅಂದರೆ ?’

‘ಅದು ಬಿಡಿ.. ಏನಿಲ್ಲ..’

‘ಹೋಗ್ಲಿ ಬಿಡಿ.. ನಿಮ್ಮ ಪ್ರೇಮಿಯೂ ನಿಮ್ಮ ಜೊತೆಗಿರುತ್ತಾರೆ. ಅವರಿಗೆ ಪರಿಚಯಿಸಲು ನನ್ನನ್ನು ಕರೆದಿದ್ದೀರಿ ಅಂದುಕೊಂಡೆ’

‘ಹೌದು. ಅದಕ್ಕಾಗಿಯೇ ನಿಮ್ಮನ್ನು ಕರೆದಿರೋದು. ಅವನನ್ನು ನಿಮಗೆ ಪರಿಚಯಿಸಲೇಬೇಕು’ ಎಂದು ಹೇಳಿದವಳು ರೂಮಿನ ಬಾಗಿಲು ತೆಗೆದು,
‘ ಬನ್ನಿ, I will make you meet my soulmate’ ಎಂದಳು.

ಅವನು ಎದ್ದು ಹೋದ. ತನ್ನ ಪ್ರೇಮಿಯನ್ನು ರೂಮಿನೊಳಗೆ ಕದ್ದು ಕೂರಲು ಹೇಳಿ ತಾನೊಬ್ಬಳೇ ಇರುವಂತೆ ನಂಬಿಸಿದ ಆಕೆಯ ಮೇಲೆ ಕೋಪ ಬಂತು. ಅವಳು ಕೈ ಸನ್ನೆಯಲ್ಲಿ ರೂಮಿನೊಳಗೆ ಬರುವಂತೆ ಕರೆದಳು. ಇವನು ಹೋದ .

ಅವಳು ಇವನಿಂದ ಬರೆಸಿಕೊಂಡ ಪತ್ರಗಳನ್ನೆಲ್ಲ ಹಾಸಿಗೆಯ ಮೇಲೆ ಜೋಡಿಸಿಟ್ಟಿದ್ದಳು. ಸುಮ್ಮನೆ ನಿಶ್ಯಬ್ದವಾಗಿ ಒಂದೆರೆಡರ ಮೇಲೆ ಕಣ್ಣಾಡಿಸಿದ:

‘ಒಂದು ವೇಳೆ ಸರ್ಕಾರ ನಮ್ಮ ಪ್ರೀತಿಯ ಮೇಲೆ ತೆರಿಗೆ ವಿಧಿಸಿದರೆ, ಅತೀ ಹೆಚ್ಚು ಪಾವತಿಸುವ ತೆರಿಗೆದಾರ ನಾನೇ ಆಗಿರುತ್ತೇನೆ.’

***

‘ಅಮೃತಶಿಲೆಗಳಿಂದ ತಾಜ್ ಮಹಲ್ ಕಟ್ಟುವ
ಶಕ್ತಿ ನನಗಿಲ್ಲ
ಆದರೆ…
ನಿನ್ನ ನೆನಪುಗಳಲ್ಲಿ
ನಾನು ಕಳೆವ ಕ್ಷಣಗಳನ್ನು
ಕೂಡಿಸಿದರೆ
ನೆನಪಿನ ಮಹಲ್ ಒಂದು
ಇದಕ್ಕಿಂತ ಮಜಭೂತಾಗಿ ನಿಲ್ಲಬಲ್ಲದು…’

***

‘ಸಾವಿರ ಜನರ ಮಧ್ಯೆ ಇದ್ದರೂ
ನಾನು ಏಕಾಂಗಿಯೇ. ಅಲ್ಲಿ ನಿನ್ನ ನೆನಪ ಭಾವವಿರದಿದ್ದರೆ’

***

ತಾನೇ ಬರೆದ ಸಾಲುಗಳನ್ನು ಓದುವುದರಲ್ಲೇನು ಅವನಿಗೆ ಆಸಕ್ತಿ ಇರಲಿಲ್ಲ. ಅವಳ ಬಗ್ಗೆ ಏಕೋ ಅನುಮಾನ ಮೂಡಿತು. ಇವಳು ಯಾವುದೋ ಬಲೆಯಲ್ಲಿ ತನ್ನನ್ನು ಸಿಲುಕಿಸಲು ಪ್ರಯತ್ನಿಸುತ್ತಿದ್ದಾಳೇನೋ ಅನ್ನಿಸಿತು. ತನ್ನದೇ ಪ್ರೇಮ ಪತ್ರಗಳನ್ನು ಬಳಸಿಕೊಂಡು ತನ್ನನ್ನು ಪ್ರೇಮಪಾಷಕ್ಕೆ ಬೀಳಿಸಲು ಆಕೆ ಹೂಡಿದ ತಂತ್ರವಿರಬಹುದು. ಅದಕ್ಕಾಗಿಯೇ ಯಾರೂ ಇಲ್ಲದ ಸಮಯದಲ್ಲಿ ತನನ್ನು ಕರೆದು ಹೀಗೆ ರೂಮಿನೊಳಗೆ ಬರುವಂತೆ ಮಾಡಿದ್ದಾಳೆ. ಆದರೆ ತಾನು ಈ ಜಾಲಕ್ಕೆ ಬೀಳದೆ ಎಚ್ಚರದಿಂದಿರಬೇಕು ಎಂದು ಯೋಚಿಸತೊಡಗಿದ.

ಅವನ ಯೋಚನೆಯಲ್ಲಿ ಎಳ್ಳಷ್ಟು ಹುರುಳಿರಲಿಲ್ಲ ಎಂಬುದು ಅರ್ಥವಾಗಲು ಬಹಳ ಸಮಯವೇನು ಹಿಡಿಯಲಿಲ್ಲ.

‘ನಿಮ್ಮ ಪ್ರೇಮಿ ರೂಮಿನಲ್ಲಿದ್ದಾರೆ ಎಂದಿರಲ್ಲ. ಎಲ್ಲಿ ಅವರು?’ ಎಂದ

‘ತನ್ನ ಮಂಚದ ಪಕ್ಕದಲ್ಲಿದ್ದ ಟೇಬಲ್ ಮೇಲಿದ್ದ ತನ್ನ ಪ್ರೇಮಿಯ ಫೋಟೋವನ್ನು ತೋರಿಸಿದಳಾಕೆ’

‘ಓಹ್! He is handsome. ಆದ್ರೆ ಅವರಿಲ್ಲದ ಸಮಯದಲ್ಲಿ ನನ್ನೇಕೆ ಕರೆದಿರಿ?’

‘ಅವನೇನೂ ತಪ್ಪು ತಿಳಿಯುವುದಿಲ್ಲ. ನಿಮ್ಮ ಬಗ್ಗೆ ಪ್ರತೀ ದಿನ ಅವನಿಗೆ ಹೇಳಿದ್ದೇನೆ. ನಿಮ್ಮ ಪರಿಚಯ ಅವನಿಗೆ ಚೆನ್ನಾಗಿದೆ. ಡೋಂಟ್ ವರಿ’

‘ಆದರೂ ನಾನು ಅವರನ್ನು ಭೇಟಿಯಾಗಿದ್ದರೆ ಬಹಳ ಖುಷಿಯಾಗುತ್ತಿತ್ತು ‘

‘There is always next time’ ಎಂದಳಾಕೆ .

‘Oh! Next time then’ ಎಂದು ಅಲ್ಲಿಂದ ಹೊರಟು ನಿಂತ.

‘ಅಯ್ಯೋ. ನಿಮಗಾಗಿ ಸ್ಪೆಷಲ್ ಅಡುಗೆ ಮಾಡಿದ್ದೇನೆ. ಊಟ ಮಾಡದೆ ಹೋದರೆ ಹೇಗೆ?’ ಎಂದು ಅವಳು ಒತ್ತಾಯಿಸದಳು. ಅವನು ಅದಕ್ಕೆ ಮಣಿದ. ಇಬ್ಬರೂ ಜೊತೆಯಲ್ಲಿ ಕೂತು ಊಟ ಮಾಡಿದರು. ಅವನನ್ನು ಬೀಳ್ಕೊಡುವಾಗ ಆಕೆ ಹೇಳಿದಳು;

‘ನಿಮಗೊಂದು ನೆನಪಿನ ಕಾಣಿಕೆ ಕೊಡುತ್ತೇನೆ. ದಯವಿಟ್ಟು ಇಲ್ಲ ಎನ್ನದೆ ಸ್ವೀಕರಿಸಬೇಕು’

‘ಆಗಲಿ’ ಒಲ್ಲದ ಮನಸ್ಸಿನಿಂದಲೇ ಒಪ್ಪಿಕೊಂಡ.

ಅವನ ಕೈಗೊಂದು ಪಾರ್ಕರ್ ಪೆನ್ನು ಕೊಟ್ಟು, ‘ಇನ್ನು ಮೇಲೆ ನೀವು ಪ್ರೇಮ ಪತ್ರಗಳನ್ನು ಬರೆಯಲು ಇದೇ ಪೆನ್ನು ಬಳಸಬೇಕು. ಇದು ನನ್ನ ಸಣ್ಣ ಕಾಣಿಕೆ’ ಎನ್ನುತ್ತಾ ತುಟಿಯಂಚಲ್ಲಿ ಸಣ್ಣ ನಗು ಬೀರಿದಳು.

ಇದನ್ನು ಸ್ವೀಕರಿಸಬೇಕೋ ಎಂದು ದೀರ್ಘವಾಗಿ ಯೋಚಿಸುವಷ್ಟು ಪುರಸೊತ್ತು ಇರಲಿಲ್ಲ ಅವನಿಗೆ ‘ಹಾಗೆಯೇ ಆಗಲಿ’ ಎನ್ನುತ್ತಾ ಅವನೂ ತುಂಟ ನಗು ಹೊಮ್ಮಿಸಿ ಹೊರನಡೆದ.

***

ಆತ ಹೋಗುತ್ತಿದ್ದಂತೆ ರೂಮಿಗೆ ಬಂದು ಜೋರಾಗಿ ಅಳ ತೊಡಗಿದ ಆಕೆ. ಫೋಟೋ ಮುಂದೆ ಕೂತು ಮುಂದಿನಂತೆ ಹೇಳಿಕೊಂಡಳು:

‘ಕ್ಷಮಿಸು ರಾಜ್. ಅವನ ಪತ್ರಗಳನ್ನು ಪ್ರತೀ ಸರಿ ನಿನಗೆ ಓದಿ ಹೇಳುವಾಗಲೂ ನೀನು ಅವನನ್ನು ಒಮ್ಮೆ ನೋಡಬೇಕು ಎಂದುಕೊಳ್ಳುತ್ತಿದ್ದೆ ನಾನು. ನಿನ್ನಂಥ ಅಪ್ಪಟ ಪ್ರೇಮಿಯ ಜೊತೆ ಬದುಕುವ ಅವಕಾಶ ಇಲ್ಲದ ನತದೃಷ್ಟೆ ನಾನು. ನೀನು ಇಲ್ಲವಾದ ದಿನದಿಂದಲೂ ನಾನು ನಿನ್ನ ಇರವನ್ನು ಫೀಲ್ ಮಾಡಿಕೊಂಡೇ ಬದುಕಬೇಕೆಂದು ತೀರ್ಮಾನಿಸಿದೆ ಮತ್ತು ಹಾಗೆಯೇ ಬದುಕುತ್ತಿದ್ದೇನೆ. ಹಾಗಾಗಿಯೇ ನಿನಗೆ ಈಗಲೂ ಪ್ರೇಮ ಪತ್ರಗಳನ್ನು ಬರೆಯುತ್ತಿದ್ದೇನೆ. ನನಗೆ ಪ್ರೇಮಿಸಲು ಬಂದ ಹಾಗೆ ಪ್ರೇಮ ಪತ್ರಗಳನ್ನು ಬರೆಯಲು ಬರುವುದಿಲ್ಲ. ಹಾಗಾಗಿ ಈತನ ಆಫೀಸಿಗೆ ಹೋಗಿ ಬರೆಸಿಕೊಂಡು ಬರುತ್ತೇನೆ. ಅವನು ನೋಡಿದರೆ ಪತ್ರ ಬರೆದಂತೆ ಪ್ರೇಮಿಸಲು ಬಾರದವನು. ಇದೆಂಥ ವೈಚಿತ್ರವೋ ತಿಳಿಯೆ. ಆದರೆ ನಿನಗೆ ಸುಳ್ಳು ಹೇಳಬಾರದೆಂಬ ಕಾರಣಕ್ಕೆ. ಇವತ್ತು ಅವನನ್ನು ಬರಲು ಹೇಳಿ. ಅವನ ಎದುರಲ್ಲೇ ನಿನಗೆ ಇದನ್ನೆಲ್ಲ ಹೇಳಿ ಬಿಡೋಣ ಅಂದುಕೊಂಡಿದ್ದೆ. ಆದರೆ ಯಾಕೋ ಅವನೆದರು ನೀನು ಇಲ್ಲದ ವಿಷಯ ಹೇಳಬೇಕು ಅನ್ನಿಸಲಿಲ್ಲ. ಸತ್ಯವನ್ನು ನಿನಗೆ ಹೇಳಿ ಇಂದು ಹಗುರಾಗಿದ್ದೇನೆ. ಇನ್ನು ಮುಂದೆ ನಿನಗೆ ‘ಅವನ ಪದಗಳ’ ಭಾರ ಹೊರಿಸುವುದಿಲ್ಲ.

* * *

ಆನಂತರ ಆಕೆ ಪ್ರೇಮ ಪತ್ರದ ಆಫೀಸಿನ ಬಳಿ ಮತ್ತೆಂದೂ ಬರಲೇ ಇಲ್ಲ. ‘ತನಗಾಗಿ ಏನನ್ನೂ ಮಾಡಿಕೊಳ್ಳದ ನೀರಿನಂತೆ ನಾನು ನಿನ್ನನ್ನು ಪ್ರೀತಿಸುತ್ತೇನೆ’ ಎಂಬ ಸಾಲುಗಳನ್ನೇ ದಿನಂಪ್ರತಿ ಬರೆದು ಆ ಫೋಟೋ ಮುಂದೆ ಓದುತ್ತಿದ್ದಳು.

ಈ ಅಂಗಡಿಯ ಮಾಲೀಕ ಮಾತ್ರ ಅವಳು ಯಾವುದೋ ಫೋಟೋ ಇಟ್ಟು ನಾಟಕವಾಡಿದಳು. ತನಗೆ ಪ್ರೇಮ ಪತ್ರ ಬರೆಯಲೆಂದೇ ಪೆನ್ನು ಉಡುಗೊರೆ ಕೊಟ್ಟಿದ್ದಳೇನೋ. ನಾನು ಅವಳ ಬಲೆಗೆ ಬೀಳುವವನಲ್ಲ ಎಂದು ಅರ್ಥವಾಗಿರಬೇಕು ಪಾಪ, ಈ ಕಡೆ ಬರುವುದನ್ನೇ ಬಿಟ್ಟಿದ್ದಾಳೆ ಎಂದು ಯೋಚಿಸುತ್ತಾ ತನ್ನ ಪ್ರೇಮ ಪತ್ರ ಬರೆಯುವ ಬ್ಯುಸಿನೆಸ್ ಹೇಗೆ ಎಕ್ಸ್ಪ್ಯಾಂಡ್ ಮಾಡುವುದೆಂದು ಲೆಕ್ಕ ಹಾಕುತ್ತಿದ್ದಾನೆ.

ಬದುಕಿಲ್ಲದ ಅವನನ್ನು ಇನ್ನಿಲ್ಲದಂತೆ ಪ್ರಾಮಾಣಿಕವಾಗಿ ಪ್ರೀತಿಸುವ ಅವಳು ಒಂದೆಡೆಯಾದರೆ.. ಉತ್ಕಟವಾಗಿ ಪ್ರೇಮ ಪತ್ರಗಳನ್ನು ಬರೆದು ಕೊಡುವ ಆ ಮಾಲೀಕನಿಗೆ ಇನ್ನೂ ಯಾವ ಪ್ರೇಮವೂ ಹುಟ್ಟಿಲ್ಲದಿರುವುದು ವಿಪರ್ಯಾಸವೇ ಸರಿ!

December 16, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Kiran Bhat

    ಬಷೀರ್ ರ ‘ ಲವ್ ಲೆಟರ್’ ನೆನಪಾಯ್ತು.
    ಬರಹ ತುಂಬ ಚೆನ್ನಾಗಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: