ಪೊಲೀಸರ ಬೂಟಿನಡಿ ಕನಸುಗಳ ಬಲಿಯಾಗಿತ್ತು..

ಆ ಮನೆಯ ಹೆಣ್ಣುಮಗು ಸುಮಾರು ದಿನದಿಂದ ಕಾಣ್ತಿಲ್ಲವಂತೆ… ಬೆಳಗ್ಗೆ ಕೆಲಸಕ್ಕೆ ಅಂತ ಹೋದ ಇನ್ನೊಂದು ಗೂಡಿನ ಹೆಣ್ಣುಮಗು ವಾಪಸ್ಸು ಬರಲೇ ಇಲ್ಲವಂತೆ… ಹುಡುಕುತ್ತಿದ್ದಾರಂತೆ… ಹೀಗೊಂದು ಸುದ್ದಿ ಕಿವಿಗೆ ಬಿದ್ದಾಗ ಅಯ್ಯೋಛೇಹೌದಾ ಎನ್ನುವ ನಿಟ್ಟುಸಿರೊಂದು ನಮ್ಮ ಎದೆಯಿಂದಲೇ ಹೊರಬಿದ್ದಿರುತ್ತದೆ.

ಅದೇ ವೇಳೆಗೆ ನಮ್ಮ ಮನೆಯ ಮಟ್ಟಿಗೆ ಇಂಥದ್ದೊಂದು ನಡೆಯಲಿಲ್ಲವಲ್ಲ ನಮ್ಮ ಮಕ್ಕಳು ಮುಚ್ಚಟೆಯಾಗಿದ್ದಾರಲ್ಲ ಎನ್ನುವ ನೆಮ್ಮದಿಯ ಭಾವ ಮನಸಿನಾಳದಲ್ಲಿ ಬೆಚ್ಚಗೆ ಕೂತಿರುತ್ತದೆ.

ಈ ಕಾಣದಾದ ಮತ್ತು ವಾಪಸ್ಸು ಮನೆಗೆ ಹೋಗದ ಹೆಣ್ಣುಮಕ್ಕಳ ಬಗ್ಗೆ ಲೀಲಾ ಸಂಪಿಗೆ ನಮ್ಮ ನಿಮ್ಮೆಲ್ಲರ ವೈಯಕ್ತಿಕ ಮತ್ತು ಸಾಮಾಜಿಕ ಪ್ರಜ್ಞೆಯನ್ನು ತುಸು ಜಾಗೃತಗೊಳಿಸುತ್ತಿದ್ದಾರೆ ‘ಆಫ್ ದಿ ರೆಕಾರ್ಡ್’ ನಲ್ಲಿ.

ಆ ದಿನ ಮೆಜೆಸ್ಟಿಕ್ ನಲ್ಲಿ ಗಿರಾಕಿಗಾಗಿ ಕಾಯ್ತಿದ್ದೆ. ಹಸಿವಾಗಿತ್ತು. ಏಯ್ ಯಾರಾದ್ರೂ ಒಂದಿಪ್ಪತ್ತು ರೂಪಾಯಿ ಕೊಡ್ರೇ, ಹೊಟ್ಟೆ ಹಸೀತಿದೆ, ಹಾಳಾದವ್ರು ಯಾವನೊಬ್ಬನೂ ಕಾಣ್ತಿಲ್ಲ.. ಅಂದೆ. ಅಲ್ಲೇ ಕೂತ್ಕೊಂಡು ಮಗುವಿನ ತಲೆ ಹೇನು ತೆಗೀತಿದ್ದ ಮೀರಾ ದುಡ್ಡು ಕೊಟ್ಟಳು. ಅದೆಷ್ಟು ಪರಸ್ಪರ ಜಗಳ ಮಾಡ್ಕಿಳ್ತೀವೋ ಅಷ್ಟೇ ಜೀವಕ್ಕೆ ಜೀವ ಕೊಡೋ ಸ್ನೇಹಾನೂ ಇರುತ್ತೆ. ಕೆಲವೊಮ್ಮೆ ಒಂದು ರೂಪಾಯಿಗೂ ಹೊಡೆದಾಡ್ತೀವಿ, ಮತ್ತೆ ನಮ್ಮಗಳ ಮಧ್ಯೆ ಲೆಕ್ಕಾಚಾರವೇ ಇಲ್ಲದಂತೆಯೂ ಇರ್ತೀವಿ..

ಹೊಸ ಹುಡ್ಗೀರು ನಮ್ಮ ಖಾನ್ ದಾನ್ ಗೆ ಬಂದಾಗ ಆತಂಕದಿಂದಲೇ ಅವರನ್ನು ಪ್ರತಿರೋಧಿಸ್ತೀವಿ, ಹಳಬರಾಗ್ತಾ ಒಟ್ಟಾಗ್ತೀವಿ. ನಮಗೆ ನಮ್ಮನಮ್ಮಲ್ಲೇ ಹಗೆ ಹುಟ್ಟೋದು ಒಂದೇ ಕಾರಣಕ್ಕೆ.. ಅದು ನಾವು ಪ್ರೀತಿಸ್ತಿರೋ ಅಥವಾ ನಮ್ಮ ಗಂಡನೆಂದು ನಂಬಿರೋನ ಜೊತೆ ಬೇರೆ ಯಾವಳಾದ್ರೂ ಸಲುಗೆ ತೊಗೊಂಡ್ರೆ.. ಆಗ ಮಾರಾಮಾರೀನೇ ಆಗ್ಬಿಡುತ್ತೆ. ಯಾವತ್ತೂ ನಿಯತ್ತಿಲ್ಲದ, ನಮ್ಮ ದುಡಿಮೆಯ ಮೇಲೆ ಕಣ್ಣಿಟ್ಟು ಕಬಳಿಸೋ, ನಮ್ಮದೆಲ್ಲವನ್ನೂ ಸೂರೆ ಮಾಡಿ ಕೊನೆಗೆ ನೀನು ಬೀದಿ ಸೂಳೆ ಅನ್ನೋ ಗಂಡಸರನ್ನು, ಪದೇಪದೇ ನಂಬುತ್ತಲೇ ಹೋಗ್ತೀವಿ.  

ಅವರಿಂದ ಮಕ್ಕಳನ್ನೂ ಪಡೀತೀವಿ, ಮಕ್ಕಳಾದ ಮೇಲೆ, ಹೋಗೇ ಎಷ್ಟು ಜನಕ್ಕೆ ಹುಟ್ಟಿದ್ದೋ ಅದು, ನನ್ನ ಹೆಸರಿಗೆ ಯಾಕೆ ಕಟ್ತೀಯಾ ಅಂತ ಮೂದಲಿಸಿ ತಿರುಗಿ ನೋಡದೇ ಹೋದವನ ಮರೆತು ಮತ್ತೆ ಅಂತಹವನ ಹುಡುಕಾಟಕ್ಕೆ ಅಣಿಯಾಗ್ತೀವಿ.. ಸದಾ ಪ್ರೀತಿಯ, ಗರತಿಯ ಬದುಕಿನ ಹಂಬಲದ ನಿರೀಕ್ಷೆಯಲ್ಲೇ ಎರಡೋ, ಮೂರೋ ಮಕ್ಕಳೂ ಆಗಿ ಹೋಗ್ತಾವೆ..

ಗೂಡಂಗಡಿಗೆ ಹೋಗಿ ನಾಲ್ಕು ಬನ್ನು ಎರಡು ಟೀ ತಂದೆ. ಒಂದು ಬನ್ನನ್ನು ನನ್ನ ಟೀಯಲ್ಲೇ ಅದ್ದಿ ಮಗುವಿಗೆ ಕೊಟ್ಟೆ. ಅವಳಿಗೂ ಟೀ ಬನ್ನು ಕೊಟ್ಟೆ. ಅಷ್ಟರಲ್ಲಿ ಅದೆಲ್ಲಿದ್ದನೋ ಪೇದೆ ಹತ್ತಿರವೇ ಬಂದ. ಮಗುವಿದ್ದ ಕಾರಣ ಮೀರಾ, ನನ್ನ ಬಿಡಣ್ಣೋ, ಮಗ ಬಿಟ್ಟು ಹೆಂಗೆ ಬರ್ಲಿ ಅಂದ್ಳು. ಗಿರಾಕಿ ಬಂದ್ರೆ ಹೆಂಗೆ ಹೋಗ್ತೀಯೋ ಹಂಗೇ ಬಾ ಅಂದ. ನಾನು ಅಡ್ಡ ನಿಂತು ಅವಳನ್ನ ಆ ಕಡೆ ಓಡೋಕೆ ಸಹಕರಿಸ್ದೆ. ಉಳಿದಿದ್ದ ಟೀ ಬನ್ನು ಮುಗಿಸಿ ಅವನ ಹಿಂದೆ ಹೊರಟೆ. ನನ್ನ ಜೊತೆ ರಾಧಿಕಾಳೂ ಇದ್ದಳು.

ನಮ್ಮದು, ಪೋಲೀಸರದ್ದು ಒಂಥರಾ ನಮ್ಮ ಬಾಡಿಗೆ ಗಂಡಂದಿರ ಸಂಬಂಧದಂತೆಯೇ.. ಅವರು ಅಪರಿಚಿತರೇನೂ ಅಲ್ಲ, ಹಾಗಂತ ಪರಿಚಿತರು ಅಂತ ನಂಬೋ ಹಂಗೂ ಇಲ್ಲ.. ಮಾಮೂಲೀನೂ ವಸೂಲಿ ಮಾಡ್ತಾರೆ, ರೈಡೂ ಮಾಡ್ತಾರೆ. 

ಏ ಇನ್ನೂ ಒಬ್ಬ ಗಿರಾಕೀನೂ ಸಿಕ್ಕಿಲ್ಲ, ನಿನಗೆಲ್ಲಿಂದ ಕೊಡಲಿ ಅಂದೆ, ಬಾ ಸ್ಟೇಷನ್ ಗೆ ಅಂದ. ಬೇರೆ ದಾರಿಯೇ ಇರಲಿಲ್ಲ.. ಕೊಸರಾಡಿದ್ರೆ ಪೊಲೀಸ್ ಬುದ್ಧಿ ತೋರಿಸ್ತಾನೆ ಅಂತ ಅವನ ಹಿಂದೆ ಹೊರಟೆವು. ಉಪ್ಪಾರ ಪೇಟೆ ಪೋಲಿಸ್ ಸ್ಟೇಷನ್ ಗೆ ಕರ್ಕೊಂಡು ಹೋದ.

ಈ ಪೊಲೀಸರೆಂದರೆ ನನಗೆ ಅಂತ ಭಯವೇನು ಇಲ್ಲ. ಅದಕ್ಕೆ ಕಾರಣವೂ ಇದೆ. ನನ್ನನ್ನು ಈ ಸ್ಥಿತಿಗೆ ತಂದವರು ಇದೇ ಪೊಲೀಸರು. ಯಾರಾದ್ರೂ ಪೊಲೀಸರು ನನ್ನನ್ನು ಸೂಳೆ ಅಂದ್ರೆ ಸಾಕು, ನನಗೆ ಸಿಟ್ಟು, ದುಃಖ ನೆತ್ತಿಗೇರುತ್ತೆ. ಅದಕ್ಕೆ ಅವರಿಗೆ ತಿರುಗಿಸಿ ಹೇಳ್ತೀನಿ, ನಿಮ್ಮಿಂದಾಗಿ ನಾನು ಸೂಳೆ ಆಗಿದ್ದು ಅಂತ.

ನಾನು ಸಕಲೇಶಪುರದ ಹತ್ತಿರದ ಹಳ್ಳಿಯೊಂದರ ಹುಡುಗಿ. ಕೈ ತೊಳೆದು ಮುಟ್ಟಬೇಕು ಅಂತ ರೂಪ ನಿನ್ನದು ಎಂದು ಎಲ್ಲರೂ ಹೇಳುತ್ತಿದ್ದರು. ನನಗೆ ಅನುರೂಪನಾದ, ಸಭ್ಯನಾದ ನನ್ನ ಹಳ್ಳಿಯವನೇ ಆದ ಸುರೇಶನನ್ನು ನಾನು ಪ್ರೀತಿಸಿದೆ. ನಾವಿಬ್ಬರೂ ಅಷ್ಟೇನೂ ಓದಲಿಲ್ಲ. ಆದರೂ ಸುರೇಶನಿಗೆ ಮೆಕ್ಯಾನಿಕ್ ಕೆಲಸ ಚೆನ್ನಾಗಿ ಗೊತ್ತಿತ್ತು. ಸಕಲೇಶಪುರದಲ್ಲಿ ಕೆಲಸ ಮಾಡುತ್ತಿದ್ದ. ನಮ್ಮ ಬದುಕಿಗಾಗುವಷ್ಟು ಸಂಪಾದಿಸಬಲ್ಲೆ ಎಂಬ ಧೈರ್ಯವೂ ಇತ್ತು ಅವನಿಗೆ. ಆದರೆ ನಮ್ಮ ಪ್ರೀತಿಗೆ ಮನೆಯವರ ವಿರೋಧ ಬಂದಿದ್ದೇ ಜಾತಿಯದ್ದು. 

ನಮ್ಮದು ಕೂಲಿ ಮಾಡುವ ಕುಟುಂಬ. ಜಾತಿಯಲ್ಲೂ ಅವನಿಗಿಂತ ಕಡಿಮೆಯೇ.. ನಮ್ಮ ಪ್ರೀತಿಯ ಬಗ್ಗೆ ಹಳ್ಳಿಯಲ್ಲೇ ಗುಲ್ಲೆದ್ದಿತ್ತು. ನಮ್ಮ ಮನೆಯವರಿಗೆ ಸುರೇಶನ ಅಪ್ಪ ಬಂದು ಧಮ್ಕಿ ಹಾಕಿ ಹೋದ್ರು. ನನ್ನ ಅಪ್ಪ ನನಗೆ ಚೆನ್ನಾಗಿ ಹೊಡೆದ. ಅಮ್ಮ ರಮಿಸಿ ನನ್ನನ್ನು ಸುರೇಶನನ್ನು ಮರೆತುಬಿಡು ಅಂದಳು.. 

ಚೆನ್ನಾಗಿ ದುಡಿಯುತ್ತಿದ್ದ ಮಗ ಕೈ ತಪ್ಪಿ ಹೋಗಿಬಿಡ್ತಾನೆ, ಬೇಗ ಒಂದು ಮದುವೆ ಮಾಡಿದ್ರೆ ಸರಿಹೋಗುತ್ತೆ ಅಂತ ಅವನ ಮನೆಯಲ್ಲಿ ಮದುವೆ ತಯಾರಿ ಮಾಡಿದ್ರು.  ನಮ್ಮಿಬ್ಬರಿಗೂ ಪರಿಸ್ಥಿತಿ ಅರ್ಥವಾಯ್ತು. ಸುರೇಶನ ಅಪ್ಪಟ ಪ್ರೀತಿ, ಅವನ ಧೈರ್ಯ ಎಲ್ಲರನ್ನೂ, ಎಲ್ಲವನ್ನೂ ಧಿಕ್ಕರಿಸಿತ್ತು. 

ಇಬ್ಬರು ವಯಸ್ಕರಾದ್ದರಿಂದ ಪೊಲೀಸ್ ರಕ್ಷಣೆಯಲ್ಲಿ ಮದುವೆಯಾಗೋಣ ಅಂತ ನಿರ್ಧರಿಸಿದೆವು. ಆ ದಿನ ಪೊಲೀಸರ ಮೊರೆ ಹೋದೆವು. ಹೊಸಬದುಕಿನ ರಮ್ಯ ಕಲ್ಪನೆ ಹೊತ್ತು ಪೊಲೀಸ್ ಠಾಣೆ ಮೆಟ್ಟಿಲೇರಿದೆವು. ಅದೇ ತಪ್ಪಾಗಿ ಹೋಯಿತು. ನಮ್ಮ ಕನಸುಗಳು ಪೊಲೀಸರು ಬೂಟು ಕಾಲಿನಡಿ ಧೂಳೀಪಟವಾಗಬಹುದೆಂಬ ಕಲ್ಪನೆಯೂ ಇರಲಿಲ್ಲ. ಅಷ್ಟೊತ್ತಿಗೆ ನಮ್ಮ ಮನೆಯವರು ಸುರೇಶ ನನ್ನನ್ನು ಕಿಡ್ನಾಪ್ ಮಾಡಿದ್ದಾನೆಂದು ದೂರು ಕೊಟ್ಟಿದ್ದರು.  

ನಾವು ಸ್ಟೇಷನ್ ಗೆ ಹೋದಕೂಡಲೇ ಪೊಲೀಸರಿಗೆ ಅರ್ಥವಾಯ್ತು. ನನ್ನನ್ನು ಅಲ್ಲಿ ಕೂರಲು ಹೇಳಿದರು. ಸುರೇಶನನ್ನು ಒಳಗೆ ಕರೆದುಕೊಂಡು ಹೋದರು. ನೀನು ಈ ಹುಡುಗಿಯನ್ನು ಕಿಡ್ನಾಪ್ ಮಾಡಿದ್ದೀಯಾ ಎಂದು ಹೇಳಿ ಅವನನ್ನು ಚೆನ್ನಾಗಿ ಥಳಿಸಿದರು. ನಾನು ಎಷ್ಟು ಬೇಡಿಕೊಂಡರೂ ನನ್ನ ಮಾತನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ನನ್ನ ಸುರೇಶನನ್ನು ಉಳಿಸಿಕೊಡಿ, ನಮ್ಮಿಬ್ಬರಿಗೆ ಮದುವೆ ಮಾಡಿಸಿ, ನಾವಿಬ್ಬರೂ ಪ್ರೀತಿಸುತ್ತಿದ್ದೇವೆ ನನ್ನನ್ನು ಅವನು ಕಿಡ್ನಾಪ್ ಮಾಡಲಿಲ್ಲ, ನಾವಿಬ್ಬರೂ ಒಪ್ಪಿಯೇ ಬಂದಿದ್ದೇವೆ ಅಂತೆಲ್ಲ ಪೊಲೀಸರಲ್ಲಿ ಬೇಡಿಕೊಂಡೆ. ಆದರೆ ಪೊಲೀಸರ ಬೂಟಿಗಾಗಲೀ, ಲಾಠಿಗಾಗಲೀ ಅದು ಕೇಳಿಸಲೇ ಇಲ್ಲ. ಸುರೇಶನನ್ನು ಥಳಿಸುತ್ತಲೇ ಇದ್ದರು. ಅರೆ ಪ್ರಜ್ಞೆಗೆ ಜಾರಿದ ಅವನನ್ನು ಅದೆಲ್ಲಿಗೋ ಸಾಗಿಸಿದರು. ನನ್ನ ಜೀವನದಲ್ಲಿ ಅವನನ್ನು ನೋಡಿದ್ದು ಅದೇ ಕಡೆಯ ಬಾರಿಗೆ. ಪ್ರಜ್ಞೆ ತಪ್ಪಿ ನರಳುತ್ತಿದ್ದ. ಹಿಂದೆಯೇ ಓಡಿದೆ, ಸುರೇಶ, ಸುರೇಶ ಅಂತ ಭೂಮಿ ಗಗನಕ್ಕೆ ನನ್ನ ಕೂಗು ಕೇಳಿಸುವಂತೆ ಇತ್ತು… ನನ್ನ ಆಕ್ರಂದನ.

ಘಳಿಗೆಗಳ ಮೊದಲು, ಸುರೇಶ ನನಗೆ ಮಲ್ಲಿಗೆ ಮುಡಿಸಿ ನಿನ್ನನ್ನು ರಾಣಿಯಂತೆ ಕಾಪಾಡ್ತೀನಿ ಅಂದಿದ್ದ. ಮುಡಿಯಲ್ಲಿದ್ದ ಮಲ್ಲಿಗೆ ಬಾಡುವ ಮೊದಲೇ ನನ್ನ ಬದುಕಿನಿಂದ ದೂರ ಹೋಗಿದ್ದ. ಅಚಾನಕ್ಕಾಗಿ ನಡೆದ ಈ ಘಟನೆಯಿಂದ ನನ್ನ ಕಲ್ಪನೆಗಳು ಕನಸುಗಳು ಛಿದ್ರಗೊಂಡವು. ದಿಕ್ಕೇ ತೋಚಲಿಲ್ಲ. ಅಷ್ಟೊತ್ತಿಗೆ ಕತ್ತಲಾಗುತ್ತಾ ಬಂದಿತ್ತು. ನಾನು ಮನೆಗೆ ಹೋಗುತ್ತೇನೆ ಅಂದೆ ಭಯದಿಂದಲೇ. ಅದಕ್ಕವರು ನೀನು ಮನೆಗೆ ಹೋಗೋದು ಬೇಡ ಸುರೇಶನನ್ನು ಕರ್ಕೊಂಡು ಬರುತ್ತೇವೆ, ಎಲ್ಲರನ್ನೂ ಒಪ್ಪಿಸಿ ನಾವೇ ನಿಮ್ಮಿಬ್ಬರಿಗೆ ಮದುವೆ ಮಾಡ್ತೀವಿ ಅಂದರು. ಅಂತ ಅಲ್ಲೇ ಬೆಂಚಿನ ಮೇಲೆ ಕೂರಿಸಿದರು. ನಾನು ಸುರೇಶನನ್ನು ಎಲ್ಲಿಗೆ ಕರೆದುಕೊಂಡು ಹೋದರು, ಅಷ್ಟೊಂದು ಹೊಡೆದಿದ್ದೀರಿ ಅವನಿಗೆ, ಅವನು ಏನಾದ?  ಅಂತ ಪದೇಪದೇ ಅಲ್ಲಿರುವ ಪೊಲೀಸ್ ಸಿಬ್ಬಂದಿಯನ್ನು ಕಾಡುತ್ತಲೇ ಇದ್ದೆ. 

ಎಷ್ಟೊತ್ತಾದರೂ ಸುರೇಶನ ಸುಳಿವೇ ಕಾಣಲಿಲ್ಲ. ನನಗೆ ಭಯ ಶುರುವಾಯಿತು. ರಾತ್ರಿ ಸುಮಾರು ಹತ್ತು ಗಂಟೆ ಇರಬೇಕು, ಮನಸ್ಸಿನ ಮೇಲಾದ ದಾಳಿಯಿಂದ ಮಂಕು ಕವಿದಿತ್ತು. ಹಾಗೇ ಜೊಂಪು ಬಂದಂತಾಯ್ತು. ಅಲ್ಲೇ ಒರಗಿದ್ದೆ. ಅಷ್ಟೊತ್ತಿಗೆ ಯಾರೋ ನನ್ನ ಮೇಲೆ ಎರಗುತ್ತಿದಾರೆ ಅನ್ನಿಸಿತು. ಬಲವಂತವಾಗಿ ಕಣ್ತೆರೆದೆ. ಪೇದೆಯೊಬ್ಬ ಅರೆಬೆತ್ತಲಾಗಿ ನನ್ನನ್ನು ಹಿಡಿದುಕೊಂಡಿದ್ದ. ಕಿರುಚಿಕೊಂಡೆ. ಬಿಡಿಸಿಕೊಂಡು ಹೋಗಲು ಯತ್ನಿಸಿದೆ. ಸಾಧ್ಯವಾಗಲೇ ಇಲ್ಲ.. ಅವನು ನನ್ನ ಸುಂದರ ಬದುಕನ್ನೇ ಅತ್ಯಾಚಾರ ಮಾಡಿಬಿಟ್ಟ.. ಇಡೀ ರಾತ್ರಿ ಒಬ್ಬರಾದ ಮೇಲೊಬ್ಬರಂತೆ ಐದಾರು ಜನ ಪೊಲೀಸರು ನನ್ನ ಮೇಲೆರಗಿದರು. ಅವರ ಪೈಶಾಚಿಕ ದಾಹವನ್ನು ಹಿಂಗಿಸಿ ಕೊಂಡಿದ್ದರು. ನಾನು ಅಷ್ಟೊತ್ತಿಗೆ ಅರೆಜೀವವಾಗಿ ಬಿದ್ದಿದ್ದೆ. ಏನಾಗುತ್ತಿದೆ ಎಂಬ ಅರಿವೇ ಇರಲಿಲ್ಲ. 

ಅವರೆಲ್ಲ ಸೇರಿ ನನ್ನನ್ನು ಜೀಪಿನಲ್ಲಿ ಹಾಕಿಕೊಂಡರು. ಸುಮಾರು ದೂರ ಬಂದು ಒಂದು ಬಸ್ಟ್ಯಾಂಡಿನ ಮೂಲೆಯಲ್ಲಿ ಎಸೆದರು. ಅವರಲ್ಲಿ ಒಬ್ಬ ಐವತ್ತು ರೂಪಾಯಿ ನೋಟನ್ನು ಎಸೆದು, ಎಲ್ಲಾದರೂ ದೂರ ಹೋಗಿ ಬದುಕ್ಕೋ, ಇನ್ನೊಂದು ಸಾರಿ ಇಲ್ಲೆಲ್ಲಾದರೂ ಕಾಣಿಸಿಕೊಂಡರೆ ಗತಿ ನೆಟ್ಟಗಾಗುವುದಿಲ್ಲ ಜಾಗ್ರತೆ ಅಂತ ಹೇಳಿ ಹೊರಟೇ ಬಿಟ್ಟರು. ಅಲ್ಲಿಗೆ ನನ್ನ, ಸುರೇಶನ ಸಮಾಧಿ ಮಾಡಿದಂತಾಗಿತ್ತು. 

ಹೇಗೋ ಬಂದು ಈ ಬೆಂಗಳೂರೆಂಬ ದಂಧೆಯ ಊರಿಗೆ ಬಂದು ಬಿದ್ದೆ. ಅನುಭವಿಸಬಾರದ್ದನ್ನೆಲ್ಲ ಅನುಭವಿಸಿದೆ. ಮತ್ತೆ ನನ್ನ ಹಿಂದಿನ ಬದುಕಿನ ಕಡೆ ತಲೆ ಹಾಕಿಯೂ ಮಲಗಲಾಗಲಿಲ್ಲ. ಅಂದೇ ನಾನು ನನ್ನ ಸುರೇಶ ಇಬ್ಬರೂ ಸತ್ತಿದ್ದೆವು. ಅದೇಕೆ ದಿನವೂ ಸತ್ತು ಪ್ರೇತಾತ್ಮದಂತೆ ನಾನು ಬದುಕಿದ್ದೇನೆಯೋ ಗೊತ್ತಿಲ್ಲ.. ಆ ಪ್ರಶ್ನೆ ನನ್ನನ್ನು ದಿನವೂ ತಿವಿಯುತ್ತಲೇ ಇದೆ..

ಇದು ನನ್ನೊಬ್ಬಳ ಕಥೆಯಲ್ಲ!! ನನ್ನಂತಹ ಅನೇಕರ ಕಥೆಯೂ ಹೌದು. ಪಾತ್ರಗಳು ಬದಲಾಗುತ್ತವೆ. ಘಟನೆಗಳು ಬೇರೆಯಾಗುತ್ತವೆ. ಸನ್ನಿವೇಶಗಳ ತೀವ್ರತೆ ಭಿನ್ನವಾಗಿರುತ್ತೆ. ಆದರೆ ಪರಿಣಾಮ ಒಂದೇ. ಜಗತ್ತಿನ ಅತ್ಯಂತ ಹಳೆಯ ವೃತ್ತಿ ಎಂದೇ ಕರೆಸಿಕೊಳ್ಳುವ ವೇಶ್ಯಾವೃತ್ತಿ, ಇವತ್ತಿಗೂ ಸಭ್ಯತೆಯ ಸಮಾಜದ ಕಣ್ಣಿನಲ್ಲಿ ಹೀನಾಯ ವೃತ್ತಿ. ಆದರೆ ನಾವು ಸನ್ನಿವೇಶದ ಸುಳಿಗೆ ಸಿಕ್ಕಿ ಮೈಮಾರಿಕೊಳ್ಳುವ ವೃತ್ತಿಗಿಳಿಯುತ್ತೇವೆ. ತಾಯ್ತಂದೆಯರ ಬೆಚ್ಚಗಿನ ಪ್ರೀತಿ, ಅಣ್ಣ-ತಮ್ಮಂದಿರ ವಾತ್ಸಲ್ಯ ಅನುಭವಿಸುತ್ತಿರುವಾಗಲೇ ಜಾರುತ್ತೇವೆ ಅಥವಾ ಜಾರಿಸಿ ಬಿಡುತ್ತಾರೆ. ಹಾಗೆ ಒಮ್ಮೆ ಜಾರಿದವರು ಮತ್ತೆ ಎದ್ದು ನಿಲ್ಲುವ ಸ್ಥಿತಿಯಲ್ಲಿ ಇರುವುದಿಲ್ಲ ಅಷ್ಟೆ.

‍ಲೇಖಕರು ಲೀಲಾ ಸಂಪಿಗೆ

December 16, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: