–ಡಾ ಲಲಿತಾ ಕೆ ಹೊಸಪ್ಯಾಟಿ
ಹೇಗೆ ಕಂಡಾರು ಇವರೆನ್ನ
ಮೂಲೆಯಲ್ಲಿದ್ದವಳನು
ಮುಂಬಾಗಿಲಿಗೆ ತಂದ ನಡೆ,
ಸಾಕ್ಷರ ಕಥನದ ನಮೂನೆ
ಚೌಕದ ಚೌಕಟ್ಟಿನ ಅಂಕಿಗಳ
ದಾಖಲೀವ ಅಭಿನಂದನ ಲೇಖಿಗೆ
ನೆನಪಿನ ಬುತ್ತಿಯನ್ನು ಸರಾಗವಾಗಿ
ಸಂಕಲಿಸಲು ಸರ್ವದಾ
ಸಂಗತದಲ್ಲಿದ್ದಾರೆ
ಹಸ್ಮಖಿಯಾಗಿದ್ದುದಕ್ಕೂ
ಕಣ್ಣುಗಳಲ್ಲಿಯೇ ಮಾತನಾಡಿದ್ದಕ್ಕೂ
ನಗೆಯಾಡದ ನಗೆ ತೋರಿದ್ದಕ್ಕೂ
ನಡೆವ ಭಂಗಿಯಲಿದ್ದ ನಿಟ್ಟುಸಿರಿಗೂ
ಕಿತ್ತು ಚಪ್ಪಲಿಗೆ ಹಾಕಿದ ಪಿನ್ನಿಗೂ
ಬಣ್ಣ ಮಾಸಿದ ಸೀರೆ ಕುಪ್ಪಸ ತೊಟ್ಟ ಗಳಿಗೆಗಳಿಗೆಲ್ಲ
ಹೋಲಿಕೆಯಾಗದ ಒಂದಿಷ್ಟು ಪದಗಳನ್ನು
ಬೈತಲಿನಂತ ದಾರದಲ್ಲಿ ಪೋಣಿಸಿ
ಒಳಗಿಂದ ಬಾರದ ಮಾತುಗಳನ್ನು
ವರುಷಗಳಿಂದ ತಡೆ ಹಿಡಿದ ಬಿಕ್ಕುಗಳನ್ನು
ತಮಗೆ ಬೇಕಾದಂತೆ
ಹೋಲಿಕೆಯೊಂದಕ್ಕೆ ಹೋಲಿಕೆಯಾಗದಂತೆ
ಗೂಗಿಸಲು ನಿರೀಕ್ಷೆಯಲ್ಲಿದ್ದಾರೆ
ಜೀವವಿಲ್ಲದ ಜೀವಾಣುವಿನ
ತನು ಮನದ
ಆಸೆ ನಿರಾಸೆಗಳ
ನಿರ್ಜೀವ ಭಾವ ಬಯಕೆಗಳಿಗೆಲ್ಲ
ಜೀವ ತುಂಬಬಲ್ಲವರೆಂದು
ಬಿಂಬಿಸುತ್ತಿದ್ದಾರೆ
ಸರ್ವತ್ರ
ಹೇಗೆ ಕಂಡಾರು ಇವರೆನ್ನ
ಇಲ್ಲದುದ್ದನ್ನ ಇರುವುದೆಲ್ಲವನ್ನ
ಉರುಟು ಬಂಡೆಗೆ ಬಡಿವ ನದಿಯ ತುಡಿತ
ಹರಿವ ನೀರಿನಲ್ಲಿ ಸತ್ತ ಮೀನಿನ ಚಲಿತ
ಕಿಟಕಿ ಸಂದಿಯಲ್ಲಿ ಮನೆ
ಮಾಡಿರುವ ಕ್ರಿಮಿ ಕ್ರೀಟ
ತೆರೆಯದ ಬಾಗಿಲ ಪಡಕಿನಲಿ
ಇಣುಕುವ ನೋಟ
ಕಂಡ ಕಂಡಲ್ಲಿ ನಿಗಿ ನಿಗಿ
ಕೆಂಡದ ಮೇಲೆ ನಿಲ್ಲದ ಜಿಗಿತ
ಭೀತಿಯ ಕತ್ತಲು ಹಬ್ಬಿದ ಉರುಳು
ತಬ್ಬಿದ ಕೊರಳು ಕಂಪಿಸದ ಇರುಳು
ಗೀಚಿದ ನಿದ್ರೆಗಳು
ಗಳಕ್ಕೆ ಸೇತುವೆಯಾದ ತಗಾದೆಗಳು
ವರ್ತಮಾನವನೆ ಗುರಿಯಾಗಿಸಿದ ಹದ್ದುಗಳು
ದಾರಿಯುದ್ದಕ್ಕೂ ತೆರೆಯಲೆಂದೇ
ಬೆಳೆಯುತ್ತಲೇ ನಿಂತಿರುವ ಮುಳ್ಳು ಕೊಂಡಿಗಳು
ಮರೆಮಾಚಿರುವ ನಾಳೆಗಳು
ನಿರಾತಂಕವಾಗಿ ಬಲಿಕೊಟ್ಟ ಕನಸುಗಳು
ಒಂದೆಡೆ ಮುಂದಡೆ
ಹಿಂದುಗಡೆ
ಹೋದೊಡೆ ಬಂದಡೆ
ನಾನೊಂದಡೆ ಇದ್ದಾಗಲೂ
ಅಬ್ಬರಿಸುವ ಬಿರುಗಾಳಿಯಾಗಿ
ಹಾರಿಸಲು ಬೀಳಿಸಲು
ಸಿದ್ಧವಾಗಿಯೇ ಬೆಂಬಿಡದೆ ಬೆನ್ನತ್ತಿದ
ನೆರಳ ಎಸೆದು ಹೇಗೆ ಹೇಳಲಿ
ನನ್ನೆದೆಯ ಕುದಿತ
ಬರೆಯಲಾದೀತೆ
ರಕ್ತ ಮಾಂಸಗಳಲ್ಲಿ
ಕಟ್ಟಿಕೊಂಡ ಬದುಕಿನ ಕವಿತ






0 Comments