ಸರೋಜಿನಿ ಪಡಸಲಗಿ ಸರಣಿ – ವೈದ್ಯಾಧಿಕಾರಿಗಳ ಕ್ವಾರ್ಟರ್ಸ್…

ಸರೋಜಿನಿ ಪಡಸಲಗಿ

3

ದಿನ ಉರಳಿದಂತೆ ಗರಗದ ಜೀವನಕ್ಕೆ ಹೊಂದಿಕೊಳ್ತಾ ಹೋದ್ವಿ – ನಾವೂ, ಮಕ್ಕಳೂ. ಅನುಸೂಯಾನೂ ವಾಪಸ್ಸು ತಿಳವಳ್ಳಿಗೆ ಹೋಗಿದ್ಲು. ನಾನಿನೇ ಮನೆಗೆಲಸ ಮಾಡಿ ಕೊಡುತಿದ್ಲು. ಅನುಸೂಯಾನ ಸಂಬಳ ಈಗ ನಾನಿಗೆ. ತಿಳವಳ್ಳೀಲಿದ್ದಾಗ ಹುಕ್ಕೇರಿಗೆ ನನ್ನ ಮಗನ ಭೇಟಿಗೆ  ಎರಡೂವರೆ ತಿಂಗಳಿಗೊಮ್ಮೆ ಹೋಗ್ತಿದ್ದೆ. ಈಗ ಪ್ರತಿ ತಿಂಗಳೂ ಹೋಗ್ತಿದ್ದೆ. ಈಗ ಗರಗದ ಜನರೂ ನಮ್ಮವರೇ ಆಗಿದ್ರು. ನನ್ನ ಪ್ರಪಂಚ  ವಿಸ್ತಾರವಾಗಿ ಬೆಳೀತಿತ್ತು. ಪೂನಾ- ಬೆಂಗಳೂರು ಹೈವೇಯಿಂದ 9 ಕಿ.ಮೀ. ಒಳಗೆ ಅಂದರೆ ಬೈಲಹೊಂಗಲಗೆ ಹೋಗೋ ರೋಡಿನಲ್ಲಿ ಬಂದ್ರೆ ಸಿಗ್ತದೆ ಈ ಪುಟ್ಟ ಗ್ರಾಮ. ಅಲ್ಲೂ ಸುಧಾರಣೆಯ ಗಾಳಿ ಬೀಸಿರಬಹುದು ಈಗ. ಊರು ತುಂಬಾ ಚಿಕ್ಕದು. ಅಲ್ಲಿನ ಮಡಿವಾಳೇಶ್ವರ ಅಜ್ಜನ ಮಠ  ತುಂಬಾ ಪ್ರಸಿದ್ಧ, ಅಲ್ಲಿ ನಡೆವ ಜಾತ್ರೆಯೂ. ಹೀಗೇ ನಡೆದಿತ್ತು ಜೀವನ- ಧಾರವಾಡಕ್ಕೆ ಸಂಬಂಧಿಕರ ಕಡೆ ಹೋಗ್ತಾ, ಬರ್ತಾ.

ತಿಳವಳ್ಳಿ – ಬಂಕಾಪುರಕ್ಕೆ ಹೋಲಿಸಿದರೆ ಇಲ್ಲಿನ ದವಾಖಾನೆಗೆ ಬರೋ ಅತಿಥಿಗಳ ಪ್ರಮಾಣ ತುಂಬಾನೇ ಕಡಿಮೆ ಇತ್ತು. ಬಂದವರೂ ಭೇಟಿ ನೀಡಿ ಟೀ- ಕಾಫಿ ಮುಗಿಸಿ ಹೊರಟು ಬಿಡೋರು. ಪಕ್ಕದಲ್ಲೇ ಧಾರವಾಡ ಇತ್ತಲ್ಲಾ. ಆದರೆ ಮನೆಗೆ ಬರೋ ಹೋಗೋ ಜನ ಜಾಸ್ತಿ ಆಗಿತ್ತು. ಹೀಗಾಗಿ ಉಳಿದೆಲ್ಲಾ ವ್ಯವಸ್ಥೆ ಹಾಗೇ ಮುಂದುವರಿದಿತ್ತು. ಹಾಗೇ ನನ್ನ ಕಾಳಜಿನೂ. ಎಲ್ಲದಕ್ಕೂ ಬೇಕೆಂದಾಗ ಧಾರವಾಡಗೆ ಹೋಗಿ ಬರೋದು ಸುಲಭದ  ಮಾತಾಗಿರಲಿಲ್ಲ. ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜೀಪ್ ಇರಲಿಲ್ಲ. ಒಂದು ಬೈಕ್ ಇತ್ತು. ಅಲ್ಲಿನ ವೈದ್ಯಾಧಿಕಾರಿ ಸಲುವಾಗಿ. ನಾವು ದಿನಸಿ ತರಲು ಹೋಗೋವಾಗ ಅಲ್ಲಿ ಬಾಡಿಗೆಗೆ ಸಿಗುವ ಟ್ಯಾಕ್ಸಿ ತಗೊಂಡು ಹೋಗ್ತಿದ್ವಿ. ಅದೊಂದು ತುಂಬಾ ಅನುಕೂಲ ಆಗಿತ್ತು ನಮಗೆ.

ಇಲ್ಲಿನ ಕ್ವಾರ್ಟರ್ಸ್ ಬಗ್ಗೆ ಹೇಳದೇ ಇರೋದು ಹೇಗೆ? ಡಿಸೈನ್ ಹೆಚ್ಚು ಕಡಿಮೆ ಬಂಕಾಪುರದ ಕ್ವಾರ್ಟರ್ಸ್ ಥರಾನೇ ಇತ್ತು. ಆದರೆ ಚಿಕ್ಕದು ಅಂದರೆ ಹಾಲ್, ಡೈನಿಂಗ್ ಹಾಲ್, ರೂಂಗಳು ಎಲ್ಲಾ ತುಂಬಾ ಚಿಕ್ಕವು. ಹಿತ್ತಲಲ್ಲಿ ಸಿಮೆಂಟ್ ನೆಲ, ಅದಕ್ಕೊಂದು ಬಾಗಿಲು, ಅಲ್ಲೇ ಟಾಯ್ಲೆಟ್  ಇತ್ತು. ಒಟ್ಟಲ್ಲಿ ಅನುಕೂಲವಾಗಿತ್ತು ಅಷ್ಟೇ ತೊಂದರೆಗಳೊಡನೆ. ಕಟ್ಟಡ ತುಂಬ ಹಳೆಯದು, ಹೆಂಚು ಹೊದಿಸಿದ್ದು. ಮಳೆಯಲ್ಲಿ ನೆಂದ  ಗೋಡೆಗಳು ಆ ಮನೆಯ ವಯಸ್ಸು ಹೇಳುವಂತಿತ್ತು ಯಾರು ಬರಲಿ – ಬಿಡಲಿ ಮಂಗಗಳಂತೂ ದಿನ ನಿತ್ಯದ, ಖಾಯಂ ಅತಿಥಿಗಳು. ಹಿಂದಿನ  ಬಾಗಿಲು ಏನಾದರೂ ಮುಚ್ಚಲು ಮರೆತೆನೋ ಕಥೆ ಗೋವಿಂದ! ಮಂಗಗಳ ಪರಿವಾರ ಒಳಗೆ – ನಾ ಹೊರಗೆ ಯಾರಾದರೂ ಬಂದು  ಅವುಗಳನ್ನು ಓಡಿಸುವ ತನಕ. ಒಂದು ಘಟನೆ ಹೇಳ್ತೀನಿ ಇಲ್ಲಿ.

ಆ ದಿನ ಧಾರವಾಡದಿಂದ ಸುರೇಶ ಅವರ ಕಾಕೂ ಅಂದರೆ ಚಿಕ್ಕಮ್ಮ ಬಂದಿದ್ರು. ನನಗೆ ದೂರದ ತಿಳವಳ್ಳಿಯಂಥ ಅಡವಿಯಲ್ಲಿದ್ದು ಬಂದಿದ್ದಕ್ಕೊ, ಅಥವಾ ಸ್ವಭಾವತಃ ಅತಿಥಿ ಪ್ರಿಯಳಾಗಿದ್ದಕ್ಕೋ ಯಾರಾದರೂ ಬಂದ್ರೆ ಖುಷಿನೋ ಖುಷಿ! ನನ್ನ ಹಿಡಿಯೋರಿರಲಿಲ್ಲ. ಹೀಗಾಗಿ ಭರ್ಜರಿಯಾಗಿ  ತಿಂಡಿ ತಯಾರಿ ನಡೆದಿತ್ತು. ಮಕ್ಕಳೂ ಸ್ಕೂಲ್ ನಿಂದ ಬರೋ ಟೈಂ ಆಗಿತ್ತು. ಉಪ್ಪಿಟ್ಟು- ಶಿರಾ ಮಾಡಿದ್ದೆ. ಜೊತೆಗೆ ನಾಲ್ಕು ಭಜಿ  ಕರೀಯೋಣಾಂತ ಹಿಟ್ಟು ಕಲಸಿಟ್ಟು ಎಣ್ಣೆ ಕಾಯಲಿಟ್ಟಿದ್ದೆ. ಇಲ್ಲೂ ಗ್ಯಾಸ್ ಕಟ್ಟೆ ಇರಲಿಲ್ಲ. ನನ್ನ ಕಿಚನ್ ಟೇಬಲ್ಲೇ ನನಗೆ ಆಧಾರವಾಗಿತ್ತು. ಅಡಿಗೆ ಮನೆ ಬಾಗಿಲ ಇದಿರೀಗೇ ಇಟ್ಟಿದ್ದೆ ಅದನ್ನು. ಇದಿರು ಗೋಡೆಗಿಟ್ಟು ನಾ ಬಾಗಿಲಿಗೆ ಬೆನ್ನು ಮಾಡಿ ನಿಂತಾಗ ಹಿಂದಿನಿಂದ ಮಂಗಣ್ಣ ಬಂದು ಬೆನ್ನು ತಟ್ಟಿದರೆ ಅಂತ ಭಯ ನಂಗೆ! ಅಡಿಗೆ ಮನೆ ಬಾಗಿಲು, ಹಿಂದಿನ ಬಾಗಿಲಿಗೆ ನಾಲ್ಕು ಫೂಟ ಅಷ್ಟೇ ಅಂತರ – ಚಿಕ್ಕ ಪ್ಯಾಸೇಜ ಇತ್ತು ಅಲ್ಲಿ. ಭಜಿ ಕರೀಯೋ ಮುಂದೆ ಕಮರುವಾಸನೆ ಬರದಿರಲಿ, ಅಲ್ಲೆಲ್ಲಾ ತುಂಬಿಕೊಳ್ಳದಿರಲಿ ಅಂತ ತೆಗೆದಿಟ್ಟಿದ್ದೆ. ಆ ಹಳೇ ಕ್ವಾರ್ಟರ್ಸ್ ತನಕ ಇನ್ನೂ ಎಕ್ಝಾಸ್ಟ್ ಫ್ಯಾನ್ ಬಂದಿರಲಿಲ್ಲ, ಬಹುಶಃ ಯಾವ ಸರ್ಕಾರಿ ಕ್ವಾರ್ಟರ್ಸ್ ಗೂ. ಸರಿ ಹಿಂದಿನ ಬಾಗಿಲು ತೆರೆದಿಟ್ಟು, ಪಕ್ಕದಲ್ಲೇ ಒಂದು ಕೋಲೂ ಇಟ್ಕೊಂಡು  ಮಂಗಣ್ಣ ಬಂದ್ರೆ ಓಡಿಸಲು (ನಾನಿ  ಟ್ರೇನಿಂಗ), ಭಜಿ ಪ್ರೋಗ್ರಾಂ ಶುರು ಆಯ್ತು. ಕಾಕೂ ಅವರಿಗೆ ತಟ್ಟೆಯಲ್ಲಿ ತಿಂಡಿ ಹಾಕಿ ಕೊಟ್ಟು ಅವರ ಜೊತೆ  ಹರಟೇಲಿ ಮಗ್ನಳಾಗಿದ್ದೆ.

ಒಂದು ಸಾರಿ ಇಣುಕಿ ಹೋದ ಮಂಗಣ್ಣ. ಕೋಲು ತೋರಿಸಿದೆ- ಹಲ್ಲು ಕಿರಿಯುತ್ತ ಹೋದ. ಅಷ್ಟ್ರಲ್ಲಿ ಮಕ್ಕಳೂ ಬಂದ್ರು. ಎಣ್ಣೆಯಲ್ಲಿನ ಭಜಿ  ತೆಗೆದು ಅಲ್ಲೇ ಪಕ್ಕದ ಚಿಕ್ಕ ಟೇಬಲ್ ಮೇಲಿಟ್ಟಿದ್ದ ಬುಟ್ಟಿಯಲ್ಲಿ ಹಾಕಿ, ಇನ್ನೊಂದು ಒಬ್ಬಿ ಕರಿಯಲಾರಂಭಿಸಿ ತಿರುಗಿ ನೋಡಿದ್ರೆ ಬುಟ್ಟಿ ಖಾಲಿ! ಭಜಿ ಮಟಾಮಾಯ! ಮಕ್ಕಳು ತಗೊಂಡು ಹೋಗಿರಬೇಕು ಅನ್ಕೊಂಡು ಸುಮ್ಮನಾದೆ- ಹಸಿದು ಬಂದಿರ್ತಾರಲಾ. ಮತ್ತೆ  ಕಡಾಯಿಯಲ್ಲಿನ ಭಜಿ ತೆಗೆದು ಬುಟ್ಟಿಯಲ್ಲಿ ಹಾಕಿ, ಎಣ್ಣೆಯಲ್ಲಿ ಹಿಟ್ಟು ಬಿಡ್ತಿದ್ದೆ, ಕಾಕೂ ಕಿಟಾರನೇ ಕಿರುಚಿದ್ರು! ಗಾಬರಿಯಾಗಿ ಏನಾಯ್ತು ಅಂತ  ನೋಡೋಷ್ಟ್ರಲ್ಲಿ ಗೊತ್ತಾಗ್ಹೋಯ್ತು ಬುಟ್ಟಿ ಖಾಲಿ ಮಾಡ್ತಿದ್ದದ್ದು ಮಕ್ಕಳಲ್ಲ, ಮಾರುತಿರಾಯ ಅಂತ. ಕೋಲು ತೋರಿಸಿ ಓಡಿಸಿ ಮಂಗನನ್ನು, ಹಿಂದಿನ ಬಾಗಿಲು ಹಾಕಿ ಬಂದು ಮಾಡಿದೆ, ಮಾಡಲೇಬೇಕಿತ್ತು. 

ಇನ್ನೊಂದ್ಸಲ ನಮ್ಮ ನೆಗೆಣ್ಣಿ ಅಂದ್ರೆ ಓರಗಿತ್ತಿ ಬಂದಿದ್ರು ಧಾರವಾಡದಿಂದ. ಡೈನಿಂಗ್ ಹಾಲ್ ನಲ್ಲಿ ಮಾತಾಡ್ತಾ ಕೂತಿದ್ವಿ. ನಾವು ಮಾತಿನಲ್ಲಿ  ಇಷ್ಟು ರಂಗಾಗಿದ್ವಲಾ ಮಂಗಣ್ಣ ಬಂದು ಅವರ ಪಕ್ಕದ ಚೇರ್ ನಲ್ಲಿ ಕೂತಿದ್ದು ಗೊತ್ತೇ ಆಗಿಲ್ಲ ನಮಗೆ. ಅದು ಮೆಲ್ಲನೆ ನಮ್ಮ ನೆಗೆಣ್ಣಿಯ ಹೆಗಲ ಮೇಲೆ ಕೈ ಇಟ್ಟಾಗ ಅವರ ಕಿರಿಚಾಟ, ಗದ್ದಲ, ಅದರ ಹಲ್ಲು ಕಿರಿಯುವಿಕೆ, ಘರ್ ಅನ್ನುವಿಕೆ. ಏನು ಮಾಡುವುದು ತಿಳೀಲಿಲ್ಲ. ಅಷ್ಟ್ರಲ್ಲಿ ಏನೋ  ಕೆಲಸ ಇತ್ತೂಂತ ಮುಲ್ಲಾ ಬಂದ. ನಮ್ಮ ಪುಣ್ಯ! ಓಡಿಸಿದ ಆತ.

ಅವುಗಳ ಮನೆಯೊಳಗಣ ಆಟ ಈ ರೀತಿಯದಾದ್ರೆ, ಹೊರಗೆ, ಮನೆಯ ಹೆಂಚುಗಳ ಮೇಲೆ ಅವುಗಳ ಹಾರಾಟ ಏನ ಹೇಳಲಿ? ಹೆಂಚು  ಯಾವಾಗಲೂ ತೂತೇ! ಮಳೆ ಬಂದ್ರೆ ಸೋರಾಟ ಖಾತ್ರೀನೇ. ಅಲ್ಲಿ ಮಳೆನೂ ಜೋರೇ. ಹೀಗಾಗಿ ಅಲ್ಲಿ ಬುಟ್ಟಿ, ಇಲ್ಲಿ ಪಾತೇಲಿ, ಇನ್ನೊಂದು ಕಡೆ  ಪರಾತ- ಹೀಗೇ ಮನೆ ತುಂಬ. ತಿಂಗಳಿಗೊಮ್ಮೆ ಅಥವಾ ಎರಡು ಬಾರಿ ಒಡೆದ ಹೆಂಚು ತೆಗೆದು ಹೊಸದು ಹಾಕಿಸಲೇ ಬೇಕಿತ್ತು. ಹೊಸ  ಹೆಂಚುಗಳು ಬಂದ್ರೆ ಅವಕ್ಕೆ ಖುಷಿ ಜಾಸ್ತಿ ಆಗ್ತಿತ್ತೋ ಏನೋ ಗೊತ್ತಿಲ್ಲ. ಹಾರಾಟ, ಜಿಗಿದಾಟ ಜಾಸ್ತಿ ಆಗಿ ಮತ್ತೆ ಹೆಂಚು ಸೀಳು ಬಿಡೋದೇ, ಸೋರಾಟ ಇರೋದೇ. ಮಕ್ತುಂ ‘ಅಕ್ಕಾರs ಹಂಚಿನ ಒಳಗಿನ ಬಾಜೂಕೆಲ್ಲಾ ಪ್ಲ್ಯಾಸ್ಟಿಕ್ ಹಾಳಿ ಅಂಟಿಸಿ  ಬಿಡೋಣ್ರೀ. ಮೊದಲಿದ್ದ ಅಕ್ಕಾರು ಹಂಗs  ಮಾಡಿದ್ರು.’ ಅಂದ. ಅದೂ ಆಯ್ತು. ಆದರೂ ಮಾಳಿಗೆ ಸೋರೋದು ತಪ್ಪಲಿಲ್ಲ.

ಈಗ ಇಲ್ಲಿ ಇನ್ನೊಂದು ಘಟನೆ ಹೇಳ್ತೀನಿ ಎಂದೂ ಮರೆಯಲಾಗದ್ದು. ಇಂಥ ಪರಿಸ್ಥಿತಿಯಲ್ಲಿ ನಮ್ಮ ಮನೇಲಿ ನಮ್ಮ ದೊಡ್ಡ ಭಾವನವರ ಮಗಳ  ಬಾಣಂತಿತನ ನಡೆದಿತ್ತು. ಮನೇಲೇ ಡಾಕ್ಟ್ರು, ಹಳ್ಳಿಯೂರು – ಹಾಲು, ತುಪ್ಪ ಸಮೃದ್ಧಿ ಬೇರೆ! ಸರಿ, ಧಾರವಾಡದಲ್ಲಿ ಹೆರಿಗೆ ಆಯ್ತು. ಗರಗಕ್ಕೆ ಕರಕೊಂಡು ಬಂದ್ವಿ. ಎಪ್ರೀಲ್ – ಮೇ ತಿಂಗಳು. ಅಡ್ಡಮಳೆ ದಿನಗಳು. ದಿನಕ್ಕೊಂದು ರೂಪು- ರಂಗು ಮಳೇದು. ಒಮ್ಮೆ ಮಂಚ ಆ ಕಡೆ ಎಳೀಯೋದು, ಒಮ್ಮೆ ಈ ಕಡೆ. ಬೇಡ ಆ ಪಡಿಪಾಟ್ಲು! ಕೊನೆಗೆ ಮಕ್ತುಂ ನ ಸಲಹೆ ಪ್ರಕಾರ ಎರಡು ಪದರು ಪ್ಲ್ಯಾಸ್ಟಿಕ್ ಹಾಳೆ ಅಂಟಿಸಿ, ಸಣ್ಣ ಸಣ್ಣ ಮೊಳೆ ಹೊಡೆದು ಗಟ್ಟಿ ಮಾಡಿದ್ರೂ ಒಂದೆರಡು ದಿನಗಳಲ್ಲಿ ಮತ್ತೆ ಅದೇ ಪರಿಸ್ಥಿತಿ. ಹೇಗೆ ಸಂಭಾಳಿಸಿ ನಿಭಾಯಿಸಿದ್ವೋ ಆ ದೇವನೊಬ್ಬನೇ ಬಲ್ಲ! ಮುಂದೆ ಜುಲೈ ನಲ್ಲಿ ಮಗೂನ ನಾಮಕರಣ. ಮನೆತುಂಬ ಜನ. ಮಾರನೇ ದಿನ ಅಂದ್ರೆ ನಾಮಕರಣದ ದಿನ ಸುಮಾರು ನೂರು ಜನಕ್ಕೆ ಊಟ ಇತ್ತು – ಸ್ಟಾಫ್ ನವರೂ ನಮ್ಮವರೇ ಅಲ್ವಾ? ನಮ್ಮ ಮನೇ ಜನ, ಬೀಗರು 30 ಜನ. ಹೇಗೆ  ಸಂಭಾಳಿಸೋದು ಎಣಿಕೆಗೆ ನಿಲುಕದೇ ಹೋಯ್ತು. ಈಗಿದ್ದ ಈ ನಾಲ್ಕು ಕ್ವಾರ್ಟರ್ಸ್ ಜೊತೆ ಅಲ್ಲೇ ಕೊನೆಗೆ ಮುಲ್ಲಾನ ಮನೆ ಪಕ್ಕದಲ್ಲೇ  ಒಂದು ಹೊಸ ಕ್ವಾರ್ಟರ್ಸ್ ಅದೇ ಕಟ್ಟಿ ಮುಗಿದಿತ್ತು. ಅದು ಲೇಡಿ ಡಾಕ್ಟರ್ ಕ್ವಾರ್ಟರ್ಸ್. ಸಧ್ಯಕ್ಕೆ ಖಾಲಿ ಇತ್ತು.

ನಾಮಕರಣ ಮನೇಲೇ ಮುಗಿಸಿ ಆ ಹೊಸ ಮನೆಯಲ್ಲಿ ಊಟ- ಅಡಿಗೆ ವ್ಯವಸ್ಥೆ ಮಾಡಿದ್ದಾಯ್ತು. ಎಲ್ಲಾ ತಯಾರಿ ಮುಗೀತು – ಮಳೆಯದೊಂದನ್ನು ಬಿಟ್ಟು. ಆಷಾಢ  ಮಾಸದ ಗಾಳಿ – ಮಳೆ. ನಮ್ಮ ತಯಾರಿ ಜೋರಾದಂತೆ, ಅದರ ರಭಸವೂ ಜೋರಾಯ್ತು. ನಾಮಕರಣದ ಹಿಂದಿನ ದಿನ ರಾತ್ರಿ ಮಳೆ ಗಾಳಿಯ ಅಬ್ಬರಕ್ಕೆ ಗಾಬರಿಯಾಗಿ ಬಿಟ್ಟೆ ನಾ ಹೇಗೆ ಮಾಡೋದು ಅಂತ. ಮನೆ ತುಂಬಾ ಜನ, ಸೋರುವ ಮಾಳಿಗೆ. ಆ ಗಾಳಿಯ ಸುಂಯ್ಯ್ ಅನ್ನೋ ನಾದ, ಕಾರ್ಗತ್ತಲ ರಾತ್ರಿ, ಕರೆಂಟ್ ಇಲ್ಲದೇ ಲಾಟೀನು, ಕಂದೀಲು, ಮೇಣಬತ್ತಿ ಹಚ್ಚಿಕೊಂಡು ದುಂಡಗೆ ಎಲ್ರೂ ಡೈನಿಂಗ್ ಹಾಲ್ನಲ್ಲಿ ಕುಳಿತದ್ದು ಕಣ್ಣಿಂದ ಇನ್ನೂ ಮರೆಯಾಗಿಲ್ಲ. ಸ್ವಲ್ಪ ಜನ ಆ ಹೊಸ ಮನೆಯಲ್ಲಿ ಮಲಗೋ  ಯೋಚನೆ ಇತ್ತು. ಇಂಥಾ ಕಗ್ಗತ್ತಲ ರಾತ್ರಿ, ಮಳೆ ಗಾಳಿ  ಆರ್ಭಟ. ಇಲ್ಲೇ ಅಡ್ಜೆಸ್ಟ್ ಮಾಡಿ  ಮಲಕೊಂಡ್ವಿ. ಬೀಗರು ಮಾರನೇ ದಿನವೇ  ಬರೋರಿದ್ರು.

ನಾಮಕರಣದ ವೇಳೆಗೆ ಹೀಗೇ ಜೋರಾಗಿಯೇ ಮಳೆ ಇದ್ರೆ ಏನು ಮಾಡೋದು ಅಂತ ನನಗೆ ದಿಗಿಲು. ಹಾಗೇ ಆಯ್ತು. ಮಾರನೇ ದಿನ ಇನ್ನೂ ಜೋರಾಯ್ತು ಮಳೆ. ಯಾವ ಪ್ಲ್ಯಾಸ್ಟಿಕ್ ಹಾಳೆನೂ ನಿಲ್ಲಲಿಲ್ಲ. ಊಟದ ವ್ಯವಸ್ಥೆ ಮಾಡಿದ ಮನೆ  ಹೊಸದು – RCC building. ಅಲ್ಲೇನೂ ಸಮಸ್ಯೆ ಇರಲಿಲ್ಲ. ಆದರೆ ಇಲ್ಲಿ ನಮ್ಮನೇಲಿ ನಾಮಕರಣ ಆಗಬೇಕಲ್ಲ? ಮಂಗಗಳೂ ಮಳೆ ಗಾಳಿಗೆ ಹೆದರಿ ಆಕಡೆ ಈಕಡೆ  ಓಡಾಡಲಾರಂಭಿಸಿದ್ವು. ಚಾಚಿದ ಬೇವಿನ ಮರದ ಕೊಂಬೆಯನ್ನು ಬ್ರಿಡ್ಜ್ ಥರ ಉಪಯೋಗಿಸುತ್ತ ಅವುಗಳ ಓಡಾಟ ನಡೆದೇ ಇತ್ತು. ನಮಗೋ  ಹೆದರಿಕೆ – ಮೊದಲೇ ನೆಂದ ಹೆಂಚುಗಳು. ಯಾವಾಗ ಯಾವ ಹೆಂಚು ಒಡೀತದೋ ಅಂತ. ಕೊನೆಗೆ ಏನು ಮಾಡಿದ್ವಿ ಗೊತ್ತಾ? ಊಹೆಗೂ ನಿಲುಕದ್ದು! ಲಾರಿ ಮೇಲೆ ಹಾಕಿ ಪ್ಯಾಕ್ ಮಾಡುವ ತಾಡಪತ್ರಿ/ತಾಡಪಾಲು ಇರತದಲಾ ಅಂಥಾವು ಎರಡು ಮೂರು ತಂದು ಪೂರ್ತಿ ಮನೆಯ ಛತ್ತಿನ ಮೇಲೆ ಹಾಸಿ ಹರಡಿ, ಹಾರದಂತೆ ಬಂದೋಬಸ್ತ ಮಾಡಿದ್ರು ಆಸ್ಪತ್ರೆ ಜನ, ಗೌಡರ ಮನೆ ಆಳುಮಕ್ಕಳು ಎಲ್ಲಾ ಸೇರಿ.

ಆ ತಾಡಪತ್ರಿಗಳೂ ಅವರ ಅಂದರೆ ಗೌಡರ ಮನೆವೇ. ಅವರು ಟ್ರ್ಯಾಕ್ಟರ್ ಮೇಲೆ ಹಾಕಿ ಮುಚ್ಚಿದ್ದನ್ನು ನೋಡಿದ್ದೆ ನಾ. ಅಂದಿನ ಕಾರ್ಯಕ್ರಮ   ಸುಸೂತ್ರವಾಗಿ ಮುಗೀತು. ನಮ್ಮ ಮಾನ ಕಾಯ್ದವು ಆ ತಾಡಪಾಲುಗಳು ಮಳೆಯಿಂದ ಮನೆಯನ್ನು ಸಂರಕ್ಷಿಸಿ, ಸೋರಾಟ ಕಡಿಮೆ ಮಾಡಿ ಆ  ದಿನದ ಮಟ್ಟಿಗಾದರೂ! ಇನ್ನೊಂದು ಮಾತು – ಈ ವಿಚಾರ ಹೊಳೆದದ್ದೂ  ನಂಗೇ. ಅಷ್ಟರಮಟ್ಟಿಗೆ ತಯಾರಾಗಿದ್ದೆ ಈ ಹಳ್ಳಿಗಳ ತಿರುಗಾಟದಲ್ಲಿ, ಕ್ವಾರ್ಟರ್ಸ್ ವಾಸದಲ್ಲಿ, ಸರ್ಕಾರಿ  ಆಸ್ಪತ್ರೆ ವೈದ್ಯರ ಪತ್ನಿಯಾಗಿ! ಒಂದು ಗುಟ್ಟು- ಮನದಲ್ಲಿ ಅಳುಕಿತ್ತು ಆ ನೆಂದ ಹೆಂಚಿನ ಮೇಲೆ ಈ ಜನ ಎಲ್ಲಿ ಕಾಲಿಟ್ಟು ಹೆಂಚು ಒಡೀತದೋ ಅಂತ. ಹಾಗೇನೂ ಆಗಲಿಲ್ಲ. ಹಾಗೆಯೇ ಆ ನೆಂದ ಹೆಂಚುಗಳು ತಾಡಪತ್ರಿಗಳ ಭಾರಕ್ಕೂ ಸೀಳಲಿಲ್ಲ!

ಅಲ್ಲಿ ದವಾಖಾನೆಯಲ್ಲಿ ದಿನಕ್ಕೆ ಎರಡು ಮೂರು ಹೆರಿಗೆಗಳಾದ್ರೂ ಆಗ್ತಿದ್ವು. ಇಲ್ಲಿ ನಮ್ಮ ಮನೆಯಲ್ಲಿ ವರ್ಷಕ್ಕೆರಡಾದ್ರೂ ಆಗ್ತಿದ್ವು, ತಾನೇ ತಾನಾಗಿ ಬಂದು ನಮ್ಮ ಮನೆಯ ಸ್ಟೋರ್ ರೂಂ ವಾಸಿಯಾಗಿದ್ದ  ಬೆಕ್ಕಿನದು. ಅಲ್ಲಿದ್ದ ಕಾರ್ಡಬೋರ್ಡ್ ಪೆಟ್ಟಿಗೆಯಲ್ಲಿ ನಾನು ಆ ರೂಂನಲ್ಲಿ  ಇಟ್ಟಿದ್ದ ಹಳೆಯ ಬಟ್ಟೆಗಳನ್ನು ಎಳೆದುಕೊಂಡು ಹಾಸಿ ಮೆತ್ತಗೆ ಮಾಡಿಕೊಂಡಿತ್ತದು. ನನ್ನ ಆಶ್ಚರ್ಯಯಕ್ಕೆ ಪಾರವೇ ಇರಲಿಲ್ಲ! ಅಲ್ಲಿ ಅದರ ಬಾಣಂತಿತನ ನಡೀತಿತ್ತು. ಎಷ್ಟೋ ಸಲ ಹೊರ ಹಾಕಿದ್ರೂ, ಆ ರೂಂ ನ ಕಿಟಕಿಯ ಒಡೆದ ಗಾಜಿಗೆ ಬಡೆದ ರಟ್ಟಿನಂಥದನ್ನು ಸರಿಸಿ  ಒಳನುಸುಳುತ್ತಿತ್ತು ಏಚುಪೇಚಿಲ್ಲದೇ. ಅದರ ಹೆರಿಗೆಯಾದ 2 -3 ದಿನ ಆ ರೂಂಗೆ ನಮಗೂ ಪ್ರವೇಶ ಇರತಿರಲಿಲ್ಲ. ಒಳ ಹೋದ್ರೆ ಗುರ್ ಅನ್ನೋದು. ನನಗೋ ಬೆಕ್ಕು ಅಂದರೆ ಭಯ, ಒಂಥರಾ ಅನಿಸೋದು. ಆದರೆ ಹೋಗ್ತಾನೇ ಇರತಿರಲಿಲ್ಲ.

ಆ ಬೆಕ್ಕು ಇಲಿ ಹಿಡೀತಿರಲಿಲ್ಲ. ಅದಕ್ಕೂ  ಇಲಿ ಕಂಡ್ರೆ ಹೆದರಿಕೆನೋ ಏನೋ ಅನ್ತಿದ್ದೆ ನಾ. ಇದೇನಪಾ ಇದು – ಹೊರಗೆ ಮನೆ ಮೇಲೆ ಮಂಗಗಳು, ಒಳಗೆ ಬೆಕ್ಕು ಇಲಿಗಳು, ಮೆಟ್ಟಿಲ ಮೇಲೆ  ಸುಳಿದಾಡೋ ಹಾವುಗಳು ಅಂತಿದ್ರೆ, ಮಕ್ಕಳಿಗೆ ಮನರಂಜನೆ. ಶಾಲೆ ಬಿಟ್ಟ ಮೇಲೆ ಹುಡುಗರ ದಂಡಿನ ಬೀಡು ನಮ್ಮನೇಲೇ. ಒಟ್ಟಿನಲ್ಲಿ ವೈದ್ಯಾಧಿಕಾರಿಗಳ ಕ್ವಾರ್ಟರ್ಸ್ ಸರ್ವ ಧರ್ಮಗಳ ಜೊತೆಗೇ ಸರ್ವ ಪ್ರಾಣಿಗಳ ಸಮನ್ವಯತೆಯ ತಾಣವೂ ಆಗಿತ್ತು!

| ಇನ್ನು ನಾಳೆಗೆ |

‍ಲೇಖಕರು Admin

September 2, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. ಲಲಿತಾ ಸಿದ್ಧಬಸವಯ್ಯ

    ಶಿವಶಿವಾ,, ವೈದ್ಯೊತ್ನಿಯ ಜೀವನ ಅಂದರೆ ಸುಖಮಯದ್ದು ಅಂದುಕೊಂಡಿರುವವರ ಊಹೆಗುಳ್ಳೆ ಒಡೆದು ಹೋಯ್ತು ಸರೋಜಿನಿಯವರೇ,, ನಮ್ಮ ಕಣ್ಣೆದುರಿಗೆ ನಡೆದಂತೆ ವಿವರಿಸಿದ್ದೀರಿ.

    ಪ್ರತಿಕ್ರಿಯೆ
  2. Sarojini Padasalgi

    ಹೌದ್ರಿ ಲಲಿತಾ ಮೇಡಂ. ಅದೊಂದು ವಿಡಂಬನೆ ವಿಶೇಷ ವಾಗಿ ಈ ಹಳ್ಳಿಗಳ ವಾಸದಲ್ಲಿ. ತುಂಬ ಕಷ್ಟಕರ . ನಮ್ಮ ಜೊತೆ ನಮ್ಮಪುಟ್ಟ ಮಕ್ಕಳನ್ನೂ ಆ ಥರದ ಜೀವನದತ್ತ ಎಳೀತಿದ್ವಿ ಅನ್ನೋ ಅಪರಾಧೀ ಭಾವ ನಂಗೆ ಇಂದಿಗೂ.
    ಧನ್ಯವಾದಗಳು ಮೇಡಂ.
    ಅವಧಿಗೆ ಧನ್ಯವಾದಗಳು ಈ ಅವಕಾಶ ಒದಗಿಸಿಕೊಟ್ಟದ್ದಕ್ಕೆ

    ಪ್ರತಿಕ್ರಿಯೆ
  3. Sarojini Padasalgi

    ನಿಜ ಲಲಿತಾ ಮೇಡಂ . ಬಹಳ ಕಷ್ಟದ ಪರಿಸ್ಥಿತಿ ಕೆಲವೊಂದು ಸಲವಂತೂ ನಮ್ಮ ಸತ್ವ ಪರೀಕ್ಷೆ ನಡೀತಿದೆಯೇನೋ ಎಂಬಂತೆ. ಎಲರೂ ಅಂದುಕೊಂಡ ಹಾಗೆ ಡಾಕ್ಟರ್ ಪತ್ನಿ, ಮಕ್ಕಳ ಸ್ವತ: ವೈದ್ಯರ ಜೀವನವು ಸುಖದ ಸುಪ್ಪತ್ತಿಗೆ ಅಲ್ಲ. ಅದರಲ್ಲೂ ಹಳ್ಳಿಗಳಲ್ಲಿ. ಮಕ್ಕಳೂ ನಮ್ಮ ಜೊತೆ ಕಷ್ಠಪಡಬೇಕಾಯ್ತು ಅನ್ನೋ ನೋವು ನಂಗೆ.
    ಧನ್ಯವಾದಗಳು ಮೇಡಂ.
    ಈ ಅವಕಾಶ ಒದಗಿಸಿದ ಅವಧಿಗೂ ಧನ್ಯವಾದಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: