ಶ್ರೀನಿವಾಸ ಪ್ರಭು ಅಂಕಣ- ಅವರೇ ನನ್ನ ಎರಡನೆಯ ಮಾನಸ ಗುರು…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

15

ಅಣ್ಣ ಒತ್ತಡಗಳ ಭಾರಕ್ಕೆ ಹಾಗೆ ಕುಸಿದದ್ದು, ಮನೆಯವರೆಲ್ಲರೂ ಅವರಿಗೆ ನೀಡಿದ ಭಾವನಾತ್ಮಕ ಬೆಂಬಲ, ಮೂರ್ತಿ ಮಾವಯ್ಯನವರ ಆಶ್ವಾಸನೆ… ಎಲ್ಲವೂ ನನ್ನ ಮನಸ್ಸಿನ ಮೇಲೆ ಗಾಢ ಪರಿಣಾಮವನ್ನೇ ಬೀರಿದವು. ಬಾಲ್ಯದ ನನ್ನ ಗೊತ್ತು ಗುರಿಯಿಲ್ಲದ ಅತಂತ್ರ ಮನೋಸ್ಥಿತಿಯ ನೆನಪುಗಳು ಒಂದು ಕ್ಷಣ ನುಗ್ಗಿ ಬಂದವು. ಆ ಗಳಿಗೆಯಲ್ಲೇ, ‘ಮನೆ – ಕುಟುಂಬ ಅನ್ನುವ ಪ್ರೀತಿ – ವಿಶ್ವಾಸ – ಭರವಸೆ – ಪರಸ್ಪರ ಅವಲಂಬನೆಗಳ ಬೆಚ್ಚನೆಯ ಗೂಡು ಎಂಥ ದೊಡ್ಡ ವರ’ ಅನ್ನಿಸಿಬಿಟ್ಟಿತು. ‘ಹೌದು, ಈ ನನ್ನ ಸುಂದರ ಕುಟುಂಬದಲ್ಲಿ ನಾನೂ ನಿರ್ವಹಿಸಬೇಕಾಗಿರುವ ಒಂದಷ್ಟು ಜವಾಬ್ದಾರಿಗಳಿವೆ; ಪ್ರಥಮತಃ ನನ್ನ ಓದಿನ ಕಡೆ ಗಮನ ಹರಿಸಬೇಕು.. ಚೆನ್ನಾಗಿ ಓದಿ ತುಂಬಾ ಒಳ್ಳೆಯ ಅಂಕಗಳನ್ನು ತೆಗೆದುಕೊಂಡು ನಾನೂ ಮೆರಿಟ್ ಸ್ಕಾಲರ್ ಶಿಪ್ ತೆಗೆದುಕೊಳ್ಳಲೇ ಬೇಕು.. ಅದರಿಂದ ಅಣ್ಣನಿಗೂ ತುಂಬಾ ಸಹಾಯವಾಗುತ್ತೆ’ ಎಂದೆಲ್ಲಾ ಭಾವನೆಗಳು ನುಗ್ಗಿ ಬಂದವು.

ಅದೆಲ್ಲವನ್ನೂ ತಂಗಿ ಮಿಂಚಿಯ ಮುಂದೆ ಹೇಳಿಕೊಂಡೆ. ‘ಹೌದು ಪ್ರಭೂ.. ನಾನೂ ಅಷ್ಟೇ.. ಚೆನ್ನಾಗಿ ಓದಿ ಸ್ಕಾಲರ್ ಶಿಪ್ ತೊಗೋತೀನಿ.. ಅಣ್ಣ ಇನ್ನು ಯಾವತ್ತೂ ಹೀಗೆ ಅಳಬಾರದು’ ಎನ್ನುತ್ತಲೇ ಮಿಂಚಿಯ ಕಣ್ಣುಗಳು ತುಂಬಿಬಂದವು. ಅವಳ ಜೊತೆಗೆ ನಾನೂ ಸೇರಿಕೊಂಡು, ಇಬ್ಬರೂ ಒಂದಿಷ್ಟು ಅತ್ತು, ಮತ್ತೆ ನಾವೇ ಸಮಾಧಾನ ಮಾಡಿಕೊಂಡು, ನಾವು ತೆಗೆದುಕೊಂಡ ಮಹತ್ವದ ನಿರ್ಧಾರಗಳನ್ನು ಮತ್ತೆ ನೆನಪಿಸಿಕೊಂಡು ಮನಸ್ಸು ಹಗುರ ಮಾಡಿಕೊಂಡೆವು. ಬಹುಶಃ ನನ್ನ ಶೈಕ್ಷಣಿಕ ಬದುಕಿನ ಅತಿ ದೊಡ್ಡ ತಿರುವು ಇದೆಂದು ನನ್ನ ಅನಿಸಿಕೆ.

ಮಿನ್ನಿ ಎಂದು ನಾವು ಕರೆಯುತ್ತಿದ್ದ ನನ್ನ ತಂಗಿ ಪದ್ಮಿನಿಗೆ ಮಿಂಚಿ ಎಂದು ನಳಿನಿ ಅಕ್ಕ ಮರುನಾಮಕರಣ ಮಾಡಿದಳೆಂದು ಹೇಳಿದ್ದೆನಲ್ಲಾ, ಈ ಮಿನ್ನಿ ಹೆಸರಿನ ಕುರಿತಾಗಿ ಒಂದು ಸ್ವಾರಸ್ಯಕರ ಸಂಗತಿಯನ್ನು CNR ಅವರು ನೆನಪಿಸಿಕೊಂಡು ಹೇಳಿದ್ದಾರೆ : 1957ರ ಸಮಯ. ದೇಶಕ್ಕೆ ಸ್ವಾತಂತ್ರ್ಯ ಬಂದು ದಶಕ ಕಳೆದಿದ್ದರೂ ಇನ್ನೂ ಆ ಹೋರಾಟದ ಗುಂಗು ಮಾಸಿರಲಿಲ್ಲ. ಅಣ್ಣನಂತೂ ಮೊದಲೇ ಹಿಂದಿ ಭಾಷೆ ಹಾಗೂ ಸಾಹಿತ್ಯಗಳ ಕಟ್ಟಾ ಅಭಿಮಾನಿ…

ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಪಟ್ಟ ಸಾಹಿತ್ಯ ಎಂದುಬಿಟ್ಟರಂತೂ ಅವರ ಉತ್ಸಾಹ ಮೇರೆ ಮೀರಿಬಿಡುತ್ತಿತ್ತು! ಕಣ್ಣುಗಳು ಹೊಳೆಯತೊಡಗುತ್ತಿದ್ದವು. ಮನೆಯಲ್ಲಿ ಅಂಥ ನಾಟಕ – ಕಾದಂಬರಿ – ಕಾವ್ಯಗಳ ದೊಡ್ಡ ಭಂಡಾರವೇ ಇತ್ತು. ನನ್ನ ತಂಗಿ ಹೊಟ್ಟೆಯಲ್ಲಿದ್ದಾಗ ಅಮ್ಮ ಹಾಗೂ ರಾಜು (CNR) ಭಗವತಿ ಶರಣ್ ಗುಪ್ತಾ ಅವರು ಝಾನ್ಸಿ ರಾಣಿ ಲಕ್ಷ್ಮೀಬಾಯಿಯವರ ಬದುಕನ್ನು ಆಧರಿಸಿ ಹಿಂದಿಯಲ್ಲಿ ಬರೆದಿದ್ದ ಮೃಗನಯನಿ ಎಂಬ ಕಾದಂಬರಿಯನ್ನು ಓದುತ್ತಿದ್ದರಂತೆ. ಆ ಕಾದಂಬರಿಯಲ್ಲಿ ಲಕ್ಷ್ಮೀಬಾಯಿಯನ್ನು ಬಾಲ್ಯದಲ್ಲಿ ಮಿನ್ನಿ ಎಂದು ಕರೆಯುತ್ತಿದ್ದರೆಂಬ ಪ್ರಸ್ತಾಪ ಬರುತ್ತದೆ. ‘ಆ ಮಿನ್ನಿ ಎಂಬ ಹೆಸರು ಅದೇಕೋ ನಮ್ಮ ಮನಸ್ಸಿಗೆ ಗಾಢವಾಗಿ ತಟ್ಟಿಬಿಟ್ಟಿತು; ಹಾಗಾಗಿ ಆ ಸಮಯದಲ್ಲೇ ಹುಟ್ಟಿದ ಮಗುವಿಗೆ ಪದ್ಮಿನಿ ಎಂದು ನಾಮಕರಣ ಮಾಡಿದರೂ ಮನೆಯಲ್ಲಿ ಮಿನ್ನಿ ಎಂದು ಕರೆಯತೊಡಗಿದೆವು’ ಎಂದು ರಾಜು ನೆನಪಿನ ಬುತ್ತಿ ಬಿಚ್ಚುತ್ತಾರೆ.

ಮಿಂಚಿಯ ಜೊತೆ ಕೂತು ಚೆನ್ನಾಗಿ ಓದಬೇಕೆಂದು ತೀರ್ಮಾನ ಮಾಡಿಕೊಂಡೆನಲ್ಲಾ, ಅಂದಿನಿಂದ ಓದು ಒಂದು ತಪಸ್ಸಾಗಿ ಹೋಯಿತು. ನೂರಕ್ಕೆ ನೂರು ಪಾಲು ಓದಿನಲ್ಲಿ ತನ್ಮಯನಾಗಿ ತೊಡಗಿಕೊಂಡುಬಿಟ್ಟೆ. ಏನೇ ಆದರೂ ಎಲ್ಲಾ ವಿಷಯಗಳನ್ನೂ ಇಂಗ್ಲೀಷ್ ನಲ್ಲೇ ಓದಬೇಕಾಗಿದ್ದ ಭಯಂಕರ ಸವಾಲು ಎದುರಿಗಿತ್ತು. ವಿಷಯ ಅರ್ಥವಾಗಿದ್ದರೂ ಅದನ್ನು ನನ್ನದೇ ಇಂಗ್ಲೀಷ್ ಭಾಷೆಯಲ್ಲಿ ಅಭಿವ್ಯಕ್ತಿಸುವುದು ಅಸಾಧ್ಯದ ಮಾತಾಗಿತ್ತು. ಹಾಗಾಗಿ ಎಲ್ಲಾ ವಿಷಯಗಳ ವಿವರವಾದ ಟಿಪ್ಪಣಿಗಳನ್ನು ಸಿದ್ಧ ಪಡಿಸಿಕೊಂಡು ಎಲ್ಲವನ್ನೂ ಕಂಠಸ್ಥ ಮಾಡಿಕೊಳ್ಳತೊಡಗಿದೆ. ಹಿಸ್ಟರಿ ನೋಟ್ಸ್ ನ ಸುಮಾರು ಮುನ್ನೂರು ಪುಟಗಳು ನನ್ನ ನಾಲಗೆಯ ಮೇಲೆ ಕುಣಿಯುತ್ತಿದ್ದವು! ಎಕನಾಮಿಕ್ಸ್ , ಲಾಜಿಕ್ ಹಾಗೂ ಇಂಗ್ಲೀಷ್ ಗಳೂ ಅಷ್ಟೇ… ನಿದ್ದೆಯಲ್ಲಿ ಎಬ್ಬಿಸಿ ಕೇಳಿದರೂ ತಟತಟನೆ ಒದರಿಬಿಡುವಷ್ಟು ಕಂಠಸ್ಥ! ಹಾಗಾಗಿ ಪರೀಕ್ಷೆ ಹತ್ತಿರ ಬಂದರೂ ಮೊದಲೆಲ್ಲಾ ಆಗುತ್ತಿದ್ದ ಹಾಗೆ ಒಂದು ಚೂರೂ ಅಂಜಿಕೆಯಾಗಲಿಲ್ಲ.. ಧೈರ್ಯವಾಗಿ ಎಲ್ಲಾ ವಿಷಯಗಳ ಪರೀಕ್ಷೆಯಲ್ಲೂ ಚೆನ್ನಾಗಿ ಬರೆದು ಬಂದೆ. ಒಳ್ಳೆಯ ಅಂಕಗಳು ಬಂದೇ ಬರುತ್ತವೆಂಬ ನಿರೀಕ್ಷೆಯಿತ್ತು.

ಒಂದಷ್ಟು ದಿನಗಳ ಕಾತರದ ನಿರೀಕ್ಷೆಯ ನಂತರ ಫಲಿತಾಂಶಗಳು ಪ್ರಕಟವಾದವು. ನನ್ನ ಶೈಕ್ಷಣಿಕ ಬದುಕಿನಲ್ಲೊಂದು ಪವಾಡ ಘಟಿಸಿತ್ತು. ನಾನು high first class ಅಂಕಗಳನ್ನು ತೆಗೆದುಕೊಂಡು ತೇರ್ಗಡೆಯಾಗಿದ್ದೆ. ಹಿಸ್ಟರಿ ಹಾಗೂ ಕನ್ನಡಗಳಲ್ಲಿ ಎಂಬತ್ತಕ್ಕೂ ಮೀರಿ ಅಂಕಗಳು ಬಂದಿದ್ದವು. ಉಳಿದ ವಿಷಯಗಳಲ್ಲೂ ಎಪ್ಪತ್ತಕ್ಕೆ ಕಮ್ಮಿಯಿಲ್ಲದಂತೆ! ಅದೇ ಮೊದಲು-ಅಷ್ಟು ವರ್ಷಗಳಲ್ಲಿ ನಾನು first class ನಲ್ಲಿ ತೇರ್ಗಡೆಯಾದದ್ದು. ಮನೆಯಲ್ಲಿ ಎಲ್ಲರಿಗೂ ಖುಷಿಯೋ ಖುಷಿ! ‘ಗಣಿತದ ಭೂತ ಬಿಟ್ಟುಹೊದ ಮೇಲೆ ನಮ್ಮ ಪ್ರಭು ಹೇಗೆ ಸುಧಾರಿಸಿದ ನೋಡಿ’ ಎಂದು ಸಂಭ್ರಮಿಸುತ್ತಾ ಅಮ್ಮ ಅಕ್ಕ ಪಕ್ಕದ ಮನೆಯವರಿಗೆ ಸಿಹಿ ಹಂಚಿದರು.

ಮೊದಲೇ ನಿರ್ಧರಿಸಿದ್ದಂತೆ ಸೆಂಟ್ರಲ್ ಕಾಲೇಜ್ ನಲ್ಲಿ ಬಿ ಎ ಆನರ್ಸ್ ಕನ್ನಡ ಪದವಿಗೆ ಅರ್ಜಿ ಹಾಕಿದೆ. ಅಲ್ಲಿ ಅವಕಾಶ ಸಿಕ್ಕೇ ಸಿಗುತ್ತದೆಂಬ ಖಾತ್ರಿ ಇದ್ದುದರಿಂದ ಬೇರೆ ವಿಷಯಗಳ ಪದವಿಗೆ ಅರ್ಜಿ ಹಾಕುವುದರ ಬಗ್ಗೆ ಸಣ್ಣ ಯೋಚನೆಯನ್ನೂ ಮಾಡಲಿಲ್ಲ. ಕುಮಾರಣ್ಣಯ್ಯ ಅದಾಗಲೇ ಮ್ಯಾಥಮ್ಯಾಟಿಕ್ಸ್ ಬಿ ಎಸ್ ಸಿ ಆನರ್ಸ್ ಪದವಿಯ ಕೊನೇ ವರ್ಷಕ್ಕೆ ಬಂದಿದ್ದ. ನಾನು ಅರ್ಜಿ ಹಾಕಿದ ಕೆಲವು ದಿನಗಳಲ್ಲೇ ಆಯ್ಕೆಯಾದ ವಿದ್ಯಾರ್ಥಿಗಳ ಪಟ್ಟಿ ಪ್ರಕಟವಾಯಿತು. ಆ ಪಟ್ಟಿಯಲ್ಲಿ ಮೊಟ್ಟಮೊದಲ ಹೆಸರೇ ನನ್ನದು! ಅಂತೂ ನಾನು ಸೆಂಟ್ರಲ್ ಕಾಲೇಜ್ ನಲ್ಲಿ ಮೊದಲ ಬಿ ಎ ಆನರ್ಸ್ ಕನ್ನಡ ಪದವಿಯ ವಿದ್ಯಾರ್ಥಿಯಾಗಿ ಕನ್ನಡ ವಿಭಾಗದಲ್ಲಿ ದಾಖಲಾದೆ. ಕಾಲೇಜ್ ಪ್ರಾರಂಭವಾಗಲು ಇನ್ನೂ ಹದಿನೈದು ದಿನಗಳಿದ್ದುದರಿಂದ ಚಾತಕಪಕ್ಷಿಯಂತೆ ಆ ದಿನವನ್ನು ಎದುರು ನೋಡುತ್ತಿದ್ದೆ.

ಒಂದು ದಿನ ಇದ್ದಕ್ಕಿದ್ದಂತೆ ನಮ್ಮ ಮನೆಗೆ ನಮ್ಮ ಬಂಧುವೊಬ್ಬರು ಆಗಮಿಸಿದರು. ಅವರೇ- ಕೊಣನೂರಿನಲ್ಲಿದ್ದ ನಮ್ಮ ತುಸು ದೂರದ ಸಂಬಂಧಿ ಗಂಗಾಧರ ಮಾವಯ್ಯ ಹಾಗೂ ಅಚ್ಚತ್ತಂಗೆಯವರ ಮಗ ಸುಬ್ಬಣ್ಣ. ನಾನು ಕೊಣನೂರಿನಲ್ಲೇ ಬೆಳೆದುದರಿಂದ ನನಗೆ ಫಕ್ಕನೆ ಅವರ ಗುರುತು ಸಿಕ್ಕಿತು. ಅವರೂ ನನ್ನನ್ನು ನೋಡಿ, ‘ಓ! ಪ್ರಭೂ..! ನೀನೂ ಬೆಂಗಳೂರಿಗೆ ಬಂದು ಸೇರಾಯ್ತಾ!’ ಎಂದು ನಕ್ಕು ಎಲ್ಲರ ಕ್ಷೇಮಸಮಾಚಾರ ವಿಚಾರಿಸಿದರು. ಅವರು ತಮ್ಮ ವಿಚಾರ ಹೇಳತೊಡಗಿದಂತೆ ನನ್ನ ಕುತೂಹಲ-ಆಸಕ್ತಿಗೆ ಪಾರವೇ ಇಲ್ಲವಾಯಿತು.

‘ಜೀವನದಲ್ಲಿ ಏನೇನೋ ಮಾಡಿ ಬದುಕು ಕಟ್ಟಿಕೊಳ್ಳಲು ಪ್ರಯತ್ನ ಪಟ್ಟೆ.. ಆಗಲಿಲ್ಲ… ಚಿಕ್ಕಂದಿನಲ್ಲಿ ಅಲ್ಲಿ ಇಲ್ಲಿ ನಾಟಕಗಳಲ್ಲಿ ಪಾರ್ಟ್ ಮಾಡ್ತಾ ಇದ್ದೆನಲ್ಲಾ, ಆ ಅನುಭವ ನನ್ನ ಸಹಾಯಕ್ಕೆ ಒದಗಿಬಂತು.. ಎಲ್ಲರೂ ಕೈಬಿಟ್ಟ ಹೊತ್ತಿನಲ್ಲಿ ಕಲಾದೇವಿ ದಾರಿ ತೋರಿಸಿ ಆಶ್ರಯ ಒದಗಿಸಿದಳು.. ಈಗ ಮೂರು ವರ್ಷದಿಂದ ಹಿರಣ್ಣಯ್ಯ ಮಿತ್ರಮಂಡಳಿಯಲ್ಲಿ ಕಲಾವಿದನಾಗಿ ದುಡೀತಿದೀನಿ.. ಓಹೋ ಅನ್ನೋ ಅಂಥ ಸಂಪಾದನೆ ಇಲ್ಲದೇ ಹೋದರೂ ಯಜಮಾನರು ಚೆನ್ನಾಗಿ ನೋಡ್ಕೋತಾರೆ.. ಹೊಟ್ಟೆ ಬಟ್ಟೇಗೆ ತೊಂದರೆಯಿಲ್ಲ.. ಜಾಣತನವಾಗಿ ನಡೆಸಿಕೊಂಡು ಹೋದರೆ ಕುಟುಂಬ ನಿರ್ವಹಣೇನೂ ಅಂಥ ಸಮಸ್ಯೆ ಅಲ್ಲ.. ಒಂದೆರಡು ಸಿನೆಮಾಗಳಲ್ಲೂ ಸಣ್ಣ ಪುಟ್ಟ ಪಾರ್ಟ್ ಕೊಡಿಸಿದಾರೆ ಯಜಮಾನರು.. ನಮ್ಮ ಮುಸುರಿ ಕೃಷ್ಣಮೂರ್ತಿನೂ ನಮ್ಮ ಕಂಪನೀಲೇ ಕಲಾವಿದನಾಗಿ ದುಡೀತಿರೋದು.. ಹೋದ ವಾರ ಊರ ಕಡೆ ಹೋಗಿದ್ದೆ. ನೀವೆಲ್ಲಾ ಇಲ್ಲಿರೋ ವಿಷಯ ಗೊತ್ತಾಯ್ತು. ಅಡ್ರೆಸ್ಸೂ ಸಿಕ್ಕಿತು.. ಒಂದ್ಸಲ ನೋಡಿ ಮಾತಾಡಿಸಿಕೊಂಡು ಹೋಗೋಣಾಂತ ಬಂದೆ’ ಎಂದೆಲ್ಲಾ ತಮ್ಮ ನಟನಾ ವೃತ್ತಿಯ ಬಗ್ಗೆ, ಬದುಕಿನ ಬಗ್ಗೆ ಹೇಳಿಕೊಂಡರು ಸುಬ್ಬಣ್ಣ. ಒಬ್ಬ ಕಂಪನಿ ನಾಟಕ ಕಲಾವಿದನನ್ನು, ಸಿನೆಮಾ ನಟನನ್ನು ಸಾಕ್ಷಾತ್ತಾಗಿ ಕಣ್ಣೆದುರಿಗೇ ನೋಡಿದ್ದು ಅದೇ ಮೊದಲು! ಮುಸುರಿ ಕೃಷ್ಣಮೂರ್ತಿಯವರೂ ನಮ್ಮ ಕಡೆಯವರೇ ಆಗಿದ್ದು ನಾಟಕರಂಗದಲ್ಲಿ ಬಹಳ ಒಳ್ಳೆಯ ನಟ ಹಾಗೂ ಹಾಡುಗಾರನೆಂದು ಪ್ರಖ್ಯಾತರಾಗಿದ್ದರು.

‘ಈಗ ಬೆಂಗಳೂರಲ್ಲೇ ನಮ್ಮ ಕಂಪನಿ ಮೊಕ್ಕಾಂ ಹೂಡಿರೋದು. ಸುಭಾಷ್ ನಗರ ಬಸ್ ಸ್ಟ್ಯಾಂಡ್ ಬಳಿ ಇರೋ ಮೈದಾನದಲ್ಲೇ ನಮ್ಮ ಕಂಪನಿ ಥಿಯೇಟರ್ ಇದೆ. ಈಗ ಎರಡು ತಿಂಗಳಿಂದ ನಾವು ‘ಅನಾಚಾರ’ ಅನ್ನೋ ಹೊಸ ನಾಟಕ ಮಾಡ್ತಿದೀವಿ. ನಿಮಗೆ ನಾಟಕ ನೋಡುವ ಆಸಕ್ತಿ ಇದ್ದರೆ ಹೇಳಿ.. ನಾನು ಪಾಸ್ ಕೊಡಿಸ್ತೀನಿ. ಆರೇಳು ಜನ ಬಂದರೂ ತೊಂದರೆ ಇಲ್ಲ’ ಅಂದರು ಸುಬ್ಬಣ್ಣ. ಆ ಮಾತು ಕೇಳಿ ನನಗಂತೂ ಸ್ವರ್ಗಕ್ಕೆ ಮೂರೇ ಗೇಣು! ಅಣ್ಣ ಎಲ್ಲಿ ಸಂಕೋಚ ಪಟ್ಟುಕೊಂಡು, ‘ಪರವಾಗಿಲ್ಲ ಬಿಡಪ್ಪಾ.. ಮತ್ತೆ ಯಾವಾಗಲಾದರೂ ಬರ್ತೀವಿ.. ಏನವಸರ’ ಎಂದು ಬಿಡುತ್ತಾರೋ ಎಂದು ಎದೆ ಢವಗುಡುತ್ತಿತ್ತು. ‘ದೇವರೇ.. ದೇವರೇ..ಅಣ್ಣನ ಬಾಯಲ್ಲಿ ನಾಟಕಕ್ಕೆ ಬರ್ತೀವಿ ಅನ್ನಿಸಿಬಿಡಪ್ಪಾ’ ಎಂದು ಮನಸ್ಸು ಮೊರೆ ಇಡುತ್ತಿತ್ತು. ಸಧ್ಯ.. ನನ್ನ ಪ್ರಾರ್ಥನೆ ವ್ಯರ್ಥವಾಗಲಿಲ್ಲ. ಎಷ್ಟಾದರೂ ಅಣ್ಣನೂ ನಾಟಕಗಳನ್ನು ಆಡಿಸಿದವರಲ್ಲವೇ! ‘ಆಯ್ತು ಸುಬ್ಬಣ್ಣ,ನಿಮಗೇನೂ ತೊಂದರೆ ಇಲ್ಲದಿದ್ದರೆ ಎಲ್ಲರೂ ಬರ್ತೀವಿ ಬಿಡು’ ಅಂದುಬಿಟ್ಟರು ಅಣ್ಣ! ‘ನನಗೆ ಯಾವ ತೊಂದರೇನೂ ಇಲ್ಲ. ಆದರೆ ರಜಾ ದಿನಗಳು ಬೇಡ… ತುಂಬಾ ರಶ್ ಇರುತ್ತೆ… ಅಲ್ಲದೇ ವಾರದ ದಿನಗಳಲ್ಲೇ ಪಾಸ್ ಕೊಡೋದು.. ಬರೋ ಸೋಮವಾರ ಆರು ಗಂಟೆ ಹಾಗೇ ನಮ್ಮ ಥಿಯೇಟರ್ ಹತ್ರ ಬಂದುಬಿಡಿ.. ನಾನಲ್ಲೇ ಇರ್ತೀನಿ’ ಎಂದು ಹೇಳಿ ಹೊರಟುಹೋದರು ಸುಬ್ಬಣ್ಣ.

ಸೋಮವಾರಕ್ಕೆ ಇನ್ನೂ ಮೂರು ದಿನ! ಯಾಕೋ ಗಡಿಯಾರದ ಮುಳ್ಳುಗಳು ವಿಪರೀತ ನಿಧಾನವಾಗಿ ಚಲಿಸುತ್ತಿವೆ ಅನ್ನಿಸುತ್ತಿತ್ತು. ‘ಕಣ್ಣುಮುಚ್ಚಿ ತೆಗೆಯುವುದರೊಳಗೆ ಸೋಮವಾರ ಸಂಜೆ ಆಗಿಬಿಡಬಾರದೇ’ ಎಂದು ಒಂದೇಸಮನೆ ಹಪಹಪಿಸತೊಡಗಿದೆ. ಅಂತೂ ಮೂರು ದಿನಗಳು ಮೂರು ಯುಗಗಳಂತೆ ಉರುಳಿ ಸೋಮವಾರ ಸಂಜೆಯ ದಿವ್ಯ ಮುಹೂರ್ತ ಬಂದೇ ಬಿಟ್ಟಿತು. ಸಂಜೆ ನಾಲ್ಕಕ್ಕೇ ಬಸ್ ಹಿಡಿದು ಹೊರಟು ಐದೂ ಮುಕ್ಕಾಲಿಗೆಲ್ಲಾ ಸುಭಾಷ್ ನಗರ ಮೈದಾನದ ಒಂದು ಭಾಗದಲ್ಲಿದ್ದ ‘ಹಿರಣ್ಣಯ್ಯ ಮಿತ್ರಮಂಡಳಿ’ ಥಿಯೇಟರ್ ತಲುಪಿದೆವು. ಹೊರಭಾಗದಲ್ಲಿ ಕಲಾವಿದರ ಹಾಗೂ ನಾಟಕದ ಪರಿಚಯ ಸಾರುವಂತಹ ದೊಡ್ಡ ದೊಡ್ಡ ವರ್ಣರಂಜಿತ ಪೋಸ್ಟರ್ ಗಳು! ನಾನಂತೂ ಬೆಕ್ಕಸ ಬೆರಗಾಗಿ ಅವನ್ನೇ ನೋಡುತ್ತಾ ನಿಂತುಬಿಟ್ಟೆ.

ಅಷ್ಟರಲ್ಲೇ ಅಲ್ಲೇ ಒಂದು ಬದಿಗೆ ಕಂಪನಿಯ ಕಲಾವಿದರೊಂದಿಗೆ ಬ್ಯಾಡ್ಮಿಂಟನ್ ಆಡುತ್ತಿದ್ದ ಸುಬ್ಬಣ್ಣ ನಮ್ಮನ್ನು ನೋಡಿದವರೇ ಹತ್ತಿರಕ್ಕೆ ಬಂದು ಸ್ವಾಗತಿಸಿದರು. ನಮ್ಮನ್ನು ಆಟವಾಡುತ್ತಿದ್ದ ಕಲಾವಿದರ ಬಳಿ ಕರೆದುಕೊಂಡು ಹೋಗಿ ಎಲ್ಲರ ಪರಿಚಯ ಮಾಡಿಕೊಟ್ಟರು. ಮುಸುರಿ ಕೃಷ್ಣಮೂರ್ತಿಯವರಿಗೆ ನಮ್ಮ ಪರಿಚಯ ಮಾಡಿಕೊಡುವಾಗಲಂತೂ ‘ನಮ್ಬ್ಡೇವಾಳ್ಳೇ.. ಕೆರಲಾಪುರತ್ತೇವಾ’ (ನಮ್ಮವರೇ.. ಕೆರಲಾಪುರದವರು) ಎಂದು ನಮ್ಮ ಭಾಷೆಯಲ್ಲೇ ಪರಿಚಯಿಸಿದರು. ಮುಸುರಿಯವರೂ ಸಹಾ, ‘ನೀವೆಲ್ಲಾ ನಾಟಕ ನೋಡಲು ಬಂದಿದ್ದು ತುಂಬಾ ಸಂತೊಷವಾಯಿತು’ ಎಂದು ಸ್ವಾಗತಿಸಿದರು.

ಸುಬ್ಬಣ್ಣ ನಮ್ಮನ್ನು ಒಳಗೆ ಕರೆದುಕೊಂಡು ಹೋಗಿ ಸಭಾಗೃಹದ ಮಧ್ಯಭಾಗದಲ್ಲಿ ಆಸನ ವ್ಯವಸ್ಥೆ ಮಾಡಿಕೊಟ್ಟರು. ಮುಂದಿನ ಕೆಲ ಸೋಫಾಗಳು ಆಹ್ವಾನಿತ ಗಣ್ಯರಿಗೆ ಹಾಗೂ ಹೆಚ್ಚು ಶುಲ್ಕ ನೀಡಿದವರಿಗೆ ಮೀಸಲಾಗಿದ್ದವು. ನಾನು ಒಂದು ಸಲ ಕುಳಿತಲ್ಲಿಂದಲೇ ಸುತ್ತ ಕಣ್ಣಾಡಿಸಿದೆ. ದೊಡ್ಡ ಸಭಾಂಗಣದಲ್ಲಿ ಮಂದ ಬೆಳಕು.. ಎದುರಿಗೆ ರಂಗಸ್ಥಳವನ್ನು ಪ್ರೇಕ್ಷಾಗೃಹದಿಂದ ವಿಭಜಿಸಿರುವ ದೊಡ್ಡ,ಬಣ್ಣದ ಅಂಕದ ಪರದೆ.. ಮೂರು ನಾಲ್ಕು ಪ್ರವೇಶದ್ವಾರಗಳಿಂದ ಆತುರಾತುರವಾಗಿ ಒಳ ಬರುತ್ತಿರುವ ಉತ್ಸಾಹೀ ಪ್ರೇಕ್ಷಕರು… ಅಷ್ಟರಲ್ಲೇ ಮೊದಲ ಬೆಲ್ ಆಯಿತು. ಅದಾಗುತ್ತಿದ್ದಂತೆ ಎದುರಿಗಿದ್ದ ಅಂಕದ ಪರದೆ ಸರಿದು ಮತ್ತೊಂದು ಪರದೆಯ ಅನಾವರಣವಾಯಿತು.

ಪರದೆಯ ತಳಭಾಗದಿಂದ ಸಾಂಬ್ರಾಣಿಯ ಸುಗಂಧಭರಿತ ಧೂಮ ಹೊರಬಂದು ನಿಧಾನವಾಗಿ ಇಡೀ ಪ್ರೇಕ್ಷಾಗೃಹವನ್ನು ವ್ಯಾಪಿಸಿ ತೆಳುವಾದ ಮೋಡಗಳು ಸುತ್ತ ತೇಲುತ್ತಿವೆಯೋ ಎಂಬ ಭ್ರಮೆ ಹುಟ್ಟಿಸುತ್ತಾ ಒಂದು ಸುಂದರ ಸ್ವಪ್ನಲೋಕವೇ ಭೂಮಿಗೆ ಇಳಿದು ಬಂದಂತೆ ಭಾಸವಾಗುತ್ತಿತ್ತು. ಹಾಗೇ ಪಕ್ಕಕ್ಕೆ ಹೊರಳಿದರೆ ಹಿಮ್ಮೇಳದ ಸಂಗೀತಗಾರರು ರಂಗದ ಮುಂಭಾಗದ ತಮ್ಮ ಸ್ಥಾನಕ್ಕೆ ಬಂದು ಕುಳಿತು ಕೆಲವು ಕೀರ್ತನೆಗಳನ್ನು ವಾದ್ಯಗಳಲ್ಲಿ ಸುಮಧುರವಾಗಿ ನುಡಿಸತೊಡಗಿದರು. ತುಸು ಹೊತ್ತಿಗೆ ಎರಡನೆಯ ಬೆಲ್… ಅದಾಗುತ್ತಿದ್ದಂತೆ ಪಾತ್ರವರ್ಗದವರು ಪರದೆಯ ಹಿಂದೆ ನಿಂತು ‘ನಮೋ ಲಕ್ಷ್ಮೀನರಸಿಂಹಾ’ ಎಂಬ ನಾಂದಿಗೀತೆಯನ್ನು ಹಿಮ್ಮೇಳದವರ ಸಹಕಾರದೊಂದಿಗೆ ಸೊಗಸಾಗಿ ಹಾಡಿದರು. ಅದು ಮುಗಿಯುತ್ತಿದ್ದಂತೆ ಮೂರನೆಯ ಬೆಲ್.. ಪ್ರೇಕ್ಷಾಗೃಹದಲ್ಲಿ ಸಂಪೂರ್ಣ ಕತ್ತಲು… ಎದುರಿಗಿದ್ದ ಪರದೆಯೂ ಸರಿದು(ಅದಕ್ಕೆ ಶ್ರೀಪರದೆ ಎನ್ನುತ್ತಿದ್ದರೆಂಬುದು ನಂತರ ತಿಳಿದ ವಿಚಾರ) ರಂಗಸ್ಥಳದ ಅನಾವರಣವಾಗಿ ಝಗ್ಗೆಂದು ದೇದೀಪ್ಯಮಾನವಾದ ದೀಪಗಳು ಬೆಳಗಿದವು. ನಂತರದ ಮೂರು ತಾಸು ರಂಗದ ಮೇಲೆ ನಡೆದದ್ದು ನನ್ನ ಪಾಲಿಗೆ ಒಂದು ಅದ್ಭುತ, ಅವಿಸ್ಮರಣೀಯ, ಮಾಂತ್ರಿಕ, ಪವಾಡಸದೃಶ ಪ್ರದರ್ಶನ.

‘ಅನಾಚಾರ’ ನಾಟಕದ ಮುಖ್ಯ ಕಥಾಹಂದರ ಹೀಗಿತ್ತು : ಒಬ್ಬ ಶ್ರೀಮಂತ.. ಅವನಿಗೆ ಮೂರು ಮಕ್ಕಳು.. ಶ್ರೀಮಂತ ಸದಾ ತನ್ನ ವ್ಯಾಪಾರದಲ್ಲೇ ವ್ಯಸ್ತ.. ಶ್ರೀಮಂತನ ಪತ್ನಿಗೆ ರಾಜಕೀಯ ಕ್ಷೇತ್ರದ ಸೆಳೆತ.. ಇಬ್ಬರ ಅಂಕೆಯೂ ಇಲ್ಲದೆ ದಾರಿ ತಪ್ಪಿದ ಮಕ್ಕಳು.. ಶ್ರೀಮಂತನ ಭಾವಮೈದನೊಬ್ಬ ಬಂದು ಅವರ ಮನೆಯ ಅಡಿಗೆಯವನ ನೆರವಿನೊಂದಿಗೆ ಆ ಕುಟುಂಬವನ್ನು ಸರಿದಾರಿಗೆ ತರುತ್ತಾನೆ. ಭಾವಮೈದ ಕಸ್ತೂರಿಯಾಗಿ ಮಾಸ್ಟರ್ ಹಿರಣ್ಣಯ್ಯನವರು, ಅಡಿಗೆಯವನ ಪಾತ್ರದಲ್ಲಿ ಮುಸುರಿ ಕೃಷ್ಣಮೂರ್ತಿಯವರು ಅಭಿನಯಿಸಿದ್ದರು.

ಈ ಇಬ್ಬರ ಜೋಡಿ ರಂಗದ ಮೇಲೆ ಬೀರುತ್ತಿದ್ದ ಮೋಡಿಗೆ ಪ್ರೇಕ್ಷಕರು ಹುಚ್ಚೆದ್ದು ಕುಣಿಯುತ್ತಿದ್ದರು. ಮುಸುರಿಯವರ ವಿಶಿಷ್ಟ ಹಾವಭಾವಗಳು, ನಗೆಯ ಹೊನಲೆಬ್ಬಿಸುತ್ತಿದ್ದ ಸಂಭಾಷಣಾ ಶೈಲಿ, ಅದ್ವಿತೀಯ ಹಾಡುಗಾರಿಕೆ ಹಾಗೂ ಮಾಸ್ಟರ್ ಹಿರಣ್ಣಯ್ಯನವರ ಸಹಜ-ಸಮಯಸ್ಫೂರ್ತ- ಸಾಟಿಯಿಲ್ಲದ ಮಾತುಗಾರಿಕೆಯ ಮಾಂತ್ರಿಕ ಸೆಳೆತಕ್ಕೆ ಸಿಲುಕಿ ನಾನು ಅಕ್ಷರಶಃ ದಂಗು ಬಡಿದು ಹೋಗಿದ್ದೆ. ಇದರ ಜತೆಗೆ ದೊಡ್ಡ ದೊಡ್ಡ ಅದ್ಭುತವಾದ ಸೆಟ್ ಗಳು ಕ್ಷಣಮಾತ್ರದಲ್ಲಿ ಬದಲಾಗುತ್ತಿದ್ದ ಚಮತ್ಕಾರಗಳು… ಸನ್ನಿವೇಶಕ್ಕೆ ಅನುಗುಣವಾಗಿ ಬದಲಾಗುತ್ತಿದ್ದ ಬಣ್ಣ ಬಣ್ಣದ ದೀಪಗಳ ನರ್ತನ.. ಸಮಯೋಚಿತವಾಗಿ ದೃಶ್ಯಗಳ ಪ್ರಭಾವವನ್ನು ಹೆಚ್ಚು ತೀವ್ರವಾಗಿಸುತ್ತಿದ್ದ ಹಿನ್ನೆಲೆ ಸಂಗೀತ… ಎಲ್ಲವೂ ನನ್ನನ್ನು ಮೂಕವಿಸ್ಮಿತನನ್ನಾಗಿ ಮಾಡಿಬಿಟ್ಟಿದ್ದವು. ಅಂದೇ ಮಾಸ್ಟರ್ ಹಿರಣ್ಣಯ್ಯನವರನ್ನು ನನ್ನ ಎರಡನೆಯ ಮಾನಸ ಗುರುವಾಗಿ ಸ್ವೀಕರಿಸಿಬಿಟ್ಟೆ.

ಮೊದಲ ಗುರುವಿನ ಸ್ಥಾನದಲ್ಲಿ ಅದಾಗಲೇ ವರನಟ ರಾಜ್ ಕುಮಾರ್ ಅವರು ವಿರಾಜಮಾನರಾಗಿದ್ದರು. ಅಭಿನಯ- ಭಾಷಾಶುದ್ಧಿ-ಭಾವಾಭಿವ್ಯಕ್ತಿಗೆ ರಾಜ್ ಕುಮಾರ್ ಅವರು ಆದರ್ಶವಾದರೆ ಅಸ್ಖಲಿತ ವಾಗ್ಝರಿಗೆ, ಪ್ರಚಂಡ ಮಾತುಗಾರಿಕೆಗೆ ಮಾಸ್ಟರ್ ಹಿರಣ್ಣಯ್ಯನವರು ನನಗೆ ಆದರ್ಶವಾಗಿಬಿಟ್ಟರು. ಅಂದಿನಿಂದ ಇಂದಿನವರೆಗೂ ಈ ಇಬ್ಬರು ಮೇರು ಕಲಾವಿದರನ್ನು ಗುರುಸ್ಥಾನದಲ್ಲೇ ಇರಿಸಿಕೊಂಡು ನಮಿಸುತ್ತಾ ಪರೋಕ್ಷವಾಗಿ ಅವರಿಂದ ಪಾಠಗಳನ್ನು ಕಲಿಯುತ್ತಲೇ ಬಂದಿದ್ದೇನೆ. ಒಟ್ಟಿನಲ್ಲಿ ‘ಅನಾಚಾರ’ ನಾನು ವೀಕ್ಷಿಸಿದ ಮೊಟ್ಟಮೊದಲ ವೃತ್ತಿಪರ—ಸಂಪೂರ್ಣರಂಗ ಪ್ರಯೋಗವಾಗಿದ್ದಲ್ಲದೆ, ನನಗೆ ಅನೇಕ ಒಳ ಹೊಳಹುಗಳನ್ನು ನೀಡಿ ನನ್ನೊಳಗಿನ ಸುಪ್ತ ಆಸೆ-ಕನಸುಗಳು ಗರಿಗೆದರಲೂ ಪ್ರೇರಣೆಯಾಯಿತು.

| ಇನ್ನು ನಾಳೆಗೆ |

‍ಲೇಖಕರು Admin

September 2, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: