ಸರೋಜಿನಿ ಪಡಸಲಗಿ ಸರಣಿ – ಯುಗಾದಿಯ ಬೆಳಗು

ಸರೋಜಿನಿ ಪಡಸಲಗಿ

4

ತಿಳವಳ್ಳಿ ಬಿಡೋವಾಗ ಅಲ್ಲಿನ ಜನ ಅಂದ ಮಾತು – ‘ಗರಗಕ್ಕೇನ ಹೋಗ್ತೀರಿ ಯಪ್ಪಾ, ಹಗಲಿನ್ಯಾಗನ ಅಲ್ಲಿ ರಸ್ತೆ ತುಂಬ ನರಿಗಳ  ಓಡಾಡ್ತಾವಂತ್ರೀ. ಅಂಥಾ ಊರ ಯಪ್ಪಾ ಅದು’. ಅದನ್ನು ಗರಗ ನಮಗೆ ಪ್ರತಿ ದಿನ ನೆನಪು ಮಾಡ್ತಿತ್ತು. ಆ ಪ್ರಮಾಣದ ಹೊಡೆದಾಟ, ಬಡೆದಾಟ, ಕೊಲೆ ಪ್ರಕರಣಗಳು ನಾವು ಅಲ್ಲಿಗೆ ಬಂದಾಗ ಸ್ವಲ್ಪ ಕಡಿಮೆ ಆಗಿತ್ತು. ಆದ್ರೂ ದಿನ, ಎರಡು ದಿನಕ್ಕಾದ್ರೂ ಅಂಥ ಕೇಸುಗಳು ಇದ್ದೇ ಇರ್ತಿದ್ವು. ಅದು ಖಾತ್ರಿನೇ. ಈ MLC (Medico  Legal Case) ಗಳ ಫೈಲ್ಸ್ ಕಾಯ್ದಿಡೋದೂ ಒಂದು ದೊಡ್ಡ ಕೆಲಸಾನೇ. ರಿಟೈರ್ ಆದ ಮೇಲೂ ಸಹ  ಸುರೇಶ ಅವ್ರಿಗೆ ಕೋರ್ಟ್ ಅಟೆಂಡ್ ಮಾಡಬೇಕಾಗ್ತಿತ್ತು.

ಅಷ್ಟೊಂದು ಕೇಸ್ ಗಳು, ಸುದೀರ್ಘ ವಿಚಾರಣೆಯ ಕೇಸುಗಳು. ಈ ಕೇಸುಗಳ ರಿಪೋರ್ಟ್ ರೆಡಿ ಮಾಡುವುದೂ ಒಂದು ದೊಡ್ಡ ಕೆಲಸವಾಗಿತ್ತು  ನನ್ನ ಪತಿಗೆ ಈ ದವಾಖಾನೆಯ ಗಲಾಟೆಯಲ್ಲಿ. ನಾನೂ ಸಹಾಯ ಮಾಡ್ತಿದ್ದೆ, ಕೆಲವೊಂದನ್ನು ಬರೆದ ನೆನಪು. ಆದರೆ ಶವದ ಭಯಾನಕ ಸ್ಥಿತಿಯ  ಚಿತ್ರಣ ಎದೆ ನಡಗಸ್ತಿತ್ತು. ಅದಕ್ಕೇ ಆ ಕೆಲಸದಿಂದ ಕೊಂಚ ದೂರ ಇದ್ದೆ. ಇಲ್ಲಿ ಗರಗದಲ್ಲಿ ಒಂದೊಂದು ಸಲ ಅಂಥ ಭಯಾನಕ ಸ್ಥಿತಿಯಲ್ಲಿ  ಜೀವಂತವಾಗೇ ಧುತ್ತೆಂದು ಮುಂದೆ ಬಂದು ನಿಲ್ಲುತ್ತಿದ್ದ ಪ್ರಸಂಗಗಳು ಇದಿರಾಗಿ ಸ್ವಲ್ಪಮಟ್ಟಿಗೆ ಗುಂಡಿಗೆ ಗಟ್ಟಿ ಆಯ್ತೋ ಏನೋ. ಅಂಥ ಒಂದು  ಘಟನೆ ಹೇಳ್ತೀನಿ ಈಗ.

ಆ ದಿನ ಯುಗಾದಿ. ಹುಕ್ಕೇರಿಯಿಂದ ನನ್ನ ದೊಡ್ಡ ಮಗ ಬಂದಿದ್ದ ಹಬ್ಬಕ್ಕೆ, ಎರಡು ದಿನ ಅಷ್ಟೇ. ಪರೀಕ್ಷೆ ಹತ್ತಿರ ಬಂದಿತ್ತು. ಜಾಸ್ತಿ ದಿನ ನಿಲ್ಲೋ  ಹಾಗಿರಲಿಲ್ಲ. ಆ ದಿನ  ಅಂದರೆ ಯುಗಾದಿ ದಿನಾನೇ ಊಟ ಮುಗಿಸಿ ಹೊರಡೋನಿದ್ದ ವಾಪಸ್ಸು ಹುಕ್ಕೇರಿಗೆ. 4 -5 ವರ್ಷಗಳ ತರುವಾಯ  ಯುಗಾದಿ ಹಬ್ಬಕ್ಕೆ ನಮ್ಮ ಮಗ ನಮ್ಮ ಜೊತೆ ಇದ್ದ. ಹುರುಪು, ಖುಷಿ  ಜೋರಾಗಿತ್ತು. ಆತಗೆ ಜಿಲೇಬಿ ಇಷ್ಟ ಅಂತ ಹಿಂದಿನ ದಿನ ರಾತ್ರಿಯೇ  ಜಿಲೇಬಿ ಹಿಟ್ಟು ಕಲಿಸಿಟ್ಟಿದ್ದೆ. ಮತ್ತೆ ಆತನ ಪ್ರೀತಿಯ ಆಂಬೊಡೆ, ಚಿತ್ರಾನ್ನ ಎಲ್ಲಾ ಮಾಡೋ ತಯಾರಿ ಇಟ್ಟುಕೊಂಡಿದ್ದೆ. ಆ ದಿನ ಬೆಳಿಗ್ಗೆ ಬೇಗನೇ  ಎದ್ದು ಆರು ಗಂಟೆಯೊಳಗೆ ನಾನು ಎರೆದುಕೊಂಡೂ ಆಗಿತ್ತು. ಚುಮುಚುಮು ಬೆಳಕೂ ಆಗಿತ್ತು. ಒದ್ದೆ ಕೂದಲಿಗೆ ಟವೆಲ್ ಸುತ್ತಿ ಕಟ್ಟಿ ಪೊರಕೆ  ತಗೊಂಡೆ ಅಂಗಳ ಗುಡಿಸಲು. ನಾನೀನೇ ಮನೆಗೆಲಸ ಮಾಡ್ತಿದ್ಲು.

ಆ ದಿನ ಅವಳ ದಾರಿ ಕಾಯ ಹೋಗಲಿಲ್ಲ. ನಾನೇ ಗುಡಿಸಿ, ಸಾರಿಸಿ ರಂಗೋಲಿ ಹಾಕ್ತಿದ್ದೆ ಸಣ್ಣಗೆ ಹಾಡು ಗುನುಗ್ತಾ. ಇದ್ದಕ್ಕಿದ್ದ ಹಾಗೆ ಧಡ್ ದಡ್ ಅಂತ ನಾಲ್ಕಾರು ಜನ ಓಡಿ ಮುಂದೆ ಬಂದು ನಿಂತ ಭಾಸವಾಗಿ ತಟ್ಟನೇ ತಲೆ ಮೇಲೆತ್ತಿ ನೋಡಿದೆ, ನೋಡಿದೆ, ಗಡಿಬಿಡಿಸಿ ಗಾಬರಿಯಿಂದ ಮೇಲೆದ್ದು ನಿಂತೆ. ಬಾಯ್ದೆರೆದರೂ ಚೀರಲಾಗದೇ ಧ್ವನಿ ಗಂಟಲಲ್ಲೇ  ಅಡಗಿ ಮೈ ನಡುಗಲಾರಂಭಿಸಿ ಕೈಯಲ್ಲಿದ್ದ ರಂಗೋಲಿ ಡಬ್ಬಿ ಕೆಳಗೆ ಬಿತ್ತು. ನನ್ನಿದಿರಿಗೆ ಒಂದು ಆರಡ ಎತ್ತರದ ಕಪ್ಪನೆಯ ಮನುಷ್ಯ ಉಟ್ಟ  ಧೋತರ ಎತ್ತಿ ಕಟ್ಟಿ, ಹೆಗಲ ಮೇಲೆ ಒಬ್ಬ ಮನುಷ್ಯನ್ನ ಹಾಕೊಂಡು ಬಂದು ನಿಂತಿದ್ದ. ಆತನ ಜೊತೆ ಮತ್ತೆ ಮೂರು ಜನ ಸುಮಾರು ಅವನ ಥರದವರೇ. ಆತನ ಹೆಗಲಿಂದ ರಕ್ತ ಸೋರಿ ಮೈ ಮೇಲಿನ ಬಟ್ಟೆ ಎಲ್ಲಾ ನೆತ್ತರು ಮುಳುಗಿ ರಕ್ತಸ್ನಾನ ಮಾಡಿದವನ ಥರಾ ಕಾಣ್ತಿದ್ದ. ಆತಗೂ  ಗಾಯಗಳಾಗಿದ್ರೂ ಈ ರಕ್ತ ಬಹುಶಃ ಆತನ ಹೆಗಲ ಮೇಲಿನ ಮನುಷ್ಯನದು ಅನಸ್ತಿತ್ತು.

ಇನ್ನುಳಿದವರ ಮೈ ಮೇಲೂ, ಬಟ್ಟೆ ಮೇಲೂ ರಕ್ತದ ಕಲೆಗಳು. ಎಲ್ಲರ ಮುಖವೂ ರೌದ್ರ ವಿಕಾರ! ಹೆಗಲ ಮೇಲಿದ್ದವನ ಸ್ಥಿತಿಯಂತೂ ಭಯಾನಕ. ಒಂದು ಕಣ್ಣಗುಡ್ಡೆ ಹೊರಚಾಚಿದಂತೆ, ಕೈ ಕತ್ತರಿಸಿದ್ದು ಜೋತಾಡುತ್ತಿತ್ತು, ಕಾಲು ಒಂದು ರಕ್ತದ ತುಂಡಿನ ಥರ! ಉಸಿರಾಡುತ್ತಿದ್ದ  ಮನುಷ್ಯನೋ, ಶವವೋ ಗೊತ್ತಾಗಲಿಲ್ಲ. ಆತಗೆ ಎಚ್ಚರಂತೂ ಇರಲಿಲ್ಲ. ಆಸ್ಪತ್ರೆಯ ಹತ್ರಾನೂ ಜನ. ಒಂದು ನಿಮಿಷದಲ್ಲಿ ಗಾಬರಿಯಲ್ಲಿ  ಮುಳುಗೇ ಇಷ್ಟು ನೋಡಿದೆ. ಮಾತನಾಡಲಾಗಲಿಲ್ಲ. ಆ ಮನುಷ್ಯನೇ  ಹೇಳಿದ- ‘ಅಕ್ಕಾರ  ನೀವು  ಹೋಗ್ರಿ ಒಳಗ. ಸಾಹೇಬ್ರನ್ನ ಕಳಸ್ರಿ. ಮೊದಲ ನೀವ ಒಳಗ ಹೋಗ್ರಿ, ಬವಳಿ ಬಂದ ಬಿದ್ದೀರಿ ಯವ್ವಾ, ನೀವ ನೋಡೂದಲ್ರಿ ಯವ್ವಾ ಇದೆಲ್ಲಾ’. ಬಡಬಡ ಒದರಿದಂತಿತ್ತು ಆತನ ಮಾತು. ನನಗೆ ಕಾಲೇ ಕೀಳಲಾಗಲಿಲ್ಲ.

ಈ ಗಲಾಟೆ ಕೇಳಿ ಸುರೇಶ ಹೊರ ಬಂದವ್ರು, ಒಂದೇ ಹಾರಿಗೆ ಅಲ್ಲಿದ್ದ ನಾಲ್ಕೈದು ಮೆಟ್ಟಿಲು ಇಳಿದು ಬಂದು ನನ್ನ ರೆಟ್ಟೆ ಹಿಡಿದು ಒಳ ತಂದು ಬಿಟ್ಟು ನಡುವಿನ ಬಾಗಿಲು ಹಾಕಿದ್ರು. ನನಗೇನೂ ತಿಳಿಯದೇ ಡೈನಿಂಗ್ ಹಾಲ್ನಲ್ಲಿ ಚೇರ್ ಮೇಲೆ  ಒಂದೈದು ನಿಮಿಷ ಹಾಗೇ ಕುಳಿತಿದ್ದೆ. ಅಷ್ಟ್ರಲ್ಲಿ ಸುರೇಶ ಬಾಗಿಲು ತೆಗೆದು ಒಳ ಬಂದು ಪಟಪಟ ಪ್ಯಾಂಟ್ ಶರ್ಟ್ ಹಾಕಿಕೊಂಡು, ಬ್ಯಾಗ್  ತಗೊಂಡು, ‘ನಾ ಹಾಸ್ಪಿಟಲ್ ಗೆ ಹೋಗ್ತೀನಿ. ನನ್ನ ಹಾದಿ ಕಾಯದೇ ನಿಮ್ಮ ಕೆಲಸಾ ಎಲ್ಲಾ ಮುಗಿಸ್ಕೋರಿ. ನಂದು ಭಾಳ ತಡಾ ಆಗಬಹುದ’ ಅಂತ ಒಂದೇ ಉಸುರಿನಲ್ಲಿ ಹೇಳಿ ಹೊರಟೇ ಬಿಟ್ರು. ನಾ ಸುಮ್ಮನೇ  ತಲೆ ಆಡಿಸಿದೆ. ಸ್ವಲ್ಪ ಹೊತ್ತು ಹಾಗೇ ಕುಳಿತಿದ್ದು ಮೆಲ್ಲಗೆ ಹೊರ ಬಂದು  ಆಸ್ಪತ್ರೆಯತ್ತ ನೋಡಿದೆ – ಜನಜಾತ್ರೆ. ನಾನಿ ಇತ್ತ ಬರ್ತಿದ್ಲು  ಸಿಸ್ಟರ್, ಅಟೆಂಡರ್ ಮುಲ್ಲಾ ಹಾಗೂ  ಕಾಂಪೌಂಡರ್ ನ ಆಸ್ಪತ್ರೆಗೆ ಕಳಿಸಿ.

ಹೊರಗೆ ಚೆಲ್ಲಾಡಿದ ರಂಗೋಲಿ, ರಕ್ತ ಎಲ್ಲಾನೂ ಮತ್ತೊಮ್ಮೆ ನೀರು ಹಾಕಿ ತೊಳೆದು ಗುಡಿಸಿ ‘ಯವ್ವಾ, ಹಾಕ್ತಿ ಏನ ರಂಗೋಲಿ’ ಅಂದಾಗಲೇ ನಾ  ನಿಚ್ಚಳಾದದ್ದು. ಆರೂ ಮುಕ್ಕಾಲು ಗಂಟೆ ಆಗಿತ್ತು. ಎದ್ದು ಒಂದೆಳೆ ರಂಗೋಲಿ ಹಾಕಿ ಹೊಸಿಲಿಗೆ ಕುಂಕುಮ  ಹಚ್ಚಿ ಒಳಗೆ ಹೋದೆ. ಹುಡುಗ್ರೂ ಎದ್ದಿದ್ರು. ಅವರೇನೂ  ಕೇಳಲಿಲ್ಲ. ಎಲ್ಲಾ  ಗೊತ್ತಾಗಿತ್ತು ಅವರಿಗೆ, ನನಗಿಂತ ತುಸು ಹೆಚ್ಚೇ. ನಾನಿ ಆ ಸುದ್ದಿ ಎಲ್ಲಾ ಹೇಳೋವಾಗ ಮಕ್ಕಳು  ಎದ್ದಿದ್ರು, ನಾನೇ ಮಂಪರಿನಲ್ಲಿದ್ದೆ. ಒಟ್ಟು ನಾಲ್ಕೈದು ಜನ  ಗಾಯಗೊಂಡಿದ್ರು- ಒಬ್ಬ ಹೆಣ್ಣು ಮಗಳೂ ಸೇರಿ. ಆತನ ಹೆಗಲ ಮೇಲಿನವ  ಕೊನೆಯುಸಿರೆಳೆದನಂತೆ. ‘ಬಾಬಾ ಕಾ ಆನಾ ಬಹುತ ದೇರ ಹೋಗಾ ಅಮ್ಮಾ. ಬಚ್ಚೋಂ  ಕೋ  ಖಿಲಾ ದೇ. ತೂ ಭೀ ಕುಛ ಖಾ, ಪೀ ಲೇಗೆ ಅಮ್ಮಾ’.  ತಾನು ನನ್ನ ಮಗಳು ಮಾಡಿಕೊಟ್ಟ ಚಹಾ ಕುಡಿಯುತ್ತ ನಾನಿ ಹೇಳಿದ್ಲು. ಅಡಿಗೆ ಮನೇಲಿಟ್ಟಿದ್ದ ಜಿಲೇಬಿ ಹಿಟ್ಟಿನ ಮುಖವೂ  ನನ್ನಂತೆಯೇ ಮಂಕಾದ ಹಾಗನ್ನಿಸ್ತು. ‘ಅಮ್ಮಾ ಆ ಸೀರೆ ಚೇಂಜ್ ಮಾಡು. ಅಂಚಿಗೇನೋ ಹತ್ತೇದ’ ಅಂದ ನನ್ನ ದೊಡ್ಡ ಮಗ. ಏನೂಂತ  ನೋಡದೇ ನಾ ಉಟ್ಟ ಜರೀ ಸೀರೆ ತೆಗೆದು  ಬೇರೆ ಸೀರೆ ಉಟ್ಟು, ನಾನಿಗೆ ಆ ಸೀರೆ ತೊಳೆದು ಹಾಕಲು ಹೇಳ್ದೆ. ಅಡಿಗೆ ಮನೆಗೆ ಹೋದೆ. ಇದು  ನಮ್ಮನೆಯ ಯುಗಾದಿ ಹಬ್ಬ ಆ ಸಲದ್ದು. ತಾಯಿ ಕರುಳು ಕೇಳ್ತದಾ? ಜಿಲೇಬಿ ಮಾಡಿ ಮಕ್ಕಳಿಗೆ ಊಟ ಮಾಡಿಸಿದೆ. ನಾನು – ನನ್ನ ಪತಿ ಮಾತ್ರ  ತಿನ್ನಲಿಲ್ಲ.

ಗರಗದಲ್ಲಿ ಆರೋಗ್ಯ ವಿಭಾಗದ ಅಧಿಕಾರಿಗಳಿಗಿಂತ ಪೋಲೀಸರು, ಪಿ.ಎಸ್.ಐ, ಎಸ್ಪಿ, ಡಿಎಸ್ಪೀ. ಇವರುಗಳೇ ಮನೆಗೆ ಬರೋದು ಹೆಚ್ಚಾಗಿತ್ತು. ಇಲ್ಲಿನ ಜನ ಧಾರವಾಡದ ನೆರಳಲ್ಲಿದ್ದವ್ರು ಹಳ್ಳಿಯವರಾದ್ರೂ. ಹೀಗಾಗಿ ಮುಗ್ಧತೆಯ ಪರದೆ ಕೊಂಚ ಸರಿಸಿ ಹೊರ ಬಂದವ್ರು ಅನಿಸುತ್ತಿತ್ತು.ಇಲ್ಲಿ  ಕುಟುಂಬ ಯೋಜನೆಯ ಟ್ಯೂಬೆಕ್ಟಮಿ ಆಪ್ರೇಷನ್ ಕ್ಯಾಂಪ್ ಗಳು ಆಗ್ತಿದ್ವು. ಲ್ಯಾಪ್ರೋಸ್ಕೋಪಿಕ್ ಕೇಸುಗಳನ್ನು ಧಾರವಾಡಕ್ಕೇ ಕಳಸ್ತಿದ್ರು. ಇನ್ನೊಂದು ಘಟನೆ ಹೇಳ್ತೀನಿ.

ಆ ದಿನವೂ ಆವರಣದಲ್ಲಿ  ತುಂಬ ಗಜಿಬಿಜಿ, ಗಲಿಬಿಲಿ, ಗದ್ದಲ. ಆಪರೇಷನ್ ಕ್ಯಾಂಪ್ ಏನಾದರೂ ಇರಬಹುದು, ಸುರೇಶ ಹೇಳಲೇ ಇಲ್ಲ ಅನಕೊಂಡೆ. ಮತ್ತೆ ಆ ಕಡೆ ನೋಡಿದ್ರೆ ಎರಡು ಮೂರು ಪೋಲಿಸ್ ಜೀಪ್ ಗಳು ಕಂಡ್ವು. ಮತ್ತೇನೋ ಗಲಾಟೆ ಆಗಿದೆ ಅನ್ಕೊಂಡೆ. ಅಷ್ಟ್ರಲ್ಲಿ ನಾನಿ  ಬಂದು – ‘ಅಮ್ಮಾ  ಒಂದ ನಾಕ ಕಪ್ಪ ಚಾ ಮಾಡಬೇಕಂತ ಯವ್ವಾ. ಬಾಬಾ ಯಾರನೋ ಕರಕೊಂಡು ಬರಲಾಕ್ಹತ್ಯಾರು’ ಅಂದ್ಲು. (ಆಕಿ ನನ್ನ ಪತಿಗೆ  ಬಾಬಾ  ಅಂತಿದ್ಲು. ಬಹುಶಃ ನಾ ಮರೆತೆ  ಮೊದಲೇ  ಹೇಳಲು) ಅಷ್ಟ್ರಲ್ಲಿ ಸುರೇಶ ಅವರೇ ಇಬ್ಬರು ಪೋಲಿಸ್ ಅಧಿಕಾರಿಗಳ ಜೊತೆ  ಬಂದ್ರು. ನಾನಿ ಕೈಲಿ ಚಹಾ ಕಳಿಸಿ ಕೊಟ್ಟೆ. ಡಿ.ಎಸ್ಪಿ. ಪರಿಚಯದವ್ರೇ. ‘ನಮಸ್ಕಾರ ಭಾಭೀ. ಹೆಂಗಿದ್ದೀರಿ’ ಅಂದ್ರು. ‘ಆರಾಮರೀ. ಏನೋ ಗದ್ದಲ  ಕಾಣಸ್ತದಲಾ’ ಅಂದೆ. ‘ಹೂಂನ್ರಿ ಭಾಭೀ. ಹೊಲದ  ಜಗಳಾ. ಒಬ್ಬನ್ನ ಕೊಂದಾರ, ಅವನ ಮನೀ ಮಂದಿನ್ನ ಹೊಡದಾರ, 16 ವರ್ಷದ ಹುಡುಗ- ಸತ್ತಾವನ ಮಗ. ಅವನ ತಲಿ ಒಡದದ. ಆ ಮುದಕಿ, ಸತ್ತಾವನ ತಾಯಿ ಆಕಿ- ಆಕಿಗೂ ಹೊಡದಾರ. ಮಗಾ ಸತ್ತಾನ, ಆದರೂ ಆಕಿ ಹೇಳ್ತಾಳ  ಕಣ್ಣಾಗ ಒಂದ ಹನಿ ನೀರ ತರಲಾರದ ,-‘ಅಳ್ತಿ  ಯಾಕೋ ತಮ್ಮಾ. ಘಟ್ಯಾಗ. ನಿಮ್ಮಪ್ಪನ್ನ ಕೊಂದಾವ್ನ ಹಂಗs  ಕತ್ತರಿಸಿ  ಹಾಕ ಬೇಕ ನೀ. ನೆಪ್ಪದಾಗ ಇಟ್ಕೋ ಇದನ’. ಆ ಹುಡುಗ ಹೇಳ್ತಾನ್ರಿ-‘ ನೋಡ ಆಯೀ ಹೆಂಗ ಚೊಕ್ಕ ಕೆಲಸಾ ಮಾಡಿ ಮುಗಸ್ತೀನಂತ. ನೀ ಘಟ್ಯಾಗ ನೋಡಾಕ ‘ ಅಂತಾನ್ರೀ. ನಮ್ಮ ಹುಡಗ್ರಿಗೆ ಒಂದ ಬಸ್ಸಿನ ಪಾಸ್ ತಗಿಸಿಕೊಂಡ ಬರಲಕ್ಕ ಆಗೂದಿಲ್ಲರೀ  ಭಾಭೀ. ಏನ ಜನಾನೋ ಅಂತೀನಿ’ ಅಂದ್ರು.

ನನ್ನನ್ನೂ ಯೋಚನೆಯಲ್ಲಿ ಕೆಡವಿತು ಈ ಮಾತು. 14 ವರ್ಷದ ಹುಡುಗನೊಬ್ಬ ಹೊಡೆದಾಟದಲ್ಲಿ ಸತ್ತವರ ಶರೀರಗಳನ್ನು ಎತ್ತಿನ ಚಕಡಿಯಲ್ಲಿ  ಹಾಕೊಂಡು ಬಂದಿದ್ದ ಒಮ್ಮೆ. ಅದು ನೆನಪಾಯಿತು. ಅಲ್ಲಿನ ಹೆಣ್ಣು ಮಕ್ಕಳು ಕೂಡ ಈ ಕೊಲೆ ಹೊಡೆದಾಟದಲ್ಲಿ ಗಂಡಸರ ವೇಷ ಹಾಕಿಕೊಂಡು  ತಯಾರಾಗ್ತಾರ ಅಂತ ಕೇಳಿದ್ದು ನೆನಪಿಗೆ ಬಂದು ಸುಮ್ಮನೇ ತಲೆಯಾಡಿಸಿ ಒಳಗೆ ಬಂದೆ.

ಗರಗದ ಆಸ್ಪತ್ರೆ ತುಂಬಾ ಹಳೆಯ ಕಟ್ಟಡ. ಸುತ್ತಲೂ ಹಳ್ಳಿಗಳೂ ಬಹಳ. ಯಾವಾಗಲೂ ಜಾತ್ರೆ ಥರಾನೇ- ಚಕ್ಕಡಿ, ಜನ, ಗದ್ದಲೋ ಗದ್ದಲ. ನನ್ನ ಪತಿಗೆ ಒಂದೇ ಒಂದು ನಿಮಿಷ ಪುರುಸೊತ್ತು ಇರತಿರಲಿಲ್ಲ. ಇನ್ನುಳಿದ ಕಡೆನೂ ಹೀಗೇ ಇರತಿತ್ತು. ಆದರೆ ಈಗ ಮಕ್ಕಳು ದೊಡ್ಡವರಾಗಿದ್ರು, ದೊಡ್ಡ ಕ್ಲಾಸ್ ಗೆ ಬಂದಿದ್ರು. ನನ್ನ ಹೆಗಲ ಮೇಲೆ ಜಾಸ್ತಿ ಭಾರ ಬೀಳ್ತಿತ್ತು. ಯಾಕೋ ಆ ದಿನ ಮೊದಲ ಬಾರಿಗೆ ಮನದಲ್ಲಿ ಯೋಚನೆ ಸುಳೀತು: ನಮ್ಮ ಮಕ್ಕಳನ್ನು ಈ ಗಲಾಟೆಯಿಂದ ದೂರ ಇಡಬೇಕು ಅಂತ. ಧಾರವಾಡದಲ್ಲಿ ಮನೆ ಮಾಡೋದೇ ಸರಿ ಅನಿಸ್ತು. ದೊಡ್ಡ ಮಗ ಈಗ ಕರ್ನಾಟಕ ಕಾಲೇಜಿನಲ್ಲಿ ಪಿಯುಸಿ ಓದ್ತಿದ್ದ. ಅಲ್ಲೇ ಹಾಸ್ಟೆಲ್ನಲ್ಲಿದ್ದ. ವಾರಕ್ಕೊಮ್ಮೆ ಗರಗಕ್ಕೆ ಬರತಿದ್ದ. ಅದಕ್ಕೋ ಏನೋ ಮತ್ತೆ ಮತ್ತೆ ಈ ಯೋಚನೆ ಸುಳೀಲಾರಂಭಿಸ್ತು ಮನದಲ್ಲಿ. ಹಾಗೇ ಆಯ್ತೂ ಕೂಡಾ ಮುಂದೆ ಒಂದು ವರ್ಷದ ನಂತರ!

| ಇನ್ನು ನಾಳೆಗೆ |

‍ಲೇಖಕರು Admin

September 3, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: