ಅಮ್ಮನ ನೆನಪುಗಳು..

ಕುಶ್ವಂತ್ ಕೋಳಿಬೈಲು

(ನನಗೆ ಮುಂಬೈಯಲ್ಲಿ ಗುರುಗಳಾಗಿದ್ದ ಮಕ್ಕಳ ಮತ್ತು ನವಜಾತ ಶಿಶುಗಳ ತಜ್ಞೆ ವೈಸ್ ಎಡ್ಮಿರಲ್ ಡಾ ಶೀಲಾ ಮಥಾಯ್ (Lt Gen) ಭಾರತೀಯ ಸೇನೆಯಲ್ಲಿ ಮೆಡಿಕಲ್ ಕೋರಿನವರು ತಲುಪಬಹುದಾಗ ಅತ್ಯುನ್ನತ rankಗೆ ಪ್ರಮೋಷನ್ ಪಡೆದಿದ್ದಾರೆ.. ‌ಆ ಮುಂಬೈ ದಿನಗಳ ಬಗ್ಗೆ ಇಲ್ಲಿ ಬರೆದಿದ್ದೇನೆ..)

‘ಕುಶ್ವಂತ್ ಹೊಗೆ ಹಾಕಿಸಿಕೊಳ್ತಾನೆ ನೋಡ್ತಾ ಇರಿ… ಅವನ ಹಾರಾಟ ಅಬ್ಬಬ್ಬಾ ಅಂದ್ರೆ ಇನ್ನೊಂದು ತಿಂಗಳು ಅಷ್ಟೆ!’ ಎಂದು ಮುಂಬೈ ನೌಕಾದಳದ ಆಸ್ಪತ್ರೆಯ NICU ಸಿಸ್ಟರ್ ಒಬ್ಬರು ಪಿಸು ಮಾತಿನಲ್ಲಿ ಭವಿಷ್ಯ ನುಡಿದರು..
‘ತಗ್ಗಿ ಬಗ್ಗಿ ನಡೆದರೆ ಮಾತ್ರ ಮೇಡಂ ಕೆಳಗಡೆ ಕೆಲಸ ಮಾಡಲು ಸಾಧ್ಯ.. ಇಲ್ಲಾಂದ್ರೆ ರುಬ್ಬಿ ಬಿಸಾಕ್ತಾರೆ… ಅಲ್ವಾ’ ಎಂದು ಮತ್ತೊಬ್ಬರು ಧ್ವನಿಗೂಡಿಸಿದರು.

‘ಮೇಜರ್ ಅಂಜಯ್ ಕುಮಾರ್ ಬಹಳ ಸಾಧು ತರಹ ಕಾಣ್ತಾರೆ.. ಬಹುಶಃ ಅವರು ಮೇಡಂ ಕೆಳಗಡೆ ಸರ್ವೈವ್ ಆಗಬಹುದೇನೋ.. ಪಿಜಿ ಟ್ರೈನಿಗಳು ಟ್ರೈನಿಗಳ ತರಹ ನಡ್ಕೋಬೇಕು… ಕುಶ್ವಂತ್ ಗೆ ಗೊತ್ತಾಗುತ್ತೆ ಮೇಡಂ ಬಂದ ನಂತರ, ಟ್ರೈನಿಂಗ್ ಅಂದ್ರೆ ಏನೂ ಅಂತ!!!’
ಎಂದು ನಮ್ಮ ಬ್ಯಾಚಿನ ಸ್ನಾತಕೋತ್ತರ ವಿದ್ಯಾರ್ಥಿಗಳಲ್ಲಿ ಅತೀ ಸೌಮ್ಯ ಸ್ವಭಾವದ, ಯಾರಿಗೂ ಪ್ರತಿರೋಧ ತೋರದ, ನೈಟ್ ಡ್ಯೂಟಿಯಿದ್ದಾಗ ಹಾಸಿಗೆ ಕಾಲಿಯಿದ್ದರೂ ಪುಟ್ಟ ಕುರ್ಚಿಯಲ್ಲಿ ನಿದ್ದೆ ಮಾಡಬಹುದಾಗ ವಿಶಿಷ್ಟವಾದ ಸಾಮರ್ಥ್ಯವಿದ್ದ ಬಿಹಾರದ ಮೇಜರ್ ಅಂಜಯ್ ಕುಮಾರ್ ಬಗ್ಗೆ ನರ್ಸಿಂಗ್ ಆಫೀಸರ್ ಒಬ್ಬರು ವಕಾಲತ್ತು ವಹಿಸಿದರು..

ಮೊದಲ ವರ್ಷದ ಪಿಜಿ ವಿದ್ಯಾರ್ಥಿ ಎಷ್ಟು ತಗ್ಗಿ ಬಗ್ಗಿ ನಡೆದುಕೊಳ್ಳಬೇಕೆಂದು ಆಸ್ಪತ್ರೆಯ ವ್ಯವಸ್ಥೆ ಬಯಸಿತ್ತೊ ಅಷ್ಟು ವಿನಯವಂತಿಗೆ ನನ್ನಲ್ಲಿ ಇರಲಿಲ್ಲ. ಆರಡಿಯಿರುವವರು ಜಾಸ್ತಿ ಬಗ್ಗಿದರೆ ಬೆನ್ನು ನೋವು ಬರುತ್ತದೆಯೆಂದು ಸಿಸ್ಟರ್ಗಳು ಮೊದಲ ವರ್ಷದ ಪಿಜಿಗಳ ಮೇಲೆ ಸವಾರಿ ಮಾಡಲು ಬಂದಾಗ ನಾನು ಉಡಾಫೆ ಮಾಡುತ್ತಿದ್ದೆ. NICUನಲ್ಲಿದ್ದ ಸಿಸ್ಟರ್ ಗಳು ಬಹಳ ಚುರುಕಿದ್ದರು ಮತ್ತು ವೃತ್ತಿಯಲ್ಲಿ ನಿಪುಣರಿದ್ದರು.

MD ಕೋರ್ಸಿಗೆ ಸೇರಿದ ಶುರುವಿನಲ್ಲಿ NICUನ ಅನೇಕ ಕೆಲಸಗಳನ್ನು ನಾವು ಅವರ ಕೈಯಲ್ಲಿ ಕಲಿಯಬೇಕಿದ್ದ ಕಾರಣ ನಾವು ಸಣ್ಣದಾಗಿ ಬಕೆಟ್ ಹಿಡಿಯಲಿ ಎಂಬ ಗುಪ್ತ ಆಸೆಗಳು ಕೆಲವು ಸೀನಿಯರ್ ನರ್ಸಿಂಗ್ ಆಫೀಸರ್ಗಳಲ್ಲಿ ಇತ್ತು. ಅವರೇದು ತಪ್ಪಿಲ್ಲ ಬಿಡಿ.. ಅಸಲಿಗೆ ಹೆಚ್ಚಿನ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಮೊದಲ ವರ್ಷದ ಪಿಜಿ ವಿದ್ಯಾರ್ಥಿಗಳ ಜೀವನ ಶೋಚನೀಯ.. ಅನಿಷ್ಟಕ್ಕೆಲ್ಲ ಶನೀಶ್ವರನೇ ಹೊಣೆಯೆಂಬಂತೆ ಏನೇ ಎಡವಟ್ಟಾದರೂ ಕಟಕಟ್ಟೆಯಲ್ಲಿ ನಮ್ಮನ್ನೆ ನಿಲ್ಲಿಸುತ್ತಿದ್ದರು.

ನಮ್ಮ ನೌಕಾದಳದ ಅಶ್ವಿನಿ ಆಸ್ಪತ್ರೆಗೆ ಹೊಸಾ ಡೀನ್ ಆಗಿ ಮಥಾಯ್ ಮೇಡಂ (ಆಗ ಕಮಡೋರ್ ಶೀಲಾ ಸಮಂತಾ ಮಥಾಯ್) ಪುಣೆಯ AFMCಯಿಂದ ನಮ್ಮಲ್ಲಿಗೆ ಪೋಸ್ಟಿಂಗ್ ಬರುತ್ತಿರುವ ವಿಷಯದಲ್ಲಿ ಕೇಳಿ ಬರುತ್ತಿದ್ದ ಬಿಲ್ಡಪ್ಗಳು ತಮಿಳು ಸಿನೆಮಾದಲ್ಲಿ ರಜನೀಕಾಂತ್ ತೆರೆಯ ಮೇಲೆ ಬರುವಾಗ ಕೊಡುತ್ತಿದ್ದ ಹವಾ ಮಾದರಿಯಲ್ಲಿತ್ತು.

MD ಸ್ನಾತಕೋತ್ತರ ಪದವಿಯ ಮೊದಲನೆಯ ವರ್ಷದ ಕೊನೆಯಲ್ಲಿದ್ದ ನನಗೆ ಅಸಲಿಗೆ ಹೊಸಾ ಡೀನ್ ನನ್ನ ಜೀವನವನ್ನು ಇನ್ನೂ ಕೆಟ್ಟದು ಮಾಡಲು ಸಾಧ್ಯವೇ ಇಲ್ಲವೆಂದು ಅನಿಸುತ್ತಿತ್ತು… ಜೀವನ ಆಗಲೇ ಕೆಟ್ಟು ಗೊಬ್ಬರವಾಗಿತ್ತು… ನಿದ್ದೆಯಿಲ್ಲದ ಕಂಗಳು, ನಮ್ಮ ಮುಖ ಕಂಡ ತಕ್ಷಣ ಕೆಲಸ ಹೇಳುವ ಸೀನಿಯರ್ಗಳು, ಕೆಲಸ ಮುಗಿಸಿದ ನಂತರ ಹೊಸಾ ಕೆಲಸವನ್ನು ಹುಟ್ಟು ಹಾಕುವ ಡಿಪಾರ್ಟ್ಮೆಂಟಿನ ಹಿರಿಯರಿದ್ದರು. ಮುಂಜಾನೆ ಏಳು ಗಂಟೆಗೆ ಆಸ್ಪತ್ರೆಗೆ ಬಂದರೆ ರಾತ್ರಿ ಹತ್ತು ಗಂಟೆಗೆ ರೂಮಿಗೆ ವಾಪಾಸು ಬರುತ್ತಿದ್ದೆ. ಸೂರ್ಯನನ್ನೂ ಕೂಡ ನಾವು ಒಂದು ವರ್ಷ ಸರಿಯಾಗಿ ನೋಡಿರಲಿಲ್ಲ. ಇದೆಲ್ಲದರ ನಡುವೆ ಬೆಂಗಳೂರಿನಲ್ಲಿ ಕೆಲಸದಲ್ಲಿದ್ದ ನನ್ನ ಹೆಂಡತಿ ಅನುಭವಿಸಿದ್ದ ಮಿಸ್ ಕ್ಯಾರಿಯೇಜಿಗೂ ನಾನು ನನ್ನನ್ನು ಅರೋಪಿ ಸ್ಥಾನದಲ್ಲಿ ನಿಲ್ಲಿಸಿಕೊಂಡಿದ್ದೆ. ಬೆಂಗಳೂರಿನ ವಾಯುಸೇನೆಯ ಕಾಮಾಂಡ್ ಆಸ್ಪತ್ರೆಯಲ್ಲಿ orthel ಅಥವಾ ಸರ್ಜರಿ ತಗೆದುಕೊಂಡು, ಕನಿಷ್ಟ ಸಂಜೆಯಾದರೂ ಮನೆಗೆ ಹೆಂಡತಿಯ ಬಳಿಗೆ ಬರುತ್ತಿದ್ದರೆ ಬಹುಶಃ ಅವಳಿಗೆ ಮಿಸ್ ಕ್ಯಾರಿಯೇಜ್ ಅಗುತ್ತಿರಲಿಲ್ಲವೇನೋ ಎಂದು ಮನಸ್ಸಿನಲ್ಲಿ ನನ್ನನ್ನು ಶಪಿಸಿಕೊಳ್ಳುತ್ತಿದ್ದೆ. ಪೀಡಿಯಾಟ್ರಿಕ್ಕೇ ಬೇಕೂ ಅಂತ ಗರ್ಭಿಣಿ ಹೆಂಡತಿಯನ್ನು ಬೆಂಗಳೂರಿನಲ್ಲಿ ಒಬ್ಬಳೇ ಬಿಟ್ಟು ಎರಡು ಸೂಟ್ಕೇಸ್ ಹಿಡಿದು ಮುಂಬೈ ವಿಮಾನ ಹತ್ತಿದ್ದೆ.. ಹೆತ್ತವರು ಕೊಡಗಿನಲ್ಲಿ ,ಹೆಂಡ್ತಿ ಬೆಂಗ್ಳೂರಲ್ಲಿ ನಾನು ಮುಂಬೈಯಲ್ಲಿದ ಕಾರಣ ಆರ್ಮಿಯ ಫೀಲ್ಡ್ ಪೋಸ್ಟಿಂಗ್ ಮುಗಿದರು ಜೀವನ ಮಾತ್ರ ಹರಡಿ ಹಂಚಿ ಹೋದಂತ್ತಿತ್ತು.

ಮೊದಲ ವರ್ಷದ MD/MS ಸ್ನಾತಕೋತ್ತರ ವಿದ್ಯಾರ್ಥಿಗಳೆಂದರೆ ಯಾರು ಬೇಕಾದರೂ ಬಾರಿಸಿ ಹೋಗಬಹುದಿದ್ದ ಜಾಗಟೆಗಳು. ಆಸ್ಪತ್ರೆಯಲ್ಲಿ ಆಯಾ ಕೆಲಸದವರೂ ನಮ್ಮ ಮಾತು ಕೇಳುವುದಿಲ್ಲ. ಅವರಿಗೂ ನಮ್ಮ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲವೆಂಬ ವಿಷಯ ಗೊತ್ತಿರುತ್ತದೆ. ಡಿಪಾರ್ಟ್ಮೆಂಟಿನಲ್ಲಿ ಎಲ್ಲಾ ಹಿರಿಯ ಡಾಕ್ಟರ್ಗಳ ಕೈಯಲ್ಲಿ ನಿತ್ಯ ರೌಂಡ್ಸಿನಲ್ಲಿ ಉಗಿಸಿಕೊಳ್ಳುವವರು ನಾವೇ ಆಗಿರುತ್ತೇವೆ. ರಿಪೋರ್ಟ್ ಬರಲು ತಡವಾದರೂ, ಸಿಸ್ಟರ್ ಮಾನಿಟರ್ ಮಾಡದಿದ್ದರೂ, ಪೇಶಂಟ್ ದೂರಿತ್ತರೂ ಮೊದಲ ರೌಂಡಿನ ಫಯರಿಂಗ್ ನಮ್ಮ ಮೇಲೆ ಆಗುತ್ತದೆ.

ಪಿಜಿ ವಿದ್ಯಾರ್ಥಿಗಳು ಬಾಯಿ ಮುಚ್ಚಿಕೊಂಡು ಕೆಲಸ ಮಾಡಿದರೆ ಮಾತ್ರ ಪಾಸಾಗಿ ಡ್ರಿಗ್ರಿ ಪಡೆಯಬಹುದೆಂಬ ಹಿರಿಯರ ಸಲಹೆ ಮತ್ತು ಬೆದರಿಕೆಗಳನ್ನು ಕೆಲವರು ಗಂಭೀರವಾಗಿ ಸ್ವೀಕರಿಸಿರುತ್ತಾರೆ.ಒಂದು ಮಗುವನ್ನು ಪೋಟೋಥೆರಪಿ ಮಿಷಿನಿನ‌ ಮೇಲೆ ಮಲಗಿಸುವ ಮೊದಲು ಆ ಮಿಷನಿನ ದೂಳು ಕೂಡ ನಾವೇ ಹೊಡೆಯುತ್ತಿದ್ದೆವು. ಲ್ಯಾಬಿಗೆ ರಿಪೋರ್ಟ್ ತರಲು ನಾವೇ ಓಡುತ್ತಿದ್ದೆವು. ಎಲ್ಲಕ್ಕಿಂತ ಹೆಚ್ಚಾಗಿ ಮೊದಲ ವರ್ಷ ಮುಗಿದು ಒಮ್ಮೆ ನಮ್ಮ ಜೂನಿಯರ್ ಬ್ಯಾಚು ಬಂದರೆ ಇದೆಲ್ಲ ಕೆಲಸಗಳನ್ನು ಅವರಿಗೆ ವಹಿಸಲು ನಾವು ಜಾತಕ ಪಕ್ಷಿಯಂತೆ ಕಾಯುತ್ತಿದ್ದೆವು.

ಇಲ್ಲಿಗೆ ಕೊರ್ಸ್ ಸೇರಲು ಬರುವ ಮುನ್ನ ನಮ್ಮ ಚಿಕ್ಕ ಪುಟ್ಟ ರೆಜಿಮೆಂಟುಗಳಲ್ಲಿ ‘ಡಾಕ್ಟರ್ ಸಾಬ್’ ಎಂದು ಇಡೀ ರೆಜಿಮೆಂಟಿನಿಂದ ಸಲಾಮ್ ಹೊಡಿಸಿಕೊಂಡು ಹೆಮ್ಮಯಿಂದ ಇದ್ದ ಕೆಲವು ಮೇಜರ್ ಸಾಬ್ಗಳಿಗೆ ಅಚಾನಕ್ಕಾಗಿ ಇಲ್ಲಿಗೆ ಬಂದ ನಂತರ ತಮ್ಮ ಯುನಿಫಾರ್ಮಿನ ಹೆಗಲ ಮೇಲಿದ್ದ ಸಿಂಹದ ಹಲ್ಲು ಕಿತ್ತಂತೆ ಭಾಸವಾಗುತ್ತಿತ್ತು‌.ತಿಂಗಳಿಗೊಮ್ಮೆ ಶನಿವಾರದ ರಾತ್ರಿ ನೇವಿಯ ಕ್ಲಬ್ಬಿನಲ್ಲಿ ಬಿಯರ್ ಕುಡಿಯುತ್ತಾ ಭಗ್ನ ಪ್ರೇಮಿಗಳು ತಮ್ಮ ಗರ್ಲ್ ಫ್ರೆಂಡ್ ಬಗ್ಗೆ ಕೊಂಡಾಡುವಂತೆ ನಾವು ನಮ್ಮ ಹಳೆಯ ರೆಜಿಮೆಂಟಿನಲ್ಲಿ ಕಳೆದ ಒಳ್ಳೆಯ ದಿನಗಳ ಬಗ್ಗೆ ಮೆಲುಕು ಹಾಕುತ್ತಿದ್ದೆವು.

ಇಷ್ಟು ಬರಕೆಟ್ಟಿರುವ ಮೊದಲ ವರ್ಷದ ಪಿಜಿಗಳ ಬದುಕನ್ನು ಮಥಾಯ್ ಮೇಡಂ ಇನ್ನಷ್ಟು ಸಂಕಷ್ಟಕ್ಕೆ ತಳ್ಳಲು ಅವಕಾಶವೇ ಇಲ್ಲವೆಂಬ ಅಚಲ ವಿಶ್ವಾಸದಲ್ಲಿ ನಾನಿದ್ದೆ. ಒಂದು ಅಧಿಕಾರಿಯ ಪೋಸ್ಟಿಂಗ್ ಆರ್ಡರ್ ಬಂದ ನಂತರ ಅವರು ಅಲ್ಲಿಗೆ ಬಂದು ಡ್ಯೂಟಿ ರಿಪೋರ್ಟ್ ಆಗುವ ಮುಂಚೆ ಅವರ ಎಲ್ಲಾ ಸುದ್ದಿಗಳು ಮತ್ತು ಹಿನ್ನಲೆ ಅಲ್ಲಿಗೆ ಬಂದು ತಲುಪುವುದು ಸೇನೆಯ ವಿಶೇಷತೆಗಳಲ್ಲಿ ಒಂದು. ಮಥಾಯ್ ಮೇಡಂ ಯಾವ ರೀತಿಯ ಟೆರರ್ ಉಂಟು ಮಾಡುವ ಗುರುಗಳೆಂಬ ವಿಷಯಗಳು ಸೇನೆಯ ಪೀಡಿಯಾಟ್ರಿಶನ್ಗಳ ಮತ್ತು ಅವರ ಹಳೇ ವಿದ್ಯಾರ್ಥಿಗಳ ಬಾಯಲ್ಲಿ ಜಾನಪದ ಕಥೆಗಳಾಗಿ ಹೋಗಿದ್ದವು.

ಮಥಾಯ್ ಮೇಡಂ ಭಯದಿಂದ ಕೆಲವು ಮೊದಲ ರ್ಯಾಂಕಿನವರು ಪೀಡಿಯಾಟ್ರಿಕ್ಸ್ ಮೇಲೆ ಒಲವಿದ್ದರೂ ಡಿಪಾರ್ಟ್ಮೆಂಟ್ ಬಹಳ ಕಟ್ಟುನಿಟ್ಟೆಂದು ಬೇರೆ ಬ್ರಾಂಚುಗಳನ್ನು ಆಯ್ದುಕೊಂಡಿದ್ದರಂತೆ. ಇನ್ನು ಕೆಲವರು ಅರ್ಧದಲ್ಲಿ ಬಿಟ್ಟು ಹೋದರೆ ಉಳಿದವರನ್ನು ಮೇಡಂ ಬಿಟ್ಟು ಹೋಗುವಂತೆ ಮಾಡಿದ್ದರಂತೆ.. NICUನೊಳಗಡೆ ಅವರು ದಿನಾ ಒಂದು ಗಂಟೆ ರೌಂಡ್ಸ್ ಮಾಡುವಾಗ ಪಿಜಿಗಳ ಸಮೇತ ಉಳಿದವರನ್ನೂ ಜಾಡಿಸುವ ವಿಷಯವಂತೂ ಸಿಸ್ಟರ್ಗಳಿಗೂ ಭಯ ಹುಟ್ಟಿಸಿತ್ತು. ಚಿಕ್ಕ ಪುಟ್ಟ ತಪ್ಪುಗಳನ್ನೂ ಅವರು ಸಹಿಸುವುದಿಲ್ಲದ ಕಾರಣ ಅವರ ಮುಂಜಾನೆಯ ರೌಂಡ್ಸ್ ಮುಗಿದ ನಂತರವಷ್ಟೇ ಜನರು ಆ ದಿನ ಸಲೀಸಾಗಿ ಉಸಿರಾಡುತ್ತಿದ್ದರಂತೆ. ಅವರು ಹಿಂದಿನ ಬಾರಿಯ ಪೋಸ್ಟಿಂಗಿನಲ್ಲಿದ್ದಾಗ ಅವರಿಗಿಂತ ತಡವಾಗಿ ರೌಂಡ್ಸಿಗೆ ಬಂದ ಜುನಿಯರ್ ಪ್ರೊಫೆಸರೊಬ್ಬರನ್ನು ಸಾರ್ವಜನಿಕವಾಗಿ ‘ಗೆಟ್ ಔಟ್’ ಮಾಡಿದ ವಿಷಯವನ್ನು ಸ್ವತಃ ಹಿರಿಯ ಅಧಿಕಾರಿಗಳೇ ನಮಗೊಮ್ಮೆ ಹೇಳಿದ್ದರು.

ಓವರ್ ಸ್ಮಾರ್ಟ್ ಹುಡುಗರನ್ನು ಅವರು ವಿಶೇಷ ಕಾಳಜಿಯಿಂದ ರುಬ್ಬುವ ವಿಷಯ ಜನಜನಿತವಾಗಿದ್ದ ಕಾರಣ ಮಥಾಯ್ ಮೇಡಂ ಅವರು ಕೆಲಸ ಮಾಡುವ ಶೈಲಿಯನ್ನು ಅವರ ಹಿಂದಿನ ಪೋಸ್ಟಿಂಗಿನಲ್ಲಿ‌ ಕಂಡಿದ್ದ ಹಿರಿಯ ಸಿಸ್ಟರ್ಗಳು ನನ್ನ ಭವಿಷ್ಯದ ಬಗ್ಗೆ ಷರಾ ಬರೆದಿದ್ದರು.

ಮಥಾಯ್ ಮೇಡಂ AFMC Pune ಮತ್ತು INHS Asvini ಸಂಸ್ಥೆಗಳಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಪೊಸ್ಟಿಂಗ್ ಹೋಗುತ್ತಾ ಪೀಡಿಯಾಟ್ರಿಕ್ ವಿಭಾಗದ ಮುಖ್ಯಸ್ಥರಾಗಿ ಕೆಲಸ ಮಾಡಿದ್ದರು. INHS Asviniಯಲ್ಲಿ ಅವರು ಪೀಡಿಯಾಟ್ರಿಕ್ ವಿಭಾಗದಲ್ಲಿ MD ಮಾಡಿದ್ದರೆ ಮುಂಬೈನ ಸರಕಾರಿ ಸಂಸ್ಥೆಯೊಂದರಲ್ಲಿ ಸ್ಟಡಿ ಲೀವ್ ಪಡೆದು DM Neonatology ಮಾಡಿ ಈ ಕ್ಷೇತ್ರಗಳಲ್ಲಿ ದೊಡ್ಡ ಹೆಸರು ಮಾಡಿದ್ದರು. ನಮ್ಮ ಪಠ್ಯ ಪುಸ್ತಕಗಳಲ್ಲಿಯೂ ಅವರ ಲೇಖನಗಳು ರಾರಾಜಿಸುತ್ತಿದ್ದವು.

ನಮ್ಮಿಂದ ಕೆಲಸವನ್ನು ಖಡಕ್ಕಾಗಿ ಹಿಂಡುತ್ತಿದ್ದ ಎರಡನೇ ವರ್ಷದ ಪಿಜಿಗಳು ಮತ್ತು ಪರೀಕ್ಷೆಗೆ ತಯಾರಾಗುತ್ತಿರುವ ಮೂರನೇ ವರ್ಷದ ಪೀಜಿಗಳು ಮಥಾಯ್ ಮೇಡಂ ವಿಷಯದಲ್ಲಿ ಇಷ್ಟು ತಲೆಕೆಡಿಸಿಕೊಂಡದ್ದನ್ನು ನೋಡಿ ನನ್ನ ಬ್ಯಾಚ್ ಮೇಟ್ ಹಾಸನದ ಮೇಜರ್ ಪ್ರವೀಣ್ ಕೂಡ ಚಿಂತಾಕ್ರಾಂತನಾಗಿದ್ದ. ಅವನ ಪಿಜಿ ಥೀಸೀಸ್ ಪೇಪರಿನ ಗೈಡ್ ಕೂಡ ಮಥಾಯ್ ಮೇಡಂ ಅಗುವ ಸಂಭವವಿದ್ದ ಕಾರಣ ಅವನ ಎದೆಬಡಿತ ಅವರು ಬರುವ ಮೊದಲೇ ಜಾಸ್ತಿಯಾಗಿತ್ತು.

ನಾನು ಮತ್ತು ಮೇಜರ್ ಪ್ರವೀಣ್ ನಮ್ಮ ದುಃಖದ ದಿನಗಳಲ್ಲಿ ಮನೋರಂಜೆನೆಗಾಗಿ ಕನ್ನಡದಲ್ಲಿ ಮಾತನಾಡುತ್ತಾ ಕೆಲವರಿಗೆ ಅಡ್ಡ ಹೆಸರುಗಳನ್ನು ಇಟ್ಟಿದ್ದೆವು. ನಮ್ಮನ್ನು ಅತೀ ಹೆಚ್ಚು ಕೆಲಸ ನೀಡಿ ಸತಾಯಿಸುತ್ತಿದ್ದ ಎರಡನೇ ವರ್ಷದ ಪಿಜಿಯೊಬ್ಬರಿಗೆ ನಾವು ‘ಅತ್ತೆ’ ಎಂದು ಹೆಸರಿಟ್ಟಿದ್ದೆವು‌. ಅತ್ತೆ ಸೊಸೆಯ ತಪ್ಪುಗಳನ್ನು ಹುಡುಕಿ ತೆಗೆಯುವಂತೆ ಇವರು ನಮ್ಮ ಹಿಂದೆ ಕೈ ತೊಳೆದುಕೊಂಡು ಬಿದ್ದಿದ್ದರು. ಕಾಟ ಕೊಡುವವರು ಮತ್ತು ಕೆಲಸ ಕಲಿಸುತ್ತಿದ್ದವರೂ ‘ಅತ್ತೆ’ ಯವರೇ ಆಗಿದ್ದ ಕಾರಣಕ್ಕೆ ನಾವು ವಿನಯಶೀಲ ಸೊಸೆಯದಂತೆ ತೆಪ್ಪಗಿದ್ದೆವು. ಮೂರನೇ ವರ್ಷದ ಪಿಜಿಯಾಗಿದ್ದ ಮೇಜರ್ ಗುರುಪ್ರೀತ್ ( lady) ಯುನಿವರ್ಸಿಟಿ ಬಂಗಾರದ ಪದಕದ ಮೇಲೆ ಕಣ್ಣಿಟ್ಟು ಯರ್ರಾಬಿರ್ರಿ ಓದುತ್ತಿದ್ದ ಕಾರಣ ನಾವುಗಳು ಅವರ ಎದುರು ಹೋದಾಗಲೆಲ್ಲ ಒಂದೆರಡು ಸಣ್ಣ ವಿಷಯದ ಬಗ್ಗೆ ಪಾಠ ಮಾಡುತ್ತಿದ್ದುದರಿಂದ ಮೇಜರ್ ಗುರುಪ್ರೀತಳನ್ನು ನಾವು ಪ್ರೀತಿಯಿಂದು ‘ಗುರೂಜೀ” ಎಂದು ಅವರ ಎದುರೇ ಕರೆಯುತ್ತಿದ್ದೆವು…

‘ಅಮ್ಮ ಬಂದ ನಂತರ ಜೀವನ ಹೆಂಗಿರುತ್ತೊ’ ಎಂದು ಒಂದು ಸಂಜೆ ಕಾಫಿ ಕುಡಿಯುತ್ರಾ ಮೇಜರ್ ಪ್ರವೀಣ್ ಆತಂಕದಲ್ಲಿ ನುಡಿದ. ಅವನ ಹೆಂಡತಿ ಬೆಂಗಳೂರಿನಲ್ಲಿ ವೈದ್ಯೆಯಾಗಿದ್ದು ಅವರಿಗೆ ಪುಟ್ಟ ಮಗೊವೊಂದು ಇದ್ದ ಕಾರಣ ಮೇಜರ್ ಪ್ರವೀಣ್ ಕೂಡ ಫ್ಯಾಮಿಲಿಯನ್ನು ಕರ್ನಾಟಕದಲ್ಲಿ ಬಿಟ್ಟು ಮುಂಬೈಗೆ ಬಂದಿದ್ದ…

‘ಅಮ್ಮ’ ಬಂದ ನಂತರ ನೋಡೋಣ.. ನಮ್ಮ ಸೀನಿಯರ್ ಬ್ಯಾಚಿನವರು ರೌಂಡ್ಸಿನಲ್ಲಿ ಅವರಿಗೆ ಕೇಸುಗಳ ಬಗ್ಗೆ ವಿವರಿಸಬೇಕಿರುವ ಕಾರಣ ‘ಅತ್ತೆ’ ಮೊದಲ ಬಲಿಯಾಗುವ ಸಾಧ್ಯತೆಯಿದೆ… ಎಂದು ನಾನು ನನ್ನ ಲಾಜಿಕ್ ಉಪಯೋಗಿಸಿದೆ… ಬಕಾಸುರನಿಗೆ ಬಂಡಿಯಲ್ಲಿ ಊಟ ತಗೆದುಕೊಂಡು ಹೋಗುವವರು ಭಯಬೀತರಾಗುತ್ತಿದ್ದ ಮಾದರಿಯಲ್ಲಿ ವಿದ್ಯಾರ್ಥಿಗಳು ಮಥಾಯ್ ಮೇಡಂಗೆ ಕೇಸ್ ಪ್ರೆಸೆಂಟ್ ಮಾಡಲು ಹೆದರುತ್ತಿದ್ದರು..

‘ಅಮ್ಮ’ ಎಂದು ಮಥಾಯ್ ಮೇಡಂಗೆ ಭಕ್ತಿಯಿಂದ ಮಿತ್ರ ಮೇಜರ್ ಪ್ರವೀಣ್ ನಾಮಕರಣ ಮಾಡಿದರೂ ಅವರು ಸರಸ್ವತಿ ಅಮ್ಮನ ರೂಪ ಧಾರಣೆ ಮಾಡದೆ ಇಲ್ಲಿಗೆ ಬಂದ ನಂತರ ಚೌಂಡಿ ಅಮ್ಮನಂತೆ ನಮ್ಮ ಹಿಂದೆ ಬೀಳುವುದರಲ್ಲಿ ಯಾವುದೇ ಅನುಮಾನಗಳಿಲ್ಲವೆಂದು ಅವರ ಟ್ರ್ಯಾಕ್ ರೆಕಾರ್ಡ್ ಗಂಟಾಘೋಷವಾಗಿ ಸಾರುತ್ತಿತ್ತು..‌

‍ಲೇಖಕರು Admin

September 1, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: