ಸರೋಜಿನಿ ಪಡಸಲಗಿ ಸರಣಿ – ಮಕ್ಕಳ ಸ್ಕೂಲ್ Admission

ಸರೋಜಿನಿ ಪಡಸಲಗಿ

2

ಹೊಸ ಊರಿನ ಹೊಸ ಬೆಳಕಿನ ಬೆಳಗು ಆಯ್ತು. ಎಲ್ಲಿಂದ ಏನು ಹೆಂಗೆ ಶುರು ಮಾಡೋದು ತಿಳೀಲಿಲ್ಲ ಒಂದು ನಿಮಿಷ. ಅನುಸೂಯಾನೂ ಎದ್ದು  ಬಂದ್ಲು  ನಾ ಎದ್ದಿದ್ದ ನೋಡಿ. ಅವಳು ಪೊರಕೆ ತಗೊಂಡು ಅಂಗಳಾ ಗುಡಿಸಿ ಸಾರಿಸಿ ‘ರಂಗೋಲಿ ಹಾಕ್ರಿ ಅಕ್ಕಾರ’ ಅಂದ್ಲು. ದೇವರ ಮುಂದೆ  ದೀಪ ಹಚ್ಚಿ’ ಎಲ್ಲಾ ಸುಸೂತ್ರ ನಡೀಲೆಪಾ ದೇವ್ರೇ’ ಅಂತ ಕೈ ಮುಗಿದು ಕೆಲಸ ಶುರು ಮಾಡಿದೆ. ಎಂದಿನಂತೆ ನಿಯಮಿತ ದಿನಚರಿ. ಹೊಸ  ಊರು, ಹೊಸ ಜಾಗ ಎಂಬುದೊಂದನ್ನು ಬಿಟ್ಟು. ಯಾವ ಊರಾದ್ರೇನು, ಕೇರಿಯಾದ್ರೇನು? ಗಡಬಡ ಟೀ ಕುಡಿದು ಸ್ನಾನದ ತಯಾರಿಲಿ ಮಗ್ನ  ನನ್ನ ಪತಿ. ನಾ ತಿಂಡಿ ತಯಾರಿ ಶುರು ಮಾಡ್ದೆ. ಮಕ್ಕಳೂ ಎದ್ದು ಬಂದ್ರು. ಹಾಲು ಬಿಸಿ ಮಾಡಿ ಕೊಟ್ರೆ ಮೂಗು ಮುರಿದ ನನ್ನ ಮಗ. ‘ನಿನ್ನೆ ಹಾಲು ಹೌದಲ್ಲೋ’ ಅಂದ ‘ಛಲೋ ಅದನೋ ಕುಡಿ ಅಂದ್ಲು ಮಗಳು.’ ‘ಈಗ ಗಫಾರ್ ಇಲ್ಲಾ ಮಕ್ತುಂ ಬಂದ್ರಂದ್ರ ಹಾಲು ತರಸ್ತೀನಿ. ಈಹೊತ್ತು ಒಂದಿನ  ಕುಡೀಪಾ’ ಅಂದೆ. ಕುಡಿದು ಹೋದ್ರು ಇಬ್ಬರೂ. ಸ್ವಲ್ಪ ಚುರ್ ಅಂತು ಜೀವ. ಏನು ಮಾಡೋದು ಎಲ್ಲಾ ಸೆಟ್ ಆಗಬೇಕಿತ್ತು ಇನ್ನೂ.

ಅಷ್ಟ್ರಲ್ಲಿ  ಗಫಾರ್ ಮತ್ತು ಮಕ್ತುಂ ಬಂದೇ ಬಿಟ್ರು, ಹಿಂದಿನ ದಿನ ಹೇಳಿದ ಹಾಗೆ. ಹತ್ತು ನಿಮಿಷಗಳಲ್ಲಿ ನೀರು ತುಂಬಿಸಿ ಬಿಟ್ರು. ಕುಡಿಯಲೂ ಅದೇ ನೀರು  ಬಳಸಬೇಕಿತ್ತು. ‘ಛಲೋ ಅದ ಅಲ್ಲಪಾ ನೀರು ಕುಡೀಲಿಕ್ಕೆ ಮಕ್ತುಂ’ ಅಂತ  ಕೇಳಿದೆ. ‘ಹೇ ಫಸ್ಟ್ ಕ್ಲಾಸ್ ಐತ್ರೀ ಅಕ್ಕಾರ. ಇಚಾರs ಮಾಡಬ್ಯಾಡ್ರಿ. ಕಲ್ಲಾಗಿನ ನೀರರೀ ಅಕ್ಕಾರ. ಭಾಳ ಸ್ವಚ್ಛ, ಥಣ್ಣಗ್ರೀ. ಕುಡಿದವರ ಹೊಟ್ಟಿ ನೆತ್ತಿ ತಂಪರೀ ಅಕ್ಕಾರ’ ಅಂದ. ನಾ ಒಂದು ಕ್ಷಣ ಅಚ್ಚರಿಯಿಂದ ಮೂಕಳಾಗಿ  ಅವನ ಮಾರಿನೇ ನೋಡಿ ನಕ್ಕು ಹೇಳಿದೆ ‘ಛಂದ ಹೇಳಿದ್ಯೋ ಮಕ್ತುಂ’ ಅಂತ. ತಲೆ ಕೆರಸಿಕೋತ ಆತನೂ ನಕ್ಕ. ಕೇಳಿದಾ- ‘ಅಕ್ಕಾರs ಹಾಲಿಂದೇನ ಮಾಡಿದ್ರಿ?’ ಅಂತ  ಕೇಳಿದ.

‘ಈಗಂತೂ ಸ್ವಲ್ಪ ನಿನ್ನೀವ ಹಾಲಿದ್ದು, ಬಗೀಹರೀತು. ನಾನ ಈಗ ಕೇಳಾಕಿದ್ದೆ ನಿನ್ನ. ಯಾರ ಕೊಡ್ತಾರೇನಪಾ ಹಾಲು? ಹಾಲ ಮಾತ್ರ ಛಲೋ  ಇರಬೇಕು. ಮಕ್ಳು ಕುಡೀತಾವ. ಮೊಸರೂ ಛಲೋ ಆಗಬೇಕು.’ ಅಂದೆ. ಅದಕ್ಕೆ ಆತ ‘ಇಲ್ಲೆ ಡೇರಿ ಐತ್ರಿ ಅಕ್ಕಾರ. ಎಲ್ಲಾರೂ ಅಲ್ಲೇ  ಹಾಕ್ಕಾರ. ಡಿಗ್ರಿ  ಹಚ್ಚಿ ತಗೋತಾರು. ಭಾಳ ಮಸ್ತ್ ಇರತಾವ್ರಿ. ಅಲ್ಲೇ ತಗೋರಿ, ಅಕಡೀ ಹಾಲ್ರೀ ಅಕ್ಕಾರ. ನಾ ತಂದ ಕೊಡ್ತೇನ್ರಿ.’ ಅಂತ ಒಂದೇ ಉಸರಿನಲ್ಲಿ  ಹೇಳಿದ. ಸರಿ ಅಂದೆ. ಅಂವಾ  ಹೇಳಿದ್ಹಾಂಗ ಹಾಲು ತುಂಬಾ ಚೆನ್ನಾಗಿತ್ತು. ಈ ಹಳ್ಳಿಗಳಲ್ಲಿ ಹಾಲು, ಮೊಸರು, ಬೆಣ್ಣೆ, ತುಪ್ಪ ಸಮೃದ್ಧಿ. ಎರಡು ಮಾತಿಲ್ಲ ಅದರಲ್ಲಿ.

ಗರಗನೂ ತುಂಬಾ ಚಿಕ್ಕ ಹಳ್ಳಿ. ಹೀಗಾಗಿ ಧಾರವಾಡದಿಂದಲೇ ದಿನಸಿ ತರಬೇಕಾಗ್ತಿತ್ತು. ಎರಡು ಮೂರು ತಿಂಗಳಿನ ದಿನಸಿ ತಂದು ಇಟ್ಟುಕೊಂಡು ಬಿಡೋದು ಅಲ್ಲಿ ಅಂದರೆ  ನಾವು ತಿಳವಳ್ಳಿ- ಬಂಕಾಪುರದಲ್ಲಿ ಮಾಡ್ತಿದ್ದ ಥರಾನೇ ಅಂತ ಅನ್ಕೊಂಡ್ವಿ. ಇಲ್ಲಿಯದೂ ಪ್ರಾಥಮಿಕ ಆರೋಗ್ಯ ಕೇಂದ್ರವೇ. ಆದರೆ ಹೆಚ್ಚು ಕಡಿಮೆ ಹಾಸ್ಪಿಟಲ್ ಸಿಬ್ಬಂದಿ ಎಲ್ಲಾ ಧಾರವಾಡ ದಿಂದಲೇ ಓಡಾಡ್ತಿದ್ರು. ಡಾಕ್ಟ್ರು, ಒಬ್ರು ಸಿಸ್ಟರ್, ಕಾಂಪೌಂಡರ್, ಒಬ್ಬ ಅಟೆಂಡರ್ ಇಷ್ಟೇ ಜನಕ್ಕೆ ಅಲ್ಲಿ ಕ್ವಾರ್ಟರ್ಸ್ ಇದ್ದದ್ದು. ಹೀಗಾಗಿ ತಿಳವಳ್ಳಿಯಂತೆನೇ ಇಲ್ಲೂ ನಮಗೆ ಬಂಕಾಪುರದಂಥ ಕ್ಯಾಂಪಸ್, ವಾತಾವರಣ ಎರಡೂ ಸಿಗಲಿಲ್ಲ. ಆದರೆ ಧಾರವಾಡ  ಹತ್ರ ಇರೋದರಿಂದ ಆ ಬಗ್ಗೆ  ಜಾಸ್ತಿ ಯೋಚನೆ ಇರಲಿಲ್ಲ. ನಮ್ಮ ಬಂಧು ಬಳಗ ಧಾರವಾಡದಲ್ಲಿ ತುಂಬಾ ಜನ ಇದ್ರು. ಒಂಥರಾ ಖುಷಿ ಅನಿಸೋದು. ನಮ್ಮ ಸವಣೂರು ಭಾವನವರೂ (ಅವರೂ ಡಾಕ್ಟ್ರು) ಮಕ್ಕಳ ವಿದ್ಯಾಭ್ಯಾಸದ ಸಲುವಾಗಿ ಧಾರವಾಡದಲ್ಲೇ ಮನೆ ಮಾಡಿದ್ರು. ಹೀಗಾಗಿ ಛಲೋ ಅನಸ್ತಿತ್ತು. ಎಲ್ಲಾ ಒಂದು ಹದಕ್ಕೆ ಬಂದಂತಾಯ್ತು ಮಕ್ಕಳ ಶಾಲೆಯದೊಂದನ್ನು ಬಿಟ್ಟು. ಆ ದಿನ ಒಂದು ಬಿಟ್ಟು ಮಾರನೇ ದಿನ ಧಾರವಾಡಕ್ಕೆ ಹೋಗಿ ಶಾಲೆಯ ಬಗ್ಗೆ ವಿಚಾರಿಸಿ, admission ಮಾಡಿಸಿಕೊಂಡು ಬರುವುದು ಅಂತ  ಯೋಚಿಸಿದ್ವಿ. ಇಬ್ಬರೂ ಮಕ್ಕಳದು ಮಾರ್ಕ್ಸ ಕಾರ್ಡ್, ಇನ್ನುಳಿದ ಎಲ್ಲ ಪೇಪರ್ಸ ತೆಗೆದಿಟ್ಟುಕೊಂಡೆ.

ಸರಿ, ಮಾರನೇ ದಿನ ಬೆಳಿಗ್ಗೆ ಬೇಗ ಎದ್ದು ತಯಾರಾದ್ವಿ. ಒಂಬತ್ತು ಗಂಟೆಯ ಸಿಟಿ ಬಸ್ ಗೆ ಹೋಗೋ ವಿಚಾರ ಇತ್ತು. ಇನ್ನೇನು ಹೊರಡೋದೇ, ಅಷ್ಟ್ರಲ್ಲಿ ಅಲ್ಲಿನ ಅಟೆಂಡರ್ ಮುಲ್ಲಾ ಒಂದು ಹೆರಿಗೆ ಕೇಸ್ ಬಂದಿದೆ ಅಂತ ಕರೆಯ ಬಂದ, ಸುರೇಶ ಅವರನ್ನು. ಆ ಕೇಸ್ ಸ್ವಲ್ಪ ಕಷ್ಟಕರ ಇತ್ತು. ಬಿಟ್ಟು ಬರೋ ಸಾಧ್ಯತೆ ಖಂಡಿತಾ ಇರಲಿಲ್ಲ. ಇದೇನು ನನಗೂ, ಮಕ್ಕಳಿಗೂ  ಹೊಸದೇನಲ್ಲ! ನಾನು, ಮಕ್ಕಳು ಅಷ್ಟೇ ಹೋಗಿ ಬರೋದು ಅಂತ  ಠರಾಯಿಸಿ ಆ ಪ್ರಕಾರ ಹೋದ್ವಿ ಧಾರವಾಡಕ್ಕೆ. ಇಲ್ಲಿ ನಾ ಒಂದು ಮಾತು ಹೇಳಲೇಬೇಕು. ಇಲ್ಲದೇ ಹೋದ್ರೆ ನನಗೇ ನಾ ಮೋಸ ಮಾಡಿ ಕೊಂಡ ಹಾಗೆ.

ಹಳ್ಳಿಗಳಲ್ಲಿ ಸೇವೆ ಮಾಡಿ ಅಂತ ವೈದ್ಯರುಗಳಿಗೆ ಒತ್ತಾಯ ಮಾಡುವ, ಕಡ್ಡಾಯ ಮಾಡುವ ಸರ್ಕಾರ ಅವರಿಗೆ ಅಲ್ಲಿ ಏನೇನು ಸವಲತ್ತುಗಳನ್ನು ಒದಗಿಸಿ ಕೊಟ್ಟಿದೆ ಅದಿನ್ನೂ ನನ್ನರಿವಿಗೆ ಬಂದೇ ಇಲ್ಲ. ಕೊನೇ ಪಕ್ಷ ಕನಿಷ್ಠ ಪ್ರಮಾಣದಲ್ಲಿಯಾದರೂ ಒದಗಿಸಿದೆಯಾ ಎಂಬುದು ನನ್ನ ಬುದ್ಧಿಗೂ ಎಟುಕಿಲ್ಲ! ಇದು ಒಂದಾದ್ರೆ ಹಳ್ಳಿ ಸ್ಕೂಲ್ ನಿಂದ ಬಂದ ಮಕ್ಕಳ ಬುದ್ಧಿ ಮತ್ತೆಯನ್ನು ಅಳೆಯುವ ಅವಮಾನಕರ ರೀತಿ, ಆ ಮಕ್ಕಳನ್ನು underestimate ಮಾಡುವ ಗುರುಗಳ ವ್ಯವಹಾರ, ವ್ಯವಸ್ಥೆ ತುಂಬಾ ಘಾಸಿ ಮಾಡುವಂಥದು. ಧಾರವಾಡದಲ್ಲಿ ನನ್ನ  ಮಕ್ಕಳ ಸ್ಕೂಲ್ ಆಡ್ಮಿಷನ್ ಮಾಡುವಾಗ ನಾ ಕಂಡು ಕೊಂಡ ಅಪ್ಪಟ ಸತ್ಯ ಇದು ! 

ನನ್ನ ಮಗಳು ಏಳನೇ ಕ್ಲಾಸ್ ನಲ್ಲಿ 95% ಮಾರ್ಕ್ಸ್ ತೆಗೆದಿದ್ಲು. ಆಗ ಅದು ಬೋರ್ಡ್ ಪರೀಕ್ಷೆ ಆಗಿತ್ತು. ಮಧ್ಯೆ ನಾಲ್ಕು ವರ್ಷ ಕಾಲ ಶಿಕ್ಷಣ ಇಲಾಖೆ ಮತ್ತೆ ಏಳನೇ ಕ್ಲಾಸ್ ನ ಪರೀಕ್ಷೆನ ಮುಲ್ಕಿ ಪರೀಕ್ಷೆಯಂತೆ ಬೋರ್ಡ್ ಪರೀಕ್ಷೆ ಮಾಡಿ ಜಿಲ್ಲಾ ಕೇಂದ್ರಗಳಲ್ಲಿ ಪೇಪರ್ ತಪಾಸಣೆ ನಡೆಸಿ,  ಅಲ್ಲಿಂದಲೇ ರಿಸಲ್ಟ್ ಅನೌನ್ಸ ಆಗುತ್ತಿತ್ತು. ಆ ಬೋರ್ಡ್ ಪರೀಕ್ಷೆಯಲ್ಲೇ ಅವಳಿಗೆ 95%  ಬಂದಿತ್ತು. ಐದನೇ ಕ್ಲಾಸ್ ನಲ್ಲಿ ನನ್ನ ಚಿಕ್ಕ ಮಗನೂ  ಒಳ್ಳೇ ಅಂಕ ಗಳಿಸಿದ್ದ. ಆತನದು ಸ್ಕೂಲ್ ಪರೀಕ್ಷೆ. ನನಗೆ ನನ್ನ ಮಕ್ಕಳನ್ನು ಕೆ.ಇ. ಬೋರ್ಡ್ ಇನ್ಸ್ಟಿಟ್ಯೂಟ್ ನ ಶಾಲೆಗಳಿಗೇ ಸೇರಿಸುವುದಿತ್ತು. ನಾವು ಟ್ರಾನ್ಸ್ ಫರ್ ಆಗಿ ಗರಗಕ್ಕೆ ಬಂದಿದ್ದೇ ಜೂನ್ ತಿಂಗಳ ಮೂರನೇ ವಾರದಲ್ಲಿ.

ಹೀಗಾಗಿ ಶಾಲೆಗಳೆಲ್ಲ ಆರಂಭ ಆಗಿ ಬಿಟ್ಟಿತ್ತು. ಹೆಚ್ಚು ಕಡಿಮೆ admissions ನೂ ಎಲ್ಲಾ ಭರ್ತಿ ಆಗಿತ್ತು. ನನ್ನ ಮಕ್ಕಳಿಗೆ ಸೀಟು ಸಿಗಲಿಲ್ಲ, ಕೆ.ಇ.ಬೋರ್ಡ್ ಸ್ಕೂಲ್ ನಲ್ಲಿ, ಕರ್ನಾಟಕ ಹೈಸ್ಕೂಲ್ ನಲ್ಲೂ ಸಿಗಲಿಲ್ಲ. ಅಷ್ಟು ಹೇಳಿ ಸುಮ್ಮನಿದ್ರೆ ಛಲೋ ಆಗ್ತಿತ್ತು. ಅವರು ಹೇಳಿದ ಒಂದು ಮಾತು ಭಾಳ ಇರಿಸು ಮುರಿಸು ಉಂಟು ಮಾಡ್ತು, ಸ್ವಲ್ಪ ಸಿಟ್ಟೂ ಬಂತು. ಆದರೆ ಮಾಡೋದೇನು? ಮಕ್ಕಳಿಗೆ ಸ್ಕೂಲ್ ನಲ್ಲಿ ಸೀಟಂತೂ ಬೇಕಲ್ಲವೆ? ಅವರು ಹೇಳಿದರು ಅಥವಾ ಕೇಳಿದರೋ ಅದೂ ಅರ್ಥ ಆಗಲಿಲ್ಲ ನಂಗೆ- ‘ತಿಳವಳ್ಳಿ  ಸ್ಕೂಲ್ ನಲ್ಲಿ ಕಲಿತ ಹುಡಗ್ರಿಗೆ ಇಲ್ಲಿ ಹೊಂದಿಕೊಳ್ಳಲಾದೀತಾ ಅಂತ’ ನಾ ಹೇಳಿದೆ – ‘ಅಡ್ಮಿಷನ್ ಕೊಟ್ಟು ನೋಡ್ರಿ ಸರ್. ನಿಮ್ಮ ಸಂಶಯ ನಿವಾರಣೆ ಆದೀತು’. ‘ಸಾರಿ ಮೇಡಂ, ಸೀಟು ಫುಲ್ ಆಗಿದೆ. ಮುಂದಿನ ವರ್ಷ ನೋಡೋಣ’. ಈ ಥರ ಲೇಟಾಗಿ ಟ್ರಾನ್ಸ್ ಫರ್ ಆದದ್ದು ನಮ್ಮ ತಪ್ಪಾ? ತಿಳವಳ್ಳಿ ಸ್ಕೂಲ್ ನಿಂದ ಬಂದಿದ್ದು ನನ್ನ  ಮಕ್ಕಳ ತಪ್ಪಾ? ಯಾರನ್ನ ಕೇಳಲಿ? ಉತ್ತರ ಎಲ್ಲಿ ಸಿಕ್ಕೀತು ಗೊತ್ತಾ ಯಾರಿಗಾದರೂ? ಚಿಕ್ಕ ಮಗನನ್ನಂತೂ ಆರನೇ ಕ್ಲಾಸ್ ಗೆ ಗರಗನಲ್ಲೇ ಸೇರಿಸೋದು ಗಟ್ಟಿ ಆದಂತಾಯ್ತು. ಕರ್ನಾಟಕ ಹೈಸ್ಕೂಲ್ ನವರು – ‘ನಮ್ಮದೇ ಗರ್ಲ್ಸ್ ಹೈಸ್ಕೂಲ್ ಇದೆ. ಅಲ್ಲಿ ನಿಮ್ಮ ಮಗಳಿಗೆ ಸೀಟು ಸಿಗಬಹುದು. ಕೇಳಿ ನೋಡಿ’ ಅಂದ್ರು. ಅದೂ ಅಲ್ಲೇ ಈ ಸ್ಕೂಲ್ ನ ಇದುರುಗಡೆನೇ ಇದೆ. ಸರಿ ಅಂತ ಅಲ್ಲಿ ಹೋದೆ ಮಕ್ಕಳೊಂದಿಗೆ.

ಆ ಕೆ.ಎನ್.ಕೆ. ಗರ್ಲ್ಸ್ ಹೈಸ್ಕೂಲ್ ಗೆ ಹೋದ್ವಿ. ಆಫೀಸ್ ನಲ್ಲಿ ವಿಚಾರಿಸಿ, ಮಾತುಕತೆ ಆಯ್ತು. ಸೀಟ್ ಇದೆ ಅಂದ ಪ್ರಿನ್ಸಿಪಾಲ್ ರು ನನ್ನ ಮಗಳ  ಮಾರ್ಕ್ಸ್ ಕಾರ್ಡ್ ಕೇಳಿದಾಗ ಕೊಟ್ಟೆ. ನೋಡಿದ್ರ. ‘ಓ 95% ! ಒಳ್ಳೇ ಸ್ಕೋರ್! ಆದರೆ ತಿಳವಳ್ಳಿ ಶಾಲೆದು. ಡಾಕ್ಟರ್ ಮಗಳು ಅಂತ ಕೊಟ್ರೇನವಾ’ ಅಂತ ಕೇಳಿದಾಗ ತಾಳ್ಮೆ ತಪ್ಪಿದರೂ ಸಹಿಸಿಕೊಂಡು ಹೇಳಿದೆ- ‘ಸರ್ ಅದು ಬೋರ್ಡ್ ಪರೀಕ್ಷೆ. ತಮಗೂ ಗೊತ್ತಿರಬಹುದು. ಅಲ್ಲಿ ಅಂಕಪಟ್ಟಿಯಲ್ಲೂ ಅದನ್ನು ನಮೂದಿಸಿದಾರೆ’. ‘ಹೌದು  ಆದರೂ…’ ಅಂತ ಧ್ವನಿ ಎಳೆದಾಗ ನನ್ನ ಮಗಳು ಕೊಂಚ ಜೋರಾಗಿಯೇ ಹೇಳಿದ್ಲು- ‘ಸರ್ ನನಗೆ ಎಂಟ್ರನ್ಸ್ ಎಕ್ಸಾಮ್ ತಗೋಬಹುದು ನೀವು’ ಅಂತ. ಅವಮಾನ ಆದಂತಾಗಿತ್ತು ಅವಳಿಗೆ, ಅದಕ್ಕೂ ಹೆಚ್ಚು ನನಗೆ ನೋವಾಗಿತ್ತು  ನನ್ನ ಮಕ್ಕಳನ್ನು ಅವರು underestimate ಮಾಡೋದು ನೋಡಿ! ಏನೇನೋ ಪ್ರಶ್ನೆಗಳನ್ನ ಕೇಳಿ ಸರಿ ಅಂದು ಅಡ್ಮಿಷನ್ ಕೊಟ್ರು. ಎಲ್ಲಾ  ಮುಗಿಸಿಕೊಂಡು ಹೊರ ಬಂದಾಗ ಮೂರುವರೆ ಗಂಟೆ.

ಮುಂದೆ ಅದೇ ಸ್ಕೂಲ್ ನಲ್ಲೇ ನನ್ನ ಮಗಳು ಎಸ್.ಎಸ್.ಎಲ್.ಸಿ.ನಲ್ಲಿ ಕೇಂದ್ರಕ್ಕೆ ಒಂದನೇ ನಂಬರ್ ತಗೊಂಡು 90% ಅಂಕ ಗಳಿಸಿ ಪಾಸಾದಾಗ ಅವಳಿಗೆ ಅದೇ ಸ್ಕೂಲ್ ನಲ್ಲೇ ಸನ್ಮಾನ  ಮಾಡಿದರು. ಆಗ ಅದೇ ಪ್ರಿನ್ಸಿಪಾಲ್ ರು ಅವಳನ್ನು ಹೊಗಳಿದ್ದು, ತಮ್ಮ ತಪ್ಪು ತಿಳುವಳಿಕೆಯ ಬಗ್ಗೆ ಹೇಳಿ ಹಳಹಳಿಸಿದ್ದು ಕೇಳಿ ನನಗೆ ಹೆಮ್ಮೆಯಿಂದ ಎದೆ ತುಂಬಿ, ಗಂಟಲುಬ್ಬಿ ಬಂತು. ಡಾ. ಕಬ್ಬೂರ ಅವರು ಮುಖ್ಯ ಅತಿಥಿಗಳಾಗಿ ಬಂದಿದ್ರು. ಅವರೂ ಖುಷಿಯಿಂದ, ಮೆಚ್ಚುಗೆಯಿಂದ ಮಾತಾಡಿದ್ದು ಹಿಂದಾದ ಅವಮಾನ, ಗಾಯದ ಮೇಲೆ ಒಂದು ತೆರೆ ಎಳೀತು.

ಚಿಕ್ಕ ಮಗನ್ನ ಅಲ್ಲೇ ಗರಗದ ಸ್ಕೂಲ್ ಗೇ ಸೇರಿಸ ಬೇಕಾಯ್ತು ಆರನೇ ಕ್ಲಾಸ್ ಗೆ. ಬಹಳೇ ಅಧ್ವಾನ್ನದ ಸ್ಕೂಲ್. ಹೆಚ್ಚು ಕಡಿಮೆ ಎಲ್ಲ ಹುಡುಗರು  ಧಾರವಾಡಕ್ಕೇ ಹೋಗೋರು. ಇಲ್ಲಿನ ಅಂದರೆ ಗರಗದ ಸ್ಕೂಲ್ ಗೆ ಬರುವ ಮಕ್ಕಳ ಸಂಖ್ಯೆ ಅಷ್ಟಕ್ಕಷ್ಟೇ. ಅದೊಂದು ವರ್ಷ ಅಲ್ಲಿ ಹೇಗೋ  ಕಳೆದು ಏಳನೇ ಕ್ಲಾಸ್ ಗೆ ಧಾರವಾಡ ಕೆ.ಇ.ಬೋರ್ಡ್ ಸ್ಕೂಲ್ ಗೇ ಸಿಕ್ತು ಪ್ರವೇಶ. ಆದರೆ ಆರನೇ ಕ್ಲಾಸ್ ಗೆ ಮನೆಯಲ್ಲಿ ತುಂಬಾ  ಓದಿಸಬೇಕಾಯ್ತು, parallel school ಥರಾನೇ. ಈ ಸ್ಕೂಲಾಯಣದ ಅನುಭವ ಜೀವನ ಪರ್ಯಂತ ಮರೀಲಾಗದ್ದು. ಇಂಥ ಮರೀಲಾಗದ  ಅನುಭವಗಳು ನೂರೆಂಟು ನನ್ನ ಗಂಟಿನಲ್ಲಿ!

ಈ ಹಳ್ಳಿ ಜೀವನ ನನ್ನ ಮಕ್ಕಳಿಗೂ ಅನುಭವಗಳ ಖಜಾನೆ ಆಯ್ತು. ಬೆಳಗಿನ 9.30 ರ ಬಸ್ಸಿಗೆ ಹೋಗುವ ಮಕ್ಕಳು ಮನೆಗೆ ವಾಪಸ್ಸು ಬರಲು ಸಂಜೆ 6.30, ಒಮ್ಮೊಮ್ಮೆ ಏಳು ಗಂಟೆ ಆಗೋದು. ಮಳೆಗಾಲದಲ್ಲಿ ಕೇಳುವುದೇ ಬೇಡ ಪಾಡು. ಧಾರವಾಡ ಮಳೆ! ಏನು ಹೇಳಲಿ? ಮಳೆಲಿ ನೆಂದು ಬರೋರು, ಕೊಡೆ, ರೇನ್ ಕೋಟ ಇದ್ರೂ. ಹೀಗಾಗಿ ಮೇಲೆ ಮೇಲೆ ಕೆಮ್ಮು, ನೆಗಡಿ, ಜ್ವರ ತಪ್ತಿರಲಿಲ್ಲ. ಇಷ್ಟೆಲ್ಲ ತೊಂದರೆ, ಕಷ್ಟ ಎಲ್ಲವನ್ನೂ ಎದುರಿಸಿ ಕಲಿತು ತಮ್ಮ ತಮ್ಮ ಕ್ಷೇತ್ರದಲ್ಲಿ ಯಶಸ್ಸು ಗಳಿಸಿ ಇಂದು ನನ್ನ ಮಕ್ಕಳು ಜೀವನದಲ್ಲಿ ಗಟ್ಟಿ ನೆಲೆಯೂರಿರುವುದು ನಮಗೆ ಹೆಮ್ಮೆಯ, ಸಾರ್ಥಕತೆಯ ಭಾವ ತಂದಿದೆ ಅಂದರೆ ತಪ್ಪಾಗಲಾರದು ಅನಕೋತೀನಿ. ಆದರೆ ಅದರ ಜೊತೆಗೆ ಒಂದು ನೋವು, ಒಂದು ತಪ್ಪಿತಸ್ಥ ಭಾವನೂ ನನ್ನ ಕಾಡ್ತಾನೇ ಇರತದೆ. ಅದನ್ನೂ ಹೇಳದಿರಲಾರೆ. ಆಗ ನಾವು ಮಕ್ಕಳೊಂದಿಗೆ ಪಟ್ಟ ಪಾಡು, ಮಕ್ಕಳು ಪಡುವ ಕಷ್ಟ, ನನ್ನ ಪತಿಯ ಹಗಲು ರಾತ್ರಿ ಭೇದವಿಲ್ಲದ ದುಡಿತ, ಮನೆ – ಮಕ್ಕಳು ಎನ್ನದೇ 24 ತಾಸೂ ಆಸ್ಪತ್ರೆ ಅಲೆದಾಟ, ಅದರ ಮೇಲೆ ಎಷ್ಟೇ ದುಡಿದರೂ ಘನ ಸರ್ಕಾರದ ನಿರ್ಲಕ್ಷ್ಯ ಧೋರಣೆ! ಒಂಥರಾ ರೋಸಿ ಹೋಗಿತ್ತು ಜೀವ, ಎಷ್ಟರಮಟ್ಟಿಗೆ ಅಂದರೆ ನನ್ನ ಮಕ್ಕಳನ್ನು ಯಾರನ್ನೂ ಮೆಡಿಕಲ್ ಗೆ ಸೇರಿಸಲಿಲ್ಲ ನಾ! ತಪ್ಪು ಮಾಡಿದ್ನಾ, ಮಕ್ಕಳಿಗೆ ಅನ್ಯಾಯ ಮಾಡಿದ್ನಾ ನಾನು ಎಂಬ ಕೊರಗು ನನಗೆ ಈಗಲೂ!

| ಇನ್ನು ನಾಳೆಗೆ |

‍ಲೇಖಕರು Admin

September 1, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: