ಅಮೃತಾ ಹೆಗಡೆ ಅಂಕಣ- ಕಣ್ಣತುದಿಯ ಕಣ್ಣೀರು ತುಳುಕದೇ ಅಲ್ಲೇ ಇಂಗಿತು…

ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ.

ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ.

ತಂದೆ ಸಾಹಿತಿ ಮತ್ತೀಹಳ್ಳಿ ಸುಬ್ಬರಾಯರು. ಶಿರಸಿಯ ಈ ಎಕ್ಸ್ ಪ್ರೆಸ್ ಸಿದ್ಧಾಪುರದಲ್ಲಿ ಪದವಿ ಮುಗಿಸಿ ಮೈಸೂರಿನ ಕೆ ಎಸ್ ಓ ಯು ನಿಂದ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಮಯ ಹಾಗೂ ಸುವರ್ಣ ಇವರು ಕೆಲಸ ಮಾಡಿದ ಚಾನಲ್ ಗಳು.

‘ಅತ್ತಾರ ಅಳಲವ್ವ ಈ ಕೂಸು ನನಗಿರಲಿ, ಕೆಟ್ಟರೇ ಕೆಡಲಿ ಮನೆಗೆಲಸ’ ಎನ್ನುವಂತೆ ಇಲ್ಲಿ ತಮ್ಮ ಮಗುವಿನ ಕಥೆಯನ್ನು ಹೇಳುತ್ತಾರೆ.

15

ಹಿಯರಿಂಗ್​ ಏಡ್​ಕ್ಯಾನ್ಸಲ್​ಮಾಡುವುದರಿಂದ  ನಮ್ಮ ದುಡ್ಡು ವಾಪಾಸ್ ಸಿಗುತ್ತದೆಯಾ..? ಎಷ್ಟು ದು​ಡ್ಡು ವಾಪಾಸ್​ಬರಬಹುದು..? ಹಣ ಮರಳಿ ಬರೋಕೆ ಎಷ್ಟು ದಿನಗಳು ಬೇಕಾಗಬಹುದು..? ಇದ್ಯಾವುದೂ ಇನ್ನೂ ಗೊತ್ತಿರಲಿಲ್ಲ. ಕ್ಯಾನ್ಸಲ್​ಮಾಡಿದ ತಕ್ಷಣ ಹಣ ವಾಪಾಸ್​ ಸಿಕ್ಕರೆ, ಅದೇ ಹಣದಿಂದ ಪ್ರವೀಣ್​ ಸರ್​ ಬಳಿ ಹಿಯರಿಂಗ್​ಏಡ್​ಕೊಳ್ಳಬಹುದು. ಒಂದು ವೇಳೆ ಸಿಗದಿದ್ದರೆ ಏನು ಗತಿ..? ಹೊಸ ಹಿಯರಿಂಗ್ ಏಡ್​ ಕೊಳ್ಳುವುದಕ್ಕೂ ಕೂಡ ಹಣ ಹೊಂದಿಸಬೇಕಲ್ಲವೇ..? ಈ ಮನೆಗೆ ಅಡ್ವಾನ್ಸ್​ಕೂಡ ಇನ್ನೂ ಕೊಟ್ಟಿಲ್ಲ. ತಲೆಯಲ್ಲಿ ಲೆಕ್ಕಾಚಾರ ನಡೆದಿತ್ತು. 

ರಾತ್ರಿಯೆಲ್ಲ ಆಗಾಗ ಎಚ್ಚರವಾದಂತಾಗಿ ಇದೇ ಯೋಚನೆ ತಲೆಯೊಳಗೆ ಗಿರಕಿ ಹೊಡೆಯುತ್ತಿತ್ತು. ಏಕೆಂದರೆ ಆಯಿಶ್​ನಲ್ಲಿ ಬುಕ್​ಮಾಡಿದ್ದ ಹಿಯರಿಂಗ್​ಏಡ್​ನ್ನ ಕ್ಯಾನ್ಸಲ್​ಮಾಡಿಬಿಡಲು ನಿರ್ಧರಿಸಿ, ಪ್ರವೀಣ್​ಸರ್​ಹತ್ತಿರ ಹೊಸ ಹಿಯರಿಂಗ್​ಏಡ್​ಕೊಳ್ಳಲು ಸಿದ್ಧಳಾಗಿದ್ದರೂ ಕೂಡ,  ನನ್ನ ಈ ಎಲ್ಲ ಹೊಸ ನಿರ್ಧಾರ, ಆಲೋಚನೆಗಳ ಬಗ್ಗೆ ಇನ್ನೂ ಅಥರ್ವನ ಅಪ್ಪನಿಗೆ ಹೇಳಿರಲೇ ಇಲ್ಲ ನಾನು. ಅವನು ‘ಕ್ಯಾನ್ಸಲ್​ಮಾಡೋ ರಿಸ್ಕ್​ಬೇಡ. ಹಣಕೊಟ್ಟಾಗಿದೆ. ಇನ್ನೂ ಸ್ವಲ್ಪ ದಿನ ಕಾಯೋಣ’ ಎಂದುಬಿಟ್ಟರೆ..? ಎಂಬ ಭಯ ನನ್ನಿಂದ ಈ ಕೆಲಸ ಮಾಡಿಸಿತ್ತು. ಶ್ರವಣ ಸಾಧನಗಳನ್ನ  ಸುಮ್ಮನೆ ಬುಕ್​ಮಾಡಿಲ್ಲವಲ್ಲ, ಒಂದಲ್ಲಾ, ಎರಡಲ್ಲಾ 50 ಸಾವಿರ ರೂಪಾಯಿಗಳನ್ನ ಕೊಟ್ಟು ಬುಕ್​ಮಾಡಿದ್ದೆವು. ಹೀಗಾಗಿ ಅದೇ ಚಿಂತೆ ಬೆಳಗ್ಗೆ ಎದ್ದಮೇಲೆಯೂ ಮುಂದುವರೆದಿತ್ತು. ಯೋಚನೆಯ ತಲೆ ಭಾರದಲ್ಲಿಯೇ ಮಗನನ್ನ ಎತ್ತಿಕೊಂಡು ಶಾಲೆಗೆ ಹೋಗಿದ್ದೆ.  

ಅಂದು ಶಾಲೆಯಲ್ಲಿ ಯಾವುದೋ ಒಂದು ಹೆಣ್ಣು ಮಗುವಿನ ಹುಟ್ಟಿದ ಹಬ್ಬವಿತ್ತು. ಹೊಸ ಜರತಾರಿ ಫ್ರಾಕ್​ ಧರಿಸಿ ಖುಷಿಯಲ್ಲಿ ಬಂದಿದ್ದ ಅವಳನ್ನ, ಎಲ್ಲರೂ ತಮ್ಮ ತಮ್ಮ ಮಕ್ಕಳಿಗೆ ಪರಿಚಯಿಸುತ್ತಿದ್ದರು. ‘ನೋಡು, ಪ್ರೇಮಾ ಹೊಸ ಬಟ್ಟೆ ಹಾಕಿಕೊಂಡು ಬಂದಿದ್ದಾಳೆ. ಇವತ್ತು ಅವಳ ಹುಟ್ಟಿದ ದಿನ. ಅವಳು ಇವತ್ತು ಹುಟ್ಟೂ ಹಬ್ಬವನ್ನು ನಮ್ಮೆಲ್ಲರ ಜತೆ ಆಚರಿಸಿಕೊಳ್ಳುತ್ತಾ ಇದ್ದಾಳೆ.’ ಎನ್ನುತ್ತಿರುವುದು ಕೇಳಿಸಿತು. ನಾನೂ ಅಥರ್ವನನ್ನು ಅವಳ ಬಳಿ ಕರೆದೊಯ್ದು, ಅವನಿಗೆ ಅದನ್ನೇ ಹೇಳಿದೆ. ಯಾರದೇ  ಹುಟ್ಟು ಹಬ್ಬವಿರಲಿ, ಚಾಕಲೇಟ್​ ಅಂತೂ ಸಿಕ್ಕೇ ಸಿಗುತ್ತದಲ್ಲ, ಮಕ್ಕಳಿಗೆಲ್ಲ ಖುಷಿಯೋ ಖುಷಿ. ಪ್ರೇಮಾ ಅಮ್ಮಾರ ಕೈಯಲ್ಲಿದ್ದ ಚಾಕಲೇಟ್​ ಡಬ್ಬದ ಮೇಲೆಯ ಮಕ್ಕಳ ಕಣ್ಣು. 

ಬೆಳಗಿನ ಪ್ರಾರ್ಥನೆ ಮುಗಿದಿತ್ತು.  ಪ್ರೇಮಾಳ ಹುಟ್ಟುಹಬ್ಬದ ಆಚರಣೆ ಶುರುವಾಗಿತ್ತು. ಹಿರಿಯ ತಾಯಿಯೊಬ್ಬರು  ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಮಗು ಪ್ರೇಮಾಳನ್ನು ತಂದು ಎಲ್ಲರ ಮುಂದೆ ನಿಲ್ಲಿಸಿ, ಅವಳನ್ನ ಎಲ್ಲರಿಗೆ ಪರಿಚಯಿಸುತ್ತಾ ಇದ್ದರು. ಇದೇ ಶಾಲೆಯಲ್ಲಿ ಎರಡ್ಮೂರು ವರ್ಷಗಳಿಂದ ತರಬೇತಿ ಪಡೆದು ಮಾತನಾಡಲು ಕಲಿತ ಮಕ್ಕಳು ಆ ಹಿರಿಯ ತಾಯಿ ಕೇಳುವ ಪ್ರಶ್ನೆಗಳಿಗೆಲ್ಲ ಪಟಪಟನೆ ಉತ್ತರಿಸುತ್ತಿದ್ದರು. ‘ಇವಳು ಯಾರು ಗೊತ್ತಿದೆಯಾ.?’ ‘ಪ್ರೇಮಾ’ ಒಕ್ಕೊರಲಿನಲ್ಲಿ ಹೇಳಿದರು ಮಕ್ಕಳು. ‘ಹಾಂ, ಪ್ರೇಮಾ ಒಬ್ಬಳು ಯಾರು..?’  ‘ಪ್ರೇಮಾ ಒಬ್ಬಳು ಹುಡುಗಿ’ ‘ಪ್ರೇಮಾ ನಿಮಗೆ ಏನಾಗಬೇಕು’ ‘ಪ್ರೇಮಾ ನಮಗೆ ಸಹಪಾಠಿ ಆಗಬೇಕು’ ‘ಪ್ರೇಮಾ, ಇವತ್ತು ಇಲ್ಲಿ ಏಕೆ ನಿಂತಿದ್ದಾಳೆ..’ ‘ಅವಳ ಹುಟ್ಟಿದ ಹಬ್ಬವಿದೆ’ ‘ಹಾಂ ಹೌದು. ಇವತ್ತು ಪ್ರೇಮಾಳ ಹುಟ್ಟಿದ ಹಬ್ಬವಿದೆ’ ‘ಪ್ರೇಮಾಳಿಗೆ ೪ ವರ್ಷ ಆಗೋಯ್ತು. ಇವತ್ತಿನಿಂದ ಪ್ರೇಮಾಳಿಗೆ 5 ವರ್ಷ ಆರಂಭವಾಗುತ್ತದೆ. ‘ಪ್ರೇಮಾ ಎಂತಹ ಫ್ರಾಕ್​ ಹಾಕಿಕೊಂಡಿದ್ದಾಳೆ..? ಅವಳು ಹಳೇ ಫ್ರಾಕ್​ ತೊಟ್ಟಿದ್ದಾಳಾ…?’ ‘ಇಲ್ಲ’ ಮಕ್ಕಳೆಲ್ಲ ಒಟ್ಟಾಗಿ ಹೇಳಿದ್ದರು. ‘ಪ್ರೇಮಾ ಹೊಸ ಫ್ರಾಕ್ ​ತೊಟ್ಟಿದ್ದಾಳೆ. ಹೊಸ ಬಳೆ ಹಾಕಿಕೊಂಡಿದ್ದಾಳೆ. ಹೊಸ ಸರ ಹಾಕಿಕೊಂಡಿದ್ದಾಳೆ. ಜುಟ್ಟಿಗೆ ಹೊಸ ಕ್ಲಿಪ್​ ಹಾಕಿಕೊಂಡಿದ್ದಾಳೆ. ಗುಲಾಬಿ ಹೂವು ಮುಡಿದಿದ್ದಾಳೆ. ಕಣ್ಣಿಗೆ ಕಾಡಿಗೆ ಹಚ್ಚಿಕೊಂಡಿದ್ದಾಳೆ. ತುಟಿಗೆ ಲಿಪ್​ಸ್ಟಿಕ್​ ಹಚ್ಚಿಕೊಂಡಿದ್ದಾಳೆ. ಪ್ರೇಮಾ ಸಿಂಗರಿಸಿಕೊಂಡಿದ್ದಾಳೆ’ ಅನ್ನುತ್ತಾ, ಪ್ರತಿಯೊಂದನ್ನೂ ಮಕ್ಕಳಿಗೆ ವಿವರಿಸುತ್ತಿದ್ದರು ಅವರು. ಆಮೇಲೆ ಅವಳು ತಂದಿರುವ ಚಾಕಲೇಟ್​ ಡಬ್ಬವನ್ನೂ ತೋರಿಸಿ, ಅದರ ಹೆಸರು, ಬಣ್ಣ ರುಚಿಯನ್ನೂ ಕೂಡ ಅವರು ಮಕ್ಕಳಿಗೆ ಬಿಡಿಬಿಡಿಯಾಗಿ ಪರಿಚಯಿಸುತ್ತಿದ್ದರು.   

ಇವೆಲ್ಲ ನನಗಂತೂ ತುಂಬಾ ವಿಶೇಷವಾಗಿದ್ದವು. ‘ಅಥರ್ವ ಅಮ್ಮಾ.. ಇದು ಹುಟ್ಟಿದ ಹಬ್ಬದ ಘಟನೆ. ಯಾವ ಮಗುವಿನ ಹುಟ್ಟು ಹಬ್ಬವಿದ್ದರೂ, ಈ ಘಟನೆ ಪಾಠವನ್ನ ಇದೇ ರೀತಿ ಮಾಡುತ್ತಾರೆ. ನಾವೂ ನಮ್ಮ ಮಕ್ಕಳಿಗೂ ಇದೇ ರೀತಿ ವಿವರಿಸಬೇಕು. ತಿಳೀತಾ’ ತನ್ನ ಉಸಿರನ್ನೇ ಪಳಗಿಸಿ ನನ್ನ ಕಿವಿಯಲ್ಲಿ ಪಿಸುಗುಟ್ಟಿದಳು ಪುಷ್ಕರ್​ಅಮ್ಮಾ. ನಾನು ಅರ್ಥವಾಯಿತು ಎನ್ನುವಂತೆ ಕತ್ತು ಅಲ್ಲಾಡಿಸಿದೆ. 

ಹುಟ್ಟಿದ ಹಬ್ಬದ ಘಟನೆ ಮುಗಿಯುತ್ತಿದ್ದಂತೆ, ಎಲ್ಲರಿಗೂ ಪ್ರೇಮಾ ಅಮ್ಮ ಚಾಕಲೇಟು ಹಂಚಿದರು. ಅಥರ್ವ ತನ್ನ ಕೈಯಲ್ಲಿ ಎರಡು ಚಾಕಲೇಟು ಹಿಡಿದುಕೊಂಡು ಖುಷಿಪಟ್ಟ. ಚಾಕಲೇಟು ಸಿಕ್ಕ ತಕ್ಷಣ ಮಕ್ಕಳು ಅದನ್ನ ಬಾಯಿಗೆ ಹಾಕಿಕೊಳ್ಳುವಂತಿಲ್ಲ. ಅವರವರ ಅಮ್ಮಂದಿರು ಚಾಕಲೇಟ್​ಬಗ್ಗೆ ನಾಲ್ಕು ವಾಕ್ಯಗಳನ್ನು ಹೇಳುತ್ತಾರೆ ಅದನ್ನ ಮೊದಲು ಅವರು ಕೇಳಿಸಿಕೊಳ್ಳಲೇ ಬೇಕು. ‘ಇದು ಏನು..? ಇದು ಚಾಕಲೇಟು. ಯಾರು ಚಾಕಲೇಟು ಕೊಟ್ಟರು..? ಆಂಟಿ ಚಾಕಲೇಟು ಕೊಟ್ಟರು. ಚಾಕಲೇಟಿನ ರ್ಯಾಪರ್​ಯಾವ ಬಣ್ಣ ಇದೆ..? ಚಾಕಲೇಟಿನ ರ್ಯಾಪರ್​ನೀಲಿ ಬಣ್ಣ ಇದೆ. ರ್ಯಾಪರ್​ಬಿಚ್ಚೋಣವಾ..? ನೋಡು. ರ್ಯಾಪರ್​ಒಳಗೆ ಏನಿದೆ ? ಕಂದು ಬಣ್ಣದ ಚಾಕಲೇಟು ಇದೆ. ತಿನ್ನು. ತಿನ್ನಲು ಹೇಗಿದೆ…? ಸಿಹಿಯಾಗಿದೆ. ಚಾಕಲೇಟು ತಿನ್ನಲು ಸಿಹಿಯಾಗಿದೆ.’ ಮಾತನಾಡುವ ಮಕ್ಕಳು ಅವರ ಅಮ್ಮಂದಿರ ಪ್ರಶ್ನೆಗೆ ಉತ್ತರಿಸುತ್ತಿದ್ದರೆ, ಮಾತನಾಡಲಾರದ ಮಕ್ಕಳು ಅವರವರ ಅಮ್ಮಂದಿರ ಮುಖವನ್ನೇ ನೋಡುತ್ತಾ ಚಾಕಲೇಟು ತಿನ್ನುತ್ತಿದ್ದರು. ಅವರೆಲ್ಲ ಹೇಳಿದ್ದು ಕೇಳಿಸಿಕೊಂಡು ನಾನೂ ಅದೇ ಧಾಟಿಯಲ್ಲಿಯೇ ನನ್ನ ಮಗನಿಗೂ ಚಾಕಲೇಟಿನ ಬಗ್ಗೆ ವಿವರಿಸಿ ತಿನ್ನಿಸಿದೆ. 

ಆದರೆ ಮೊದಲ ದಿನ ಜಾಣ ಕೂಸಿನ ತರಹ ಪಾಠಕ್ಕೆ ಕುಳಿತುಬಿಟ್ಟಿದ್ದ ಅಥರ್ವ, ಎರಡನೇ ದಿನವೂ ಹಾಗೆಯೇ ಕುಳಿತುಕೊಳ್ಳುತ್ತಾನೆ ಎಂಬ ನನ್ನ ನಿರೀಕ್ಷೆ ಸುಳ್ಳಾಗಿತ್ತು. ಯಾಕೋ ಈ ಪೋರ ತಕರಾರು ಶುರು ಮಾಡಿದ್ದ. ಮೊದಲ ದಿನ ಹೊಸದಾಗಿತ್ತಲ್ಲವೇ..? ಖುಷಿಯಿಂದ ಕುಳಿತಿದ್ದ. ಆದರೆ ಒಂದೇ ದಿನಕ್ಕೆ ಅದವನಿಗೆ ಬೇಜಾರಾಗಿತ್ತು. ಒಂದೂವರೆ ಗಂಟೆ ಕೂತಲ್ಲೇ ಕೂತು ಪಾಠ ಕೇಳೋದು ಬೇಡವಾಗಿತ್ತು. ಒತ್ತಾಯವಾಗಿ ಅವನನ್ನ ಪಾಠದ ತಾಯಿ ಬಳಿ ಒಯ್ದು, ಕೂರಿಸಿದೆ. ಅವರು ಅವನನ್ನ ಎತ್ತಿಕೊಂಡಿದ್ದೇ, ನಾನಲ್ಲಿಂದ ಹೊರಟು ಬಂದೆ. ಬೆನ್ನಿನ ಹಿಂದೆ ಅವನ ಅಳು ಕೇಳಿಸುತ್ತಿದ್ದರೂ ತಿರುಗಿ ನೋಡದೇ ಪಟಪಟನೆ ಹೆಜ್ಜೆ ಹಾಕಿದೆ. ‘ಅಥರ್ವಅಮ್ಮಾ 12.30ರ ತನಕ ನೀವೆಲ್ಲೂ ಕಾಣಿಸಿಕೊಳ್ಳಬೇಡಿ..’ ಪಾಠದ ತಾಯಿಯ ದನಿ ಜೋರಾಗಿ ಕೇಳಿತು. ಹಿಂದಿರುಗದೇ ‘ಅಡ್ಡಿಯಿಲ್ಲ’ ಅಂದೆ ಅವರಿಗೆ ಕೇಳಿಸುವಂತೆ. ಅಥರ್ವನ ಕಣ್ಣಿಗೆ ನಾನು ಬೀಳದಂತೆ  ಮೂಲೆಯಲ್ಲಿ ಕುಳಿತೆ. ಸ್ವಲ್ಪ ಹೊತ್ತಿನ ನಂತರ ಅಳು ನಿಂತಿತ್ತು. ನನಗೂ ಸಮಾಧಾನವಾಯ್ತು. ಆದರೆ ಐದೇ ಐದು ನಿಮಿಷಕ್ಕೆ ಮತ್ತೆ ಅಳು ಶುರುಹಚ್ಚಿಕೊಂಡ. ಅಮ್ಮನನ್ನ ‘ಹುಡುಕೋಣ ಬಾ’ ಎನ್ನುತ್ತಾ ಅವನ ಕೈಹಿಡಿದು ನಡೆಸಿಕೊಂಡು ಬರುತ್ತಿರುವುದು ಕಾಣಿಸಿತು. ನಾನು ಕೂತಲ್ಲಿಂದ ಎದ್ದು ಓಡಿ ಮತ್ತೊಂದು ಕಡೆ ಬಚ್ಚಿಟ್ಟುಕೊಂಡೆ. ಈ ಕಣ್ಣಾಮುಚ್ಚಾಲೆ ಸುಮಾರು ಮುಕ್ಕಾಲು ಗಂಟೆಗೂ ಹೆಚ್ಚುಕಾಲ ನಡೆದಿತ್ತು. 

ಅಮ್ಮನನ್ನು ಬಿಟ್ಟು ಪಾಠಕ್ಕೆ ಕೂರುವುದು ಅಭ್ಯಾಸವಾಗುವವರೆಗೆ ಪಾಠದ ಸಮಯದಲ್ಲಿ ಮಗು ಎಷ್ಟೇ ಅತ್ತರೂ ಅದಕ್ಕೆ ಅದರ ಅಮ್ಮನನ್ನ ತೋರಿಸುವುದೇ ಇಲ್ಲ. ಇದು ಈ ಶಾಲೆಯ ಪರಿಪಾಠ. ಹೊಸ ಮಕ್ಕಳು ಬಂದಾಗಲೆಲ್ಲ ಇದೇ ಕಥೆ. ಅವರಿಗೆ ಅಮ್ಮನನ್ನು ಬಿಟ್ಟು ಕೂರುವುದು ಮೈಗೊಳ್ಳುವವರೆಗೆ ಪಾಠದ ತಾಯಿಗೆ ಗೋಳು ತಪ್ಪಿದ್ದಲ್ಲ. ಪಾಠಕ್ಕೆ ತೆಗೆದುಕೊಂಡ ತಾಯಿ ಅಥರ್ವನ ಹಠಕ್ಕೆ ಬೇಸತ್ತು, ಇನ್ನೊಬ್ಬ ತಾಯಿಯ ಸಹಾಯವನ್ನೂ ಪಡೆದರು. ಅವರಿಬ್ಬರೂ ಸೇರಿ ಆಟ ಆಡಿಸುತ್ತಾ, ಮಾತನಾಡಿಸುತ್ತಾ, ಸ್ಕೂಲ್​ನೆಲ್ಲ ಸುತ್ತಿಸುತ್ತಾ, ಏನೇನೋ ಸರ್ಕಸ್​ ಮಾಡಿ ಅಂತೂ ಅಥರ್ವನ ಗೆಳೆತನ ಸಂಪಾದಿಸಿದರು. 12.30ರ ಸಮಯಕ್ಕಾಗಲೇ ಅಥರ್ವ ಅವರಿಬ್ಬರೊಂದಿಗೆ ಆಡಲು ಶುರು ಮಾಡಿದ್ದ. 

ಆದರೆ ಯಾಕೋ ನಿನ್ನೆಯಂತೆ ಇಂದು ಅಥರ್ವ ಯಾವುದಕ್ಕೂ ಸಹಕರಿಸುತ್ತಿರಲಿಲ್ಲ. ಮಧ್ಯಾಹ್ನ ಊಟ ಕೂಡ ಮಾಡದೇ, ಕಿರಿಕಿರಿ ಮಾಡುತ್ತಿದ್ದ.   ನನ್ನ ಸಹಪಾಠಿ ತಾಯಂದಿರು ನನಗೆ ಸಮಾಧಾನ ಮಾಡುತ್ತಿದ್ದರು. ‘ಅಥರ್ವ ಅಮ್ಮಾ.. ಬೇಜಾರು ಮಾಡ್ಕೋಬೇಡಿ. ಇವತ್ತು ಅಷ್ಟೇ ಎರಡನೇ ದಿನ ಅಲ್ವಾ..? ನನ್ ಮಗಾನೂ ಇದೇ ಥರ ಗಲಾಟೆ ಮಾಡ್ತಿದ್ದ. ಈಗ್​ ನೋಡಿ ಎಷ್ಟ್​ ಚೆನ್ನಾಗಿ ಕೂತ್ಕೋತಾನೆ. ಒಂದು ವಾರದಲ್ಲಿ ಮಗೂಗೆ ಅಭ್ಯಾಸ ಆಗುತ್ತೆ ಕಂಡ್ರಿ. ಚಿಂತೆ ಮಾಡಬೇಡಿ’ ಅನ್ನುತ್ತಿದ್ದರು. ಅಥರ್ವನದೇ ವಯಸ್ಸಿನ ಪುಷ್ಕರ್​ ಅಥರ್ವನಿಗೆ ಇಷ್ಟವಾಗಿಬಿಟ್ಟಿದ್ದ. ಇಬ್ಬರೂ ಕೈಸನ್ನೆ ಮಾಡುತ್ತಾ, ಮುಖದ ಹಾವ ಭಾವದ ಮೂಲಕ ಮಾತು ಕತೆ ಶುರು ಮಾಡಿಬಿಡುತ್ತಿದ್ದರು. ಆ ಮಕ್ಕಳು ಹಾಗೆ ಸನ್ನೆ ಶುರು ಮಾಡುತ್ತಿದ್ದಂತೆ, ಹಿರಿಯ ತಾಯಂದಿರು, ಶಿಕ್ಷಕಿಯರು ‘ಪುಷ್ಕರ್​ಅಮ್ಮಾ, ಅಥರ್ವ ಅಮ್ಮಾ.. ನೋಡಿ ನಿಮ್​ ಮಕ್ಕಳು ಸನ್ನೆ ಮಾಡ್ತಿದ್ದಾರೆ. ಸನ್ನೆ ಮಾಡೋಕೆ ಬಿಡಬೇಡಿ’ ಅಂತ ಎಚ್ಚರಿಸುತ್ತಿದ್ದರು.  

ಮಧ್ಯಾಹ್ನ ಎರಡುಗಂಟೆಗೆ ಗಂಟೆ ಬಾರಿಸಿದ್ದೇ, ಎಲ್ಲರೂ ಮನೆಗೆ ಹೊರಟರೆ ನಾನು ಆಯಿಶ್​ ಕಡೆ ಹೊರಟೆ. ಪಿ.ಎ.ಡಿ.ಸಿ ಸ್ಕೂಲ್​ನಿಂದ ಕಾಲು ನಡಿಗೆಯಲ್ಲಿ ಹೋಗುವಷ್ಟೇ ದೂರದಲ್ಲಿದೆ ಆಯಿಶ್​ಆದರೆ, ಎರಡು ಗಂಟೆಯ ಮಟ ಮಟ ಮಧ್ಯಾಹ್ನದಲ್ಲಿ ಮಗು ಹೊತ್ತು ನಡೆಯೋದು ಕಷ್ಟವೆಂಬ ಕಾರಣಕ್ಕೆ, ಆಟೋ ಏರಿದ್ದೆ. ಐದೇ ನಿಮಿಷದ ಆಟೋ ಪ್ರಯಾಣ. ಅಷ್ಟೇ ಹೊತ್ತಲ್ಲೇ ಅಥರ್ವ ನಿದ್ದೆ ಮಾಡಿಬಿಟ್ಟಿದ್ದ. ಆಟೋ ಇಳಿದಿದ್ದೇ, ಅಥರ್ವನನ್ನ ಎದೆಗೆ ಆನಿಸಿಕೊಂಡು ಬಿರಬಿರನೆ ಹೆಜ್ಜೆ ಹಾಕಿದೆ. ‘ಆಯಿಶ್​’ ಎಂಬ ಆ ಮಹಾಸಾಗರವೀಗ ನನಗೆ ಮೈಗೊಂಡಿತ್ತು. ಯಾವ ಮೂಲೆಯಲ್ಲಿ ಏನೇನಿದೆ ತಿಳಿದಿತ್ತು. ಸೀದಾ ಹಿಯರಿಂಗ್​ ಏಡ್​ ಬುಕ್​ಮಾಡಿದ ಬ್ಲಾಕ್​ನತ್ತ ದೌಡಾಯಿಸಿದೆ.

ನಾವು ಹಿಯರಿಂಗ್​ಏಡ್​ ಬುಕ್​ ಮಾಡಿದ ಕ್ಯಾಬಿನ್​ಗೆ ಹೋಗಿ, ವಿಚಾರಿಸಿದೆ. ‘ನಾವು ಎರಡು ತಿಂಗಳ ಹಿಂದೆ ಬುಕ್​ ಮಾಡಿದ್ದ ಹಿಯರಿಂಗ್​ ಏಡ್​ ಇನ್ನೂ ಬಂದಿಲ್ಲ, ಬುಕ್ಕಿಂಗ್​ ಕ್ಯಾನ್ಸಲ್​ ಮಾಡಬಹುದಾ ಸರ್​?’ ವಿಚಾರಿಸಿದೆ, ನಾವು ಪೇ ಮಾಡಿದ ರಿಸೀಟ್​ನೆಲ್ಲ ಪರಿಶೀಲಿಸಿ, ತಮ್ಮ ಲಿಸ್ಟ್​ನ್ನೂ ನೋಡಿ ಅವರು ಹೇಳಿದರು. ‘ಸಾರಿ ಮೇಡಮ್​ ಇಷ್ಟು ತಡ ಯಾವತ್ತೂ ಆಗಿರಲಿಲ್ಲ. ಹೈದ್ರಾಬಾದ್​ನಿಂದ ಬರಬೇಕು ಅವು. ಅಲ್ಲೇನೋ ತಾಂತ್ರಿಕ ಸಮಸ್ಯೆ ಇದೆ ಹೀಗಾಗಿ ಲೇಟಾಗ್ತಿದೆ. ಈಗ ಇನ್ನೊಂದೇ ವಾರ, ತಪ್ಪಿದರೆ ಹದಿನೈದು ದಿನದೊಳಗೆ ಹಿಯರಿಂಗ್​ ಏಡ್ಸ್​ ಬಂದೇ ಬರುತ್ವೆ. ಕಾಯೋಕೆ ಆಗೋದೇ ಇಲ್ಲ ಅಂದ್ರೆ, ಕ್ಯಾನ್ಸಲ್​ ಮಾಡಬಹುದು. ವಿಚಾರ ಮಾಡಿ ಮೇಡಮ್​’ ತುಂಬಾ ನಯವಾಗಿ ಹೇಳಿದರು ಪಾಪ. ‘ಇಲ್ಲ ಸರ್​ನಾನು ಇನ್ನೂ ಕಾಯೋಕೆ ಸಿದ್ಧಳಿಲ್ಲ. ಕ್ಯಾನ್ಸಲ್​ ಮಾಡೋಕೆ ಏನು ಮಾಡಬೇಕು ಹೇಳಿ’ ಅಂದೆ. ಒಂದು ಅರ್ಜಿ ಬರೆದುಕೊಡಿ. ಅದರ ಜತೆಗೆ ಬಿಲ್​ ಪಾವತಿ ಜೆರಾಕ್ಸ್​ನ್ನೂ ಲಗತ್ತಿಸಿ ಅಷ್ಟೆ. ಅಂದರು. ‘ಎಷ್ಟು ಹಣ ವಾಪಾಸ್ ಸಿಗುತ್ತೆ..?’ ಕೇಳಿದೆ. ‘ಅಷ್ಟಕ್ಕೆ ಅಷ್ಟೂ ಹಣ ವಾಪಾಸ್​ ಸಿಗುತ್ತೆ ಮೇಡಮ್​’ ಎಂದು ಅವರಂದಿದ್ದೇ. ಮನಸ್ಸಿಗೆ ಹಿತವೆನಿಸಿತು. ‘ಕ್ಯಾನ್ಸಲ್​ ಮಾಡಿದ ತಕ್ಷಣ ಹಣ ವಾಪಾಸ್ ಸಿಗುತ್ತಾ..?’ ಕೇಳಿದೆ. ‘ಇಲ್ಲ ಮೇಡಮ್​, ಹದಿನೈದು ದಿನದಿಂದ ಒಂದು ತಿಂಗಳೊಳಗೆ ನಿಮ್​ ಹಣ ನಿಮಗೆ ಸಿಗುತ್ತೆ’ ಎಂದು ಅವರಂದಾಗ, ಮತ್ತೆ ಕೆಡುಕೆನಿಸಿತು. ‘ಥ್ಯಾಂಕ್ಯೂ ಸರ್​’ ಎನ್ನುತ್ತಾ ಹೊರನೆಡೆದೆ. ಅದೇನೇ ಆದರೂ ಕಾಯುವುದಕ್ಕಂತೂ ಸಾಧ್ಯವೇ ಇಲ್ಲ, ಕಾದು ಕಾದು ಸೋತು ಹೋಗಿದ್ದೇನೆ, ಅನ್ನಿಸಿತು. ಕಣ್ಣೀರು ತೊಟ್ಟಿಕ್ಕಲು ಕಾದಿತ್ತು. ಹತ್ತಿಕ್ಕಿದೆ. ಮುಂದೇನು ಮಾಡುವುದು ತಿಳಿಯುತ್ತಿಲ್ಲ. ಯಾಕೋ ತಕ್ಷಣ ದೀಪಾ ಅಕ್ಕಾ ನೆನಪಾದರು. ಅಥರ್ವ ಮಲಗಿದ್ದ ಹೆಗಲು ಸೋತು ಕುಚುಗುಡುತ್ತಿತ್ತು. ಅಲ್ಲೇ ಒಂದು ಕಡೆ ಕುಳಿತು, ಅಥರ್ವನನ್ನ ಕಾಲ ಮೇಲೆ ಮಲಗಿಸಿಕೊಂಡು, ಜೋಮು ಹಿಡಿದಿದ್ದ ಎಡ ಹೆಗಲು ನೀವಿಕೊಳ್ಳುತ್ತಾ, ದೀಪಾ ಅಕ್ಕಾಗೆ ಫೋನಾಯಿಸಿದೆ. 

ಎರಡೇ ಎರಡು ರಿಂಗ್​ಗೆ ಫೋನ್​ ಎತ್ತಿಕೊಂಡರು ದೀಪಾ ಅಕ್ಕ. ನನ್ನ ಗೊಂದಲವನ್ನೆಲ್ಲ ಅವರ ಕಿವಿಯೊಳಗೆ ಹರಿಬಿಟ್ಟೆ. ‘ಒಂದೇ ಒಂದು ನಿಮಿಷ ಇರು. ರವೀಂದ್ರ ಭಟ್ಟರನ್ನ ಕೇಳಿ, ಈ ಬಗ್ಗೆ ಏನು ಮಾಡುವುದು ಹೇಳುತ್ತೇನೆ. ಅಂದು ಫೋನಿಟ್ಟರು. ಹತ್ತೇ ನಿಮಿಷಗಳಾಗಿರಬಹುದು. ಮರಳಿ ಕರೆ ಮಾಡಿ ಆಯಿಶ್​ ನಲ್ಲಿಯೇ ಕೆಲಸ ಮಾಡುವ ಓರ್ವ ಅಧಿಕಾರಿಯ ಬಳಿ ನಮ್ಮನೆಯವರು ಮಾತನಾಡಿದ್ದಾರಂತೆ, ಅವರು ಈ ಬಗ್ಗೆ  ನಿನಗೆ ಸಹಾಯ ಮಾಡ್ತಾರಂತೆ ಅಂದರು’ ಯಾವುದೋ ದಾರಿ ಕಂಡಂತಾಯಿತು. ಕಣ್ಣತುದಿಯ ಕಣ್ಣೀರು ತುಳುಕದೇ ಅಲ್ಲೇ ಇಂಗಿತು.

‘ತುಂಬಾ ಥ್ಯಾಂಕ್ಸ್​ ದೀಪಕ್ಕಾ. ಹಾಗೇ ಆಗಲಿ. ಅವರ ನಂಬರ್​ ಕಳಿಸಿಕೊಡಿ’ ಎಂದು ಫೋನಿಟ್ಟೆ. ಐದು ಸೆಕೆಂಡ್​ಗಳೊಳಗೆ ಫೋನ್​ ಟಿಣ್​ ಗುಟ್ಟಿತ್ತು. ಆ ಅಧಿಕಾರಿಗಳ ನಂಬರ್​ ಫೋನೊಳಗೆ ಬಂದು ಕುಳಿತಿತ್ತು.  

ಅವರಿಗೂ ಅಲ್ಲಿಂದಲೇ ಫೋನಾಯಿಸಿದೆ. ನಾನು ನನ್ನ ಪರಿಚಯ ಮಾಡಿಕೊಂಡು, ರವೀಂದ್ರ ಭಟ್ಟರೇ ನಿಮ್ಮ ನಂಬರ್​ಕೊಟ್ಟಿದ್ದಾರೆ, ಅಂದ ತಕ್ಷಣ, ಅಕ್ಕರೆಯಿಂದ ಮಾತನಾಡಿದರು ಅವರು, ನನ್ನ ಸಮಸ್ಯೆಯೆಲ್ಲ ಕೇಳಿ, ನಾಳೆ ಮಧ್ಯಾಹ್ನ ಅರ್ಜಿ ಬರೆದುಕೊಂಡು, ನಿಮ್​ ರಿಸೀಟ್​ ಜೆರಾಕ್ಸ್​ ನೊಂದಿಗೆ ಬನ್ನಿ. ನಾನೇ ಆ ಅರ್ಜಿಯನ್ನ ಸಲ್ಲಿಸುತ್ತೇನೆ ಎಂದುಬಿಟ್ಟರು. ಸಮಾಧಾನವಾಯಿತು. ನೋಯುತ್ತಿದ್ದ ನನ್ನ ಭುಜ ಕೂಡ ನಿರಾಳವಾದಂತಾಯಿತು. ಅವರಿಗೊಂದು ಧನ್ಯವಾದ ಹೇಳಿ ಫೋನಿಟ್ಟೆ. ಇದ್ಯಾವುದನ್ನೂ ಅರಿಯದೆ, ನನ್ನ ಕಾಲಮೇಲೆ ನಿಶ್ಚಿಂತೆಯ ನಿದ್ದೆಯಲ್ಲಿದ್ದ ಮುದ್ದು ಕಂದನ ಹಣೆಗೊಂದು ಮುತ್ತುಕೊಟ್ಟು ಮತ್ತೆ ಅವನನ್ನ ನನ್ನೆದೆಗೆ ಆನಿಸಿಕೊಂಡು  ಎದ್ದು ಹೊರಟೆ.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

September 1, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಲಲಿತಾ ಸಿದ್ಧಬಸವಯ್ಯ

    ಈ ಅಂಕಣ ಓದಿದಾಗೆಲ್ಲ ಮಾಮೂಲಿನ ಮನಃಸ್ಥಿತಿಗೆ ವಾಪಸಾಗಲು ಮುವ್ವತ್ತು ನಿಮಿಷಗಳಾದರೂ ತಗಲುತ್ತದೆ. ರವೀಂದ್ರಭಟ್ಟರು ಬರೆದಿದ್ದ ಪುಸ್ತಕವನ್ನೂ ಓದಿರುವೆ, ಆಗಲೂ ಇದೇ ಸಂಕಟವಾಗಿತ್ತು. ತಾಯಂದಿರು ಈ ಕಬ್ಬಿಣದ ಕಡಲೆ ಬೇಯಿಸುವ ಅನಸೂಯಾಪರೀಕ್ಷೆ ಪಾಸು‌ಮಾಡುವಾಗಿನ ಅವಧಿ ಅದೆಷ್ಟು ಕ್ಲಿಷ್ಟಕರವಾಗಿದ್ದಿರಬಹುದು. ಮನವನ್ನಲ್ಲಾಡಿಸುವ ಸರಣಿಯಿದು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: