ಸರೋಜಿನಿ ಪಡಸಲಗಿ ಸರಣಿ – ಗರಗ ಆಸ್ಪತ್ರೆ – ರೋಗಿಗಳು

ಸರೋಜಿನಿ ಪಡಸಲಗಿ

5

ಈ ಜೀವನದ ವೈಚಿತ್ರ‍್ಯಗಳಿಗೆ ಬೆರಗಾಗಲೇ, ನಗಲೇ, ಏನೂ ಮಾತಾಡದೇ ಮೌನವಾಗಲೇ ಎಂಬುದು ನನ್ನ ಯಾವಾಗಲೂ ಕಾಡುವ ಪ್ರಶ್ನೆ – ಆಗಲೂ, ಈಗಲೂ. ವಿವಿಧ ರೂಪ, ಆಕಾರ, ನಡೆ- ನುಡಿಯ ಜನ. ಪ್ರತಿದಿನವೂ ವಿಭಿನ್ನ ಹೊಸದೇ ಅನ್ನೋ ಥರ. ಹೆಜ್ಜೆ ಇಟ್ಟಲ್ಲೆಲ್ಲಾ ಹೊಸ ಅನುಭವ, ಆ ಅನುಭವಕ್ಕೊಂದು ಹೊಸ ಕಲಿಕೆಯ ಪಾಠ ನನ್ನ ಜೋಳಿಗೆಯಲ್ಲಿ, ಅಲ್ಲಿಂದ ನನ್ನ ಗಂಟಿಗೆ. ಪ್ರತಿ ಊರಿನ ಭಿನ್ನ ಭಿನ್ನ ವಾತಾವರಣದಲ್ಲಿ ಬೆರೆತು ಹಾಗೇ ಕರಗಿ ಅಲ್ಲಿನ ವಾತಾವರಣಕ್ಕೆ ನನಗೇ ಗೊತ್ತಿಲ್ಲದಂತೆ ಹೊಂದಿ ಬಿಡ್ತಿತ್ತು ನನ್ನ ಜೀವ- ಜೀವನ. ಅಂತೆಯೇ ನನ್ನ ಮಕ್ಕಳೂ ಕೂಡ. ಈಗ ಇಲ್ಲಿ ಗರಗನಲ್ಲೂ ಕೂಡ. ಇಲ್ಲಿನ ಕ್ಯಾಂಪಸ್ ನಲ್ಲಿ ಇರೋವೇ ನಾಲ್ಕು ಕುಟುಂಬಗಳು.

ಮೊದಲಿನಿಂದಲೂ ನಮ್ಮ ಕ್ಯಾಂಪಸ್ಸೇ ನಮ್ಮ ಜಗತ್ತಾಗಿತ್ತು. ಊರಿನವರ ಜೊತೆ ನಮ್ಮ ಸಂರ‍್ಕ ಅಷ್ಟಾಗಿ ಇರತಿರಲಿಲ್ಲ. ನಾವೂ ಒಂಥರಾ ವಲಸಿಗರೇ. ಆದರೆ ನನ್ನ ಪತಿಗೆ ಸಮಾಜದ ಅತೀ ಹತ್ತಿರದ ಸಂರ‍್ಕ ಬರೋದು ಸಹಜವೇ. ನನ್ನ – ಊರವರ ಒಡನಾಟ ನನ್ನ ಪತಿಗೆ ಯಾವುದೇ ರೀತಿಯ ತೊಡಕಾಗಬಾರದು ಅಂತ ನಾ ಜೋಕೆಯಿಂದ ರ‍್ತಿದ್ದೆ. ಹಾಗಿರಲೇ ಬೇಕಿತ್ತು ನಾವು. ಈಗ ಇಲ್ಲೂ ಅಷ್ಟೇ. ಹಾಗೇ ಇದ್ದಾಗಿತ್ತು. ಒಂದೇ ಸಮಾಧಾನದ ಸಂಗತಿ ಅಂದ್ರೆ ಮಕ್ಕಳ ಶಿಕ್ಷಣ ಒಳ್ಳೇ ದಾರಿಯಲ್ಲಿ ಸಾಗಿತ್ತು ಈ ಏರಿಳಿವಿನ ದಾರಿಯಲ್ಲೂ, ಸ್ವಲ್ಪ ಕಷ್ಟ ಪಡಬೇಕಾದ್ರೂ. ಇದು ಬರೀ ನನ್ನದು – ಮಕ್ಕಳದು ಮಾತ್ರ ಅಲ್ಲ, ನನ್ನ ಪತಿಗೂ ಹೆಜ್ಜೆ ಹೆಜ್ಜೆಗೂ ಸವಾಲೇ. ಸಾಮಾನ್ಯ ಜನರ ಒಳ ಹೊರಗನ್ನು ಅತೀ ಹತ್ತಿರದಿಂದ ನೋಡುವ ಅವರೂ ರೋಗಿಗಳ ಮನ:ಸ್ಥಿತಿ ಅರಿತು ನಡೆಯಲು ಕಷ್ಟಪಡ ಬೇಕಾಗಿತ್ತು. ತಮ್ಮ ವೃತ್ತಿ ಜೀವನದ ಅಸಂಖ್ಯ ತಿರುವುಗಳೊಡನೆ ಮೈತ್ರಿ ಬೆಳೆಸಬೇಕಿತ್ತು.

ಗರಗ ನಾ ಈ ಮೊದಲೇ ಹೇಳಿದಂತೆ ಒಂದು ಪುಟ್ಟ ಹಳ್ಳಿಯೇ ಧಾರವಾಡದ ಮಗ್ಗುಲಲ್ಲೇ ಇರೋದು. ಅದರ ಸುತ್ತ ಮುತ್ತಲಿನ ಹಳ್ಳಿಗಳು ಇನ್ನೂ ಚಿಕ್ಕ ಪುಟ್ಟ ಹಳ್ಳಿಗಳು. ಹೀಗಾಗಿ ಕಾಯಂ ದವಾಖಾನೆಯಲ್ಲಿ ಗಲಾಟೆ, ಬಂಕಾಪುರ, ತಿಳವಳ್ಳಿಗಳ ಥರಾನೇ. ಮನೆಗೆ ಊಟ- ತಿಂಡಿಗೂ ಬರಲಾಗದಷ್ಟು ಒತ್ತಡ ಹಗಲು, ರಾತ್ರಿಯೂ. ಎಷ್ಟೋ ಸಲ ಅಟೆಂಡರ್ ಮುಲ್ಲಾ ಬಂದು ಅಲ್ಲಿಗೇ ತಿಂಡಿ, ಚಹಾ, ಕಾಫೀ ಒಯ್ದದ್ದೂ ಇದೆ. ರಾತ್ರಿ ಹೆರಿಗೆ ಕೇಸುಗಳೇನಾದ್ರೂ ಬಂದ್ರೆ ರಾತ್ರಿ ಪರ‍್ತಿ ಅಲ್ಲೇ ಇರಲೇಬೇಕಾದ ಪ್ರಸಂಗಗಳು ಲೆಕ್ಕವಿಲ್ಲದಷ್ಟು. ಒಬ್ಬರೇ ಡಾಕ್ಟ್ರು, ಒಬ್ಬರೇ ಸಿಸ್ಟರ್ ಕ್ಯಾಂಪಸ್ ನಲ್ಲಿ. ಆ ಸಿಸ್ಟರ್ ಏನಾದರೂ ಊರಿಗೆ ಹೋದರೆ, ಇನ್ನೊಬ್ಬರು ಅಲ್ಲೇ ಊರಲ್ಲಿ ಮನೆ ಮಾಡಿಕೊಂಡು ಇದ್ರು. ಅವರನ್ನು ಕರೆಸ ಬೇಕಾಗ್ತಿತ್ತು. ನನ್ನ ಪತಿಯದು ಅವಿರತ ಓಡಾಟ, ನನ್ನದು ರಾತ್ರಿಯಿಡೀ ಜಾಗರಣೆ ನಡೆದೇ ಇರತಿತ್ತು. ಯಾಕೋ ಹೆರಿಗೆ ಕಷ್ಟದ್ದು ಅಥವಾ ತಡ ಆದ್ರೆ ನನಗ್ಯಾಕೋ ಬಹಳೇ ಟೆನ್ಷನ್ ಆಗೋದು. ಮಗೂನ ಅಳೋ ಧ್ವನಿ ಕೇಳಿದ ಮೇಲೆಯೇ ನಿರಾಳ ಅನಿಸೋದು.

ಒಂದು ಸಲ ಅದು ಬಹುಶಃ ಸಂಕ್ರಮಣದ ಆಸುಪಾಸಿನಲ್ಲಿ. ಸುಗ್ಗಿಯ ದಿನಗಳು ಅವು. ನೋವು ಶುರು ಆಗಿ ಬಹಳ ಹೊತ್ತಿನ ಮೇಲೆ ಆಸ್ಪತ್ರೆಗೆ ಕರಕೊಂಡು ಬಂದಿದ್ರು. ಹೆರಿಗೆ, ಮನೇಲೇ ಆಗ್ತದೇನೋ ಅಂತ ಕಾಯ್ದಿರಬೇಕು. ಅವರೆಲ್ಲ ಇಲ್ಲಿ ಆಸ್ಪತ್ರೆಗೆ ಬರೋವಾಗಲೇ ಕತ್ತಲಾಗಿತ್ತು. ಸ್ವಲ್ಪ ಕಷ್ಟಕರವಾದ ಕೇಸು. ಧಾರವಾಡ ಜಿಲ್ಲಾಸ್ಪತ್ರೆಗೆ ಕಳಿಸ ಬೇಕು ಅಂತ ಹಾಗೆ ಹೇಳಿದಾಗ, ಆಕೆ ಅಲ್ಲಿಗೆ ಹೋಗಲು ತಯಾರೇ ಇಲ್ಲ. ‘ಇಲ್ರೀ ಯಪ್ಪಾ ನನ್ನ ಹೆರಿಗೆ ನಿಮ್ಮ ಕೈಯಾಗs ಆಗಬೇಕ್ರಿ ಯಪ್ಪಾ’ ಅಂತ ಒಂದೇ ಸಮನೇ ಒರಲೋಳು ಅವಳು. ಬಿಟ್ಟು ಅಲ್ಲಾಡೋ ಪರಿಸ್ಥಿತಿ ಇರಲಿಲ್ಲ. ಹಗಲಿನಲ್ಲಿ ಆದ್ರೆ ಯಾರಾದರೂ ತಿಂಡಿ ಕಾಫಿ ಅಲ್ಲೇ ಒಯ್ದು ಕೋಡೋರು. ಸಿಸ್ಟರ್ ನೂ ಅಲ್ಲೇ ಸಿಲುಕಿದ್ರು.

ರಾತ್ರಿ ೧೧ ಗಂಟೆ ಆಯ್ತು. ಮಕ್ಕಳು ಮಲಗಿದ್ರು. ನಾನು ಪುಸ್ತಕದಲ್ಲಿ ಮುಳುಗಿದ್ದೇನೋ ಹೌದು, ಆದರೆ ಒಂದೂ ಅಕ್ಷರ ತಲೆಗೆ ಹೋಗಿರಲಿಲ್ಲ. ಮತ್ತೆ ಮತ್ತೆ ಏಳೋದು, ದವಾಖಾನೆ ಕಡೆ ನೋಡೋದು. ಮನೆಯಲ್ಲಿ ದೀಪ ಇತ್ತು, ದವಾಖಾನೆಯಲ್ಲೂ ಇತ್ತು. ಆದರೆ ಹೊರಗೆ ಬೀದಿ ದೀಪ ಇರಲಿಲ್ಲ. ದವಾಖಾನೆಯ ಆವರಣದಲ್ಲೂ ಇರಲಿಲ್ಲ. ಗವ್ವೆನ್ನೋ ಕತ್ತಲು. ಕೂಸಿನ ಅಳುವ ಧ್ವನಿ ಇನ್ನೂ ಕೇಳಿಸಿರಲೇ ಇಲ್ಲ. ಸಿಸ್ಟರ್, ನಾನಿ ಯಾರೂ ಕಂಡಿರಲೇ ಇಲ್ಲ. ನನಗೋ ಆತಂಕ. ನಾನೇ ಹೋಗಬೇಕು ಅಂದ್ರೆ ವಿಪರೀತ ಕತ್ತಲು. ಅಲ್ಲೆಲ್ಲಾ ಹಾವುಗಳ ಹರಿದಾಟ ಬಹಳ. ಎಷ್ಟೇ ಹುಲ್ಲು ತೆಗೆಸಿದ್ರೂ ಮತ್ತೆ ಬೆಳೆದು ನಿಂತು ಬಿಡೋದು.

ರಾತ್ರಿ ೨.೩೦ ಗಂಟೆ ಆಯ್ತು. ಇನ್ನು ಇರಲಾಗಲಿಲ್ಲ ನಂಗೆ. ಬ್ರೆಡ್ ಟೋಸ್ಟ್, ಕಾಫಿ ಮಾಡಿದೆ ನಾಲ್ಕು ಜನಕ್ಕಾಗೋ ಅಷ್ಟು. ಟರ‍್ಚ ಒಂದು ಸುರೇಶ ಒಯ್ದಿದ್ರು ಆಸ್ಪತ್ರೆಗೆ ತಮ್ಮ ಜೊತೆ. ಇನ್ನೊಂದು ಸಿಗಲಿಲ್ಲ, ಹೆಚ್ಚು ಹುಡುಕಲೂ ಇಲ್ಲ. ಮಕ್ಕಳು ಗಾಢ ನಿದ್ರೆಲಿದ್ರು. ಹಾಗೇ ಮೆತ್ತಗೆ ಹೊರಗೆ ಬಂದೆ ಕಾಫಿ ಫ್ಲಾಸ್ಕು, ಟೋಸ್ಟ್ ಗಳೊಂದಿಗೆ. ಹೊರಗಿನಿಂದ ಬಾಗಿಲು ಬಂದು ಮಾಡಿ ಬೀಗ ಹಾಕಿ ಆ ಕತ್ತಲಲ್ಲಿ ನಾನೇ ಹೋದೆ ಆಸ್ಪತ್ರೆಗೆ. ಬರೋಬ್ಬರಿ ನಾ ಒಳಗೆ ಕಾಲಿಡೋಷ್ಟ್ರಲ್ಲಿ ಮಗು ಅಳುವ ಧ್ವನಿ! ನಾನಿ ಹೊರಗೆ ಬಂದು ‘ಯವ್ವಾ ನೀ ಕಾಲಿಟ್ಟಿ, ಹೆರಿಗೆ ಆತ ನೋಡ’ ಅಂದ್ಲು. ಆತಂಕ ಕವಿದಿದ್ದ ಎಲ್ಲರ ಮುಖದಲ್ಲೂ ನಿರಾಳ ಭಾವ. ನನಗಂತೂ ತಲೆ ಮೇಲಿನ ಗುಡ್ಡ ಸರಿದ ಅನುಭವ. ಆ ಟೋಸ್ಟ್ ಕಾಫಿ ಬಾಣಂತಿಗೂ ಕೊಟ್ಟು ಬಂದೆ ಮನೆಗೆ. ನಾನಿ ಬಂದು ಬಿಟ್ಟು ಹೋದ್ಲು. ಹೋಗೋವಾಗ ಹೇಳಿದ್ಲು – ‘ಹಿಂಗ ರಾತ್ರ‍್ಯಾಗ ಒಬ್ಬಾಕಿನs ಬರಾಕ ಹೋಗಬ್ಯಾಡ ಯವ್ವಾ. ಲೈಟ್ ಇಲ್ಲ. ಕಳ್ಳೀಸಾಲಾಗ ಯಾರ ಅಡಗಿ ಕುಂತಿದ್ರೂ ಗೊತ್ತಾಗಾಂಗಿಲ್ಲಬೇ ಯವ್ವಾ’. ನನಗೂ ಸಣ್ಣಗೆ ಮೈ ನಡುಗಿತು. ಸುಮ್ಮನಿದ್ದೆ. ಆಮೇಲೆ ಮೂರುವರೆ ಸುಮಾರು ಸುರೇಶ ಬಂದ್ರು. ಎಲ್ಲಾ ಆರಾಮ ಅದ ಅಂತ ಹೇಳಿದ್ರು. ‘ಭಾಳ ಕಷ್ಟದ ಹೆರಿಗೆ! ಈಗ ಎಲ್ಲಾ ಆರಾಮ ಅದ’ ಅಂತ ಹೇಳಿ ಸ್ನಾನ ಕ್ಕೆ ಹೋದ್ರು.

ಇನ್ನೊಂದು ಕೇಸ್ ಬಂದಿತ್ತು; ಹೆರಿಗೇದಲ್ಲ, ಇದೂ ಒಂದು ಸಮಸ್ಯೆ ಇರೋದೇ. ಕಿವಿಯ ಮೇಲೆ ಬುಗಡಿ ( ಅದೂ ಒಂದು ಆಭರಣ. ಕಿವಿಯ ಮೇಲ್ಭಾಗದಲ್ಲಿ ಹಾಕೋದು) ಹಾಕಿಕೊಳ್ಳೋದಿಕ್ಕೆ ಕಿವಿಯ ಮೇಲ್ಭಾಗದಲ್ಲಿ ಒಂದು ತೂತು ಹಾಕಿಸಿಕೊಂಡರ‍್ತಾರೆ. ಆಕೆನೂ ಹಾಗೆ ಚುಚ್ಚಿಸಿಕೊಂಡಿದ್ಲು ಅಲ್ಲೇ ತಮ್ಮ ಹಳ್ಳಿಯಲ್ಲೇ. ಅದು ಏನಾಯ್ತೋ ಏನೋ, ಉಬ್ಬಿ, ಬಾತು ಕೂತಿತ್ತು. ಸುಮಾರು ನಿಂಬೆಹಣ್ಣಿನ ಗಾತ್ರದ ಗಂಟು ಆಗಿ ಬಲು ಅಸಹ್ಯವಾಗಿ ಕಾಣೋದು ಅದು. ಅವಳಿಗೇನೂ ನೋವು ಬಹಳ ಇರಲಿಲ್ಲವಂತೆ. ಆದರೆ ಆಕೆಯ ಗಂಡ ಅದನ್ನು ತೆಗೆಸಿ ಬಿಡು ಅದನ್ನ ಅಂತ ಗಂಟು ಬಿದ್ದಿದ್ನಂತೆ. ಎಲ್ಲರೂ ಆಕೇನ್ನ ನೋಡಿ ನಗೋರಂತೆ.

ಧಾರವಾಡಕ್ಕೂ ಹೋಗಿ ತೋರಿಸಿ ಕೊಂಡು ಬಂದಿದ್ಲು. ಅಲ್ಲಿ ಡಾಕ್ಟ್ರು ಏನು ಹೇಳಿದ್ರೋ ಗೊತ್ತಿಲ್ಲ. ಕೊನೆಗೆ ಅದು ಇಷ್ಟು ದರ‍್ಘಕ್ಕೆ ಹೋಯ್ತಲ್ಲ , ಆಕೆಯ ಗಂಡ ಆಕೇನ್ನ ಆಕೆಯ ತೌರು ಮನೆಗೆ ಬಿಟ್ಟು ಬಂದು ಬಿಟ್ಟ. ಪಾಪ, ಆಕೆ ಅಳುತ್ತಾ ಗರಗ ಆಸ್ಪತ್ರೆಗೆ ಬಂದು, ನನ್ನ ಪತಿ ಮನೇಗೆ ಊಟಕ್ಕೆ ಬಂದಿದ್ರಿಂದ ಮನೆಗೇ ಬಂದ್ಲು. ಸುರೇಶ ಅವರಿಗೆ ಎಲ್ಲಾ ಹೇಳಿ ಅಳುತ್ತಾ ‘ಯಪ್ಪಾ ಏನರೇ ಮಾಡ್ರಿ ಯಪ್ಪಾ, ಈ ಗಂಟ ತಗೀರಿ. ಇಲ್ಲಾಂದ್ರ ನನ್ನ ಗಂಡ ನನ್ನ ಬಿಟ್ಟs ಬಿಡ್ತಾನ’ ಅಂತ ಕುಳಿತು ಬಿಟ್ಲು ಪಟ್ಟಾಗಿ. ನೋಡಲಾಗ್ತಿರಲಿಲ್ಲ ಅವಳ ಪರಿಸ್ಥಿತಿ. ಎರಡು ಪುಟ್ಟ ಪುಟ್ಟ ಮಕ್ಕಳು. ಪಿಕಿ ಪಿಕಿ ಅವಳನ್ನೊಮ್ಮೆ, ಸುತ್ತಲೂ ಒಮ್ಮೆ ನೋಡೋವು. ತಮ್ಮಮ್ಮನ ಕಣ್ಣೀರು ಒರೆಸ್ತಿದ್ವು.

ಜೊತೆಗೆ ಬಂದ ಅವಳ ತಾಯಿಯೂ ಅಸಹಾಯಕಳಾಗಿ ಸುಮ್ಮನೇ ಕೂತಿದ್ಲು. ನನಗೆ ನೋಡಲಾಗದೇ, ‘ಏನಾಗೋದಿಲ್ಲ ಬಿಡವಾ. ಸುಮ್ಮನಾಗು. ಯಾಕಳತಿ? ಮಕ್ಕಳು ಗಾಬರಿ ಆಗ್ತಾವ. ಕಣ್ಣ ಒರಸಿಕೋ’ ಅಂದೆ. ‘ಹೆಂಗ ಸುಮ್ಮಾಗಲೀ ಯವ್ವಾ? ಸುಮ್ಮ ಹೆಂಗ ಕುಂರ‍್ಲೀ ಯವ್ವಾ? ನನ್ನ ಬಾಳೇನs ಮುಣಗಾಕ್ಹತ್ತೇತಿ ಯವ್ವಾ. ಏನ ಮಾಡಲಿ ಹೆಂಗ ಮಾಡ್ಲಿ’ ಅಂದ್ಲು. ‘ಹಂಗ ಹೆಂಗ ಬಿಡ್ತಾನ ನಿನ್ನ? ನೋಡ ಇನೊಂದೆರಡ ವಾರದಾಗ ಬಂದು ನಿನ್ನ, ಮಕ್ಕಳನ ಕರಕೊಂಡ ಹೋಗ್ತಾನ ನೋಡ’ ಅಂದೆ. ಸುರೇಶ ಆಕೆಗೆ ಆಸ್ಪತ್ರೆಗೆ ಬರ ಹೇಳಿ ತಾವು ಹೋದ್ರು ಮುಂದೆ. ‘ಅವರಿಗೇನಾರ ತಿಂಡಿ, ಚಹಾ ಕೊಟ್ಟ ಕಳಸು’ ಅಂತ ಹೇಳಿದ್ರು. ಸರಿ ಅಂದೆ.

ಒಳಗೆ ಹೋಗಿ ಸೂಸಲ ಅವಲಕ್ಕಿ(ತೋಯಿಸಿದ ಒಗ್ಗರಣೆ ಅವಲಕ್ಕಿ), ಚಹಾ ಮಾಡ್ಕೊಂಡು ಬಂದೆ. ತಿಂದ್ರು ಎಲ್ಲಾ. ಮಕ್ಕಳು ಪಾಪ ಹಸಿದಿದ್ವು. ಅವಲಕ್ಕಿ ತಿಂದ ಮೇಲೂ ಹಸಿವು ಇದೆ ಅವಕ್ಕೆ ಎನಿಸಿತು. ಕೇಳ್ದೆ ‘ಊಟಾ ಮಾಡ್ತೀರ?’ ಅಂತ. ಹೂಂ ಅಂದ್ರು ಆ ಪುಟ್ಟ ಮಕ್ಕಳು. ಚಪಾತಿ ಪಲ್ಯ ಹಾಕಿ ಕೊಟ್ಟೆ. ತಿಂದು ನೀರು ಕುಡಿದು ಗೆಲುವಾದ್ವು ಮಕ್ಕಳು. ಅವರೆಲ್ಲ ಆಸ್ಪತ್ರೆಗೆ ಹೋದರು. ನಾ ನನ್ನ ಕೆಲಸ ನೋಡ್ಕೊಂಡೆ. ಆ ಮೇಲೆ ನಾನೂ ನನ್ನ ಪತಿಯನ್ನು ಆ ಬಗ್ಗೆ ಏನೂ ಕೇಳಲಿಲ್ಲ, ಅವರೂ ಏನೂ ಹೇಳಲಿಲ್ಲ. ಸಣ್ಣಗೆ ಮರೆತಂತಾಗಿತ್ತು ನನಗೂ. ೧೦-೧೨ ದಿನ ಆಗಿರಬಹುದು. ಮಧ್ಯಾಹ್ನ ಸುಮಾರು ನಾಲ್ಕು ಗಂಟೆ ಆಗಿತ್ತು. ಸುರೇಶ ಆಸ್ಪತ್ರೆಗೆ ಹೋಗಿದ್ರು ಊಟ ಮುಗಿಸಿ. ನಾನು ಮಸಾಲೆ ಪುಡಿ, ಚಟ್ನಿಪುಡಿ ತಯಾರಿಯಲ್ಲಿ ಇದ್ದೆ. ಬಾಗಿಲ ಬೆಲ್ ಆಯ್ತು. ಬಾಗಿಲು ತೆರೆಯೋದೊಂದೇ ತಡ, ಒಬ್ಬ ಹೆಣ್ಮಗಳು ಬಂದು ಕಾಲ್ಹಿಡಿದು ಕಣ್ಣೀರು ಸುರಿಸಿದ್ಲು. ‘ಯಾರವಾ? ಏಳವಾ . ಬಿಡು ಕಾಲು ‘ ಎಂದೆ.

ನನಗೆ ನನ್ನ ಕಣ್ಣೇ ನಂಬಲಾಗಲಿಲ್ಲ! ಅವಳೇ, ಅದೇ ಹೆಣ್ಣು ಮಗಳು, ಕಿವಿಯ ಮೇಲೆ ಗಂಟಾಗಿತ್ತಲಾ ಅವಳೇ, ಹೊಸ ಸೀರೆ ಉಟ್ಟು ಗಂಡನ ಜೊತೆ ಬಂದಾಳೆ ಮಕ್ಕಳೊಂದಿಗೆ! ಆಕೆ, ‘ಯವ್ವಾ ನಿನ್ನ ಬಾಯಿಗೆ ಸಕ್ರಿ ತುಪ್ಪಾ ಯವ್ವಾ. ನೀ ಅಂದ್ಹಾಂಗ ನನ್ನ ಗಂಡ ನನ್ನ ಕರಕೊಂಡ ಹೋಗಾಕ ಬಂದಾನs ಯವ್ವಾ. ಇದ್ರ ಇರವಲ್ಲತ ಬಾ ಆ ಗಂಟ ಅಂತಾನ. ಆದ್ರ ಯವ್ವಾ, ಅಪ್ಪಾರ ಆ ಹೊತ್ತs ಆ ಗಂಟ ತಗದ ಹೊಲಿಗಿ ಹಾಕಿ ಕಳಿಸಿದ್ರಬೇ. ಗಾಯನೂ ಮಾದಹಾಂಗ ಆಗೇತಿ. ಈಗ ಪಟ್ಟಿ ಹಾಕಿಸ್ಕೊಂಡ ಬಂದ್ನಿ ಯವ್ವಾ. ಮುಂದಿನ ವಾರ ಮತ್ತ ಬರಾಕ ಹೇಳ್ಯಾರು’ ಅಂದ್ಲು. ಆಕೀ ಖುಷಿ ನೋಡಿ ನಂಗೂ ಖುಷಿ ಆಯ್ತು. ಆಕಿ ಗಂಡನೂ ಕೈ ಮುಗಿದು ನಿಂತ. ನಾ ಸಣ್ಣಗೆ ನಕ್ಕೆ. ‘ಛಲೋ ಆತ ಬಿಡವಾ. ದೇವರ ದೊಡ್ಡಾವ’ ಅಂದೆ. ಆಕೆಯ ತಾಯಿ ‘ಯವ್ವಾ ನನ್ನ ಮಗಳಿಗೆ ನಿನ್ನ ಕೈಯಿಂದ ಉಡ್ಯಕ್ಕಿ ಹಾಕಿ ಕಳಸವಾ. ನಿನ್ನ ಬಾಳೇ ಥಣ್ಣಗಿರಲಿ ಯವ್ವಾ’ ಅಂದ್ಲು. ನನ್ನ ಕಣ್ಣು, ಮನಸ್ಸು ಎರಡೂ ತುಂಬಿ ಬಂತು. ಇಂಥ ವಿಶ್ವಾಸಕ್ಕೆ ಬೆಲೆ ಕಟ್ಟಲುಂಟೆ ? ಆಕೆಗೆ ಕುಂಕುಮ ಹೂವು ಕೊಟ್ಟು ಉಡಿ ತುಂಬಿ ಕಳಿಸಿದೆ. ಮನಸ್ಸಿಗೇನೋ ಒಂಥರಾ ಮುದ.

ಹಳ್ಳಿಗರ ವಿಶ್ವಾಸ, ಪ್ರೀತಿಯ, ಅಭಿಮಾನದ ಇನ್ನೊಂದು ಘಟನೆ ಹೇಳಲೇ ಬೇಕು ಇಲ್ಲಿ. ಅದರೊಂದಿಗೆ ಈ ಕಂತು ಮುಗಿಸ್ತೀನಿ. ಸುರೇಶ ಅವರ ಸ್ಥಾನಕ್ಕೆ ಇನ್ನೊಬ್ಬ ಡಾಕ್ಟ್ರು ಬಂದ್ರು ರ‍್ಡರ್ ಕಾಪಿ ತಗೊಂಡೇ. ಸುರೇಶ ಅವರಿಗೆ ಆ ಬಗ್ಗೆ ಏನೂ ಗೊತ್ತೇ ಇರಲಿಲ್ಲ. ಆದರೆ ಗರಗ ಊರ ಜನ ಚರ‍್ಜ್ ತಗೊಳ್ಳಲು ಬಿಡಲೇ ಇಲ್ಲ ಆ ಡಾಕ್ಟ್ರಿಗೆ, ನನ್ನ ಪತಿಗೆ ಕೊಡಲೂ ಬಿಡಲಿಲ್ಲ, ಎಷ್ಟು ಕೇಳಿ ಕೊಂಡ್ರೂ. ಇನ್ನೂ ಒಂದು ವಾರ ಟೈಮಿತ್ತು. ಆ ಡಾಕ್ಟ್ರು ಮತ್ತೆ ಬರುವುದಾಗಿ ಹೇಳಿ ಹೋದರು.

ಗರಗ ಊರ ಜನ, ಸುತ್ತ ಹಳ್ಳಿ ಜನ ಸರತಿ ಅನ್ನ ಸತ್ಯಾಗ್ರಹ, ಧರಣಿ ಸತ್ಯಾಗ್ರಹ ಆರಂಭಿಸಿದ್ರು ಗರಗ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂದೆ. ನಮಗೋ ಒಂಥರಾ ಮುಜುಗರ. ನನ್ನ ಪತಿ ಕೈ ಮುಗಿದು ಕೇಳಿ ಕೊಂಡ್ರೂ ಆ ಜನ ಒಪ್ಪಲಿಲ್ಲ. ನಮಗೋ ಇತ್ತಂಡದ ಪರಿಸ್ಥಿತಿ. ಈ ಗಲಾಟೆ ನಡೆದಾಗಲೇ ನಾ ಹಿಂದೆ ಬರೆದ – ನಮ್ಮ ಭಾವನ ಮಗಳ ಮಗುವಿನ ನಾಮಕರಣ ಇತ್ತು. ಆ ಒಂದಿನದ ಮಟ್ಟಿಗಾದರೂ ಬೇಡ ಅಂದ್ರೂ ಕೇಳಲಿಲ್ಲ ಅವರು. ಮತ್ತೆ ತಿರುಗಿ ನನ್ನ ಪತಿಯನ್ನೇ ಅಲ್ಲೇ ಅಂದರೆ ಗರಗ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯಾಗಿ ಮುಂದುವರೆಸುವಂತೆ ಮಾಡಿಯೇ ಬಿಟ್ರು ಗರಗ ಹಾಗೂ ಸುತ್ತಲಿನ ಹಳ್ಳಿ ಜನ. ಆ ಜನಗಳ ಪ್ರೀತಿ- ವಿಶ್ವಾಸಗಳ ಮುಂದೆ ಮೂಕರು ನಾವು! ಅದು ನಮ್ಮ ಮನದಲ್ಲಿ ಎಂದೆಂದಿಗೂ ಹಸಿರು !

| ಇನ್ನು ನಾಳೆಗೆ |

‍ಲೇಖಕರು Admin

September 4, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: