ಮಹಾಮನೆ ಅಂಕಣ – ನಾನು ಆ ಮೆಳ್ಳಗಣ್ಣಿಗೆ ಬರೆದ ಪತ್ರದಲ್ಲೂ…

ಮಲ್ಲಿಕಾರ್ಜುನ ಮಹಾಮನೆ  ಎಂದರೆ ಲವಲವಿಕೆಯ ಬುಗ್ಗೆ. ಸದಾ ಮುಖದಲ್ಲಿ ಮಂದಹಾಸ. ಜೊತೆಯಲ್ಲಿದ್ದವರೊಂದಿಗೆ ಜೋಶ್ ಮಾತು. ಒಟ್ಟಿನಲ್ಲಿ ಅವರ ಜೊತೆ ಇದ್ದರೆ ಬರೀ ‘ಪಾಸಿಟಿವ್ ವೈಬ್ಸ್’. ರಂಗಭೂಮಿಯ ಒಡನಾಡಿ ಮಹಾಮನೆ ಒಳ್ಳೆಯ ಬರಹಗಾರ. ಕವಿ. ಇವರ ಅಂಕಣ ಬರಹಗಳ ಸಂಕಲನ ‘ಬುಡ್ಡಿ ದೀಪದ ಬೆಳಕು’ ಎಲ್ಲರಿಂದಲೂ ಶಹಬಾಷ್ ಗಿರಿ ಪಡೆದಿದೆ.

ಮಲ್ಲಿಕಾರ್ಜುನ ಮಹಾಮನೆ  ತಮ್ಮ ಬದುಕಿನ ಘಟನೆಗಳನ್ನು ನಮ್ಮ ಮುಂದಿಡುತ್ತಿದ್ದಾರೆ.

14

ಆ ಮೆಳ್ಳಗಣ್ಣಿಗೂ ನನಗೂ ಮದುವೆ ಅಂತೂ ನಿಶ್ಚಿತವಾಗಿತ್ತು… ನಮ್ಮ ಮನೆಯವರು ಅವರ ಮನೆಯವರೂ ಮದುವೆಗೆ ಒಪ್ಪಿಗೆ ಸೂಚಿಸಿಯಾಗಿತ್ತು. ಮದುವೆ ದಿನಾಂಕವನ್ನೂ ನಿಗದಿ ಮಾಡಿಯಾಗಿತ್ತು. ಆದರೆ ಸಿದ್ಧತೆ ಮಾಡಿಕೊಳ್ಳಬೇಕೆಲ್ಲ… ನನ್ನ ಮನೆಯಲ್ಲಿ ನಾನೇ ದೊಡ್ಡವನಾದ್ದರಿಂದ ಹಾಗೂ ಅಕ್ಕಂದಿರ ಮದುವೆಗಳಾಗಿ ಅವರ ಗಂಡಂದಿರ ಮನೆ ಸೇರಿದ್ದರು. ಇನ್ನು ನನ್ನ ತಮ್ಮನಿಗೆ ಮದುವೆಯ ಆಗುಹೋಗುಗಳ ಜವಾಬ್ದಾರಿಯನ್ನು ಹೊರಿಸಲಾದೀತೆ…. ನನ್ನ ಮದುವೆಗೆ ನನ್ನ ಮನೆಯಲ್ಲಿ ನಾನು ಮತ್ತು ಅಮ್ಮನೇ ಜವಾಬ್ದಾರಿ ತೆಗೆದುಕೊಳ್ಳುವುದು ಅನಿವಾರ‍್ಯವಾಯಿತು.

ಅಪ್ಪಾಜಿಗೆ ಇನ್ನೇನು ನಿವೃತ್ತಿಯ ಸಮಯವಾದ್ದರಿಂದ ರಜೆ ಹಾಕಿ ಅವರು ಬೆಂಗಳೂರಿಗೆ ಬರುವ ಹಾಗಿರಲಿಲ್ಲ ಹಾಗೂ ಅಮ್ಮನ್ನೂ ಬೆಂಗಳೂರಿಗೆ ಕೆಲಸವಿರುವ ಒಂದೆರಡು ದಿನ ಬಂದು ಹೋಗುತ್ತಿದ್ದ… ನಾನು ಮತ್ತೆ ಅಮ್ಮನೇ ಮದುವೆಯ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಯಿತು…. ಇನ್ನು ಆ ಹುಡುಗಿಯ ಮನೆಯಲ್ಲಿ ಅವರಣ್ಣ ಇದ್ದ ಕಾರಣ ಅವರ ಸಂಪೂರ್ಣ ಜವಾಬ್ದಾರಿಯನ್ನು ಆತನೇ ನಿರ್ವಹಿಸುತ್ತಿದ್ದ. ನಮ್ಮ ಮನೆ ಹಾಗೂ ಆ ಹುಡುಗಿಯ ಮನೆಯ ನಡುವೆ ಕೊಂಡಿಯಾಗಿ ನಮ್ಮ ಬಾಬಾಜಿ ಇದ್ದೇ ಇದ್ದರು.

ಮದುವೆ ಆಗಬೇಕಾದ ಹುಡುಗಿ ಆದಿವಾಲ… ಮದುವೆ ಮಾಡಿಕೊಳ್ಳಬೇಕಾದ ಹುಡುಗ ಬೆಂಗಳೂರು…
ಅವಳು ಮನದಲ್ಲಿದ್ದರೂ ಅವಳು ಕನಸಾಗಿದ್ದಳು
ಅವಳು ಕನಸಾಗಿದ್ದರೂ ಅವಳು ಮನದಲ್ಲಿದ್ದಳು
ಅವಳು ದೂರದಲ್ಲಿದ್ದರೂ ಅವಳು ಸನಿಹದಲ್ಲಿದ್ದಳು
ಅವಳು ಸನಿಹದಲ್ಲಿದ್ದರೂ ಅವಳು ದೂರದಲ್ಲಿದ್ದಳು

ಅದಾವುದೋ ಪುಳಕ
ಹೇಳಲಾರದ ತವಕ
ಬಣ್ಣ ಬಣ್ಣದ ಬೆಳಕ
ಸೆಳೆದಾಳ ನನ್ನ ಕನಕ

ಮದುವೆಯ ಮಾತುಕತೆಗೂ-ಮದುವೆಗೂ ಎರಡು ತಿಂಗಳ ಅಂತರ… ಯಾವ ಗಂಡುಹೆಣ್ಣಿಗೆ ತಾನೇ ತನ್ನವಳಾಗುವ ಹೆಣ್ಣನ್ನು… ತನ್ನವನಾಗುವ ಗಂಡನನ್ನು ಪರಸ್ಪರ ನೋಡಬೇಕು ಎನಿಸುವುದಿಲ್ಲ ಹೇಳಿ… ಈಗಿನಂತೆ ಆಗ ಫೋನು ಇರಲಿಲ್ಲ… ಮೊಬೈಲ್ ಅಂತೂ ಕೇಳೇಬೇಡಿ… ಈಗಿನಂತೆ ಮಾತು-ವೀಡಿಯೋ ಕಾಲು… ಚಾಟು-ಪಾಟು ಸುಡುಗಾಡು ಏನು ಇರಲಿಲ್ಲ ಕಣ್ರೀ…

ನೆನಪಾದಗಲೆಲ್ಲ ಮನೋರಂಗದಲ್ಲಿ ಆ ಮೆಳ್ಳಗಣ್ಣಿಯನ್ನು ಕಲ್ಪಿಸಿಕೊಳ್ಳುವುದು… ಗಾಳಿಯಲ್ಲಿ ಮಾತುಗಳನ್ನು ಭಾವನೆಗಳನ್ನು ತೇಲಿಬಿಡುವುದು… ಕಾಳಿದಾಸನ ‘ಮೇಘದೂತ’ದ ನಾಯಕ-ನಾಯಕಿಯರಂತೆ ಮೋಡಗಳನ್ನೇ ವಾಹಕಗಳನ್ನಾಗಿಸಿಕೊಂಡು… ಮಾಧ್ಯಮನ್ನಾಗಿಸಿಕೊಂಡು… ತಮ್ಮ ಪ್ರೇಮಾನುರಾಗದ ಸಂದೇಶಗಳನ್ನು… ಮನದೊಳಗಾಡುವ ಮಧುರ ಮಾತುಗಳನ್ನು… ಆ ಶಬ್ದವಿಲ್ಲದ ಸೊಲ್ಲುಗಳನ್ನು… ಮುಖದೊಳಗರಳುವ ನಸುಗನೆಯನ್ನು… ಆ ಪ್ರೇಮದ ಸವಿಗಮಲನ್ನು… ಅವಳ ಸೂರ್ಯಕಾಂತಿಯ ಮೊಗದ ಸೊಗಸನ್ನು… ನನ್ನೆದೆಯೊಳಗಾಡುವ ಕಿರುಮೀನುಗಳ ಚಲುವನ್ನು… ಕಾಂತಿಯಿಲ್ಲದ್ದ ಏಕಾಂತವನ್ನು… ಮತ್ತೆ ಮತ್ತೆ ಸುಳಿದಾಡುವ ಬೇಸರವನ್ನು… ಆ ಬೇಸರದಲ್ಲೂ ಆ ಏಕಾಂತದಲ್ಲೂ ಅರಳುವ ಹಡರುವ… ಸಂಜೆ ಮಲ್ಲಿಗೆಯ ಆ ಗಮಲನ್ನು… ಆ ಪುಷ್ಪ ಪರಾಗದ ಸೆಳತಕ್ಕೆ ಹಾರಾಡುವ ಆ ದುಂಬಿಯನ್ನು… ಆ ದುಂಬಿಯ ಆ ಝೇಂಕಾರವೇ ನಮ್ಮ ಅನುರಾಗದ ರಾಗವಾದ್ದದ್ದನ್ನು ಅವಳಿಗೆ… ಆದಿವಾಲದಲ್ಲಿರುವ ನನ್ನವಳಾಗುವವಳಿಗೆ… ಆ ಮೆಳ್ಳಗಣ್ಣಿಗೆ ನನ್ನೆಲ್ಲ ಸಂದೇಶಗಳನ್ನು ಮೋಡಗಳ ಮೂಲಕವೇ ತಲುಪಿಸುವಂತಿದ್ದರೆ ಎಷ್ಟು ಚನ್ನಿತ್ತು ಅವ್ರೇನ್ರೀ…?

ಅವಳು ನನಗೊಂದು ಪತ್ರ ಬರೆದಳು… ಯುವತಿಯೊಬ್ಬಳು ನನಗೆ ಬರೆದ ಮೊದಲ ಪತ್ರ… ಅದು ಸಮುದ್ರದಾಳದ ಮುತ್ತುಗಳು ಆ ಪತ್ರದಲ್ಲಿದ್ದವು. ಪಚ್ಚೆ ದ್ವೀಪದ ಅಚ್ಚ ಅರಳುಗಳು ಅಲ್ಲಿದ್ದವು. ಕೋಗಿಲೆಗಾನದ ಕನಸಿತ್ತು ಅಲ್ಲಿ… ಮುಂಬೆಳಗಿನ ಹೊಂಬೆಳಕಿತ್ತು ಆ ಪತ್ರದಲ್ಲಿ… ನವಿಲು ಕುಣಿದಿತ್ತು… ಕಾಮನ ಬಿಲ್ಲು ಹಾಡಿತ್ತು… ಆ ಒಂದೇ ಪತ್ರದಲ್ಲಿ ನಕ್ಷತ್ರಗಳೂ ಇದ್ದವೂ… ಚಂದ್ರನೂ ಇದ್ದ… ಬೆಳದಿಂಗಳೂ ಇತ್ತು!!!

ಆ ಕಾರಂಜಿ ಪತ್ರಕ್ಕೆ ಪ್ರತಿಯಾಗಿ ನಾನೂ ಒಂದು ಪತ್ರ ಬರೆದೆ. ಸಾಗರದ ಕನಸೊತ್ತು ಹರಿವ ಹೊಳೆಯ ನಿನಾಧ ಅಲ್ಲಿತ್ತು. ದಡದ ಎಡೆಗೆ ಓಡೋಡಿ ಬರುವ ಕಡಲ ಅಲೆಗಳ ಕಾತರವಿತ್ತು. ಮರಮರಳಿ ಬಂದು ದಡ ತಣಿಸುವ ಸಾಹಸವಿತ್ತು. ನೆಲದೊಡಲ ಪೂಜಿಸಿ ಸಿರಿಧಾನ್ಯ ಬೆಳೆವ ಬಯಕೆಯಿತ್ತು… ಎಳೆಯ ಸೂರ್ಯನ ಕಿರಣಗಳ ಕಿತ್ತು ತಂದು ಅವಳ ಮುಡಿಗೆ ಮುಡಿಸುವ ಸಡಗರವಿತ್ತು… ಸಾಹಸವಿತ್ತು… ಚಂದ್ರನೊಳಗೊಂದು ಪುಟ್ಟ ಗೂಡು ಕಟ್ಟಿ… ತಾರೆಗಳನ್ನೇ ತಂದು ತೂಗು ಮಂಚವ ಮಾಡಿ… ಬೆಳದಿಂಗಳನ್ನೇ ಪುಟ್ಟ ದೀಪ ಮಾಡಿ… ನಾವು ಕೂಡಿ ಆಡಿ… ಹಾಡ ಆಡಿ… ಸಂಸಾರದ ಸುಖದ ಸವಿಸೊಲ್ಲನ್ನು ಜಗದ ದಶದಿಕ್ಕುಗಳಿಗೂ ಪಸರಿಸುವ ಹೆಬ್ಬಯಕೆಯಿತ್ತು ಆ ಪತ್ರದಲ್ಲಿ.

ಮನದೊಳಗೆ ಸಾವಿರ ಸಾವಿರ ಸಾಲು ಹಣತೆಗಳು ಬೆಳಗುತ್ತಿದ್ದವು…
ಎದೆಯ ಗೂಡಿನ ಆಳದೊಳಗೆ ಮಿಂಚು ಹುಳುಗಳು ಮಿನುಗುತ್ತಿದ್ದವು…
ಜೀವಜೀವದ ಕಣಕಣದಲ್ಲೂ ಚಿಟ್ಟೆಗಳು ಚಣಚಣ ಹಾರುತ್ತಿದ್ದವು…
ಆವುದೋ ಕೋಮಲ ಭಾವ ಆವರಿಸಿತ್ತು…
ಮುಂಗಾರಿನ ತುಂತುರು ಹನಿಗಳು ತನುಮನವ ತೋಯಿಸಿತ್ತು…
ಮಂದಾರ ಹೂವುನಗೆ ಚೆಲ್ಲಿತ್ತು…
ಸುರಹೊನ್ನೆ ಮೈಯ ಬಳಸಿತ್ತು…
ಸುರಸಿಂಧು ದೇವಗಂಗೆ ನನ್ನೊಳಗೆ ತಣ್ಣಗೆ ಹರಿದಿದ್ದಳು…
ಮದುಮಗಳು ಮದರಿಂಗಿಯಲಿ ಪತ್ರ ಬರೆದಿದ್ದಳು…
ಮದುಮಗನು ಮರುಪತ್ರದೊಳಗೆ ಮಧು ಹರಿಸಿದ್ದನು…

ಗೊತ್ತಾಯ್ರೇನ್ರಿ… ಆ ಪತ್ರಗಳ ಸಾರಾಂಶ ಏನೂಂತ… ನೀವು ಯಾವತ್ತಾದರೂ ಹಿಂಗೆಲ್ಲ ನಿಮ್ಮೊಳಗೆ ಪತ್ರ ಬರೆದಿದ್ದೇನ್ರೀ… ನಿಮ್ಮ ಮನದನ್ನೆ ನಿಮಗೆ ಮೊದಲಬಾರಿಗೆ ಬರೆದ ಪತ್ರದ ಸಾಲುಗಳು ನೆನಪಾದೇವೆನ್ರೀ… ನಿಮ್ಮವನು ನಿಮಗೆ ಪತ್ರದಲ್ಲೇ ಕವಿತೆಯನ್ನೋ… ಕಂಡ ಕಾವ್ಯವನ್ನೋ ಬರೆದಿದ್ರೇನ್ರಮ್ಮಾ.

ಈ ಮಾತನ್ನು ಯಾಕೇಳ್ತಿದ್ದೇನೆ ಎಂದರೆ… ‘ತಾರುಣ್ಯದಲ್ಲಿ ಎಲ್ಲರೂ ಕವಿಗಳೇ ಆಗಿರುತ್ತಾರೆ’ ಎಂಬ ಒಂದು ಮಾತಿದೆ… ಮದುವೆಯ ಸಮಯದಲ್ಲಂತೂ ಎಂತಹ ಅರಸಿಕರು ‘ಕಾವ್ಯ ಪ್ರಯೋಗ ಪರಿಣಿತ ಮತಿಗಳ್’ ಆಗ್ಬಿಟ್ಟಿರುತ್ತಾರೆ. ಅದಕ್ಕೆ ಕೇಳಿದೆ.

ಇಂತಹ ಹಳೆಯ ಪತ್ರಗಳು ಇದ್ದರೆ… ತಾವು ಜೋಪಾನವಾಗಿ ಇಟ್ಟಿದ್ರೆ… ತೆಗೆದು ಮತ್ತೆ ಓದಿ… ತಾರುಣ್ಯ ಉಕ್ಕಿ ಬರುತ್ತೆ… ವಯಸ್ಸಾಗಿದ್ರೆ ನಿಮಗೆ ಆಯಸ್ಸು ವೃದ್ಧಿಸುತ್ತೆ. ನಡು ವಯಸ್ಸಿಗೆ ಆವರಿಸಿಕೊಳ್ಳುವ ಬೀಪಿ, ಶುಗರ್ ಇತರೆ ಕಾಯಿಲೆ ಕಾಸಾಲೆಗಳು ಓಡಿ ಹೋಗುತ್ತೆ… ತಿಳಿತೋ…

ಈ ಹಾಳಾದ್ದು ಈ ಮೊಬೈಲ್ ಬಂದು ಕಾಗದ ಪತ್ರಗಳು ಹೊತ್ತು ತರುತ್ತಿದ್ದ ಈ ತರದ ಮಧುರ ಭಾವಗಳು… ಸುಮಧುರ ನೆನಪುಗಳನ್ನು ಕೊಂದಾಕಿಬಿಟ್ಟಿದೆ ಕಂಡ್ರೀ…

ಅನಿವಾರ್ಯ ಕಾರಣದಿಂದ ದೂರ ದೂರ ಇರಬೇಕಾದ ಗಂಡ-ಹೆಂಡಿರ ನಡುವೆ ಹರಿದಾಡುತ್ತಿದ್ದ ಆ ಸಿಹಿ ಪತ್ರಗಳು ಎಲ್ಲಿ ಹೋದವು… ಪ್ರಿಯಕರ. ಪ್ರಿಯತೆಯ ನಡುವೆ ಕೊಂಡಿಯಾಗಿದ್ದ ಆ ಜೇನು ನುಡಿಯನೊತ್ತು ಬರುತ್ತಿದ್ದ ಆ ಪತ್ರಗಳು ಎಲ್ಲಿ ಹೋದವು. ಎಲ್ಲವೂ ಈಗ ಅಂಗೈ ಮಂದಲ ಮಾಯಾ ಮೊಬೈಲ್‌ನಲ್ಲೇ… ತಮ್ಮ ಆ ಎಲ್ಲಾ ಬಣ್ಣಗಳ… ಆ ಭಾವಲಹರಿಗಳ ಆ ನವಿರು ಕೋಲಾಹಲವ… ಕಾತುರದಿ ಕಾಯುವ ಆ ರಣಗಳಿಗೆಗಳ ಈ ಮೊಬೈಲ್ ನುಂಗಿ ಹಾಕಿದೆ…

ಎಲ್ಲವೂ ಮೊಬೈಲ್‌ನಲ್ಲಿಯೇ… ಪತ್ರ-ಉತ್ರ… ಪ್ರೀತಿ-ಗೀತಿ… ಕೋಪ-ತಾಪ… ಮುನಿಸು-ಸೊಗಸು… ಎಲ್ಲವೋ ಅಲ್ಲೇ…

ಆಗ… ಬಹಳ ಹಿಂದೆ ಪ್ರೇಮ ಮದುವೆಗಳೇ ಇರಲಿಲ್ಲ… ಇದ್ದರೂ ವಿರಳ… ಮುಂದುವರಿದಂತೆ; ಪ್ರೇಮಿಸಿ ಮದುವೆ ಆಗುವವರು ತಮ್ಮ ಪ್ರೇಮ ನಿವೇದನೆಗೇ ಕಾಲ ಕಾಲಾನುಕಾಲ ಕಾಯ್ದು ಆ ನಂತರ ಎಷ್ಟೋ ದಿನಗಳ ನಂತರ ಗಳಿಗೆ ಗಳಿಗೆಗಳನ್ನು ಯುಗಗಳಂತೆ ಕಳೆದು ಹಾಗೂ ಹೀಗೂ ಹೇಗೂ ಮಾಡಿ ಪ್ರೇಮ ನಿವೇದಿಸಿ ಯಶಸ್ವಿಯಾಗುವವರು ಆಗುತ್ತಿದ್ದರು. ಇಲ್ಲದಿದ್ದವರು ‘ಪ್ರೇಮಾಭಿಷೇಕಂ’ನ ಖಾಯಂ ವಿರಹಿಯಂತಾಗುತ್ತಿದ್ದರು.

ಆದರೆ ಈಗ… ಮೊಬೈಲ್‌ನಲ್ಲಿ ಸಂದೇಶಗಳ ರವಾನೆಗಳ ಮಹಾಪೂರವೇ ಹರಿದಾಡುತ್ತದೆ. ILU ಕಾಲ. ಇನ್ನೂ ಮುಂದುವರಿದು 143 ಕಾಲ. ILU ನಲ್ಲಿ ಯಶಸ್ವಿಯಾದರೆ ಮದುವೆ… ಆಗಲಿಲ್ಲವಾ ಮತ್ತೆ ಮೊಬೈಲ್‌ನಲ್ಲಿ ಹುಡುಕಾಟ ಪ್ರಾರಂಭ… ಮತ್ತೊಬ್ಬರೊಂದಿಗೆ… ಮಗದೊಬ್ಬರೊಂದಿಗೆ ಮತ್ತೆ ಚಾಟ್ ಶುರು… ಮತ್ತೆ ILU… ಮತ್ತೆ ಬ್ರೇಕ್ ಅಪ್… ಮತ್ತೆ 143… ಮತ್ತೆ ಬ್ರೇಕ್ ಅಪ್ ಇದು ಮುಂದುವರೆಯುತ್ತಲೇ ಇರುತ್ತದೆ.

ಮದುವೆ ಅನ್ನುವುದು ಮೂರು ದಿನದ ಆಟವೇ?
ಗಂಡು ಹೆಣ್ಣಿನ ಸಹಬಾಳ್ವೆಗೆ ಸೋಪಾನ ಅಲ್ಲವೆ ಮದುವೆ ಎಂಬುದು?
ಸ್ತ್ರೀ-ಪುರುಷರಿಬ್ಬರೂ ಕೂಡಿ ಬಾಳಲು ರಹದಾರಿ ಅಲ್ಲವೆ ಮದುವೆ ಎಂಬುದು…?
ಆದರೆ ಈಗ ಕಾಲ ಬದಲಾಗುತ್ತಿದೆ…

ಮುದೊಂದು ದಿನ ಮದುವೆಯೆಂಬ ಪರಿಕಲ್ಪನೆಯೇ ಮಾಯವಾಗಬಹುದಾ…?

ಯಾರೇಷ್ಟೇ ಮುಂದುವರಿದಿರಲಿ… ಎಷ್ಟೇ ಎಲೈಟ್ ಆಗಿರಲಿ… ಈ ಒಂದು ಕೌಟುಂಬಿಕ ವ್ಯವಸ್ಥೆಯ ಚೌಕಟ್ಟಿನಲ್ಲೇ ತಮ್ಮ ತಮ್ಮ ಬದುಕನ್ನು ಕಟ್ಟಿಕೊಂಡರೆ ಬಾಳು ಮಧುರ…ಎಲ್ಲರೂ ಬಯಸುವುದು ಆ ಮಧುರತೆಯನ್ನೇ…ಆ ಸುಮಧುರ ದಾಂಪತ್ಯವನ್ನೇ…ಆ ಸಾಮೀಪ್ಯವನ್ನೇ…ಆ ಇಂಪಿನ ನಾದವನ್ನೇ…ಆ ‘ಸರಿಗಮ’ದ ರಾಗವನ್ನೇ…

ನನಗೆ ಆ ದೇವಗಂಗೆ ಬರೆದ ಪತ್ರದಲ್ಲಿ ಇದೇ ನಿವೇದನೆ ಇದ್ದದ್ದು…ನಾನು ಆ ಮೆಳ್ಳಗಣ್ಣಿಗೆ ಬರೆದ ಪತ್ರದಲ್ಲೂ…

| ಇನ್ನು ಮುಂದಿನವಾರಕ್ಕೆ |

‍ಲೇಖಕರು Admin

September 4, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: