ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸರೋಜಿನಿ ಪಡಸಲಗಿ ಕವಿತೆ- ಬೊಮ್ಮ- ಮರುಕ ಕಂಡು ನಿನ್ನ…

ಸರೋಜಿನಿ ಪಡಸಲಗಿ

ಬೊಮ್ಮ….
ಯಾಕೋ ಒಮ್ಮೊಮ್ಮೆ ಮರುಕ ಕಂಡು ನಿನ್ನ
ತನ್ನ ತಪ್ಪು ಎಡವಟ್ಟುಗಳಿಗೆ ಹೆಣ್ಣನ್ನೇ ದೂರುವ
ಜಗ ನಿನ್ನನ್ನೂ ಹಾಗೇ ಗುರಿ ಮಾಡೋದ ನೋಡಿ
ನೀನೂ ಅವಳಂತೆಯೆ ಯಾಕೆಂದು ಬಲು ಅಚ್ಚರಿ

ಬೊಮ್ಮ….
ಕಂಡ್ಯಾ ಆ ಆಕಾರ ಕೇಳಿದ್ಯಾ ಜಂಬದ ಬಡಾಯಿ
ಅದು ನಂದೇ ಹೂಂ ನಾನೇ ಮಾಡಿದ್ದು ಮತ್ಯಾರು
ಅಗೋ ಅದನಿಲ್ಲಿರಿಸಿದೆ ಇದಕೆ ಈ ರೂಪ ಕೊಟ್ಟೆ
ಅಸಹಾಯಕ ಅಚ್ಚರಿಯಲಿ ಬಾಗಿ ಮೌನಿ ಅವಳು

ಬೊಮ್ಮ….
ಏನಾಯ್ತಲ್ಲಿ , ಯಾಕೆ ರೋಷಾವೇಷ ದೋಷಾರೋಪ
ಕಣ್ಣೀರ ಕಡಲಲ್ಲಿ ಅವಳು ಮತ್ತದೆ ಮೌನದಲಿ
ಕೇಳು ನಡೆದಿದೆ ನಿನಗೂ ಸಹಸ್ರಾರ್ಚನೆ ಅಭಿಷೇಕ
ನಿನಗೂ ಉಂಟಾ ರೂಢಿ ಅವಳಂತೆಯೇ ಇದೆಲ್ಲ

ಬೊಮ್ಮ….
ನೀನ್ಯಾಕೆ ಮೊಗದಿರುವಿ ಕಣ್ಮುಚ್ಚಿದೆ ನೋವ ನುಂಗಿ
ಅವಳ ಗಾಢ ಮೌನದ ನೆರಳ್ಯಾಕೆ ನಿನ್ನ ಸುತ್ತಮುತ್ತ
ಅಸಹಾಯಕ ಅಚ್ಚರಿ ಛಾಯೆ ನಸು ಬಾಗಿದಂತಿಹೆ
ಥೇಟ್ ಅದೇ ಆ ಅವಳ ಭಂಗಿಯೇ ನಿನ್ನದೂ

ಬೊಮ್ಮ…..
ಇದೇನು ನಿನ್ನ ಸೃಷ್ಟಿ ಇದೇನು ವಿಪರೀತ ವೈಷಮ್ಯ
ಇದೆಂಥ ಮರೆವೀ ಜಗಕೆ ಯಾಕೆ ಈ ವೈರುಧ್ಯತೆ
ನಿನಗೆ ಉಂಟು ನಾಲ್ಮೊಗ ನೋಡಲು ಕೇಳಲು
ಅವಳಿನ್ನೂ ಮಿಗಿಲು ಸಹಸ್ರಮುಖಿ ಅಗಾಧ ಒಡಲು

ಬೊಮ್ಮ…..
ಬೇಕು ನನಗೆ ಉತ್ತರ ಬಿಚ್ಚಿಡು ನಿನ್ನ ಅಂತರಾಳ
ತಲೆ ಎತ್ತಿ ನುಡಿದ ಬೊಮ್ಮ ಆಗಬೇಕಲ್ಲ ಸಮಭಾರ
ಅಂತೆ ನಾನೂ ಅವಳಂತೆ -ತೂಕದ ಮಾತು ಬೊಮ್ಮನದು
ನನ್ನ ಸೃಷ್ಟಿಗೊಂದು ಚೆಲುವ ತುಂಬುತಿಹೆ ಕಂದ ಅವಳ ಹಾಗೆ ನಾನಾಗಿ

‍ಲೇಖಕರು Admin

13 December, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading