ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸರೋಜಿನಿ ಪಡಸಲಗಿ ಕವಿತೆ- ಬೊಮ್ಮ ನೀ ತಪ್ಪಿದೆ…

ಸರೋಜಿನಿ ಪಡಸಲಗಿ

ಬೊಮ್ಮ….
ಒಪ್ಪಿದೆ ನೀನು ವಿಶಿಷ್ಟ ಸೃಷ್ಟಿ ಕರ್ತ ಎಂದು
ಜಾಣನಾದರೂ ತಪ್ಪಿಬಿಡ್ತಿ ನೋಡು ಒಮ್ಮೊಮ್ಮೆ
ಹೇಳಿಸಿ ಹೆಣ್ಣಿಗೆರಡು ದಡ ಹೊಳೆಯಂತೆ ಅಂದು
ತಪ್ಪಿದೆ ಬೊಮ್ಮ ನೀನೇ ಸೃಷ್ಟಿಸಿದ ಅವಳನರಿಯಲು

ಬೊಮ್ಮ……
ಹೆಣ್ಣೇ ಒಂದು ಹೊಳೆಯಲ್ವೆ ಹೇಳು ನೋಡೋಣ
ಬರೀ ಎರಡು ದಡಗಳಲ್ಲ ಎರಡು ಮನೆಗಳಲ್ಲ
ಎಲ್ಲೆಯೇ ಇರದ ಅಗಾಧ ಹರಿವುಳ್ಳ ಅಸಂಖ್ಯ
ಗೂಢಗಳ ತೌರಾದ ಹೊಳೆಯಲ್ವೆ ಹೆಣ್ಣು

ಬೊಮ್ಮ….
ಎಲ್ಲ ಕೆಸರು ಕಸರು ಮರಳು ಮಡ್ಡಿ ಕಲ್ಲು ಮಣ್ಣು
ಎಣೆಯಿಲ್ಲದ ಅಳಿವಿಲ್ಲದ ಅನಂತ ಸತ್ಯಗಳ
ಒಡಲೊಳು ಹುದುಗಿಸಿ ಸುಳಿವು ತೋರದೆ ಹರಿವ
ಅಗಾಧ ಹರಿವುಳ್ಳ ಹೊಳೆಯಲ್ವೆ ಹೆಣ್ಣು

ಬೊಮ್ಮ….
ತಾನೇನೆಂದು ಅರಿವಿದ್ರೂ ಅಬ್ಬರಿಸಿ ಉಬ್ಬರಿಸದೆ
ಪ್ರಶಾಂತ ಶಾಂತಿಯಲಿ ಎಲ್ಲವನೂ ಕಾಪಿಟ್ಟು
ಮೊರೆಯುವ ಕಡಲೊಳಡಗಿ ಹೊಸ ರೂಪದ
ಅಗಾಧ ಹರಿವುಳ್ಳ ಹೊಳೆಯಲ್ವೆ ಹೆಣ್ಣು

ಬೊಮ್ಮ….
ಹೆದರಿಬಿಟ್ಟೆಯಾ ಜಗಕೆಲ್ಲ ಅಸ್ತಿತ್ವ ಎಲ್ಲಿ ಎಂದು
ದಡವೇ ಇಲ್ಲವಾದರೆ ಅವಳೆದೆಯ ಬಯಲಲ್ಲಿ
ಹುದುಗಿ ಹೋದೀತು ಆ ಅಗಾಧ ಹರಿವಿನಲಿ ಎಂದು
ಇಲ್ಲ ಬೊಮ್ಮ ನಿನ್ನೆಣಿಕೆಗೆ ನಿಲುಕದವಳವಳು
ಪ್ರಳಯವನ್ನೇ ನುಂಗಿ ದಡದ ಹಂಗಿಲ್ಲದ ಹೊಳೆ ಹೆಣ್ಣು ಬೊಮ್ಮ ಯಾವ ಹಂಗಿಲ್ಲದ ಹೊಳೆ

‍ಲೇಖಕರು Admin

5 December, 2021

2 Comments

  1. Shrivatsa Desai

    ಕವಯಿತ್ರಿಯ ಕಲ್ಪನೆ ಅದ್ಭುತ ಇಲ್ಲಿ. ಹಿಂದೆಯೂ ಎಷ್ಚೋ ಕವಿಗಳು ಸ್ತ್ರೀಯ ವ್ಯಾಖ್ಯಾನ ಮಾಡಿದ್ದಾರೆ . “ಪ್ರಳಯವನ್ನೇ ನುಂಗಿ ದಡದ ಹಂಗಿಲ್ಲದ ಹೊಳೆ ಹೆಣ್ಣು” ಅಂತ ಅದ್ಭುತ ಸಾಲಲ್ಲಿ ಮಹಾ ಸತ್ಳಯವನ್ನೇ ಹೇಳಲು ಸಾಧ್ಯ ಒಬ್ಬ ಹೆಣ್ಣುಮಗಳಿಗೇ, ಅಲ್ಲವೆ? ಜೇನಿಯನ್ನು ಹುಟ್ಟಿಸಿದ ದೀಪಧಾರಿಯಂತೆ ಬ್ರಹ್ಮನಿಗೇ ದಿಕ್ತೋಚದಂತ ಮಾಡಿದ್ದಾರೆ ಸರೋಜಿನಿಯವರು ಆತನ ತ್ರೈರಾಶಿಕ ತಪ್ಪಿದ್ದನ್ನು ಎತ್ತಿ ತೋರಿಸಿ. ಭಲೇ!
    ಶ್ರೀವತ್ಸ ದೇಸಾಯಿ

  2. Sarojini Padasalgi

    ಧನ್ಯವಾದಗಳು ಶ್ರೀವತ್ಸ ದೇಸಾಯಿಯವರೇ. ನಿಜ ಹೆಣ್ಣಿನ ಅಂತರಾಳ ಅರಿಯಲು ಬೊಮ್ಮನೇ ಸೋತಾಗ ಇನ್ಯಾರನ್ನೂ ದೂರುವ ಪ್ರಶ್ನೆಯೇ ಇಲ್ಲ. ಆದರೂ ಯಾಕೋ ಒಮ್ಮೊಮ್ಮೆ ಬೊಮ್ಮನನ್ನು ಕಂಡು ಮರುಕ ನಂಗೆ.
    ಈ ಅವಕಾಶ ಒದಗಿಸಿಕೊಟ್ಟದ್ದಕ್ಕೆ ಅವಧಿಗೂ ಧನ್ಯವಾದಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading