ಸುಬ್ರಾಯ ಚೊಕ್ಕಾಡಿ ಮೆಚ್ಚಿದ ಅನನ್ಯ ತುಷಿರಾ ‘ಅರ್ಧ ನೆನಪು ಅರ್ಧ ಕನಸು’

ಅನನ್ಯ ತುಷಿರಾ ಅವರ ‘ಅರ್ಧ ನೆನಪು ಅರ್ಧ ಕನಸು’ ಕೃತಿಗೆ ಕವಿ, ವಿಮರ್ಶಕ,

ನಾಟಕಕಾರರಾದ ಸುಬ್ರಾಯ ಚೊಕ್ಕಾಡಿಯವರು ಬರೆದ ಮಾತುಗಳು ಇಲ್ಲಿವೆ-

ದಕ್ಕುವ ಬೆಳಕಿನ ಕಥೆಗಳು

ಸುಬ್ರಾಯ ಚೊಕ್ಕಾಡಿ

ವಾಣಿಜ್ಯ ತೆರಿಗೆ ಇಲಾಖೆಯ ಉನ್ನತ ಉದ್ಯೋಗದಲ್ಲಿರುವ ಅನನ್ಯಾರ ಪರಿಚಯ ನನಗಾದದ್ದು ಗೋಪಾಲಕೃಷ್ಣ ಕುಂಟಿನಿಯವರು ಅಡ್ಮಿನ್ ಆಗಿರುವ ಕಥೆ ಕೂಟ ಎನ್ನುವ ವಾಟ್ಸಪ್ ಗ್ರೂಪಿನ ಮೂಲಕ. ಆಮೇಲೆ ಕಥೆಕೂಟದ ಸಮಾವೇಶವು ಕುಂಟಿನಿಯವರ ಮನೆಯಲ್ಲೇ ನಡೆದಾಗ ಅನನ್ಯಾರ ಮುಖತಾ ಪರಿಚಯವೂ ಆಯಿತು. ಸ್ಕೂಲ್ ಟೀಚರ್ ನಂತೆ ಕಾಣಿಸಿದ ಅವರು ನನ್ನಲ್ಲಿ ವಿಸ್ಮಯವನ್ನುಂಟುಮಾಡಿದ್ದು ನಿಜ. ಅವರ ಮೆಲು ಮಾತು, ವಿನಯಪೂರ್ವಕ ನಡವಳಿಕೆ ಅವರನ್ನು ಹೆಚ್ಚು ಆಪ್ತವೆನಿಸುವಂತೆ ಮಾಡಿತು. ಆಮೇಲೆ ಅವರು ಕೆಲ ಸಮಯ ಶಿಕ್ಷಕಿಯೂ ಆಗಿ ಕೆಲಸ ಮಾಡಿದ್ದರು ಎನ್ನುವುದು ಗೊತ್ತಾಯಿತು. ಅದರ ಕಳೆ ಇನ್ನೂ ಅವರಿಂದ ಮಾಸಿಲ್ಲ!.

ಅನನ್ಯಾ ಈಗಾಗಲೇ ‘ಅನನ್ಯ ನಿನಾದ’ ಎನ್ನುವ ಒಂದು ಕವನ ಸಂಕಲನವನ್ನೂ ಪ್ರಕಟಿಸಿದ್ದು ಇದೀಗ ಅವರ ಮೊದಲ ಕಥಾ ಸಂಕಲನ ಪ್ರಕಟವಾಗುತ್ತಿದೆ. ಇದಕ್ಕೆ ನನ್ನಿಂದ ಮುನ್ನುಡಿಯನ್ನು ಅಪೇಕ್ಷಿಸಿದ್ದು, ಅವರ ಈ ಪ್ರೀತಿಗೆ ತಲೆಬಾಗಿ ಮುನ್ನುಡಿಯ ನೆಪದಲ್ಲಿ ನಾಲ್ಕು ಮಾತುಗಳನ್ನು ಬರೆಯುತ್ತಿದ್ದೇನೆ.

ಅನನ್ಯಾ ಅವರ ಈ ಸಂಕಲನದಲ್ಲಿ ಹದಿನಾಲ್ಕು ಕಥೆಗಳಿವೆ. ಗ್ರಾಮೀಣ ಪ್ರದೇಶ ಹಾಗೂ ನಗರದ ಮುಖಾಮುಖಿಯನ್ನು ಚಿತ್ರಿಸುವ ವೈವಿಧ್ಯಮಯ ಕಥೆಗಳು ಇಲ್ಲಿವೆ. ಅವರ ಹುಟ್ಟೂರಾದ ವಿಜಯಪುರದ ತಾಳಿಕೋಟೆಯ ಆಸುಪಾಸಿನ ಬದುಕನ್ನು ಒಳಗೊಂಡ ಕಥೆಗಳೊಂದಿಗೆ ಅವರೀಗ ಬದುಕುತ್ತಿರುವ ಬೆಂಗಳೂರೆಂಬ ಮಾಯಾನಗರಿಯ ಬದುಕಿನ ಚಿತ್ರಗಳನ್ನೂ ಈ ಕಥೆಗಳು ಒಳಗೊಂಡಿವೆ.

ಮಾನವೀಯ ಮಿಡಿತ, ಬದುಕಿನ ನಿಗೂಢತೆ, ಸಮುದಾಯದಲ್ಲಿನ ಮೋಸ- ವಂಚನೆ, ಜಾತಿಪದ್ಧತಿಯ ಕೆಡುಕು, ವಿದೇಶಗಳಲ್ಲಿನ ಮಕ್ಕಳ ನೆನಪಲ್ಲಿ ಅನಾಥರಾಗಿಬಿಟ್ಟ ವೃದ್ಧರ ಸಂಕಟ, ಭಿನ್ನ ಸ್ವಭಾವದ ದಂಪತಿಗಳ ನಡುವಿನ ಬಿರುಕು.. ಮೊದಲಾದ ವೈವಿಧ್ಯ ಪೂರ್ಣ ವಸ್ತುವಿನ ಜತೆಯಲ್ಲೇ ಆಧುನಿಕ ಡಿಜಿಟಲ್ ಬದುಕಿನ ಕೊಡುಗೆಯಾದ ಫೇಸ್ ಬುಕ್ ನಿಂದಾಗಿ ಉಂಟಾದ ಆವಾಂತರದ ವಸ್ತುವೂ ಈ ಕಥೆಗಳ ಸೃಷ್ಟಿಗೆ ಕಾರಣವಾಗಿದೆ..

ಇಲ್ಲಿನ ಕಥೆಗಳ ಪೈಕಿ ನನಗಿಷ್ಟದ ಕಥೆಗಳಲ್ಲಿ ಒಂದಾದ ‘ಜೋಳದ ಕಾಳು’ ಕಥೆಯನ್ನೇ ನೋಡಬಹುದು.ಇಲ್ಲಿ ಶ್ರೀಕಂಠ ಸ್ವಾಮಿ ಹಾಗೂ ರಾಜೇ ಸಾಬರ ನಡುವಿನ ಗೆಳೆತನವನ್ನು ಪರೀಕ್ಷೆಗೊಡ್ಡುವ ಹಾಗೆ ನಡೆಯುವ ಘಟನೆಗಳು ಅವರು ಅನುಭವಿಸುವ ಪಾಪಪ್ರಜ್ಞೆ ಹಾಗೂ ಅದು ಎತ್ತಿಹಿಡಿಯುವ ನೈತಿಕತೆಯು ಈ ಕಥೆಯನ್ನು ವಿಶಿಷ್ಟವಾಗಿಸಿದೆ.

ರಾಜೇಸಾಬನ ಮೇಲೆ ಬಂದ ನಾಲ್ಕು ಚೀಲ ಜೋಳದ ಕಳ್ಳತನದ ಆರೋಪವನ್ನು ಬಗೆಹರಿಸಲು ಶ್ರೀಕಂಠ ಸ್ವಾಮಿ ತನ್ನ ಸ್ವಲ್ಪ ಭೂಮಿಯನ್ನೇ ಬರೆದುಕೊಡುವ ನಿರ್ಧಾರವನ್ನು ಪ್ರಕಟಿಸುತ್ತಾರೆ. ಆದರೆ ಸನ್ನಿವೇಶದ ವ್ಯಂಗ್ಯವೆಂದರೆ, ಅನಿವಾರ್ಯವಾಗಿ ಒಂದು ಚೀಲ ಜೋಳವನ್ನುಒಯ್ದ ರಾಜೇಸಾಬನ ಸಮಸ್ಯೆ ಬಗೆಹರಿಸಿದ ಸಮಯದಲ್ಲೇ ಮೂರು ಚೀಲ ಒಯ್ದ ಮಾಧುಗೌಡನ ಕಳ್ಳತನ ಯಾರಿಗೂ ಗೊತ್ತಾಗುವುದೇ ಇಲ್ಲ! ಅದನ್ನು ಮಾರಿದ ಹಣದಿಂದ ಮಾಧು ಗೌಡ ಮಜಾ ಉಡಾಯಿಸಿ ಬರುತ್ತಿದ್ದುದು ಯಾರ ಗಮನಕ್ಕೂ ಬರುವುದೇ ಇಲ್ಲ. ಅವನು ತಾನು ಕದ್ದ ಮೂರುಚೀಲದ ಕಳ್ಳತನದ ಭಾರವನ್ನು ರಾಜೇಸಾಬನ ಮೇಲೆ ಅನಾಯಾಸವಾಗಿ ಬೀಳುವಂತೆ ಮಾಡುತ್ತಾನೆ ಮಾತ್ರವಲ್ಲ ಈ ಮಾಧುಗೌಡನೇ ಮುಂದಿನ ಪಂಚರ ಮುಖ್ಯಸ್ಥನಾಗಲಿದ್ದಾನೆ ಎನ್ನುವ ಸೂಚನೆಯು ಇಡಿಯ ಕಥೆಗೆ ಬರೆದ ಕಟು ವ್ಯಂಗ್ಯದ ಭಾಷ್ಯವಾಗಿದೆ.

ನನಗೆ ವಿಶಿಷ್ಟವೆನಿಸಿದ ಇನ್ನೊಂದು ಕಥೆಯೆಂದರೆ ‘ರಮಾಕಾಂತ’. ಬೆಂಗಳೂರೆಂಬ ಮಾಯಾನಗರಿಗೆ ಕೆಲಸ ಹುಡುಕಿಕೊಂಡು ಬಂದ ರಮಾಕಾಂತನ ದುರಂತ ಕಥೆ ಇಲ್ಲಿದೆ. ಕೆಲಸ ಹುಡುಕುತ್ತಾ ಹೊರಟ ರಮಾಕಾಂತನೊಡನೆ ಆಟೋದವನು ಹೇಳುವ’.. ಯಾವ ದಾರಿ ಹಿಡಿದ ಎಲ್ಲಿ ಹೋಗಿ ನಿಂತರೂ, ಬಂದ ಹಾದಿ ನೆನಪದಾಗ ಇರಬೇಕ ನೋಡಪಾ. ಅದ ಬದುಕ. ನಡದ ಮುಗಿಸಿದ್ದಲ್ಲ. ಮುಂದ ನಡೆಯೂದೂ ಅಲ್ಲ…’ ಎನ್ನುವ ಮಾತು ರಮಾಕಾಂತನ ಮುಂದಿನ ಅಸಂಗತ ಅನುಭವಗಳಿಗೆ ಅವನಿಗೆ ಗೊತ್ತಿಲ್ಲದಂತೆಯೇ ನಾಂದಿಯಾಗುತ್ತದೆ.

ಹಾದಿ ನಡೆಯುತ್ತಾ ಕೆಲಸ ಹುಡುಕುವುದೇ ಮರೆತು ಹೋಗಿ, ಅದರ ಬದಲು ವಾಹನಗಳ ಹಿಂದಿನ ಬರೆಹಗಳನ್ನು, ಅವುಗಳ ನಂಬರುಗಳನ್ನು ನೆನಪಿಡುತ್ತಾ ಪುಸ್ತಕದಲ್ಲಿ ದಾಖಲಿಸುತ್ತಾ ಹೋಗುತ್ತಾನೆ. ಕೊನೆಗೆ ಅದೇ ಹುಚ್ಚಿನಲ್ಲಿ ಟೆಂಪೋದಡಿಗೆ ಬಿದ್ದವನ ತೆರೆದ ಕಣ್ಣುಗಳಿಗೆ ವಾಹನದಲ್ಲಿನ ‘ಚಿರಧಾಮ’ ಎನ್ನುವ ಬರೆಹ ಹಾಗೂ ಅವನ ಹುಟ್ಟಿದ ದಿನ ಅಕ್ಟೋಬರ೧೦ ಎಂಬುದನ್ನು ಸೂಚಿಸುವಂತೆ ೧೦೧೦ ಎಂಬುದು ಗೋಚರಿಸಿತು.!ನಗರಕ್ಕೆ ಹೋದ ವ್ಯಕ್ತಿಯನ್ನು ಹೇಗೆ ಭ್ರಮೆಯೊಂದು ಆವರಿಸಿಕೊಂಡು, ಹಾದಿ ತಪ್ಪಿಸಿ, ನುಂಗಿ ನೊಣೆಯುತ್ತದೆ ಎಂಬುದನ್ನು ಈ ಕಥೆ ತಣ್ಣಗೆ ನಿರೂಪಿಸುತ್ತದೆ.

ಇದೇ ರೀತಿ ನಿಗೂಢ ಅನುಭವವನ್ನು ನೀಡುವ ‘ದಕ್ಕುವ ಬೆಳಕು’, ದಗ್ಧ ಬದುಕಿನ ರೇವತಿಯ ಕಥೆ ಹೇಳುವ ‘ಉರುಳು’, ಭಿನ್ನ ಸ್ವಭಾವದ ಮಾನವ್ ಮತ್ತು ಸಂಚಿತಾಳ ದಾಂಪತ್ಯದ ನಡುವಿನ ಬಿರುಕನ್ನು ಹೇಳುವ ‘ಭ್ರಮೆಯ ಬಸಿರಿನಲ್ಲಿ’, ಫೇಸ್ ಬುಕ್ ಸೃಷ್ಟಿಸಿದ ಕಥೆಯುಳ್ಳ ‘ಅ-ನಿಕೇತ್’.. ಮೊದಲಾದವುಗಳು ಸಂಕಲನದ ಮುಖ್ಯ ಕಥೆಗಳಾಗಿವೆ.

ಇದು ಮೊದಲ ಸಂಕಲನ ಎಂಬುದನ್ನು ಮರೆಸುವ ಹಾಗೆ ತಕ್ಕ ಮಟ್ಟಿಗೆ ಪಳಗಿದ ಕತೆಗಾರ್ತಿಯಂತೆ ಅನನ್ಯಾ ಅವರು ಈ ಕಥೆಗಳನ್ನು ಹೇಳಿದ್ದಾರೆ. ಯಾವುದೇ ಧಾವಂತವಿಲ್ಲದ, ನಿರುದ್ವೇಗದ, ಸೂಕ್ಷ್ಮ ನಿರೀಕ್ಷಣೆಯ ಬರೆವಣಿಗೆ ಇಲ್ಲಿಯದು. ಉತ್ತರ ಕರ್ನಾಟಕದ ಜವಾರಿ ಕನ್ನಡದ ಬನಿ ಈ ಕಥೆಗಳಲ್ಲಿ ಹಾಸುಹೊಕ್ಕಾಗಿವೆ. ಒಂದೆರಡು ಕಥೆಗಳಲ್ಲಿನ ವರದಿಯ ಮಾದರಿಯ ಬರೆವಣಿಗೆಯನ್ನು ನಿವಾರಿಸಿಕೊಳ್ಳಬಹುದಾದ ಶಕ್ತಿ ಅವರಿಗಿದೆ ಎಂಬುದರಿಂದಲೇ ಅವರಿಂದ ಮುಂದೆ ಇನ್ನಷ್ಟು ಉತ್ತಮ ಕಥೆಗಳನ್ನು ನಿರೀಕ್ಷಿಸಬಹುದಾಗಿದೆ.

ಈ ಸಂಕಲನ ಕಥೆಗಳು ಸಾಹಿತ್ಯಾಸಕ್ತರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಲಿ ಮತ್ತು ಅವರ ಇನ್ನೊಂದು ಸಂಕಲನದ ಬರುವಿಕೆಗೆ ನಾಂದಿಯಾಗಲಿ ಎಂದು ನಾನು ಹೃತ್ಪೂರ್ವಕವಾಗಿ ಹಾರೈಸುತ್ತೇನೆ.

‍ಲೇಖಕರು Admin

December 5, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: