ಸರೋಜಿನಿ ಪಡಸಲಗಿ ಅಂಕಣ- ಸರಿಯೂ ಸಮಯಕ್ಕ ಯಾರ ಭಿಡೆ…

ಅವಧಿ’ ಓದುಗರಿಗೆ ಸರೋಜಿನಿ ಪಡಸಲಗಿ ಅವರು ಈಗಾಗಲೇ ಸುಪರಿಚಿತ. ಅವರ ಸರಣಿ ಬರಹ ‘ಒಬ್ಬ ವೈದ್ಯನ ಪತ್ನಿ ಅನುಭವಗಳ ಗಂಟು ಬಿಚ್ಚಿದಾಗ..’ ಜನಪ್ರಿಯವಾಗಿತ್ತು.

ಈಗ ಈ ಸರಣಿ ‘ಡಾಕ್ಟರ್ ಹೆಂಡತಿ’ ಹೆಸರಿನಲ್ಲಿ ಬಹುರೂಪಿಯಿಂದ ಪ್ರಕಟವಾಗಿದೆ.

ಈ ಕೃತಿಯನ್ನು ಕೊಳ್ಳಲು –https://bit.ly/3sGTcvg ಈ ಲಿಂಕ್ ಕ್ಲಿಕ್ ಮಾಡಿ

ಅಥವಾ 70191 82729ಗೆ ಸಂಪರ್ಕಿಸಿ

ಸರೋಜಿನಿ ಪಡಸಲಗಿ, ಮೂಲತಃ ಬೆಳಗಾವಿ ಜಿಲ್ಲೆಯ ಹುಕ್ಕೇರಿಯವರು. ಮದುವೆಯಾದ ಮೇಲೆ ಧಾರವಾಡದವರಾದರೂ ಈಗ ಬೆಂಗಳೂರು ವಾಸಿ. ಪದವೀಧರೆ, ಗೃಹಿಣಿ. ಮೊದಲಿನಿಂದಲೂ ಸಂಗೀತದ ಹುಚ್ಚು ವಿಪರೀತ. ಯಾವುದೇ ಪದ ಸಿಕ್ಕರೂ ಅದನ್ನು ಸಂಯೋಜಿಸಿ ಹಾಡುವ ಅತೀವ ಆಸಕ್ತಿ. ಕ್ರಮೇಣ ಅದು ಭಾವಗೀತೆಗಳನ್ನು ಸ್ವಂತವಾಗಿ ಬರೆದು ಸಂಯೋಜಿಸಿ ಹಾಡುವತ್ತ ಕರೆದೊಯ್ದಿತು.

ಎರಡು ಕವನ ಸಂಕಲನಗಳು ಪ್ರಕಟವಾಗಿವೆ- ‘ಮೌನ ಮಾತಾದಾಗ’ ಮತ್ತು ‘ದೂರ ತೀರದ ಕರೆ’. ಇನ್ನೊಂದು ಸಂಕಲನ ‘ಹಳವಂಡ’ ಹಾಗೂ ಅವರೇ ರಚಿಸಿದ ಸಂಪ್ರದಾಯದ ಹಾಡುಗಳ ಸಂಕಲನ ‘ತಾಯಿ – ಮಗು’ ಅಚ್ಚಿನಲ್ಲಿವೆ. ಈ ಸಂಪ್ರದಾಯದ ಹಾಡುಗಳು 18 ಕಂತುಗಳಲ್ಲಿ ‘ರೇಡಿಯೋ ಗಿರ್ಮಿಟ್’ನಲ್ಲಿ ಪ್ರಸಾರ ಆಗಿವೆ. ಆಕಾಶವಾಣಿ ಬೆಂಗಳೂರು ಹಾಗೂ ಧಾರವಾಡದಿಂದಲೂ ಸಂದರ್ಶನದೊಂದಿಗೆ ಪ್ರಸಾರ ಆಗಿವೆ.

ಅವರ ಇನ್ನೊಂದು ಮನ ಕಲಕುವ ಅಂಕಣ – ತಣ್ಣೆಳಲ ಹಾದಿಯಲ್ಲಿ…

15

ಸರಿಯೂ ಸಮಯಕ್ಕ ಯಾರದೇನ  ಭಿಡೆ;  ಸದ್ದಿಲ್ಲದ  ಸರಿಯೂದ  ಬಿಟ್ಟು  ಅದಕೇನ  ಬ್ಯಾರೆ ಕೆಲಸನs  ಇಲ್ಲ.  ಹೆಂಗೆಂಗ  ದಿನಾ  ಸರೀತಿರತಾವ   ಹಂಗಂಗ  ಅಳತಿಗೆ  ಸಿಗದಷ್ಟ  ಬದಲಾವಣಿನೂ ಇರಲಿಕ್ಕೇ  ಬೇಕಲ್ಲಾ. ಎಲ್ಲಾರ  ಜೀವನಾ  ಬದಲಾಕ್ಕೋತನ  ಹೊಂಡ್ತದ. ಅಗದೀ ಸರಳ   ಲೆಕ್ಕಕ್ಕ  ಸಿಗೂದು  ಅಂದ್ರ  ಸಣ್ಣಾವ್ರು  ದೊಡ್ಡಾವ್ರಾಗೂದು, ದೊಡ್ಡಾವ್ರು  ಇಳಿ ವಯಸ್ಸಿನ  ಕಡೆ  ಜಾರೂದು; ಚೂರ ಚೂರ  ಕೆಲಸಾ, ಜವಾಬ್ದಾರಿ ತಮ್ಮ ತಮ್ಮ ಜಾಗಾ  ಬದಲಾಸೂದು, ಹೀಂಗ. ಯಾರಿಗೂ  ಅದನ  ತಪ್ಪಸೂ  ಸಾಧ್ಯತಾ  ಅಜೀಬಾತ  ಇಲ್ಲಾ. ಆದರ  ಈ  ಹುಚ್ಚ ಮನಸು  ಏಕಾನ  ನೆನಪಿನ  ಜೋಡಿ  ಹೆಣಕೊಂಡ  ಬಂದ  ಆ  ಹಿಂದ  ಉಳದ  ಹಾದಿ ಕಡೆ  ಹಣಿಕಿ  ನೋಡಿ  ಅಂತದ-” ಆ  ಸಮಯ  ಮತ್ತ  ಕಾಲನ್ನ  ಮಿಸಕದ್ಹಾಂಗ  ಹಿಡದ ಕಟ್ಟಿ ಹಾಕಲಿಕ್ಕೆ ಬರೂ ಹಂಗಿದ್ರ  ಎಷ್ಟ ಛಲೋ  ಇತ್ತು” ಅಂತ.  ಆದರ  ದೇವರ  ಬೇತ  ಬ್ಯಾರೇನ  ಇರ್ತದ. ಹಂಗ ಹೆಂಗ ಬೇಕೋ ಹಂಗ  ಮಾಡ್ಕೋಳಿಕ್ಕೆ  ಬರ್ತಿದ್ರ  ಈ  ಹಂಬಲಿಕಿಗೆ  ಜಾಗ ಎಲ್ಲಿತ್ತು. ಅದಕ  ಅಂವಾ  ಬರೋಬ್ಬರಿ  ಲೆಕ್ಕಾ ಹಾಕಿ  ಎಲ್ಲಾನೂ  ಅವತರವತರ  ಜಾಗಾಕ್ಕ, ವ್ಯಾಳ್ಯಾಕ್ಕ  ಹೊಂದಿಸಿ   ಇಟ್ಟ ಬಿಟ್ಟಿರತಾನ. ಅದs ಲೆಕ್ಕಧಾಂಗ  ನಮ್ಮ ಏಕಾಗೂ ವಯಸ್ಸಾಗಲಿಕ್ಹತ್ತು. 

ಹೌದು  ನಮ್ಮ  ಏಕಾನೂ ‌   ಸಣ್ಣ  ಹಂಗ ಇಳಿ ವಯಸ್ಸಿನ ಕಡೆ  ಸರೀಲಿಕ್ಹತ್ತಿದ್ಲು. ಆದರೂ  ಆಕಿ  ಹೌಸು, ಹುರುಪು  ಬೆಳಿಲಿಕ್ಹತ್ತಿತ್ತು  ಆಕಿ  ಸಂಸಾರ  ಬೆಳಧಾಂಗ. ಒಬ್ಬ  ಮಗನ ಸಂಸಾರ  ಬೆಳೆದು  ಮನಿ  ತುಂಬಿ  ನಂದಗೋಕುಲ ಆಗಿತ್ತು.  ಹಂಗs  ಮೊಮ್ಮಕ್ಕಳು  ದೊಡ್ಡವರಾಗಿದ್ರು. ಒಬ್ಬೊಬ್ಬರದೇ  ಮದವಿ ಆಗಲಿಕ್ಹತ್ತಿದ್ದು. ಮರಿಮೊಮ್ಮಕ್ಕಳು  ಹುಟ್ಟಿದ್ರು. ಎಲ್ಲಾರೂ ತಮ್ಮ ತಮ್ಮ ನೌಕರಿ ಚಾಕರಿ  ಅಂತ ಮನಿ  ಬಿಟ್ಟಿದ್ರು. ಎಲ್ಲಾ ಮಂಡಳಿ  ಹುಕ್ಕೇರಿ ಮನಿಯೊಳಗ  ಜಮಾಸ್ತಂದ್ರ ನಮ್ಮ ಏಕಾಗ  ಮತ್ತ  ತಾರುಣ್ಯ ಹೊಡಮಳ್ಳಿಧಂಗ  ಆಗ್ತಿತ್ತು.

1985 ರಾಗ  ನನ್ನ ತಂಗಿದು  ಮದವಿ ಠರಾಸ್ತು. ನಮ್ಮ ಏಕಾಗ  ಆಗ  71 ವರ್ಷ. ಆದರ  ಆಕಿ ಏನ  ಒಂಚೂರೂ  ಥಕಾಸಿಧಾಂಗ  ತೋರಸ್ತಿದ್ದೇ ಇಲ್ಲಾ. ನಾ ಹಿಂದ  ಬರಧಾಂಗ  ಇಬ್ರೂ ಅಜ್ಜಿಗಳ ಕೂಡಿ   ಛಂದ  ವ್ಯವಸ್ಥಿತ  ನಿಶ್ಚಿತಾರ್ಥದ ಕೆಲಸಾ  ಅವರಾಸಿ   ಪಾರಗಾಣಿಸಿದ್ರು. ಅದs  ಚಟಪಟ  ರೀತೀಲೆ   ಮದವಿ ತಯಾರಿನೂ  ಸುರು ಆತು. ಏಕಾ – ಅವ್ವಾ  ಎಲ್ಲಾ ವ್ಯವಸ್ಥಶೀರ  ಜೋಡಿಸಿ, ಹೊಂದಿಸಿ  ಮನ್ಯಾಗಿಂದು  ತಯಾರಿ  ನಡಸಿದ್ರು; ಅಣ್ಣಾ  ಹೊರಗಿಂದು. ಅವ್ವಾಗ ಎರಡೂ ಕಡೆ ಕೈ  ಜೋಡಸಬೇಕಾಗ್ತಿತ್ತು. ಆದರ  ನಮ್ಮ ಏಕಾನ ಸಾಥ ಇದ್ದಾಗ  ಯಾವದೂ  ಹೆಂಗ  ಮಾಡೂದು  ಅನೂ ಪ್ರಶ್ನೀನ  ಇರಲಿಲ್ಲ. 

ಮದವಿ  ಹತ್ರ  ಬಂಧಾಂಗ  ಆಜೂ ಬಾಜೂದ  ಹಚಗೊಂಡಾವರೆಲ್ಲಾ  ಕೂಡಿ  ಫರಾಳ  ಮಾಡೂ ಕೆಲಸಾ ಸುರು ಆತು. ಹಂಗs  ರೂಢಿ ಇತ್ತು ನಮ್ಮ ಕಡೆ ಆಗ. ಅವಲಕ್ಕಿ, ಉಂಡಿ, ಚಕ್ಕಲಿ, ಕಾನೋಲೆ (ಕರಚೀಕಾಯಿ) ಎಲ್ಲಾ  ಭರದಾಸ್ತ ಆಗಿ  ನಡೀತು. ಅನರಸ  ಅಷ್ಟ ನಾವೇ ಮನೀ ಮಂದಿ  ಮಾಡ್ಕೊಂಡ್ವಿ. ಆಗಿಂದ  ಒಂದ  ಘಟನಾ ಹಗಲೆಲ್ಲಾ  ನೆನಪಾಗ್ತದ ನಂಗ.    

ನಾನು, ನನ್ನ ವೈನೀ (ನಮ್ಮಣ್ಣನ ಹೆಂಡತಿ) ಅನರಸ ಒತ್ತಿ ಕೊಡ್ಲಿಕ್ಹತ್ತಿದ್ವಿ. ಏಕಾ ಕರೀಲಿಕ್ಹತ್ತಿದ್ಲು. ಅನರಸ  ತಟ್ಟುದು ಅಥವಾ  ಒತ್ತುದಕ  ಒಂದು  ವಿಶಿಷ್ಟ ರೀತಿ ಅದ  ಅದಕ. ಐದೂ ಬಟ್ಟು  ಜೋಡಿಸಿ  ಆ ತುದೀಲೇ ಅನರಸ ಹಿಟ್ಟಿನ  ಉಳ್ಳಿ ಕಸಕಸಿ  ಮ್ಯಾಲ  ತಿರಗಿಸಿಕೋತ  ತಟ್ಟಬೇಕು. ನಾ ಪಟಾಪಟಾ  ಒತ್ತಿ  ಕೊಡ್ಲಿಕ್ಹತ್ತಿದ್ದೆ. ನಮ್ಮ ವೈನಿಗೆ  ಆಗ  ಇದೆಲ್ಲಾ  ಇನೂ  ಹೊಸಾದು. ಅವರದು ಸಾವಕಾಶ ಆಗ್ತಿತ್ತು; ಒಂದೊಂದು ಒಂಚೂರ  ಅಂಚ  ಹತ್ರ ಸೀಳೋದು. ಆದರ ನಮ್ಮ ಏಕಾಗ  ವೈನಿ  ಒತ್ತಿ ಕೊಡೂದು ಭಾಳ  ಕೌತುಕ  ಅನಸೂದು. “ಅವ್ವಾ! ಅಕ್ಕವ್ವಾ ನೋಡs ಸೀಮಾ  ಎಷ್ಟ ಛಂದ ಮಾಟ  ಒತ್ತಿ ಕೊಡ್ತಾಳ  ನೋಡ.  ಬಲೆ  ಪೋಲ್ಮಿ ಕೆಲಸ  ಅಕಿದು ನೋಡ ಅಕ್ಕವ್ವಾ” ಅನ್ನಾಕಿ. ನಾ ‘ಹೂಂ ಹೌದ  ಏಕಾ’ ಅಂತಿದ್ದೆ. ನನಗೇನೂ  ಹೇಳಲೇ ಇಲ್ಲ ಆಕಿ. ನಾ ಮಾರಿ ಸಣ್ಣ ಮಾಡಿದ್ದ ನೋಡಿ ಏಕಾ  ಆಮ್ಯಾಲ  ನಂಗ  ಒಂದ ಮಾತ  ಹೇಳಿದ್ಲು –

“ನೋಡ  ಅಕ್ಕವ್ವಾ  ಆ ಹುಡಗಿ ತೌರು ಬಿಟ್ಟು ಬಂದು ಈಗs ದಣೆ  ಒಂದ ನಾಲ್ಕ ವರ್ಷ ಆಗೇದ. ಅಕಿ  ಮಾಡಿದ್ದಕ್ಕ  ನಾವು  ಕೌತುಕಬಟ್ರ  ಅಕಿಗೆ  ಹುರಪ  ಬರತದ; ಹೊಂದಿಕಿ  ಆಗಲಿಕ್ಕೆ  ಸರಳ  ಆಗ್ತದ. ನೀ ಈ ಮನಿ ಮಗಳು. ಇದೆಲ್ಲಾ ನಿನಗ ಹೇಳೂದ ಬೇಕಾಗೇ ಇಲ್ಲ. ಹೌದಲ್ಲೋ” ಅಂದ್ಲು.  ಇದು  ಅಗದೀ ಸಣ್ಣ ವಿಷಯ ; ಆದ್ರ ಜೀವನದ  ಅಮೂಲ್ಯ ಸತ್ಯ. ರಕ್ತ  ಸಂಬಂಧ  ಇಲ್ಲದಿದ್ರೂ ಅವನ   ಹೆಂಗ  ಗಟ್ಟಿ  ಹೆಣಿಬಹುದು  ಅಂಬೂದ್ರ ಮೊದಲ  ಹೆಜ್ಜಿ  ಇದು. ನನಗ  ಖರೇ ಅಂದ್ರ  ಆಗ ಹೆಂಗೋ ಅನಸಿದ್ರೂ  ನನ್ನ ಈಗಿನ  ಜೀವನ  ಘಟ್ಟದಾಗ  ಪ್ರತಿ  ಹೆಜ್ಜಿಗೆ, ಪ್ರತಿ  ಗಳಿಗಿಗೆ  ಆ  ಸತ್ಯ ಇದಿರಿಗೆ ನಿಲ್ತದ.

ನನ್ನ  ತಂಗಿ  ಮದವಿ  ಬೆಳಗಾವಿಯೊಳಗ  ಆತು. ಆಗಿನ್ನೂ  ಕಾಂಟ್ರ್ಯಾಕ್ಟ್  ಮದವಿ  ಅಷ್ಟ  ಸರ್ರಾಸ  ಚಾಲ್ತಿಯೊಳಗ  ಇರ್ಲಿಲ್ಲ. ಅದೂ ಅಲ್ಲದ  ನಮದು  ಎಲ್ಲಾ ಕಾಳು ಕಡಿ  ಸಕ್ರಿ ಮೊದಲ ಮಾಡ್ಕೊಂಡ  ಮನಿ  ಸಾಮಾನೇ  ಇರ್ತಿತ್ತ ಎಲ್ಲಾ. ಅದಕ  ಅಣ್ಣಾ ಕಾಂಟ್ರ್ಯಾಕ್ಟ್ ವಿಚಾರನೂ  ಮಾಡ್ಲೆ  ಇಲ್ಲ. ಹಿಂಗಾಗಿ  ಮದವಿ  ಹಿಂದಿನ ದಿನಾ  ಮುಂಜಾನೆ ಲಗೂನ  ದ್ವಾದಶಿಗತೆ  ಊಟಾ ಮುಗಿಸಿ  ಸಾಮಾನಿನ  ಲಾರಿ  ಜೋಡಿ  ನಾನು, ಏಕಾ ಮತ್ತ ನಮ್ಮ ದೊಡ್ಡ  ಮಾವಶಿ  ಕಾರ್ಯಾಲಯಕ (ಛತ್ರ)  ಹೋದ್ವಿ.

 ಉಳದ  ಮಂಡಳಿ  ಎಲ್ಲಾ  ಮಧ್ಯಾಹ್ನ ತನಕಾ  ಬರೂದಿತ್ತು. ನಾವು ಆ ಸಾಮಾನೆಲ್ಲಾ ಹೊಂದಿಕಿ  ಮಾಡೂದಿತ್ತು. ನಾನು, ಮಾವಶಿ  ಅಷ್ಟಷ್ಟಕ್ಕs  ಹುಶ್  ಅಂತಿದ್ವಿ. ನಮ್ಮ ಏಕಾ  ಹನಿ ನೀರ  ಕುಡೀದೇ  ಒಂದೇ  ಉಸರಿನ್ಯಾಗ  ಸರಾಸರಾ  ಅವರಾಸಲಿಕ್ಹತ್ತಿದ್ಲು  ಎಲ್ಲಾ. ಅದೆಂಥಾ  ಚೇತನಾ  ಅನಸ್ತದ ನಂಗೀಗ.

ಇಷ್ಟ  ಸಟಾಸಟಾ  ಓಡಾಡಿ ಮಾಡಾಕಿ ನಮ್ಮ ಏಕಾ, ಮೆರವಣಿಗೆ  ಸಪ್ಪಳಕ್ಕ ಹೊರಗೆ ಹೋಗಿ  ನಿಂತ  ನೋಡಿ  ಬರಾಕಿ  ನಮ್ಮ ಏಕಾ ; ಖರೆ ವರಪೂಜಾ, ರುಕ್ಕೋತ  ಎಲ್ಲಾ  ಮರಿಯೊಳಗs ನಿಂತ  ನೋಡ್ತಿದ್ಲು. ನಂಗೆ  ಹೊಟ್ಟ್ಯಾಗ  ಕಲಸಿಧಂಗ  ಆಗೂದು. ಆಕಿ  ತನಗs  ಒಂದು  ಮಿತಿ  ಹಾಕೊಂಡ  ಬಿಟ್ಟಿದ್ಲು  ನಸೀಬ  ಹಾಕಿದ  ಲಕ್ಷ್ಮಣ ಗೆರಿ  ದಾಟಧಂಗ. ಶ್ರಾವಣ ಗೌರಿ ತಾನೇ ಬರೀತಿದ್ಲು. ಖರೆ  ಅವ್ವಾ ಒಂದ ಚುಕ್ಕಿ  ಇಟ್ಟ ಸುರು  ಮಾಡೂ ತನಕಾ  ಎಂದೂ ತಾ  ಬರಿಯೂದ  ಸುರು ಮಾಡ್ತಿತಿದ್ದಿಲ್ಲ. ಹೀಂಗs  ಒಂದೊಂದು ನೆನಪಾದ್ರ ನನಗ  ಎದೀ ಒಳಗ ಒತ್ತಿಧಂಗ  ಆಗ್ತದ. ಯಾವ ಅಗಾಧ  ಕರ್ಮಕ್ಕ ಈ ಶಿಕ್ಷಾ  ಆ ಸರಳ ಜೀವಕ್ಕ ಅನಸೂದು ನನಗ. ಉತ್ತರ ಇಲ್ಲದ ಪ್ರಶ್ನ  ಅದು.

ಮದವಿ  ಕೆಲಸ  ಎಲ್ಲಾ  ಪಾಂಕ್ತಾಗಿ  ಮುಗೀತು. ನಾನು,  ನಮ್ಮಣ್ಣ, ನಮ್ಮ ಸಣ್ಣ ಮಾವಶಿ  ನಮ್ಮ ತಂಗಿನ್ನ  ಕಳಸಲಿಕ್ಕ  ಅಲ್ಲೇ  ಬೆಳಗಾವ್ಯಾಗ  ಇದ್ದ ಆಕೀ ಅತ್ತಿಮನಿಗೆ  ಹೋದ್ವಿ. ಉಳಿದವರೆಲ್ಲಾ ವಾಪಸ್ಸ  ಹುಕ್ಕೇರಿಗೆ  ಹೋದ್ರು. ನಾವು ಬರೂದು ರಾತ್ರಿ  ತಡಾನೇ  ಆತು. ನಾ ಬಂದ ಮ್ಯಾಲ ನಮ್ಮ ಏಕಾ  ಸಾವಕಾಶ  ನನ್ನ ಬಾಜೂಕ  ಬಂದ ಕೂತು ನನ್ನ  ಬೆನ್ನ ಮ್ಯಾಲ  ಕೈಯಾಡಿಸಿ  ಕಣ್ಣಿಗೆ ಸೆರಗೊತ್ತಿ ಬಿಕ್ಕಿದ್ಲು. ಆಕೀಗೆ  ಏನನಿಸಿತ್ತೋ ಗೊತ್ತಿಲ್ಲ. ನಾನೂ ಆಕಿ  ತೊಡಿ ಮ್ಯಾಲ ಮಲಗಿ  ಬಿಕ್ಕಿದೆ. ಹಂಗs‌ ಯಾಕೋ  ಮನಸಿನ್ಯಾಗ  ಬಂತು – ನಮ್ಮ ಏಕಾ ಚುಟು ಚುಟು ಓಡಾಡಿ  ಎಲ್ಲಾ ಮಾಡ್ತಾಳ. ಖರೇ ಈ ಎರಡ ತಿಂಗಳದಾಗ  ಯಾಕೋ  ಚೂರ   ಥಕಸಿಧಂಗ  ಅನಸ್ತಾಳಲಾ ಅಂತ.

ಮುಂದ  ಎರಡ  ದಿನಾ ಆಗಿತ್ತು. ಎಲ್ಲಾರದೂ ಊಟ ಆದ ಮ್ಯಾಲೆ  ಮಧ್ಯಾಹ್ನ  ಎಲ್ಲಾರೂ ನಡಮನಿ ಒಳಗ  ಹರಿಹಾಸಿಗಿ  ಹಾಕಿ  ಅಡ್ಡಾಗಿದ್ವಿ. ಏಕಾ  ಅಲ್ಲೇ  ಬಂದು ಅಲ್ಲಿದ್ದ ಟ್ರಂಕಿನ  ಮ್ಯಾಲ ಕೂತ್ಲು. ನಾ ಹವುರಗ  ಆಕಿ ಕಡೆ ನೋಡಿ ಸಟ್ಟನ ಎದ್ದ ಕೂತು ‘ ಏಕಾ ‘ ಅಂತ ಚೀರದೆ. ‘ ಯಾಕ ಅಕ್ಕವ್ವಾ ‘ ಅಂದ್ಲು. ನಾ ಏನೂ ಮಾತಾಡದೇ ಆಕೀ ಕಣ್ಣ ಕಡೆ ಕೈ  ತೋರಿಸಿದೆ. ನಾ ಚೀರಿದ್ದಕ್ಕ ಅಣ್ಣಾನೂ  ಓಡಿ  ಬಂದ್ರು. ಗಾಬರಿ ಆಗಿ ನಿಂತ್ರು. ನಮ್ಮ ಏಕಾನ  ಬಲಗಣ್ಣ ಪೂರಾ ಲಾಲದುಂದ; ರಕ್ತ ತುಂಬಿ  ನಿಂತ ಹಂಗ!  ನನ್ನ ತಮ್ಮ ಓಡಿ ಹೋಗಿ  ಡಾಕ್ಟರ್ ನ  ಕರಕೊಂಡ  ಬಂದಾ. (ಸುರೇಶ ವಾಪಸ್ ಊರಿಗೆ ಹೋಗಿದ್ರು) ಅವರು ನೋಡಿ ತಾಬಡತೋಬ  ಬೆಳಗಾವಿ ಇಲ್ಲಾ  ಮಿರಜಿಗೆ  ಕರಕೊಂಡ  ಹೋಗ್ರಿ. ಹ್ಯಾಮರೇಜ  ಆಗಿರ ಬಹುದು ಅಂದ್ರು. ಮುಂದ ನಾಕ  ದಿನದಾಗ  ಆರಾಮ  ಆದ್ಲು ಏಕಾ. ಆದರ ಯಾಕೋ ಏನೋ ಏಕಾನ  ತಬ್ಬೇತ  ಒಂಚೂರ  ಇಳಿಥರಕ್ಕ ಬೀಳ್ಲೀಕ್ಹತ್ಥಂಗ  ಅನಿಸ್ತು. ಆದ್ರ  ಏಕಾನ  ಲುಡುಬುಡು  ಓಡಾಟ, ಹೌಸು  ಆ  ಅನಿಸಿಕಿಗೆ  ಒಂದು  ಪಡದೆ ಹಾಕ್ತಿತ್ತು. ನನ್ನ ತಂಗಿ ಅಳ್ಯಾತನ, ಆಕೀ ಬಾಣಂತನ ಎಲ್ಲಾ ಅಗದೀ ಪಾಂಕ್ತಾಗಿ  ನಡದು. ಏಕಾ ಆರಾಮೇ ಅನಸ್ತಿದ್ಲು.

ಆ  ಮ್ಯಾಲೆ  ಇನ್ನುಳಿದ  ಮೂರೂ  ತಮ್ಮಂದಿರದೂ  ಮದವಿ  ಆದು  ಹೆಚ್ಚು ಕಡಿಮಿ ದರಾ  ವರ್ಷಕ್ಕ  ಒಬ್ಬರಧಂಗ. ಯಥಾ ಪ್ರಕಾರ  ಅದs  ಸಂಭ್ರಮದಲೇನs  ಏಕಾ  ಎಲ್ಲಾತರಾಗೂ ಕೈ  ಜೋಡಿಸಿದ್ಲು. ಸಣ್ಣಾವ್ರ  ಇಬ್ಬರದೂ ಮದವಿ  ಬೆಂಗಳೂರನ್ಯಾಗ  ಆತು. ಅಲ್ಲೂ ಏನೂ  ತ್ರಾಸ  ಆಗದ  ಬಂದಿದ್ಲು  ಏಕಾ. ತಮ್ಮದು ಇಬ್ರ ಮೂರು ಮಂದಿದು  ಮಡಿ ಅಡಿಗಿ ಊಟಾ  ಎಲ್ಲಾ ವ್ಯವಸ್ಥಿತ  ಅಕೀನೇ  ಬಗೀಹರಿಸಿದ್ಲು.

1988ರೊಳಗ  ನನ್ನ  ದೊಡ್ಡ  ತಮ್ಮನ  ಮಗಾ ಹುಟ್ಟಿದ.  ನನ್ನ  ತಮ್ಮನ ಹೆಂಡತಿ  ತೌರಮನಿಂದ  ಹೆತ್ತನಿಬ್ಬಣ  ಬಂದು  ಹುಕ್ಕೇರಿ ಮನಿಯೊಳಗ  ಒಂದೆರಡ  ತಿಂಗಳ  ಇದ್ದು  ಬೆಂಗಳೂರುಗೆ  ಬರೂ ಪ್ಲಾನ್  ಇತ್ತು. ಆಕೀ  ಜೋಡಿ  ಏಕಾ  ಬೆಂಗಳೂರಿಗೆ  ಬರಾಕಿದ್ಲು.  ನಾವು  ಆಗ  ತಿಳವಳ್ಳಿಯೊಳಗ  ಇದ್ವಿ. ಈಕಡಿಕಡೆ   ನಮ್ಮ ಏಕಾ ಯಾಕೋ  ಹಣ್ಣಾಧಾಂಗ  ಆಗಿದ್ಲು.  ಕೂತು  ಕಾಲ ಮ್ಯಾಲ  ಹಾಕೊಂಡು  ಕೂಸಿನ್ನ  ಎರದು  ಕೊಡ್ತಿದ್ಲು; ಸಣ್ಣ ಹಂಗೆ  ಬಾಣಂತನಾನೂ  ಮಾಡಿದ್ಲು ನಮ್ಮ ತಮ್ಮನ ಹೆಂಡತಿದು. ಆದ್ರೂ  ಆಕೀ  ಹುರುಪಿಗೆ  ಆಕಿ  ತಬ್ಬೇತ  ಅಷ್ಟ ಸಾಥ  ಕೊಡ್ತಿದ್ದಿಲ್ಲ  ಅನಸ್ತಿತ್ತು. ಆಕಿ  ಆರೋಗ್ಯದಾಗ  ಏನೋ  ಏರುಪೇರಾಗಲಿಕ್ಹತ್ತಿತ್ತು.  ಏಕಾ ಏನೂ ಹೇಳದೆ  ಮುಚ್ಚಿಟ್ಲು  ಅದನ. ಕೂಸಿನ್ನೂ  ಎತಗೊಂಡು  ತಿರಗಾಡ್ಲಿಕ್ಕೆ  ಆಗ್ತಿದ್ದಿಲ್ಲ. ನನ್ನ ತಮ್ಮನ ಹೆಂಡತಿ  ಬೆಂಗಳೂರಿಗೆ  ಹೊಂಟ  ನಿಂತ್ಲು ದೀಪಾವಳಿ  ಆದ ಮ್ಯಾಲೆ ; ಬಹುಶಃ  ಡಿಸೆಂಬರ್ ನಲ್ಲಿ. ನಮ್ಮ ಅವ್ವಾನೇ  ಹೊಂಟ್ಲು  ಆಕಿ  ಜೋಡಿ . ಏಕಾ –

“ಸುಷ್ಮಾ, (ನನ್ನ ತಮ್ಮನ ಹೆಂಡತಿ), ನಾನs ಬರತಿದ್ನೆವಾ  ನಿನ್ನ  ಜೋಡಿ. ಆದರ ಯಾಕೋ ನೀಗೂದಿಲ್ಲ  ಏನೂ  ಅನಸ್ತದ. ಹೊಸಾ ಜಾಗಾ. ಹೆಂಗೋ ಏನೋ ಅಂತ. ಭಾಳಾದ್ರ ಕೂಸಿನ್ನ  ಎತಗೊಂಡ  ಒಂದ ಕಡೆ  ಕೂಡ್ತೀನು ಅಷ್ಟsವಾ. ನೀನೂ ಸಣ್ಣ ಕೂಸಿನ  ತಾಯಿ; ನಿನಗ  ತ್ರಾಸ ಆಗ್ತದ. ಕುಸುಮಾನ್ನೆ  ಕರಕೊಂಡು ಹೋಗವಾ  ಬಾಳಾ” ಅಂತ  ಅಂದ್ಲಂತ. ಅವ್ವಾ  ನನಗ  ಆಮ್ಯಾಲ ಹೇಳಿದ್ಲು  ಇದನ. ನನ್ನ  ಜೀವ  ವಿಲಿ ವಿಲಿ  ಅಂತು ಏಕಾ ನೀಗೂದುಲ್ಲ ಅಂದದ್ದ ಕೇಳಿ.

ಅವ್ವಾ  ಒಂದ ದೀಡ  ಎರಡ  ತಿಂಗಳ  ಇದ್ಲು  ಬೆಂಗಳೂರನ್ಯಾಗ  ಅನಸ್ತದ. ಅಷ್ಪ್ರಾಗ  ಅಣ್ಣಾ ಆಕಿನ್ನ ವಾಪಸ್   ಕರಸಿಕೊಂಡ್ರು  ಏಕಾಗ  ಆರಾಮ  ಇಲ್ಲಂತ. ಏಕಾಗ  ಲಗ್ವಿ (ಮೂತ್ರ) ಬಂದ್  ಆಗಿದ್ದು. ಅಲ್ಲೇನೋ  ಪ್ರಾಬ್ಲಂ  ಆಗಿತ್ತು. ಏಕಾ  ಏನೂ  ಹೇಳೇ ಇಲ್ಲ  ಅಣ್ಣಾಗ. ಊಟ  ಕಟ್ಟಿಧಂಗ  ಆಗಿತ್ತು; ಆಗಾಗ  ಉಲಟಿನೂ  ಸುರು ಆಗಿತ್ತು. ಅವ್ವಾ  ಬಂದ  ಮ್ಯಾಲನ  ಎಲ್ಲಾ ಖುಲ್ಲಾ ಆತು. ಟ್ರೀಟ್ ಮೆಂಟ್  ಸುರು ಆತು; ಕಡೀಕ  ಕ್ಯಾಥಟರ್  ಹಾಕಬೇಕಾತು. ಇದು 1989  ಎಪ್ರಿಲ್ ದಾಗ.  ಸ್ವಲ್ಪ  ಸುಧಾರಣಾ  ಆತು  ಬಿಗಡಾಸಿದ  ತಬ್ಬೇತ ಒಳಗ. ಆದರೂ  ವಿಶೇಷ ಸುಧಾರಣಾ  ಅಲ್ಲಾ. ಸ್ವಲ್ಪ  ದಿವಸ ಅಷ್ಟೇ. ತನ್ನ  ಜನ್ಮದಾಗ  ಮೊದಲನೇ  ಸಲ  ಅಡಿಗಿ  ಜವಾಬ್ದಾರಿ  ಅವ್ವಾಗ  ಅಂದ್ರ  ಸೊಸಿ  ತಾಬೇಕ  ಕೊಟ್ಲು ನಮ್ಮ ಏಕಾ. ತನ್ನದೊಂದು  ಅನ್ನಾ  ಶೇಗಡಿ ಮ್ಯಾಲ  ತಾನೇ  ಮಾಡ್ಕೋತಿದ್ಲು.

1989  ಮೇದಾಗ  ನನ್ನ  ಮಕ್ಕಳ  ಮುಂಜಿ  ಅಂತ  ಠರಾವಾತು. ಏಕಾ  ತನ್ನ  ಬ್ಯಾನಿ  ಮರತ್ಲು. ತಾನು , ನಮ್ಮವ್ವ, ಜೀವೂತಾಯಿ, ಬಾಜೂ ಮನಿ ಕಾಂತಾಬಾಯಿ  ಎಲ್ಲಾರನೂ  ಕರಕೊಂಡು ಶ್ಯಾವಿಗಿ, ಹಪ್ಪಳಾ- ಸಂಡಿಗಿ  ತಯಾರ ಮಾಡಿ   ಇಟ್ಲು ನನ್ನ ಮಕ್ಕಳ  ಮುಂಜಿಗೆ. ಆ ಮ್ಯಾಲ ಎಪ್ರಿಲ್ ದಾಗ  ನನಗ  ತೌರು ಮನಿ  ಕೇಳವಣ  

( ಗಡಿಗಿ ನೀರು) ಇಟ್ಕೊಂಡ್ರು. ಅದ ನೆನಪಾದಾಗ ನನಗ ಇಂದಿಗೂ  ಕರುಳು ಹಿಂಡಿ  ಕಿವಚಿಧಾಂಗ ಆಗಿ  ಸಂಕಟ, ಕಂಬನಿ ಧಾರೆ  ಶುರು ಆಗ್ತದ. ಆ  ದಿನ  ಏಕಾ ತಾನೇ  ಮಡಿ ಅಡಿಗಿ ಮಾಡಾಕಿ  ಅಂತ ಹಟಾ  ಹಿಡದ್ಲು. ಆ ಟ್ಯೂಬ್  ಕಿತ್ತ ಒಗದು ಮಡಿಲೆ ಹಬ್ಬದ ಅಡಿಗಿ  ಮಾಡೇ ಬಿಟ್ಲು ಏಕಾ – ಪಾಕದಾಗಿನ ಚಿರೋಟಿ, ಕಾಳಾಭಾತು  ಭಜಿ ಮತ್ತ ಇನ್ನುಳಿದ ಅಡಿಗಿ ಎಲ್ಲಾ  ತಾನs ಮಾಡಿದ್ಲು. ಅಣ್ಣಾನ  ಕಡಿಂದ  ದೇವರ ಪೂಜಾ, ನೈವೇದ್ಯ  ಮಾಡಿಸಿ  ತಾನs  ಕೂತಲ್ಲೇ  ತನ್ನ ಕೈಯಾರೆ  ಊಟಕ್ಕ ಬಡಿಸಿದ್ಲು. ಅವ್ವಾ ಮಡಿಲೆ  ಅಡಿಗಿ ಎಲ್ಲಾ  ಏಕಾ ಕೂತಲ್ಲೇ  ತಂದು ಕೊಡಾಕಿ; ಏಕಾ ಬಡಿಸಾಕಿ. ಯಾರ ಏನ  ಹೇಳಿದ್ರೂ ಕೇಳಲಿಲ್ಲ ಆಕಿ.- ” ನಮ್ಮ ಅಕ್ಕವ್ವನ  ಮಕ್ಕಳದು, ನನ್ನ ಮರಿಮಕ್ಕಳ  ಮುಂಜಿವಿ  ಕೇಳವಣ. ಎಲ್ಲಾ  ನಾನೇ  ಮಾಡಾಕಿ ” ಅಂಬೂ  ಆಸೆ, ಹಟ; ಮತ್ತ ಹಂಗೇ ತಾನೇ ಮಾಡಿದ್ಲು.

ನಮ್ಮೆಲ್ಲಾರದು  ಊಟ ಮುಗಿಸಿ  ತಾ  ಅಡಿಗಿ ಮನಿ  ಬಿಟ್ಟು  ಅದರ  ಬಾಜೂದ  ದೊಡ್ಡ  ಖೋಲ್ಯಾಗ  ಊಟಕ್ಕ ಕೂತ್ಲು. ” ಏಕಾ  ಅಲ್ಯಾಕ ಏಕಾ; ಇಲ್ಲೇ  ಕೂಡ  ಊಟಕ್ಕ”  ಅಂದ್ರ , ” ಬ್ಯಾಡ ಬಾಳಾ, ನಂಗ  ಯಾವಾಗ  ಉಲಟಿ  ಆಗ್ತದ ಅಂತ  ಹೇಳಲಿಕ್ಕೇ  ಬರಾಂಗಿಲ್ಲವಾ. ಅದಕ  ಅಲ್ಲೆ ಅಡಗಿ ಮನ್ಯಾಗ  ಬ್ಯಾಡ  ಬಾಳಾ” ಅಂತ ಹೇಳಿ  ಅಲ್ಲೇ  ಕೂತ್ಲು. ಏನೇನು  ಊಟ  ಹೋಗ್ಲಿಲ್ಲ. ಅಂಥಾದ್ರಾಗ  ಮತ್ತ ಮತ್ತ ಹೇಳಿದ್ಲು -” ಕುಸುಮಾಗ  ಬಾಳಿ ಎಲಿ  ಹಾಕ ಬ್ಯಾಡ್ರಿ. ಅಕಿಗೆ  ಸೇರಾಂಗಿಲ್ಲ”  ಅಂತ   ಅಲ್ಲಿಂದನ  ಒದರಿ  ಹೇಳಿದ್ಲು. ನನಗ  ಅಳು  ತಡೀಲಿಕ್ಕಾಗಲಿಲ್ಲ. ಅಳಕೋತನ  ಹೂಂ ಅಂದೆ.

“ಕಣ್ಣೀರ  ತಗೀಬ್ಯಾಡ  ಅಕ್ಕವ್ವಾ; ಈಗ  ಆರತಿ  ಮಾಡಿಸ್ಕೊಂಡೀದಿ” ಅಂತ  ಹೇಳಿದ್ಲು ಏಕಾ.

ಒಂದೊಂದೂ  ಎದಿಯೊಳಗ  ಪೂರಾ ಆಳಕ್ಕ ಇಳದ  ನಿಂತವುಗಳೇ.

ನನ್ನ ದೊಡ್ಡ  ಮಗ  ಆ  ವರ್ಷ ಎಸ್ಸ್. ಎಸ್.  ಎಲ್. ಸಿ.ಗಿದ್ದ.  ಅಲ್ಲೇ  ಹುಕ್ಕೇರಿಯೊಳಗೇ  ಇದ್ದಾ. ನಾವು  ಹುಡುಗರ  ಮುಂಜಿವಿ  ಆದ ಮ್ಯಾಲ  ಜೂನ್  ಮೂರನೇ  ವಾರದಾಗ  ತಿಳವಳ್ಳಿಂದ  ವರ್ಗ  ಆಗಿ  ಗರಗಕ್ಕ ಬಂದ್ವಿ.  ಹಿಂಗಾಗಿ ನಾವು ಆಗ  ಗರಗಕ್ಕನ  ಇದ್ವಿ. ಏಕಾನ  ತಬ್ಬೇತ  ಹಂಗs ಏರಕೋತ, ಇಳಕೋತ  ನಡದಿತ್ತು. ಆ ದಿನ  ಬಹುತೇಕ  ಸೆಪ್ಟೆಂಬರ್  24  ಇರಬೇಕು;  ರವಿವಾರ  ಆ ದಿನ. ಬೆಳಗ ಮುಂಜಾನೆ  ನಾಲ್ಕು ಗಂಟೆ  ಆಗಿದ್ದೀತು. ನಾ  ಧಡಾರನs  ಎದ್ದ ಕೂತದ್ದ ನೋಡಿ  ಸುರೇಶ,” ಯಾಕ,  ಏನಾತು”  ಅಂದ್ರು. ” ನಾ  ಈ ಹೊತ್ತ  ಬೆಂಗಳೂರ  ಬಸ್ಸಿಗೆ  ಹುಕ್ಕೇರಿಗೆ ಹೋಗ್ತೀನಿ” ಅಂದೆ. ‘ ಯಾಕ ಹಿಂಗ್ಯಾಕ  ಧಿಡೀರ್ ಅಂತ” ಅಂತ  ಕೇಳಿದ್ರು. ” ಈಗ ಸಧ್ಯಾ ನನ್ನ ಕನಸಿನ್ಯಾಗ  ಏಕಾ  ಅಗದೀ  ಆರಾಮ  ಆಗಿ  ತನ್ನ ಕೆಂಪ ರಾಸ್ತಾದ್ದ (ಗೀರಿಂದು) ಸೀರಿ ಉಟಗೊಂಡ ಬಂದಿದ್ಲು ”  ಅಂದೆ. ಅದಕ ಸುರೇಶ

” ಛಲೋ ಆತಲಾ ” ಅಂದ್ರು. ” ಇಲ್ಲ ಇಲ್ಲ. ಏನೋ ಆಗೇದ. ನಕ್ಕಿ  ಏಕಾನ  ತಬ್ಬೇತ  ಬಿಗಡಾಸೇದ ; ಖಾತ್ರಿ. ನಾ ಹೋಗಲಿಕ್ಕೇ ಬೇಕು ” ಅಂತ ಹೇಳಿ  ಎದ್ದೆ. ಪಟಾಪಟಾ  ಸುರೇಶ ಅವರಿಗೆ ಮತ್ತ ಹುಡಗೂರಿಗೆ  ಚಪಾತಿ ಪಲ್ಯ ಮಾಡಿ ಇಟ್ಟು ನಾ ತಯಾರಾಗಿ  ಪೌಣೆ ಆರಕ್ಕ ಗರಗಕ್ಕ ಬರತಿದ್ದ ಬೆಂಗಳೂರು – ಚಿಕ್ಕೋಡಿ ಬಸ್ಸಿಗೆ  ನಾ  ಹುಕ್ಕೇರಿಗ ಬಂದೆ. ಮನೀ ಮುಟ್ಟಿದೆ; ಮನೀ  ಶಾಂತ ಇತ್ತು. ಒಂಥರಾ  ಸಮಾಧಾನ  ಅನಸಿದ್ರೂ ಏನೋ  ಕಸಿವಿಸಿ; ಜೀವಕ್ಕ ಹುರು ಹುರು ಅನಸ್ತಿತ್ತು. ಒಳಗ ಹೋದೆ; ಅವ್ವಾ ಒಲೀ ಮುಂದ, ಅಣ್ಣಾ  ದೇವರ ಮುಂದ. ನನ್ನ  ನೋಡಿದಾವ್ರs  ಅಣ್ಣಾ  ಬಿಗದ ಧನಿಲೆ ‘  ಬಂದೀ  ಅಕ್ಕವ್ವಾ ‘ ಅಂದ್ರು. ನಾ ಏನೂ ಮಾತಾಡದೇ ‘ ಏಕಾ ಎಲ್ಲೆ ‘ ಅಂದೆ. ಅಣ್ಣಾ ಖೋಲಿ  ಕಡೆ ಕೈ ತೋರಿಸಿದ್ರು. 

ನಾ  ಅಡರಾಸಿ  ಖೋಲಿ  ಬಾಗಲಾ ದೂಡಿ  ಒಳಗ ಹೋದ್ರ  ಏಕಾ ಒಂದೇ ಒಂದು  ತಿಂಗಳನ್ಯಾಗ ಪೂರಾ  ಹಾಸಿಗ್ಗಿ  ಹತ್ತಿ ಹೋಗಿದ್ಲು. ಅದೇ ತನ್ನ ಹಾಸಿಗೀನೇ. ಈಗಲೂ ಗಾದಿ ಮ್ಯಾಲ ಮಲಗಲಿಲ್ಲ ಏಕಾ. ನಾ ಬಾಜೂಕ ಕೂತೆ ನಮ್ಮ ಏಕಾನ ಹತ್ರ. ಬೆನ್ನ ಮ್ಯಾಲ  ಸೋತ ಕೈಯಾಡಿಸಿದ್ಲು. ಕಣ್ಣಾಗ ನೀರ ತರೂ ಅಷ್ಟ ತ್ರಾಣ  ಆಕಿಗಿದ್ದಿದ್ದಿಲ್ಲಾ; ಏನೂ ಮಾತಾಡೂ ತ್ರಾಣ  ನನ್ನಲ್ಲಿ ಉಳದಿದ್ದಿಲ್ಲ  ಏಕಾನ್ನ ನೋಡಿ. ಸುಮ್ಮ ಕೂತೆ, ಎದ್ದ ಬಂದೆ.

ಯಾರೂ ಏನೂ ಮಾತಾಡದೇ  ಸುಮ್ಮ ಒಬ್ಬರ ಮೋತಿ  ಒಬ್ಬರು  ನೋಡಕೋತ  ಕೂತಲ್ಲೇ ಕೂತ್ವಿ. ನನ್ನ ಮಗಾ ಅಟ್ಟದ ಮ್ಯಾಲ ಓದಿಕೋತ  ಕೂತಾಂವಾ  ಕೆಳಗ ಇಳದ  ಬರಲಿಲ್ಲ. ಏನೋ ವಿಚಿತ್ರ ಮೌನ ಸಾಮ್ರಾಜ್ಯ; ಸಾವಿರ ಮಾತ ಇದ್ದು ಅಲ್ಲೆ. ಅವ್ವಾನ  ಅಡಿಗಿ  ಆದಮ್ಯಾಲ  ನಾನೇ ಹಂಡೆ ಹಂಡೆ ನೀರ ಕಾಸಿ  ನನ್ನ ಎರೀತಿದ್ದ ಏಕಾಗ ಎರಡ ತಂಬಿಗಿ  ಸ್ನಾನ ಮಾಡಿಸಿ , ಸೀರಿ ಉಡಿಸಿದೆ. ಊಟಾ  ಮಾಡ್ಲೇ ಇಲ್ಲ  ಏಕಾ. ಸ್ವಲ್ಪ ಹಾಲ  ಕುಡದ ಮಲಗಿದ್ಲು.

ಆ ದಿನಾ  ಇದ್ದು ಮರುದಿನ  ಅಂದ್ರ ಸೋಮವಾರ ಮಧ್ಯಾಹ್ನ ಹೊಂಟ ನಿಂತ ನಾ  ಏಕಾನ  ಹತ್ರ ಗಳಿಗೆ  ನಿಂತು ನೋಡ್ದೆ  ಆಕೀನ್ನ. ಕಣ್ಣೀರು ಬ್ಯಾಡಂದ್ರೂ ಕೆಳಗಿಳದು. ಏಕಾ ಅಗದೀ ನಿತ್ರಾಣ  ಧನೀಲೆ  ನನ್ನ ಕೇಳಿದ್ಲು – ‘ಅಕ್ಕವ್ವಾ  ಹೋಗ್ತಿ?’ ‘ ಏಕಾ ಎರಡs ದಿನಾ ಹೋಗಿ  ಬರ್ತೀನಿ.’ ಅಂದ  ಹೊರಗ ಬಂದ ಬಿಟ್ಟೆ.

ಅಣ್ಣಾ  ನನ್ನ ಕಳಸಲಿಕ್ಕೆ  ಬಸ್ ಸ್ಟ್ಯಾಂಡ್ ಗೆ ಬಂದ್ರು. ಬರೂ ಮುಂದ ಹಾದ್ಯಾಗ, “ಅಕ್ಕವ್ವಾ ನಾ ಇನ್ನೂ ಬೆಂಗಳೂರಿಗೆ  ಅಂದ್ರ ಪ್ರಕಾಶ, ಪ್ರಮೋದ, ಆನಂದ, ಪ್ರದೀಪ ಯಾರಿಗೂ ತಿಳಸೇ ಇಲ್ಲ. ಪ್ರದೀಪನ  ಹೇಣ್ತಿ  ಸುಮಾ  ಹಡದು  ಈsಗ  ಹನ್ನೆರಡ ದಿನಾ ಆಗೇದ. ಆನಂದನ ಹೆಂಡತಿ  ಶಾರದಾ ಮೂರೂವರಿ ತಿಂಗಳ ಬಾಣಂತಿ. ಏನ ಮಾಡ್ಲಿ  ತಿಳೀವಲ್ಲತು” ಅಂದ್ರು. ” ಅಣ್ಣಾ ಹಿಂಗ್ಯಾಕ ಅಣ್ಣಾ? ತಿಳಸ್ರಿ. ಎಲ್ಲಾರೂ ಬರಲಿ ಸುಮಾ ಒಬ್ಬಾಕಿನ್ನ ಬಿಟ್ಟು. ಭೆಟ್ಟಿ ಆಗಲಿ. ಮೊಮ್ಮಕ್ಕಳು, ಮರಿಮಕ್ಕಳು ಎಲ್ಲಾರೂ  ಬರಲಿ.” ಅಂದೆ. ಅಣ್ಣಾ “ಹೂಂ” ಅಂದ್ರು, ಕಣ್ಣ ಒರಸಿಕೊಂಡ್ರು. ನಾ ಅವರ ಕಡೆ  ನೋಡಲಿಲ್ಲ; ಆ  ಧೈರ್ಯ ಇದ್ದಿದ್ದಿಲ್ಲ ನಂಗ ಆವಾಗ. ಸಾವಕಾಶ ಹೇಳ್ದೆ “ಎರಡ ದಿನಾ ಬಿಟ್ಟು ಬರ್ತೇನಿ ಅಲ್ಲೊಂಚೂರ  ಅಡಿಗಿ ವ್ಯವಸ್ಥಾ ಮಾಡಿ ” ಅಂತ ಹೇಳಿ ಸುಮ್ಮಾದೆ.

ಆ ದಿನ ಸೆಪ್ಟೆಂಬರ್  28, ಗುರುವಾರ. ಮುಂಜಾನೆ  ಗರಗ ದವಾಖಾನಿಗೆ  ಅಣ್ಣಾನ  ಫೋನ್  ಬಂತು. ಸುರೇಶ ಮನೀಗೆ ಬಂದು –  ‘ಏಕಾ  ಭಾಳ  ಸಿರೀಯಸ್  ಇದ್ದಾರಂತ. ಹುಕ್ಕೇರಿಗೆ  ಹೋಗೂಣು’ ಅಂದ್ರು. ಏನೂ ಹೇಳೂ ಶಕ್ತಿ ಇದ್ದಿಲ್ಲ ನಂಗ. ನಿಸ್ತೂಕ  ಆಗಿದ್ದ  ನಾ. ನನ್ನ ಮಕ್ಕಳು ಸ್ಕೂಲ್ ಗೆ  ಹೋಗಲಿಕ್ಕೆ ತಯಾರ ಆಗಿದ್ರು; ಹಂಗೇ ಅಲ್ಲಿಂದನೇ  ಟ್ಯಾಕ್ಸಿ  ತಗೊಂಡು  ಹುಕ್ಕೇರಿಗೆ  ಹೊಂಟ್ವಿ . ಹೂಂ  ಪೂರಾ  ಅಯೋಮಯ ಸ್ಥಿತಿಯೊಳಗ  ನಾ ಹುಕ್ಕೇರಿಗೆ  ಹೊರಟೆ…

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

August 23, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

  1. ಶೀಲಾ ಪಾಟೀಲ

    “ತಣ್ಣೆಲ ಹಾದಿಯಲ್ಲಿ” 15 ಅಂಕಣಗಳನ್ನು ಓದುತ್ತ ಸಮಯ ಸರಿದದ್ದೇ ಗೊತ್ತಾಗಿಲ್ಲ. ಏಕಾ ಅವರ ಚಟುವಟಿಕೆಯ ಜೀವನದ ಎಲ್ಲ ಹೊಳಹುಗಳ ಸುಂದರ, ಮನಮುಟ್ಟುವ ಅಂಕಣಗಳು ನನಗೆ ಜೀವನವೆಂಬ ಪಯಣದ ಸುಖ ದುಃಖವನ್ನು ಎದುರಿಸಿ, ಹೇಗೆ ಸುಂದರವಾದ ಬದುಕು ಅನುಭವಿಸುವುದು ಎಂಬ ಸಂದೇಶ ತಿಳಿಸಿವೆ. ತುಂಬು ಜೀವನ ನಡೆಸಿದ ಏಕಾ ತಮ್ಮ ಕೈಲಾಗುವವರೆಗೆ ಎಲ್ಲರ ಲಗ್ನ, ಬಾಣಂತಿತನ,ಮುಂಜಿವೆ ಮಾಡಿ, ತನ್ನ ನೋವು ಬೇರೆಯವರಿಗೆ ತೋರದಂತೆ ನಗುನಗುತ್ತ ಎಲ್ಲ ಕಾರ್ಯಗಳು ಸುಸೂತ್ರವಾಗಿ ನಡೆಯುವಂತೆಮಾಡಿ ಸಮಯದೊಂದಿಗೆ ಸುರಿಯುತ್ತಿರುವ ದೃಶ್ಯ ಅಸಹನೀಯ…..ಹೃದಯ ಬಡಿತ ಹೆಚ್ಚಾಗುತ್ತಿದೆ….

    ಪ್ರತಿಕ್ರಿಯೆ
    • Sarojini Padasalgi

      ಶೀಲಾ ನಿಮಗೆ ಅನಂತ ಧನ್ಯವಾದಗಳು. ಒಂದೊಂದು ಹೆಜ್ಜಿಯೋಳಗೂ ಏಕಾನ ನೆನಪು; ನೆರಳು. ಆಕಿ ಕಡಿಂದ ಕಲಿಯೂದು ಭಾಳ ಇತ್ತು. ಈಗ ಕಲ್ತದ್ದನ್ನ ಎಷ್ಟರ ಮಟ್ಟಿಗೆ ಅಳವಡಿಸಿಕೊಂಡೆನೋ ಗೊತ್ತಿಲ್ಲ. ಆದರ ಯಾವಾಗಲೂ ಆಕಿ ಜೋಡಿ ದಿನಗಳು ನನಗೆ ತಣ್ಣೆಳಲ ಹಿತಾ ಕೊಡೂದ ಅಂತೂ ಸೋಳಾ ಆಣೆ ಸತ್ರಾಪೈ ಖರೇ ಶೀಲಾ.

      ಪ್ರತಿಕ್ರಿಯೆ
  2. Shrivatsa Desai

    “ಸರಿಯೂ ಸಮಯಕ್ಕ ಯಾರದೇನ ಭಿಡೆ” this sentence and the crows in the cartoon are ominous! I was dreading this stage of Eka’s life. But her great personality didn’t go without teaching thd author ond final time as shd appreciated the grand daughter in law more than the author: ಬಲೆ ಪೋಲ್ಮಿ ಕೆಲಸ ಅಕಿದು ನೋಡ ಅಕ್ಕವ್ವಾ” ! For fifteen episodes Eka has been part of the ardent followers and readers of this series. This episode steels them for what is yet to come!

    ಪ್ರತಿಕ್ರಿಯೆ
  3. Shrivatsa Desai

    “ಸರಿಯೂ ಸಮಯಕ್ಕ ಯಾರದೇನ ಭಿಡೆ” this sentence and the crows in the cartoon are ominous! I was dreading this stage of Eka’s life. But her great personality didn’t go without teaching the author Sarojini, one final time as she appreciated the grand daughter in law more than the author: “ಬಲೆ ಪೋಲ್ಮಿ ಕೆಲಸ ಅಕಿದು ನೋಡ ಅಕ್ಕವ್ವಾ”! For fifteen episodes Eka has been part of the ardent followers and readers of this series. This episode steels them for what is yet to come!
    ಶ್ರೀವತ್ಸ ದೇಸಾಯಿ

    ಪ್ರತಿಕ್ರಿಯೆ
    • Sarojini Padasalgi

      Yes ofcourse Shrivatsa Desai Sir; her each and every action had a lesson. Really I wonder how sensible she was.
      As you said I have struggled hard to control myself while writing this.episode.
      Thanks a lot for your beautiful and inspiring response.

      ಪ್ರತಿಕ್ರಿಯೆ
  4. anil kalagi

    ಜೀವನ ಪ್ರೀತಿಯೊಂದಿಗೆ,ಆದರ್ಶ ಜೀವನ ನಡೆಸಿದ ಏಕಾತಾಯಿಯವರು
    ಯಾವ ಸ್ವಾತಂತ್ರ್ಯ ಹೋರಾಟಗಾರರಿಗಿಂತ ಕಮ್ಮಿ ಇಲ್ಲ.ಅವರ ಬದುಕನ್ನು ಯಥಾವತ್ತಾಗಿ ಉತ್ತರ ಕರ್ನಾಟಕ ಭಾಷೆಯ ಸೊಗಡಿನೊಂದಿಗೆ ಚಿತ್ರಿಸಿದ ಲೇಖಕಿಯವರಿಗೆ ಧೀರ್ಘದಂಡ ನಮಸ್ಕಾರಗಳು.
    ಅನೀಲ.ಕಾಳಗಿ ಚಿತ್ತಾಪುರ ( ಕಲಬುರಗಿ ಜಿಲ್ಲೆ

    ಪ್ರತಿಕ್ರಿಯೆ
    • Sarojini Padasalgi

      ಅನಂತ ಧನ್ಯವಾದಗಳೊಂದಿಗೆ ನಮನಗಳು ಅನಿಲ ಸರ್. ನಮ್ಮ ಏಕಾನ ಜೀವನ ಯಾವ ಹೆಚ್ಚುಗಾರಿಕೆ, ಹೆಗ್ಗಳಿಕೆಗೆ ಜಾಗವೇ ಇಲ್ಲದ ಸಾದಾ ಸರಳ ಜೀವನ. ಆದರೆ ಅಷ್ಟೇ ಉದಾತ್ತತೆ ಆಕೆಯ ವ್ಯಕ್ತಿತ್ವದಲ್ಲಿ. ಅಷ್ಟೇ ಆಪ್ತತೆ. ಆಕೆ ನಮ್ಮನೆಗೆ ಗಟ್ಟಿ ಮುಟ್ಟಾದ ಬೇರು; ಅದರ ಮೇಲೆ ಹಬ್ಬಿ ನಿಂತಿರುವ ನಮ್ಮ ಕುಟುಂಬ. ನಿಮ್ಮ ಪ್ರತಿಕ್ರಿಯೆ ನನಗೆ ಸ್ಪೂರ್ತಿ ಸರ್.

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: