ಸರೋಜಿನಿ ಪಡಸಲಗಿ ಅಂಕಣ- ಬಿಸಿಲಿನ ಝಳಾ ಇಣಕಲಿಕ್ಕೆ ಸಂದs ಬಿಟ್ಟಿಲ್ಲ…

ಅವಧಿ’ ಓದುಗರಿಗೆ ಸರೋಜಿನಿ ಪಡಸಲಗಿ ಅವರು ಈಗಾಗಲೇ ಸುಪರಿಚಿತ. ಅವರ ಸರಣಿ ಬರಹ ‘ಒಬ್ಬ ವೈದ್ಯನ ಪತ್ನಿ ಅನುಭವಗಳ ಗಂಟು ಬಿಚ್ಚಿದಾಗ..’ ಜನಪ್ರಿಯವಾಗಿತ್ತು.

ಈಗ ಈ ಸರಣಿ ‘ಡಾಕ್ಟರ್ ಹೆಂಡತಿ’ ಹೆಸರಿನಲ್ಲಿ ಬಹುರೂಪಿಯಿಂದ ಪ್ರಕಟವಾಗಿದೆ.

ಈ ಕೃತಿಯನ್ನು ಕೊಳ್ಳಲು –https://bit.ly/3sGTcvg ಈ ಲಿಂಕ್ ಕ್ಲಿಕ್ ಮಾಡಿ

ಅಥವಾ 70191 82729ಗೆ ಸಂಪರ್ಕಿಸಿ

ಸರೋಜಿನಿ ಪಡಸಲಗಿ, ಮೂಲತಃ ಬೆಳಗಾವಿ ಜಿಲ್ಲೆಯ ಹುಕ್ಕೇರಿಯವರು. ಮದುವೆಯಾದ ಮೇಲೆ ಧಾರವಾಡದವರಾದರೂ ಈಗ ಬೆಂಗಳೂರು ವಾಸಿ. ಪದವೀಧರೆ, ಗೃಹಿಣಿ. ಮೊದಲಿನಿಂದಲೂ ಸಂಗೀತದ ಹುಚ್ಚು ವಿಪರೀತ. ಯಾವುದೇ ಪದ ಸಿಕ್ಕರೂ ಅದನ್ನು ಸಂಯೋಜಿಸಿ ಹಾಡುವ ಅತೀವ ಆಸಕ್ತಿ. ಕ್ರಮೇಣ ಅದು ಭಾವಗೀತೆಗಳನ್ನು ಸ್ವಂತವಾಗಿ ಬರೆದು ಸಂಯೋಜಿಸಿ ಹಾಡುವತ್ತ ಕರೆದೊಯ್ದಿತು.

ಎರಡು ಕವನ ಸಂಕಲನಗಳು ಪ್ರಕಟವಾಗಿವೆ- ‘ಮೌನ ಮಾತಾದಾಗ’ ಮತ್ತು ‘ದೂರ ತೀರದ ಕರೆ’. ಇನ್ನೊಂದು ಸಂಕಲನ ‘ಹಳವಂಡ’ ಹಾಗೂ ಅವರೇ ರಚಿಸಿದ ಸಂಪ್ರದಾಯದ ಹಾಡುಗಳ ಸಂಕಲನ ‘ತಾಯಿ – ಮಗು’ ಅಚ್ಚಿನಲ್ಲಿವೆ. ಈ ಸಂಪ್ರದಾಯದ ಹಾಡುಗಳು 18 ಕಂತುಗಳಲ್ಲಿ ‘ರೇಡಿಯೋ ಗಿರ್ಮಿಟ್’ನಲ್ಲಿ ಪ್ರಸಾರ ಆಗಿವೆ. ಆಕಾಶವಾಣಿ ಬೆಂಗಳೂರು ಹಾಗೂ ಧಾರವಾಡದಿಂದಲೂ ಸಂದರ್ಶನದೊಂದಿಗೆ ಪ್ರಸಾರ ಆಗಿವೆ.

ಅವರ ಇನ್ನೊಂದು ಮನ ಕಲಕುವ ಅಂಕಣ – ತಣ್ಣೆಳಲ ಹಾದಿಯಲ್ಲಿ…

27

ನನಗ  ಈಗೀಗ  ನಮ್ಮ ಅವ್ವಾಗ  ಜಡ್ಡ  ಯಾವಾಗ ಜೋರ ಆತಲಾ ಆವಾಗಿಂದ ಈ ದಿಕ್ಕ ದೆಸಿ ಇಲ್ಲದ ವಿಚಾರಗೋಳ ಸೋಬತಿ  ಭಾಳ ಖಾಸ ಆಗಿತ್ತು. ಗಟ್ಟಿ ಸುತಗೊಂಡ ಬಿಡ್ತಿದ್ದು ಸಡ್ಲ ಬಿಡಧಂಗ. ಆ ಹೊತ್ತ ಸುರೇಶ  ರಾತ್ರಿ  ಫೋನ್ ಮಾಡಿದ್ರಲಾ ಮುಂದ ಒಂದ ತಾಸಿನ್ಯಾಗ  ಬಂದs  ಬಿಟ್ರ ಅವರು ನಾ  ಇನ್ನೂ ಅದs  ತಂದ್ರಿಯೊಳಗ  ಇದ್ದಾಗನs. ಇನ್ನೇನ  ಒಂದ  ತಾಸ ದೀಡ  ತಾಸಿಗೆ  ಹೊಂಡೂದೇ  ಇತ್ತು ಇಂಟರ್ ಸಿಟಿ ರೈಲಿಗಾದ್ರೂ. ಅದಕ  ಬಸ್ಸಿಗೆ  ಹೋಗೂ ವಿಚಾರ ಕೈಬಿಟ್ವಿ. ಎಲ್ಲಾರದು ಅಷ್ಟ ಸ್ನಾನಾ-ಗೀನಾ ಬಗಿಹರಿಸಿ ಚಹಾ ಕುಡ್ಯಾವ್ರ  ಕುಡದ  ತಯಾರಾಗೂದ್ರಾಗ  ಹೊರಡೂ  ವ್ಯಾಳ್ಯಾ  ಆಗೇ ಬಿಟ್ತು. ಟ್ರೇನು ಹೊಂಟ  ಹಾಂಗ  ನನ್ನ ಮನಸೂ ದಿಕ್ಕೆಟ್ಟ  ಓಡ್ಲಿಕ್ಹತ್ತು.  

ಈ  ಜಗದಾಗ ಏನರೇ ಅನಿಶ್ಚಿತ ಅಂಬೂದ ಏನರೇ ಇದ್ರ ಅದು ಮನಶ್ಯಾನ ಬದುಕ ಒಂದೇ. ಈ ಪ್ರಕೃತಿಯೊಳಗ ಎಲ್ಲಾ  ಇಷ್ಟ ‌ ಠರಾವಿಕ  ರೀತೀಲೆ ನಡ್ಯೂದ  ನೋಡಿ  ನಂಗ ಖರೇನs ಖುಷಿ  ಜೋಡಿ ಅಗಾಧನೂ  ಅನಸ್ತದ. ಅದರ  ಹಾಲಚಾಲಿಯೊಳಗ ಎಲ್ಲೂ ಏನೂ  ತಪ್ಪೂ  ಚಾನ್ಸೇ ಇಲ್ಲ. ಮಳಿಗಾಲ ಮುಗ್ಯೂದಕ್ಕs ತಡಾ ಇಲ್ಲದ ಚಳಿಗಾಲ ಸುರುನ. ಅದೂ ಠರಾವಿಕ  ಗೊತ್ತಿರೂ  ವ್ಯಾಳ್ಯಾಕ್ಕ ಸುರು  ಆಗತದ. ಆದರ  ಮನಶ್ಯಾನ ಬದುಕ ಯಾಕ ಇಷ್ಟ ಅನಿಶ್ಚಿತನೋ ಏನೋ!  ಸಾವು  ನಿಶ್ಟಿತನs. ಹುಟ್ಟಿ  ಬಂದ ಮ್ಯಾಲ ಸಾವೂ ನಕ್ಕೀನೆ. ಆದ್ರ  ಅದರ  ಬರೋಣನs ಭಾಳ ಅನಿಶ್ಚಿತ. ಯಾವಾಗ  ಅಂತ  ಗೊತ್ತs  ಆಗಧಂಗ. ಈ ಕಣ್ಣಾ ಮುಚ್ಚಾಲೆಯಾಟದಾಗನ  ಒಂದು  ಮೋಹಕ  ಮಾಯಾ  ವ್ಯಾಮೋಹ  ಅಂಬೂದನ  ಇಟ್ಟಿರತಾನ  ಆ  ಮ್ಯಾಲಿನಂವಾ. ಅದs  ಬದುಕು ಗೊತ್ತಿರತದ; ಇಂದಿಲ್ಲ  ನಾಳೆ ಹೊರಡೂದs ‌‌‌‌‌ಅಂತ. ಆದರೂ  ಮನಶ್ಯಾ  ಏನ ಅಗದೀ  ಇಲ್ಲೇ  ತಾ  ಕಾಯಂ  ಇರಾವ್ರ ಹಂಗ  ಎಷ್ಟ ಮಟಾ  ಜಂಜಾಟದಾಗ ಮುಳಗ್ತಾನ  ಅಂತ  ನಮ್ಮನ್ನೂ  ಹಿಡ್ಕೊಂಡ  ಮತ್ತ, ಬಲೆ  ಆಶ್ಚರ್ಯ ಅನಸ್ತದ.  ಇದು  ಅವಂದೇ  ಸ್ವಾರ್ಥ ಅಂತನs  ನಾ ಅಂತೀನಿ. ತನ್ನ ಸೃಷ್ಟಿ ಕಾಯಂ ತರೀಕ  ವ್ಯವಸ್ಥಿತ ನಡೀಬೇಕು ಅಂತ, ಅದs ಅಗದಿ ಥೇಟ್  ನಾವು ನಮ್ಮ ಮಕ್ಕಳು  ಛಂಧಂಗ ಚಿರಂಜೀವಿ  ಆಗಿ  ಬಾಳಲಿ  ಅಂತ ಕಾಳಜಿ ತಗೋತೀವಲಾ  ಹಂಗs ಹೂಬೇಹೂಬ.  ವಿಚಿತ್ರ ಅನಸ್ತದ  ಎಷ್ಟ ಛಂದ ಆಟಾ ಹೂಡ್ತಾನ ‌‌‌ಅಂತ. ಹೀಂಗ  ನೂರಾ ಎಂಟ ವಿಚಾರ  ಓಡ್ಲಿಕ್ಕಹತ್ತಿದ್ವು ಆ ರೇಲ್ವೆ  ಎಷ್ಟ ಜೋರ ಓಡ್ಲಿಕ್ಹತ್ತಿತ್ತಲಾ  ಅಷ್ಟ  ಜೋರಲೆ.

ನನ್ನ ಇದಿರಿಗೆ  ಕೂತ  ಸುರೇಶ ತಮ್ಮ ಬಾಜೂಕನs ಕೂತ  ತಮ್ಮ ಅಣ್ಣನ ಜೋಡಿ ಮಾತಾಡಕೋತ  ಕೂತಿದ್ರು, ಮದವಿ ತಯಾರಿ ಬಗ್ಗೆ. ಇನ್ನೇನ  ಮದವಿ  ಹದಿನೈದ ದಿನಾ ಇತ್ತು, ಅಷ್ಟs. ಶಶಾಂಕನ ಮುಂಜಿವಿ ಆದಮ್ಯಾಲ  ಒಂದ ವಾರ ಬಿಟ್ಟು ಇತ್ತು. ನಾನೂ ನಮ್ಮ ನೆಗೆಣ್ಣಿ  ಜೋಡಿ  ಮಾತಾಡ್ಲಿಕ್ಹತ್ತಿದ್ದೆ; ಖಾಲಿ ಫುಕಟ ಮಾತು. ಅದರಾಗೇನ  ಜೀವಾನs  ಇದ್ದಿದ್ದಿಲ್ಲಾ. ಏನೂ ಅರ್ಥನೂ  ಇದ್ದಿದ್ದಿಲ್ಲಾ  ಆ  ಮಾತಿನ್ಯಾಗ.  ಆದರ ಮಗಳ ಮದವಿ  ಆಮಂತ್ರಣ  ಕೊಟ್ಟ ಹೋಂಟಿದ್ದ  ಅವರ ಜೋಡಿ  ನಕ್ಕೋತ  ಮಾತಾಡಿ, ನಕ್ಕೋತ ಕಳಸೂದು  ವಾಜ್ಮಿ ಮತ್ತ ಬರೋಬ್ಬರ  ರಿವಾಜು. ಅದಕs ಶಕ್ಯತೋ  ಆ ಥರಾ ಪ್ರಯತ್ಗ  ನಡದಿತ್ತು ನಂದು.  ಬೇಕಾದಷ್ಟ ತ್ರಾಸ  ಇರಲಿ  ಅದನ್ನ  ನುಂಗೂದು,  ನುಂಗಿ ನಗೂ  ಅಂಥಾ  ಆ ಬಾಬ್ತು ಎಲ್ಲಾ ಏಕಾನ್ನ ನೋಡಿ ನೋಡಿ ಕಲತದ್ದು. ಅದರಂಥಾ   ಕಠಿಣ ಕೆಲಸ ಆಕಿಗೇ ಗೊತ್ತು ಹೆಂಗ ಸಂಭಾಳಿಸಿ ನಿಸ್ತರಿಸೂದು ಅಂತ.

ಅಳೂದ  ಭಾಳ ಸರಳ ಕೆಲಸ. ಅತ್ತು ಕಣ್ಣೀರ ಜೋಡಿ  ಎಲ್ಲಾ  ಹರದ  ಹೋಗಿ ಪೂರಾ ಖಾಲಿ. ಹಿಂಗಾಗಿ  ಹಗರ ಅನಸೀತು. ಹಂಗs  ನುಂಗೂ ಬಹುದು, ಕಹಿ ವಿಷಾ ಸುದ್ಧಾ. ಆದರ ನುಂಗಿ ನಗೂದ  ಅಂದ್ರ ಬೆಂಕಿ ಹಾಯೂ  ಅಂಥಾ ಕೆಲಸಾ. ಪೂರಾ ಸುಡೂದೂ  ಇಲ್ಲ; ಆದರ ಬ್ರಹ್ಮಾಂಡನs  ಮರಗೂ ಅಂಥಾ  ಸೀಮೀನs  ಇಲ್ಲದ  ಯಾತನಾ. ಅದೂ  ಕಾಣಧಂಗ ನಗಬೇಕು; ಹುಚ್ಚ ಹಿಡಧಂಗ ನಗಬೇಕು. ಅಂಥಾ ವಿಷಮ ಘಳಿಗಿ  ಅದು. ನಾ ಈಗ  ಅದನ್ನs  ಮಾಡ್ಲಿಕ್ಹತ್ತಿದ್ದೆ.  ನನ್ನೊಳಗ  ನಡದಿದ್ದ ವಿಚಾರಗಳದ  ಮಾತ – ಮಾತಿನ ಹಾಕ್ಯಾಟದ  ಧನಿ  ಹೊರಗ  ಕೇಳಧಂಗ  ಜೋರ ಜೋರಲೆ ನಕ್ಕೋತ  ದಂಡೀನs  ಇಲದಂಥಾ  ಮಾತಿನ್ಯಾಗ ಮುಣಗಿದ್ದೆ.

ಅಬ್ಬಬ್ಬಾ! ಕಡೀಕ ಒಮ್ಮೆ ಬೆಂಗಳೂರ  ಬಂತು. ಟ್ರೇನ  ಇಳದು ನಮ್ಮ ಭಾವ – ನೆಗೆಣ್ಣಿ   RPC  ಲೇಔಟ್ ನ್ಯಾಗ  ಇದ್ದ ತಮ್ಮ ಮನಿಗೆ  ಹೋದ್ರು. ನಾವೂ  ನಮ್ಮ ಹಾದಿ ಹಿಡದ್ವು.  ಆಟೋ ಹೊಂಟಿತ್ತು  ನಮ್ಮ ಮನಿ  ಕಡೆ. ನಾ  ಸುರೇಶ ಅವರನ  ಯಾವ  ಏಚಪೇಚ  ಇಲ್ಲದs  ಕೇಳೇ ಬಿಟ್ಟೆ -“ನೀವು  ಹೊತ್ತಲ್ಲದ ಹೊತ್ತಿನ್ಯಾಗ  ಧಡಪಡಿಸಿ  ಬಂದಾಗನ  ನಿಮ್ಮ ಮಾರಿ  ಪುಟ್ಟ ಪೂರಾ  ಓದೀನ  ನಾ. ಹೇಳ್ರಿ ಅಣ್ಣಾ ಎಷ್ಟೊತ್ತಿಗೆ ಹೋದ್ರು ಅಂಬೂದನ” ಅಂತ. ಸುರೇಶ ಒಂದ ಗಳಿಗಿ ಮೋತಿ ಕೆಳಗ  ಹಾಕೊಂಡ  ಕೂತ್ರು. ನಾ ಹೆಂಗ  ಅಂಬೂದು  ಅವರಿಗೆ  ಗೊತ್ತ  ಇದ್ದದ್ದ. ಅದಕ ಏನೂ  ತಿರುವ ಮುರುವ  ಮಾತು, ಸುಳ್ಳ ಸಮಾಧಾನದ  ಮಾತು  ಯಾವದೂ ಹೇಳದs ‌‌‌‌‌‌‌‌‌‌‌‌‌‌ ಅವರೂ  ಅಷ್ಟs  ಗಂಭೀರ ಆಗಿ ಸರಳ  ಹೇಳಿದ್ರು.”ರಾತ್ರಿ 1.20ಕ್ಕ  ಹೋದ್ರಂತ” ಅಂದ್ರು. ನಾ  ಮತ್ತೇನೂ  ಕೇಳಲೂ ಇಲ್ಲ; ಅವರೂ ಏನೂ  ಹೇಳಲೂ ಇಲ್ಲ.  ನಮ್ಮ ಆಟೋ  ಅಣ್ಣಾನ  ಮನಿ ತಿರುವಿಗೆ  ಹೊಳ್ಳಿತು.  ಗೇಟ್ ಮ್ಯಾಲ  ಗದ್ದಾ ಊರಿ  ನನ್ನ ದೊಡ್ಡ ಮಗಾ ನಿಂತಿದ್ದ, ನಾವು  ಬರೋ ಹಾದಿ  ನೋಡ್ಕೋತ. ಆಟೋ  ಮನಿ ಮುಂದ  ನಿಂತು.  ಮನಿ  ಬಾಗಲಾ  ನೋಡಕೋತ ಕೆಳಗ  ಇಳದೆ  ಹಗರಕ. ಖರೆ ವಿಚಿತ್ರ  ಅಂದ್ರ ಮನಿ ಬಾಗಲಾ ಹಾಕೇದೋ  ತಗದದೋ ಅನ್ನೂ  ಹಂಗ ಅಲ್ಲೇನೂ  ಕಾಣಲೇ ಇಲ್ಲ ನಂಗ, ಅದೆಲ್ಲಾ  ಪೂರಾ ಖಾಲಿನs  ಖಾಲಿ  ಥೇಟ್ ನನ್ನ ತಲೀ ಹಂಗ. ತಡಾಬಡಾ  ಮಾಡಕೋತ  ಒಳಗ ಕಾಲಿಟ್ಟೆ ನಾ. ಅಲ್ಲೆ  ಇದರಿಗೆ  ದಿವಾನ ಮ್ಯಾಲ  ಅಣ್ಣಾ ಅಗದಿ  ಶಾಂತ  ಮಲಗಿದ್ರು. ‘ಬಾ  ಅಕ್ಕವ್ವಾ’ ಅನ್ಲಿಲ್ಲ. ‘ರೇಲ್ವೆ  ಫಾಸ್ಟ್ ಇತ್ತೇನ ಅಕ್ಕವ್ವಾ’ ಅನಲಿಲ್ಲ. ‘ಚಹಾ ಮಾಡ್ತಿ ಏನ  ಅಕ್ಕವ್ವಾ’ ಅನ್ಲಿಲ್ಲ. ಈ ಅಕ್ಕವ್ವ  ಬಂದ ಚಹಾ ಮಾಡಿ ಕೊಡೂಕಿಂತಾ ಮೊದಲs, ಆ  ರೇಲ್ವೆಕಿಂತಾ  ಫಾಸ್ಟ್ ಆಗಿ  ಅವರು ಹೋಗಿ  ಬಿಟ್ಟಿದ್ರು ತಮ್ಮ ಠಾಂವ ಠಿಕಾಣಕ್ಕ.

ನಮ್ಮಣ್ಣ ಪ್ರಕಾಶ  ಅಮೇರಿಕಾಕ್ಕ ಹೋಗಿದ್ದ. ಈಗ  ಅಣ್ಣಾಂದು  ಸುದ್ದಿ ತಿಳೀತಿದ್ಧಂಗ ವಾಪಸ್  ಹೊರಟಿದ್ದ. ವಿದ್ಯಾನೂ  ಇನ್ನೂ ಬಂದಿದ್ದಿಲ್ಲ. ನಾನು, ಪ್ರಮೋದ,  ಆನಂದ, ಪ್ರದೀಪ ಅಷ್ಟೇ  ಇದ್ದಿವು. ಸೊಸೆಯಂದಿರು -ಮೊಮ್ಮಕ್ಕಳು ಎಲ್ಲಾ ಇದ್ರು. ಮನಿ  ತುಂಬ ಮಂದಿ.  ಆದ್ರ ಹಿಂಗ್ಯಾಕೋ ಏನೋ; ಅಣ್ಣಾ  ಒಬ್ರ ಹೋಗಿದ್ದು, ಇಲ್ಲದ್ದು  ನಮಗ  ಒಪ್ಪೂದು  ಅಜೀಬಾತ  ಸಾಧ್ಯ ಇದ್ದಿದ್ದಿಲ್ಲ. ಅವ್ವಾ ಮತ್ತ ಏಕಾ ಹೋದಾಗಲೂ ಹಿಂಗೇ  ಆಗಿತ್ತು. ಹೋಗಾವ್ರ ಜಾಗಾ ಮತ್ತೊಮ್ಮೆ ತುಂಬೂದಿಲ್ಲ  ಅನೂದs  ಒಂದ  ಅಸಹಾಯಕತೆ ನಿರ್ಮಾಣ ಮಾಡಿ  ಕೈಕಾಲಾಗಿನ  ತ್ರಾಣನ  ಸೋರಿ  ಹೋಧಂಗ  ಆಗಿಬಿಡ್ತದ. ಅದs ನಡದಿತ್ತ ಈಗೂ.

ನಾ ಬರಧಂಗ ನನ್ನ  ಮನಸಿನ್ಯಾಗ  ಏನ  ಆ ಹುಳದ್ದ  ಕೊರತ  ಸುರು ಆಗಿತ್ತಲಾ  ಅದು ದೋನಸೆ ಟಕ್ಕೆ  ಖರೆ ಇತ್ತು. ಅಣ್ಣಾ  ತಾಂವೇ ತಮ್ಮ  ಅಂಗೈ  ನೋಡಿ ನೋಡಿ  ಅಭ್ಯಾಸ ಮಾಡಿ, ಸಂಖ್ಯಾಶಾಸ್ತ್ರದ  ಪ್ರಕಾರನೂ ಲೆಕ್ಕಾ  ಹಾಕ್ಯಾರ. ಏನೇನೋ  ಕೂಡಿಸಿ, ಕಳದು ಮಾಡಿ  ಉತ್ತರಾ ತಗದಾರ. ಅದಕ‌  ಗಡಿಬಿಡಿಲೆ  ಶಶಾಂಕನ ಮುಂಜಿವಿ  ಠರಾಸ್ಯಾರ. ಆದರ ಗಾಡಿ  ಭರದಾಂಡ ಹೊಂಟಿತ್ತು: ನಿಂದರಲಿಲ್ಲ  ಅಲ್ಲಿ ತನಕಾ. ಥೋಡೆ  ಅದರ ವೇಗರೇ ಕಡಿಮಿ ಆಗಿದ್ರೂ  ಭಂಗಾರಕಿಂತಾ ಕೆಂಪ  ಆಗ್ತಿತ್ತು.

ಅಂದ  ನವರಾತ್ರಿ  ಪಾಡ್ಯ. ಅಣ್ಣಾ  ದೇವರ  ಮನಿ ಎಲ್ಲಾ ಸ್ವಚ್ಛ ಹಂಗೆ  ತಿಕ್ಕಿ ತೊಳದ  ಚೊಕ್ಕ ಮಾಡ್ಯಾರ. ನವರಾತ್ರಿ  ಹಾಕ್ಯಾರ. ನಮ್ಮಲ್ಲಿ  ಒಂದ  ತುಪ್ಪದ್ದು, ಒಂದ ಎಣ್ಣೀದು  ನಂದಾದೀಪ  ಇಡೂ ಪದ್ಧತಿ  ಅದ  ನವರಾತ್ರಿ ಒಳಗ. ಹಂಗs  ಇಟ್ಟಾರ. ಪೂಜಿ  ಮುಗಿಸಿ  ಆನಂದನ ಹೆಂಡತಿ  ಶಾರದಾನ್ನ  ತೀರ್ಥಾ  ತಗೋಳಿಕ್ಕೆ  ಕರದಾರ. ಆಕಿಗೆ  ತೀರ್ಥಾ ಕೊಡೂ ಮುಂದ ಅಣ್ಣಾ ಒಂದ  ಸಣ್ಣ  ಗಂಧದ  ಕಟಿಗಿ  ತುಂಡ  ಅಕಿಗೆ  ತೋರಿಸಿ, “ಶಾರದಾ,  ನೋಡ ಇಲ್ಲೆ. ಈ ಸಣ್ಣ ತುಂಡು ಒಂದು ಗಂಧದ  ಕಟಿಗಿದು  ನಂಗ  ಬೆಳವಿ ತ್ವಾಟದ ಹಾದ್ಯಾಗ  ಸಿಕ್ಕಿತ್ತು. ಇದರಾಗಿಂದ  ಒಂದ  ಚೂರು ತುಕಡಿ  ಏಕಾ  ಹೋದಾಗ ಅಕಿಗೆ  ಹಾಕೀನು; ಇನ್ನೊಂದ  ತುಕಡಿ  ಕುಸುಮಾ  ಹೋದಾಗ ಆಕಿಗೆ ಹಾಕೀನು. ಇದೇನ  ಈ  ಸಣ್ಣ ತುಂಡ  ಅದ ನೋಡು  ಇದು ನನ್ನ  ಸಲುವಾಗಿ ಹಾಂ. ಇದನ ಇಲ್ಲೆ  ದೇವರ  ಮಂಟಪದ  ಬಾಜೂಕನs  ಇಟ್ಟೀರತೀನ  ನೋಡ ಏನವಾ” ಅಂತ ಹೇಳಿದ  ಕೂಡಲೇ ಆಕಿ  ಘಾಬರಾಸಿ, “ಅಣ್ಣಾ, ಏನೇನರೇ ಮಾತಾಡಬ್ಯಾಡ್ರಿ. ಅಡಿಗಿ ಆರತದ  ಊಟಾ ಮಾಡೂಣ  ನಡೀರಿ”  ಅಂತ ಅಂದಾಳ. ಆ ಹೊತ್ತ ಅಣ್ಣಾಗ  ಅಟ್ಟದ ಮ್ಯಾಲ  ಹೋಗೂದ ಆಗಿಲ್ಲಾ. ಭಾಳ ಥಕಾವಟ  ಆಧಂಗಾಗಿತ್ತು. ಅದಕ  ಶಾರದಾ ಅಲ್ಲೇ  ಕೆಳಗನs  ಅವರಿಗೆ  ಊಟಕ್ಕ ಹಾಕಿದ್ಲು. ಊಟಾ ಮಾಡಿ  ಅಣ್ಣಾ  ಮಲಕೊಂಡ  ಎದ್ರಂತ. ಆರಾಮ  ಇದ್ರು.

ರಾತ್ರಿ  ಹಸಿವಿಲ್ಲ ಅಂತ ಊಟಾ  ಬ್ಯಾಡ ಅಂತ ಹೇಳಿ  ಒಂದ  ಕಪ್ಪ  ಚಹಾ ಮಾಡಿಸಿಕೊಂಡಾರ  ಶಾರದಾನ  ಕಡೆ. ಚಹಾ ಅಷ್ಟ  ಕುಡದ  ಮಲಗ್ಯಾರ. ರಾತ್ರಿ  ಎರಡ – ಎರಡೂವರಿ ಅಷ್ಟ ಹೊತ್ತಿಗೆ  ಜೋರ  ಎದಿನೋವ  ಬಂದದ. ತಾಬಡತೋಬ ಅಣ್ಣಾನ್ನ ಹಾಸ್ಪಿಟಲ್ ಗೆ ಕರ್ಕೊಂಡು ಹೋದ್ರು.  ಮನಿಂದ  ಬಿಡೂ  ಮುಂದ  ಕಾರಿನ್ಯಾಗ  ಕೂಡಸೂ  ತನಕಾ ಆ ನೋವು, ಆ ಮಬ್ಬಿನ್ಯಾಗನೂ  ಒಂದs  ಮಾತಂತ  ಅಣ್ಣಾಂದು. “ಕೂಸಿನ  ಮುಂಜಿವಿ  ನಿಂದರತದೋ ಆನಂದಾ” ಅಂತ. ಅವರನ ಸಮಾಧಾನ ಮಾಡಿ ಅಡ್ಮಿಟ್ ಮಾಡ್ಯಾರ. ಅಷ್ಟೇ. ಆಮ್ಯಾಲ ಯಾರನೂ ಐಸಿಯು ಒಳಗ  ಬಿಟ್ಟಿಲ್ಲ. “ನಿಮ್ಮ ತಂದೆ ಆರಾಮ  ಇದ್ದಾರ” ಅಂತನs  ಹೇಳ್ಕೋತ  ಬಂದಾರ. 

ನವರಾತ್ರಿ  ಪಾಡ್ಯದ  ದಿನಾ  ರಾತ್ರಿ ಅಡ್ಮಿಟ್ ಆಗಿದ್ರು  ನಮ್ಮ ಅಣ್ಣಾ. ಮರುದಿನಾ  ಅಂದ್ರ ಬಿದಿಗಿ  ದಿನಾನೂ  ಅಣ್ಣಾ ಐಸಿಯು ಒಳಗೇ ಇದ್ರು. ಖರೆ  ಯಾರನೂ  ಒಳಗ  ಬಿಡಲೇ ಇಲ್ಲ. ಭಾಳ  ಸಲ ಕೇಳಿದಾಗ “ನಿಮ್ಮ ತಂದೆಯವರ ಪಕ್ಕದ  ಬೆಡ್ಡ್‌ನ  ಪೇಷಂಟ್ ಸ್ಥಿತಿ ಸರಿ  ಇಲ್ಲ. ಅವರಿಗೆ ತೊಂದರೆ ಆಗ್ತದೆ. ಅದ್ಕೇ ಯಾರೂ  ಒಳಗೆ  ಬರೋದು ಬೇಡ”  ಅಂತ  ಖಡಾ  ಖಂಡಿತ ಹೇಳಿ ಬಿಟ್ರಂತ. ಹಿಂಗಾಗಿ  ಎಲ್ಲಾ ಮಕ್ಕಳು –  ಸೊಸೆಂದ್ರು ಅಲ್ಲೆ  ಐಸಿಯು  ಹೊರಗನs  ಕಾಯಕೋತ  ಇಡೀ ದಿನಾ ತಗದಾರ. ನನ್ನ ಮಗಾ ಏನೋ  ಆಫೀಸ್ ಕೆಲಸದ ಮ್ಯಾಲ  ಲಂಡನ್‌ಗೆ  ಹೋದಾಂವಾ  ಆ  ಹೊತ್ತನs  ಬಂದಿದ್ದಾ. ಖಡಿ  ಎರಡ ದಿನಾ  ಆಸ್ಪತ್ರೆಯೊಳಗ  ಕೂತ ಕೂತ  ಎಲ್ಲಾರೂ ದಣದ ಹೋಗಿದ್ರು. ಮ್ಯಾಲ  ಯಾವ ಹೊತ್ತಿಗೆ  ಏನೋ ಅನ್ನೂ  ಕಾಳಜಿ, ಗಾಬರಿ ಒಂದು. ನನ್ನ ಮಗಾ ಆ ಹೊತ್ತ ರಾತ್ರಿ ದವಾಖಾನಿ ಒಳಗನs  ಉಳದು  ಅವರನೆಲ್ಲಾ  ಮನಿಗೆ  ಕಳಸಿದಾ. ಆದ್ರೂ ಸುದ್ಧಾ  ಎಲ್ಲಾರೂ  ಬಾರಾ ಸವ್ವಾ ಬಾರಾ (12 – ಹನ್ನೆರಡು ಕಾಲು)ಕ್ಕ  ಅಲ್ಲಿಂದ  ಬಿಟ್ರಂತ. ಆಮ್ಯಾಲ  ಐಸಿಯುನ  ನರ್ಸ್ ಒಂದೂವರಿಗೆ  ನನ್ನ  ಮಗನ್ನ ಕರದು , “ನಿಮ್ಮ ಅಜ್ಜಾ ಹೋದ್ರು ಈಗ ಹತ್ತು ನಿಮಿಷದ ಕೆಳಗೆ” ಅಂತ ಹೇಳಿದ  ಕೂಡಲೆ  ಘಾಬರಿ  ಆಗಿ ಬಿಟ್ಟಾನ ಅಂವಾ. ಎಲ್ಲಾರಿಗೂ  ಫೋನ್ ಮಾಡಿ ಸುದ್ದಿ  ಹೇಳಿದ ನನ್ನ ಮಗಾ.

ಮನೀಗ  ಹೋಗಿ  ಹಾಸಿಗ್ಗೆ  ತಲಿ ಹಚ್ಚೂದೆ  ತಡಾ ಮತ್ತ  ನನ್ನ ಮಗನ  ಫೋನ್ ಹಾಸ್ಪಿಟಲ್‌ನಿಂದ. ದಿಕ್ಕೆಟ್ಟ ಘಾಬರ್ಯಾಗಿ  ಎಲ್ಲಾರೂ ಮತ್ತ ಹಾಸ್ಪಿಟಲ್ – ಫೋನು ಅಂತ ಸುರು ಆತು. ಏನ ಹೇಳೂದಿತ್ತೋ, ಏನ ಕೇಳೂದಿತ್ತೋ ಒಂದೂ ಆಗಲಿಲ್ಲ. ಇಷ್ಟ ದೊಡ್ಡ ಸಂಸಾರ; ಮಕ್ಕಳು ಸೊಸೆಯಂದಿರು -ಮೊಮ್ಮಕ್ಕಳು ಇದ್ರೂ ಒಬ್ಬರನೂ ನೋಡಲಿಲ್ಲ . ನಮ್ಮ ಅಣ್ಣಾ ಹೋಗಿ ಬಿಟ್ರು.1999, ಅಕ್ಟೋಬರ್ 10ನೇ ತಾರೀಖು ನಮ್ಮ ಅಣ್ಣಾ, ನಮಗಿದ್ದ ಕಟ್ಟಕಡಿ  ಆಸರಾದ್ದ  ಕೊಂಡಿ  ಕಿತ್ತು ಬಿದ್ದ ಬಿಟ್ತು. ಅವ್ವಾ ಹೋಗಿ  ಬರೋಬ್ಬರಿ  ಮೂರು ವರ್ಷ ಐದ ತಿಂಗಳ ಆಗಿತ್ತ ಆವಾಗ!

ಅಂದಿನ ರಾತ್ರಿ   ಮರೀಲಾರದ್ದು. ಸುರೇಶ ಅಣ್ಣಾಂದ  ಎಲ್ಲಾ ಮುಗಿಸ್ಕೊಂಡ  ರಾತ್ರಿ ಧಾರವಾಡಕ್ಕ ವಾಪಸ್ ಹೋದ್ರು. ಎಲ್ಲಾ  ಪ್ರಮೋದ, ಪ್ರದೀಪ ಮತ್ತ ಅವರ ಹೆಂಡಂದಿರು, ನಮ್ಮ ದೊಡ್ಡ ವೈನಿ  ಎಲ್ಲಾರೂ ತಮ್ಮ ತಮ್ಮ ಮನಿಗೆ ಹೋದ್ರು. ಪ್ರಕಾಶ  ಇನಾ ಬಂದಿದ್ದಿಲ್ಲ. ಈ ಹೊತ್ತ ನಾ  ಪೂರಾ  ಖಾಲಿ ಖಾಲಿ ಆಗಿ ನಿಂತ ಹಾಂಗ ಅನಸಲಿಕ್ಹತ್ತು. ಮೊಟ್ಟ ಮೊದಲ ಬಾರಿಗೆ ತೌರ ಮನ್ಯಾಗ  ನಂಗ ಭಿಡೆ ಅನಸಿಧಂಗ. ಯಾಕ ಗೊತ್ತಿಲ್ಲ. ಅಣ್ಣ ತಮ್ಮಂದಿರ  ಪ್ರೀತಿಗೆ ಯಾವ ಕೊರತಿ  ಇದ್ದಿದ್ದೇ ಇಲ್ಲ. ಆದರ ನನಗ ನಾ ಆ ಮನಿಗೆ  ಭಾಳ ಅಲ್ಲ ಒಂಚೂರ ಹೊರಗಿನಾಕಿ  ಅನಸಲಿಕ್ಹತ್ತು. ಇದ್ಯಾವದೋ  ಹೊಸಾ ಭಾವ  ಆ ಹೊತ್ತ  ನನ್ನ ಮನಸಿನ್ಯಾಗ ಹಣಿಕಿ ಹಾಕ್ತಿತ್ತು.

ನಂಗ ಹಂಗ ಅನಿಸ್ತ ಖರೆ, ಒಂದ ಗಳಿಗಿ. ಅವ್ವಾ – ಅಣ್ಣಾನ  ಮನಿ  ಪೂರಾ ಖಾಲಿ  ಆ ಉದ್ದಕ್ಕೂ. ಅದರ ತುಂಬ  ಸಂಪೂರ್ಣ ಮೌನದ ದಪ್ಪ ಕಂಬಳಿ  ಹೊಚ್ಚಿಧಂಗ. ಮನಿ ತುಂಬ ಢಣಾ ಢಣಾ ಎಲ್ಲಾ ಲೈಟ್  ಹಚ್ಚೇ ಇಟ್ಟಾ  ಆನಂದ. ನಾ ಅಗದೀನ  ಸುನ್ನ ಆದಾಕಿ  ಆನಂದ – ಶಾರದಾನ ಜೋಡಿ ಅಲ್ಲೆ ಮ್ಯಾಲs  ಇದ್ದ ಅವರ ಮನಿಗೆ ಹೋದೆ. ಆ ರಾತ್ರಿ ಆನಂದ – ಶಾರದಾ ನನ್ನ ತಮ್ಮ ನಡುವ  ಮಲಗಿಸಿಕೊಂಡ  ಮಲಗಿದ್ರು. ಆಕಡೆ ಆನಂದ, ಈಕಡೆ ಶಾರದಾ. ಆದರ ಒಬ್ರೂ ನಿದ್ದಿ ಮಾಡಲಿಲ್ಲ. ಅದ ಮಾತ್ರ ಖರೆ. ಕೆಳಗ ಪುಟ್ಟ ಪೂರಾ  ಖಾಲಿ ಆಗಿ  ನಿಂತ  ಅವ್ವಾ- ಅಣ್ಣಾನ ಮನಿಯೊಳಗ  ಮನಸು ತಿರಗ್ಯಾಡಿ  ಬರಲಿಕ್ಹತ್ತು. ಅದಕ ಅದನ  ಬಿಟ್ಟ ಬರೂ  ಮನಸಿಲ್ಲ. ಅಲ್ಲೇ ಇರಲಿಕ್ಕೆ ಶಕ್ಯ  ಇರಲಿಲ್ಲ. ಹುಚ್ಚುಚ್ಚ ವಿಚಾರ, ತಾಕಲಾಟದಾಗ  ಡುಬಕಿ  ಹೊಡೀಲಿಕ್ಹತ್ತಿಧಂಗ ಒಟ್ಟ. ಅವ್ವಾ, ಅಣ್ಣಾನ ಖಾಲಿ ಮನಿ  ನನ್ನ ಪೂರ್ಣ ಶೂನ್ಯತಾದಾಗ  ತುರಕಿ ಬಿಟ್ಟಿತ್ತು!

ಹೌದು ಆ  ಕೆಳಗಿನ  ಮನಿ  ಅವ್ವಾ ಅಣ್ಣಾಂದು. ಅದು  ಆನಂದಂದೇ  ಮನಿ. ಹುಕ್ಕೇರಿ  ಬಿಟ್ಟು ಬೆಂಗಳೂರಿಗೆ  ಬಂದಾಗ  ನಮ್ಮ  ಅವ್ವಾನ  ಪರಿಸ್ಥಿತಿ  ಭಾಳ ಸೂಕ್ಷ್ಮ ಮತ್ತ  ಕಠಿಣ ಇತ್ತು. ಅಕಿಗೆ ಹತ್ತೂದು,  ಇಳ್ಯೂದು  ಆಗ್ತಿದ್ದಿಲ್ಲ. ಪ್ರಕಾಶನ ಮನ್ಯಾಗ  ಮೆಟ್ಲ  ಭಾಳ  ಇದ್ದು. ಹೆಚ್ಚು ಕಡಿಮಿ ಪ್ರಮೋದ, ಪ್ರದೀಪನ  ಮನ್ಯಾಗನೂ  ಹಂಗs  ಇತ್ತು. ಆನಂದನ  ಮನಿ  ಒಂದೇ ಒಂದs  ಲೆವೆಲ್ ಒಳಗ  ಇತ್ತು. ಅದಕ  ಆನಂದ  ಅಲ್ಲೆ ಒಳಗಿಂದನ ಪಾವಟಿಗಿ  ತಗೊಂಡು  ಮ್ಯಾಲ  ಮನಿ ಕಟ್ಟಿಸಿ ತಾ ಅಲ್ಲಿ ಹೋದ  ತನ್ನ ಕುಟುಂಬದ ಜೋಡಿ. ಕೆಳಗಿನ ಮನಿ  ಅವ್ವಾ ಅಣ್ಣಾಂದ  ಆತು. ಅದು ಒಂದs ಮನೀನೇ. ಆದರ ಕೆಳಗಿನ  ಭಾಗ  ಹುಕ್ಕೇರಿ ಮನಿ ಆತು ಎಲ್ಲಾರಿಗೂ. ಎಲ್ಲಾರೂ  ಸಂಜೀನ್ಯಾಗ ಅಲ್ಲೇ  ಸೇರಾವ್ರು. ಎಲ್ಲಾ ಹಬ್ಬಾ- ಹುಣ್ಣಿವಿ  ಅಲ್ಲೇ ಆಗೂದು. ಒಟ್ಟ ಎಲ್ಲಾರಿಗೂ  ಅದೊಂದ  ಬೆಚ್ಚನ ಗೂಡ  ಆಗಿತ್ತು. ನಮಗೂ  ಬೆಂಗಳೂರಾಗೂ ಒಂದ ಹುಕ್ಕೇರಿ ಮನಿ  ಆತು. ಅವ್ವಾ, ಅಣ್ಣಾಗೂ  ಒಂಥರಾ ಹಿತಾ  ಆಗಿತ್ತು. ಖರೆ  ಈ  ಹೊತ್ತ  ಅವರಿಬ್ರೂ  ಇಲಧಂಗ  ಆತು; ಅದರ ಜೋಡೀನ ಮನಿ- ಮನಸು  ಪೂರಾ ಶೂನ್ಯ, ದೊಡ್ಡ ಶೂನ್ಯ ತುಂಬಿ  ಖಾಲಿ  ಆಗಿದ್ದು.ಆದರ  ತಲಿ  ಮಾತ್ರ ಪೂರಾ ಗಚ್ಚನ  ತುಂಬಿತ್ತು  ವಿಚಾರಲೆ; ಹಳವಂಡಲೆ. ಏಕಾ  ಹೋದದ್ದು 1989  ಸೆಪ್ಟೆಂಬರ್, ಅವ್ವಾ 1996 ಮೇ, ಅಣ್ಣಾ 1999 ಅಕ್ಟೋಬರ್. ಬರೋಬ್ಬರಿ  ಹತ್ತ ವರ್ಷದಾಗ  ಮೂರೂ  ಜೀವಗಳು  ತಮ್ಮ ಕೆಲಸಾ ಮುಗಿಸಿ, ತಮ್ಮ ಮಕ್ಕಳ, ಮೊಮ್ಮಕ್ಕಳ ಬದುಕಿಗೊಂದ  ಗಟ್ಟಿ ಮುಟ್ಟ ಬುನಾದಿ ಹಾಕಿ  ಮ್ಯಾಲ ತಣ್ಣೆಳಲಿಂದ  ಛತ್ತ ಹಾಕಿ, ತಮ್ಮ ತಮ್ಮ ಕೆಲಸಾ  ವ್ಯವಸ್ಥಿತ ನಿಭಾಯಿಸಿ  ನಿಸೂರ ಆಗಿ  ತಮ್ಮ ತಮ್ಮ ಜಾಗಾಕ್ಕ ಹೋಗಿ  ಕೂತ ಬಿಟ್ರು. ನಮ್ಮ ಮನಸ ತುಂಬ ಅನಾಥ  ಭಾವ  ಹೆಪ್ಪುಗಟ್ಟಿ ಕೂತಬಿಡ್ತು.

ಈ  ಜೀವನದ ವಿಲಕ್ಷಣತಾ  ಒಂದ  ಘಳಿಗಿ ಹುಚ್ಚ ಹಿಡಿಸಿ  ಬಿಡ್ತದ. ಅದರ ಆಳ ತಲಿ ತಿರಗಸ್ತದ  ಇಣಿಕಿ ನೋಡಿದ್ರ. ದಿನಾ ಬೆಳಕ ಹರೀಯೂದು, ಹೊತ್ತ ಮುಣಗಿ  ಕತ್ಲಾಗೂದು  ಎಷ್ಟ ಸರಳ ಸಹಜನೋ, ಅಷ್ಟs  ಸಹಜ, ಸರಳ ವ್ಯಾಳ್ಯಾ ಸರೀತಿತ್ತು. ನಮ್ಮ ದು:ಖ ನಮಗ. ಆ ವ್ಯಾಳ್ಯಾಕ್ಕೇನು? ತನ್ನ ಕೆಲಸಾ ತಾ  ಮಾಡಿದ ತೃಪ್ತಿ ಅದಕ. ಅಣ್ಣಾನ  ದಿನ ಕರ್ಮ ಸುರು ಆತು. ನಗಬೇಕೋ ಅಳಬೇಕೋ ಗೊತ್ತಿಲ್ಲ ಈ  ಜೀವನದ  ಈ ಥರದ  ವಿಡಂಬನಾಕ್ಕ. ಎಂದ ಯಾವ  ತಾರೀಖಿಗೆ  ಅಣ್ಣಾ  ತಮ್ಮ ಮೊಮ್ಮಗನ ಮುಂಜಿವಿ  ಠರಾಸಿದ್ರೋ  ಅಂದs  ಅವರ ಹತ್ತನೇ ದಿನ. ಅಂದೇ ಧರ್ಮೋದಕ,  ಕಾಕಪಿಂಡ ಎಲ್ಲಾ  ಆತು. ಮುಂಜಿವಿ  ದಿನಾ ವಟುಗಳಿಗೆ ಕೊಡ್ಲಿಕ್ಕಂತ  ತಂದ ಪಂಚೆ – ಶಲ್ಯ ಎಲ್ಲಾನೂ  ಅಣ್ಣಾನ  ವೈಕುಂಠ ಸಮಾರಾಧನೆ ದಿನ ಬ್ರಹ್ಮಚಾರಿಗಳಿಗೆ  ದಾನಾ ಕೊಟ್ಟ  ಪ್ರದೀಪ. ಇದು ಬದುಕು.

ಅಣ್ಣಾಂದು  ವೈಕುಂಠ ಸಮಾರಾಧನೆ, ಸೀಬಾಯಿ ಎಲ್ಲಾ ಮುಗದು. ಬಂದಾವ್ರೆಲ್ಲಾ ವಾಪಸ್ ಅಂದೇ ಹೋದ್ರು. ವಿದ್ಯಾ, ರಾಜಗೋಪಾಲ, ಸುರೇಶ ಎಲ್ಲಾ ಹೋದ್ರು. ನಾ ಅಲ್ಲೇ ನಿಂತು  ನಮ್ಮ ಭಾವನ ಮಗಳ ಮದವಿ ಮುಗಿಸಿ ಕೊಂಡ  ಹೋಗೂದು ಅಂತಾಗಿತ್ತು. ನಾ ಮರುದಿವಸ  ನಮ್ಮ ಭಾವನ ಮನಿಗೆ  ಹೋಗಾಕಿದ್ದೆ. ಆ ದಿವಸ ರಾತ್ರಿ  ಎಲ್ಲಾ ಮಕ್ಕಳನ ಅಂದ್ರ  ಅಣ್ಣಾನ  ಮೊಮ್ಮಕ್ಕಳನ  ದುಂಡಗ  ಕೂಡಿಸಿ  ನಡಬರಕ  ನಾ ಕೂತು ಎಲ್ಲಾ ಹುಡಗೂರಿಗೆ  ಊಟಕ್ಕ ಹಾಕಲಿಕ್ಹತ್ತಿದ್ದೆ. ಹೆಚ್ಚು ಕಡಿಮಿ  ಆ  ಕೆಲಸ ನಂದs  ಯಾವಾಗಲೂ. ಗೆಜ್ಜಿಪಂಕ್ತಿ  ನಡದಿತ್ತು. ಆಗ  ಪ್ರದೀಪನ ಮಗಾ ಶಶಾಂಕ  ಒಂದ ಪ್ರಶ್ನಿ  ಕೇಳಿದಾ ನಂಗ, “ಅತ್ತೆ, ನಾವೆಲ್ಲಾ ಹಿಂಗ  ಮತ್ತ ಸೇರಾಂಗಿಲ್ಲಾ?” ಅಂತ ಅಂದಾ. ಆ  ಹತ್ತ ವರ್ಷದ  ಕೂಸ  ಕೇಳಿದ ಈ  ಒಂದೇ ಒಂದು ಸಾಲಿನ  ಪ್ರಶ್ನ ಥೇಟ  ನನ್ನ ಎದೀಗನs  ನೆಟ್ಟು, ಭರ್ಚಿಗತೆ  ಚುಚ್ಚಿ ಜಾಗರಕ ತಂದು  ವಾಸ್ತವಿಕತಾದ್ದು  ವಿರಾಟ್ ದರ್ಶನ  ಮಾಡಿಸಿಧಂಗಾತು. ಎಲ್ಲಾರೂ ಥಕ್  ಆಗಿ ಗಪ್ಪ ಕೂತ ಬಿಟ್ವಿ. ಆ  ಕೂಸಿನ  ಮನಸಿನ್ಯಾಗ  ಯಾಕ ಬಂತೋ ಆ  ಮಾತು  ಗೊತ್ತಿಲ್ಲಾ. ಗಲಾ ಗಲಾ ಮಾತಾಡಿಕೋತ  ಊಟಾ ಮಾಡ್ಲಿಕ್ಹತ್ತಿದ್ದ  ಹುಡಗರೆಲ್ಲಾ  ನನ್ನ ಮಾರಿ ಕಡೆ  ನೋಡಕೋತ  ಗಪ್ಪಗಾರ  ಕೂತು. ನಂಗೂ  ಒಂದ ಕ್ಷಣಾ  ಏನ ಹೇಳಬೇಕು  ಹೊಳೀಲಿಲ್ಲ. ಅಕ್ಟೋಬರ್ ತಿಂಗಳ ಅಡ್ಡಮಳಿ ದಿನದ್ದ  ಮಾಡ ಮುಗಲ ತುಂಬಿತ್ತು. ಗುಡುಗು – ಮಿಂಚು – ಗಾಳಿನೂ ಇತ್ತು. ಸಣ್ಣ ಮಿಂಚಿನ ಸೆಳಕಿನ ಜೋಡಿ ತಂಪ ಗಾಳಿನೂ ಕಿಡಕ್ಯಾಗಿಂದ  ಒಳಗ  ಹಾದ ಹೋತು. ಅಂದೇ ಅಲ್ಲಿ  ಗ್ವಾಡಿ ಮ್ಯಾಲ  ಹಾಕಿದ್ದ ಅಣ್ಣಾನ ಫೋಟೋನೂ  ಗಾಳಿಗೆ ನಡಗಿಧಂಗಾಗಿ ತೂಗಾಡ್ತು.  ನಾ  ಶಶಾಂಕನ್ನ  ಅವಚಿಗೊಂಡ  ತಲಿ ಮ್ಯಾಲ  ಕೈ  ಆಡಿಸಿ  ಹೇಳ್ದೆ – “ಯಾಕಿಲ್ಲಾ  ಶಶಾಂಕ? ಎಲ್ಲಾರೂ ಮತ್ತ ಮತ್ತ ಹಿಂಗೇ ಸೇರೋದೆ. ಒಮ್ಮೊಮ್ಮೆ  ಒಬ್ರ ಮನ್ಯಾಗ. ಹಬ್ಬಾ ಎಲ್ಲಾರೂ ಕೂಡೇ ಮಾಡೂದು. ನಾನು, ವಿದ್ಯಾ ಅತ್ತ್ಯಾ ಎಲ್ಲಾರೂ  ಬರ್ತೀವಿ. ಅಜ್ಜಾ- ಅಜ್ಜಿ – ಏಕಾ ಎಲ್ಲಾರೂ  ನೋಡ್ತಿರತಾರ  ನಾವು ಹಿಂಗೇ ಸೇರತಿವೋ  ಇಲ್ಲೋ ಅಂತ. ಹೌದಲ್ಲೋ?” ಅಂದ ಕೂಡಲೆ  ಆ ಕೂಸು “ಹೇ” ಅಂತ  ಖುಷಿಲೆ ಒದರಿದಾ. ಎಲ್ಲಾ ಮಕ್ಕಳೂ ಅವನ ಜೋಡಿ ಸೇರಕೊಂಡ್ವು. ಎಲ್ಲಾರ ಮಾರಿ ಮ್ಯಾಲೂ ನಗು ಮೂಡ್ತು.

ಹೌದು, ಅಂದ ಮೂಡಿದ  ಆ ನಗಿ, ಆ ಕೇಕೆ  ಇಂದ ಸುದ್ಧಾ  ಹಂಗs  ರಿಂಗಣಿಸ್ತದ ನನ್ನ ತೌರಿನ್ಯಾಗ. ಆ  ಹೊತ್ತ ಒಳಗ ಇಣಕಿದ  ಮಿಂಚಿನ ಆ  ಸ್ವಚ್ಛ ಶುಭ್ರ ಪ್ರಭೆ, ಆ ತಂಗಾಳಿ  ಚೂರೂ ಮಾಸದs  ಕುಂದದ ಹಂಗೇ ಹರಿದಾಡ್ತದ. ಸಾರ್ಥಕತೆ ತುಂಬಿದ  ತುಂಬು ಜೀವನ ನಡಸಿದ  ಆ  ಹಿರಿ ಜೀವಗಳ ಆ  ಬದುಕಿಂದು ನೆರಳು  ಹೆಜ್ಜಿ ಹೆಜ್ಜಿಗೆ ಮನಸಿನ್ಯಾಗ ಮೂಡಿ  ಸರದಾಡಧಂಗ ಘಟ್ಟಿ ಮುಟ್ಟ ಕೂತ  ಬಿಟ್ಟದ. ನನ್ನ ತಮ್ಮ ಆನಂದ ಮುತಾಲಿಕ 2003ರೊಳಗ  ನಮ್ಮ ಅಣ್ಣಾನ ನೆನಪಿಗೆ  ಅವರು ತಮ್ಮ ಜೀವಾನ  ಮುಡಪ ಇಟ್ಟು ದುಡದ  ಹುಕ್ಕೇರಿ ಹೈಸ್ಕೂಲ್‌ಗೆ, ನಾವೆಲ್ಲಾ ಕಲತ  ಆ  ಸಾಲಿಗೆ ದೇಣಿಗೆ ಕೊಟ್ಟು  ಅಣ್ಣಾನ  ಹೆಸರು ಅಲ್ಲಿ  ಶಾಶ್ವತ  ಉಳಿಯೂ ಹಂಗ ಮಾಡಿದಾ. ಆ ಹೈಸ್ಕೂಲ್‌ದೇ ಅಂಗ ಸಂಸ್ಥೆ ಆದ ಕಾಲೇಜು ಕಟ್ಟಡದ  ಶಂಕುಸ್ಥಾಪನೆ ವ್ಯಾಳ್ಯಾಕ್ಕ ಅಣ್ಣಾಂದು ಸ್ಮರಣಫಲಕ  ಅಲ್ಲಿ ಕಾಯಂ  ಇರೂ ಹಂಗ  ಕಲ್ಲಿನ್ಯಾಗ  ಕೆತ್ತಿ ಕೂಡಸ್ಯಾರ  ಆ ಸಂಸ್ಥಾದವರು. ಸಾಲಿ  ಆಫೀಸಿನ್ಯಾಗ ಇದರಿಗೇ, ಹೋದಕೂಡಲೆ  ನಮ್ಮ ಅಣ್ಣಾನ ದೊಡ್ಡ ಫೋಟೋ  ಕಾಣಸ್ತದ.

ಅಖಂಡ   ಜೀವಾ ತೇಯ್ದು ಅವರೆಲ್ಲಾ  ನಮ್ಮಿಂದ ದೂರ  ಹೋಗೂಮುಂದ  ಸುದ್ಧಾ ತಾವ ಹಾಸಿದ  ಆ ತಣ್ಣೆಳಲ ಹಾದಿಯ ನೆರಳು  ಅಸರಂತ  ತಂಪು ತುಂಬಿರೂ ಹಂಗ ಅಗದಿ  ಬಂದೋಬಸ್ತ್  ಮಾಡಿ ಹೋಗ್ಯಾರ. ಆ ತಣ್ಣೆಳಲ ಹಾದಿಯೊಳಗಿನ ಚಿಗುರು, ಕುಡಿ, ಬಳ್ಳಿ ಎಲ್ಲಾ ಒಂದ ಸಣ್ಣ ಕರಿಕಿ ಕಡ್ಡಿ ಸುದ್ಧಾ  ಅಸರಂತ ಹಚ್ಚ ಹಸರs  ಇರಲಿ  ಅಂತನs  ಅನಸ್ತದ – 

 ಬಿಸಿಲಿನ ಝಳಾ ಇಣಕಲಿಕ್ಕೆ , ಹಾಯಲಿಕ್ಕೆ ಸಂದನs  ಬಿಟ್ಟಿಲ್ಲಾ ಅವರು, ಆ ತಣ್ಣೆಳಲ ಹಾದಿಯಲ್ಲಿ… 

| ಮುಕ್ತಾಯ |

‍ಲೇಖಕರು Admin

November 22, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. ಶೀಲಾ ಪಾಟೀಲ

    ಅಂದ ಮೂಡಿದ  ಆ ನಗಿ, ಆ ಕೇಕೆ  ಇಂದ ಸುದ್ಧಾ  ಹಂಗs  ರಿಂಗಣಿಸ್ತದ ನನ್ನ ತೌರಿನ್ಯಾಗ…..ಅಖಂಡ   ಜೀವಾ ತೇಯ್ದು ಅವರೆಲ್ಲಾ  ನಮ್ಮಿಂದ ದೂರ  ಹೋಗೂಮುಂದ  ಸುದ್ಧಾ ತಾವ ಹಾಸಿದ  ಆ ತಣ್ಣೆಳಲ ಹಾದಿಯ ನೆರಳು  ಅಸರಂತ  ತಂಪು ತುಂಬಿರೂ ಹಂಗ ಅಗದಿ  ಬಂದೋಬಸ್ತ್  ಮಾಡಿ ಹೋಗ್ಯಾರ. ……ಬಿಸಿಲಿನ ಝಳಾ ಇಣಕಲಿಕ್ಕೆ , ಹಾಯಲಿಕ್ಕೆ ಸಂದನs  ಬಿಟ್ಟಿಲ್ಲಾ ಅವರು, ಆ ತಣ್ಣೆಳಲ ಹಾದಿಯಲ್ಲಿ… 

    “ತಣ್ಣೆಲ ಹಾದಿಯಲ್ಲಿ….” ಅಂಕಣಗಳು ಈ ಭಾವನಾತ್ಮಕ ವಾಕ್ಯಗಳೊಂದಿಗೆ ಸುಂದರ ಮುಕ್ತಾಯ ಗೊಂಡಿವೆ. ನಿಮ್ಮ ನೆನಪಿನ ಭಾವನೆಗಳ ಬರಹ ಬೆರಗಾಗುವಂತಹದು ಸರೋಜಾ.

    ಪ್ರತಿಕ್ರಿಯೆ
    • Sarojini Padasalgi

      ಶೀಲಾ ನಿಮ್ಮ ಪ್ರತಿಕ್ರಿಯೆಗೆ ನನ್ನ ಮನೆ ತುಂಬಿ ಬಂತು. ತುಂಬ ಆಪ್ತ ಅನಿಸಿಕೆ. ತಪ್ಪದೇ ಓದುತ್ತ, ನಿಮ್ಮ ಅಭಿಪ್ರಾಯ ತಿಳಿಸುತ್ತ ಬಂದ ನಿಮಗೆ ಅನಂತ ಧನ್ಯವಾದಗಳು ಶೀಲಾ.
      ಈ ಅವಕಾಶ ಕೊಟ್ಟ ಅವಧಿಗೆ ಅನೇಕ ಧನ್ಯವಾದಗಳು.

      ಪ್ರತಿಕ್ರಿಯೆ
      • ಮೀನಾಕ್ಷಿ

        ಓದುತ್ತಾ ಹೋದಂತೆ ನಮ್ಮ ಅಣ್ಣನ ವಿದಾಯವೂ ಕಣ್ಣ ಮುಂದಿನ ಚಿತ್ರವಾಗಿತ್ತು. ಕೊನೆಯ ಎರಡು ಪ್ಯಾರಾಗಳು ಅಕ್ಷರಶಃ ಸತ್ಯ. ಅವರಂತೆ ನಾವೂ ಬದುಕಿ ನಮ್ಮ ಮಕ್ಕಳ ನೆನಪಿನಲ್ಲಿ ಉಳಿಯುವಂತಾದರೆ, ಅದೇ ತೃಪ್ತಿ. ನಿಮ್ಮ ಬರಹ ಹೀಗೇ ತಂಪೆರೆಯಲಿ.

        ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: