ಗೀತಾ ಎನ್ ಸ್ವಾಮಿ
ನೆನಪುಗಳೆ ಸಾಕು
ಬೆಚ್ಚಗಿರಲು
ನಿನ್ನೆದೆಯ ಗೂಡೇ ಬೇಕಿಲ್ಲ
ಸದ್ದಾಗಲೇ ಬೇಕಿಲ್ಲ
ಮನಸೊಳಗೆ ಮಿಸುಕಾಡದೆ
ಇರುವುದಷ್ಟೆ ಸಾಕು
ಹಾಸಿಗೆ ತುಂಬಾ ನಿನ್ನ
ಬೆನ್ನ ಬೆವರ ಘಮಲೆ ಇರುವಾಗ
ಹೂ ಗಳ ಪರಿಮಳ ಬಯಸಲಾರೆ
ಕಾವುಗಟ್ಟಿದ ಅಪ್ಪುಗೆಯ
ಧ್ಯಾನದಲಿ
ಇಬ್ಬನಿಗೇನು ಕೆಲಸ
ಚಳಿಯಾಗಲಿ ಬಿಡು;
ಬೆಚ್ಚಾಗಾಗುವ ಬಯಕೆಗಳು ಹುಟ್ಟಲು
ಪಿಸು ಮಾತು
ಹಸಿಮುತ್ತುಗಳಿಗೆ
ಕತ್ತಲು ಬೆಳಕಿನ ಹಂಗಿಲ್ಲ
ಕೊನೆಯಿಲ್ಲ
ಸುರಿವ ಸುಖದ ಹಿಗ್ಗಿನೊಳಗೆ
ಅರಳುವುದು
ನಿನ್ನೊಳಗೊಂದು ಜೀವ ಕಣ್ಣು
ಸರಿದಾಡುವ ಕೈಗಳ ಕೊಸರಿದಷ್ಟು
ಚಳಿಯ ಸುರಿದು
ಮಣಿಸುವ ಆಟ
ಕನ್ನಡಿಯೊಳಗೆ ಕಂಡ
ಸಖನೆ
ಕೋಣೆಯೊಳಗೆ ನೆರಳು
ಮಾತ್ರ ನೀನು ಊಟ ನೀನೆ ಆದರೂ
ಹಸಿವು ತೀರದ
ಪ್ರೇಮಿ ನಾನು..
0 ಪ್ರತಿಕ್ರಿಯೆಗಳು