ಸರೋಜಿನಿ ಪಡಸಲಗಿ ಅಂಕಣ- ನಕ್ಕಳು ಏಕಾ ಅಳು ನುಂಗಿ..

ಅವಧಿ’ ಓದುಗರಿಗೆ ಸರೋಜಿನಿ ಪಡಸಲಗಿ ಅವರು ಈಗಾಗಲೇ ಸುಪರಿಚಿತ. ಅವರ ಸರಣಿ ಬರಹ ‘ಒಬ್ಬ ವೈದ್ಯನ ಪತ್ನಿ ಅನುಭವಗಳ ಗಂಟು ಬಿಚ್ಚಿದಾಗ..’ ಜನಪ್ರಿಯವಾಗಿತ್ತು.

ಈಗ ಈ ಸರಣಿ ‘ಡಾಕ್ಟರ್ ಹೆಂಡತಿ’ ಹೆಸರಿನಲ್ಲಿ ಬಹುರೂಪಿಯಿಂದ ಪ್ರಕಟವಾಗಿದೆ.

ಈ ಕೃತಿಯನ್ನು ಕೊಳ್ಳಲು –https://bit.ly/3sGTcvg ಈ ಲಿಂಕ್ ಕ್ಲಿಕ್ ಮಾಡಿ

ಅಥವಾ 70191 82729ಗೆ ಸಂಪರ್ಕಿಸಿ

ಸರೋಜಿನಿ ಪಡಸಲಗಿ, ಮೂಲತಃ ಬೆಳಗಾವಿ ಜಿಲ್ಲೆಯ ಹುಕ್ಕೇರಿಯವರು. ಮದುವೆಯಾದ ಮೇಲೆ ಧಾರವಾಡದವರಾದರೂ ಈಗ ಬೆಂಗಳೂರು ವಾಸಿ. ಪದವೀಧರೆ, ಗೃಹಿಣಿ. ಮೊದಲಿನಿಂದಲೂ ಸಂಗೀತದ ಹುಚ್ಚು ವಿಪರೀತ. ಯಾವುದೇ ಪದ ಸಿಕ್ಕರೂ ಅದನ್ನು ಸಂಯೋಜಿಸಿ ಹಾಡುವ ಅತೀವ ಆಸಕ್ತಿ. ಕ್ರಮೇಣ ಅದು ಭಾವಗೀತೆಗಳನ್ನು ಸ್ವಂತವಾಗಿ ಬರೆದು ಸಂಯೋಜಿಸಿ ಹಾಡುವತ್ತ ಕರೆದೊಯ್ದಿತು.

ಎರಡು ಕವನ ಸಂಕಲನಗಳು ಪ್ರಕಟವಾಗಿವೆ- ‘ಮೌನ ಮಾತಾದಾಗ’ ಮತ್ತು ‘ದೂರ ತೀರದ ಕರೆ’. ಇನ್ನೊಂದು ಸಂಕಲನ ‘ಹಳವಂಡ’ ಹಾಗೂ ಅವರೇ ರಚಿಸಿದ ಸಂಪ್ರದಾಯದ ಹಾಡುಗಳ ಸಂಕಲನ ‘ತಾಯಿ – ಮಗು’ ಅಚ್ಚಿನಲ್ಲಿವೆ. ಈ ಸಂಪ್ರದಾಯದ ಹಾಡುಗಳು 18 ಕಂತುಗಳಲ್ಲಿ ‘ರೇಡಿಯೋ ಗಿರ್ಮಿಟ್’ನಲ್ಲಿ ಪ್ರಸಾರ ಆಗಿವೆ. ಆಕಾಶವಾಣಿ ಬೆಂಗಳೂರು ಹಾಗೂ ಧಾರವಾಡದಿಂದಲೂ ಸಂದರ್ಶನದೊಂದಿಗೆ ಪ್ರಸಾರ ಆಗಿವೆ.

ಅವರ ಇನ್ನೊಂದು ಮನ ಕಲಕುವ ಅಂಕಣ – ತಣ್ಣೆಳಲ ಹಾದಿಯಲ್ಲಿ…

7

ಏಕಾನ  ಜೀವನದ  ಒಂದೊಂದೇ  ಪುಟ  ತಿರುವಿಕೋತ  ಹೊದ ಹಂಗ  ಆಕೀ  ಜೀವನದ ಒಂದೊಂದೇ ಮಜಲು  ನಿಚ್ಚಳ  ಆಗ್ತಾ ಹೋಗ್ತಾವ. ಎಲ್ಲಿಂದ  ಎಲ್ಲೀ ತನಕಾ  ಏಕಾ ಹೆಂಗ ಬೆಳದ್ಲು;  ಹೆಂಗ  ವಯಸ್ಸಿನ  ಗೊಡವೀನ  ಇಲ್ಲದ ಮಾಗಿ  ನಿಂತ್ಲು; ನಿಸ್ಸಾರ  ಅನಸೂ ಆ  ಬರಡು ಜೀವನಾನ  ಹೆಂಗ  ಭರಪೂರ  ಸಾರವತ್ತ ಮಾಡಿ ಕೊಂಡು ಸಾಗಿದ್ಲು  ಮಗನ ಸಲುವಾಗಿ  ಅನ್ನೂದು ಕಲ್ಪನೆ, ಊಹೆಯ  ಗಡಿ ದಾಟಿ ನಿಂತದ್ದು ಆ  ವಿಷಯ. ಅದು  ವಿಧಿಯ  ಜಾಣತನದ  ಆಟವೋ ಅಥವಾ  ನಮ್ಮ ಏಕಾನ  ಅಳತೆಗೂ ನಿಲುಕದ  ಜಾಣತನವೋ  ಅಂಬೋದು   ನನಗಿಂದಿಗೂ  ಅಟಕೇ ಪಾರ ವಿಷಯವೇ!( ನನ್ನ ಮಿತಿ ದಾಟಿದ ) ಹುಟ್ಟಿಸಿದ ದೇವರು ಹುಲ್ಲು ಮೇಯಿಸಲಾರ  ಅಂಬೋ  ಹಾಂಗ  ಒಂದೊಂದೇ  ಮೆಟ್ಟಿಲು ಏರಿಸಿ  ನಮ್ಮ ಏಕಾನ್ನ  ಆ ಬಾಗಿಲ ಹತ್ರ  ತಂದು ನಿಲ್ಲಿಸಿ  ಅಲ್ಲಿರುವ  ಆ  ದಾರಿಯತ್ತ  ಕೈ  ತೋರಿಸಿ ಅವಳನ್ನಲ್ಲಿ  ಬಿಟ್ತು  ವಿಧಿ.

ನನಗ  ಒಂದು ಪ್ರಶ್ನೆ  ಯಾವಾಗಲೂ  ಕಾಡ್ತದ; ಈ  ಹೊಲಾ ಗದ್ದಿ, ತೋಟ ಪಟ್ಟಿಯ  ಉಸ್ತುವಾರಿ ಕೆಲಸದಂಥಾ  ಗಡಚ  ಕೆಲಸಕ್ಕ ಏಕಾ  ಅದ ಹೆಂಗ ಕೈ  ಹಾಕಿದ್ದಾಳು; ಏನೂ  ಗೊತ್ತಿಲ್ಲದ  ಆ  ವಿಚಾರದ  ಕಡೆ  ಅದ ಹೆಂಗ  ತನ್ನ  ಲಕ್ಷ್ಯ  ಕ್ರೋಢೀಕರಿಸಿದ್ದಾಳು  ಅಂತ. ಆದರ  ಆಕೀ ಬಾಳಿನುದ್ದಕೂ  ಕಣ್ಣು ಹಾಯಿಸಿದಾಗ ನಕ್ಕಿ ಅದರ ಕಲ್ಪನಾ  ಬರ್ತದ ಅಂದರ  ರಾವಸಾಹೇಬರ ಕೈ ಹಿಡಿದು, ಅವರ  ಮನಿ ತುಂಬಿ  ಬಾಯಿ ಸಾಹೇಬ ಆದಾಗಿನಿಂದ  ಆಕೀಗೆ  ಗೊತ್ತಿಲ್ಲಧಾಂಗ  ಇಂಚಿಂಚಾಗಿ  ಏಕಾ  ಹಲವು  ನಿಟ್ಟಿನ್ಯಾಗ , ಅದ್ರಲ್ಲೂ  ಈ  ಹೊಲಾ- ಮನಿ ವಿಷಯದಾಗ  ತಯಾರಾಗಲಿಕ್ಹತ್ತಿದ್ಲು  ಅನಸ್ತದ. ಈ ತೋಟ ಪಟ್ಟಿಯ ದೇಖರೇಖಿ  ವಿಷಯದ  ಗಂಧ- ಗಾಳಿಗೂ  ಸುಳಿಯಲು ಅವಕಾಶ  ಇಲ್ಲದ  ತವರು. ಅಲ್ಲಿಂದ  ಬಂದವಳಿಗೆ ಬಡತನ,  ಅದರ ಜೊತೆಗೆ ಪ್ರತಿ  ವಿಷಯದಲ್ಲೂ ಬಡಿದಾಟದ  ಜೀವನ  ಅಷ್ಟು  ಬಿಟ್ಟು  ಏನೂ ಗೊತ್ತಿಲ್ಲದ  ಮನ: ಸ್ಥಿತಿ; ಆದರೆ  ಅಗಾಧ  ತಿಳುವಳಿಕೆ,  ಸೂಕ್ಷ್ಮಮತಿ ಕಾಯಂ  ಆಕೀ  ಜೋಡೀನs ‌‌ ಇದ್ವು.  ಹಿಂಗಾಗಿ ಆ  ನಸೀಬು ತನ್ನ ಜೂಜಾಟ, ಜೂಟಾಟದ  ಕರಾಮತ್ತ  ತೋರಿಸಿ  ಆಕೀನ್ನ  ಇಷ್ಟರ ಮಟ್ಟಿಗೆ ಅಗದೀ ಸರಳ  ತಯಾರ ಮಾಡ್ತು; ಏಕಾ ಅಗದೀ ಸಹಜ  ಬೆಳೆದು  ಬಿಟ್ಲು.

ಇದರ  ಅಂದರ  ತನ್ನದು ಅಂಬೋ ಆಸ್ತಿ, ಹೊಲಾ ಮನಿಯ  ವ್ಯವಸ್ಥಿತ  ಲೆಕ್ಕಪತ್ರ, ಹೊಲಗಳ  ನಿರ್ವಹಣೆಯತ್ತ  ಆಸಕ್ತಿ , ಏಕಾ  ಗಂಡನ ಮನೀಗೆ  ಬಂದ  ನಾಕಾರು  ತಿಂಗಳದಾಗನs‌  ಸಣ್ಣ ಹಾಂಗ  ಹಣಿಕಿ  ಹಾಕಿ ನೋಡಕೋತ  ಒಳಗೆ ಬಂದು  ಏಕಾನ   ಪೂರಾ  ವ್ಯಕ್ತಿತ್ವದಾಗನs  ಯಾವ ಭಿಡೆ ಇಲ್ದೇ  ಠಿಕಾಣಿ ಹೂಡಿ ಬೆಳೀಲಿಕ್ಹತ್ತು. ಆಕೀ ಶಾಣ್ಯಾತನ, ಚಿಕಿತ್ಸಕ ಬುದ್ಧಿಯ  ಭಂಡಾರ ಭಾಳ ಶ್ರೀಮಂತ  ಇತ್ತು. ಮುಲ್ಕಿ ಪರೀಕ್ಷಾದಾಗ  ಮೊದಲನೇ  ನಂಬರ್  ಗಳಿಸಿದ್ದ ಶಾಣ್ಯಾತನ  ಸಣ್ಣ ಹಾಂಗ  ಇಲ್ಲೂ  ಉಪಯೋಗಕ್ಕ  ಬರಲಿಕ್ಹತ್ತು. ರಾವಸಾಹೇಬರ  ಮಾಲ್ಕಿ ಜಬರ , ಖದರ  ಬ್ಯಾರೆ. ಅದನ್ನ  ಹಂಗs  ಇರಲಿಕ್ಕೆ ಬಿಟ್ಟು, ಹೊಲಾ- ಮನಿ, ತೋಟ-ಪಟ್ಟಿ ಬಾಬ್ತಿಯೊಳಗ,  ಲೆಕ್ಕ ಪತ್ರದ  ವಿಷಯದಾಗ  ಲಕ್ಷ್ಯ ಹಾಕಿ  ಅದನ್ನ ಚೊಕ್ಕ  ಮಾಡ್ಲಿಕ್ಕೆ  ಪ್ರಯತ್ನ  ಮಾಡ್ಲಿಕ್ಹತ್ತಿದ್ಲು ಏಕಾ.

ಬಡತನದ  ಅಭಾವ ಪರಿಸ್ಥಿತಿ ಖರೇ ಅಂದ್ರ ಒಂಥರಾ  ಮೌಲಿಕ ಜವಾಬ್ದಾರಿ ಕಲಸ್ತದ  ಮನುಷ್ಯಗ. ಆ  ಕಷ್ಟ ಕಂಡುಂಡ  ಜೀವಕ್ಕೆ ಬರೀ ರೊಕ್ಕ ಒಂದೇ  ಅಲ್ಲ , ಪ್ರತಿಯೊಂದು ವಿಷಯ, ವಸ್ತುವಿನ  ಕಿಮ್ಮತ್ತು ಏನು  ಅಂಬೋದನ್ನ  ಅತೀ  ಸೂಕ್ಷ್ಮವಾಗಿ  ಗಮನಿಸಿ ಪರಿಷ್ಕರಿಸೋದನ್ನ  ಅಷ್ಟೇ ಸೂಕ್ಷ್ಮ ತಿಳುವಳಿಕೆನ  ಕೊಡ್ತದ. ಮನಸು ವಿಶಾಲ ಆಗ್ತದ; ಜೀವನ ಅಂದ್ರೆ  ಏನು ಅಂಬೂದರ  ಪಕ್ಕಾ ಪಾಠ  ಕಲಿಸ್ತದ. ಆ  ಮಾತು  ನಮ್ಮ ಏಕಾನ ವಿಷಯದೊಳಗ  ಅಗದೀ  ಪಕ್ಕಾ ಆಳ  ಛಾಪು  ಮೂಡಿಸಿತು. ಇದ್ದ  ಅನುಕೂಲತೆ,  ಶ್ರೀಮಂತಿಕೆನ ಇನ್ನಷ್ಟು  ಕಾಳಜಿಯಿಂದ  ಸಂಭಾಳಿಸುವ, ಬೆಳೆಸುವ ನಿಟ್ಟಿನಲ್ಲಿ  ಅಗದೀ ಕಾಳಜೀಪೂರ್ವಕ  ಹೆಜ್ಜೆ  ಇಡಲು  ಕಲಿಸ್ತು. ಆ  ಹುಷಾರಕಿ  ಒಂದು ಖಂಬೀರತೆ, ಗೌರವದ  ಲಕ್ಷಣಗಳನ್ನು ಬೆಳೆಸಿ  ಪ್ರತಿಯೊಬ್ಬರಿಗೂ  ‘ ಬಾಯಿ ಸಾಹೇಬ’ ಆದ್ಲು ಏಕಾ  ನೋಡಿದವರ ತಲಿ  ಗೌರವದಿಂದ ಬಾಗೂ ಹಂಗ!

“ಅಲ್ರೀ, ಮ್ಯಾಲಿನ  ತೋಟದಾಗ  ಕಬ್ಬು  ಹಾಕಿದ್ನಲಾ, ಈಗ ಕಟಾವಿಗೆ  ಬಂದಿರಬೇಕು. ಗಾಣಾ  ಯಾವಾಗ  ಹೂಡ್ತಾನಂತ”  ಅಂತ  ರಾವ ಸಾಹೇಬರಿಗೆ ಕೇಳಾಕಿ. ” ಲಕ್ಷ್ಮಣ,  ಶೇಂಗಾದ  ಬೆಳಿ ಹೆಂಗದ?  ಛಲೋ ಇಳದಾವೇನ   ಭಮ್ಮುಕಾಯಿ?( ಭೂಮಿ ಕಾಯಿ ಅಂದರ ನೆಲದಾಗಿನ ಕಾಯಿ- ಶೇಂಗಾ) ಅಂತ  ಕೇಳಾಕಿ ಲಕ್ಷ್ಮಣ  ವಾರದ್ದ ಕಾಯಿಪಲ್ಯಾ, ಬೆಣ್ಣೆ ಎಲ್ಲಾ ತಗೊಂಡು ಬಂದಾಗ. ಆ  ಕಾಲಮಾನದ  ಸ್ಥಿತಿ ಗತಿ  ಲಕ್ಷ್ಯಕ್ಕ  ತಂದುಕೊಂಡ್ರ , ಏಕಾನ  ಈ  ಮಾಲ್ಕಿ ವಿಶೇಷತಾ  ವಿಶೇಷನs  ಅನಸೋದು ಸಹಜ. ರಾವ್ ಸಾಹೇಬ್ರಿಗೆ  ಖುಷಿ ತಮ್ಮ ಹೆಂಡತಿ ಹುಷಾರಕಿ  ನೋಡಿ. ಏಕಾ ಚೊಚ್ಚಲ ಗರ್ಭಿಣಿ  ಇದ್ರನೂ  ತೋಟ, ಹೊಲದ  ವಿಷಯ ಬಂತು  ಅಂದ್ರ  ಏನ  ಸುಸ್ತು, ಪ್ರಕೃರ್ತಿ  ತಕರಾರು ಇದ್ರನೂ ಅದನ  ಒತ್ತಿ  ಇಟ್ಟು ಹೊಲದ  ವಿಷಯದ  ಕಡೆ ಗಮನ ಕೊಡಾಕಿ.  ಯಾವುದೇ  ಹೈಗೈ ಮಾಡ್ತಿದ್ದಿಲ್ಲ. ಅದು ಹಂಗs ಬೆಳಕೋತನ  ಬಂತು.

ಅಣ್ಣಾ ಸಾಹೇಬ  ಅಂದ್ರ  ನಮ್ಮ ಅಣ್ಣಾ(ನಮ್ಮ ತಂದೆ)  ಹುಟ್ಟಿದ್ರು.  ನಮ್ಮಜ್ಜಾ ಅವರ  ಹೇಳಿಕೆ ಪ್ರಕಾರ  ಬಾಣಂತನ  ಇಲ್ಲೇ  ಚಿಕ್ಕೋಡಿಯೊಳಗನ  ನಡದಿತ್ತು. ನಮ್ಮ ಏಕಾನ  ಅವ್ವನ  ಇಲ್ಲಿ ಬಂದು  ನಿಂತಿದ್ಲು. ತನ್ನ ಮಗಳ  ವೈಭವ ನೋಡಿ  ಗಂಗಾಬಾಯಿ  ಖುಷಿ ಹೆಚ್ಚಾಗಿ  ಮನಸಿನ್ಯಾಗ  ಹೆಮ್ಮೆ ಮೂಡಿದ್ರೂ ಆ  ತಾಯಿ ಕರುಳಿಗೆ  ಆಗಾಗ ಯಾವುದೋ  ಒಂಥರಾ  ಕಸಿವಿಸಿ ಆಗ್ತಿತ್ತಂತ. ಮುಂದಿನ  ದೌರ್ಭಾಗ್ಯದ, ದುರ್ಭರ ದಿನಗಳ ಸೂಚನಾ ಅದಾಗಿತ್ತೋ ಏನೋ  ಅನಸ್ತದ ನನಗ ಈಗ. ಆಗ ಗಂಗಾಬಾಯಿ  ತಾನೇ ಸಮಾಧಾನ ಮಾಡ್ಕೋಳಾಕಿ ;” ಈ ಹುಚ್ಚ ಖೋಡಿ  ಕರಳು  ಭಾಳ  ಕೆಟ್ಟದ್ದು. ಎಲ್ಲಿಂದೋ ಏನೋ ತಗೋಂಬಂದು  ಲೆಕ್ಕಾ ಹಾಕು ಮನಸಿಗೆ  ಸಾಥ ಕೊಡ್ತದ ಈ  ಕರುಳು” ಅಂತ  ಬೈಕೋತ  ಸಮಾಧಾನ  ತಾಳೋ  ಪ್ರಯತ್ನ  ಮಾಡ್ತಿದ್ಲು ಆ ತಾಯಿ  ಗಂಗಾಬಾಯಿ.
 ತಾ  ಹಸಿ ಬಾಣಂತಿ  ಇದ್ದಾಗಲೂ ಏಕಾ, ರೈತ ಬಂದಾಗ ” ಅಲ್ಲೋ‌  ಲಕ್ಷ್ಮಣಾ ಜೋಳಕ್ಕ ಕಾಡಿಗಿ ಬ್ಯಾನಿ  ಬಿದ್ದತಿ ಅಂತಲ್ಲೋ?  ಅದಕ್ಕ ಏನರೆ  ಔಷಧಿ  ಹೊಡಿಬೇಕಿಲ್ಲೋ ? ಜೋಳ ಕರಿ ಬಿದ್ದು ಅಂದ್ರ  ಪ್ಯಾಟ್ಯಾಗ  ಕಿಮ್ಮತ್ತು  ಬರಾಂಗಿಲ್ಲಾ.” ಅಂತ ಹೇಳಿ ‘ ತಂಬಾಕಕ್ಕ ಜಿಗಿ  ಏನ  ಬಿದ್ದಿಲ್ಲ  ಹೌದಲ್ಲೊ  ಮತ್ತ ” ಅಂತ ಸವಿಸ್ತಾರ  ಮಜಕೂರ‌ ಕೇಳಿ  ತಿಳಕೊಂಡು  ಉಸಿರು ಬಿಡೋ ಜಾಯಮಾನ ಆಕೀದು. ಒಟ್ಟು ಈ ಹೊಲಾ ಮನಿ ಪೂರಾ  ಆಕಿ ಜೀವದಾಗ  ಬೆರೆತು ಏಕರಸ  ಆಗಲಿಕ್ಹತ್ತಿತ್ತು ಆಗಿಂದನs.

“ಸೋನೀ  ನೀ ಬಾಣಂತಿ  ಇದ್ದೀ. ಭಾಳ  ವಿಚಾರ ಮಾಡಬ್ಯಾಡ. ಆರಾಮ ತಗೋ ” ಅಂತ ಅವ್ವ  ಜಬರಿಸಿದಾಗ  ಜಬರದಸ್ತಿಲೆ  ಕಣ್ಣು  ಮುಚ್ಚಿ ಮಲಕೋತಿದ್ಲು  ಏಕಾ. ಕೂಸು ಮಲಗಿದಾಗ  ಮತ್ತೇನರೆ  ಹೊಸ ವಿಚಾರ  ತಲಿಯೊಳಗ. ರಾವ್ ಸಾಹೇಬ್ರು ಹೆಚ್ಚು ಕಡಿಮಿ ಎಲ್ಲಾ  ಹೊಲಾ ಫಾಳೇದಲೇನ(ಲಾವಣಿಲೆ)  ಕೊಟ್ಟ ಬಿಟ್ಟಿದ್ರು. ಎಲ್ಲೋ ಒಂದ ಹತ್ತಿಪ್ಪತ್ತ ಎಕರೆ  ಮನಿಲೆ  ಮಾಡ್ತಿದ್ರು. ಫಾಳೇದ್ದ ರೊಕ್ಕ, ಕಾಳು ಕಡಿ ಎಲ್ಲಾ ಮನಿತುಂಬ ಬಂದ ಬೀಳ್ತಿತ್ತು. ಯಾತಕ್ಕೂ ಕಡಿಮಿ ಇದ್ದಿದ್ದಿಲ್ಲಾ. ಆದರೂ ಸೋನವ್ವನ  ತಲಿಯೊಳಗ ಹೊಸಾ ವಿಚಾರ ಸುಳೀತಿತ್ತು- ಇನ್ನೊಂದ ಇಪ್ಪತ್ತು ಎಕರೆ  ಬಿಡಿಸಿ ಕೊಂಡು ಮನೀಲೆ  ಬಾಗಾಯತಿ (ತೋಟ ಪಟ್ಟಿಯ  ಸಂಪೂರ್ಣ  ಜವಾಬ್ದಾರಿ, ಒಂದರ್ಥದಲ್ಲಿ ಒಕ್ಕಲುತನ) ಮಾಡಬೇಕು ಅಂತ.
ರೈತರು ಬಂದಾಗ  ಅವರ  ಬಾಯಿಲೇನೂ  ಕೇಳಿ ಜಮೀನು ಭಾಳ  ಫಲವತ್ತಾದದ್ದು ಅಂತ  ನಕ್ಕಿ ಮಾಡ್ಕೊಂಡಿದ್ಲು. ರಾವ್ ಸಾಹೇಬ್ರೂ  ಹೇಳಾವ್ರು ಆವಾಗಾವಾಗ;” ಬಾಯಿ ಸಾಹೇಬ  ಜಮೀನು ಭಾಳ  ಅಸ್ಸಲ!  ನೀರಿಗೂ ಕೊರತಿ  ಇಲ್ಲ ದೇವರ ದಯಾದ್ಲೆ. ಪೈರು ತುಂಬಿ ನಿಂದ  ಹೊಲಾ ಭಂಗಾರದ  ಘಟ್ಟೀನ  ನೋಡ ” ಅನ್ನಾವ್ರು.

ಆಗಿನ ಈ  ವತನದಾರರು  ಮೈಮುರಿದು  ಹೊಲದಲ್ಲಿ  ದುಡೀಲಿಕ್ಕ ಒಲ್ಲರು. ಮಾಲ್ಕೀತನ, ವತನದಾರಕಿ  ಜೋರದಾಗ  ಗರಕ ಆಗಿ  ಕೂತು ಉಂಡು ವ್ಯಾಳ್ಯಾ ಸಿಕ್ಕಾಗ  ಹೊಲದ  ಕಡೆ  ಕಣ್ಣ ಹಾಯಿಸಾವ್ರು. ಬೆಳಿಯೊಳಗ, ಬಂದ  ಫಸಲಿನ್ಯಾಗ  ಏನರೇ ಭಾನಗಡಿ  ಆದ್ರ  ಲುಕ್ಸಾನು ತಮಗೇ  ಅನ್ನೋದನ್ನ ಮರತs  ಬಿಡ್ತಿದ್ರು ಅವರು. ಆದರೆ  ಜೀವನ  ಕಲಿಸಿದ, ಕಲಸ್ತಿದ್ದ  ಪಾಠ  ಏಕಾನ್ನ  ಮೈಮರೀಲಿಕ್ಕೆ  ಬಿಡ್ತಿದ್ದಿಲ್ಲಾ. ಯಾವುದನ್ನೂ  ಹಗುರಾಗಿ  ತಗೋತಿದ್ದಿಲ್ಲಾ. ಬರೂ ಕಾಳು ಕಡಿಯೊಳಗ  ಚೂರೂ ಕೊರೆ ಬರೆದ ಹಾಂಗ, ಫಾಳೇದ್ದ ( ಫಾಳೇ ಅಂದ್ರೆ ಲಾವಣಿ ಅಂತ ಅರ್ಥ) ರೊಕ್ಕ  ಬರೋಬ್ಬರಿ  ಆಗಿ  ಬರೂದ್ರ  ಬಗ್ಗೆ ಬರೋಬ್ಬರಿ  ವಿಚಾರ ಮಾಡಿ  ಹಂಗs  ತಯಾರಾದ್ಲು, ಪಳಗಿದ್ಲು.ಆಕೀ ರಕ್ತದಾಗನ  ಆ ಖಟಿಪಿಟಿ  ಗುಣಾ ಬಂದ ಬಿಟ್ಟಿತ್ತು. ಅದ್ಕೇ ಆಕಿ ಆ ಇನ್ನೊಂದು ಇಪ್ಪತ್ತು ಎಕರೆ ಬಿಡಿಸಿ ಕೊಂಡು ಮನೀಲೆ ಬಾಗಾಯತಿ ಮಾಡೋ ವಿಚಾರ  ಗಟ್ಟಿ ಮಾಡ್ಕೊಂಡ ಬಿಟ್ಲು.

ಒಂದಿನಾ  ರಾವ ಸಾಹೇಬ್ರ  ಜೋಡಿ ಮಾತಾಡಿ ಕೋತ  ವಿಷಯ  ಮುಂದಿಟ್ಲು;” ಅಲ್ಲಾ  ಇಲ್ಲೀದು ಆ ಇಪ್ಪತ್ತ ಎಕರೆ ಬಿಟ್ರ ಎಲ್ಲಾ ಲಕ್ಷ್ಮಣನೇ  ಮಾಡ್ತಾನ. ಬೆಳವ್ಯಾಗಿಂದು ಭರಮಣ್ಣ, ಕಾಡಪ್ಪ ಮಾಡ್ತಾರ. ಜಮೀನು ಭಂಗಾರ ಬಿತ್ತಿ ಭಂಗಾರ  ಬೆಳಿಯೂ ಭೂಮಿ. ಇಲ್ಲೀದನ  ಇನ್ನೊಂದು ಹತ್ತಿಪ್ಪತ್ತ ಎಕರೆ ಬಿಡಿಸಿ ಕೊಂಡು ಮನೀಲೆ ಬಾಗಾಯತಿ  ಇಟ್ರ ಹೆಂಗ?”  ಅಂತ  ವಿಷಯ ಮುಂದಿಟ್ಲು  ಏಕಾ. ರಾವಸಾಹೇಬ್ರು ಹೆಂಡತಿ ಮಾರಿ  ನೋಡಿದ್ರು; ಆಕೀ  ಮಾರಿ ಮ್ಯಾಲಿನ ಆತ್ಮವಿಶ್ವಾಸದ ಆ ಕಳೆ  ನೋಡಿ  ದಂಗಾದ್ರು  ಅವರೂ. ವಿಚಾರದಾಗ  ಬಿದ್ದ ಅವರಿಗೂ ಹೌದು ಅನಿಸ್ತು.” ಖರೇ ಅದ  ಸೋನಾ ಹೇಳೋದು. ಬರೋಬ್ಬರಿನೇ  ಅದ” ಅಂತ  ಅನಿಸಿ ಲಕ್ಷ್ಮಣನ ಜೋಡಿ  ಮಾತಾಡೋ  ವಿಷಯ ನಕ್ಕಿ ಮಾಡ್ಕೊಂಡ ಬಿಟ್ರು  ರಾವ್ ಸಾಹೇಬ್ರು.

ಮುಂದೆ  ಎರಡ ದಿನದಾಗ  ಬಂದ  ಲಕ್ಷ್ಮಣನ  ಮುಂದೆ  ಆ ಮಾತು  ಇಟ್ರು; ” ಲಕ್ಷ್ಮಣಾ  ಇನ್ನೊಂದ ಇಪ್ಪತ್ತು ಎಕರೆ  ಜಮೀನು ಈ ಸಲ ನಾನs  ನೋಡ್ಕೋಬೇಕೂಂತ  ಮಾಡೇನಿ; ಪಾಲಲೇ  ಕೊಡೂದಂತ.ಒಟ್ಟು  ನಾಲ್ವತ್ತು ಎಕರೆ.
ಖರ್ಚು ವೆಚ್ಚದಾಗೂ  ಅರ್ಧ, ಬಂದ  ಉತ್ಪನ್ನ ದಾಗನೂ  ಅರ್ಧ. ಬೇಕಾದ್ರ  ನೀನೇ  ಮಾಡು. ನಂದೇನೂ  ತಕರಾರ  ಇಲ್ಲ. ಏನಂತೀ ?” ಲಕ್ಷ್ಮಣ  ಆಳದು ತೂಗಿ  ಲೆಕ್ಕ ಹಾಕಿ ಕಡೀಕ  ಹೂಂ ಅಂದ. ಭಂಗಾರದ  ಹೊಗಿ ಹಾಯ್ತಿತ್ತ  ಅವನ ಮನ್ಯಾಗ  ಈ  ಜಮೀನದ  ಉತ್ಪನ್ನ ಲೆ . ಬಿಟ್ಟೇನ ಮಾಡ್ತಾನ .

ಹೀಂಗ  ಶುರು ಆತು ನಮ್ಮ  ಏಕಾಂದು  ಖರೇ ಒಕ್ಕಲುತನದ  ಹಾದಿ  ಪಯಣ!  ಒಂದು ಮಾತು ಇಲ್ಲಿ  ಹೇಳಲಿಕ್ಕೇ ಬೇಕು, ಏಕಾನ ಈ ವ್ಯವಸ್ಥಾ, ಮಾತು- ಕತೆ  ಎಲ್ಲಾ ಇನ್ನೂ  ಒಳಬಾಗಿಲಿನಾಗ  ನಿಂತs ನಡೆದಿತ್ತು. ಆ ಕಾಲನ ಹಂಗಿತ್ತಂಬೋದು ಹೊಸ  ವಿಷಯ ಏನಲ್ಲ. ಹೆಣ್ಣು ಮಕ್ಕಳು ಹೊರಬಂದು ಮಾತಾಡೋದು, ಹೆಚ್ಚು ಮಾತಾಡೋದು  ಅವರವರ  ಮನೆತನದ ಘನತೆಗೆ  ಕುಂದು ಎಂಬ ಹಾಗೆ ಆ ವಾತಾವರಣ ಇತ್ತು. ಅಂಥಾ ಕಾಲದಾಗ  ನಮ್ಮ ಏಕಾ ಸದ್ದಿಲ್ಲದೆ ಹೊಲದ  ವಿಷಯದಾಗ  ತಲೀ ಹಾಕಿ, ಭಂಗಾರ ಬಿತ್ತಿ ಭಂಗಾರ ಬೆಳಿಯೂ ಭೂಮಿಯೊಳಗ ಕಬ್ಬು ಬೆಳಿಲಿಕ್ಕೆ ಸಲಹಾ ಕೊಟ್ಟಳು ತನ್ನ ಗಂಡ ರಾವ್ ಸಾಹೇಬ್ರಿಗೆ; ಅಂದ್ರ ನಮ್ಮ ಅಜ್ಜನಿಗೆ.
 ನಾ ಅನ್ಕೋತೀನಿ  ಈಗ – ದೇವರು ಭಾಳ ಶಾಣ್ಯಾ. ಹೀಂಗ ಅಂವಾ  ಸೋನವ್ವನ್ನ  ಆಕೀ  ಮುಂದಿನ  ಜೀವನಕ್ಕ ತಯಾರ ಮಾಡೋ ಹುನ್ನಾರ  ಮಾಡಿ  ತಯಾರ ಮಾಡ್ಯೂ ಬಿಟ್ಟಾ. ಆದರ  ಅದರಾಗಿಂದು  ಒಂದು ಪೈಸಾದಷ್ಟ  ದೊಡ್ಡಿಸ್ತನಾ  ತಾ  ತಗೋಳದೇ ಅದನ್ನ ಆಯಾ ಜೀವದ  ಪದರಾಗನ s‌ ಕಟ್ಟಿ  ಬಿಟ್ಟು ತಾ ಬಾಜೂಕ ನಿಂತು  ಮಜಾ  ನೋಡಿ  ನಗ್ತಾನ. ಒಟ್ಟಿನ್ಯಾಗ ಒಂದು  ಹೊಂದ  ಹಿಡದ ನಡದಿತ್ತು ನಮ್ಮ ಏಕಾನ ಜೀವನ,  ಆ ಬರಸಿಡಿಲಿನಂಥಾ  ಘಟನೆ; ನಮ್ಮ ಅಜ್ಜನ  ಅಕಾಲ ಸಾವಿನ  ಘಟನೆ  ನಡಿಯೂ  ತನಕಾ.

ನಮ್ಮ  ಅಜ್ಜ ತೀರಿದ ಮ್ಯಾಲೆ ನಮ್ಮ ಏಕಾ  ಪೂರಾ ಮಂಕಾಗಿ, ಮಬ್ಬ ಹಿಡದು ಈ  ಲೋಕದ ಜ್ಞಾನನ  ಇಲ್ಲಧಾಂಗ  ಗೋಡೆ ಕಡೆ  ಮುಖ ಮಾಡಿ ಮಲಗಿ ಬಿಟ್ಲಂತ – ತನ್ನ  ಮಗಂದು, ತಂದು ಜೀವ, ಜೀವನಾ  ಪೂರ್ತಿ  ತನ್ನ ಅಪ್ಪನ ಕೈಗೆ ಒಪ್ಪಿಸಿ. ಆದರೆ  ದೈವದಾಟದ  ಹಾದಿ ತಪ್ಪಸೋರ  ಯಾರು ; ಅದನ ಬದಲ ಮಾಡೋರ ಯಾರು? ಯಾಕೋ ಏನೋ ಸಂಶಯ, ಅಪನಂಬಿಕೆ  ಏಕಾನ ಮನಸಿನ್ಯಾಗ  ಏಕಾ ಏಕಿ  ಸುಳೀತು, ಆಕೀ  ಅಪ್ಪ ಒಂದೊಂದೇ ಹೊಲಾ ಮಾರಲಿಕ್ಕ ಶುರು ಮಾಡಿದಾಗ. 

ಗೋಡೆ ಕಡೆ ಮುಖ ಮಾಡಿ ಮಲಗಿ ಬಿಟ್ಟ ಏಕಾ ಮತ್ತ  ಬದುಕಿನತ್ತ  ಹೊಳ್ಳಿದ್ಲು. ಎದ್ದು ಕಟ್ಟಿದ್ದ  ಅಂಬಾಡಾ  ಬಿಚ್ಚಿ ಕೂದಲಾ ಝಾಡಿಸಿ  ತಗಿಸಿ ಬಿಟ್ಲು. ಮಡಿ ಹೆಂಗಸಾಗಿ  ಆ  ಚಿಕ್ಕ ವಯಸ್ಸಿಗೇನೇ ಉಂಡ  ಊಟಾ  ಕುಡದ ನೀರಾ ಅಂತ ಶುರು ಮಾಡಿ  ತನ್ನ ಹೊಲಾ, ಆಸ್ತಿ ಪಾಸ್ತಿ ಎಲ್ಲಾ ನೋಡ್ಕೋಳ್ಳೋ  ನಿರ್ಧಾರ ಮಾಡಿ ನಡದ ಬಿಟ್ಲು.
ಒಂದು ಮಾತು ಹೇಳಲೇ ಬೇಕು ; ನಮ್ಮ ಏಕಾ ಕುಬಸಾ  ಬಿಡಲಿಲ್ಲ. ಊಟಾ, ಮಡಿಕೆಲಸ ಆತಂದ್ರ ಕುಬಸಾ ತೊಟ್ಟೇ ಹೊರಗ ಬೀಳ್ತಿದ್ಲು ಆಕಿ!

ಭಾಳ ಗಟ್ಟಿ ನಿರ್ಧಾರ ಏಕಾಂದು. ಆಗ ಹೆಣ್ಣು ಮಕ್ಕಳು  ಬಿಂದಾಸ್ ಆಗಿ  ಹೊರಗ  ಬರೂ ಹಂಗಿರಲಿಲ್ಲ. ಮನಿಯೊಳಗ  ಸುದ್ಧಾ ಒಳಬಾಗಿಲಲ್ಲೇ ನಿಂತು ಮಾತಾಡೋ ರೂಢಿ. ಅನ್ಯ ಗಂಡಸರ ಜೋಡಿ ಮಾತಾಡೂವಾಗ ದೃಷ್ಟಿ ನೆಲದತ್ತಲೇ  ಇರಬೇಕಾದ  ಕಡ್ಡಾಯ ಇತ್ತು. ಊಟ ಬಡಿಸುವಾಗನೂ  ಒಂದು ಅಂತರ ಕಾಯ್ಕೋಬೇಕಿತ್ತು. ಒಬ್ಬೊಬ್ಬರ ಮನೆಯೊಳಗಂತೂ  ಗಂಡಸರ ತಟ್ಟೆಯಲ್ಲಿ ಯಾವ ಪದಾರ್ಥ ಖಾಲಿ ಆಗೇದ  ನೋಡ್ಕೊಂಡು  ಮಾತಿಲ್ಲದೇ ಬಡಿಸೋ ಕಠಿಣ ರೂಢಿನೂ ಇತ್ತಂತ!  ಅಂಥ ಕಾಲ ಅದು. ಆ ಕಾಲಘಟ್ಟದಲ್ಲಿ ಒಳಬಾಗಿಲು ಬಿಟ್ಟು, ಹೊರಬಾಗಿಲಿಗೆ ಬಂದು ಬೀದಿ  ಬಾಗಿಲು  ದಾಟಿ ಹೊಲದ ಹಾದಿ  ಹಿಡದ್ಲು  ಏಕಾ. ಅದೊಂದು ದೊಡ್ಡ  ಸಾಹಸದ ಕೆಲಸ. ನಮ್ಮ ಏಕಾನ ಅಪ್ಪನೂ ಹೇಳಿದ್ರಂತ -” ನೋಡ  ಸೋನಿ  ನಿಮ್ಮದು ವತನದಾರರ ಮನಿತನ. ‘ಬಾಯಿ ಸಾಹೇಬ’  ಅನ್ನಿಸಿಕೊಳ್ತಿ  ನೀ. ಇದ್ಯಾಕೋ ಠೀಕ ಅನಸವಲ್ಲತು ನನಗ. ವಿಚಾರ ಮಾಡಿ ನೋಡು” ಅಂತ. ಆದರೆ ಸೋನಿ  ಅದನ್ಯಾವದನ್ನೂ ತಲಿಗೆ ಹಚ್ಚಿಕೊಳ್ಳದೇ ನಡದ್ಲು  ತನ್ನ ಹಾದಿಯೊಳಗ. 

“ಬಾಯಿ ಸಾಹೇಬ” ಅಂಬೋ ಆ ಹೆಸರನ್ನೇ ಕಾಯಂ ಆಗಿ  ತ್ಯಜಿಸಿ  ಬಿಟ್ಲು, ತಾ ಮಡಿ ಹೆಂಗಸಾಗಿ ಒಳ ಬಾಗಿಲಾ ದಾಟಿ  ಹೊರ ಬಾಗಿಲಿಗೆ ಬಂದ ದಿನಾನೇ. “ಅಕ್ಕಾಗೋಳ” (ಅಕ್ಕಾವ್ರೇ) ಆಗಿ ಬಿಟ್ಲು ಎಲ್ಲಾ ರೈತರಿಗೂ, ಆಳು ಕಾಳಿಗೂ. ಒಕ್ಕಲುತನದತ್ತ ಮುಖ ಮಾಡಿ ನಿಂತ ನಿಲುವು ಬದಲಿಸಲಿಲ್ಲ, ಅಲ್ಲಾಡಲಿಲ್ಲ. ಇದು ಸ್ವಾತಂತ್ರ್ಯ ಪೂರ್ವದ ಅಂದರೆ 1930 ರ ದಶಕದ ಕಾಲಾವಧಿಯಲ್ಲಿ ನಡೆದ ಸಂಗತಿ.

ಒಂದು ಗಟ್ಟಿ ಬುನಾದಿಯಂತೂ ತಯಾರಾಗಿತ್ತು ಹೊಲಾ ಮನಿ  ಸಂಭಾಳಸಲಿಕ್ಕ;
ಅಷ್ಟೇ ಗಟ್ಟಿತನಾನೂ ಇತ್ತು. ಸಾಕಷ್ಟು ವ್ಯವಹಾರ ಜ್ಞಾನ, ಅದಕ್ಕೂ ಮಿಗಿಲಾದ ಧೈರ್ಯ ಇತ್ತು  ಏಕಾನಲ್ಲಿ ಆಸಕ್ತಿ ಜೊತೆ. ಇವೆಲ್ಲವನ್ನೂ ಮೀರಿ ತನ್ನ ಮಗುವಿನ, ತನ್ನ ಬದುಕಿನ, ಉಳಿವಿನ ಪ್ರಶ್ನೆ  ಇತ್ತು. ಮುಂದೆ  ನಡೆದ ಆಕಿ ಹಿಂದ ಹೆಜ್ಜೆ  ಇಡಲಿಲ್ಲ. ಸಮರ್ಥವಾಗಿ ನಿಭಾಯಿಸಿದ್ಲು  ಹಿಡಿದ ಕೆಲಸ. ಉತ್ಪನ್ನ  ಎಷ್ಟ ಬರ್ತಿತ್ತು ಅನೋಕಿಂತ ಇದ್ದ ಜಮೀನುಗಳನ್ನು ಭದ್ರವಾಗಿ ಕಾಯ್ದಿಟ್ಲು; ಇನ್ನೊಬ್ಬರ ಕೈಗೆ ಹತ್ತಗೊಡದ್ಹಾಂಗ  ಕಾಪಾಡಿದ್ಲು. ಹೆಣ್ಣು ಹೆಂಗಸು, ಅಂಥ ಕಟ್ಟುಪಾಡುಗಳ ವಾತಾವರಣ, ಏಕಾಂಗಿ ಏಕಾ ಯಾರನ್ನೂ, ಯಾತಕ್ಕೂ ದೂರದೇ ಈಸಿ ಪಾರಾಗಿ ತನ್ನ ಮಗನ ಅಮಾನತ್ತನ್ನು ಅವನ ಕೈಲಿರಿಸಿ ಗೆದ್ಲು ಏಕಾ. ಅಲ್ಲಿ ಮೇಲಿಂದನs ನೋಡಿದ ರಾವ್ ಸಾಹೇಬ್ರ ಮಾರಿ ಮ್ಯಾಲೆ ತೃಪ್ತಿ, ಅಭಿಮಾನದ ನಗು ಮೂಡಿರಬೇಕು. ಅಭಿಮಾನದಿಂದ ತಲೆ ಎತ್ತಿ ನಿಂತು ದೈವದ  ಜೂಟಾಟದ ಬಿಗಿಮುಷ್ಟಿಯತ್ತ ಒಮ್ಮೆ ದಿಟ್ಟಿಸಿ ನೋಡಿ ನಕ್ಕಳು ಏಕಾ ಅಳು ನುಂಗಿ!

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

June 28, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. Shrivatsa Desai

    ಏಕಾನ ವ್ಯಕ್ತಿತ್ವದ ಬೆಳವಣಿಗೆಯನ್ನು ಕಣ್ಣಿಗೆ ಕಟ್ಟುವ ವಿವರಗಳೊಂದಿಗೆ ಬರೆದ ಲೇಖಕಿಯ ಅಗಾಧ ನೆನಪಿನಶಕ್ತಿಗೆ ತಲೆಗೂಗಲೇ ಬೇಕು. ಆಕೆಯೊಂದಿಗೆ ಅವರು ಕಳೆದ ಸಮಯ ಹೆಚ್ಚಾಗಿರಲಿಕ್ಕಿಲ್ಲ. ಅದರಿಂದಲೇ ಆಗಿನ ಹೊಲದ ವ್ಯವಹಾರ, ಹಳ್ಳಿಯ ಜೀವನವನ್ನು (ಅದನ್ನು ಕಾಣದಂಥ ನನ್ನಂಥವರಿಗೆ) ಅಲ್ಲಿಯ ಭಾಷೆಯ ಸೊಗಡಿನಲ್ಲೇ ಚಿತ್ರಿಸಿದ ವೈಖರಿಯ ಬಗ್ಗೆ ಸಾಲು ಸಾಲು ಬರೆದರೂ ಸಾಲೋದಿಲ್ಲ! ಮುಂದಿನ ಕಂತಿಗೆ ಕಾಯುವವರಲ್ಲಿ ನಾನೂ ಒಬ್ಬ.

    ಪ್ರತಿಕ್ರಿಯೆ
    • Sarojini Padasalgi

      ನಾನು ಅವಳೊಂದಿಗೆ ಕಳೆದ ಸಮಯ ನನ್ನ ಮದುವೆಗೆ ಮೊದಲು ಆಮೇಲೆ ಅವಳು ಕೊನೆಯುಸಿರು ಎಳೆವ ವರೆಗೆ ಅಂದರೆ ಸುಮಾರು 36 ವರುಷ. ನನ್ನ ಎಳವೆಯಲ್ಲ ಅವಳ ಮಡಿಲಲ್ಲೇ. ನಮ್ಮ ಸಂವಾದ ಅಂತವಿಲ್ಲದ್ದು.ಅದೆಂಥ ಬಂಧ ನಾನರಿಯೆ. ಅವಳು ಉಸಿರುಸಿರು ನನಗೇನೋ ಹೇಳಿದಂತೆ.
      ಅದಕನೇನೆನ್ನಬೇಕು ನಿಜಕ್ಕೂ ಗೊತ್ತಿಲ್ಲ ನಂಗೆ.
      ನಿಮ್ಮ ರೆಸ್ಪಾನ್ಸ್ ಗೆ ಅನಂತ ಧನ್ಯವಾದಗಳು.ತಪ್ಪದೇ ಓದುವ ನಿಮ್ಮ ಆಸ್ಥೆ ಗೆ ಅನೇಕ ವಂದನೆಗಳು ಶ್ರೀವತ್ಸ ದೇಸಾಯಿಯವರೇ.

      ಪ್ರತಿಕ್ರಿಯೆ
  2. ಶೀಲಾ ಪಾಟೀಲ

    ವಿಧಿಯ ಆಟ ಮೆಟ್ಟಿನಿಂತು ” ಬಾಯಿಸಾಹೇಬ” ನಿಂದ ” ಅಕ್ಕಾಗೋಳ” ಆದ ಏಕಾ ಅವರ ಜೀವನ ವಿಧಿಯೇ ಬೆರಗಾಗುವಂತಹದಿದೆ. ಅವರ ಮಾದರಿಯ ಜೀವನ ಓದುತ್ತ ಓದುತ್ತ ನೋಡುತ್ತಿರುವ ಅನುಭವ ಕೊಡುವಂತಿದೆ ನಿಮ್ಮ ಬರವಣಿಗೆ. ಅಭಿನಂದನೆಗಳು

    ಪ್ರತಿಕ್ರಿಯೆ
    • Sarojini Padasalgi

      ನಿಜ ಶೀಲಾ. ಒಮ್ಮೊಮ್ಮೆ ಅವಳ ಜೀವನದ ಏರಿಳಿತಗಳ ಬಗ್ಗೆ ಒಂಥರಾ ಕಸಿವಿಸಿ ಅನಸ್ತದ. ಆದರೆ ಏಕಾನ ಬಾಯಿಯಿಂದ ನಾ ಒಂದೇ ಒಂದು ಬಾರಿಯೂ ಅಂಥ ಮಾತು ಕೇಳಲಿಲ್ಲ. ಆ ವ್ಯಕ್ತಿತ್ವ ಎಂಥದಿದ್ದೀತು ಅನಕೋತೀನಿ ನಾ.
      ಧನ್ಯವಾದಗಳು ಶೀಲಾ.

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: