ಸರೋಜಿನಿ ಪಡಸಲಗಿ ಅಂಕಣ- ಗಂಧ ತೇಯ್ಧಾಂಗ ತೇಯ್ದ ಜೀವ…

ಅವಧಿ’ ಓದುಗರಿಗೆ ಸರೋಜಿನಿ ಪಡಸಲಗಿ ಅವರು ಈಗಾಗಲೇ ಸುಪರಿಚಿತ. ಅವರ ಸರಣಿ ಬರಹ ‘ಒಬ್ಬ ವೈದ್ಯನ ಪತ್ನಿ ಅನುಭವಗಳ ಗಂಟು ಬಿಚ್ಚಿದಾಗ..’ ಜನಪ್ರಿಯವಾಗಿತ್ತು.

ಈಗ ಈ ಸರಣಿ ‘ಡಾಕ್ಟರ್ ಹೆಂಡತಿ’ ಹೆಸರಿನಲ್ಲಿ ಬಹುರೂಪಿಯಿಂದ ಪ್ರಕಟವಾಗಿದೆ.

ಈ ಕೃತಿಯನ್ನು ಕೊಳ್ಳಲು –https://bit.ly/3sGTcvg ಈ ಲಿಂಕ್ ಕ್ಲಿಕ್ ಮಾಡಿ

ಅಥವಾ 70191 82729ಗೆ ಸಂಪರ್ಕಿಸಿ

ಸರೋಜಿನಿ ಪಡಸಲಗಿ, ಮೂಲತಃ ಬೆಳಗಾವಿ ಜಿಲ್ಲೆಯ ಹುಕ್ಕೇರಿಯವರು. ಮದುವೆಯಾದ ಮೇಲೆ ಧಾರವಾಡದವರಾದರೂ ಈಗ ಬೆಂಗಳೂರು ವಾಸಿ. ಪದವೀಧರೆ, ಗೃಹಿಣಿ. ಮೊದಲಿನಿಂದಲೂ ಸಂಗೀತದ ಹುಚ್ಚು ವಿಪರೀತ. ಯಾವುದೇ ಪದ ಸಿಕ್ಕರೂ ಅದನ್ನು ಸಂಯೋಜಿಸಿ ಹಾಡುವ ಅತೀವ ಆಸಕ್ತಿ. ಕ್ರಮೇಣ ಅದು ಭಾವಗೀತೆಗಳನ್ನು ಸ್ವಂತವಾಗಿ ಬರೆದು ಸಂಯೋಜಿಸಿ ಹಾಡುವತ್ತ ಕರೆದೊಯ್ದಿತು.

ಎರಡು ಕವನ ಸಂಕಲನಗಳು ಪ್ರಕಟವಾಗಿವೆ- ‘ಮೌನ ಮಾತಾದಾಗ’ ಮತ್ತು ‘ದೂರ ತೀರದ ಕರೆ’. ಇನ್ನೊಂದು ಸಂಕಲನ ‘ಹಳವಂಡ’ ಹಾಗೂ ಅವರೇ ರಚಿಸಿದ ಸಂಪ್ರದಾಯದ ಹಾಡುಗಳ ಸಂಕಲನ ‘ತಾಯಿ – ಮಗು’ ಅಚ್ಚಿನಲ್ಲಿವೆ. ಈ ಸಂಪ್ರದಾಯದ ಹಾಡುಗಳು 18 ಕಂತುಗಳಲ್ಲಿ ‘ರೇಡಿಯೋ ಗಿರ್ಮಿಟ್’ನಲ್ಲಿ ಪ್ರಸಾರ ಆಗಿವೆ. ಆಕಾಶವಾಣಿ ಬೆಂಗಳೂರು ಹಾಗೂ ಧಾರವಾಡದಿಂದಲೂ ಸಂದರ್ಶನದೊಂದಿಗೆ ಪ್ರಸಾರ ಆಗಿವೆ.

ಅವರ ಇನ್ನೊಂದು ಮನ ಕಲಕುವ ಅಂಕಣ – ತಣ್ಣೆಳಲ ಹಾದಿಯಲ್ಲಿ…

8

ನಮ್ಮ ಏಕಾನ  ಬದುಕಿನ್ಯಾಗ ವಿಧಿಯ ಕೈವಾಡ  ಹೆಂಗಿತ್ತು, ಏನಿತ್ತು  ಎಂಬೋದು ಎಣಿಕೆಗೆ ನಿಲುಕದ್ದು. ಬಂದ  ಕಷ್ಟಗಳನ್ನು ಮೆಟ್ಟಿ, ತನ್ನ ದು:ಖ ಕಣ್ಣೀರು ನುಂಗಿ ಬದುಕಿನ ಜೋಡಿ ಏಕಾ ಸಾಗಿದ ರೀತಿ ಆ ನಿಲುಕದ ಎಣಿಕೆಯ ಗಡಿಯನ್ನೂ ದಾಟಿದ್ದು. ಕಂಠಮಟ್ಟ ಬಂದ ಪ್ರವಾಹದಾಗಿಂದನೂ ಪಾರಾಗಿ ಬಂದ ಆ ಜೀವ, ಅಸಂಖ್ಯ  ಕಷ್ಟ- ನಷ್ಟಗಳನ್ನು ಕಂಡುಂಡ ಆ ಜೀವ ನಿರ್ಲಿಪ್ತತೆಯನ್ನ ಹೊದ್ದು ಕೊಂಡಿದ್ದರೂ ಇನ್ನೊಬ್ಬರ ಕಷ್ಟ ದು:ಖ  ಆ ಹೊದಿಕೆಯನ್ನು ಭೇದಿಸಿ ಆಕೀನ ಬಾಧಿಸತಿತ್ತು. ಒಂದು ಗಳಿಗೆ ಆಕಿ ತನಗs ಗೊತ್ತಿಲ್ಲಧಾಂಗ  ವಿಚಲಿತ  ಆಗಿ ಬಿಡ್ತಿದ್ಲು. ನಾ ದೊಡ್ಡಾಕಿ ಆದಹಾಂಗ ಅದು ನನಗ ಗೊತ್ತಾಗ್ತಿತ್ತು. 

ಅದs  ಕಾರಣಕ್ಕನ  ಏಕಾ ತೋಟ ಪಟ್ಟಿಯ ದೇಖರೇಖಿ  ಹೊಣೆ  ಹೊತ್ತುಕೊಂಡ ನಡದ್ಲು ತನ್ನ ಮಗನ ಜೀವನದ ದಾರಿ ಸುಗಮ ಇರಲಿ  ಅಂತ. ಒಂದೇ  ಮಗನ ಮೇಲೆ ತಪ ತೆಗೆದ ಜೀವ ಆಕೀದು. ಅಂಥಾಕಿಗೆ ತನ್ನ ಮಗನಿಗ ಯಾರೇ  ಅಪರೋಕ್ಷವಾಗಿ ಅಂದ್ರೂ ಸಹಿಸೋದು ಕಷ್ಟ ಆಗ್ತಿತ್ತು ; ಅದು ಅಗದೀ ಸಹಜೀಕನೂ  ಹೌದು.

ನಮ್ಮ ಅಣ್ಣಾಂದು  ಅಂದ್ರೆ  ನಮ್ಮ ತಂದೆದು ಒಂಥರಾ  ಪ್ರೇಮ ವಿವಾಹನs . ಅಣ್ಣಾನ ಅಜ್ಜನ ಮನಿ ಅಂದ್ರೆ  ಏಕಾನ ತೌರಮನಿನೂ  ಐನಾಪೂರನೇ. ಅಣ್ಣಾ ಬೆಳೆದದ್ದೂ ಅಲ್ಲೇ. ಮುಲ್ಕಿ  ಪರೀಕ್ಷಾ ಆದ ಮ್ಯಾಲೆ ಐನಾಪೂರ  ಬಿಟ್ಟು ಚಿಕ್ಕೋಡಿಗೆ  ಹೋದ್ರೂ ಐನಾಪೂರದ ಸಂಬಂಧ  ಹಂಗೇ ಅವಿಚ್ಛಿನ್ನವಾಗಿ ಮುಂದುವರಿದಿತ್ತು. ಮುಂದುವರೀಲೇ ಬೇಕಿತ್ತು. ಬರೂದು ಹೋಗೂದು ನಡದೇ  ಇರ್ತಿತ್ತು. ಊರ ತುಂಬ ಗೆಳೆಯರ ಬಳಗನೂ ಇತ್ತು. ನಾ ಹಿಂದೆ ಹೇಳಿದಂತೆ ನಮ್ಮ ಅವ್ವಾನ ತೌರಮನಿನೂ ಐನಾಪೂರನೇ. ಅವ್ವಾನ ತೌರಮನಿ ಅಣ್ಣಾನ ಅಜ್ಜನ  ಮನಿಂದ ಒಂದು ನಾಲ್ಕು ಹೆಜ್ಜಿ ಅಂತರದಾಗ ಇತ್ತು. ಹಿಂಗಾಗಿ ಎಲ್ಲಾ ಕೂಡಿ ಆಡಿ ಬೆಳೆದವರು. ನಮ್ಮ ಅಂಬಕ್ಕಜ್ಜಿ  ಮನಿ  ಪಡಸಾಲಿಯೊಳಗನ ಅಣ್ಣಾ ಗೋಲಿಯಾಟ  ಆಡ್ತಿದ್ರಂತ.  ನಮ್ಮ ಐನಾಪೂರ  ಅಜ್ಜ ಅಂದರ  ನಮ್ಮ ಅವ್ವಾನ ಅಪ್ಪ ಅಣ್ಣಾ ಸಣ್ಣಾವ್ರಿದ್ದಾಗ ಪ್ರೀತೀಲೆ ಅಣ್ಣಾನ್ನ “ನಂದಿಕುರಳ್ಯಾ” ಅಂತನs‌ ಕರೀತೀದ್ರಂತ.

ಹೀಂಗ ಬೆಳಕೋತ ಅದು ಮದವಿ ವಿಚಾರ ತನಕಾ ಬಂದಾಗ ಸ್ವಲ್ಪ ಸರಿನೋ ಅಲ್ವೋ, ಬೇಕೋ ಬ್ಯಾಡೋ  ಅನ್ನೂ ಮಾತು ಕತೆ ಸುರು ಆತು. ಅಂಬಕ್ಕಜ್ಜಿಯ ಅಕ್ಕ ಅಂದರೆ ಕಾಕಾನ  ಮಗಳು  ಒಬ್ರು  ಅಲ್ಲೇ ಐನಾಪೂರದಾಗನೇ  ಇರತಿದ್ರು. ಅವರು “ನೋಡ ಅಂಬಕ್ಕಾ ಅಣ್ಣಾ ಸಾಹೇಬ ಹುಡುಗ ಭಂಗಾರದಂಥಾಂವಾ. ಆದರ ಚಾದಂಗಡಿಯವರ ಮೊಮ್ಮಗ. ಅಂವಗ ಮಗಳ್ನ ಕೊಡ್ತಿಯೋ ಬ್ಯಾಡೋ ನೋಡು. ನನಗ್ಯಾಕೋ ಅಷ್ಟು  ವಾಜ್ಮಿ ಅನಸೂದಿಲ್ವಾ ಅಂಬಕ್ಕಾ” ಅಂತ ಅಂದ್ರಂತ. ಆಗ ಈ ಹೊಟೆಲ್ ನಡಸೂದು ಅಂದ್ರ ಭಾಳ ಕೆಳಮಟ್ಟದ  ಕೆಲಸ ಅಂಬೂ ಅಭಿಪ್ರಾಯ ಇತ್ತು.

ಆದರ ಋಣಾನುಬಂಧ,  ಅನುಬಂಧ , ಬ್ರಹ್ಮಗಂಟು  ಅದು; ಅಣ್ಣಾಂದು- ಅವ್ವಾಂದು ಮದವಿ  ಆತು.

ಆದರ ಅಂಬಕ್ಕಜ್ಜಿ ಅಕ್ಕನ ಮಾತು ನಮ್ಮ ಏಕಾನ್ನ ಎಷ್ಟರ ಮಟ್ಟಿಗೆ ಘಾಸಿ ಮಾಡಿರಬೇಕು ಅಂಬೋದು ನನಗ  ಭಾಳ  ತಳಮಳ ಉಂಟು ಮಾಡ್ತದ.” ವತನದಾರ  ಮನಿತನದ, ಮುತಾಲಿಕ ದೇಸಾಯರ ವಂಶದ ಕುಡಿ ಅಣ್ಣಾ ಸಾಹೇಬ್ಗ ನನ್ನ ಸಲುವಾಗಿ ಇಂಥ  ಮಾತು ಕೇಳಬೇಕಾತು ಅಕ್ಕವ್ವಾ” ಅಂತ ಕಣ್ಣೀರು ತಗೀತಿದ್ಲು ಏಕಾ.  ಅದನ್ನೆಲ್ಲಾ ಬಾಜೂಕ ಇಟ್ಟು ನಮ್ಮ ಅಣ್ಣಾನ ಜೀವನ ಅವ್ವಾನ  ಜೋಡಿ ಅಗದೀ ಥಾಟಪಾಟಲೆ ನಡೀತು. ಆ ಮಾತು ಬ್ಯಾರೆ. ನಮ್ಮ ಅಜ್ಜ ಅಂದರೆ ರಾವಸಾಹೇಬ್ರು ಅಂದ ಹಾಂಗ ಅವರ  ವಂಶದ ಹೆಸರು ಬೆಳೀತು, ಬೆಳಗಿತು ಅಣ್ಣಾ ಸಾಹೇಬ್ ನಿಂದ, ಮುಂದೆ ಅವರ ಮಕ್ಕಳಿಂದ. ಅದರಾಗ, ಆ ಮಹಾ ಕಾರ್ಯದಾಗ ನಮ್ಮ ಏಕಾ ತನ್ನ ಅಖಂಡ ಜೀವನ ಸವೆಸಿದ್ಲು, ತನ್ನ ಮಗನ ಭಾಗ್ಯವಂತ ಬದುಕು ನೋಡಿ ತೃಪ್ತಳಾದ್ಲು ಅದೇ ಆ “ಚಹಾದ  ಅಂಗಡಿಯವರ ಮಗಳು”!

ಹೌದು ಏಕಾ ತನಗಾಗಿ ಯಾವುದೇ ಅಪೇಕ್ಷಾ ಇಲ್ಲದs ಅಗದೀ ನಿರಪೇಕ್ಷಳಾಗಿ ಸವೆಸಿದ್ಲು ತನ್ನ ಬದುಕು.ಆಕೀ‌ ಅಕ್ಷಯ ವಾತ್ಸಲ್ಯ, ಮಮತಾ, ಅಂತ: ಕರಣ ಒಂದು ಛತ್ರಛಾಯಾ ಆಗಿ ಯಾವಾಗಲೂ ತಣ್ಣೆಳಲ ಹರಡಲಿಕ್ಕೆ ತನ್ನ ಕೈ  ಇಷ್ಟಗಲುದ್ದಕೂ ಚಾಚಿ ತಯಾರೇ ಇರ್ತಿತ್ತು. ಆಕೀ  ಮನ: ಸ್ಥೈರ್ಯ, ಧೈರ್ಯ, ದೃಢತೆ ನೋಡಿದವರು ಬೆರಳು ಕಚ್ಚೂಹಾಂಗ ಮಾಡೂವಂಥವು. ನಾ ಹಿಂದೆ ಬರಧಾಂಗ ನಮ್ಮ ಅವ್ವಾಗ  ನಮ್ಮಣ್ಣ ಹುಟ್ಟಿದ ಮ್ಯಾಲೆ  ಮೂರು ಬಾರಿ ಹೊಟ್ಟಿ ಇಳಿದು ಹೋತು. ಆಗ ನಮ್ಮ ಏಕಾ ತನ್ನ ಸವತಿಗೆ  ಬೇಡಿಕೊಂಡ್ಲಂತ; ಹುಟ್ಟೋ ಕೂಸಿಗೆ  ಆಕೀದೇ ಹೆಸರು ಇಡ್ತೀನೀಂತ. ಅದರ ಜೋಡೀನs ನಮ್ಮ ಮನೀ ದೇವ್ರು ಕೊಲ್ಹಾಪುರ ಅಂಬಾಬಾಯಿಗೂ ಹರಕಿ ಹೊತ್ಲು. ಬಲು ಕಠಿಣ ಹರಕಿ ಅದು – ಹುಟ್ಟಿದ ಕೂಸು ಐದು ವರ್ಷದ್ದು ಆದ ಮ್ಯಾಲೆ ಅಂಬಾಬಾಯಿ ಗೊಂದಲಾ  ಹಾಕಿಸಿ, ಅಲ್ಲಿ ಪ್ರತಿಷ್ಠಾಪನಾ ಮಾಡಿದ ಅಂಬಾಬಾಯಿ ಮುಂದೆ ಆ ಕೂಸಿನ್ನ ಎತ್ತಿಕೊಂಡು ತಾನು  ಒಂಟಿಗಾಲಲೇ ನಿಂದರತೀನಿ, ಎಲ್ಲೂ ಆತುಗೊಳ್ಳದೇ, ಅಗದೀ  ನಟ್ಟ ನಡಬರಕ ಒಂದು ತಾಸು ಕಾಲ ಅಂತ. ಹಂಗs  ನಾ ಐದು ವರ್ಷಾದಾಕಿ ಆದಮ್ಯಾಲೆ ಅಂದರೆ ನಮ್ಮ ಅಣ್ಣಾ ಹುಕ್ಕೇರಿಯೊಳಗ ಕಟ್ಟಿಸಿದ ಹೊಸಾ ಮನಿ ವಾಸ್ತು ಶಾಂತಿ ಆದ ಮರುದಿನಾನs ಅಂಬಾಬಾಯಿ ಗೊಂದಲಾ ಹಾಕಿಸಿ ತನ್ನ ಹರಕಿ ಮುಟ್ಟಿಸಿದ್ಲು ಏಕಾ. ನನಗಿನ್ನೂ ಪೂರ್ಣ ಪಕ್ಕಾ ನೆನಪದ; ಆ ಅದ್ಭುತ ಅಪೂರ್ವ ದೃಶ್ಯ ಕಣ್ಣಾಗನs ‌‌‌‌ಅದ  ಅಗದೀ ಇನ್ನೂ ಈಗ ನಡದ ಹಂಗ ತಾಜಾ ಆಗಿ.

ಮಧ್ಯರಾತ್ರಿ  ಹನ್ನೆರಡು ಗಂಟೆಗೆ  ಬರೋಬ್ಬರಿ, ಆ ಹೊಸ  ಮನೆಯ ದೊಡ್ಡ  ನಡುಮನೆಯಲ್ಲಿ ಅಣ್ಣಾ ಗೊಂದಲಿಗ್ಯಾರ ಹಾಡು ಢೋಲಕದ  ಶಬ್ದದ ನಡುವ ಅಂಬಾಬಾಯಿ ಪ್ರತಿಷ್ಠಾಪನಾ  ಅಗದೀ  ಭಕ್ತಿ ವೈಭವದಲೆ  ಮಾಡಿದ್ರು. ಅಲ್ಲಿಂದಿಲ್ಲಿಗೆ ಹಾಸಿದ ಜಮಖಾನದ ಮ್ಯಾಲೆ ಜನಾ ಎಲ್ಲಾ ಕೂತಿದ್ರು. ಅಂಬಾಬಾಯಿ ಬಲಕ್ಕೆ ದೀವಟಿಗೆ  ಉರೀತಿತ್ತು. ದೀವಟಿ ಮಾಮಾ ಅದಕ್ಕ ಎಣ್ಣಿ ಹಾಕೋತ  ಕೂತಿದ್ದಾ. ಗೊಂದಲಿಗ್ಯಾರ  ಗೀತ ಕಥನ ಭರಭರಾಟಿಲೇ ಶುರು  ಆತು. ನಮ್ಮ ಏಕಾಂದು ಹರಕಿ ತೀರಸೂ ಪ್ರಕ್ರಿಯಾನೂ ಶುರು ಆತು. ಅಂಬಾಬಾಯಿ ಇದಿರಿಗೆ ಈ ತುದಿಗೆ  ನಟ್ಟನಡಬರಕ, ಗೋಡೆಯಿಂದ ಮೂರ್ನಾಲ್ಕು ಫೂಟ್ ಅಂತರದಾಗ ಏಕಾ ನನ್ನ ಬಗಲಾಗ ಎತ್ತಿ ಕೊಂಡು  ಒಂಟಿಗಾಲ ಮ್ಯಾಲೆ ನಿಂತಿದ್ಲು. ನಾ ಐದು ವರ್ಷದಾಕಿ ಇದ್ದೆ ಆಗ. ನನ್ನ ಕಾಲು ಆಕೀ ಮೊಣಕಾಲ ದಾಟ್ತಿದ್ದು. ಮಧ್ಯರಾತ್ರಿ, ನಿದ್ದೀ  ಹೊತ್ತು. ನನಗ ತೂಕಡಿಕೆ ಬಂದು ಝೋಲಿ  ಹೊಡಧಾಂಗ ಆದ ಕೂಡಲೇ ನಮ್ಮವ್ವ ನನ್ನ  ಎಚ್ಚರ  ಮಾಡ್ತಿದ್ಲು ಏಕಾಗ ತೋಲ ತಪ್ಪಬಾರದು ಅಂತ. ನಾ ಹಾಂಗ ಮೆಲ್ಲಗೆ ವಾಲಿ ಏಕಾನ ಹೆಗಲ ಮ್ಯಾಲೆ  ತಲಿ ಇಟ್ರೂ ಆಕೀ ಒಂಚೂರೂ ಅಲ್ಲಾಡ್ತಿರಲಿಲ್ಲ. ಆ ದೃಢತೆ, ಅಚಲ ಮನೋಬಲ ಆಕೀ ಆಜನ್ಮ ತಪಸ್ಸಿನ  ಸಾಧನೆ ಅನಸ್ತದ  ನನಗೆ. 

ನಮ್ಮ ಏಕಾನ ವಿಷಯ ಒಂದೊಂದೇ  ಹೇಳಕೋತ  ಹೊಂಟ ಹಾಂಗ ನನ್ನ ಎದಿ ತುಂಬಿ ಬಂದು ಒಂದು ಗಳಿಗೆ  ಮೂಕಳಾಗಿ ಕಣ್ಮುಚ್ಚಿ ಕೂತ ಬಿಡ್ತೀನಿ. ಹೊಲಾ- ಮನಿ, ತೋಟ-ಪಟ್ಟಿ ಒಂದು ಜೀವ ಆದರ ಮಗಾ – ಸೊಸಿ ಅಂತೂ ಸರೀನೇ ಮೊಮ್ಮಕ್ಕಳು ಆಕೀ ಪ್ರಾಣ. ಅಣ್ಣಾ ಆಕೀಗೆ ಚ್ಯಾಷ್ಟಿ ಮಾಡಾವ್ರು- ” ಸೋನವ್ವಾ  ಮೊಮ್ಮಕ್ಕಳ ಅಕ್ಕರತಿ ಒಳಗ ಮಗಾ ಇದ್ದಾನ ಅಂಬೂದ ಮರತs ಬಿಡ್ತೀ  ನೀ “ಅಂತ . ಅದಕ್ಕ ಏಕಾನ ಉತ್ತರ ತಯಾರ ಇರ್ತಿತ್ತು;” ಅಣ್ಣಪ್ಪಾ ನೀ ಕರಳ. ಆದ್ರ ಈ ನನ್ನ ಮೊಮ್ಮಕ್ಕಳು ಆ ಕರಳಿನ್ಯಾಗಿನ ತಿರಳಪಾ” ಅನ್ನಾಕಿ. 

ಮೊಮ್ಮಕ್ಕಳನ  ಎಷ್ಟ ಪರಿ ನೋಡ್ಕೊಂಡ್ರೂ  ಕಡಮೀನs  ಅಕಿಗೆ.  ನಾ ಹಿಂದೆ ಒಂದು ಸಲ ಹೇಳೀನಿ; ಈಗ ಮತ್ತ ಹೇಳ್ತೀನಿ- ನಮ್ಮ ಏಕಾ ಸಾಮಾನ್ಯ  ಅಜ್ಜಿಯಲ್ಲ. ಆಕೀ ಅಚ್ಛಾ ಬರೀ ತಿನಿಸಿ ಉಣಸಲಿಕ್ಕಷ್ಟs ಅಲ್ಲಾ. ಮೊಮ್ಮಕ್ಕಳ  ಸಾಲಿ, ಅಭ್ಯಾಸ , ಅವರ ಪರೀಕ್ಷಾ ಎಲ್ಲಾದ್ರಾಗನೂ ಆಕಿ ಆಸಕ್ತಿ ಇರ್ತಿತ್ತು, ಲಕ್ಷ್ಯ ಇರ್ತಿತ್ತು. ಮುಂಜಾನೆ  ಅಭ್ಯಾಸಕ್ಕ ಎಬ್ಬಿಸಿ ಕೂಡಸೂ ಕೆಲಸ ಆಕೀದನೇ. ನಾವು ಸಣ್ಣಾವ್ರಿದ್ದಾಗ ನಮಗ ಪುರೋಚಿ  ಹೇಳೂ  ಕೆಲಸಾನೂ ಆಕೀದೇ. ಕಲ್ಯೂದ್ರಾಗ  ಹಿಂದ ಬೀಳಬಾರದು  ಮೊಮ್ಮಕ್ಕಳು. ಎಲ್ಲಾರೂ ಎಲ್ಲಾದ್ರಾಗನೂ ಪೈಲಾ ನಂಬರ್ ಬರಬೇಕು ಅನ್ನಾಕಿ ಆಕೀ. ಆಕಿ ಆಶೀರ್ವಾದ, ಹಾರೈಕಿ, ಆಶಾ ಯಾವದೂ  ಹುಸಿ ಹೋಗಲಿಲ್ಲ. ಎಲ್ಲಾ ಮೊಮ್ಮಕ್ಕಳೂ ಎಂದೂ ಪೈಲಾ ನಂಬರ್  ಬಿಟ್ಟು ಹಲಾಸಲಿಲ್ಲ.(ಅಲ್ಲಾಡಲಿಲ್ಲ). ಖುಷಿ ಆಕೀಗೆ. 

ನಮ್ಮ ಅಣ್ಣಾಂದು ಬಿ.ಏ. ಮುಗ್ಯೂದು ಒಂದೆರಡ ವರ್ಷ ತಡಾ ಆತು. ಇನ್ನೂ ಕಲಿಯೂ ಮುಂದನs ಅಂದ್ರ ಅವರ ಇಪ್ಪತ್ತೊಂದನೇ  ವರ್ಷಕ್ಕನೇ  ಮದವಿ ಆತು ಅವರದು. ಒಂದು ಸಲ ನಪಾಸಾದ  ಮ್ಯಾಲೆ ಅಣ್ಣಾ ಅದೇ ಆಗ ಸುರು  ಆಗಿದ್ದ  ಹುಕ್ಕೇರಿ ಹೈಸ್ಕೂಲ್ ನ್ಯಾಗ ಮಾಸ್ತರ ಅಂತ  ಸೇರಿದ್ರು. ಅದು ಬೆಳವಿ, ನಂದಿಕುರಳಿ ಎರಡಕ್ಕೂ ಹತ್ರ  ಆಗ್ತಿತ್ತು; ಹಿಂಗಾಗಿ  ಅನುಕೂಲ ಆತು. ಆ ಮ್ಯಾಲೆ ಅಣ್ಣಾ ಕೆಲಸಾ  ಮಾಡ್ಕೋತನ‌  ಬಿ.ಏ .ಮುಗಿಸಿದ್ರು. ಅವರ ಡಿಗ್ರಿ  ಮುಗಿಯೂ ತನಕಾ  ಎಷ್ಟ ಹರಕಿ  ಹೊತ್ಲು ಏಕಾ! ಭಾಳ ಉತಾವಿಳ  ಆಗಿದ್ಲು. ಮಗನ ಬಿ.ಏ. ಮುಗದ ಕೂಡಲೇ  ನಿರಾಳ  ಆದ್ಲು. 

ಆ ಮ್ಯಾಲೆ  ಕೆಲ ವರ್ಷ ಆದಮ್ಯಾಲೆ  ಸಾಲಿಯವರು ಅಣ್ಣಾನ್ನ ಡೆಪ್ಯೂಟೆಷನ್ ಮೇಲೆ ಬಿ. ಎಡ್.  ಮಾಡ್ಲಿಕ್ಕೆ    ಕಳಿಸಿದ್ರು  ಅಣ್ಣಾ ಒಂದು ವರ್ಷ ಬೆಳಗಾವಿಗೆ  ಹೋಗಬೇಕಾತು. ನಾವೆಲ್ಲ ಸಣ್ಣವರು. ಮನೆ ಬಿಟ್ಟು ಹೊರಗಿದ್ದು ‌‌‌‌‌‌‌‌‌‌‌‌‌‌  ಕಲಿಯೋದು  ಸ್ವಲ್ಪ  ತ್ರಾಸ ಆತು  ಅಣ್ಣಾಗ. ಏಕಾ ಅಂತೂ ಇದ್ಲು; ಎಲ್ಲಾ ಅಗದೀ  ವ್ಯವಸ್ಥಿತ ಆಕಿ  ನೋಡ್ಕೋತಾಳ ಅನ್ನೋ ಭರೋಸನೂ ಇತ್ತು ಅಣ್ಣಾಗ. ಸಣ್ಣ ಸಣ್ಣ ಮಕ್ಕಳನ  ಕಟಗೊಂಡು‌ ಅವ್ವಾ  ಒಬ್ಬಾಕೆನ  ಏನ  ಮಾಡಲಿಕ್ಕಾದೀತು ಅನೋಹಂಗನs  ಪರಿಸ್ಥಿತಿ ಇತ್ತು. ಏಕಾ ಒಂದೂ ಏನೂ  ಹೇಳದೇ ಎಲ್ಲಾ ತನ್ನ .ಹೆಗಲ ಮ್ಯಾಲೆ  ಹೊತ್ತು ಸಾಗಿಸಿದ್ಲು ಏನೂ ತಪ್ಪದೇ. “ಮುಂದೆ ಹೆಜ್ಜಿ ಹಾಕದ ಹೊರತು ಎಲ್ಲಾ ಒಂದ  ಹೊಂದ ಹಿಡದ ನಡೀತದ ಅನೂದು ಹೆಂಗ ತಿಳಿದೀತು? ನೀ ಈ ಕಡಿದು ಅಜೀಬಾತ ಕಾಳಜಿ ಮಾಡಬ್ಯಾಡ ಅಣ್ಣಪ್ಪಾ” ಅಂತ ಹೇಳಿ  ಅಣ್ಣಾನ್ನ ಬಿ. ಎಡ್.ಗೆ  ಕಳಸಿದ್ಲು ಏಕಾ.

ನಮ್ಮ ಅಣ್ಣಾಂದು ಬಿ.ಎಡ್. ಫೈನಲ್ ಪರೀಕ್ಷಾ ಹೊತ್ತಿಗೆ ಬರೋಬ್ಬರಿ  ನನ್ನ ಎರಡನೇ  ತಮ್ಮಗ  ನಾಯಿ ಕಡೀತು. ನಮ್ಮ ಫ್ಯಾಮಿಲಿ ಡಾಕ್ಟ್ರು ‘ಅಂಟಿ ರ್ಯಾಬಿಸ್ಸ ಇಂಜೆಕ್ಷನ್ ಆಗಲಿಕ್ಕೇ  ಬೇಕು. ಬೆಳಗಾವಿ ಸಿವಿಲ್ ಆಸ್ಪತ್ರೆಗೆ ಕರಕೊಂಡು ಹೋಗಿ ಮಾಡಿಸಿಕೊಂಡ  ಬರ್ರಿ” ಅಂತ ಹೇಳಿದ್ರು. ಆ ಇಂಜೆಕ್ಷನ್ ಆಗ ಜಿಲ್ಲಾ ಆಸ್ಪತ್ರೆಯೊಳಗ  ಅಷ್ಟೇ  ಕೊಡ್ತಿದ್ರು. ಅವನ್ನ ಹೊಕ್ಕಳ ಸುತ್ತ ಕೊಡ್ತಿದ್ರು. ನಮ್ಮವ್ವ ಗಾಬರಿ ಆಗಿ ಬಿಟ್ಲು. ಏಕಾ ಆಕೀಗೆ ಧೈರ್ಯ ಹೇಳಿ ಆ ನಾಲ್ಕೈದು ವರ್ಷದ ಹುಡುಗನ್ನ ತಾನs ಬೆಳಗಾವಿಗೆ ಕರಕೊಂಡು ಹೋದ್ಲು. ಅಣ್ಣಾಗ ಸುದ್ದೀನ ಕೊಡದೇ ಅಲ್ಲಿ ನಮ್ಮ ಸಂಬಂಧಿಕರ ಮನೆಯಲ್ಲಿ ಒಂದು ವಾರ ಇದ್ದು, ಏಳು ಇಂಜೆಕ್ಷನ್ ಮಾಡಿಸಿ ಕರಕೊಂಡು ಬಂದ್ಲು. ಅಣ್ಣಾನ  ಪರೀಕ್ಷಾ ಮುಗದ ಮ್ಯಾಲ ಅವರಿಗೆ ಸುದ್ದಿ ಗೊತ್ತಾತು ಅಂದ್ರೆ ತಿಳಿಸಿದ್ಲು ಅವ್ವಾ. 

ಆ ಕಾಲಕ್ಕನs  ಮುಲ್ಕಿ ಪಾಸಾದ ಏಕಾಗ ಸಾಲಿ, ಅಭ್ಯಾಸ  ಅದರ  ಜೋಡಿ ನಿಯಮಿತತನ ಇವುಗಳ ಬಗ್ಗೆ ಭಾಳ  ಕಾಳಜಿ ಇತ್ತು. ವ್ಯಾಳ್ಯಾದ್ದನೂ  ಅಷ್ಟೇ. ಒಂದು ಗಳಿಗೆ ಆಕಡೆ ಈಕಡೆ ಆಗಧಾಂಗ  ನೋಡ್ಕೊಂಡು ಆಕೀ  ಕೆಲಸ ನಡೀತಿತ್ತು. ಆ ಗಡಿಬಿಡಿ, ಚುಟು ಚುಟು ಚಟುವಟಿಕೆ  ಎಲ್ಲಾ ಅಗದೀ  ಹಂಗs ತನ್ನ ಮಗಾ- ಮೊಮ್ಮಕ್ಕಳಿಗೆ  ಹರಿದು ಹಂಚಿ  ಕೊಟ್ಟಬಿಟ್ಲು ಏಕಾ. 

ಬಿ.ಎಡ್. ಮುಗದ ನಾಲ್ಕೈದು ವರ್ಷಕ್ಕ ಅಣ್ಣಾನ್ನ ಡೆಪ್ಯೂಟೆಷನ್ ಮೇಲೆ ಎಂ.ಏ. ಮಾಡ್ಲಿಕ್ಕೆ  ಕಳಸಿದ್ರು  ಆ ಸಂಸ್ಥೆಯವರು. ಅಣ್ಣಾಗ ಎರಡು ವರ್ಷ ಧಾರವಾಡಕ್ಕ ಹೋಗಬೇಕಾತು. ಆಗಲೂ ಏಕಾ ಎಲ್ಲಾ ಜವಾಬ್ದಾರಿ  ವಹಿಸಿ ಕೊಂಡು ಅಣ್ಣಾನ್ನ ಧಾರವಾಡಕ್ಕ ಕಳಸಿದ್ಲು. ನಾವೂ ಈಗ ದೊಡ್ಡಾವ್ರ  ಆಗಿದ್ವಿ. ಆದರೂ ಮನಿಯೊಳಗ ಹಿಂಡೂ ಎಮ್ಮೆ, ಹೊಲಮನಿ ಕೆಲಸ,- ಬಿತಿಗಿ, ರಾಶಿ, ಗಾಣ ಅಂತ ಇರೂದೇ. ಮೂರು- ನಾಲ್ಕು ದಿನ ಹೋಗಿ ದೇಖರೇಖಿ ಮಾಡಿ, ಆ ಮ್ಯಾಲೆ ಸುಗ್ಗಿಯೊಳಗ ಮಾತ್ರ ಹದಿನೈದು- ಇಪ್ರತ್ತ ದಿನಾ ಅಲ್ಲೇ ನಿಂತು ಎಲ್ಲಾ ವ್ಯವಸ್ಥಿತ  ನಿಸ್ತರಿಸಿ ಬರ್ತಿದ್ಲು ಏಕಾ.

ನಿಸ್ತರಿಸಿ ಬರ್ತಿದ್ಲು ಏಕಾ ಹೊಲದ ಕೆಲಸಾ ಎಲ್ಲಾ ಅಂತ ಒಂದೇ ಶಬ್ದದಾಗ ಹೇಳಿದ್ರೂ ,

“ನಿಸ್ತರಿಸು” ಈ  ಶಬ್ದದ ಅರ್ಥವೂ  ಥೇಟ್ ನಮ್ಮ ಏಕಾನ ಕೆಲಸದ ಹರಿವಿನಂತೆಯೇ ವಿಶಾಲವಾದದ್ದು. ಅಣ್ಣಾ ಅಲ್ಲಿ ಎಂ.ಏ. ಶಿಕ್ಷಣದಲ್ಲಿ  ವ್ಯಸ್ತರು. ಸಂಸಾರನೂ ಬೆಳೀತಿತ್ತು. ಆರು ಮಕ್ಕಳು ನಾವು. ನಮ್ಮಣ್ಣನೂ ಈಗ ಧಾರವಾಡದಲ್ಲೇ  ಕರ್ನಾಟಕ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದ. ನಾವೆಲ್ಲ ಹೈಸ್ಕೂಲ್ ನ್ಯಾಗ, ಚಿಕ್ಕವರಿಬ್ರು  ಪ್ರಾಥಮಿಕ ಶಾಲೆ ಹೀಗೇ ನಡದಿತ್ತು. ಹೀಗಾಗಿ ರೊಕ್ಕದ ಅವಶ್ಯಕತೆನೂ ಅದಕ್ಕೆ ತಕ್ಕಂತೆ ಬೆಳೀಲಿಕ್ಹತ್ತಿತ್ತು. ಬಂದ  ಕಾಳು – ಕಡಿಗಳ  ವ್ಯಾಪಾರದ ವಿಷಯದಲ್ಲಿ ಬರೀ ರೈತರನ್ನೇ ನಂಬಿ ಕೂತರೆ ನಡ್ಯೂದಿಲ್ಲ ಅಂಬೂದು ಏಕಾಗ  ಗೊತ್ತಿದ್ದ ವಿಷಯವೇ. ಆ ಫಸಲು ಬರೋಬ್ಬರಿ ಮನಿಗೆ ಬಂದು ಬೀಳೂ ತನಕಾ ನಿಗಾವಹಿಸಲಿಕ್ಕೇ  ಬೇಕು  ಅಂಬೂದೂ ಗೊತ್ತಿದ್ದದ್ದೇ. 

ದಿನಾ ಹೋದಾಂಗ ಕಾಲ, ವ್ಯವಹಾರ ಎಲ್ಲಾ ಬದಲಾಗ್ತಾ ನಡದಿತ್ತು. ಏಕಾನೂ  ಹಂಗೇ  ಸಾವಕಾಶ  ಹೊಂದಿಕೋತ ಹೊಂಟಿದ್ಲು. ಆಗಾಗ ಅಣ್ಣಾನ ಸಲಹಾ ಕೇಳ್ತಿದ್ಲು. ದಲಾಲರ  ವರೆಗೂ ಹೋಗಿ ಕಾಳು ಕಡಿಗಳ, ಬೆಲ್ಲ ತಂಬಾಕುಗಳ ವ್ಯಾಪಾರ, ವಹಿವಾಟಿನ ವ್ಯವಹಾರದ ವರೆಗೂ ಆಕೀ  ಕೆಲಸ – ಕಾರ್ಯಗಳ ಹರಿವು ಇತ್ತು. ಏಕಾಂದು ವಯಸ್ಸು ಬೆಳೀತಿತ್ತು; ಅದರ ಜೋಡೀನs ಆಕೀ ಕಾರ್ಯಕ್ಷೇತ್ರ, ಒಂಥರದ ಜವಾಬ್ದಾರಿ, ಸಮಯಪ್ರಜ್ಞೆ, ವ್ಯವಹಾರದ ಸೂಕ್ಷ್ಮತೆ ಎಲ್ಲಾ ಬೆಳೆದು ಪೂರ್ಣ ಪಕ್ವತೆ ಬಂತು.

ನಮಗೂ ಸಣ್ಣಹಾಂಗ ಹೊರಗಿನ ಕೆಲಸ ಕಾರ್ಯಗಳ ಅರಿವು  ಬರಲಾರಂಭಿಸ್ತು. ನಾವೂ ಬೆಳೀಲಿಕ್ಹತ್ತಿದ್ವಿ ಅಣ್ಣಾ, ಏಕಾನ ಗರಡಿಯೊಳಗ. ನಮ್ಮ ಅವ್ವಾನ ವ್ಯಕ್ತಿತ್ವದ ಧಾಟಿ ಬೇರೆ. ಹಿಡಿದ ಕೆಲಸದೊಂದಿಗೆ ಪೂರ್ತಿ ಒಂದಾಗಿ ತಿದ್ದಿ ತೀಡಿ ಅದನ ಮುಗಿಸಿ ಅದಕೊಂದು ಆಕಾರ ಕೊಡೂದು ಆಕೀ ರೂಢಿ. ಮುಂದ ಬರೀತೀನಿ ಅದನ್ನ.

ನಮ್ಮ ಏಕಾನ  ಕೆಲಸ ಎಲ್ಲಾ ಸುಪರ್ ಫಾಸ್ಟ್! ಅದರಾಗ ನನಗ ಅಗದೀ ಆಶ್ಚರ್ಯ ಹುಟ್ಟಸೂದು ಅಂದ್ರ ಆಕೀ ಅಡಿಗೆ. ನಮ್ಮ ಮನಿ ಒಳಗ  ದಿನಾಲೂ ಮಡಿ ಅಡಗೀನs ಏಕಾನ ಕೈಯಿಂದ. ಕಟ್ಟಿಗಿ ಒಲಿ, ಶೇಗಡಿ (ಇದ್ದಿಲೊಲಿ) ಇವುಗಳ  ಮ್ಯಾಲೆನೇ  ಆಗಬೇಕಾಗಿತ್ತು. ನಮ್ಮ ಏಕಾನ  ಕೈಯಾಗ ಜಾದೂ ಇತ್ತೋ ಏನೋ ಅಂತ ಅನಸ್ತದ ನನಗ, ಖರೇನ. ನಾವು ಎಲ್ಲಾರೂ ಅಂದ್ರ ನಮ್ಮ ಅಣ್ಣಾ ಮತ್ತು ನಾವು ಹುಡುಗರೆಲ್ಲ ಬರೋಬ್ಬರಿ ಹತ್ತರ ಠೋಕೆ (ಗಡಿಯಾರದ ಗಂಟೆ) ಬೀಳೂದಕ  ಊಟಕ್ಕ  ಕೂಡ್ತಿದ್ವಿ. ಎಲ್ಲರದೂ ಸಾಲಿ ಗಡಿಬಿಡಿ.ನಮ್ಮ ಏಕಾ ಒಂಬತ್ತ ಗಂಟೆಗೆ  ಮಡಿ ಉಟ್ಕೊಂಡ ಬಂದು ಒಲಿ, ಕೊಡೊಲಿ, ಶೇಗಡಿ ಎಲ್ಲಾದ್ರ ಮ್ಯಾಲೆ ಒಂದೊಂದು ಅಂದ್ರೆ ಅನ್ನ, ಬ್ಯಾಳಿ, ಪಲ್ಲ್ಯಾಕ್ಕ  ಇಟ್ಟು “ಬಾಳಾಗೋಳ್ರ್ಯಾ ಬರ್ರಿ, ತಾಟ ಹಾಕಬರ್ರಿ. ನನ್ನ ಅಡಿಗಿ ಆತು.” ಅಂತ ಹೇಳಾಕಿ. ಹಂಗs  ಕಣ್ಣ ಮುಚ್ಚಿ ತಗೀಯೂದ್ರಾಗ ಅಡಿಗಿ ತಯಾರೇ. ಬರೋಬ್ಬರಿ ಪೌಣೆಹತ್ತಕ್ಕ (ಒಂಬತ್ತೂ ಮುಕ್ಕಾಲು) ಭಕ್ರಿ ಹಂಚು  ಒಲೀಮ್ಯಾಲ! ಬಿಸಿ ಬಿಸಿ  ಭಕ್ಕರಿ, ಅನ್ನಾ, ಹುಳಿ, ಪಲ್ಯಾ, ಚಟ್ನಿ, ಕೋಸಂಬ್ರಿ ಇಷ್ಟ ಅಡಿಗಿ ಒಬ್ಬಾಕೀನ ಪೌಣ ತಾಸಿನ್ಯಾಗ, ಅಂದ್ರೆ 45 ನಿಮಿಷ  ಹೆಚ್ಚು ಅಂದರೆ 50 ನಿಮಿಷ ನ್ಯಾಗ ಮಾಡಾಕಿ. ಅದ ಹೆಂಗೋ ಏನೋ ಗೊತ್ತಿಲ್ಲಾ.

ಈಗ  ಗ್ಯಾಸ್, ಕುಕ್ಕರ್,  ಮಿಕ್ಸಿ  ಇಟ್ಟಕೊಂಡು ಒದ್ದಾಡ್ತೀವಿ  ನಾವು. ಒಂದಿತ್ತು, ಒಂದಿಲ್ಲಾ ಅಂತ ಮುಗಸೂದು. ಅದೂ ಇಲ್ಲ ಅಂದ್ರ ಝೋಮ್ಯಾಟೋ, ಸ್ವಿಗಿ ಮೊರೆ ಹೊಗೋದು.  ಖರೇ  ಅಂದ್ರ ಆ ಧಡಪಡದ  ಚಟುವಟಿಕೆ ಎಲ್ಲಾ ಹಿಂಗ್ಯಾಕ ತನ್ನ ರೂಪಾ ಹಿಂಗ್ಯಾಕ ಬದಲಿಸ್ತು ಅಂತ ‌‌ವಿಚಾರ ಮಾಡ್ತೀನಿ ನಾ.

ನಮ್ಮ ಏಕಾಂದು ಧಡಪಡದ  ಜೀವನ; ಒಂದು ನಿಮಿಷ  ವಾಯಾ (ವ್ಯರ್ಥ)  ಹೋಗಲಿಕ್ಕೆ ಕೊಡೂದು ಅಕಿಗೆ ಗೊತ್ತೇ ಇರಲಿಲ್ಲ. ತಾ ಹಚ್ಚಿದ ಗಿಡಗಳಿಗೆ ತಾನೇ  ಸೇದಿ ನೀರು ಹಾಕಿದ್ರನs ತೃಪ್ತಿ ಆಕಿಗೆ. ಮೂರೂ ಸಂಜಿ  ಹೊತ್ತಿಗೆ  ಎಲಿ  ಕಾಣಧಾಂಗ ತುಂಬಿ ಸುರಿದ  ಮಲ್ಲಿಗೆ ಮೊಗ್ಗು, ಸಾಲು ಸಾಲು ಹೂ ತುಂಬಿ ನಿಂದ ಶ್ಯಾವಂತಿಗೆ, ಅಬಾಲಿ;  ಒಂದೊಂದನ್ನ ನೋಡಿ ಅಕ್ಕರತಿ ಪಡಾಕಿ. ನಾನು, ನಮ್ಮವ್ವ ಎಷ್ಟುದ್ದ ಮಾಲಿ ಹಾಕ್ಕೋತಿವೋ ಅಷ್ಟ ಖುಷಿ ಅಕಿಗೆ. ಆ  ನಿಸ್ವಾರ್ಥತೆ ಆ ಜೀವಕ್ಕೆ ಅದೆಷ್ಟರ ಮಟ್ಟಿಗೆ ಸಾಧಿಸಿ, ಆಕೀನ್ನ ಒಂದು ಕಟದ ಮೂರ್ತಿ ಮಾಡಿ ಬಿಟ್ಟಿತ್ತು ಆಂತ  ನನಗ  ಅಗಾಧ ಅನಸ್ತದ.

ಯಾವುದ ಹೇಳಬೇಕು, ಯಾವದು ಬಿಡಬೇಕು, ಎಲ್ಲಿಂದ ಸುರು ಮಾಡಬೇಕು, ಎಲ್ಲಿಗೆ ಮುಗಿಸಬೇಕು ಈ ಅಂದಾಜೇ  ಸಿಗದ ವಿಶಾಲ ವ್ಯಾಪ್ತಿಯ ವ್ಯಕ್ತಿತ್ವ ಏಕಾಂದು. ಅದಕ ಒಂದು ಸೀಮಾ, ಪಾರ ಅಂಬೂದು ಇರಲೇ ಇಲ್ಲ. ನಾವೇ  ಹಾಕೊಂಡ್ರ ಉಂಟು. ಇದ್ಯಾವುದೂ ಆಕೀ ಲೆಕ್ಕದ ಖಾತೆ  ವಿಷಯ ಅಲ್ಲವೇ ಅಲ್ಲ. ಆ ಪರಿವೆ  ಇರದೇ ಅಖಂಡವಾಗಿ ಗಂಧ ತೇಯ್ಧಾಂಗ ತೇಯ್ದು, ಸುತ್ತಲೂ ತಂಪು ಹರಡುತ್ತ, ತಣ್ಣೆಳಲು ಪಸರಿಸುತ್ತ ಸಾಗಿದ್ಲು ಆಕಿ. ಬಲು ಉದಾತ್ತ  ಜೀವ ನಮ್ಮ ಏಕಾ! 

ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

July 5, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. Shrivatsa Desai

    ಒಬ್ಬ ಹಿರೇ ಹೆಂಗಸಿನ ವ್ಯಕ್ತಿತ್ವದ ಎಲ್ಲಾ ಮಜಲುಗಳನ್ನು ನೋಡೀವಿ ಅನ್ನೋದರಾಗ ಲೇಖಕಿ ಏಕಾನ ಇನ್ನೊಂದು ಪಾರ್ಶ್ವವನ್ನು ತೆರೆದಿಡುತ್ತಾರೆ ತಮ್ಮ ಅಕ್ಷಯ ನೆನಪುಗಳ ಭಂಡಾರದಿಂದ ! ಈ ಉತ್ತರ ಕರ್ನಾಟಕದ ಭಾಷಾದ ಸಂತಿಯೊಳಗ ನಂದಕುರುಳಿನೂ ಒಂದು ಹಳ್ಳಿ/ ಊರು ಅಂತ ಮೊದಲೇ ಸ್ಪಷ್ಟ ಮಾಡಿದ್ದರೆ ನಾನು ಬೆಳಗಾವಿ ನಕಾಶೆ ತಗಡು ಹುಡುಕಾಡೋದು ತಪ್ಪಾತಿತ್ತು. ಎಕಾನ ಹರಕೆಯ ಘಟನೆ ಈಗಿನ ಕಾಲದಲ್ಲಿ ನಂಬಲಿಕ್ಕೂ ಕಷ್ಟ! ಹೀಗಿದ್ದರು ನಮ್ಮವರು! ಇನ್ನೂ ಏನೇನು ಬರಲಿದೆಯೋ! ಶ್ರೀವತ್ಸ ದೇಸಾಯಿ

    ಪ್ರತಿಕ್ರಿಯೆ
  2. Sarojini Padasalgi

    ಧನ್ಯವಾದಗಳು ಶ್ರೀವತ್ಸ ದೇಸಾಯಿಯವರೇ. ಹೌದು ಏಕಾನ ವ್ಯಕ್ತಿತ್ವಕ್ಕೆ ಅನೇಕ ಪಾರ್ಶ್ವ ಗಳುಂಟು. ಹೇಗೆ ನೋಡಿದ್ರನೂ ಅಲ್ಲೊಂದು ವಿಶಿಷ್ಟತೆ. ಅದನ್ನೆಲ್ಲಾ ಬರೀಲಿಕ್ಕೆ ಒಂದು ಅವಕಾಶ ನೀಡಿದ ಅವಧಿಗೆ ಧನ್ಯವಾದಗಳು.
    ನಿಮ್ಮ ಆಸಕ್ತಿ ಸ್ಫೂರ್ತಿದಾಯಕ ಸರ್.ನಂದಿಕುರಳಿ ಚಿಕ್ಕೋಡಿ ಹತ್ರ ಇರುವ ಹಳ್ಳಿ. ಬರೆದ ಹಾಗೆ ನೆನಪು. ಬಿಟ್ಟುಹೋಗಿದ್ರೆ ಕ್ಷಮೆ ಇರಲಿ.
    ನಂದಿಕುರಳಿ, ಬೆಳವಿ ಎರಡೂ ಚಿಕ್ಕೋಡಿ ತಾಲೂಕಿನ ಹಳ್ಳಿಗಳು; ಹುಕ್ಕೇರಿ ಗೂ ಹತ್ರ. ನಾವು ನಂದಿಕುರಳಿ ಮುತಾಲೀಕದೇಸಾಯರು.
    ಇನ್ನೊಮ್ಮೆ ಧನ್ಯವಾದಗಳು.

    ಪ್ರತಿಕ್ರಿಯೆ
    • ಶೀಲಾ ಪಾಟೀಲ

      “ಏಕಾ” ಅವರು ಜೀವನದುದ್ದಕ್ಕೂ ಎಲ್ಲರಿಗೂ ಆಸರೆಗೋಲಿನಂತಿದ್ದರು. ಒಬ್ಬ ವ್ಯಕ್ತಿಯಲ್ಲಿ ಇಷ್ಟೊಂದು ನಿಪುಣತೆ ಇರುತ್ತವೆಯೇ!!!!. ಧನ್ಯ ಜೀವ . ಜೀವನದುದ್ದಕ್ಕೂ ಬಂದ ಅನುಭವಗಳೇ ಅವನ್ನು ನಿಭಾಯಿಸುವ ಕಲೆಯನ್ನು ಅವರಿಗೆ ಕಲಿಸಿ ಅವರನ್ನು ಪರಿಪೂರ್ಣ ವ್ಯಕ್ತಿಯನ್ನಾಗಿಸಿವೆ ಎಂದೆನಿಸುವದು. ನಿಜವಾಗಿಯೂ ಗಂಧದಂತೆ ತೇಯ್ದು ನಿಮ್ಮೆಲ್ಲರ ಜೀವನ ಪರಿಮಳಯುಕ್ತ ಮಾಡಿದ “ನಿರ್ಮಲ ವ್ಯಕ್ತಿ”

      ಪ್ರತಿಕ್ರಿಯೆ
      • Sarojini Padasalgi

        ಹೌದು ಶೀಲಾ ಅಗದೀ ಖರೇ ನೀವು ಹೇಳೋದು. ಆಕೀ ವ್ಯಕ್ತಿತ್ವ, ಇರಿಸರಿಕೆ ಹಂಗೇ ಇದ್ವು. ಆಕೀ ನೆರಳಿನ್ಯಾಗ ಬೆಳೆದಿದ್ದು ನಮ್ಮ ಪುಣ್ಯ.ನಿಮ್ಮ ಅನಿಸಿಕೆ ಛಂದ ಶೀಲಾ.ಧನ್ಯವಾದಗಳು.

        ಪ್ರತಿಕ್ರಿಯೆ
  3. ramesh pattan

    ಪ್ರತಿ ವಾರ ಈ ಅಂಕಣ ಬರಹಕ್ಕಾಗಿ ಕಾದು ಕುಳಿತಿರುತ್ತೇನೆ.
    ಬರಹದ ಜೊತೆಗೆ ನಂದಿಕುರಳಿ ಊರಿನ ಹಳೆಯ ಮನೆ,
    ಮತ್ತಿತರ ಚಿತ್ರಗಳೂ ಇದ್ದರೆ
    ಮತ್ತಷ್ಟು ಮೆರುಗು.ಇದು ನನ್ನ ಅನಿಸಿಕೆ
    ರಮೇಶ ಪಟ್ಟಣ, kalaburagi

    ಪ್ರತಿಕ್ರಿಯೆ
    • Sarojini Padasalgi

      ತುಂಬ ಧನ್ಯವಾದಗಳು ರಮೇಶ ಸರ್. ನಿಮ್ಮ ಈ ರೆಸ್ಪಾನ್ಸ್ ಗೆ ನಿಜಕ್ಕೂ ಎದೆ ತುಂಬಿ ಬಂತು ನಂಗೆ.
      ನಂದಿಕುರಳಿದು ಮುತಾಲೀಕದೇಸಾಯರ ವಾಡೆ ಅಂತನೇ ಇದೆ. ಆದರೆ ನಮ್ಮ ಅಜ್ಜ ಚೆಲುವೆ, ಮತ್ತ ಭಾಳ ಸಣ್ಣವಳು ನಮ್ಮ ಏಕಾ ಅಂತ ಅಲ್ಲಿ ಕರೆದೊಯ್ದೆ ಚಿಕ್ಕೋಡಿಯಲ್ಲೇ ಮನೆ ಮಾಡಿದ್ರು.ಆ ಫೋಟೋಗಳೆಲ್ಲ ನನ್ನ ಹತ್ರ ಇಲ್ಲ. ಆದರೆ ನಮ್ಮ ತಂದೆಯವರ ಪುಸ್ತಕಗಳ ಜೊತೆ ಇದ್ದೀತು. ನೋಡಿ ಖಂಡಿತಾ ಹಾಕ್ತೀನಿ.

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: