ಪಿ ಪಿ ಉಪಾಧ್ಯ ಸರಣಿ ಕಥೆ 62- ಅಂತ್ಯನಿಗೆ ಅನುಮಾನ…

ಪಿ ಪಿ ಉಪಾಧ್ಯ

ಸುದ್ದಿ ಶಾಸ್ತ್ರೀಗಳವರೆಗೆ ತಲುಪಿತು. ಸುದ್ದಿ ತಿಳಿದ ಆದಿ ತಾನೇ ಹೋಗಿ ವಿಚಾರಿಸಿಕೊಂಡು ಬರುತ್ತೇನೆಂದವನನ್ನು ಶಾಸ್ತ್ರೀಗಳೇ ತಡೆದಿದ್ದರು. ಇಂತಹ ಸಮಸ್ಯೆ ಎದುರಾದದ್ದು ಮೊದಲ ಸಲ. ಶಾಸ್ತ್ರೀಗಳು, ಆದಿ ಮತ್ತು ಅಂತ್ಯ ಮೂವರೂ ಕುಳಿತುಕೊಂಡು ಚರ್ಚಿಸಿದರು. ಪರಿಹಾರವೇನೂ ಕಾಣಿಸಲಿಲ್ಲ. ಅವರಿಗೆ ಆ ಶೋನಿಂದ ಬರಬಹುದಾದ ಹಣ ತಪ್ಪಿ ಹೋಗುತ್ತದೆನ್ನುವ ಚಿಂತೆಯಲ್ಲ. ತಮ್ಮ ಯೋಜನೆಗಳಿಗೆ ಈ ತೆರನ ಅಡ್ಡಿ ಬರಲು ಪ್ರಾರಂಭವಾಯಿತಲ್ಲ ಎಂದು. ಇದು ಹೀಗೇ ಮುಂದುವರಿದರೆ ಹೇಗೆ ಎನ್ನುವ ಚಿಂತೆ. ಸುಮಾರು ಇಪ್ಪತ್ತೈದು ವರ್ಷಗಳಿಗಿಂತ ಹೆಚ್ಚು ಕಾಲದಿಂದ ನಡೆಸಿಕೊಂಡು ಬಂದ ಸಂಸ್ಥೆ, ದೇಶ ವಿದೇಶಗಳಲ್ಲಿ ಹೆಸರು ಮಾಡಿದ ಸಂಸ್ಥೆ ಈಗ ಇಲ್ಲಿನ ಸ್ಥಳೀಯ ಗೂಂಡಾಗಳಿಗೆ ಹೆದರುವಂತಹ ಪರಿಸ್ಥಿತಿ ಬಂತಲ್ಲ ಎಂದು.

ಆದಿ ಒಂದು ಸಲಹೆ ಕೊಟ್ಟ. ‘ಶಾಸ್ತ್ರೀಗಳೇ ಈ ಸಲ ಆ ಕನ್ನಡ ಸಂಘದವರಿ೦ದ ಯಾವುದೇ ಹಣವನ್ನು ನಾವು ತೆಗೆದುಕೊಳ್ಳುವುದು ಬೇಡ. ಟಿಕೆಟ್ ಮಾರಾಟ ಮಾಡಿ ಬಂದ ಹಣ ಎಷ್ಟಿದೆಯೋ ಅದೆಲ್ಲವನ್ನೂ ಅವರೇ ಇಟ್ಟುಕೊಳ್ಳಲಿ. ನಮಗಾಗುವ ಖರ್ಚನ್ನು ನಾನೇ ಭರಿಸುತ್ತೇನೆ’ ಎಂದ. ಅಂತ್ಯನೂ ತಲೆ ಆಡಿಸಿದ. ಶಾಸ್ತ್ರೀಗಳಿಗೆ ಇದ್ದದ್ದೂ ಅಯೋಮಯ. ಅದೆಷ್ಟನೇ ಬಾರಿಗೋ ಈ ಮಕ್ಕಳ ಔದಾರ್ಯಕ್ಕೆ ಮಿತಿಯೇ ಇಲ್ಲವೇ ಎಂದು ಆಶ್ಚರ್ಯಪಟ್ಟ ಅವರು ಹಾಗೆಯೇ  ಒಂದು ಕ್ಷಣ ಮಾತಿಲ್ಲದೇ ಮೂಕರಾದರು. ಅವರ ಮನಸ್ಥಿತಿಯನ್ನು ಅರಿತೋ ಎನ್ನುವಂತೆ ಆದಿ ‘ಶಾಸ್ತ್ರೀಗಳೇ ನೀವದಕ್ಕೆಲ್ಲ ಚಿಂತೆ ಮಾಡಬೇಡಿ. ಸುರುವಿನಿಂದಲೂ ನಾವು ನಿಮ್ಮೊಟ್ಟಿಗೆ ಇದ್ದೇವೆ.

ನಾವೇ ಹೇಳಿಕೊಳ್ಳುವುದು ಬೇಡ ಎಂದರೂ ಅಂತ್ಯ ಇಲ್ಲಿಗೆ ಬಂದ ನಂತರ ಇದು ನಮ್ಮದೇ ಸಂಸ್ಥೆ ಎಂಬ೦ತೆ ಆಗಿದೆ. ಹಾಗಿರುವಾಗ ನಿಮ್ಮನ್ನು, ಈ ಸಂಸ್ಥೆಯನ್ನು ಬಿಟ್ಟು ಬಿಡುತ್ತೇವೆಯೇ. ಅಂತ್ಯ ಇಂದು ಗಳಿಸಿದ ಹೆಸರಿನಲ್ಲಿ ನಿಮ್ಮದೇ ಹೆಚ್ಚಿನ ಪಾತ್ರ ಅಲ್ಲವೇ. ಮತ್ತೆ ನಾವು ಹೇಗೆ ಸುಮ್ಮನಿರಲಿಕ್ಕೆ ಸಾಧ್ಯ?’ ಶಾಸ್ತ್ರೀಗಳು ನಿರಾಳತೆಯ ನಿಟ್ಟುಸಿರು ಬಿಟ್ಟರು. ಆದಿ ಮತ್ತು ಅಂತ್ಯ ಇರುವವರೆಗೆ ತಮಗೆ ತಮ್ಮ ಸಂಸ್ಥೆಗೆ ಏನೂ ತೊಂದರೆ ಬರಲಾರದು ಎನ್ನುವ ನಂಬಿಕೆ ದೃಢವಾಯಿತು ಅವರಲ್ಲಿ.

ಒಪ್ಪಿಕೊಂಡ೦ತೆ ಆ ಪ್ರದರ್ಶನವೂ ಯಶಸ್ವಿಯಾಗಿ ನಡೆಯಿತು. ಪ್ರದರ್ಶನ ಕಾಲದಲ್ಲಿ ಯಾರಿಂದಲಾದರೂ ತೊಂದರೆ ಬಂದೀತು ಎನ್ನುವ ಸಂಶಯದಿ೦ದ ಮುನ್ನೆಚ್ಚರಿಕೆ ವಹಿಸಿ ಆದಿ ಕೋಟದ ಪೋಲೀಸು ಠಾಣೆಯವರಿಗೂ ಸುದ್ದಿ ಕೊಟ್ಟು ಆ ಬಗ್ಗೆ ತಾನೇ ಒಂದಿಷ್ಟು ಪ್ರಚಾರವನ್ನೂ ಕೊಟ್ಟಿದ್ದನಾದ್ದರಿಂದ ಯಾವುದೇ ತೊಂದರೆ ಎದುರಾಗಲಿಲ್ಲ. ಶಾಸ್ತ್ರೀಗಳೂ ತುಸು ನಿರಾಳವಾದರು.

ಆದರೆ ಶಾಸ್ತ್ರೀಗಳ ನಿರಾಳತೆ ಹೆಚ್ಚು ದಿನ ಉಳಿಯಲಿಲ್ಲ. ಪ್ರದರ್ಶನಕ್ಕೆ ಎದುರಾದ ವಿರೋಧ ಮನಸ್ಸಿನ ಮೂಲೆಯಲ್ಲಿ ಕುಳಿತು ಅವರನ್ನು ಹಿಂಸಿಸುತ್ತಲೇ ಇತ್ತೆಂದು ಕಾಣಿಸುತ್ತದೆ. ಆ ಕಾರ್ಯಕ್ರಮ ಮುಗಿದ ಎರಡು ವಾರಗಳ ಕಾಲ ಕೇಂದ್ರದ ಕಚೇರಿಯ ತನ್ನ ಕೋಣೆಯಲ್ಲಿ ಕುಳಿತು ಆಗು ಹೋಗುಗಳನ್ನು ಗಮನಿಸುತ್ತಿದ್ದರೂ ಒಂದು ತೆರನ ನಿರುತ್ಸಾಹ ಅವರಲ್ಲಿ ತುಂಬಿಕೊಳ್ಳುತ್ತಿತ್ತು. ಮೊದ ಮೊದಲು ಯಾರ ಗಮನಕ್ಕೆ ಬರದಿದ್ದರೂ ದಿನ ಕಳೆಯುತ್ತಿದ್ದಂತೆ ಅಂತ್ಯ ಅದನ್ನು ಗಮನಿಸಿದ ಮತ್ತು ಹಾಗೆಯೇ ಒಂದು ವಾರಾಂತ್ಯಕ್ಕೆ ಮನೆಗೆ ಹೋದವ ಆದಿಯೊಡನೆ ಹೇಳಿದ. ಆದಿಗೋ ಗಾಬರಿ. ಆದರೂ ತೋರಗೊಡದೆ ‘ನೋಡೋಣ ನಾಳೆಗೆ ನಾನೂ ನಿನ್ನೊಂದಿಗೆ ಬರುತ್ತೇನೆ’ ಎಂದ. ಇವತ್ತೇ ಹೋಗುವ ಎನ್ನಬಹುದಿತ್ತು. ಆದರೆ ಅಂತ್ಯ ಬಂದದ್ದೇ ಎರಡು ದಿನಗಳ ವಾರಾಂತ್ಯವನ್ನು ಮನೆಯಲ್ಲಿ ಕಳೆಯಲೆಂದು. ಅದನ್ನೂ ತಪ್ಪಿಸಿದಂತಾಗುತ್ತದೆ ಎಂದು ನಾಳೆಗೆ ಎಂದಿದ್ದ.

ಹಾಗೆಯೇ ಮಾರನೆಯ ದಿನ ಸಂಜೆ ಆದಿಯೂ ಅಂತ್ಯನೊ೦ದಿಗೆ ಕೇಂದ್ರವನ್ನು ತಲುಪಿದ. ಶಾಸ್ತ್ರೀಗಳು ಆಗಲೇ ಕಚೇರಿಯ ಕೋಣೆಯಲ್ಲಿ ಕುಳಿತಿದ್ದರು. ಪ್ರಥಮ ನೋಟಕ್ಕೇ ತಿಳಿಯುತ್ತಿತ್ತು ಅವರಲ್ಲಿ ಎಂದಿನ ಉತ್ಸಾಹ ಇರಲಿಲ್ಲ ಎನ್ನುವುದು. ಆದಿಯನ್ನು ನೋಡಿ ಅವರಿಗೆ ಆಶ್ಚರ್ಯ ಅದೂ ಅಂತ್ಯನೊ೦ದಿಗೇ ಬಂದದ್ದು ನೋಡಿ ಆಶ್ಚರ್ಯದ ಜೊತೆಗೆ ಅನುಮಾನವೂ ಬಂದಿತ್ತು. ಕಳೆದ ವಾರದಲ್ಲಿ ಬಾಯಿ ಬಿಟ್ಟು ಕೇಳದಿದ್ದರೂ ಅಂತ್ಯ ಸೂಚ್ಯವಾಗಿ ಪ್ರಕಟಿಸಿದ್ದ. ಶಾಸ್ತ್ರೀಗಳೇ ಮಾಡುತ್ತಿದ್ದ ಕೆಲವು ಕೆಲಸಗಳನ್ನು ತಾನೇ ಮಾಡುವುದಾಗಿ ಮುಂದೊತ್ತಿ ಬಂದಿದ್ದ. ಅವರಿಗೆ ಆಗಲೇ ಹೊಳೆದಿತ್ತು ತನ್ನ ನಿರುತ್ಸಾಹದ ಬಗ್ಗೆ ಅಂತ್ಯನಿಗೆ ಅನುಮಾನ ಶುರುವಾಗಿದೆ ಎಂದು. ಅದು ನಿಚ್ಚಳವಾಯಿತು ಈಗ. 

ಆದಿ ಬಂದವನೇ ಅವರೆದುರು ಕುಳಿತವ `ಅಲ್ಲ ಶಾಸ್ತ್ರೀಗಳೇ.. ಏನಾದರೂ ಸಮಸ್ಯೆಯೇ.. ಏನಿದ್ದರೂ ನಮ್ಮ ಹತ್ತಿರ ಹೇಳಿಕೊಳ್ಳಿ’ ಎಂದ. ಮೊದಮೊದಲು ಏನೂ ಇಲ್ಲವೆಂತಲೇ ಸಾಧಿಸಿದ ಅವರು ಇವ ಹಿಡಿದ ಪಟ್ಟು ಬಿಡದೇ ಕೇಳಿದಾಗ ಮತ್ತು ‘ಅಲ್ಲ ಶಾಸ್ತ್ರೀಗಳೇ ನಮ್ಮೊಂದಿಗಲ್ಲದೆ ಯಾರ ಬಳಿ ಹೇಳಿಕೊಳ್ಳುತ್ತೀರಿ ನಿಮ್ಮ ಸಮಸ್ಯೆಗಳನ್ನು’ ಎಂದು ತುಸು ಗದ್ಗದ ಸ್ವರದಲ್ಲಿ ಕೇಳಿದಾಗ ಇನ್ನು ಸುಮ್ಮನಿರಲು ಅಥವಾ ಮುಚ್ಚಿಡಲು ಸಾಧ್ಯವಾಗಲಿಲ್ಲ ಅವರಿಗೆ.

‘ಹೌದು ಆದಿ. ತುಂಬ ದಿನಗಳಿಂದ ಒಂದು ರೀತಿಯ ಸುಸ್ತು ಕಾಣಿಸಿಕೊಳ್ಳುತ್ತಿತ್ತು. ನಾನೇ ಅದನ್ನು ಗಮನಕ್ಕೆ ಹೆಚ್ಚು ತೆಗೆದುಕೊಳ್ಳದೆ ಉದಾಸೀನ ಮಾಡುತ್ತ ಬಂದೆ. ಮೊದ ಮೊದಲು ಕೆಲಸದಲ್ಲಿ ತೊಡಗಿಸಿಕೊಂಡಾಗ ಅದು ತನ್ನಿಂದ ತಾನೇ ಮರೆಯಾಗುತ್ತಿತ್ತು. ಹಾಗಾಗಿ ನಾನೂ ಹೆಚ್ಚು ಚಿಂತಿಸಲಿಲ್ಲ. ಆದರೆ ಆವತ್ತು ನಮ್ಮ ಪ್ರದರ್ಶನ ಹಾಗಾಯಿತಲ್ಲ ಅದರ ನಂತರ ಈ ಸುಸ್ತು ತುಸು ಹೆಚ್ಚಿಗೆ ಕಾಣಿಸಿಕೊಳ್ಳುತ್ತಿದೆ. ಈಗೀಗ ಕೆಲಸದಲ್ಲಿ ತೊಡಗಿಕೊಂಡಾಗ ಇನ್ನೂ ಹೆಚ್ಚು. ಏನೆಂತ ಗೊತ್ತಾಗುತ್ತಿಲ್ಲ.’

‘ಇಲ್ಲ ನಾವು ಕೂಡಲೇ ಡಾಕ್ಟರನ್ನು ನೋಡಬೇಕು. ಹೋಗೋಣ ಏಳಿ’

‘ಬೇಡ ಅಂತಹದ್ದೇನೂ ಇಲ್ಲ. ಸ್ವಲ್ಪ ಸುಸ್ತು ಅಷ್ಟೆ. ಅದಕ್ಕೆಲ್ಲ ಡಾಕ್ಟರು ಯಾಕೆ’ ಎಂದು ಅವರು ಹೇಳಿದರೂ ಆದಿ ಬಿಡದೆ ಅವರನ್ನು ಹೆಚ್ಚು ಕಡಿಮೆ ಎಳೆದುಕೊಂಡೇ ಹೊರ ಬಂದ. ಹಾಗೆಯೇ ಅವರನ್ನು ತನ್ನದೇ ಬೈಕಿನಲ್ಲಿ ಕೂಡ್ರಿಸಿಕೊಂಡು ಹತ್ತಿರದಲ್ಲಿಯೇ ಇದ್ದ ಡಾಕ್ಟರರ ಹತ್ತಿರ ಕರೆದುಕೊಂಡು ಹೋದ. ಆದಿಯನ್ನು ಮತ್ತು ಜೊತೆಯಲ್ಲಿಯೇ ಬಂದ ಶಾಸ್ತ್ರೀಗಳನ್ನು ನೋಡಿದ ಡಾಕ್ಟರು ಮೊದಲೇ ಬಂದು ಕ್ಯೂನಲ್ಲಿ ಕುಳಿತಿದ್ದ ಎಲ್ಲರನ್ನೂ ಬಿಟ್ಟು ಇವರನ್ನೇ ಒಳಗೆ ಕರೆದರು.

ಎಲ್ಲ ಚೆಕ್ ಮಾಡಿದ ಅವರು ಅಂತಹ ಗಂಭೀರವಾದದ್ದೇನೂ ಇಲ್ಲ. ವಯಸ್ಸಾಯಿತಲ್ಲ. ಇನ್ನು ಮುಂದೆ ಹೀಗೆಲ್ಲ ದುಡಿದರೆ ಆಗದು. ದೇಹಕ್ಕೂ ಶ್ರಮ ಎಂಬುದು ಇರುತ್ತಲ್ಲವೇ. ಎಷ್ಟೆಂದು ದಂಡಿಸುತ್ತೀರಿ ಅದನ್ನು’ ಎಂದು ಹೇಳಿ ಒಂದಿಷ್ಟು ಟಾನಿಕ್ಕುಗಳನ್ನು ಬರೆದು ಕೊಟ್ಟರು.

ಆದಿಯೇ ದಾರಿಯ ಮೇಲೆ ಟಾನಿಕ್ಕುಗಳನ್ನು ಖರೀದಿಸಿ ತಂದ. ಶಾಸ್ತ್ರೀಗಳನ್ನು ಅವರ ರೂಮಿನಲ್ಲಿ ಬಿಟ್ಟು ಟಾನಿಕ್ಕುಗಳನ್ನು ಸರಿಯಾಗಿ ತೆಗೆದುಕೊಳ್ಳಬೇಕೆಂದು ಹೇಳಿ ಅಷ್ಟರಲ್ಲಿ ಅಲ್ಲಿಗೆ ಬಂದಿದ್ದ ಅಂತ್ಯನೊ೦ದಿಗೆ ‘ಅಂತಹುದೇನೂ ಇಲ್ಲವೆಂದಿದ್ದಾರೆ ಡಾಕ್ಟರು. ಒಂದಿಷ್ಟು ಟಾನಿಕ್ ಕೊಟ್ಟಿದ್ದಾರೆ. ಅದನ್ನೆಲ್ಲ ಅವರು ಸರಿಯಾಗಿ ತೆಗೆದುಕೊಳ್ಳುವ ಹಾಗೆ ನೋಡಿಕೋ. ಅಷ್ಟೇ ಅಲ್ಲ ಇನ್ನು ಮುಂದೆ ಅವರು ಕೆಲಸವನ್ನು ಅಷ್ಟೊಂದು ಹಚ್ಚಿಕೊಳ್ಳುವುದು ಬೇಡ ಎಂದಿದ್ದಾರೆ. ಅದನ್ನೂ ಸ್ವಲ್ಪ ನೋಡಿಕೋ’ ಎಂದು ಹೇಳಿದ. ಅಷ್ಟು ಹೇಳಿದ ಆದಿ ‘ಬರುತ್ತೇನೆ ಶಾಸ್ತ್ರೀಗಳೇ. ಸ್ವಲ್ಪ ಜಾಗ್ರತೆ ವಹಿಸಿ’ ಎಂದು ಹೇಳಿ ಮನೆಗೆ ಹೊರಟ. ಅಂತ್ಯ ತುಸು ಹೊತ್ತು ಅಲ್ಲೇ ಶಾಸ್ತ್ರೀಗಳ ಪಕ್ಕದಲ್ಲಿಯೇ ಕುಳಿತವ `ನೀವೀಗ ರೆಸ್ಟ್ ತಗೊಳ್ಳಿ. ನಾನು ಮತ್ತೆ ಬರುತ್ತೇನೆ’ ಎಂದು ತನ್ನ ರೂಮಿಗೆ ಹೊರಟ.

। ಇನ್ನು ನಾಳೆಗೆ ।

‍ಲೇಖಕರು Admin

July 5, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: