ಸರೋಜಿನಿ ಪಡಸಲಗಿ ಅಂಕಣ- ಎಲ್ಲಾದಕ್ಕೂ ಬೇಡಿ ಬರಬೇಕು…

ಅವಧಿ’ ಓದುಗರಿಗೆ ಸರೋಜಿನಿ ಪಡಸಲಗಿ ಅವರು ಈಗಾಗಲೇ ಸುಪರಿಚಿತ. ಅವರ ಸರಣಿ ಬರಹ ‘ಒಬ್ಬ ವೈದ್ಯನ ಪತ್ನಿ ಅನುಭವಗಳ ಗಂಟು ಬಿಚ್ಚಿದಾಗ..’ ಜನಪ್ರಿಯವಾಗಿತ್ತು.

ಈಗ ಈ ಸರಣಿ ‘ಡಾಕ್ಟರ್ ಹೆಂಡತಿ’ ಹೆಸರಿನಲ್ಲಿ ಬಹುರೂಪಿಯಿಂದ ಪ್ರಕಟವಾಗಿದೆ.

ಈ ಕೃತಿಯನ್ನು ಕೊಳ್ಳಲು –https://bit.ly/3sGTcvg ಈ ಲಿಂಕ್ ಕ್ಲಿಕ್ ಮಾಡಿ

ಅಥವಾ 70191 82729ಗೆ ಸಂಪರ್ಕಿಸಿ

ಸರೋಜಿನಿ ಪಡಸಲಗಿ, ಮೂಲತಃ ಬೆಳಗಾವಿ ಜಿಲ್ಲೆಯ ಹುಕ್ಕೇರಿಯವರು. ಮದುವೆಯಾದ ಮೇಲೆ ಧಾರವಾಡದವರಾದರೂ ಈಗ ಬೆಂಗಳೂರು ವಾಸಿ. ಪದವೀಧರೆ, ಗೃಹಿಣಿ. ಮೊದಲಿನಿಂದಲೂ ಸಂಗೀತದ ಹುಚ್ಚು ವಿಪರೀತ. ಯಾವುದೇ ಪದ ಸಿಕ್ಕರೂ ಅದನ್ನು ಸಂಯೋಜಿಸಿ ಹಾಡುವ ಅತೀವ ಆಸಕ್ತಿ. ಕ್ರಮೇಣ ಅದು ಭಾವಗೀತೆಗಳನ್ನು ಸ್ವಂತವಾಗಿ ಬರೆದು ಸಂಯೋಜಿಸಿ ಹಾಡುವತ್ತ ಕರೆದೊಯ್ದಿತು.

ಎರಡು ಕವನ ಸಂಕಲನಗಳು ಪ್ರಕಟವಾಗಿವೆ- ‘ಮೌನ ಮಾತಾದಾಗ’ ಮತ್ತು ‘ದೂರ ತೀರದ ಕರೆ’. ಇನ್ನೊಂದು ಸಂಕಲನ ‘ಹಳವಂಡ’ ಹಾಗೂ ಅವರೇ ರಚಿಸಿದ ಸಂಪ್ರದಾಯದ ಹಾಡುಗಳ ಸಂಕಲನ ‘ತಾಯಿ – ಮಗು’ ಅಚ್ಚಿನಲ್ಲಿವೆ. ಈ ಸಂಪ್ರದಾಯದ ಹಾಡುಗಳು 18 ಕಂತುಗಳಲ್ಲಿ ‘ರೇಡಿಯೋ ಗಿರ್ಮಿಟ್’ನಲ್ಲಿ ಪ್ರಸಾರ ಆಗಿವೆ. ಆಕಾಶವಾಣಿ ಬೆಂಗಳೂರು ಹಾಗೂ ಧಾರವಾಡದಿಂದಲೂ ಸಂದರ್ಶನದೊಂದಿಗೆ ಪ್ರಸಾರ ಆಗಿವೆ.

ಅವರ ಇನ್ನೊಂದು ಮನ ಕಲಕುವ ಅಂಕಣ – ತಣ್ಣೆಳಲ ಹಾದಿಯಲ್ಲಿ…

20

ನಮ್ಮ ಏಕಾ  ತನ್ನ ಬದುಕs  ಆಗಿದ್ದ  ಅಣ್ಣಾ ಸಾಹೇಬನ  ಕಾಳಜಿಯೊಳಗನ ಅಸರಂತ  ಮುಣಗಿದ್ಲು. ಸದಾ ಕಣ್ಣಾಗ ಎಣ್ಣಿ  ಹಾಕೊಂಡ  ಕಾಯ್ತಿದ್ಲು  ಅಂವನ್ನ. ಏನ  ಮಾಡಿದ್ರೂ ಅದು ಅಣ್ಣಾ ಸಾಹೇಬನ  ಸಲುವಾಗಿ ಅಷ್ಟs. ತನ್ನ ಸಲುವಾಗಿ ಅಂಬೂದು ಏನೂ ಇರಲೇ ಇಲ್ಲ ಆಕಿಗೆ. ಅದಕನೋ ಏನೋ ಸದಾ ಈ ಹೊಲಾ ಮನಿ ಬಾಬ್ತಿಯೊಳಗ  ಮುಳಗಿದಾಕಿಗೆ ಯಾಕೋ ಈಗೀಗ  ಅನಸಲಿಕ್ಹತ್ತಿತ್ತು  ಭರೆ ಹೊಲಾ ನಂಬಿ ಕೂತ್ರ  ನಡ್ಯೂದಿಲ್ಲ ಅಂತ. ಅದೂ ಅಲ್ಲದ ಸ್ವತಃ ತಾನs ಆ ಕಾಲದಾಗನ ಸಾಲಿಗೆ ಹೋಗಿ ಮುಲ್ಕಿ ಪರೀಕ್ಷಾ ಒಂದನೇ ನಂಬರ್ ತಗೊಂಡ ಪಾಸ ಆದಾಕಿ. ಅಂದಮ್ಯಾಲ ಆಕಿಗೆ ಈ ಕಲ್ಯೂದರ ಕಡೆ ಓಢ ಇರೂದ ಅಗದೀ ಸಹಜೀಕ ಅದ. ಅದಕs  ಆಕಿ  ತನ್ನ ಬದಕಿನ್ಯಾಗ  ಅಣ್ಣಾ ಸಾಹೇಬನ ಶಿಕ್ಷಣದ  ಸಲುವಾಗಿ ಅಂತನs ಒಂದು ಪ್ರತ್ಯೇಕ ಜಾಗಾನs ಇಟ್ಟ ಬಿಟ್ಟಿದ್ಲು.

ಆಕಿ ಹಗಲೆಲ್ಲಾ ಹೇಳೂ ಒಂದು ಮಾತು ನನಗ ಖರೇ ಅಂದ್ರ ಆಕಿ ಆಶಾವಾದದ ಬಗ್ಗೆ, ಬದುಕನ್ನ ವಾಸ್ತವಿಕ ನೆಲೆಗಟ್ಟಿನ್ಯಾಗ ನೋಡೂ ಆಕಿ ದೃಷ್ಟಿ ಬಗ್ಗೆ  ಒಂದ  ಹೊಸಾ  ಕೌತುಕನs ಮೂಡಿಸ್ತು. ಏಕಾ  ಹೇಳಾಕಿ – ” ಅಕ್ಕವ್ವಾ ದೇವರ ಆಟನs ಮಜಾ ನೋಡ. ನನಗ ಈಗ ಅನಸ್ತದ ನಮ್ಮ ಅಪ್ಪನ ಕಡಿಂದ ಆ ಹೊಲಾ ಮಾರಾಟದ್ದು, ರೊಕ್ಕದ್ದು ಭಾನಗಡಿ ಎಲ್ಲಾ ನನ್ನ ಅನುಕೂಲಕ್ಕನ  ಮಾಡಿಸಿದ್ನೋ ಏನೋ ಅಂತ. ಇಲ್ಲದಿದ್ರ ನಾ ಯಾಕ  ಆ  ತೌರಮನಿ ಬಿಟ್ಟ ಹೊರಬೀಳ್ತಿದ್ದ ಹೇಳು. ಆ ಭರ್ತಿ ಹರೇದ ವಯದಾಗ ನನ್ನ ನಮ್ಮ ಅವ್ವಾ, ಅಪ್ಪಾರs ಹೆಂಗ ಬಿಟ್ಟಾರು ಹೊರಗ. ಅದಕ ದೇವ್ರs  ಹಾದಿ ಮಾಡಿ ಕೊಟ್ಟ ಬಿಟ್ಟ ನೋಡು” ಅಂತ. 

    ಏಕಾಗ ದೊಡ್ಡ ಸಾಗರದಾಗ ಈಸ ಬಿದ್ಧಾಂಗ ಆದರೂ ಮುಳಗದs ತೇಲಕೋತ, ಕೈಕಾಲ ಬಡಕೋತ, ಅನ್ಕೊಂಡ  ಕೆಲಸಾ ಸಾಧಿಸಿಗೋತ ದಂಡಿಗೆ ಬರೂದ ಕಲಿಸ್ತು ಆ ಪರಿಸ್ಥಿತಿ. ಏಕಾ ಚಿಕ್ಕೋಡಿಗೆ ಬಂದದ್ದಕ್ಕ ಎರಡು ಮಹತ್ವದ್ದ  ಕೆಲಸಾ ಘಡಾಸ್ದ್ಯೂ. ತನ್ನು ಹೊಲಾ ಮನಿ ಸಂಭಾಳಿಸಿದ್ಲು ಚೂರೂ ಅಕಡೀಕಡೆ ಆಗಧಂಗ; ಹಂಗs ಇನೊಂದ ದೊಡ್ಡ ಕೆಲಸ ಅಂದ್ರ ತನ್ನ ಮಗಗ ಐನಾಪೂರ ಸಾಲಿ ಬಿಟ್ಟು ಇದ್ದದ್ರಾಗ ಒಂಚೂರ ಶಹರದ ಊರ ಚಿಕ್ಕೋಡಿ ಸಾಲ್ಯಾಗ ಕಲ್ಯೂ ಅನುಕೂಲ ಮಾಡಿ ಕೊಟ್ಲು. ಅಣ್ಣಾ ಸಾಹೇಬಂದು ಚಿಕ್ಕೋಡಿ ಒಳಗ ಮ್ಯಾಟ್ರಿಕ್ ಪಾಸ್ ಆದ ಕೂಡಲೇ ಸಾಂಗ್ಲಿ ವಿಲಿಂಗ್ಡನ್ ಕಾಲೇಜಿಗೆ  ಹಾಕಿದ್ಲು. ಅವನ ಸಲುವಾಗಿ ಅಲ್ಲೇ ಮನಿ ಮಾಡಿ ತಾನೂ  ಮಗನ ಜೋಡಿ ಅಲ್ಲೇ ನಿಂತ್ಲು. “ಅಣ್ಣಪ್ಪನ್ನ  ಬಿಟ್ರ ನನ್ನ ಬದುಕಿನ್ಯಾಗ ಇತ್ತರೆ ಏನ ಹೇಳು” ಅಂತ ಅಸರಂತ ಅನ್ನಾಕಿ. ಕಣ್ಣ ರೆಪ್ಪಿಯೊಳಗಿಟ್ಟ ಏಕಾ ತನ್ನ ಮಗನ್ನ ಅಂದ್ರ  ನಮ್ಮ ಅಣ್ಣಾನ್ನ ಕಾಯ್ದಳು. 

ನಾ‌ ಹಿಂದನೂ ಬರದೀನಿ ನಮ್ಮ ಅಣ್ಣಾನ ಶಿಕ್ಷಣದ ವಿಚಾರ. ಆದರೂ ಲೆಕ್ಕ ಇಲದಷ್ಟ ಸರ್ತೆ ನಾ ನನಗs ಗೊತ್ತಿಲಧಂಗ ಒಂಚೂರ ಅಣ್ಣಾನ ಜಾಗಾಕ ನಿಂತ ಅದನ ನನ್ನ ಕಣ್ಣಿಲೆ ನೋಡಿ ಅವರ ಹೆಂಗಹೆಂಗ ಆ ಘಟ್ಟ ಪಾರಾಗಿ  ದಂಡಿ ಮುಟ್ಟಿದ್ರು ಅಂತ ವಿಚಾರದಾಗ ಮುಳಗ್ತೀನಿ. ಖರೇನ ಆ  ಕ್ಷಣಕ್ಕ  ಕಳವಳನೂ ಆಗ್ತದ; ಅಭಿಮಾನನೂ ಅನಸ್ತದ. ಅಣ್ಣಾನ  ಸಲುವಾಗಿ ಅಂತೂ ಹೌದೇ ಹೌದು. ಹಂಗs  ಅದರ ಹಿಂದಿದ್ದ ಕೈ, ಅದs  ನಮ್ಮ ಏಕಾನ  ಸಲವಾಗಿ. ತಪ್ಪಿ ಸುದ್ಧಾ ಆಕಿ ಅನಲಿಲ್ಲ – ಹೊಲಾ ಮನಿ ಸಂಭಾಳಿಸಿಕೊಂಡ ಇರು ಸಾಕು ಅಂತ. ತಾನs ಮತ್ತಷ್ಟು ಹುರುಪು, ಒತ್ತಾಯ ತುಂಬಿದ್ಲು ಕಲ್ಯೂದರ ಕಡೆ  ಅವರ ಲಕ್ಷ್ಯ ಹರಿಸಿ.

ಅಣ್ಣಾ  ತಮ್ಮ ಅಭ್ಯಾಸದ  ಬಾಬ್ತಿಯೊಳಗ  ಭಾಳ ಚೊಕ್ಕ ಇದ್ರು ಅಂತ  ಏಕಾ ಮಗನ  ತಾರೀಫ  ಮಾಡಾಕಿ. ಇಂಟರ್ ತನಕಾನೂ ಒಂಚೂರೂ ಅಡಥಳ ಇಲ್ಲದ ಓದಿ ಪಾಸಾದ್ರು ಅಣ್ಣಾ. ಆದರೂ ಅವರಿಗೂ ಭಾಳ ವಿಚಾರದಾಗ  ಕೆಡವ್ತು ಏಕಾನ ಈ ಪರಿ ಬಿಟ್ಟೂಬಿಡದ ಜವಾಬ್ದಾರಿ, ಕೆಲಸದ ಬೋಝಾ ಎಲ್ಲಾ. ಅದು ಸಹಜೀಕನs ಅದಲಾ. ಅವರಿಗೆ  ತಿಳಿವಳಿಕಿ  ಬಂದ ಮ್ಯಾಲ ಹೆಣ್ಣ ಹೆಂಗಸು, ಇನ್ನೂ  ಹರೇದ ಗಡಿ ದಾಟಿರದಾಕಿ, ಬದಲಾಗ್ತಿರೋ ಮಂದಿ ನಡುವ  ಒಬ್ಬಾಕಿನs  ಬಡದಾಡೂದ ನೋಡಿ  ಅವರಿಗೂ ಕಾಳಜಿ, ಅದರ ಜೋಡಿ ಒಂದ ನಿರ್ಧಾರ ತಗೋಳೋದರ ಬಗ್ಗೆನೂ ಒತ್ತಡದ ಅನುಭವ  ಆಗ್ತಿರಬೇಕು. ತಾಂವೂ ತಮಗೆ ಆದಾಗ ಆಕಿ ಕೆಲಸದಾಗ ಕೈ ಹಾಕಿ ಆಕಿ ಸುಟಕಾ ಇಲ್ಲದ  ಗಡಬಡದಾಗ ಒಂಚೂರರೇ ಥಾಮಣಿ  ತರಲಿಕ್ಕೆ ಅಣ್ಣಾನೂ ಧಡಪಡಸ್ತಿದ್ರು. ನಂದಿಕುರಳಿ, ಬೆಳವಿ ಓಡಾಡ್ತಿದ್ರು. ಹಿಂಗಾಗಿ  ಅಭ್ಯಾಸದಾಗ  ಒಂಚೂರ  ಅಕಡಿಕಡೆ  ಆಗಿರಬೇಕು. ಮತ್ತ ಹಂಗs ‌‌‌‌‌‌‌‌‌‌‌‌‌ ಡಿಗ್ರಿ  ಕ್ಲಾಸ್‌ನ್ಯಾಗ  ಅಭ್ಯಾಸದ  ಹೊರಿ  ಒಂಚೂರ  ಒಜ್ಜಾನೂ ಆಗಿರಬೇಕು. ಅದಕೂ ಇದ್ದೀತು. ಜ್ಯೂನಿಯರ್ ಬಿ.ಎ.ದಾಗ  ಅಣ್ಣಾ ನಪಾಸಾದ್ರು ನಾ ಮೊದಲ ಹೇಳಿಧಂಗ.

ಅಣ್ಣಾ ಠರಾಸಿ ಬಿಟ್ರು; ಇನ್ನ  ನೌಕರಿ ಹುಡಕಿ ಕೆಲಸಾ ಮಾಡ್ಕೋತನs  ಕಲಿಯೂದನೂ  ನಡಸೂದು ಅಂತ. ಅದನ ಅರ್ಧವಟ ಮಾಡೂ ಪ್ರಶ್ನೀನs ಇರಲಿಲ್ಲ. ಅದs ವ್ಯಾಳ್ಯಾಕ್ಕ ಬರೋಬ್ಬರಿ ಅಣ್ಣಾನ ಮದವಿನೂ ಆತು. ಒಟ್ಟ ಎಲ್ಲಾ  ಗಾಠಾಸಿ ಆಣ್ಣಾಂದು ಕಾಲೇಜು ಜ್ಯೂನಿಯರ್ ಬಿ.ಎ ಗೆ ನಿಂತು ಅವರು ನೋಕ್ರಿಗೆ ಸೇರಿದ್ರು. ಆದ್ರ ಆರೇಳ ತಿಂಗಳಿಗನs  ಆ ಸರ್ಕಾರಿ  ಕೆಲಸಾ ಬಿಟ್ಟು  ಹುಕ್ಕೇರಿ ಹೈಸ್ಕೂಲ್‌ಗೆ  ಟೀಚರ್ ಅಂತ ಸೇರಿದ್ರು; ಒಂದ ಗಟ್ಟಿ ಮುಟ್ಟ ತಡಿ ಹಿಡ್ಕೊಂಡ ಹಂಗ ಆಗಿ ಅವರ ಜೀವನದ ಹೊಸಾ ಅಧ್ಯಾಯ ಸುರು ಆತು. ನಮ್ಮ ಏಕಾಗ ಮಾತ್ರ  ಒಂಚೂರ  ಹಳಾಳಿ  ಆತು ಮಗಾ ಬಿ.ಎ. ಮಾಡ್ಕೋಳಿಲ್ಲಾ  ಅಂತ. ಆಗ  ಡಿಗ್ರಿಗೆನs  ಭಾಳ  ಕಿಮ್ಮತ್ತ ಇತ್ತು; ಈಗಿನ ಹಂಗ ಅಲ್ಲಾ. ನಮ್ಮ ಅಣ್ಣಾ ಏಕಾಗ ಹೇಳೇ  ಬಿಟ್ಟಿದ್ರು; “ಸೋನವ್ವಾ ನಾ ನಕ್ಕಿ ಬಿ.ಎ. ಮುಗಸ್ತನು, ಕೆಲಸಾ ಮಾಡ್ಕೋತನs  ಅದನೂ ಮಾಡ್ತನು ” ಅಂತ. ಹೊಲಾ- ಮನಿ- ಸಂಸಾರದ ಜಂಜಾಟ  ಹೊತ್ಕೊಂಡ  ಅಭ್ಯಾಸ ಮಾಡೂದ್ಕೂ,  ವಿದ್ಯಾರ್ಥಿ  ಜೀವನದಾಗ  ಮತ್ಯಾವ  ಹರತಾಟ್ಕ ಇಲದ  ಬರೀ ಅಭ್ಯಾಸದ್ದ ಒಂದs  ಲಕ್ಷ್ಯ ಇಟಗೊಂಡ ಅಭ್ಯಾಸ ಮಾಡೂದ್ಕೂ ಭಾಳ ಫರಕ ಇರತದ. ಆ ಧರ್ತಿನs  ಬ್ಯಾರೆ, ಇದs  ಬ್ಯಾರೆ. ಹಿಂಗಾಗಿ  ಅಣ್ಣಾಗ ಬಿ.ಎ. ಮುಗಸೂದು ಒಂಚೂರ ತಡಾ ಆತು. ಆದ್ರ ಮುಗಿಸಿದ್ರು ಏಕಾಗ ಹೇಳಿಧಂಗ.

ಆ ಮ್ಯಾಲ ಹುಕ್ಕೇರಿ ಹೈಸ್ಕೂಲ್‌ನ  ಸಂಸ್ಥಾದವರೇ  ಡೆಪ್ಯುಟೇಷನ್  ಮ್ಯಾಲ ಕಳಿಸಿ ಬಿ.ಎಡ್. ಮತ್ತ ಸ್ವಲ್ಪ ದಿನಾ ಬಿಟ್ಟು ಎಂ.ಎ.ನೂ ಮಾಡ್ಕೋಳಿಕ್ಕೆ ಕಳಿಸಿಕೊಟ್ರು. ಆ ಅವಕಾಶ ಪೂರಾ ಬಳಸ್ಕೊಂಡು  ಅದನ ಪಾರ ಹಾಯಿಸಿ ಮುಗಿಸಿ ದಂಡಿ ಮುಟ್ಟೂದ ಏನ ಅಸನರಿ ಕೆಲಸ ಅಲ್ಲದಿದ್ರೂ ಅಣ್ಣಾ ಆ ಫಾಜೆಗಟ್ಟಿ ಮುಟ್ಟಿದ್ರು. ದಿನದಿಂದ ದಿನಕ್ಕ ಸಂಸಾರದ  ಜವಾಬ್ದಾರಿ ಹೆಚ್ಚ ಹೆಚ್ಚs  ಆಕ್ಕೋತ ನಡದಿತ್ತು. ಮತ್ತ ಮಕ್ಕಳು ಮರಿ ಇದ್ದ ಮ್ಯಾಲ ಆಗೂದೇಲಾ.‌‌ ನಮ್ಮ ಕುಟುಂಬನೂ  ಸಣ್ಣದೇನ ಇದ್ದಿದ್ದಿಲ್ಲ. ನಾವು  ಆರ ಮಂದಿ ಮಕ್ಕಳು, ಅವ್ವಾ – ಅಣ್ಣಾ, ಏಕಾ. ಒಟ್ಟ ಒಂಬತ್ತ ಮಂದಿ ತುಂಬು ಸಂಸಾರ  ನಮ್ಮ ಅಣ್ಣಾಂದು ಅಂದ್ರ ನಮ್ಮದು. ಮತ್ತ  ಬಂಧು- ಬಳಗಾ  ಇದ್ದಾವ್ರ ಅಂದ ಮ್ಯಾಲ ಮನಿಗೆ ಮಂದಿದು ಬರೂ ಹೋಗೋದು ಇದ್ದs ಇರ್ತಿತ್ತು. ಮಕ್ಕಳೂ ದೊಡ್ಡವರಾಗಿ ದೊಡ್ಡ ಕ್ಲಾಸ್‌ಗೆ  ಬರಲಿಕ್ಹತ್ತಿದ್ರು. ಅವರ ಅಭ್ಯಾಸದ ಜವಾಬ್ದಾರಿ, ಪೆನ್ನು – ಪುಸ್ತಕ ಅಂತ  ಅವರ ಅವಶ್ಯಕತೆಗಳ ಪಟ್ಟಿ ಎಲ್ಲಾ ದೊಡ್ಡು  ಆಗಲಿಕ್ಹತ್ತು; ಒಂದs ಎರಡs! ಖಾಸಗಿ ಹೈಸ್ಕೂಲ್‌ನ್ಯಾಗ ಇನ್ನೂ ಪಗಾರದ್ದು  ಹಂಗಂಗೇ ಇತ್ತು. ನಮ್ಮ ಏಕಾ ಕಾಳಜಿಪೂರ್ವಕ ಸಂಭಾಳಿಸಿ ಕಾಯ್ಕೊಂಡ ಬಂದ ಮಹಾರಾಯನಂಥಾ ಹೊಲಾ ತ್ವಾಟಾ ಪಟ್ಟಿ ಇದ್ದದ್ದು  ನಮ್ಮ ಅಣ್ಣಾಗ ದೊಡ್ಡ ಆಸರ ಆಗಿತ್ತು. ಆದರ ದಿನಾ ಹೋಧಂಗ ಒಕ್ಕಲತನದ ಖರ್ಚನೂ ದುಬಾರಿ ಆಗಿತ್ತು. ಉತ್ಪನ್ನ ಮಾತ್ರ  ಅಷ್ಟs ಉಳಧಂಗನs ಲೆಕ್ಕ. ರೊಕ್ಕದ್ದ ಒಂದs ಅಲ್ಲಾ, ಅದರ ಜೋಡಿ ಪ್ರತಿಯೊಂದರ ಜವಾಬ್ದಾರಿ ಹೆಚ್ಚಾಕೋತ ಹೊಂಟಿತ್ತು. ಅಂಥಾದ್ರಾಗ  ಅಣ್ಣಾ ತಮ್ಮ ಜವಾಬ್ದಾರಿ ಕರ್ತವ್ಯ ನಿಭಾಯಿಸಿಕೋತ ತಮ್ಮ ಶಿಷ್ಯವೃತ್ತಿನೂ ಏಕದಂ ಬರೋಬ್ಬರಿ ನಿಭಾಯಿಸಿ, ತಮ್ಮ ಬಿ.ಎ., ಬಿ.ಎಡ್., ಎಂ.ಎ. ಮುಗಿಸಿದ್ರು. ಹೊಲಾ, ತ್ವಾಟಾ ಪಟ್ಟಿದ ಏಕಾ ನೋಡ್ಕೋತಿದ್ಲು ಆ ವ್ಯಾಳ್ಯಾದಾಗ; ನಮ್ಮದೆಲ್ಲಾ ರೀತಿ ಕಾಳಜಿ, ಅಭ್ಯಾಸದ್ದ ಮೊದಲ ಮಾಡ್ಕೊಂಡ  ಅವ್ವಾ ಸಂಭಾಳಸ್ತಿದ್ಲು. ಆದರ ಮನಿ ಯಜಮಾನ ಆಗಿ ಪ್ರತಿ ಬಾಬ್ತಿಯೊಳಗ  ವಿಚಾರ, ಕಾಳಜಿ  ಅಣ್ಣಾಗ ಇರೂದು ಅಗದೀ ಸಹಜೀಕ ಅದ.

ಅಣ್ಣಾ ಎಂ.ಎ. ಗಿದ್ದಾಗ  ಪ್ರಕಾಶ  ಪಿಯುಸಿಗೆ ಧಾರವಾಡ  ಕರ್ನಾಟಕ ಕಾಲೇಜಿಗಿದ್ದ; ಉದಯ ಹಾಸ್ಟೆಲ್‌ನ್ಯಾಗ  ಇರ್ತಿದ್ದ. ಅಣ್ಣಾ ಒಂದ ಸಣ್ಣ ಮನಿ ಮಾಡ್ಕೊಂಡ ಇದ್ರು. ಒಂದ ವರ್ಷ ಅವ್ವಾನೂ ನನ್ನ ಸಣ್ಣ ತಮ್ಮಾ, ತಂಗಿನ್ನ  ಕರಕೊಂಡ ಅಲ್ಲೇ ಧಾರವಾಡದಾಗ ಇದ್ಲು. ಸಣ್ಣ ತಮ್ಮ ಪ್ರದೀಪನ್ನ  ಅಲ್ಲೇ  ಸಾಲಿಗೆ  ಹಾಕಿದ್ರು. ತಂಗಿ  ಇನ್ನೂ ಸಣ್ಣಾಕಿ  ಇದ್ಲು. ಖರೆ ಎರಡೆರಡ ಕಡೆ ಮನಿ, ನಮ್ಮಣ್ಣ  ಪ್ರಕಾಶಂದು  ಹಾಸ್ಟೆಲ್, ಕಾಲೇಜು  ಖರ್ಚು, ನಮ್ಮದೆಲ್ಲಾ ಸಾಲಿ, ಟ್ಯೂಷನ್ ಖರ್ಚು ಭಾಳ ಒಜ್ಜಾ ಆಗ್ತಿತ್ತು ನಮ್ಮ ಅಣ್ಣಾಗ.  ಇದೊಂದ ವಿಚಾರ ಆದರ ಅಲ್ಲೂ ಅಂದ್ರ ಧಾರವಾಡದಾಗೂ ಮನಿಗೆ ತಂದ ಬಂದ ಹಾಕೂದು – ಒಟ್ಟ ಅಲ್ಲೂ ಒಂದ ಮನಿ ನಡಸೂ ಜವಾಬ್ದಾರೀನೂ  ಬಿದ್ಧಂಗಾತು. ಈ ಎಲ್ಲಾ  ಗೊಂದಲದಾಗ  ಅಣ್ಣಾನ  ಎಂ.ಎ ದ ಅಭ್ಯಾಸದಾಗೂ ಹೈಗೈ ಆಗಲಿಕ್ಹತ್ತು. ಅದಕ ಎರಡನೇ ವರ್ಷ ಅವ್ವಾ ಮತ್ತ ನನ್ನ ತಮ್ಮಾ ತಂಗಿ ಜೋಡಿ  ವಾಪಸ್  ಹುಕ್ಕೇರಿಗೇ ಬಂದ್ಲು. ಅಣ್ಣಾ  ತಾಂವೇ ಒಂದ ಅನ್ನಾ ಮಾಡ್ಕೊಂಡ  ಊಟದ್ದ  ಮುಗಿಸಿ ತಮ್ಮ ಕಾಲೇಜು ಅಂದ್ರ  ಯುನಿವರ್ಸಿಟಿ, ಅಭ್ಯಾಸ  ಅಂತ ಇದ್ರು. ಇಷ್ಟ ದೊಡ್ಡ ಬೋಝಾದ  ಒತ್ತಡದಾಗೂ  ಅಣ್ಣಾ  ಎಂ.ಎ. ಹೈಯರ್  ಸೆಕೆಂಡ ಕ್ಲಾಸ್‌ನ್ಯಾಗ  ಪಾಸ್ ಆದ್ರು.

ಖರೇ ಅಂದ್ರ  ನನಗ ಭಾಳ  ಹೆಮ್ಮೆ ಅನಸ್ತದ ನಮ್ಮ ಅಣ್ಣಾಂದು ಸರಳ ಸಾದಾ ಇರಿಸರಿಕಿ, ಜೀವನದ ರೀತಿ ನೀತಿ ನೋಡಿ. ಒಂದೇ ಒಂದು ಗೊಳ್ಳ ದೊಡ್ಡಿಸ್ತನದ ಮಾತು, ಅರ್ಥವೇ ಇಲ್ಲದ  ಖಾಲಿ ಕೆಲಸದಾಗ ವ್ಯಾಳ್ಯಾ ತಗೀದ  ಪ್ರತಿ ನಿಮಿಷ  ಅವರ ಬಳಸ್ಕೋತಿದ್ದ  ಅಪರೂಪ  ರೀತಿ ನೋಡಿ. ಅದರ ಜೋಡಿನs  ಇತಿ ಮಿತಿಯೊಳಗ  ಛಂದ ಜೀವನಾ  ನಡಸೂ ನಮ್ಮ ಅವ್ವಾನ  ಶಾಣ್ಯಾತನಾ ನೋಡಿ, ಹೊಂದಕೊಂಡ  ಹೋಗೂ ಆಕಿ  ಧಾಟಿ ನೋಡಿ. ಇವೆಲ್ಲಾ ಅಂದ್ರ ಇಂಥಾ ವಾತಾವರಣ  ನಮಗ ಯಾರೂ ಏನೂ ಹೇಳದನ ಹೆಂಗ್ಹೆಂಗ  ನಡೀಬೇಕು, ಯಾವ ರೀತಿ ಹೊಂದಿಕಿ  ಆಗಬೇಕು  ಅಂಬೂದನ್ನ ಕಲಿಸಿದು. ಅದಕ್ಕೂ ಹೆಚ್ಚಿಂದ ಅಂದ್ರ ಸ್ವಂತ ವಿಚಾರ ಮಾಡೂದು, ಸ್ವಂತಿಕೆಯ  ನಿರ್ಧಾರ  ತಗೋಳೋದರ ರೂಢಿ  ಮಾಡಿಸ್ತು, ಅದೂ ಅಗದೀ ಸೈ ಅನೂ ಹಂಗ. ಅದರ ‌‌‌‌‌‌‌‌‌‌‌‌‌‌ಜೋಡಿ ಜವಾಬ್ದಾರಿಯುತ ವರ್ತುಣಕಿ  ಕಲಿಸ್ತು. ಇದು ನಮಗ ನಮ್ಮ ಪೂರ್ವಾರ್ಜಿತ ಆಸ್ತಿ; ಅದೂ ಎಂದೂ  ಕ್ಷಯವಾಗದ್ದು, ಕಳವಾಗದ್ದು. ಪೂರಾ  ಪೂರಾ  ಗಟ್ಟಿ ನಮಗs  ಉಳೀಯೂದು. ನಮ್ಮ ಅವ್ವಾ – ಅಣ್ಣಾ ಅಸರಂತ  ಅನಾವ್ರು; 

“ದೇವರು  ಒಂದರಾಗ  ಕಡಿಮಿ ಮಾಡಿದ್ರ ಇನ್ನೊಂದ್ರಾಗ  ಕೈ ಸಡ್ಲ ಬಿಟ್ಟ ಕೊಟ್ಟು ಆ ತೂಕಾ, ಜಮಾ- ಖರ್ಚಿನ ಲೆಕ್ಕ  ಅಗದೀ ಬರೋಬ್ಬರಿ ಬಾಯ್ಗೂಡ್ಸಿ  ಇಟ್ಟಿರತಾನ. ಅದಕs  ಇಂಥಾ ಶಾಣ್ಯಾ, ಸಮಝದಾರ ಮಕ್ಕಳನ ಕೊಟ್ಟಾನ ” ಅಂತ. ನಮ್ಮ ಅವ್ವಾ ಅಂತೂ, “ಆರ ಮಕ್ಕಳವ. ಅದರಾಗ  ಒಂದ ಧಡ್ಡಾ, ಮಡ್ಡಾ  ಹುಟ್ಟಿದ್ರ ಏನ ಮಾಡ ಹಂಗ ಇದ್ವಿ ನಾವು? ದೇವರು ದೊಡ್ಡಾಂವ. ಎಲ್ಲಾ ಒಂದರಕಿಂತಾ  ಒಂದ ಶಾಣ್ಯಾ ಅವ.” ಅಂತ  ಕಾಯಂ  ಅನಾಕಿ.  ಆದ್ರ ತಪ್ಪಿ ಸುದ್ಧಾ ನಮ್ಮ ಮುಂದ  ಅಂತಿದ್ದಿಲ್ಲಾ; ಎಲ್ಯರೇ ಆ  ಹೊಗಳಿಕಿ  ನಮ್ಮ ತಲೀಗೆ ಏರೀತು ಅಂತ. ಎಷ್ಟ ಬೇಕೋ ಅಷ್ಟs  ಖುಷಿ ಅನಸೂಹಂಗ ಹೇಳಾವ್ರು. ಉಳದದ್ದೆಲ್ಲಾ ನಮಗ  ಆವಾಗಾವಾಗ ಕಿವಿಗಿ  ಬಿದ್ದಿದ್ದು; ಎಲ್ಲಾ  ಮುಗಿಸಿ ನಮ್ಮ ನಮ್ಮ ಸಂಸಾರದಾಗ  ನಾವು  ಮುಣಗಿದಾಗ  ಹೇಳಿ, ಕೇಳಿದ ಮಾತ ಇವು. ಮತ್ತ ಖರೇನs ಹಂಗs ಅದ; ಯಾವದs  ಅವ್ವಾ – ಅಪ್ಪಾ ಗರ್ವ ಪಡೂ ಅಂಥಾ  ಮಕ್ಕಳು ನನ್ನ ಅಣ್ಣ – ತಮ್ಮಂದಿರು; ಹಂಗs  ನನ್ನ ತಂಗೀನೂ! ಅಳಿಯಂದ್ರೂ ಬೇಕಾಧಂಗನs  ಸಿಕ್ರು. ನಮ್ಮ ಏಕಾ ಅಣ್ಣಾಂದು ಈ ಎಲ್ಲಾ ಸೌಭಾಗ್ಯ ನೋಡಿದ್ಲು, ಕಣ್ತುಂಬ ನೋಡಿದ್ಲು ನಮ್ಮ ಅಜ್ಜ ಹೇಳಿಧಂಗ.

ನಮ್ಮ ಏಕಾ ಒಮ್ಮೆಲ್ಲ  ಎರಡ ಮೂರ ಸರ್ತೆ ನನ್ನ  ಮುಂದ  ಅಂದಿದ್ಲು; “ಅಕ್ಕವ್ವಾ ನಿಮ್ಮಜ್ಜಗ ಭವಿಷ್ಯ ಗೊತ್ತಾಗ್ತಿತ್ತೋ ಏನೋ ನೋಡ” ಅಂತ. ಹಂಗs  ಥೇಟ್ ನಮ್ಮ  ಅಣ್ಣಾಗೂ. ನಮ್ಮ ಅಣ್ಣಾ ಭಾಳ  ಬರೋಬ್ಬರಿ  ಜ್ಯೋತಿಷ್ಯ ಹೇಳ್ತಿದ್ರು. ಅದು ಅವರ ಅಪ್ಪನಿಂದ  ಅಂದ್ರ ನಮ್ಮ ಅಜ್ಜ ರಾವ್ ಸಾಹೇಬ್ರಿಂದ  ಬಂದ  ದೇಣಿಗಿನs  ಹೌದು; ಅದಲ್ಲದ ಮತ್ತೇನು.  ಅದಲ್ಲದ  ನಮ್ಮ ಅಣ್ಣಾ ಅದರ  ಬಗ್ಗೆ  ಭಾಳ  ಅಭ್ಯಾಸನೂ  ಮಾಡಿದ್ರು. ಹಸ್ತ ಸಾಮುದ್ರಿಕದಾಗ

(Palmistry)  ಅವರಿಗೆ ಭಾಳ  ಆಳ ಜ್ಞಾನ ಇತ್ತು. ಹಂಗs ಸಂಖ್ಯಾಶಾಸ್ತ್ರ (Numerology) ಸಹಿತ  ಅವರು ಛಲೋ  ಓದಿದ್ರು, ಅದರಾಗೂ ಛಲೋ  ಗತಿ ಇತ್ತು. ಹಂಗs ಕುಂಡಲಿ ಬರಿಯೂದು, ನೋಡೂದು ಎಲ್ಲಾ ಬಲ್ಲವರಿದ್ರು. ಅದು ಅವರ  ಹವ್ಯಾಸ ಅಷ್ಟೇ. ಉದ್ಯೋಗ ಅಂತ ಆಗಲಿ, ರೊಕ್ಕದ  ಸಲುವಾಗಿ  ಆಗಲೀ ಅಲ್ಲ  ಅದು. ನಾ  ಹಿಂದೆ ಹೇಳಿಧಂಗ  ಒಂದೇ ಒಂದು ನಿಮಿಷ ಖಾಲಿ ಫುಕಟ ವ್ಯಾಳ್ಯಾ  ತಗಿಯೂದು  ನಮ್ಮ ಅಣ್ಣಾಗ  ಗೊತ್ತೇ ಇರಲಿಲ್ಲ. ಎಷ್ಟ ಸಾಧ್ಯ ಅದ ಅಷ್ಟು ಓದೂದು, ಕಲಿಯೂದು ಅಷ್ಟs  ಗೊತ್ತಿತ್ತು  ಅವರಿಗೆ.

ಸಾಲಿ ಬಿಟ್ಟ ಬಂದ ಮ್ಯಾಲ  ಸಂಜೀನ್ಯಾಗ  ಹೋಗೂ   ವಾಕಿಂಗ್ ವ್ಯಾಳ್ಯಾದಾಗ  ಇದs  ಚರ್ಚಾ,  ಅಭ್ಯಾಸ  ನಡದಿರತಿತ್ತು  ನಮ್ಮ ಅಣ್ಣಾಂದು, ನಮ್ಮನಿ  ಪುರೋಹಿತರು ರಾಮಾಚಾರ್ಯರು ಮತ್ತ ಇನ್ನೊಬ್ಬ ಸ್ನೇಹಿತರು, ಪ್ರೈಮರಿ ಸ್ಕೂಲ್ ಟೀಚರ್ ಕೆ. ಎನ್. ಕುಲಕರ್ಣಿ ಅವರ  ಜೋಡಿ. ರಾಮಾಚಾರು ಭಾಳ ದೊಡ್ಡ ಜ್ಯೋತಿಷಿ. ಅವರು ಕುಂಡಲಿ  ನೋಡಿ  ಹೇಳ್ತಿದ್ರು; ಕುಂಡಲಿ  ಬರೀನೂತಿದ್ರು. ಕೆ. ಎನ್. ಕುಲಕರ್ಣಿ ಮಾಸ್ತರೂ  ಇದೇ ವಿಷಯದಾಗ  ಭಾಳ ಶಾಣ್ಯಾರು; ಮತ್ತ ನಮ್ಮ ಅಣ್ಣಾ  ಕೈ ನೋಡಿ  ಹೇಳೂದ್ರಾಗ. ಪ್ರತಿ ಜ್ಯೋತಿಷಿದು  ಹತ್ತರಾಗ  ಒಂದು ಮಾತು ಹುಸಿ  ಹೋಗ್ತದ  ಅಂಬೋ ಹೇಳಿಕೆ  ಅದ. ಖರೇನೂ  ಇದ್ದೀತು ಅದು. ನಮ್ಮ ಅಣ್ಣಾಂದು  ನಾ ಕಂಡ ಹಾಂಗ  ಭಾಳ ಖರೇ ವಾಕ್   ಇತ್ತು. ನನ್ನ  ಮಗಳ  ಮದವಿ ತಾರೀಖು, ತಿಂಗಳ, ವರ್ಷ ಎಲ್ಲಾ  ಬರೆದು ನನ್ನ ಕೈಯಾಗ ಕೊಟ್ಟಿದ್ರು ನಾಲ್ಕೈದು ವರ್ಷ ಮೊದಲೇ.

 ನಮ್ಮ ಅಣ್ಣಾನ  ಖಾಲೋ ಖಾಲ  ನನ್ನ ಅಣ್ಣ ಪ್ರಕಾಶ, ತಮ್ಮ ಆನಂದ ಇಬ್ಬರೂ  ಹಸ್ತ ಸಾಮುದ್ರಿಕದಾಗ  ಛಲೋ ಅಭ್ಯಾಸ ಮಾಡ್ಯಾರ. ಇಬ್ಬರೂ ದೊಡ್ಡ ದೊಡ್ಡ ಐಟಿ ಕಂಪನಿಗಳ  ಮಾಲೀಕರು, ಸ್ಥಾಪಕರು. ಅದs ಶಾಣ್ಯಾತನಾ  ಈ ಹಸ್ತಸಾಮುದ್ರಿಕದಾಗೂ ಅದ ಇಬ್ರಿಗೂ. ಪ್ರಕಾಶನಕಿಂತಾ ಆನಂದ ಇದರಾಗ  ಶಾಣ್ಯಾ ಇದ್ದಾನ ಅನಸ್ತದ ನಂಗ. ನಾನೂ ಪಾಮಿಸ್ಟ್ರಿ ಬಲ್ಲೆ. ಅಣ್ಣಾ  ನನಗ  ಕುಂಡಲಿ ಅಂದ್ರ  ಜಾತಕಾ ಬರೀಲಿಕ್ಕೆ, ಅದನ ಅಭ್ಯಾಸ ಮಾಡ್ಲಿಕ್ಕೂ  ಕಲಸಲಿ-

-ಕ್ಹತ್ತಿದ್ರು. ಅದ್ಯಾಕಂತ  ಗೊತ್ತಿಲ್ಲ, ನಮ್ಮ ಅವ್ವಾ ಅದನ ಬಿಡಿಸಿದ್ಲು; ಅದನ್ನ ಕಲೀಯೂದ ಬ್ಯಾಡ ಅಂದ್ರ ಬ್ಯಾಡ ಅಂತ  ಹಟಾನs  ಹಿಡದ್ಲು. ನನಗ ಕುಂಡಲಿ  ಹಾಕಲಿಕ್ಕೆ ಬರೂದಿಲ್ಲಾ; ಆದ್ರ  ಅಷ್ಟs ಸ್ವಲ್ಪ ಸ್ವಲ್ಪ ತಿಳೀತದ. ಥೇಟ್  ನಮ್ಮ ಅಣ್ಣಾನಗತೆ  ನಾನೂ ದಿನಾಲೂ ಮಲಗೂ  ಮೊದಲ  ಒಮ್ಮೆ ಪಂಚಾಂಗದ  ಕಡೆ  ಕಣ್ಣ ಹಾಯಿಸೇ  ಮಲಗೂದು.

ಈ ಹಸ್ತಸಾಮುದ್ರಿಕ  ಬಲ್ಲವರಾಗಲಿ, ಜ್ಯೋತಿಷ್ಯ  ಹೇಳುವರಾಗಲಿ  ತಮ್ಮ ಮಕ್ಕಳು, ಮನಿ ಮಂದಿ  ಯಾರದೂ ಕೈ ಅಥವಾ ಕುಂಡಲಿ ನೋಡೂದಾಗಲಿ  ಮಾಡಬಾರದು ಅಂತ  ಇರ್ತದ. ಆದರ  ನಾವು  ಅಣ್ಣಾನ್ನ  ಬಿಡ್ತಿದ್ದೆ  ಇಲ್ಲ. ನಮ್ಮ  ಎಲ್ಲಾರದೂ ಕೈ ನೋಡ್ಯಾರ  ಅಣ್ಣಾ. ಮತ್ತ ಅವರು  ಹೇಳಿದ್ದು ಅಗದೀ  ಪಕ್ಕಾ ಖರೇ  ಬಂದದ. ಈಗ ನನಗ  ಒಮ್ಮೊಮ್ಮೆ  ಅನಸ್ತದ; ಬಹುತೇಕ  ಅವರಿಗೆ  ಅವ್ವಾಂದು, ತಮ್ಮದು  ಅಂತ್ಯದ  ಬಗ್ಗೆನೂ  ತಿಳದಿತ್ತು ಅಂತ. ಮತ್ತ ಬರೀತೀನಿ ಮುಂದೆ ಅದರ  ವಿಚಾರ.

ನಮ್ಮ  ಅಣ್ಣಾನೂ  ಏಕಾನ ಹಂಗs  ಭಾಳ ಖಟಿಪಿಟಿಯವರು. ಇಷ್ಟೆಲ್ಲಾ  ಕೆಲಸ, ಹವ್ಯಾಸಗಳ ಸಂಗತಿ  ಎಂ.ಎ. ಮುಗಿಸಿ ಬಂದ  ಸ್ವಲ್ಪ  ದಿನಗಳ ನಂತರ  ಒಂದು  ಸಂಶೋಧನೆ ಕೆಲಸಾ ಸುರು  ಮಾಡಿದ್ರು. ಬಸವಣ್ಣನ  ಜನ್ಮಸ್ಥಳದ  ಶೋಧನೆ, ಅದಕ್ಕ ಸಂಬಂಧಪಟ್ಟ  ವಿಷಯಗಳ  ಹುಡುಕಾಟ,  ಬರವಣಿಗೆ ಹೀಂಗ ಆ ವಿಷಯ ನಡದಿತ್ತು. ಆ ವಿಷಯದ ಬಗ್ಗೆ ಆಳ ಅಧ್ಯಯನ, ಶಿಲಾಶಾಸನಗಳ  ಅಭ್ಯಾಸ  ನಡಸಿದ್ರು. ದಿನಾ ಸಾಲಿ ಬಿಟ್ಟ ಬಂದ ಕೂಡಲೇ, ಸೂಟಿ ಇದ್ದಾಗ  ನಮ್ಮೂರ ಹುಕ್ಕೇರಿ ಹತ್ರ ಇರೋ ಅರ್ಜುನವಾಡಕ್ಕ ಹೋಗಿ  ಬರ್ತಿದ್ರು. ಅರ್ಜುನವಾಡದ ಹತ್ರ ಇದ್ದ, ಈಗ ಭೂಗತವಾಗಿ ಹೋಗಿ ತನ್ನ  ಗುರುತು ಉಳಿಸಿದ  ಕವಿಳಾಸಪುರ,  ಅಲ್ಲಿನ ಬಸವಣ್ಣನ ಜನ್ಮಸ್ಥಳದ  ಬಗ್ಗೆ  ಇರುವ ಶಾಸನಗಳ  ಅಧ್ಯಯನ, ಸಂಶೋಧನೆ  ನಡಸಿದ್ರು.ಬಸವಣ್ಣನ ವಂಶಾವಳಿನೂ  ಅಲ್ಲಿ ಸಿಕ್ಕಿತ್ತು.  ಅದರ ಜೋಡಿ ಬೆಳವಿ;  ಅಲ್ಲೇ  ಹುಕ್ಕೇರಿ ಹತ್ರ ಜಾಪೂರದಾಗನೂ  ಸ್ವಲ್ಪ ಜಮೀನು ತಗೊಂಡಿದ್ರು, ಅದರದು  ದೇಖರೇಖಿ, ಓಡಾಟ , ಸಾಲಿ ಕೆಲಸ, ಅರ್ಜುನ ವಾಡದ  ಕೆಲಸ ಎಲ್ಲಾ ಸೇರಿ ಅವಿಶ್ರಾಂತ  ದುಡಿತ,  ಓಡಾಟ  ಎಲ್ಲಾದರ  ಆಯಾಸ  ಸೇರಿ  ಮಲಗಿ ಬಿಟ್ರು , ಎರಡು ಮೂರು ತಿಂಗಳ. ಆ ಮ್ಯಾಲ  ಅದು  ಅವರಿಗೆ ಕಡಿಮೆ  ರಕ್ತದೊತ್ತಡ  ಆಗಿ  ಉಳಕೊಂಡ ಬಿಡ್ತು. ಹಿಂಗಾಗಿ  ಆ  ಸಂಶೋಧನಾ ಕೆಲಸದ್ದ  ಕೈ ಬಿಟ್ರು. ಆಗ  ಸಂಯುಕ್ತ ಕರ್ನಾಟಕದಾಗ  ಅವರ ಸಂಶೋಧನಾತ್ಮಕ  ಬರಹಗಳು  ಪ್ರಕಟ ಆಗ್ತಿದ್ದು. ಈ ಬಗ್ಗೆ  ಡಾ. ರಾಜಶೇಖರ  ಇಚ್ಚಂಗಿಮಠ  ಅವರು ಬರೆದ “ಬೆಳಗಾವಿ ಜಿಲ್ಲೆಯ ಸಾಂಸ್ಕೃತಿಕ ವೈವಿಧ್ಯ” ಅನ್ನೋ  ಪುಸ್ತಕದಾಗ  ಅಣ್ಣಾ ಬರದ ಕವಿಳಾಸಪುರದ  ಭೂಪಟ  ಪ್ರಿಂಟ್ ಮಾಡಿ, ನಮ್ಮ ಅಣ್ಣಾ ಅಂದ್ರ ಆರ್.ಆರ್. ಮುತಾಲಿಕ ಸರ್  ಅವರ ಸಂಶೋಧನೆ  ಬಗ್ಗೆನೂ  ವಿವರವಾಗಿ  ಬರದಾರ. 

ಅಣ್ಣಾ  ಹಗಲೆಲ್ಲಾ  ಅಂತಿದ್ರು; ಎಲ್ಲಾದಕ್ಕೂ ಬೇಡಿ  ಬಂದಿರಬೇಕು ಅಂತ. ಅದ  ಅಗದೀ ಸೋಳಾ ಆಣೆ ಸತ್ರಾಪೈ ಖರೇ. ನಮ್ಮ ಅಣ್ಣಾಗ ಅಪ್ಪನ ನೆನಪೇ ಇರಲಿಲ್ಲ. ಇನ್ನ ಅಪ್ಪನ  ಪ್ರೀತಿ, ಕಾಳಜಿದಂತೂ ದೂರೇ ಉಳೀತು. ಇದ್ರರ  ಎಷ್ಟು ವರ್ಷ ನಮ್ಮಜ್ಜಾ? ನಮ್ಮ ಅಣ್ಣಾ ಎರಡ ವರ್ಷದಾವ್ರ ಇದ್ದಾಗ ಹೋಗೇ ಬಿಟ್ಟಾರ. ಅಣ್ಣಾ ಅಪ್ಪನ ಪ್ರೀತಿ, ಕಾಳಜಿ  ಆಸರ  ಅಂಬೂದನ್ನ ಬೇಡಿ ಬರಲೇ  ಇಲ್ಲ. ಏಕಾನೇ ಅಪ್ಪಾ, ಅವ್ವಾ ಎರಡೂ  ಆಗಿ  ಅಖಂಡ ಪ್ರೀತಿ ಕೊಟ್ಲು; ಅಸರಂತ  ಕಾಳಜಿ  ಜವಾಬ್ದಾರಿ  ವಹಿಸಿಕೊಂಡ್ಲು. ಅದs  ರೀತಿ   ನಮ್ಮ ಅಣ್ಣಾ  ತಮ್ಮ ಮಕ್ಕಳ  ಬದ್ದಲ ತೋರಿಸಿದ  ಕಾಳಜಿ, ಪ್ರೀತಿ  ಅಗದೀ ಅಚೂಕ  ಮತ್ತ  ಅಷ್ಟs  ಊಚ! ತಾಂವ ಕಳಕೊಂಡದ್ದನ್ನ, ತಮಗ ಸಿಗಲಾರದ್ದನ್ನ ಅವರು ಬಡ್ಡಿ ಸಮೇತ  ತಮ್ಮ  ಮಕ್ಕಳಿಗೆ  ಕೊಟ್ರು. ಮಕ್ಕಳ  ಪ್ರತಿ ಸೋಲು, ಗೆಲುವನ್ನ  ಪೂರ್ಣ ಮನಸ ತುಂಬಿ  ಅನುಭವಿಸಿದ್ರು. ಭಾಳ ಭಾವಜೀವಿ  ನಮ್ಮ ಅಣ್ಣಾ. ಮಕ್ಕಳ  ಪ್ರೊಗ್ರೆಸ್  ಕಾರ್ಡ್  ನೋಡಿದ್ರೂ  ಭಾವುಕ  ಆಗ್ತಿದ್ರು  ಅವರು ತಗೊಂಡ  ಮಾರ್ಕ್ಸ್  ನೋಡಿ; ಅವರ rank  ನೋಡಿ. ಕಣ್ಣ ಒದ್ದಿ  ಮಾಡ್ಕೊಳದs  ಒಮ್ಮೆನೂ  ಸಹಿ  ಮಾಡಿಲ್ಲ. ಇನ್ನ  ಮಕ್ಕಳ ಸಾಧನೆಗಳಿಗೆ  ಅವರ  ಎದಿ  ಎಷ್ಟ  ತುಂಬಿ  ಬರತಿರಬೇಕು,  ಅದನ್ನ  ಕಲ್ಪನಾ  ಮಾಡೂದು  ಆಗದ ಕೆಲಸಾ. ಅಣ್ಣಾನ ಕಣ್ಣು ಕೆರಿ ಆಗ್ತಿದ್ದು; ಅವರ ಸಿಟ್ಟಿನ ಹಿಂದ ಅಡಗಿ ಕುಳಿತಿದ್ದ ಆ ಬುಗ್ಗಿ  ಚಿಮ್ಮಿ  ಬರ್ತಿತ್ತು  ಅಂಥಾ ವ್ಯಾಳ್ಯಾದಾಗ. ನಮ್ಮ ಅವ್ವಾ ಅಣ್ಣಾ  “ಕುಲವಧು” ಸಿನೇಮಾ ನೋಡ್ಲಿಕ್ಕ ಹೋಗಿದ್ರು. ಅದರಾಗ ವಿ.ಸೀ.ಯವರ ಹಾಡು- “ಎಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು….. “ ಹಾಡ ಕೇಳಿ  ಬಿಕ್ಕಿ ಬಿಕ್ಕಿ ಅತ್ತಿದ್ರಂತ  ಅಣ್ಣಾ, ಅಕ್ಕವ್ವನ್ನ ಮದವಿ ಮಾಡಿ ಕಳಸೂದ ಹೆಂಗಂತ. ವಿದ್ಯಾ ಇನ್ನೂ ಸಣ್ಣದಿತ್ತು.

ಎಲ್ಲಾ  ನೆನಪಾಧಂಗ  ಎದಿ ತುಂಬಿ ಬರತದ. ಹೆಚ್ಚೇನ ಹೇಳಲಿ? ನಾವು ಆರೂ ಮಂದಿ  ಮಕ್ಕಳು  ಅಣ್ಣಾನಂಥಾ  ಅಪ್ಪನ್ನ, ತನ್ನದೇ ಒಂದು ವಿಶಿಷ್ಟ  ವ್ಯಕ್ತಿತ್ವ  ಉಳ್ಳಾಕೀ, ಅಂಥಾ ಅವ್ವಾನ್ನ  ಪಡೀಲಿಕ್ಕೆ; ಇದೆಲ್ಲದರ ಗಟ್ಟಿಮುಟ್ಟ ಬೇರು ನಮ್ಮ ಏಕಾನಂಥ ಅಜ್ಜಿನ್ನ ಪಡೀಲಿಕ್ಕೆ  ಎಷ್ಟ ಜನ್ಮದ ಪುಣ್ಯ ಖರ್ಚಿಗೆ ಹಾಕಿ  ಬೇಡಿ ಬಂದಿರಬೇಕು ಅನಸ್ತದ ನಂಗ.

 ನಮ್ಮ ಅಣ್ಣ ಡಾ. ಪ್ರಕಾಶ ಮುತಾಲಿಕ ತನ್ನ ಮೊದಲ ಐಟಿ  ಕಂಪನಿಗೆ, ” Eka Consulting”  

ಅಂತ  ಹೆಸರಿಟ್ಟಾಗ ನಮ್ಮ ಕಣ್ಣೂ ಥೇಟ್ ಅಣ್ಣಾನ ಹಂಗೇ ಡಬಡಬಿಸಿದ್ದು. ಆದರ  ನಮಗ ಯಾರಿಗೂ ಆ ಸಾರ್ಥಕತೆಯ, ಮನಸಿನ್ಯಾಗ ಮೂಡಿದ ಹಜಾರ ನೆನಪುಗಳ ಆಳ ನಮ್ಮ ಅಳತೆಗೆ  ಸಿಗಲೇ ಇಲ್ಲ; ಅದೇ ನಮ್ಮ ಅಣ್ಣಾನ  ಕಣ್ಣಾಗ ಆಗ  ಮೂಡಿದ ಅಗಮ್ಯ, ಅನೂಹ್ಯ ಭಾವದಾಗ ಅಡಗಿದ್ದರದು! 

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

September 27, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: