ಸರೋಜಿನಿ ಪಡಸಲಗಿ ಅಂಕಣ ಆರಂಭ – ತಣ್ಣೆಳಲ ಹಾದಿಯಲ್ಲಿ…

‘ಅವಧಿ’ ಓದುಗರಿಗೆ ಸರೋಜಿನಿ ಪಡಸಲಗಿ ಅವರು ಈಗಾಗಲೇ ಸುಪರಿಚಿತ. ಅವರ ಸರಣಿ ಬರಹ ‘ಒಬ್ಬ ವೈದ್ಯನ ಪತ್ನಿ ಅನುಭವಗಳ ಗಂಟು ಬಿಚ್ಚಿದಾಗ..’ ಜನಪ್ರಿಯವಾಗಿತ್ತು.

ಈಗ ಈ ಸರಣಿ ‘ಡಾಕ್ಟರ್ ಹೆಂಡತಿ’ ಹೆಸರಿನಲ್ಲಿ ಬಹುರೂಪಿಯಿಂದ ಪ್ರಕಟವಾಗಿದೆ.

ಈ ಕೃತಿಯನ್ನು ಕೊಳ್ಳಲು –https://bit.ly/3sGTcvg ಈ ಲಿಂಕ್ ಕ್ಲಿಕ್ ಮಾಡಿ

ಅಥವಾ 70191 82729ಗೆ ಸಂಪರ್ಕಿಸಿ

ಸರೋಜಿನಿ ಪಡಸಲಗಿ, ಮೂಲತಃ ಬೆಳಗಾವಿ ಜಿಲ್ಲೆಯ ಹುಕ್ಕೇರಿಯವರು. ಮದುವೆಯಾದ ಮೇಲೆ ಧಾರವಾಡದವರಾದರೂ ಈಗ ಬೆಂಗಳೂರು ವಾಸಿ. ಪದವೀಧರೆ, ಗೃಹಿಣಿ. ಮೊದಲಿನಿಂದಲೂ ಸಂಗೀತದ ಹುಚ್ಚು ವಿಪರೀತ. ಯಾವುದೇ ಪದ ಸಿಕ್ಕರೂ ಅದನ್ನು ಸಂಯೋಜಿಸಿ ಹಾಡುವ ಅತೀವ ಆಸಕ್ತಿ. ಕ್ರಮೇಣ ಅದು ಭಾವಗೀತೆಗಳನ್ನು ಸ್ವಂತವಾಗಿ ಬರೆದು ಸಂಯೋಜಿಸಿ ಹಾಡುವತ್ತ ಕರೆದೊಯ್ದಿತು.

ಎರಡು ಕವನ ಸಂಕಲನಗಳು ಪ್ರಕಟವಾಗಿವೆ- ‘ಮೌನ ಮಾತಾದಾಗ’ ಮತ್ತು ‘ದೂರ ತೀರದ ಕರೆ’. ಇನ್ನೊಂದು ಸಂಕಲನ ‘ಹಳವಂಡ’ ಹಾಗೂ ಅವರೇ ರಚಿಸಿದ ಸಂಪ್ರದಾಯದ ಹಾಡುಗಳ ಸಂಕಲನ ‘ತಾಯಿ – ಮಗು’ ಅಚ್ಚಿನಲ್ಲಿವೆ. ಈ ಸಂಪ್ರದಾಯದ ಹಾಡುಗಳು 18 ಕಂತುಗಳಲ್ಲಿ ‘ರೇಡಿಯೋ ಗಿರ್ಮಿಟ್’ನಲ್ಲಿ ಪ್ರಸಾರ ಆಗಿವೆ. ಆಕಾಶವಾಣಿ ಬೆಂಗಳೂರು ಹಾಗೂ ಧಾರವಾಡದಿಂದಲೂ ಸಂದರ್ಶನದೊಂದಿಗೆ ಪ್ರಸಾರ ಆಗಿವೆ.

ಈ ವಾರದಿಂದ ಅವರ ಇನ್ನೊಂದು ಮನ ಕಲಕುವ ಅಂಕಣ – ತಣ್ಣೆಳಲ ಹಾದಿಯಲ್ಲಿ… ಆರಂಭ

1

ಎದೆ ತುಂಬ ಮಕಮಲ್ಲಿನ ಹಾಸು

“ಕೆಳಗ ಇಳಸ್ರಿ ಆಕೀನ್ನ.ಐದಾರ ವರ್ಷದ ಧಡವಿ ಆಗ್ಯಾಳ. ಇನ್ನೂ ಬಗಲಾಗ ಎತ್ತಿಕೊಂಡ ತುತ್ತ ಮಾಡಿ ಉಣಸ್ತೀರಿ ಆಕಿಗೆ. ಏನ ಹೇಳಲಿ ಅಂತೀನಿ. ಭಾಳ ಆಗೇದ ಅಕಿಗೆ ನಿಮ್ಮ ಅಚ್ಛಾ! ಕಾಲ ನೋಡ್ರಿ; ನಿಮ್ಮ ಮೊಳಕಾಲ ದಾಟ್ತಾವ ಆಕಿ ಕಾಲು. ಎಲ್ರೆ ತೊಡಕಾಲ ಬಡದು ಬಿದ್ದೀರಿ. ಇಳಸ್ರಿ ಆಕೀನ್ನ ಮೊದಲ ಕೆಳಗ” ನಮ್ಮವ್ವ ಸಿಟ್ಟಿನಿಂದ ಲಾಲ ದುಂದಾಗಿ ಬಯ್ಯಲಿಕ್ಹತ್ತಿದ್ಲು. ನಾನು ಬಾಯಲ್ಲಿಯ ತುತ್ತು ಹಾಗೇ ಇಟ್ಕೊಂಡು, ‌‌‌‌‌‌‌‌‌‌‌ಮಾರಿ ಗಂಟ ಹಾಕಿ ಒಮ್ಮೆ ನಮ್ಮವ್ವನತ್ತ, ಒಮ್ಮೆ ನಮ್ಮ ಅಜ್ಜಿಯತ್ತ ನೋಡ್ತಿದ್ದೆ. ಸಣ್ಣಾಗಿ ಕಣ್ಣು, ಮೂಗು ಸೋರಲಾರಂಭಿಸ್ತು.

“ಹಂಗ್ಯಾಕ ಬಯ್ತೀಯs ನಮ್ಮವ್ವಾ. ಈಗ ಸಾಲಿಂದ ಹಸದ ಬಂದದ ಕೂಸು. ಮುಂಜಾನೆ ಊಟಾನೂ ಬರೋಬ್ಬರಿ ಆಗಿರಾಂಗಿಲ್ಲಾ. ಈಗ ಉಣಿಸಲಿಲ್ಲಾಂದ್ರ ಹಂಗs ‌‌‌ಹಸದ ಹಸದs ತಿರಗಾಡ್ತದ. ಮತ್ತ ಲಗೂನ ಮಲಗಿ ಬಿಡ್ತದ” ‌‌‌‌‌‌‌‌ಅಂತ ನನ್ನ ಅಜ್ಜಿ ತನ್ನ ಸೆರಗಿಲೆ ನನ್ನ ಕಣ್ಣು, ಮೂಗು ಮಾರಿ ಒರೆಸಿ ನನ್ನ ಅವ್ವನತ್ತ ತಿರುಗಿ ಹೇಳಿದ್ಲು. ನಮ್ಮವ್ವ ” ನಿಮಗ ಹೇಳ್ತೀನಲಾ ಬುದ್ಧಿ ಇಲ್ಲ ನನಗ” ಅಂತಂದು ನನಗೆ “ಅವರ ಬಗಲ ಬಿಟ್ಟು ಇಳದ ಬಾ ಈ ಕಡೆ. ಮಾಡ್ತೀನಿ ನಿಂಗ” ಅಂತ ಅನಕೋತ ಒಳಗೆ ಹೋದ್ಲು. ನನ್ನ ಹಾರಾಡೋ ಕೂದಲಾ ಸರಿಸಿ, ಲಟಾ ಲಟಾ ಮುದ್ದು ಕೊಟ್ಟು ಮತ್ತ ತುತ್ತು ತುರಕುವ ಕೆಲಸ ಮುಂದ ಸಾಗಿತು ನಮ್ಮ ಏಕಾಂದು.

ಹೂಂ, ಇದೇನ ಒಂದು ದಿನದ್ದಲ್ಲ ಮಾತು ; ದಿನಾಲೂ ಈ ದೃಶ್ಯದ್ದು ಪುನರಾವರ್ತನೆ ಆಗೇ ಆಗ್ತಿತ್ತು ಕೊಂಚ ಕೊಂಚ ಬೇರೆ ‌‌ ಬೇರೆ ಧಾಟಿಯಲ್ಲಿ. ಆಕಿ ನನ್ನ ಅಜ್ಜಿ ; ಅಂದರೆ ನಮ್ಮ ತಂದೆಯವರ ತಾಯಿ, ಸೋನಕ್ಕ, ನಮ್ಮೆಲ್ಲರ ಬಾಯಲ್ಲಿ ‌‌ಏಕಾ’ ಆಗಿ ಬಿಟ್ಟಿದ್ಲು. ಚಿಕ್ಕ ವಯಸ್ಸಿನಲ್ಲೇ ಗಂಡನನ್ನು ಕಳೆದುಕೊಂಡು, ಮಡಿ ಹೆಂಗಸಾಗಿ, ಒಬ್ಬನೇ ಮಗನ ( ನಮ್ಮ ತಂದೆ) ಮೇಲೆ ತಪ ತೆಗೆದ ಜೀವನ ಆಕೆಯದು. ತಾ ನಡೆದ ದಾರಿ ಪೂರ್ತಿ ಬಿಸಿಲ ಬೆಂಗಾಡೇ. ಆದರೆ ಈಗ ಹಬ್ಬಿ ನಿಂತ ತನ್ನ ಮಗನ ಬಾಳಬಳ್ಳಿ ತುಂಬ ಇಡಿಯಾಗಿ ಆಕೆಯ ತಣ್ಣೆಳೆಲ ಛತ್ರಛಾಯೆ ಇಷ್ಟಗಲ ಹರಡಿ ನಿಂತಿತ್ತು. ಈಗ ನನ್ನ ಹತ್ತು ವರ್ಷದ ಮೊಮ್ಮಗ ಸ್ಕೂಲ್ ನಿಂದ ಬಂದ ಮೇಲೆ ಆತನಿಗೆ ಊಟ ಮಾಡಿಸುವಾಗ ಈ ದೃಶ್ಯ ದ ಸುರುಳಿ ನನ್ನ ಕಣ್ಣ ಮುಂದೆ ದಿನಾಲೂ ಬಿಚ್ಚಿ ಓಡುವುದೇ; ನನ್ನ ಸೆರಗು ಕಣ್ಣೊರೆಸಿ, ಒರೆಸಿ ಒದ್ದೆ ಆಗುವುದೇ.

ನಮ್ಮ ಏಕಾನ ಜೀವನ ಏನ ಜೀವನಪಾ, ಇಂಥದೂ ಘಟಿಸುವದುಂಟೆ ಅನ್ನೋ ಯೋಚನೆ ಯಾವಾಗಲೂ ನನ್ನ ಬಿಡದೆ ಕಾಡ್ತಿರತದೆ. ಬೆಳಕು ಬೀಳುವಂಥ ಚೆಲ್ವಿಕೆ; ಮಂಡಿ ಮುಟ್ಟುವಂಥ ಉದ್ದದ ಕೇಶರಾಶಿ. ಬಡತನದ ತೌರಿನಲ್ಲಿನ ಆ ಕಷ್ಟದ ಜೀವನದಲ್ಲೂ ಸೊಂಪಾಗಿ, ತಂಪಾಗಿ ಅರಳುತ್ತಿತ್ತು ಯೌವನ! ಆಗಿನ ಕಾಲಕ್ಕೆ ಸ್ವಲ್ಪ ತಡಾನೇ ಅಂದರೆ ಹದಿನೈದನೇ ವರ್ಷ ಶುರು ಆಗಿದ್ರೂ ಇನ್ನೂ ಮದುವೆ ಆಗಿರಲಿಲ್ಲ. ನಮ್ಮ ಏಕಾನ ಅಕ್ಕನ ಮದುವೆ ಆಕೆಯ ಸಾಧಾರಣ ರೂಪಿನಿಂದಾಗಿ ತಡ ಆಗಿತ್ತು. ಆಕ್ಕನ ಮದುವೆ ಆಗದೆ ತಂಗಿದು ಹೇಗೆ ಮಾಡೋದು? ಹೀಗಾಗಿ ಈಕೆದೂ ಮದುವೆ ತಡ ಆಯ್ತು.

ಕಣ್ಣು ಕುಕ್ಕುವ ಚೆಲ್ವಿಕೆ ನಂದಿಕುರಳಿ ದೇಸಾಯರ ಕಣ್ಣು ತುಂಬಿ , ಮಾಗಣಿ ಹಾಕಿ ಮದುವೆ ಮಾಡಿ ಕೊಂಡು ತಮ್ಮ ಎರಡನೇ ಹೆಂಡತಿಯಾಗಿ ತಮ್ಮ ಮನೆ ಮನ ತುಂಬಿಸಿಕೊಂಡ್ರು ರಾವಸಾಹೇಬ್ರು. ಆಕೆಯ ಹದಿನಾರನೇ ವರ್ಷಕ್ಕೆನೇ ನಮ್ಮ ತಂದೆ ಹುಟ್ಟಿದ್ದು. ಮಕ್ಕಳ ಭಾಗ್ಯಕ್ಕೆ ದಾರಿ ಕಾಯ್ತಿದ್ದ ರಾವಸಾಹೇಬರ ಜೀವ ತಂಪಾಯ್ತು. ನಮ್ಮ ತಂದೆ ಎರಡು ವರ್ಷದವರಿದ್ದಾಗ ಇನ್ನೊಂದು ಗಂಡು ಮಗುವಿಗೆ ಜನ್ಮ ಕೊಟ್ಟ ಏಕಾ ಆ ಮಗು ಮೂರು ತಿಂಗಳದ್ದಾದಾಗ ನಮ್ಮಜ್ಜ ರಾವಸಾಹೇಬ್ರನ್ನು ಕಳಕೊಂಡಳು. ಮುಂದೆ ಹದಿನೈದೇ ದಿನಗಳಲ್ಲಿ ಆ ಕೂಸೂ ತೀರಿ ಹೋಗಿ
ನಮ್ಮ ತಂದೆ ಏಕಾನ ಏಕಮಾತ್ರ ಪುತ್ರರಾಗಿ ಉಳಿದರು. ಹದಿನೆಂಟು ವರುಷದ ಎಳೆ ತರುಣಿ, ಎರಡು ವರ್ಷಗಳ ಆ ಚಿಕ್ಕ ಮಗು! ಬೇರೆ ದಾರಿ ಕಾಣದೆ ತನ್ನ ತೌರಿಗೇ ಹೋಗಿ ನಿಲ್ಲಬೇಕಾಯ್ತು ನಮ್ಮ ಏಕಾ.

ಬಹಳ ಗಟ್ಟಿ ಹೆಂಗಸು ನಮ್ಮ ಏಕಾ. ಕೆಲ ವರ್ಷ ತೌರಿನಲ್ಲಿದ್ಲು ಮಗನೊಂದಿಗೆ. ನಮ್ಮ ತಂದೆ, ಏಕಾಗ ‘ಅಣ್ಣಾಸಾಹೇಬ’ ಅಣ್ಣಪ್ಪ’! ಹಾಗೇ ಕರೀತಿದ್ಲು ಆಕೆ ಅವರನ್ನು. ಅಣ್ಣಪ್ಪನ ಮುಲ್ಕಿ ಪರೀಕ್ಷಾ ಆದಕೂಡಲೇ ಮಗನ್ನ ಕರಕೊಂಡು ಚಿಕ್ಕೋಡಿಗೆ ಬಂದ ಬಿಟ್ಲು. ಒಂದು ಪುಟ್ಟ ಮನೆ ಬಾಡಿಗೆಗೆ ಹಿಡಿದು ಅಣ್ಣಾ ಸಾಹೇಬಂದು ಹೈಸ್ಕೂಲ್ ಶಿಕ್ಷಣ ಅಲ್ಲೇ ಮುಂದುವರಿಸಿದ್ಲಂತ. ಆಗ ಏಕಾ ಬರೋಬ್ಬರಿ ಇಪ್ಪತ್ತೆಂಟು ವರ್ಷದಾಕಿ ಇದ್ಲಂತ. ಆ ಚಿಕ್ಕ ವಯಸ್ಸಿಗೇ ಜೀವನದ ಒಳ ಹೊರಗನ್ನು ಪೂರ್ತಿಯಾಗಿ ಅರೆದು ಕುಡಿದು ನೀಲಕಂಠನ ಪ್ರತಿರೂಪವಾಗಿ ನಿಂತಿದ್ಲು. ಭಾಳ ಶಾಣ್ಯಾಕಿ ಆಕೆ.

ಆ ಕಾಲಕ್ಕೇ ಮುಲ್ಕಿ ಪರೀಕ್ಷಾ ಮುಗಿಸಿದ್ಲು, ಅದೂ ಸಾಲಿಗೇ ಒಂದನೇ ನಂಬರ ತಗೊಂಡು! ಒಂದು ಚಂದ್ರಕಾಳಿ ಪಾಚವಾರಿ ಜರೀ ಕಾಠದ್ದು, ಒಂದು ಬೆಳ್ಳಿ ಕುಂಕುಮದ ಭರಣಿ; ಅಂಥಾ ದ್ದು ನಾ ನೋಡೇ ಇಲ್ಲ ಎಲ್ಲೂ; ಅಷ್ಟ ಅಪರೂಪದ್ದು ಬಹುಮಾನ ತಗೊಂಡಿದ್ಲು ಆಕಿ. ಎಷ್ಟು ಗಟ್ಟಿಗಿತ್ತಿಯೋ ಅಷ್ಟೇ ಜಾಣತನಾನೂ ಆಕೀ ಕಾಯಂ ಆಸ್ತಿ ಆಗಿದ್ವು. ಕಸೂತಿ, ಹೊಲಿಗೆ, ಹೆಣಿಕೆ, ಸ್ವೆಟರ್ ಹೆಣಿಗೆ, ಕ್ರೋಷಾ ನಿಟ್ಟಿಂಗ್, ರಂಗೋಲಿ; ಎಲ್ಲಾದ್ರಾಗೂ ಸಿದ್ಧಹಸ್ತಳಾಕಿ. ನಾ ಕಸೂತಿ, ನಿಟ್ಟಿಂಗ್, ರಂಗೋಲಿ ಎಲ್ಲಾ ಕಲ್ತದ್ದು ಆಕಿ ಕಡಿಂದನs.

ಅಮಿತ ಜೀವನೋತ್ಸಾಹ ಆಕೀದು. ಚಿಕ್ಕ ಚಿಕ್ಕ ಸಂಗತಿಗಳಲ್ಲೇ ಖುಷಿ ಹುಡುಕಿ ಹುಡುಕಿ ಹಿಗ್ಗೋ ಜಾಯಮಾನ ನಮ್ಮ ಏಕಾಂದು. ಆಕಿ ಅದನ್ನ ತನ್ನ ಮೊಮ್ಮಕ್ಕಳಿಗೆ ಮುಕ್ತ ಹಸ್ತದಿಂದ ಧಾರೆ ಎರೆದು ಬಿಟ್ಟಿದ್ದಾಳೆ ; ಅದರ ಜೊತೆಗೆ ಪ್ರತಿಯೊಂದನ್ನೂ ಆಸಕ್ತಿ, ಚಿಕಿತ್ಸಕ ಬುದ್ಧಿಯಿಂದ ನೋಡೋದನ್ನು.

ಪಕ್ಕದ ಮನೆಯ ಮದುವೆ ಸಂಭ್ರಮ ಸಾಕಿತ್ತು ಅವಳಿಗೆ ಖುಷಿ ಪಡಲು. ಇನ್ನಾರ ಮನೇಲಿ ಮಕ್ಕಳು ಊರಿಂದ ಬಂದರೆ ಇಕೀಗೆ ಹಿಗ್ಗು. ‘ಕಮ್ಮಕ್ಕನ ಮಗಾ ಎಂಕಾ ಬಂದಾನ. ಖಾಂತೋಳಿ ಮಾಡೀನಿ. ಕೊಟ್ಟ ಬಾ ಅಕ್ಕವ್ವಾ’ ಅನ್ನಾಕಿ ನನಗ.

ಹೊರಗ ಯಾವದರೇ ಮೆರವಣಿಗೆ ಹೊಂಟಿದ್ರ, ಅದೇನ ಹುರುಪು ! ಚಟ್ಟನೆ ಎದ್ದು, ಹೋಗಿ ನೋಡಿ ಸಂಭ್ರಮ ಪಡುವುದೇ.

“ಮಡೀಲೆ ಇದ್ದೀರಿ. ಯಾರರೇ ಮುಟ್ಟಿ ಗಿಟ್ಟ್ಯಾರು. ಮತ್ತ ಥಣ್ಣೀರ ಸುರವಿಕೋತೀರಿ. ಯಾಕ ಹೋಗ್ತೀರಿ ” ಅಂತ ನಮ್ಮವ್ವ ಕೂಗ್ತಿದ್ರೂ ಅದರ ದರಕಾರೇ ಇಲ್ಲ ಆಕೀಗೆ; ಥೇಟ್ ಪುಟ್ಟ ಮಕ್ಕಳ ತಿಳಿ ಮನದ ಸ್ವಚ್ಛ ಖುಷಿ ಅದು.
ಚಿಕ್ಕ ವಯಸ್ಸಿನಲ್ಲೇ ಎಲ್ಲವನ್ನೂ ಕಳಕೊಂಡು, ಬರೀ ಎರಡು- ಎರಡೂವರೆ ವರ್ಷ ಅಷ್ಟೇ ತನ್ನದೇ, ತನ್ನ ಸ್ವಂತದ್ದೇ ಆದ ಜೀವನವನ್ನು ಪ್ರೀತಿಯಿಂದ ಅನುಭವಿಸಿ, ತೃಪ್ತವಾಗಿತ್ತೋ ಆ ಜೀವ ಅಥವಾ ಆ ಕಹಿ ನುಂಗಿ ಸಾಂಸಾರಿಕ ಸುಖದತ್ತ ಬೆನ್ನು ಮಾಡಿ ನಿಂತು , ಹೆಸರಿಸಲಾಗದ ನಿರ್ಲಿಪ್ತತೆಯಿಂದ ಇಡೀ ಲೋಕವೇ ತನ್ನ ಕುಟುಂಬ ಅಂದು ಕೊಂಡಿತೋ ಆ ಜೀವ ನನಗಿನ್ನೂ ಗೊತ್ತಾಗಿಲ್ಲ.

ಸೊಸೆ ಅಂದರೆ ನಮ್ಮ ಅವ್ವನ್ನ ಬಾಣಂತಿತನಕ್ಕೆ ತೌರಿಗೆ ಎಂದೂ ಕಳಿಸಲಿಲ್ಲ ಆಕೆ. ತಾ ಮಾಡಿದ್ರೆನೇ ತೃಪ್ತಿ ಆ ಜೀವಕೆ. ನಾವು ಆರು ಜನ ಮೊಮ್ಮಕ್ಕಳು ಆಕೆಗೆ. ಆರನೇಯವಳಾಗಿ ನನ್ನ ತಂಗಿ ಹುಟ್ಟಿದಾಗ ನಮ್ಮವ್ವ ಹಟ ಹಿಡಿದು ಆಗ ಶುರು ಆಗಿದ್ದ ಕುಟುಂಬ ಯೋಜನೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಾಗ ಎಂಟು ದಿನ ಮಗ- ಸೊಸೆ ಕೂಡ ಮಾತಾಡಿರಲಿಲ್ಲ ನಮ್ಮ ಏಕಾ.ಮುರುಟಿ ಹೋದ ತನ್ನ ಬಾಳು ಇಲ್ಲಿ ತನ್ನ ಮಗನ ಬಾಳಿನಲ್ಲಿ ಪಲ್ಲವಿಸಿ ಹಬ್ಬುತ್ತಿರುವುದು ಆಕೆಗೆ ಅತೀವ ತೃಪ್ತಿ, ಸುಖದ ಅನುಭೂತಿ ಕೊಡ್ತಿತ್ತೋ ಏನೋ!

ಬಾಣಂತಿ, ಕೂಸಿನ ಸ್ನಾನ, ಅಗ್ಗಿಷ್ಟಿಕೆ, ಪಥ್ಯದ ಊಟ ಎಲ್ಲಾ ವ್ಯವಸ್ಥಿತವಾಗಿ ಮುಗಿಸಿ , ಆ ಮೇಲೆ ಮಡಿ ಉಟ್ಟು ಉಳಿದೆಲ್ಲರ ಅಡಿಗೆ, ಕೆಲಸ! ಅದ್ಹೇಗೆ ನಿಭಾಯಿಸ್ತಿದ್ಲೋ, ಎಲ್ಲಿಯದೋ ಆ ಅದಮ್ಯ ಚೇತನ, ಚೈತನ್ಯ! ಎಡೆಬಿಡದ ಕೆಲಸ ರೊಚ್ಚಿಗೆಬ್ಬಿಸಿ ನಾ ತಾಳ್ಮೆ ಕಳೆದುಕೊಂಡಾಗ ಏಕಾ ನಕ್ಕಹಾಂಗ ಅನಸ್ತದ ನಂಗೆ.ಎಷ್ಟು ಬಾಣಂತನ ಮಾಡಿದ್ಲೋ ಲೆಕ್ಕ ಇಲ್ಲ. ಬರೀ ತನ್ನ ಸೊಸೆ ಅಂದ್ರೆ ನಮ್ಮವ್ವನದಲ್ಲ, ತನ್ನ ತಂಗಿಯದು, ತಂಗಿಯ ಮಕ್ಕಳದು, ನಮ್ಮ ಮಾವಶಿದು, ವಯಸ್ಸಾಗಿದ್ರೂ ಕುಗ್ಗದ ಆ ಚೇತನ ನನ್ನದು ಮೂರು , ಆ ಮೇಲೆ ನನ್ನ ತಂಗಿಯದೂ ಬಾಣಂತನ ಮಾಡಿದ್ದಾಳೆ.

‘ “ಒಂದು ಬಾಣಂತನ ಮಾಡಿದ್ರೆ ಕಾಶಿ ಯಾತ್ರೆ ಮಾಡಿದಷ್ಟು ಪುಣ್ಯ ಬರತದ ” ಅನ್ನೋಳು ಏಕಾ.
ಮೊಮ್ಮಕ್ಕಳು ಅಂದರ ಆಕೀ ಜೀವ, ಪ್ರಾಣ. ಅಸೀಮ ಪ್ರೀತಿ, ಕಕ್ಕಲಾತಿ. ಚುಟು ಚುಟು ಓಡಾಡಿ ಎಷ್ಟ ಮಾಡಿದ್ರೂ ಕಡಿಮೀನ. ಎಣ್ಣೆ ಹಚ್ಚಿ ಮೈಕೈ ತಿಕ್ಕಿ, ಹಂಡೆ ಬೀಸಿ ನೀರಿನ ಸ್ನಾನದ ಸಂಭ್ರಮ ಪ್ರತಿ ರವಿವಾರಕ್ಕೊಮ್ಮೆ ಇದ್ದದ್ದ. ದಣಿವು ಅಂಬೋದೇ ಗೊತ್ತಿರಲಿಲ್ಲ ಆಕಿಗೆ!

ಅವ್ವಾನೇ ನಮ್ಮೆಲ್ಲರ ಊಟ ತಿಂಡಿ ಅಂತ ನೋಡಕೋತಿದ್ರೂ ವಿಶ್ವಾಸ ಇಲ್ಲ . ನನ್ನ ಬಾಣಂತನದಾಗ ಎಲ್ಲಾ ತಾನೇ ಮಾಡಾಕಿ. ದ್ವಾದಶಿ ದಿನ ಮಾತ್ರ ಆಕಿ ಮುಂಜಾನೆ ‌‌ಆರರ ಹೊತ್ತಿಗೆ ಅಂದ್ರೆ ಮಡಿ ಅಡಿಗೆ, ಕೆಲಸ ಶುರು ಮಾಡ್ಕೋಬೇಕಾಗ್ತಿತ್ತು. ಹಿಂಗಾಗಿ ನಮ್ಮವ್ವನೇ ನಂದು ಊಟ ಪಥ್ಯದ ಮೆತ್ತಗಿನ ಅನ್ನ ತುಪ್ಪ, ಅದು ಇದು ಎಲ್ಲಾ ನೋಡ್ಕೋತಿದ್ಲು. ಆಕಿ ನನ್ನವ್ವ; ಆದ್ರೂ ಏಕಾ ತಾ ಮಡೀಲೆ ಇದ್ದಾಕಿ, ಇಪ್ಪತ ಸಲ ಬಂದು ಕೇಳಾಕಿ-” ಅಕ್ಕವ್ವ, ಅನ್ನ ಮೆತ್ತಗಾಗಿತ್ತಿಲ್ಲೋ, ಕರಕಿನ ಪುಡಿ ಹಾಕಿದ್ಲು ಕುಸುಮ ನೆನಪಲೆ ; ಮತ್ತೊಂದಿಷ್ಟು ತುಪ್ಪಾ ಹಾಕಿದ್ಲಿಲ್ಲೋ….” ಹೀಂಗೆ ಕೇಳೋದೇ ಮತ್ತ ಮತ್ತ.ನಗ್ತಿದ್ಲು ನಮ್ಮವ್ವ. ಒಮ್ಮೊಮ್ಮೆ ಸಿಟ್ಟೂ ಬರ್ತಿತ್ತು ಅವ್ವಾಗ ; ” ನಿಮ್ಮ ಮೊಮ್ಮಗಳದು ಪಥ್ಯಾ, ಊಟ ಹಾಲು ಎಲ್ಲಾ ಮುಗಿಸೀನ ನೀವು ಮಡಿ ಕೆಲಸ ಶುರು ಮಾಡ್ಕೋರಿ. ಒಣಾ ಉಸಾಬರಿ ಬ್ಯಾಡ ನಂಗ” ಅಂತ ಸಿಟ್ಟಲೇ ಹೇಳಿ ಬಿಡ್ತಿದ್ಲು.

ಮೊಮ್ಮಕ್ಕಳೇನಾದ್ರೂ ಒಂಚೂರು ಸೀನಿದ್ರೆ, ಒಂತುತ್ತು ಊಟಾ ಕಡಿಮೆ ಮಾಡಿದ್ರೆ ದೃಷ್ಟಿ ತೆಗೆಯುವುದು, ನಿವಾಳಿಸಿ ಚೆಲ್ಲುವುದು ಶುರುನೇ. ನಾವು ಸ್ವಲ್ಪ ದೊಡ್ಡವರಾದ ಮೇಲೆ ನಾನು, ನಮ್ಮಣ್ಣ ಏಕಾಗ ಹೇಳ್ತಿದ್ವಿ-” ಏಕಾ ಬಾ ಇಲ್ಲೆ; ನಾವು ನಿಂಗ ದೃಷ್ಟಿ ತಗೀತೀವಿ. ಇಷ್ಟು ಚುಟು ಚುಟು ಓಡಾಡಿ ಮಾಡ್ತಿ. ಕೆಂಪ ರಂಜಕಧಂತಾ ಬಣ್ಣ; ನಿನಗs‌ ದೃಷ್ಟಿ ಆಗ್ತದ” ಅಂತ. ನಕ್ಕ ಆ ಕಡೆ ಮುಖಮಾಡಿ ಕಣ್ಣಿಗೆ ಸೆರಗು ಹಿಡಿತಿದ್ಲು. ಏನ ನೆನೆಸಿ ಆ ಜೀವ ಮರಗ್ತಿತ್ತೋ ಅನಕೋತೀನಿ ಈಗ.

ಕೂದಲು ತೆಗೆಸಿ, ಕೆಂಪು ಸೀರೆಯುಟ್ಟ ಆ ವೇಷದಲ್ಲೂ ನಮ್ಮ ಏಕಾನ ಚೆಲುವು ಮಾಸಿಧಾಂಗ ಅನಸ್ತಿದ್ದೇ ಇಲ್ಲ. ” ಸೋನವ್ವನ ಚೆಲ್ವಿಕಿ ನೋಡ ” ಅಂತ ಕಣ್ಣೀರು ತಗೀತಿದ್ಲು ನಮ್ಮ ಇನ್ನೊಬ್ಬ ಅಜ್ಜಿ; ಅಂಬಕ್ಕಜ್ಜಿ.ನಮ್ಮವ್ವನ ಅವ್ವ ಆಕೆ. ನಮ್ಮೂರಿಗೆ ಬಂದಾಗೊಮ್ಮೆ ಈ ಮರಗುವಿಕೆ ಇರೋದೇ ಅಂಬಕ್ಕಜ್ಜಿದು. ಆಕೀಗೆ ಇಂದಿರಾ ಬಾಯಿ ಅಂತನೂ ಹೆಸರಿತ್ತು. ನಮ್ಮ ಏಕಾನ ತೌರು ಮನೆ, ನಮ್ಮ ಅವ್ವಾನ ತೌರು ಮನೆ ಎರಡೂ ಒಂದೇ ಊರು; ಐನಾಪೂರ. ಹೀಗಾಗಿ ಬೀಗಿತ್ತಿಯರಿಬ್ಬರೂ ಪರಿಚಿತರೇ. ಅವರ ಸಲಿಗೆ, ಹೊಂದಾಣಿಕೆ ನಿಜಕ್ಕೂ ನೋಡಲು ಛಂದ, ಒಂಥರಾ ಅಕ್ಕರೆ ತುಂಬಿದ್ದು. ಇಬ್ಬರೂ ಮಡೀಲೆ ನಮ್ಮೆಲ್ಲರ ಊಟ ಮುಗಿಸಿ ತಾವು ಜೋಡೀಲೆ ಊಟಕ್ಕೆ ಕೂತಾಗ ಶುರು; ” ಇಂದ್ರಾಬಾಯರs ನೀವು ತುತ್ತ ತಗೋರಿ ಮೊದ್ಲು” ಅಂತ ಏಕಾ; ” ಇಲ್ಲ ಸೋನವ್ವಾ ನೀ ಮೊದ್ಲು ತಗೋ” ಅಂತ ಅಂಬಕ್ಕಜ್ಜಿ. ನಮಗ ನಗು, ಮೋಜು. ಕಡೀಕ ನಾವು ” ಒನ್, ಟು , ಥ್ರೀ ಸ್ಟಾರ್ಟ್” ಅಂತ ನಗಾವ್ರು.

ಅವರ ಈ ‘ ಪೆಹಲೆ ಆಪ, ಪೆಹಲೇ ಆಪ’ ದ್ದ ಒಂದು ಘಟನೆ ನಮ್ಮ ಮಾಮಾ ಹೇಳಿ ನಗಸ್ತಿದ್ದ ನಮ್ಮನ್ನ.ನಮ್ಮ ಅಜ್ಜಿ ಊರು ಐನಾಪೂರ ದಿಂದ ನಮ್ಮೂರು ಹುಕ್ಕೇರಿಗೆ ಟ್ರೇನಿನಲ್ಲಿ ಬರಬೇಕಾಗ್ತಿತ್ತು. ಕುಡಚಿ ಸ್ಟೇಷನ್ ನಲ್ಲಿ ಬರೀ ಎರಡೇ ನಿಮಿಷ ನಿಲ್ತಿತ್ತು ರೈಲು.ಆ ಸಲ ಬೀಗಿತ್ತಿಯರಿಬ್ಬರೂ ಜೊತೆಯಾಗಿ ಬರೋವ್ರಿದ್ರು. ನಮ್ಮ ಮಾಮಾ ಅವರ ಜೋಡಿ ಕುಡಚಿ ಸ್ಟೇಷನ್ ಗೆ ಬಂದು ರೈಲು ಹತ್ತಿಸಿ ಹೋಗಾಂವಾ. ಸರಿ , ಬಂತು ರೈಲು; ಸುರುವಾತು ಇವರಿಬ್ಬರದೂ!
” ಇಂದ್ರಾಬಾಯರ ನೀವ ಮೊದಲ ಹತ್ರಿ” ಅಂತ ಏಕಾ; ” ಅಯ್ಯs‌ಇಲ್ಲ ಸೋನವ್ವಾ ನೀ ಮೊದಲ”
ಅಂತ ಅಂಬಕ್ಕಜ್ಜಿ. ನಮ್ಮ ಮಾಮಾಗ ಸಿಟ್ಟು, ನಗು ಒಟ್ಟೊಟ್ಟಿಗೆ!” ಯಾರರೇ ಹತ್ರಿ, ರೈಲಿರೋದ್ರಾಗನs ಹತ್ರಿ” ಅಂತ ಅವನ ಗಡಿಬಿಡಿ. ಯಾರು ಮೊದಲು ‌‌‌‌‌‌‌‌‌‌‌‌‌‌‌‌‌‌‌‌ಹತ್ತಿದ್ರೋ ಗೊತ್ತಿಲ್ಲ, ಅಂತೂ ನಮ್ಮೂರಿಗೆ ಸುರಕ್ಷಿತ ಬಂದು ಮುಟ್ಟಿದ್ರು.
ನಮ್ಮ ಏಕಾನ ಖಂಬೀರ ವ್ಯಕ್ತಿತ್ವ ಹೆಮ್ಮೆ ಉಂಟು ಮಾಡಿ ಮಾಸದಂತೆ ಅಚ್ಚೊತ್ತಿ ನಿಂತು ಬಿಟ್ಟಿದೆ ಆಗಾಗ ಹಾದಿ ತೋರುತ್ತ, ದಾರಿ ದೀಪವಾಗಿ! ನಮ್ಮ ತಂದೆ ಹುಕ್ಕೇರಿಯಲ್ಲಿ ಮನೆ ಕಟ್ಟಿಸಿದ್ರು. ನನಗಾಗ ಬರೋಬ್ಬರಿ ಐದು ವರ್ಷ.

ಆ ದಿನ ಗೃಹ ಪ್ರವೇಶ, ವಾಸ್ತು ಹೋಮ- ಹವನ, ಊಟೋಪಚಾರ ಎಲ್ಲಾ ಮುಗೀತು. ಸಂಜೆ ದೇವರ ಮುಂದೆ ಜೋಡಿ ನಂದಾದೀಪ; ಮನೆತುಂಬ ವಿದ್ಯುದ್ದೀಪಗಳ ಝಗಮಗ ಬೆಳಕು. ಮಧ್ಯದ ದೊಡ್ಡ ಹಾಲ್ ನಲ್ಲಿ ಮನೆಯ ಮರಗೆಲಸಕ್ಕೆ ಉಪಯೋಗಿಸಿ ಉಳಿದ ನಾಲ್ಕೈದು ಸಾಗವಾನಿ ಫಳಿಗಳನ್ನು (ಹಲಿಗೆಗಳು) ಒಂದರ ಮೇಲೊಂದು ಏರಿಸಿ ಇಟ್ಟಿದ್ರು.ಅದರ ಮೇಲೆ ಕುಳಿತ ನಮ್ಮ ಏಕಾನ ನಿಲುವು, ಆ ಧ್ವನಿ ಇನ್ನೂ ಕಿವಿಯಲ್ಲಿ ಮೊಳಗುತ್ತ ಕಣ್ಣತುಂಬ ನಿಂತಿದೆ ಅತ್ತಿತ್ತ ಅಲುಗದಂತೆ- “ಇಂದ್ರಾಬಾಯರ, ಯಾವಾಗ ನಂದು ಅಂತ ಒಂದು ಮನೀದು ಬಾಗಲಾ ತೆಗೆದು ಸಾರಸೇನಿ ಅನಸ್ತಿತ್ತು ನೋಡ್ರಿ. ಪ್ರತಿ ಸಲಾ ಬಾಡಿಗಿ ಮನಿ ನೆಲಾ ಸಾರಸೂ ಮುಂದ ಇದ ಇರೋದs . ನಮ್ಮ ಅಣ್ಣಪ್ಪ ಈ ಹೊತ್ತ ಆ ಆಶಾ ಪೂರ್ಣ ಮಾಡಿದ ನೋಡ್ರಿ’ ಅಂತ ಕಣ್ಣಾಗ ನೀರು, ಮಾರಿ ತುಂಬ ಬೆಳಕ ಛಲ್ಲೋ ನಗು ತುಂಬಿಕೊಂಡು ಹೇಳಿದ್ಲು ಏಕಾ. ಭಂಗಾರ ಬಣ್ಣದ ಬೆಳಕು ಮನಿತುಂಬ, ಅದರಾಗ ಅದೇ ಬಣ್ಣದ ಮಿರುಗುವ ಕಂಚಿನ ಪುತ್ಥಳಿ ಹಾಂಗ ನಮ್ಮ ಏಕಾ! ಅಪೂರ್ವ ದೃಶ್ಯ ಅದು!

ಆ ಮನಿಯ ದೊಡ್ಡ ಅಂಗಳ, ಹಿಂದೆ ಇನ್ನೂ ದೊಡ್ಡ ಹಿತ್ತಿಲು. ಎಲ್ಲಾ ಕಡೆನೂ ನಾನಾ ಥರದ ಹೂವಿನ ಗಿಡ, ಹಣ್ಣಿನ ಗಿಡ, ಕರಿಬೇವಿನ ಗಿಡ, ನಿಂಬೆ ಹಣ್ಣಿನ ಗಿಡ! ಏಕಾನ ಕೈ ರಸಗೈ. ಒಂದ ಗಿಡಾ ಏನ ಹುಸಿ ಹೋಗಲಿಲ್ಲಾ. ಆದರ ಗುಲಾಬಿ ಹೂವಿನ ಗಿಡ ಮಾತ್ರ ಹತ್ತಲೇ ಇಲ್ಲ.ಹಗಲೆಲ್ಲಾ ಅನ್ನಾಕಿ ಅಣ್ಣಾ (ನಾವು ನಮ್ಮ ತಂದೆಗೆ ಅಣ್ಣಾ ಅಂತಿದ್ವಿ) ನ ಮುಂದೆ-” ಅಣ್ಣಪ್ಪಾ, ಗುಲಾಬಿ ಗಿಡಾ ಒಂದ ಹತ್ತsವಲ್ಲತ ನೋಡೋ” ಅಂತ.” ಹೋಗಲಿ ಬಿಡ ಸೋನವ್ವಾ. ಇಷ್ಟ ಗಿಡಾ ಹಚ್ಚೀಯಲಾ, ಬುಟ್ಟಿ ಬುಟ್ಟಿ ತುಂಬ ಹೂ ಬಿಡ್ತಾವ. ಸಾಕ ಬಿಡು” ಅನ್ನಾವ್ರು ನಮ್ಮ ತಂದೆ.
ಆ ಹೂವಿನ ಸೌಗಂಧ, ಗಿಡ ಬಳ್ಳಿಗಳ ಹಸಿರು, ತಂಪು, ಹಣ್ಣಿನ ಫಲವತ್ತತೆ ತುಂಬಿದ ನನ್ನ ತೌರಿನ ಸಿರಿ ಅಗಾಧ. ಆ ತಣ್ಣೆಳಲ ಹಾದಿಯಲ್ಲಿ ಸಾಗಿ ಬಂದ ಈ ಜೀವದ ಎದೆಯಾಳದಲ್ಲಿ ಸುರುಳಿ ಸುರುಳಿಯಾಗಿ ಸುತ್ತಿಟ್ಟ ನೆನಪಿನ ಸುರುಳಿಯ ಮಕಮಲ್ಲಿನ ಹಾಸು ಯಾಕೋ ಎದೀ ತುಂಬ ಬಿಚ್ಚಿ ಹರಡಲಿಕ್ಹತ್ತಿದೆ ಈ ಹೊತ್ತು…..

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

May 17, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

  1. Shrivatsa Desai

    ಒಬ್ಬ ವೈದ್ಯನ ಪತ್ನಿ ಅನುಭವಗಳ ಗಂಟು ಬಿಚ್ಚಿದಾಗ..ಸರಣಿಯನ್ನು. ತಪ್ಪದೆ ವಾರ ವಾರ ಓದುತ್ತಿದ್ದ ನನ್ನಂತಹ. ‘ಲಾಯಲ್’ ಓದುಗನಿಗೆ ಈ ಸರಣಿಯನ್ನೂ ಓದುವ ಕುತೂಹಲವಿತ್ತು. ತಮ್ಮದೇ ವಿಶಿಷ್ಠ ಉತ್ತರಕ ಕ ರ್ನಾಟಕದ ಆಡುಭಾಷೆಯ ಶೈಲಿಯಲ್ಲಿ ಈ ಬರವಣಿಗೆಗೆ ತನ್ನದೇ ಆದ ಮೋಡಿ ಇದೆ. ಲಾಲಿತ್ಯವಿದೇ. ಏಕೈಕ ವ್ಯಕ್ತಿತ್ವದ ‘ಏಕಾ’ಅಜ್ಜ’ಯ ಶಬ್ದ ಚಿತ್ರ ಮೂಡಿ ಬರುತ್ತಿದೆ. ನಮ್ಮನ್ನು. ಬಿಸಿಲು ಬೆಂಗಾಡಿನಲ್ಲಿ ಎಳೆದಿ ತಿರುಗಿಸಿ ನರಳಿಸುತ್ತಾರೋ ಅಥವಾ ಮಧ್ಯೆ ಮಧ್ಯೆ ತಣ್ಣೆಲ ದಾರಿಯಲ್ಲಿ ಕೈ ಹಿಡಿದು ನಡೆಸುತ್ತಾರೋ. ಕಾಡು ನೋಡುವಾ!

    ಪ್ರತಿಕ್ರಿಯೆ
    • Sarojini Padasalgi

      ಧನ್ಯವಾದಗಳು ಶ್ರೀವತ್ಸ ದೇಸಾಯಿಯವರೇ ನೀವು ಆಸಕ್ತಿಯಿಂದ ಓದಿದ್ದಕ್ಕೆ. ಉದ್ದಕ್ಕೂ ತಣ್ಣೆಳಲು ಹರಡಿ ಹೋದ ಏಕಾನ ನೆನಪು ಇದು. ಕ್ಷಣ ಬಿಸಿಲ ಅನುಭವ ಮರುಗಳಿಗೆ ತಂಪೆರೆಯುವ ಅನುಭವ ಕ್ಕೆ ಕಾದು ನೋಡಿ.
      ಪ್ರಕಟಿಸಿದ ಅವಧಿಗೆ ಅನಂತ ಧನ್ಯವಾದಗಳು.

      ಪ್ರತಿಕ್ರಿಯೆ
  2. ramesh pattan

    ನೆನಪಿನ ಸರಣಿ ಅದ್ಭುತ. ಮುಂದಿನ ಬರಹಕ್ಕೆ ಕಾಯುತ್ತಿದ್ದೇನೆ.
    ರಮೇಶ ಪಟ್ಟಣ .kalaburagi

    ಪ್ರತಿಕ್ರಿಯೆ
  3. Sarojini Padasalgi

    ಅನೇಕ ವಂದನೆಗಳೊಂದಿಗೆ ಧನ್ಯವಾದಗಳು ರಮೇಶ ಸರ್.

    ಪ್ರತಿಕ್ರಿಯೆ
  4. Sarojini Padasalgi

    ಅನೇಕ ವಂದನೆಗಳೊಂದಿಗೆ ಧನ್ಯವಾದಗಳು ರಮೇಶ ಸರ್

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: