‘ಛೂಮಂತ್ರಯ್ಯನ…’ ನೆಪದಲ್ಲಿ ನಾವು ಕಂಡ ‘ಪುಸ್ತಕ ಮಂಥನ’ ಎಂಬ ಅಚ್ಚರಿ!

ಹೇಮಾ ಧ ಖುರ್ಸಾಪೂರ

ಒಂದು ಊರು, ಊರಿಗೆ ಹತ್ತಿದ ಒಂದು ತೋಟ. ಯಾರೋ ಬಂದು ನಾವಿಲ್ಲಿ ಬಂದು, ಕೂತು ಒಂದು ಪುಸ್ತಕದ ಬಗ್ಗೆ ಮಾತಾಡ್ತಿವಿ ಅಂತ ಕೇಳ್ತಾರೆ. ತೋಟದವರು ಹೂಂ ಅಂತಾರೆ. ಅಷ್ಟೇ ‘ಪುಸ್ತಕ ಮಂಥನ’ದ 57ನೇ ಕಂತು ಹೀಗೆ ತೋಟದಲ್ಲಿ ನಡ್ದೇ ಬಿಡುತ್ತೆ!

ಈಗ ನಾನು ಹೇಳಲು ಹೊರಟಿರುವುದು ಇದೇ ಕಾರ್ಯಕ್ರಮದ ಬಗ್ಗೆ. ಓದುವ ಆಸಕ್ತಿ ಇರುವ; ಯಾವುದೇ ಊರಿನಲ್ಲಿ ಇರುವ, ಇದ್ದಿರಬಹುದಾದ ಸಮಾನ ಆಸಕ್ತರು ರಾಮನಗರದಲ್ಲೂ ಇದ್ದಾರೆ ಅದರಲ್ಲೇನೂ ವಿಶೇಷ ಇಲ್ಲ. ಆದರೆ, ಆಸಕ್ತರೆಲ್ಲ ಸೇರಿ ಒಂದು ಗುಂಪಾಗಿ, ಓದುವುದಕ್ಕಾಗಿಯೇ ಒಂದು ಸಮಯ ಮೀಸಲಿಟ್ಟು, ಓದನ್ನ ಸಂಭ್ರಮಿಸುತ್ತಾರಲ್ಲ ಅದು ವಿಶೇಷ!.

ರಾಮನಗರದಲ್ಲಿ ಒಂದಿಷ್ಟು ಜನ ಸಮಾನಾಸಕ್ತರು ಸೇರಿ ‘ಪುಸ್ತಕ ಮಂಥನ’ ಎಂಬ ಕಾರ್ಯಕ್ರಮ ಮಾಡುತ್ತಿದ್ದಾರೆ. ಕನಕಪುರ, ಬಿಡದಿ, ಕೆಂಗೇರಿ… ಹೀಗೆ ಸುತ್ತಮುತ್ತಲ ಸ್ಥಳಗಳಿಂದ ಬರುವವರಿಗೆ ಅನುಕೂಲ ಆಗುವ ಹಾಗೆ ಒಂದು ಜಾಗ ಆಯ್ಕೆ ಮಾಡಿ ಪ್ರತಿವಾರ ಅಲ್ಲಿ ಸೇರುತ್ತಾರೆ. ಮೇ ಮೂರನೇ ವಾರದ ಸಭೆ ನಡೆದಿದ್ದು ರಾಮನಗರದ ‘ಕಾಡುಮನೆ’ ಸಮೀಪದ ತೋಟವೊಂದರಲ್ಲಿ.

ಇದಿಷ್ಟೇ ಅಲ್ಲ, ಈ ಬಳಗದ ಸದ್ಯರು ವರ್ಷಕ್ಕೊಮ್ಮೆ ‘ಪ್ರವಾಸ ಪುಸ್ತಕ ಮಂಥನ’ ಎನ್ನುವ ಕಾರ್ಯಕ್ರಮ ಮಾಡುತ್ತಾರೆ. ಕುವೆಂಪು ಕೃತಿ ಓದಲು ಕುಪ್ಪಳಿಗೆ, ‘ದುರ್ಗಾಸ್ತಮಾನ’ ಓದಲು ಚಿತ್ರದುರ್ಗಕ್ಕೆ… ಹೋಗಿದ್ದೆವು ಎಂದು ಅವರೆಲ್ಲ ಹೇಳ್ತಾ ಇದ್ದಿದ್ದನ್ನ ಕೇಳ್ತಾ ಇದ್ರೆ, ಕೈಯ್ಯಲ್ಲಿ ಪುಸ್ತಕ ಇದ್ರೆ ಕಲ್ಪನಾ ಲೋಕ ಜಾರಿ ಹೋಗ್ತೀವಿ ಅನ್ನೋ ಮಾತು ಸುಳ್ಳಾಗಿ, ಪುಸ್ತಕವೇ ಅವರಿಗೆಲ್ಲ ಮಾಯಾಲಾಂದ್ರವಾಗಿ ದಾರಿ ತೋರಿಸುವುದರ ಜೊತೆಗೆ ಮಾಯಾಕಂಬಳಿಯೂ ಆಗಿ ಕರ್ಕೊಂಡು ಹೋಗ್ತಿದೆಯ ಅಂತ ಅಚ್ಚರಿಯೂ ಆಯ್ತು.

ಪ್ರತಿವಾರದ ಸಭೆ ಮುಗಿದ ನಂತರ, ಮುಂದಿನ ವಾರದ ಪುಸ್ತಕ ಯಾವುದು, ಜಾಗ ಯಾವುದು ಸರದಿಯ ಮೇಲೆ ಸೂಚಿಸುತ್ತಾರೆ.

‘ಪುಸ್ತಕ ಮಂಥನ’ದ ಮೂರು ವಿಶೇಷತೆಗಳು:

1 ಪುಸ್ತಕ ಕೊಂಡು ಓದಬೇಕು. (ಯಾರ ಹತ್ತಿರವೂ ಓದಿಕೊಡುತ್ತೇನೆ ಎಂದು ‘ಪುಸ್ತಕಸಾಲ’ ಪಡೆಯುವ ಹಾಗಿಲ್ಲ, ಝೆರಾಕ್ಸ್ ಪ್ರತಿ ಮಾನ್ಯವಲ್ಲ)

2 ಕನಿಷ್ಠ ಮೂರು ಸಭೆಗಳಿಗೆ ಹಾಜರಾದವರು ಮಾತ್ರ ಪುಸ್ತಕ ಸೂಚಿಲು ಅರ್ಹರು.

3 ಸಂಘ, ಕಾರ್ಯದರ್ಶಿ, ಉಪಕಾರ್ಯದರ್ಶಿ ಕಜಾಂಚಿ ಎಂಬ ಯಾವ ಕಟ್ಟಳೆಗಳೂ ಇಲ್ಲಿಲ್ಲ. ಪುಸ್ತಕ ಅವರವರ ಖರ್ಚಿನಲ್ಲಿ ಕೊಂಡುಕೊಳ್ಳಬೇಕು. ಕಾರ್ಯಕ್ರಮ ಮಾಡಿದಾಗ ಖರ್ಚು ಅಂತ ಬಂದ್ರೆ ಎಲ್ಲರೂ ಹಂಚಿಕೊಂಡು ಮುಗಿಸುತ್ತಾರೆ. ಅಷ್ಟೇ, ಸೋ ಸಿಂಪಲ್!

‘ಪುಸ್ತಕ ಮಂಥನ’ 57ರಲ್ಲಿ ಚರ್ಚೆಯಾದ ಪುಸ್ತಕ ‘ಛೂಮಂತ್ರಯ್ಯನ ಕಥೆಗಳು’ ‘ಬಹುರೂಪಿ’ ಪ್ರಕಟಣೆ.

ನನಗೆ ತಿಳಿದ ಮಟ್ಟಿಗೆ ಹದಿಹರೆಯದ ಮಕ್ಕಳಿಗೆಂದು (Young Adult) ಕನ್ನಡದಲ್ಲಿ ಬಂದ ಏಕೈಕ ಪುಸ್ತಕ ಇದು. ಪರಿಸರ ಕಾಳಜಿ, ಕೃಷಿಯ ಮಹತ್ವ, ಸ್ವಲ್ಪ ತರಲೆ, ಸ್ವಲ್ಪ ಫ್ಯಾಂಟಸಿ… ಎಲ್ಲ ಹದವಾಗಿ ಮಿಳಿತಗೊಂಡಿರುವ ಪುಸ್ತಕವಿದು. ವೈಯಕ್ತಿವಾಗಿ ನನಗೆ ತುಂಬಾ ಇಷ್ಟವಾದ ಕೃತಿಯೂ ಹೌದು.

ಇಲ್ಲೊಂದು ವಿಷಯ ಹೇಳಬೇಕು: ‘ಛೂಮಂತ್ರಯ್ಯನ ಕಥೆಗಳು’ ಪುಸ್ತಕವಾಗುವ ಮುನ್ನ ಒಂದು ಸಲ ‘ಬಹುರೂಪಿ’ ಆಫೀಸಿನಲ್ಲಿ ನಾವೆಲ್ಲ ಈ ಪುಸ್ತಕದ ಮುಖಪುಟ ಹೇಗಿರಬೇಕು ಎಂದು ಚರ್ಚೆ ಮಾಡುತ್ತಿದ್ದೆವು. ಮುಖಪುಟದ ಚಿತ್ರ abstract ಆದ್ರೆ ಒಳಗಿನ ಪಠ್ಯಕ್ಕೂ ಮುಖಪುಟಕ್ಕೂ ಸಂಬಂಧ ಇಲ್ಲದ ಹಾಗಾಗತ್ತೆ, ಎಲ್ಲವನ್ನ ಚಿತ್ರದಲ್ಲೇ ಹೇಳಿದರೆ ತೀರಾ ವಾಚ್ಯವಾಗಿ ಪುಸ್ತಕದ Esthetic ಹಾಳಾಗುತ್ತೆ…. ಅಂತೆಲ್ಲ ಯೋಚನೆ ಮಾಡಿ ಈಗಿರುವ ಮುಖಪುಟವನ್ನ ಫೈನಲ್ ಮಾಡಿದ್ದೆವು.

ನಾವು ಏನೆಲ್ಲ ಯೋಚನೆ ಮಾಡಿ ಈ ಮುಖಪುಟವನ್ನ ಆಯ್ಕೆ ಮಾಡಿದ್ದೇವೊ ಅವೇ ಕಾರಣಗಳಿಗಾಗಿ ಈ ಪುಸ್ತಕದ ಮುಖಪುಟ ಇಷ್ಟವಾಯಿತು ಎಂದು ಸಹೃದಯರು ಎಳೆಎಳೆಯಾಗಿ ಬಿಡಿಸಿಟ್ಟಿದ್ದು ನೋಡಿ ನನಗೆ; ಕುವೆಂಪು ಹೇಳಿದ ಶ್ರೀಸಾಮಾನ್ಯರು!! ಇವರೇ ಎಂದು ಖಾತ್ರಿಯಾಯಿತು.

ಓದಬೇಕು, ಓದಿದ್ದನ್ನ ಸಮಾನ ಮನಸ್ಕರರ ಜತೆ ಹಂಚಿಕೊಳ್ಳಬೇಕು ಎನ್ನುವ ಸಾಮಾಜಿಕ ತುಡಿತಕ್ಕೆ ಮತ್ತೆ ಮತ್ತೆ ಬೆಲೆ ಬರುವುದು ಇಂತಹ ಕೂಟಗಳಿಂದಲೇ.

ಈ ಕಾರ್ಯಕ್ರಮದಲ್ಲಿ ನನಗೆ ತುಂಬಾ ಇಷ್ಟವಾಗಿದ್ದು, ದೊಡ್ಡವರ ಜೊತೆ ಮಕ್ಕಳೂ ಕೂತು ದೊಡ್ಡವರ ಮಾತುಕತೆ ಕೇಳಿಸಿಕೊಂಡಿದ್ದು. ಸಾಮಾನ್ಯವಾಗಿ ದೊಡ್ಡವರು ಮಾತನಾಡುವಾಗ ಮೊಬೈಲ್ ಮಕ್ಕಳ ಕೈಗೆ ವರ್ಗಾವಣೆ ಆಗಿರತ್ತೆ. ಇಲ್ಲಿ ಮಾತ್ರ ಆ ದೃಶ್ಯ ಕಾಣಲೇ ಇಲ್ಲ. ಮೊಬೈಲ್ ಮುಟ್ಟದೇ ಕೂತಿದ್ದ ಮಕ್ಕಳು ನನಗೆ ಪ್ರಪಂಚದ ಎಂಟನೇ ಅದ್ಭುತದಂತೆ ಕಂಡರು. ಹೀಗೇ ಇರಿ ಮಕ್ಕಳೇ.

ಮಿಶ್ರಕಾಳು-ಹಲಸಿನ ಸಾಂಬಾರು, ಅನ್ನ, ಹೆಸರುಬೇಳೆ ಪಾಯಸ, ಹಪ್ಪಳ-ಉಪ್ಪಿನಕಾಯಿ, ಮೊಸರನ್ನದ ಊಟ ಓದಿನ ಸಂಭ್ರಮಕ್ಕೆ ಹಬ್ಬದ ಸೊಬಗು ತಂದಿತ್ತು. ಮನೆಗೆಲಸ, ವೃತ್ತಿಯ ನಡುವೆ ಇಂತಹ ಪ್ರವೃತ್ತಿಗಳ ಮೂಲಕ ತಮ್ಮನ್ನ ತಾವು ಜೀವಂತವಾಗಿಟ್ಟುಕೊಂಡು, ಸುತ್ತಮುತ್ತಲ ಪ್ರಪಂಚವನ್ನೂ ಬಡಿದೆಬ್ಬಿಸುವ ಹೆಣ್ಮಕ್ಕಳ ಜೀವನಪ್ರೀತಿಗೆ ಬೇಕಾದದ್ದೆಲ್ಲವನ್ನೂ ಇಂಥ ‘ಓದು’ ಒದಗಿಸಿಕೊಡಲಿ.

‍ಲೇಖಕರು Admin

May 17, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: