'ಸಮಾಧಿ ಮೇಲಿನ ಹೂ' ಇಷ್ಟವಾಗುತ್ತದೆ..

 ಚಂದ್ರಪ್ರಭ ಕಠಾರಿ
ಕಥಾವಸ್ತು, ನಿರೂಪಣೆಯ ಶೈಲಿಯಿಂದ ಹಲವು ಕಾಡುವ ಕತೆಯೊಳಗೊಂಡ ಕಥಾ ಸಂಕಲನವಾಗಿ ಡಾ. ಪದ್ಮಿನಿ ನಾಗರಾಜು ಅವರ “ಸಮಾಧಿ ಮೇಲಿನ ಹೂ“ ಗಮನ ಸೆಳೆಯುತ್ತದೆ.
ಮೊದಲ ಕತೆ ‘ಕನಸುಗಳ ಕೈ ಹಿಡಿದು’ -ಮುಸ್ಲಿಂ ಹೆಣ್ಣುಮಕ್ಕಳ ದಾರುಣ ಬದುಕಿನ ಬಗ್ಗೆ ಮೂರು ತಲೆಮಾರುಗಳನ್ನು ಸರಳವಾಗಿ ದಾಟಿಸುತ್ತದೆ. ಪುರುಷ ಸಮಾಜದ ದಬ್ಬಾಳಿಕೆ ಅದನ್ನು ದೃಢೀಕರಿಸುವ ಖುಷ್ಬೂಳ ಅಜ್ಜಿಯಂತಹ ಸಂಪ್ರದಾಯಿಕ ಹಳೇ ತಲೆಗಳು, ಹೆಣ್ಣನ್ನು ಭೋಗವಸ್ತುವಷ್ಟೇ ಎಂದು ಭಾವಿಸುವ ಸಮಾಜದಲ್ಲಿ ಒಂದಷ್ಟು ಬದಲಾವಣೆ ತರಬೇಕೆನ್ನುವ ಕಳಕಳಿಯ ಅನಿತಕ್ಕ, ಗಂಡಿಲ್ಲದ ಜೀವನ ಮುಗಿದೇ ಹೋಯಿತು ಅನ್ನುವಾಗ ದಿಟ್ಟತನದಿಂದ ಬದುಕನ್ನು ಎದುರಿಸುವ ಅಮ್ಮಿ, ಕಾಶಂಬಿ ಅಂಥ ಪಾತ್ರಗಳೆಲ್ಲವೂ ಜೀವಂತವಾಗಿವೆ. ಬರೀ ಕೇಳಿರುವ ಸಮಾಜದ ರೀತಿರಿವಾಜುಗಳನ್ನು ಹತ್ತಿರದಿಂದ ಕಂಡಂತಾಗುತ್ತದೆ. ಕೊನೆಯಲ್ಲಿ ಹಳೆಯ ಗೊಡ್ಡು ಸಂಪ್ರದಾಯಗಳ ಬಲೆಯಲ್ಲಿ ಅನಿವಾರ್ಯವಾಗಿ ಸಿಲುಕಿಕೊಂಡ ಆ ಪುಟ್ಟಹೆಣ್ಣುಮಗಳು ತೋರುವ ಧೈರ್ಯವಂತಿಕೆ ಕತೆಗಾರ್ತಿಯ ಆಶಯವಾಗಿದೆ, ಅಲ್ಲದೆ ಓದುಗರ ಮನವನ್ನು ಗೆಲ್ಲುತ್ತದೆ.
ನಿರೀಕ್ಷೆ:
ಸಾವಿನ ನಿರೀಕ್ಷೆ . ಕಥಾನಾಯಕ ದಿವಾಕರನ ಸಾವನ್ನು ನಿರೀಕ್ಷಿಸುವ ಆತನ ಮಕ್ಕಳ ನಿರ್ಭಾವುಕತೆ –ಚಿಕ್ಕಂದಿನಿಂದ ತಂದೆಯೊಂದಿಗೆ ಒಡನಾಟವಿರಲಿಲ್ಲವೆಂದೊ, ವಿಲಾಯಿತಿಯ ಕೆಲಸದ ಒತ್ತಡವೊ ಅವರ ನಡವಳಿಕೆ ಅಸಹಜವಾಗಿದೆ. ಅಪ್ಪನ ಖಾಯಿಲೆ ಬಗ್ಗೆ ಮೊದಲಿಗೆ ಅಮ್ಮನಿಂದ ವಿಷಯ ತಿಳಿದಾಗ, ಆಯುಶ್ಯನ ಲೆಕ್ಕಾಚಾರದ ಸ್ವಗತವು ದಿಗಿಲು ಬೀಳಿಸುತ್ತದೆ. ಅಲ್ಲದೆ ಅವನ ತಂಗಿಗೆ ಕೊಡುವ ಸಲಹೆಗಳು ಅರಗಿಸಿಕೊಳ್ಳುವುದು ಕಷ್ಟ. ಅಪ್ಪನ ಬಗ್ಗೆ ಆ ರೀತಿ ಯೋಚಿಸುವ ಆಯುಶ್ಯನಿಗೆ, ಕದ್ದುಮುಚ್ಚಿ ಅಪ್ಪನ ನಾಟಕವನ್ನು ನೋಡಿ ಅಭಿಮಾನ ಹುಟ್ಟುವುದು ಹಾಗೆಯೇ ಮಗಳು ಅನತಿಗೆ ಮದುವೆ ಸಂದರ್ಭ ಖ್ಯಾತ ವ್ಯಕ್ತಿಗಳು ಅಪ್ಪನ ಗುಣಗಾನ ಮಾಡಿದಾಗ ಅಪ್ಪನ ವ್ಯಕ್ತಿತ್ವದ ಬಗ್ಗೆ ಅರಿವಾಗುವುದರ ನೆನಪು -ಪೊಳ್ಳು ಅಭಿಮಾನವೆನಿಸುತ್ತದೆ. ಕತೆಯ ಮುಂದಿನ ನಡೆಯೇನು ಎನ್ನುವಲ್ಲಿ ಏರ್ ಪೋರ್ಟನಲ್ಲಿ ಸಾವಿನ ವಿಷಯ ತಿಳಿಯುವುದು ತಂಗಿಯನ್ನು ವಿಷಯ ತಿಳಿಸದೆ ಸಾಗ ಹಾಕುವುದು ಮಾನವೀಯತೆ ಬೆನ್ನು ಹಾಕಿದ ಕಠೋರತೆಯಿದೆ. ಗಂಡ ಹೆಂಡತಿ ಸಂಬಂಧವಿದ್ದು ಬದುಕಿರದ ಬದುಕಿನಲ್ಲಿ ಎಲ್ಲಾ ಕೆಡುಕನ್ನು ಕೆಲವೊಮ್ಮೆ ತಾಳ್ಮೆಗೆಟ್ಟರೂ ಅನುಭವಿಸಿ, ಸಹಿಸಿಕೊಂಡ ಕನಕಳ ಬಗ್ಗೆ ಕನಿಕರ ಹುಟ್ಟುತ್ತದೆ, ಸಾವನ್ನು ನಿರೀಕ್ಷಿಸುವ ಮಕ್ಕಳ ದುರ್ನಡನೆತೆಗಿಂತ ಹೆಚ್ಚು ಕಾಡುತ್ತದೆ.

ತಪ್ತ:
ದ್ಯಾವಣ್ಣನ ಒಡಲ ಸಂಕಟಕ್ಕೆ ಅನುಗುಣವಾಗೆ ಕತೆಯ ಹೆಸರು ಇದೆ. ಮೇಲಿನ ಎರಡು ಕತೆಗಿಂತ -ಸಣ್ಣಕತೆಗೆ ಬೇಕಿರದ ಹೆಚ್ಚು ವಿವರಣೆ, ಪಾತ್ರಗಳಿದ್ದರೂ ಯಾಕೋ ಎದೆ ಭಾರವಾಗಿಸಿತು. ಕೂಡು ಕುಟುಂಬದ ಅಷ್ಟೂ ಸದಸ್ಯರು ದೀಪಾವಳಿ ಹಬ್ಬಕ್ಕೆ ಬಂದು ಸಂಭ್ರಮಿಸಿ ಹಿಂತಿರುಗುವ ಒಂದು ಸಾಲಿನ ಕತೆಯ ಹೆಣಿಗೆಯೇ ಸುಂದರವಾಗಿದೆ. ಗ್ರಾಮೀಣ ಬದುಕನ್ನು, ಪರಿಸರವನ್ನು ಚಿಕ್ಕಪುಟ್ಟ ಸಂಗತಿಗಳ ಸಹಿತ ಅದ್ಭುತವಾಗಿ ಕತೆ ಕಟ್ಟಿ ಕೊಡುತ್ತದೆ. ಮಲೆನಾಡಿನ ಗ್ರಾಮೀಣ ಬದುಕು, ಪೂಜೆ, ಹಬ್ಬಗಳಲ್ಲಿ ಸಹಜವಾಗಿ ಬರುವ ಕನ್ನಡ ಬಳಕೆಯ ಪದಗಳು (ಮಕ್ಕಿಗದ್ದೆ, ಹಕ್ಕೆ, ಸೊರ, ಕರಾವು ಇತ್ಯಾದಿ) ಅಚ್ಚರಿ, ಆನಂದ ಮೂಡಿಸಿದವು. ಸುಲಲಿತವಾಗಿ ಓದಿಸಿಕೊಳ್ಳುವ ತಪ್ತ ಕೊನೆಯಲ್ಲಿ ಸಾಮ್ಯಾನವಾಗಿ ನಿರೀಕ್ಷಿಸುವ ಅಂತಿಮವನ್ನು ಬೇಡುವುದಿಲ್ಲ. ಅಲ್ಲದೆ ಗೂಡಿಗೆ ಹಿಂತಿರುಗುವ ಹಕ್ಕಿಗಳ ಚಿತ್ರಣ ಸಾಂಕೇತಿಕವಾಗಿ, ಚೆನ್ನಾಗಿದೆ.
ಸಮಾಧಿ ಮೇಲಿನ ಹೂ:
ಕಥಾ ಸಂಕಲನದ ಹೆಸರಿನ ಅಸ್ಲಂ, ಆಸ್ಮಾ ಆದ ಕತೆ. ಬಾಲ್ಯದಿಂದಿಡಿದು ಸಾವಿನ ಹಾಸಿಗೆ ಹಿಡಿಯುವವರೆಗೂ ಸಾಗಿ ಬಂದ ಹಾದಿ, ಪ್ರಕೃತಿ ತನ್ನ ದೇಹ ಮನದೊಂದಿಗೆ ಆಟವಾಡಿದ ಸಂಗತಿಗಳನ್ನು ಹೇಳುವ ಜೊತೆಗೆ ಕೆಟ್ಟಸಮಾಜ ಹೇಗೆ ತನ್ನನ್ನು ಶೋಷಣೆಗೀಡು ಮಾಡಿತು ಎಂದು ಕಥಾನಾಯಕ(ಕಿ) ನಿರೂಪಣೆಯಲ್ಲಿರುವ ಕತೆ. ನಿರೂಪಣೆಯ ಕೊನೆಯಲ್ಲಿ ಕತೆಗಾರ್ತಿ ಕತೆ ಕೇಳಿ ನೊಂದು, ಭಾವುಕಳಾಗಿ ತೃತೀಯಲಿಂಗಗಳ ಬಗ್ಗೆ ಸಮಾಜದ, ಪೋಷಕರ, ಸರ್ಕಾರ ಜವಾಬ್ದಾರಿಯನ್ನು ಪ್ರಶ್ನಿಸುತ್ತಾರೆ ಮತ್ತು ಪೋಷಕರು ವಹಿಸಬೇಕಾದ ಮತ್ತವರ ಪಾತ್ರವನ್ನು ತಿಳಿಸುತ್ತಾರೆ. ಕೊನೆಯಲ್ಲಿ ಬರುವ ಕವನ ಅರ್ಥಗರ್ಭಿತವಾಗಿದೆ.
ಯಾವತ್ತು ದುಡಿಮೆ, ಹಣದ ಬಗ್ಗೆ ಚಿಂತಿಸುವ ಮೆಟ್ರೊ ಬದುಕಿನ ವೈವಾಹಿಕ ಜೀವನ, ಹೊರಗಡೆ ಎಲ್ಲವೂ ಚೆನ್ನಾಗಿದೆ ಎಂದು ತೋರ್ಪಡಿಸಿ ಕೊಳ್ಳುತ್ತಲೇ ಒಳಗೇ ಬೇಗುದಿಯಲ್ಲಿರುವ ಹೆಣ್ಣಿನ ಕತೆಯಾಗಿ ‘ತನು ಕರಗದವರಲ್ಲಿ’ ಗಮನ ಸೆಳೆಯುತ್ತದೆ. ಗಂಡ ಗಿರಿಯ ಅತೀ ಲೆಕ್ಕಾಚಾರದ ಬದುಕು ಮನೆಯ ವೆಚ್ಚಕ್ಕಲ್ಲದೆ ಹಾಸಿಗೆಗೂ ವಿಸ್ತರಿಸುವುದು, ಅಂತರ್ಮುಖಿಯಾಗಿ ಬೆಳೆದ ಭಾವುಕ ಸ್ಮಿತಾಳ ಕಾಲೇಜು ಲೆಕ್ಚರರ್ ಜಯದೇವರೊಂದಿಗೆ ಆಗುವ ಕ್ರಶ್, ಮುಂದೆ ಮಗ ಕುಶಾಲ ಬೆಳೆದ ಮೇಲೂ ಗಂಡನೊಂದಿಗೆ ಸಿಗದ ಪ್ರೀತಿಯನ್ನು ಬೇರೊಬ್ಬನಲ್ಲಿ ಕಾಣುವ ಪರಿ -ಅಚ್ಚುಕಟ್ಟಾದ ಘಟನೆಗಳ ಜೋಡಣೆಯಿಂದ ಚೆನ್ನಾಗಿ ಮೂಡಿಬಂದಿದೆ.
ಸಾವಿರ ಸುಳ್ಳನ್ನು ಹೇಳಿ:
ಹರೆಯಕ್ಕೆ ಬಂದ ಹೆಣ್ಣುಮಕ್ಕಳಿಗೆ ಗಂಡು ಹುಡುಕಿ, ಮದುವೆ ಮಾಡಿಸುವುದೇ ಹೆತ್ತವರಿಗೆ ಒಂದು ದೊಡ್ಡ ಜವಾಬ್ದಾರಿಯಾಗಿ, ಸಂಕಟವಾಗಿದ್ದ ಕಾಲಘಟ್ಟದ ಕತೆ. ಅದರಲ್ಲೂ ಹಳ್ಳಿಹುಡುಗಿ ಜೊತೆಗೆ ಕಿವುಡಿ. ಕತೆಗಾರ್ತಿ –ಮಂಜುಳಳೊಂದಿಗಿದ್ದ ಬಾಲ್ಯದ ಗೆಣೆತನ, ಸರ್ಕಾರ್ ಬಾವಿ, ಆಕೆಯ ಮದುವೆಯಾಗುವ ಮೊದಲ ಭಾಗದವರೆಗೆ ಕುತೂಹಲದಿಂದ ಓದಿಸಿಕೊಳ್ಳುತ್ತದೆ. ನಂತರ, ಕಿವುಡಿಯಾಗಿದ್ದು ನೆಮ್ಮದಿಯಾಗಿರುವ ಸುದ್ದಿ ಆದರ್ಶ ಗಂಡುಗಳು ಇದ್ದಾರೆಂದು ಸಮಾಧಾನವಾಗುತ್ತದೆ. ಆದರೆ ಹುಟ್ಟಿದ ಮಕ್ಕಳು ವಿಧಿಯಾಟಕ್ಕೆ ಅವಳಂತೆ ಹುಟ್ಟುವುದು, ಗಂಡನ ಮುಖವಾಡ ಕಳಚುವುದು ನಿರೀಕ್ಷಿಸಿರದ ತಿರುವುಗಳಾಗಿ ಹಸಿವಾಸ್ತವ ತೆರೆದಿಟ್ಟಂತಾಗುತ್ತದೆ. ನಗರ ಜೀವನಕ್ಕೆ ಹೊಂದಿಕೊಂಡು, ತನ್ನ ಕಾಲಮೇಲೆ ನಿಲ್ಲುವ ಸ್ವಾಭಿಮಾನಿ ಹೆಣ್ಣಾಗಿ ಮಂಜುಳಳ ವ್ಯಕ್ತಿತ್ವ ಇಷ್ಟವಾಗುತ್ತದೆ.
ಹಸ್ತಮೈಥುನ:
ಸಂಕೀರ್ಣ, ಖಾಸಗಿ ವಿಷಯವನ್ನು ಇಟ್ಟುಕೊಂಡು ಕತೆಯನ್ನು ಹೇಗೆ ನಿಭಾಯಿಸಬಹುದು ಎಂಬುದಕ್ಕೆ ಈ ಕತೆ ಸಾಕ್ಷಿಯಾಗುತ್ತದೆ. ಎಲ್ಲೂ ಮುಜುಗರವಾಗದಂತೆ, ಅಶ್ಲೀಲವೆನಿಸದಂಥ ನಿರೂಪಣೆ ಇದೆ. ಎಲ್ಲಾ ಕತೆಗಳನ್ನು ಇರುವಂತೆ ಇಲ್ಲಿಯೂ ಕೂಡು ಕುಟುಂಬದ ಚಿತ್ರಣ ದಟ್ಟವಾಗಿದೆ. ಅಷ್ಟೊಂದು ಪಾತ್ರಗಳಿದ್ದರೂ ಕತೆಗೆ ಬೇಕಾದಷ್ಟೆ ಪಾತ್ರಗಳನ್ನು ಬಿಂಬಿಸುವ ಜಾಣ್ಮೆ ಬರಹದಲ್ಲಿ ಕಾಣುತ್ತದೆ. ಅಚಾನಾಕ್ಕಾಗಿ, ಆರೋಗ್ಯವಂತ ಗಂಡ ರಾಜ ಅಯ್ಯಂಗಾರ್ ಅಪಘಾತದಿಂದ ಹಾಸಿಗೆಯಲ್ಲಿ ಕೊರಡಾಗುವುದು. ಅವನ ಲೈಂಗಿಕ ತೃಷೆಯನ್ನು ತನ್ನ ಬಯಕೆಯಗಳ ಅದುಮಿಟ್ಟು ತೀರಿಸುವ ಪತ್ನಿಯ ದಾರುಣ ಚಿತ್ರಣವಿದೆ. ಸೀತಾಳ ಬಗ್ಗೆ ಅನುಕಂಪ ಮೂಡುತ್ತದೆ. ಗಂಡನ ಸಾವಿನಿಂದ ನಿರುಮ್ಮಳವಾಗುವ ಅವಳ ಭಾವ ಸಹಜವಾಗೇ ಇದೆ.

ಪ್ರಭಕ್ಕ, ಪಾರಕ್ಕ, ಪದ್ಮಕ್ಕ ಗೆಳತಿಯರ ದಾಂಪತ್ಯ ಜೀವನದ ಕಷ್ಟಸುಖದ ಕತೆ ‘ಮನದ ತಕ್ಕಡಿಯಲ್ಲಿ’. ಅವರು ಮೂವರು -ಅವರ ಗಂಡಂದಿರು, ಅವರ ವೃತ್ತಿ, ಅವರ ಮಕ್ಕಳು… ಸ್ಥಳದ ವಿವರಣೆಗಳು. ಮೊದಲ ಪುಟದ ಸಾಲುಗಳನ್ನೇ ತಿರುಗಿ ತಿರುಗಿ ಓದಿ, ನೆನಪಲಿ ಇಟ್ಟುಕೊಳ್ಳುವಂತಾಯಿತು. ಪಾರಕ್ಕನ ಮಗನ ಸಾವಿನಿಂದ ಪ್ರಾರಂಭವಾಗಿ, ವಿಧವೆ ಪ್ರೀತಿಗೆ ಮತ್ತೊಂದು ಮದುವೆಗೆ ಗೆಳತಿಯನ್ನು ಒಪ್ಪಿಸುವುದರೊಂದಿಗೆ ಕತೆ ಮುಗಿಯುತ್ತದೆ. ಬದಲಾದ ಕಾಲದಲ್ಲಿ ಮತ್ತೊಂದು ಮದುವೆ ಗಂಡೆಂದಾಗಲಿ ಹೆಣ್ಣೆಂದಾಗಲಿ ವ್ಯತ್ಯಾಸವಿರ ಕೂಡದು. ಹಾಗೆ ಪ್ರೀತಿಗೆ ಮತ್ತೊಂದು ಮದುವೆ ನ್ಯಾಯಯುತವಾದುದೆ. ಆದರೆ, ಅಕ್ಕನ ಮನೆಗೆ ಹೋಗಿ ಬಂದಾಗಿಂದ ಪ್ರೀತಿಯ ಸ್ವಚ್ಚಂದ ಬದುಕುವ ಶೈಲಿ, ಮಕ್ಕಳನ್ನು ನೋಡಿಕೊಳ್ಳುವುದರ ಬಗೆಗಿನ ತಾತ್ಸಾರ ಕ್ಲೀಷೆಯೆನಿಸಿತು. ಪಾತ್ರಗಳ, ನಿರೂಪಣೆಯ ಉತ್ತರ ಕರ್ನಾಟಕದ ಜವಾರಿ ಭಾಷೆ ಚೆನ್ನಾಗಿದೆ.
ಸ್ವಲ್ಪ ಅಡ್ಜಸ್ಟ್: -ಸರೋಜ, ಲಕ್ಷೀ ಅಕಸ್ಮಾತಾಗಿ ಪರಿಚಿತರಾಗಿ ಗೆಳತಿಯರಾದ, ಬಾಳಲ್ಲಿ ಎಲ್ಲಾ ಘಟ್ಟಗಳನ್ನು ಹಾಯ್ದು ಬಂದ ಹಿರಿಯ ಜೀವಿಗಳ ಕತೆಯಾಗಿ ಗಮನ ಸೆಳೆಯುತ್ತದೆ. ಹೆಣ್ಣೆಂಬ ಕಾರಣಕ್ಕೆ ಹುಟ್ಟಿದಂದಿನಿಂದಲೂ ಅಡ್ಜಸ್ಟ್ ಮಾಡಿಕೊಂಡು ಬದುಕುವ ಅನಿವಾರ್ಯತೆ ನನ್ನ ಅಕ್ಕಂದಿರನ್ನು ನೆನಪಿಸಿತು. ಬಾಳಸಂಜೆಯಲ್ಲೂ ತಮ್ಮಿಷ್ಟದಂತೆ ಬದುಕಲು ಬಿಡದ ಮಕ್ಕಳು, ಸಮಾಜ -ಸ್ಥಿತಿವಂತರಾಗಿದ್ದರೆ ಕೊನೆಯಲ್ಲಿ ಸರೋಜರಂತೆ ನಿರ್ಧಾರ ತೆಗೆದುಕೊಳ್ಳಬಹುದೇನೊ?
ಇನ್ನು ಸಂಕಲನದಲ್ಲಿನ ಪ್ರಚಲಿತ ರೈತರ ಬವಣೆಯ ನೈಜ ಚಿತ್ರಣವಿರುವ ‘ಧ್ಯಾನ’ ಮತ್ತು ಕ್ಯಾನ್ಸರ್ ಕಾಯಿಲೆ ತರುವ ಸಂಕಷ್ಟ, ಕಾಡುವ ನೋವು, ಆತ್ಮೀಯರಿಗೆ ಆಗುವ ಆತಂಕಗಳನ್ನು ಪರಿಣಾಮಕಾರಿಯಾಗಿ ಕಣ್ಣಮುಂದೆ ತರುವ ಮನಮುಟ್ಟುವ ಕತೆ ‘ಅಪ್ಪ ಮತ್ತು ಮಾತು‘
ಒಟ್ಟಿನಲ್ಲಿ ಕತೆಗಳನ್ನು ಓದುವಾಗ ತನ್ಮಯತೆ ಇರುತ್ತದೆ. ಸರಳ ಬರವಣಿಗೆ ಓದಿಸಿಕೊಂಡು ಹೋಗುತ್ತದೆ. ಕೆಲವು ಕತೆಗಳು, ಪಾತ್ರಗಳು ಕಾಡುತ್ತವೆ. ಎಲ್ಲಾ ಕತೆಯೂ ಮೇಲೆ ಹೇಳಿದಂತೆ ಒಂದಲ್ಲಾ ಒಂದು ರೀತಿಯಾಗಿ ಇಷ್ಟವಾಗುತ್ತದೆ. ಅದರಲ್ಲೂ ನನಗೆ ತುಂಬ ಕಾಡಿದ ಕತೆಗಳೆಂದರೆ –ತಪ್ತ, ಧ್ಯಾನ, ತನುಕರಗದವರಲ್ಲಿ, ಕನಸುಗಳ ಕೈಹಿಡಿದು ಮತ್ತು ಹಸ್ತಮೈಥುನ.
ವಿಧವಿಧವಾದ ವಸ್ತುವಿಷಯವುಳ್ಳ ಕತೆಗಳ ಸಂಕಲನವಾಗಿ “ಸಮಾಧಿ ಮೇಲಿನ ಹೂ“ ಇಷ್ಟವಾಗುತ್ತದೆ.

‍ಲೇಖಕರು nalike

May 17, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಚಂದ್ರಪ್ರಭ ಕಠಾರಿ

    ಲೇಖನ ಪ್ರಕಟಿಸಿದ್ದಕ್ಕೆ ಅವಧಿಗೆ ಧನ್ಯವಾದಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: