ಜಿ ಪಿ ಬಸವರಾಜು
ನಮ್ಮದು ಸಮಾಜವಾದಿ, ಮತಧರ್ಮ ನಿರಪೇಕ್ಷ, ಪ್ರಜಾಪ್ರಭುತ್ವ ಗಣರಾಜ್ಯ. ನಮ್ಮ ಸಂವಿಧಾನ ರಚನೆಯಾದಾಗ ಅದರ ಪೀಠಿಕಾ ಭಾಗದಲ್ಲಿ ‘ಸಮಾಜವಾದಿ’ ಎಂಬ ಪದವೇ ಇರಲಿಲ್ಲ. 1976ರಲ್ಲಿ ಸಂವಿಧಾನಕ್ಕೆ 42ನೇ ತಿದ್ದುಪಡಿಯನ್ನು ತಂದು ಈ ಪದವನ್ನು ಸೇರಿಸಲಾಯಿತು. ಉದಾರವಾದೀ ಧೋರಣೆಯ ನೆಹರೂ ‘ಸಮಾಜವಾದಿ’ ಗಣರಾಜ್ಯಕ್ಕೆ ವಿರೋಧಿಯೇನೂ ಆಗಿರಲಿಲ್ಲ; ಆದರೂ ಪ್ರಥಮ ಪ್ರಧಾನಿಯಾದ ಅವರಿಗೆ ಈ ‘ಸಮಾಜವಾದಿ’ ಪದವನ್ನು ನಮ್ಮ ಸಂವಿಧಾನದ ಆಶಯಕ್ಕೆ ಸೇರಿಸುವ ಚಿಂತನೆ ಬರಲೇ ಇಲ್ಲ. ಸಂವಿಧಾನವನ್ನು ರಚಿಸಿದ ಡಾ.ಬಿ.ಆರ್.ಅಂಬೇಡ್ಕರ್ ಮಾನವನ ಘನತೆಗಾಗಿ ಸೆಣಸಿದವರು. ಜಗತ್ತಿನ ಯಾವ ಭಾಗದಲ್ಲಿಯೂ ಮನುಷ್ಯ ಗುಲಾಮನಾಗಿ ಬದುಕಬಾರದು ಎಂಬ ಹಂಬಲ ಅವರ ಜೀವನದ ಬಹುದೊಡ್ಡ ಕನಸಾಗಿತ್ತು; ಮನುಷ್ಯನ ಘನತೆಗಾಗಿ ಅವರು ತಮ್ಮ ಇಡೀ ಜೀವನವನ್ನು ಹೋರಾಟವಾಗಿ ರೂಪಿಸಿಕೊಂಡವರು. ಮಾಕ್ಸರ್್, ಬುದ್ಧ, ಗಾಂಧಿ, ಲೋಹಿಯಾ ಸೇರಿದಂತೆ ಜಗತ್ತಿನ ಅನೇಕ ಚಿಂತಕರ ವಿಚಾರಧಾರೆಯನ್ನೆಲ್ಲ ಅವರು ಅರೆದು ಕುಡಿದವರಾಗಿದ್ದರು. ಅವರಂಥ ಸಮಾಜವಾದಿ ಇನ್ನೊಬ್ಬರಿಲ್ಲ ಎನ್ನುವಂತಿದ್ದರು. ಅವರೇ ರಚಿಸಿದ ಸಂವಿಧಾನದಲ್ಲಿ ‘ಸಮಾಜವಾದಿ’ ಎಂಬ ಪದವನ್ನು ಸಂವಿಧಾನದ ಪೀಠಿಕೆಯಲ್ಲಿ ಬಳಸಲಿಲ್ಲ. ಬಹುದೊಡ್ಡ ವಿದ್ವಾಂಸರಾಗಿದ್ದ ಮತ್ತು ಹರಿತ ಬುದ್ಧಿಯವರಾಗಿದ್ದ ಡಾ.ಅಂಬೇಡ್ಕರ್ ಅವರು ಈ ಪದವನ್ನು ಬಳಸದೆ ಇರಲು ಅವರದೇ ಆದ ಕಾರಣಗಳು ಇದ್ದವೆಂದು ತೋರುತ್ತದೆ.
ಈ ಪದ ನಮ್ಮ ಸಂವಿಧಾನದ ಪ್ರಸ್ತಾವನೆಯಲ್ಲಿ ಬಂದು ಸೇರುತ್ತಿದ್ದಂತೆಯೇ ನಮ್ಮ ರಾಜಕೀಯ ಕ್ಷೇತ್ರದಲ್ಲಿ ಎದ್ದು ಕಾಣುವ ಬದಲಾವಣೆಗಳಾದವು. ಅನೇಕ ಪಕ್ಷಗಳು ಈ ‘ಸಮಾಜವಾದಿ’ ಪದವನ್ನು ಹಿಡಿದು ಎಳೆದಾಡಿದವು. ಬಹುಪಾಲು ರಾಜಕೀಯ ಪಕ್ಷಗಳು ತಮ್ಮ ಆಶಯ ಸಮಾಜವಾದಿ ಹಿನ್ನೆಲೆಯದು ಎಂದೇ ಹೇಳಿಕೊಂಡವು. ಕೆಲವು ಪಕ್ಷಗಳು ಈ ಪದವನ್ನೇ ತಮ್ಮ ಪಕ್ಷಗಳ ಹೆಸರಿನಲ್ಲಿ ಸೇರಿಸಿಕೊಂಡವು. ತಮ್ಮ ಪ್ರಣಾಳಿಕೆಯನ್ನು ರಚಿಸುವಾಗಲೇ ‘ಸಮಾಜವಾದಿ’ ಆಶಯ ಎದ್ದುಕಾಣುವಂತೆ ಮಾಡಿದವು. ಅಂತೂ ಸಮಾಜವಾದ ಎನ್ನುವುದು ಭಾರತದ ರಾಜಕೀಯ ಬದುಕಿನಲ್ಲಿ ಎಲ್ಲೆಲ್ಲೂ ಕಾಣುವಂತಾಯಿತು.

ವ್ಯಂಗ್ಯ ಎಂದರೆ ನಿಜವಾದ ಅರ್ಥದಲ್ಲಿ ಸಮಾಜವಾದ ಎನ್ನುವುದು ನಮ್ಮಿಂದ ದೂರವಾಗತೊಡಗಿತು. ಖಾಸಗೀ ಬಂಡವಾಳವೇ ಮೆರೆದಾಡಿತು. ಸಾರ್ವಜನಿಕ ವಲಯ ಮತ್ತು ಗಾಂಧೀಜಿ ಕನಸಿದ್ದ ಸಹಕಾರ ವಲಯಗಳು ಕುಗ್ಗತೊಡಗಿದವು. ಆಧುನಿಕತೆ ಮತ್ತು ವಿದೇಶಿ ಬಂಡವಾಳವೇ ಸರ್ವರ ಹಿತವನ್ನು ಬಯಸುವ ಸಾಧನ ಎಂದು ನಂಬಲಾಯಿತು. ಆರ್ಥಿಕ ಉದಾರ ನೀತಿಗಳೇ ನಮ್ಮ ಪ್ರಗತಿಯ ತತ್ವಗಳಾದವು. ಭಾರತ ಇದೇ ಹಾದಿಯಲ್ಲಿ ಹೆಜ್ಜೆ ಹಾಕಿತು. ಖಾದಿ, ಗ್ರಾಮೋದ್ಯೋಗ, ಸಣ್ಣ ಸಣ್ಣ ಉದ್ದಿಮೆಗಳು, ಸಹಕಾರ ಕ್ಷೇತ್ರದ ಅನೇಕ ಚಟುವಟಿಕೆಗಳು, ಸಾರ್ವಜನಿಕ ವಲಯದ ಉದ್ದಿಮೆಗಳು ಹಿಂದೆ ಸರಿಯತೊಡಗಿದವು.
21ನೇ ಶತಮಾನದ ಬೆಳವಣಿಗೆಗಳಂತೂ, ಬೃಹತ್ ಬಂಡವಾಳಗಳ ರೆಕ್ಕೆಗಳನ್ನು ಕಟ್ಟಿಕೊಂಡು ಭಾರತ ಮುಗಿಲಿಗೆ ಹಾರಲು ನೆರವಾದವು. ನಮ್ಮ ಆರ್ಥಿಕ ನೀತಿಯಂತೂ ಬಂಡವಾಳದಾರರಿಗೆ ಬಾಗಿಲುಗಳನ್ನು ಹಾರೊಡೆಯಿತು. ಬಹುರಾಷ್ಟ್ರೀಯ ಕಂಪನಿಗಳು, ಕಾರ್ಪೋರೇಟ್ ಸಂಸ್ಥೆಗಳು ಭಾರತಕ್ಕೆ ನುಗ್ಗಿಬಂದವು. ಎಲ್ಲೆಲ್ಲೂ ಹಣವೇ ಹರಿದಾಡಿತು. ಭಾರತದ ಏಳಿಗೆಯಾದಂತೆಯೂ ಕಂಡಿತು. ಮಾಹಿತಿ ಮತ್ತು ತಂತ್ರಜ್ಞಾನದಲ್ಲಾದ ಬೆಳವಣಿಗೆಗಳೂ ಇಂಥ ಭ್ರಮೆಯನ್ನು ಹುಟ್ಟಿಸಲು ನೆರವಾದವು. ಅನೇಕ ಕ್ಷೇತ್ರಗಳಲ್ಲಿ ಮಿಂಚಿನ ಬದಲಾವಣೆಗಳು ಆದದ್ದೂ ನಿಜ. ಆದರೆ ನಮ್ಮ ಸಂವಿಧಾನದಲ್ಲಿ ಪ್ರಸ್ತಾಪವಾಗಿರುವ ‘ಸಮಾಜವಾದ’ ದಿಕ್ಕುತಪ್ಪಿ ಹೋಯಿತು. ಜಾತಿ, ಧರ್ಮ, ಮೂಲಭೂತವಾದ ಮನುಷ್ಯ-ಮನುಷ್ಯರ ನಡುವೆ ಬಹುದೊಡ್ಡ ಗೋಡೆಗಳನ್ನು ಕಟ್ಟಿದವು. ಬಡವ-ಬಲ್ಲಿದ, ಹಳ್ಳಿ-ನಗರ, ವಿದ್ಯಾವಂತ-ಅವಿದ್ಯಾವಂತ ಹೀಗೆ ಸೃಷ್ಟಿಯಾದ ವರ್ಗಗಳು ಅವುಗಳ ನಡುವಿನ ಅಂತರ ದೊಡ್ಡದಾಗುತ್ತಲೇ ಹೋಯಿತು. ಪರಸ್ಪರ ಪ್ರೀತಿ, ವಿಶ್ವಾಸ ಮಾಯವಾಗುತ್ತ ಹೋದವು. ಸಹಕಾರ ಎಂಬುದಕ್ಕೆ ಬೇರೆಯೇ ಅರ್ಥಗಳು ಅಂಟಿಕೊಳ್ಳತೊಡಗಿದವು. ನೈತಿಕ ನೆಲಗಟ್ಟು ಎಂಬುದು ಇಲ್ಲವಾಯಿತು. ಗಾಂಧೀ, ಅಂಬೇಡ್ಕರ್, ಲೋಹಿಯಾ ಇವರ್ಯಾರೂ ಭಾರತಕ್ಕೆ ಈ ಸ್ಥಿತಿ ಬಂದೆರಗಬಹುದೆಂದು ಊಹಿಸಿರಲಿಲ್ಲ. ಅಂಥ ಸ್ಥಿತಿಯಲ್ಲಿ ನಾವಿಂದು ನಿಂತಿದ್ದೇವೆ.
ಇಂಥ ಸ್ಥಿತಿಯ ನಡುವೆಯೂ ನಿಜವಾದ ‘ಸಮಾಜವಾದ’ಕ್ಕಾಗಿ ಹಂಬಲಿಸುವ ಮನಸ್ಸುಗಳು ಇನ್ನೂ ಉಳಿದುಕೊಂಡಿರುವುದು ನಮ್ಮ ಪ್ರಜಾಪ್ರಭುತ್ವದ ಬಗ್ಗೆ ಮಾತ್ರವಲ್ಲ, ಸಮಾಜವಾದದ ಬಗೆಗೂ ನಮ್ಮ ಕನಸುಗಳನ್ನು ಇನ್ನೂ ಚಿಗುರಿಸಲು ನೆರವಾಗಿವೆ. ಸಮಾಜವಾದೀ ಸಮಾಜಕ್ಕಾಗಿ ಕನಸಿದ ಮಹಾನ್ ಚಿಂತಕರ ವಿಚಾರಧಾರೆಯಿಂದ ಪ್ರಭಾವಿತರಾದ ಅನೇಕರು ಇದಕ್ಕೆ ಕಾರಣವಿರಬಹುದು. ಎಳೆಯ ತಲೆಮಾರಿಗೆ ಯಾವ ವಿಚಾರಧಾರೆಯೂ ಬೇಡವೇನೋ ಎನ್ನುವ ಈ ಹೊತ್ತಿನಲ್ಲೂ ಸಮಾಜವಾದೀ ಆಶಯಕ್ಕೆ ಬೆಂಬಲ ನೀಡುವಂಥ ಚಟುವಟಿಕೆಗಳು ನಡೆಯುತ್ತಲೇ ಇವೆ. ಮತಧರ್ಮಗಳನ್ನು ಒಂದು ಪ್ರಬಲ ಅಸ್ತ್ರದಂತೆ ಬಳಸಿ ರಾಜಕೀಯ ದಾಳಗಳನ್ನು ನಡೆಸುತ್ತಿರುವ ಚುನಾವಣೆಗಳನ್ನು ನಾವು ನೋಡುತ್ತಿರುವಂತೆಯೇ, ಮತಧರ್ಮಗಳನ್ನು ಧಿಕ್ಕರಿಸುತ್ತಿರುವ ತಲೆಮಾರನ್ನೂ ನಾವು ನೊಡುತ್ತಿದ್ದೇವೆ. ಇಂಥವರ ಸಂಖ್ಯೆ ಸಣ್ಣದು ಎಂಬುದು ನಿಜ. ಆದರೆ ನಮ್ಮ ಆರ್ಥಿಕ, ಸಾಮಾಜಿಕ ಸನ್ನಿವೇಶಗಳೇ ಮತಧರ್ಮಗಳನ್ನು ಮೀರುವ ಸನ್ನಿವೇಶವನ್ನು ಸೃಷ್ಟಿಮಾಡುತ್ತಿವೆ. ಪ್ರೇಮ ವಿವಾಹಗಳು ಇವತ್ತಿಗೂ ಚಾಲ್ತಿಯಲ್ಲಿವೆ ಮತ್ತು ಹೆಚ್ಚುತ್ತಿವೆ. ಜಾತಿಮತಗಳು ಇಂಥ ಮದುವೆಗಳಲ್ಲಿ ಮುಖ್ಯವಾಗುವುದಿಲ್ಲ. ವಿದ್ಯೆ ಉದ್ಯೋಗಗಳು ಕಾರಣವಾಗಿ ಬೇರೆಯ ರಾಜ್ಯ ಮತ್ತು ರಾಷ್ಟ್ರಗಳಿಗೆ ಹೋಗುತ್ತಿರುವ ನಮ್ಮ ತರುಣ ತರುಣಿಯರು ಮತಧರ್ಮಗಳ ಗೆರೆಗಳನ್ನು ದಾಟುವುದು ಅನಿವಾರ್ಯವಾಗುತ್ತಿದೆ. ಅಂಥವರ ನಡುವಿನ ಪ್ರೇಮ ವಿವಾಹಗಳು ಜಾತಿರಹಿತ ಸಮಾಜ ನಿಮರ್ಾಣಕ್ಕೆ ಸಣ್ಣ ಕೊಡುಗೆಯನ್ನಾದರೂ ನೀಡುತ್ತಿವೆ. ಇಷ್ಟಾದರೂ, ಜಾತಿ ವರ್ಗಗಳನ್ನು ಮೀರುವ ಪ್ರಯತ್ನಗಳು ದೊಡ್ಡದಾಗಿ ನಡೆಯಬೇಕು. ನಮ್ಮ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನೇ ನಾವು ಹೊಸದಾಗಿ ರೂಪಿಸಿಕೊಳ್ಳಬೇಕಾಗಿದೆ. ನಮ್ಮ ಆರ್ಥಿಕ ನೀತಿಯನ್ನಂತೂ ಹೊಸದಾಗಿಯೇ ಕಟ್ಟಿಕೊಳ್ಳುವುದು ನಮಗೆ ಅನಿವಾರ್ಯವಾಗಬೇಕು. ಭಾರತದ ರಾಜಕಾರಣದಲ್ಲಿ ಏಕಾಏಕಿ ಹುಟ್ಟಿಕೊಂಡ ‘ಆಮ್ ಆದ್ಮಿ’ ಪಕ್ಷದಲ್ಲಿ ಕೊರತೆಗಳು ಇವೆಯಾದರೂ, ಸಮಾಜವಾದಿ ಚಿಂತನೆಯ ಹೊಸ ಮೊಳಕೆಗಳು ಅಲ್ಲಿ ಕಾಣಿಸುತ್ತಿರುವುದು ನಿಜ.
ಪ್ರೇಮ ವಿವಾಹಗಳು ಜಾತಿಯನ್ನು ಮೀರುವ ದಿಕ್ಕಿನಲ್ಲಿ ಚಲಿಸುತ್ತಿವೆ ಎಂಬುದು ನಿಜ. ಆದರೆ ಸರಳವಿವಾಹಗಳು ಮಾತ್ರ ಸಾಕಾರಗೊಳ್ಳುತ್ತಿಲ್ಲ. ಹಣ ಹರಿದಾಡುತ್ತಿರುವ ಈ ದಿನಗಳಲ್ಲಿ ಮಧ್ಯಮ ವರ್ಗ ಮತ್ತು ಮೇಲ್ಮಧ್ಯಮ ವರ್ಗ ಅದ್ಧೂರಿಯ ಕಡೆಗೇ ತಿರುಗಿದೆ ಮತ್ತು ಅದ್ಧೂರಿಯ ಮದುವೆಗಳೇ ಪ್ರತಿಷ್ಠೆಯ ಮಾನದಂಡಗಳಾಗಿವೆ. ನಮ್ಮ ಸಕರ್ಾರಗಳು ಕೂಡಾ ಈ ದಿಕ್ಕಿನ ಚಿಂತನೆಗೇ ಕುಮ್ಮಕ್ಕು ಕೊಡುತ್ತಿವೆ. ಕೊನೆಮೊದಲಿಲ್ಲದಂತೆ ತಲೆ ಎತ್ತುತ್ತಿರುವ ‘ಕಲ್ಯಾಣ (ಯಾರ ಕಲ್ಯಾಣ?) ಮಂಟಪ’ಗಳಂತೂ ಈ ದೇಶದ ಬಡವರನ್ನು ಅಣಕಿಸುತ್ತಿರುವಂತೆ ತೋರುತ್ತಿವೆ. ಅಷ್ಟೇ ಅಲ್ಲ ಅವು ತಲೆ ಎತ್ತಿದ ಪರಿಸರವನ್ನು ತೀರ ಕೆಟ್ಟದಾಗಿ ಕೆಡಿಸುತ್ತಿವೆ. ರಾಜ್ಯ ಸರ್ಕಾರಗಳು ಈ ದುರಂತವನ್ನು ಕಣ್ಣೆತ್ತಿ ನೋಡದ ಸ್ಥಿತಿಯಲ್ಲಿವೆ. ಕಲ್ಯಾಣ ಮಂಟಪಗಳು ದೊಡ್ಡ ಆದಾಯ ಮೂಲಗಳಾಗಿ ಪರಿವರ್ತನೆಯಾಗುತ್ತಿವೆ.
ಸಾಮೂಹಿಕ ವಿವಾಹಗಳೇನೋ ಮೆಚ್ಚಬೇಕಾದ ಸಂಗತಿಗಳೇ. ಆದರೆ ಇಲ್ಲಿಯೂ ಹಲವಾರು ದೋಷಗಳಿವೆ; ವ್ಯಂಗ್ಯಗಳೂ ಇವೆ. ತಾಳಿ, ಪಂಚೆ, ಸೀರೆಗಳನ್ನು ಉಚಿತವಾಗಿ ಕೊಡುತ್ತ ಈ ಬಡವರನ್ನು ಗೇಲಿಮಾಡುವ, ಅವರ ಆರ್ಥಿಕ ಅಸಹಾಯಕತೆಯನ್ನು ಎತ್ತಿತೋರಿಸುವ ಕ್ರೌರ್ಯವೂ ಇಂಥ ವಿವಾಹಗಳ ಹಿಂದೆ ಇದೆ. ಇಂಥ ಸಾಮೂಹಿಕ ವಿವಾಹಗಳು ಹೆಚ್ಚಾಗಿ ನಡೆಯುತ್ತಿರುವುದು ಧಾರ್ಮಿಕ ಸಂಸ್ಥೆಗಳ ಆಶ್ರಯದಲ್ಲಿಯೇ. ಹೀಗಾಗಿ ಮತಧರ್ಮಗಳನ್ನು ಗಟ್ಟಿಗೊಳಿಸುವ, ಮೌಢ್ಯಗಳನ್ನು ಬೆಳೆಸುವ ಹುನ್ನಾರವೇ ಹಿನ್ನೆಲೆಯಲ್ಲಿ ಕ್ರಿಯಾಶೀಲವಾಗಿರುತ್ತದೆ.
ಇಂಥ ಹೊತ್ತಿನಲ್ಲಿ ಕುವೆಂಪು ಅವರ ವೈಚಾರಿಕ ಚಿಂತನೆಗೆ ಬೆಂಬಲಕೊಡುವ ‘ಮಂತ್ರ ಮಾಂಗಲ್ಯ’ ಮದುವೆಗಳು ಅರ್ಥಪೂರ್ಣವಾಗುತ್ತವೆ. ಆದರೆ ಇಂಥ ಮದುವೆಗಳು ಹೆಚ್ಚು ಜನಪ್ರಿಯವಾಗುತ್ತಿಲ್ಲ. ‘ಮಂತ್ರ ಮಾಂಗಲ್ಯ’ ಮದುವೆಗಳಲ್ಲಿ ಸರಳತೆ ಮಾತ್ರ ಕಾಣುವುದಿಲ್ಲ. ಕುವೆಂಪು ಅವರು ತಮ್ಮ ಮಗ ಪೂರ್ಣಚಂದ್ರ ತೇಜಸ್ವಿ ಅವರ ವಿವಾಹದ ವಿಚಾರದಲ್ಲಿ ತಳೆದ ನಿಲುವು, ಸರಳತೆ ಇಡೀ ನಾಡಿಗೆ ಆದರ್ಶವಾಗಬೇಕು. ಸರ್ಕಾರ ಕೂಡಾ ಇಂಥ ಮದುವೆಗಳಿಗೆ ಬೆಂಬಲವಾಗಿ ನಿಲ್ಲಬೇಕು.
ಕರ್ನಾಟಕದಲ್ಲಿ ಹೊಸ ಬೆಳಕಿನಂತೆ ಕಾಣಿಸಿಕೊಂಡ ‘ಮಾನವ ಮಂಟಪ’ ಇಂಥ ಸರಳ, ಜಾತ್ಯತೀತ, ಧರ್ಮಾತೀತ ಮದುವೆಗಳಿಗೆ ವೇದಿಕೆಯಾಗುವುದರ ಮೂಲಕ ಸಮಾಜವಾದಿ ಚಿಂತನೆಯನ್ನು ಚಿಗುರಿಸಿತು. ಈ ವೇದಿಕೆಯನ್ನು ಬಳಸಿಕೊಂಡು ನೂರಾರು ತರುಣ ತರುಣಿಯರು ತಮ್ಮ ದಾಂಪತ್ಯ ಜೀವನವನ್ನು ಪ್ರವೇಶಿಸಿದರು. ಇದು ಖಂಡಿತವಾಗಿಯೂ ಹೊಸ ತಲೆಮಾರಿಗೆ ಹೊಸ ಭರವಸೆಯನ್ನು ಮೂಡಿಸಿದ್ದು ಹೌದು. ಆದರೆ ಇದನ್ನು ಗಟ್ಟಿಗೊಳಿಸುವ, ಇಡೀ ರಾಜ್ಯಕ್ಕೇ ಇದು ವ್ಯಾಪಿಸುವಂತೆ ಮಾಡುವ ಪ್ರಯತ್ನ ಅಷ್ಟಾಗಿ ಮುಂದುವರಿಯಲಿಲ್ಲ. ‘ಮಾನವ ಮಂಟಪ’ ಈಗ ಕೊಂಚ ಮಂಕಾಗಿದೆ.
ಈ ಮಧ್ಯೆ ನಮ್ಮ ಸಮಾಜವಾದಿ ಮಿತ್ರರು ತಮ್ಮ ಮಕ್ಕಳ ಮದುವೆಯನ್ನು ಮಾಡುವಾಗ ಮತಧರ್ಮಗಳನ್ನು ಮೀರುತ್ತಿದ್ದಾರೆ. ಇದು ಸಂತೋಷದ ಸಂಗತಿ. ಜೊತೆಗೆ ಹೊಸ ತಲೆಮಾರಿಗೆ ಸೇರಿದ ಅವರ ಮಕ್ಕಳೂ ಈ ಆಶಯವನ್ನು ಬೆಂಬಲಿಸುತ್ತಿದ್ದಾರೆ. ಇವರ ಸಂಖ್ಯೆ ದೊಡ್ಡದಿಲ್ಲದೆ ಇರಬಹುದು. ಆದರೆ ಒಂದು ನಂಬಿಕೆಯನ್ನು ಮುಂದೆ ಕೊಂಡೊಯ್ಯುವ ದಿಕ್ಕನಲ್ಲಿ ಇದು ಮಹತ್ವದ್ದು. ಆದರೆ ಈ ಸಮಾಜವಾದಿ ಮಿತ್ರರು ಕೂಡಾ ಸರಳ ವಿವಾಹದಲ್ಲಿ, ಮಂತ್ರ ಮಾಂಗಲ್ಯದಲ್ಲಿ ನಂಬಿಕೆ ಕಳೆದುಕೊಳ್ಳುತ್ತಿರುವುದು, ಮದುವೆಯೆಂದರೆ ಅದ್ಧೂರಿಯ ಮದುವೆ, ಅದ್ಧೂರಿಯಲ್ಲಿಯೇ ತಮ್ಮ ಪ್ರತಿಷ್ಠೆ ಇದೆ ಎಂದು ಭಾವಿಸಿರುವುದು ದುರಂತ. ಅದ್ಧೂರಿಯ ಮದುವೆಗಳ ಬಗ್ಗೆ ನಾಚಿಕೆಪಟ್ಟುಕೊಳ್ಳುವ ಸಂವೇದನೆಯನ್ನೂ ಇಂಥ ಮಿತ್ರರು ಕಳೆದುಕೊಂಡಿರುವುದು ಯಾವುದರ ಮುನ್ಸೂಚನೆ?
(ಸೌಜನ್ಯ: ಸಂಯುಕ್ತ ಕರ್ನಾಟಕ)



ಅದ್ದೂರಿ ಮದುವೆಗಳನ್ನು ನಿಯಂತ್ರಿಸುವ ಬಗ್ಗೆ ಸಿದ್ಧರಾಮಯ್ಯನವರ ಸರಕಾರ ಗಟ್ಟಿಯಾಗಿ ಆಲೋಚಿಸುತ್ತ ಅದ್ದೂರಿ ಮದುವೆಗಳಿಗೆ ತೆರಿಗೆ ಹಾಕುವ ಮಾತನ್ನಾಡಿತು. ಅದರ ಜಾರಿಯ ವ್ಯಾವಹಾರಿಕತೆಯ ಬಗ್ಗೆ ಭಿನ್ನಾಭಿಪ್ರಾಯಗಳು ಸಾಧ್ಯ. ಅದರೆ ಅಂಥ ಅಲೋಚನೆಯನ್ನೇ ಹಾಸ್ಯಾಸ್ಪದವೆಂಬಂತೆ ಮಾಧ್ಯಮಗಳು ಬಿಂಬಿಸುತ್ತಿರುವುದು ಅರೋಗ್ಯಕರ ಲಕ್ಷಣವಾಗಿ ಕಾಣುವುದಿಲ್ಲ.