ಪರಿಷತ್ತಿನ ಚಲನೆಯಲ್ಲಿ ಇದೊಂದು ತಿರುವಿನ ಸಂದರ್ಭ

ಕನ್ನಡಿಗರ ಮುಂದೆ ನಿಂತಿರುವ ಮನು ಬಳಿಗಾರ

g p basavaraju

ಜಿ.ಪಿ.ಬಸವರಾಜು

ನೂರು ವರ್ಷಗಳನ್ನು ಪೂರೈಸಿರುವ ಕನ್ನಡ ಸಾಹಿತ್ಯ ಪರಿಷತ್ತು ಮತ್ತೆ ಕನ್ನಡಿಗರ ಮುಂದೆ ನಿಂತಿದೆ. ನಿವೃತ್ತ ಅಧಿಕಾರಿಯಾಗಿರುವ ಮನು ಬಳಿಗಾರ ಅವರು ಈ ಪರಿಷತ್ತಿನ 25ನೇ ಅಧ್ಯಕ್ಷರಾಗಿ ಪರಿಷತ್ತಿನ ಮುಂದೆ ನಿಂತಿದ್ದಾರೆ. ಕನ್ನಡ ನಾಡು ಈ ಸಂಸ್ಥೆಯನ್ನು ಮತ್ತು ಈ ಅಧಿಕಾರಿಯನ್ನು ಹೊಸ ಬೆಳಕಿನಲ್ಲಿ ನೋಡುತ್ತಿದೆ.

ka sa paಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎಂದು ಅಲಂಕಾರಿಕವಾಗಿ ಹೇಳುವ ಈ ಸಂಸ್ಥೆ ಕನ್ನಡಿಗರ ನೂರು ವರ್ಷಗಳ ಬದುಕನ್ನು ನೋಡಿರುವ ಸಂಸ್ಥೆ. ಒಂದು ಶತಮಾನದ ಏಳುಬೀಳುಗಳನ್ನು ಈ ಪರಿಷತ್ತು ಬಲ್ಲದು. ಸ್ವಾತಂತ್ರ್ಯ ಪೂರ್ವದಲ್ಲಿದ್ದ ರಾಜಸೇವಾಸಕ್ತಿ, ಸ್ವಾತಂತ್ರ್ಯಾನಂತರದ ಪ್ರಜಾಸಕ್ತಿ ಎರಡನ್ನೂ ಈ ಪರಿಷತ್ತು ಬಲ್ಲದು. ಕರ್ನಾಟಕ ಎನ್ನುವ ರಾಜ್ಯವೇ ಇಲ್ಲದ ದಿನಗಳನ್ನೂ ಮತ್ತು ಕರ್ನಾಟಕ ರಾಜ್ಯ ರಚನೆಯಾದ ನಂತರದ ದಿನಗಳನ್ನೂ ಈ ಸಂಸ್ಥೆ ತಿಳಿದಿದೆ.

ಚದುರಿಹೋಗಿದ್ದ ಕನ್ನಡದ ಭಾಗಗಳನ್ನು ಒಂದುಗೂಡಿಸುವುದೇ ಬಹುದೊಡ್ಡ ಸವಾಲಾಗಿದ್ದ ದಿನಗಳಲ್ಲಿ ಪರಿಷತ್ತು ಒಂದು ಆಶಾಕಿರಣದಂತೆ ಕಂಡಿರಬೇಕು. ಪದಕೋಶ ರಚನೆಯಿಂದ ಹಿಡಿದು, ಪ್ರಾಚೀನ ಕನ್ನಡದ ಅಪೂರ್ವ ಗ್ರಂಥಗಳ ಪ್ರಕಟಣೆಯೇ ಬಹುದೊಡ್ಡ ಕೆಲಸವಾಗಿ ಕಂಡಿದ್ದ ದಿನಗಳಲ್ಲಿ ಅಂಥ ಕೆಲಸಕ್ಕೆ ಕೈಹಾಕಿದ ಪರಿಷತ್ತು ಕನ್ನಡಿಗರ ಆಶೆಗಳನ್ನು ಚಿಗುರಿಸುವ ವಸಂತ ಕಾಲವೂ ಆಗಿರಬಹುದು. ಕನ್ನಡಿಗರೆಲ್ಲ ಭಾವನಾತ್ಮಕವಾಗಿ ಒಂದೆಡೆ ಸೇರುವುದೇ ಮಹತ್ವದ ಸಾಧನೆಯಾಗಿದ್ದ ಕಾಲದಲ್ಲಿ ಅಂಥ ಕೆಲಸವನ್ನು ಮಾಡಿದ ಪರಿಷತ್ತು ಸಹಜವಾಗಿಯೇ ಕನ್ನಡಿಗರ ನೆಲೆಯಾಗಿ ಗೌರವವನ್ನು ಪಡೆದುಕೊಂಡಿತ್ತು. ಈಗ ಅದೆಲ್ಲ ಇತಿಹಾಸದ ವೈಭವ.

ಈ ಮೆಲುಕಿನಲ್ಲಿಯೇ ಕನ್ನಡಿಗ ತುಸು ಹೊತ್ತು ಉಲ್ಲಸಿತನಾಗಬಹುದು. ಆದರೆ ಹೊಸ ಕಾಲದ ಸಮಸ್ಯೆಗಳ ಎದುರು ಅವನ ಉಲ್ಲಾಸವೂ ಹೆಚ್ಚು ಹೊತ್ತು ಉಳಿಯುವುದಿಲ್ಲ. ವರ್ತಮಾನ ಎನ್ನುವುದು ಎಲ್ಲ ಕಾಲಕ್ಕೂ ಸುಡುತ್ತಲೇ ಇರುತ್ತದೆ. ಅದಕ್ಕೆ ಎದೆಕೊಡುವ ಧೀರತನ ತೋರುವುದು ವ್ಯಕ್ತಿಯ ಅಥವಾ ಸಂಸ್ಥೆಯ ಹಿರಿಮೆಯನ್ನು ಎತ್ತಿಹಿಡಿಯುತ್ತದೆ. ಇಲ್ಲವಾದರೆ ವ್ಯಕ್ತಿಯೂ, ಸಂಸ್ಥೆಯೂ ಮಸುಕಾಗುವುದು ಸಹಜವಾಗಿಬಿಡುತ್ತದೆ.

ಮನು ಬಳಿಗಾರ ಅಧ್ಯಕ್ಷರಾಗಿ ಆಯ್ಕೆಯಾಗಿ ಬಂದಿರುವ ಕಾಲಘಟ್ಟವೇ ಮಹತ್ವದ್ದು. ಪರಿಷತ್ತಿನ ಚಲನೆಯಲ್ಲಿ ಇದೊಂದು ತಿರುವಿನ ಸಂದರ್ಭ. ಪರಿಷತ್ತು ಚಲಿಸುತ್ತಿದೆಯೊ, ಸ್ಥಗಿತವಾಗಿದೆಯೋ ಎಂಬುದನ್ನು ಪರೀಕ್ಷಿಸಿಕೊಳ್ಳಬೇಕಾದ ಹೊಣೆಯೂ ಅಧ್ಯಕ್ಷರ ಮೇಲಿರುತ್ತದೆ. ಹೊಸ ಅಧ್ಯಕ್ಷರ ಚಲನೆಯೂ ಈ ಹಂತದಲ್ಲಿ ಬಹಳ ಮುಖ್ಯವಾದದ್ದೇ. ಮನು ಬಳಿಗಾರ ಅವರ ಚಲನೆ ಹೇಗಿರಬಹುದು? ಸಂದರ್ಶನಲ್ಲಿ ಅವರಾಡಿದ ಮಾತುಗಳಲ್ಲಿ ಈ ಸೂಚನೆ ಸಿಕ್ಕಬಹುದು. ಹೊಸದಾಗಿ ಆಯ್ಕೆಯಾಗಿ ಬಂದ ಅಧ್ಯಕ್ಷರು ಮಾತನಾಡುವ ವರಸೆಯಲ್ಲಿಯೇ ಮನು ಬಳಿಗಾರ ಮಾತನಾಡಿದ್ದಾರೆ. ಸರ್ಕಾರಿ ಯಂತ್ರಕ್ಕೆ ಸಿಕ್ಕು ಅನೇಕ ವರ್ಷಗಳನ್ನು ಸವೆಸಿದ ಅಧಿಕಾರಿಯೊಬ್ಬರಿಗೆ ಹೊಸ ಚಿಂತನೆಗಳು, ಹೊಸ ಕನಸುಗಳು, ಹೊಸ ಹುಮ್ಮಸ್ಸು ಕಷ್ಟ. ಆದರೂ ಬಳಿಗಾರ ಹೊಸ ಕನಸನ್ನು ಕಟ್ಟಿ ಹೆಜ್ಜೆ ಹಾಕುವುದಾದರೆ ಅದು ಪರಿಷತ್ತಿನ ಚಲನೆಗೆ, ಕನ್ನಡಿಗರ ಆಶಯಗಳಿಗೆ ಹೊಸ ದಿಕ್ಕನ್ನು ತರಬಹುದು.

manu baligrಪರಿಷತ್ತು ಸಾಮಾನ್ಯ ಸಂಸ್ಥೆಯಂತೆ ಕಂಡರೂ ಅದು ಸಾಮಾನ್ಯ ಸಂಸ್ಥೆಯಲ್ಲ. ಕನಸಿನಲ್ಲಿಯೋ ಎಂಬಂತಾದರೂ ಕನ್ನಡದ ಜನ ಈ ಪರಿಷತ್ತನ್ನು ಗಮನಿಸಿದ್ದಾರೆ. ಪರಿಷತ್ತಿನ ‘ಜಾತ್ರೆ’ಗಳಲ್ಲಿ ಭಾಗವಹಿಸಿ, ಧೂಳಿನಲ್ಲಿ ಮಿಂದು ಹೊರಬಂದಿದ್ದಾರೆ. ಹೀಗೆ ಹೊರಬರುವಾಗ ಅನೇಕ ಸವಿ ನೆನಪುಗಳನ್ನು, ಒಂದೋ ಎರಡೊ ಕನ್ನಡ ಪುಸ್ತಕಗಳನ್ನು, ಸ್ಥಳೀಯ ಊಟದ ರುಚಿಯನ್ನು ಕಟ್ಟಿಕೊಂಡೇ ತಮ್ಮ ಊರುಗಳನ್ನು ಸೇರಿದ್ದಾರೆ. ಕನ್ನಡದ ಮಾತುಗಳು ಅವರ ಕಿವಿಯ ಮೇಲೆ ಬಿದ್ದಿವೆ; ಕನ್ನಡದ ಭಾವ ಅವರ ಎದೆಗಳಲ್ಲಿ ಓಡಾಡಿದೆ. ಇದನ್ನು ಬಹುಕಾಲ ಅವರು ತಮ್ಮ ಜೊತೆಯಲ್ಲಿಯೇ ಇಟ್ಟುಕೊಂಡಿದ್ದಾರೆ. ಜನಪ್ರತಿನಿಧಿಗಳು, ಸಕರ್ಾರ, ಸ್ಥಳೀಯ ಸಂಸ್ಥೆಗಳು ಹೀಗೆ ಎಲ್ಲರನ್ನೂ ಈ ಪರಿಷತ್ತು ತನ್ನ ಕಡೆಗೆ ತುಸು ಹೊತ್ತಾದರೂ ಸೆಳೆದುಕೊಂಡಿದೆ. ಪ್ರತಿವರ್ಷದ ಜಾತ್ರೆಗೆ ಸರ್ಕಾರ ಕೋಟಿಗಟ್ಟಲೆ ಹಣವನ್ನು ಕೊಟ್ಟು, ತನ್ನ ಕನ್ನಡ ಪ್ರೇಮವನ್ನು ತೋರಿಸಿದೆ. ಇದು ಸಣ್ಣ ಸಂಗತಿಯಲ್ಲ.

ಪರಿಷತ್ತಿನ ಚಟುವಟಿಕೆಗಳಿಂದಲೂ ಕನ್ನಡಿಗರು ದೂರವಾಗಿಲ್ಲ. ಈ ಸಂಸ್ಥೆಗೆ ನಡೆದ ಚುನಾವಣೆಯನ್ನೇ ನೋಡಿ. ಸುಮಾರು ಎರಡು ಲಕ್ಷ ಮತದಾರರಿರುವ ಈ ಸಂಸ್ಥೆಯ ಚುನಾವಣೆಯಲ್ಲಿ ಪೈಪೋಟಿ ನಡೆಸುವುದೆಂದರೆ ಲಕ್ಷಾಂತರ ರೂಪಾಯಿ ಖರ್ಚಿಗೆ ಸಿದ್ಧವಾಗಬೇಕು. ಇದು ಕನ್ನಡಿಗರು ಹೆಮ್ಮೆಪಡಬೇಕಾದ ಸಂಗತಿಯೋ, ಚಿಂತೆಗೀಡಾಗಬೇಕಾದ ಸಂಗತಿಯೊ? ಕನ್ನಡದ ಬಗ್ಗೆ ಆಸಕ್ತಿ ಇರುವ ಧೀಮಂತನೊಬ್ಬ ಹೊಸ ಹಾದಿಯಲ್ಲಿ ಪರಿಷತ್ತನ್ನು ಮುನ್ನಡೆಸುತ್ತೇನೆಂದು ಕನಸು ಕಂಡರೆ ಆತ ಅಥವಾ ಆಕೆ ಈ ಪರಿಷತ್ತಿನ ಅಧ್ಯಕ್ಷನಾಗುವುದು ಸುಲಭವಲ್ಲ. ಹಣವಂತನೇ ಚುನಾವಣೆಯಲ್ಲಿ ನಿಲ್ಲಬೇಕು, ಇಲ್ಲವೇ ಹಣವಂತರ ಬೆಂಬಲ ಪಡೆದವನೇ ಇಂಥ ಸಾಹಸಕ್ಕೆ ಕೈಹಾಕಬೇಕು. ಇದು ಕನ್ನಡಿಗರನ್ನು ಚಿಂತೆಗೀಡುಮಾಡಬೇಕಾದ ಸಂಗತಿಯಾಗಬೇಕು. ಪರಿಷತ್ತಿನ ಚುನಾವಣೆಯನ್ನು ಮೊದಲು ಸರಳಗೊಳಿಸಬೇಕಾದ ಅಗತ್ಯವಿದೆ ಎಂಬ ಸತ್ಯ ಹೊಸ ಪದಾಧಿಕಾರಿಗಳಿಗೆ ಹೊಳೆಯಬೇಕು.

ಪರಿಷತ್ತಿನ ಈ ಚುನಾವಣೆಯ ಬಗ್ಗೆ ಅಪಾರ ಉತ್ಸಾಹ ತೋರಿಸುವ ನಮ್ಮ ಮಾಧ್ಯಮದವರು, ಈ ಚುನಾವಣೆಯಲ್ಲಿ ಸ್ಪರ್ಧಿಸಿದ ಹುರಿಯಾಳುಗಳ ಪೂರ್ಣಚಿತ್ರ ಕನ್ನಡಿಗರಿಗೆ ದಕ್ಕುವಂತೆ ಮಾಡಿದ ಉದಾಹರಣೆಯಿಲ್ಲ. ಚುನಾವಣೆಗೆ ಮುನ್ನವೇ ಸಂದರ್ಶನಗಳು ಪ್ರಕಟವಾಗಿಲ್ಲ. ಈ ಸಂದರ್ಶನಗಳು ಸ್ಪರ್ಧಾಳುಗಳ ಒಳ-ಹೊರಗನ್ನು ಬಯಲು ಮಾಡುವ ಸಂದರ್ಶನಗಳಾದರೆ ಮತದಾರನ ಆಯ್ಕೆ ಸುಲಭವಾಗುತ್ತದೆ. ಕನ್ನಡದ ವೇದಿಕೆಗಳೂ ಇಂಥ ಕೆಲಸವನ್ನು ಮಾಡಬಹುದು. ಇದು ಯಾವುದೂ ಇಲ್ಲದ ಹೊತ್ತಿನಲ್ಲಿ, ಹಣಚೆಲ್ಲುವ ದಾರಿಯಲ್ಲದೆ ಬೇರೆ ದಾರಿಯೇ ಇರುವುದಿಲ್ಲ. ಆಗ ಪರಿಷತ್ತಿನ ಚುನಾವಣೆ ಶಾಸನ ಸಭೆಗೆ ನಡೆಯುವ ಚುನಾವಣೆಯಂತೆಯೇ ಇರುತ್ತದೆ.

ಫೋಟೋ : ಅರ್ ಜಿ ಹಳ್ಳಿ ನಾಗರಾಜ್

ಫೋಟೋ : ಅರ್ ಜಿ ಹಳ್ಳಿ ನಾಗರಾಜ್

ಕನ್ನಡ ಸಾಹಿತ್ಯ ಪರಿಷತ್ತಿಗೆ (ಕಸಾಪ) ಆಯ್ಕೆಯಾಗಲು ಹುರಿಯಾಳುಗಳು ಯಾಕೆ ಉತ್ಸಾಹ ತೋರಿಸುತ್ತಾರೆ? ಬಹಳ ಮುಖ್ಯ ಕಾರಣವೆಂದರೆ ಇಲ್ಲಿ ಓಡಾಡುವ ಹಣಕಾಸು. ಪರಿಷತ್ತು ಪ್ರತಿವರ್ಷ ನಡೆಸುವ ಸಮ್ಮೇಳನಗಳು ಈ ಹಣದ ಹೊಳೆಯನ್ನು ಹರಿಸುತ್ತವೆ. ಏಳೆಂಟು ಕೋಟಿ ರೂಪಾಯಿ ಹಣ ಹರಿದಾಡುವುದೆಂದರೆ ಎಲ್ಲರ ಕಣ್ಣುಗಳೂ ಅಲ್ಲಿಯೇ. ಈ ಹಣದಲ್ಲಿ ಮುಕ್ಕಾಲುಪಾಲು ಹಣವನ್ನು ಸರ್ಕಾರ ಕೊಡುತ್ತದೆ. ಉಳಿದದ್ದು ಕನ್ನಡಿಗರಿಂದ, ಸ್ಥಳೀಯ ಸಂಸ್ಥೆಗಳಿಂದ ಸಂಗ್ರಹವಾಗುತ್ತದೆ. ಈ ಹಣದಲ್ಲಿ ತಮ್ಮ ಪಾಲನ್ನು ಕಿಸೆಗೆ ಇಳಿಸುವುದು ಹೇಗೆಂಬುದೇ ಹಲವರ ಲೆಕ್ಕಾಚಾರ. ಇದಕ್ಕೆ ಅಪವಾದವಾಗಿ ಕೆಲವರು ಇರಬಹುದಾದರೂ, ಅಂಥವರು ಬೆಳಕಿಗೆ ಬರುವುದೇ ಇಲ್ಲ. ಅವರು ‘ಪ್ರಯೋಜನವಿಲ್ಲದವರಾಗಿ’ ಕಾಣಬಹುದು.

ಕನ್ನಡಿಗರಿಗೆ ಇಂಥ ಸಮ್ಮೇಳನಗಳು, ಜಾತ್ರೆಗಳು ಬೇಕೆ ಎನ್ನುವುದಕ್ಕಿಂತ, ಈ ಸಮ್ಮೇಳನಗಳನ್ನು ಸರಳವಾಗಿ, ಹೆಚ್ಚು ಅರ್ಥಪೂರ್ಣವಾಗಿ ಮಾಡುವುದು ಸಾಧ್ಯವಾಗಬೇಕು. ಸರ್ಕಾರಗಳ, ಮಠಾಧೀಶರ, ದೊಡ್ಡ ದೊಡ್ಡ ವಾಣಿಜ್ಯೋದ್ಯಮಿಗಳ ಓಲೈಕೆಯನ್ನು ಬಿಟ್ಟು ಇಂಥ ಸಮ್ಮೇಳನಗಳನ್ನು ಮಾಡುವುದು ಸಾಧ್ಯವೇ ಎಂದು ಚಿಂತಿಸಬೇಕು. ಕನ್ನಡಿಗರ ಮುಂದೆ ದೊಡ್ಡ ಸವಾಲಾಗಿ ನಿಲ್ಲುವ ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಸಾಂಸ್ಕೃತಿಕ ಪ್ರಶ್ನೆಗಳನ್ನು ಎತ್ತಿಕೊಂಡು ಇಂಥ ಸಮ್ಮೇಳನಗಳು ನಡೆಯಬೇಕು.

ನಾಡು-ನುಡಿಯ ಪ್ರಶ್ನೆಗಳು ಪರಿಷತ್ತಿನ ಜೀವಾಳ ಎಂದು ತಾತ್ವಿಕವಾಗಿ ಆಗಾಗ ಹೇಳುತ್ತಿದ್ದರೂ, ಇವತ್ತಿಗೂ ಪರಿಷತ್ತು ಇಂಥ ಸಮಸ್ಯೆಗಳಿಗೆ ದಿಟ್ಟವಾಗಿ ಎದುರಾದ ಉದಾಹರಣೆಗಳು ತೀರ ಅಪರೂಪ. ಶಿಕ್ಷಣ ಮಾಧ್ಯಮಕ್ಕೆ ಸಂಬಂಧಿಸಿದ ಪ್ರಶ್ನೆ ಸುಪ್ರೀಂ ಕೋರ್ಟ್ ಮುಟ್ಟಿದರೂ, ಪರಿಷತ್ತು ತನ್ನ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿರ್ವಹಿಸಲಿಲ್ಲ; ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿಯೂ ಹೊಳೆಯಲಿಲ್ಲ. ಇವತ್ತಿಗೂ ಗಡಿ ಭಾಗದಲ್ಲಿ ಕನ್ನಡಿಗರು ಅನುಭವಿಸುತ್ತಿರುವ ನೋವು ತೀವ್ರವಾದದ್ದೇ. ಹಲವು ಭಾಷೆಗಳ ತೌರಾಗಿರುವ ಕಾಸರಗೋಡು ಭಾಗದಲ್ಲಿ ಮಲೆಯಾಳಂ ಭಾಷೆಯನ್ನು ಶಿಕ್ಷಣದಲ್ಲಿ ಮತ್ತು ಆಡಳಿತದಲ್ಲಿ ಹೇರಲಾಗುತ್ತಿದೆ. ಅಲ್ಲಿನ ಜನರ ಹೋರಾಟಕ್ಕೆ ಇಡೀ ಕರ್ನಾಟಕದ ಬೆಂಬಲ ಸಿಕ್ಕುತ್ತಿಲ್ಲ. ಬೆಳಗಾಂ ಭಾಗದಲ್ಲಿ ಮರಾಠಿಯ ಒತ್ತಡ ಹೆಚ್ಚುತ್ತಿದೆ. ಇಂಥ ಒತ್ತಡಗಳು ಕರ್ನಾಟಕದ ಇತರ ಗಡಿಗಳಲ್ಲೂ ಇರಬಹುದು. ಪರಿಷತ್ತು ಇಂಥ ಪ್ರಶ್ನೆಗಳನ್ನು ಇಟ್ಟುಕೊಂಡು ಚಿಂತಿಸಬೇಕಾಗಿದೆ. ಹೋರಾಟವೊಂದೇ ಮಾರ್ಗವಲ್ಲ; ಸಹಬಾಳ್ವೆ, ಸಹೃದಯ ಒಡನಾಟ, ಸಹಕಾರ, ಪರಸ್ಪರ ಪ್ರೀತಿ, ಸಾಂಸ್ಕೃತಿಕ ವಿನಿಮಯ, ಗಡಿ-ಭಾಷೆಯನ್ನು ಮೀರಿದ ಬದುಕಿನ ಬಗ್ಗೆ ವಿವೇಕ ಅರಳಿಸುವುದು ಇತ್ಯಾದಿ ಕೆಲಸಗಳನ್ನು ಪರಿಷತ್ತು ಅರ್ಥಪೂರ್ಣವಾಗಿ ಮಾಡುವುದು ಏಕೆ ಸಾಧ್ಯವಿಲ್ಲ?

ka sa paಪರಿಷತ್ತಿನ ಗ್ರಂಥಾಲಯ ಹೇಗಿದೆ? ಪರಿಷತ್ತು ಈ ನೂರು ವರ್ಷಗಳಲ್ಲಿ ಪ್ರಕಟಿಸಿರುವ ಪುಸ್ತಕಗಳು ಎಷ್ಟು? ಮರುಮುದ್ರಣವನ್ನೇ ಕಾಣದ, ಆದರೆ ಕನ್ನಡಿಗರು ಹುಡುಕಾಡುತ್ತಿರುವ ಗ್ರಂಥಗಳನ್ನು ಮತ್ತೆ ಪರಿಷತ್ತು ಯಾಕೆ ಪ್ರಕಟಿಸಲು ಆಗುತ್ತಿಲ್ಲ? ಸಂಶೋಧನೆಗೆ ಇಲ್ಲಿ ಅವಕಾಶವಿಲ್ಲವೇ? ಭಾಷೆ, ಗಡಿ, ಸಂಸ್ಕೃತಿ, ಮಾಧ್ಯಮ ಇತ್ಯಾದಿ ಹಲವಾರು ಸಂಗತಿಗಳ ಗಂಭೀರ ಅಧ್ಯಯನಕ್ಕೆ ಮುಂದಾಗುವವರ ಬೆನ್ನು ಚಪ್ಪರಿಸಲು ಪರಿಷತ್ತಿನಲ್ಲಿ ಯೋಜನೆಗಳಿಲ್ಲವೇ? ಸಮ್ಮೇಳನದ ಅಧ್ಯಕ್ಷರ ಆಯ್ಕೆ ಎಂದರೆ ಅದೊಂದು ಜಾತಿ ರಾಜಕಾರಣವೇ? ಅಥವಾ ಗುಂಪುಗಾರಿಕೆಯ ಚಟುವಟಿಕೆಯೇ? ಇದೆಲ್ಲವನ್ನು ಬದಿಗೆ ಸರಿಸಿ, ಅರ್ಹರ ಆಯ್ಕೆ ಸಾಧ್ಯವಿಲ್ಲವೇ? ಇವತ್ತಿಗೂ ಕನ್ನಡದ ಲೇಖಕರು ತಮ್ಮ ಕೃತಿಗಳನ್ನು ಪ್ರಕಟಿಸುವ ನ್ಯಾಯವಂತರಾದ ಪ್ರಕಾಶಕರಿಗೆ ಪರಿತಪಿಸುತ್ತಲೇ ಇದ್ದಾರೆ. ಈ ಪ್ರಶ್ನೆಯನ್ನು ಪರಿಷತ್ತು ಯಾಕೆ ಗಮನಿಸುವುದಿಲ್ಲ? ಸಮ್ಮೇಳನಗಳಲ್ಲಿ ಪರಿಷತ್ತು ಪ್ರಕಟಿಸುವ ನೂರಾರು ಕೃತಿಗಳನ್ನು ಕನ್ನಡದ ಜನ ಓದಿರುವ ಉದಾಹರಣೆಯೇ ಇದ್ದಂತಿಲ್ಲ. ಈ ಕೃತಿಗಳ ಮೇಲೆ ಸುರಿದ ಹಣ ವ್ಯರ್ಥವಲ್ಲವೇ? ಇವೆಲ್ಲ ಹೊಸ ಪದಾಧಿಕಾರಿಗಳು ಕನ್ನಡಿಗರ ಜೊತೆ ಚಿಂತಿಸಬೇಕಾದ ವಿಚಾರಗಳೇ.

ಸರ್ಕಾರದ ಜೊತೆ ಮಧುರ ಸಂಬಂಧಕ್ಕೆ ಮುಂದಾಗುವ ಮೊದಲು ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಜೊತೆಗಿನ ಹೃದಯ ಸಂವಾದಕ್ಕೆ ಮುಂದಾಗಬೇಕು. ಆಗ ಕನ್ನಡದ ನಾಡಿಮಿಡಿತ ತಿಳಿಯಬಹುದು. ಜ್ವಲಂತ ಸಮಸ್ಯೆಗಳಿಗೆ ಪರಿಷತ್ತು ಎದುರಾಗಬಹುದು. ಆಗ ಪರಿಷತ್ತಿಗೆ ಹೊಸ ಕಳೆ ಬರಬಹುದು; ಹೊಸ ರೂಪ-ಚಹರೆಗಳು ಬರಬಹುದು. ಅದು ನಿಜವಾದ ಬದಲಾವಣೆಗೆ ದಾರಿಮಾಡಿಕೊಡುತ್ತದೆ. ಅದು ಪರಿಷತ್ತಿನಲ್ಲಾಗುವ ಬದಲಾವಣೆ ಮಾತ್ರ ಆಗಿರುವುದಿಲ್ಲ. ಕನ್ನಡಕ್ಕೆ ಸಂಬಂಧಿಸಿದ ಎಲ್ಲ ಮುಖಗಳಲ್ಲೂ ಆಗುವ ಬದಲಾವಣೆಯಾಗಿರುತ್ತದೆ. ಮನುಬಳಿಗಾರ್ ಮತ್ತು ಅವರ ತಂಡ ಇಂಥ ಬದಲಾವಣೆಗೆ ಯತ್ನಿಸಬೇಕು.

‍ಲೇಖಕರು admin

March 4, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

೧ ಪ್ರತಿಕ್ರಿಯೆ

  1. nandinarasimha

    ಪರಿಷತ್ತು ಈ ನೂರು ವರ್ಷಗಳಲ್ಲಿ ಪ್ರಕಟಿಸಿರುವ ಪುಸ್ತಕಗಳು ಎಷ್ಟು? ಮರುಮುದ್ರಣವನ್ನೇ ಕಾಣದ, ಆದರೆ ಕನ್ನಡಿಗರು ಹುಡುಕಾಡುತ್ತಿರುವ ಗ್ರಂಥಗಳನ್ನು ಮತ್ತೆ ಪರಿಷತ್ತು ಯಾಕೆ ಪ್ರಕಟಿಸಲು ಆಗುತ್ತಿಲ್ಲ?

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: