'ಅಳಿಯ ಸಂತಾನ’ – ವೆಂಕಟ್ರಮಣ ಹೆಗಡೆ ಬರೆದ ಕಥೆ

ವೆಂಕಟ್ರಮಣ ಹೆಗಡೆ

ಪಿ೦ಗಾಣಿ ಕಪ್ಪುಗಳ ಮೇಲೆ ಶುಭಾಷಯಗಳನ್ನೋ, ಚಿತ್ರಗಳನ್ನೋ ಛಾಪು ಮಾಡುವ ಅ೦ಗಡಿಯ ಈಶಾನ್ಯ ಭಾರತದ ಹುಡುಗ ಅ೦ಗಡಿಯ ಬಾಗಿಲನ್ನು ಆಗಷ್ಟೇ ತೆರೆಯುತ್ತಿದ್ದ. ಅವನ ಕಿವಿಯಲ್ಲಿದ್ದ ಹರಳಿನ ಒ೦ಟಿಗೆ ತಾಗಿದ ಸೂರ್ಯನ ಕಿರಣಗಳು ಪ್ರತಿಫಲಿಸಿ ಕಣ್ಣಿಗೆ ಕುಕ್ಕುತ್ತಿದ್ದವು. ಯಾವುದೋ ಜೆಲ್ಲನ್ನು ಹಾಕಿ ಬಾಚದೇ ಬರೀ ಕೈಯಲ್ಲಿ ತಿದ್ದಿ ನಿಲ್ಲಿಸಿದ ಕೂದಲು, ಈಗಲೋ ಅಥವಾ ಇನ್ನು ಸ್ವಲ್ಪದರಲ್ಲೋ ಜಾರಿ ಬೀಳುವ೦ತೆ ಹಾಕಿಕೊ೦ಡಿದ್ದ ಪ್ಯಾ೦ಟು ಮತ್ತು ಬಲಿಷ್ಟವಾದ ಮು೦ಗೈ ಮೇಲೆ ಬರೆದುಕೊ೦ಡಿದ್ದ ಡ್ರ್ಯಾಗನ್ ನ ಚಿತ್ರ ಕುಳ್ಳಗಾಗಿದ್ದರೂ ಅವನ ದೇಹವನ್ನು ಆಕರ್ಷಮಯವನ್ನಾಗಿಸಿದ್ದವು.
ವಿಶಾಲವಾದ ಆ ಮಾಲ್ ನ ಎದುರಿಗಿರುವ ಚಿಕ್ಕ ಕಟ್ಟೆಯ ಮೇಲೆ ಬ್ಯಾಗನ್ನು ಮತ್ತು ಹೆಲ್ಮೆಟ್ಟನ್ನು ತೆಗೆದಿಟ್ಟು ರಸ್ತೆಗೆ ಬೆನ್ನು ಮಾಡಿ ಕುಳಿತೆ. ಈ ಮಾಲಿಗೆ ಮೊದಲ ಸಲ ಬ೦ದಾಗ ಆಗಿದ್ದ ಬೆರಗು, ಭಯ ಮತ್ತು ಆಕರ್ಷಣೆ ಈಗಿರಲಿಲ್ಲ. ಆದರೆ ಮೊದಲಿನ ಕೀಳರಿಮೆ ಮಾತ್ರ ಬೇರೆಯದೇ ರೂಪವನ್ನು ತಾಳಿತ್ತು. ಅದು ಇ೦ತಹದ್ದೇ ಅನ್ನುವುದು ಇನ್ನೂ ಖಚಿತವಾಗಿರಲಿಲ್ಲ. ಅದೊ೦ತರ ಕೀಳರಿಮೆಯನ್ನು ಮೀರುವ ಗಡಿಬಿಡಿಯಲ್ಲಿರುವ ಆತ್ಮವಿಶ್ವಾಸದ ಸ್ಥಿತಿ. ಮೊನ್ನೆಯಷ್ಟೇ ಜನರು ನಡೆದಾಡುವ ಫೂಟ್ ಪಾತನ್ನು ಆಕ್ರಮಿಸಿಕೊ೦ಡು ವಾಹನಗಳು ಓಡಾಡುವ ದಾರಿಯಲ್ಲೇ ಜನರನ್ನು ತಿರುಗುವ೦ತೆ ಮಾಡಿದ ಈ ಶಾಪಿ೦ಗ್ ಮಾಲಿನ ಆಡಳಿತ ಮ೦ಡಳಿಯ ವಿರುಧ್ಧ ಸ್ಥಳೀಯ ಸ೦ಘಟನೆಯೊ೦ದು ಪ್ರತಿಭಟನೆ ಮಾಡಿದ್ದು ನೆನಪಾಗಿ ಅ೦ಗಡಿಯ ಯುವಕನನ್ನು ಅದರ ಬಗ್ಗೆ ಕೇಳಲೆ೦ದು ಏಳುವಷ್ಟರಲ್ಲಿ ರಸ್ತೆಯಿ೦ದಲೇ ಕೈಯಾಡಿಸುತ್ತಿದ್ದ ವಸುಧ ಕ೦ಡಳು. ನಿರ್ಧರಿಸಿದ ಟೈಮ್ ಗಿ೦ತಲೂ ಬೇಗನೆ ಬ೦ದ ಅವಳನ್ನು ಕ೦ಡ ಖುಷಿಯಲ್ಲಿ ಯೋಚಿಸುತ್ತಿದ್ದ ವಿಷಯವೇ ಮರೆತು ಅವಳನ್ನು ರಸ್ತೆಯ ಬದಿಯೇ ನಿಲ್ಲಲು ಹೇಳಿ ಪಾರ್ಕಿ೦ಗ್ ಜಾಗದತ್ತ ನಡೆದೆ.
ಬೈಕಿನ ಮೇಲೆ ಅವಳನ್ನು ಕೂರಿಸಿಕೂಂಡು ಸ್ವಲ್ಪ ದೂರ ಹೋಗಿ ಬಲತಿರುವಿನಲ್ಲಿರುವ ಹೋಟೇಲೊ೦ದರ ಮುಂದೆ ನಿಲ್ಲಿಸಿ ಸರ್ವಿಸ್ ಸೆಕ್ಶನ್ನಿನಲ್ಲಿರುವ ಮೂಲೆಯೊ೦ದರ ಟೇಬಲ್ ಆಯ್ದುಕೊಂಡು ಕುಳಿತಾಗ ಇನ್ನಿಲ್ಲದಂತೆ ಹಸಿವಾಗತೊಡಗಿತ್ತು.ಪಕ್ಕದಲ್ಲಿರುವ ಸ್ವಸಹಾಯ ಪದ್ಧತಿಯ ಹಾಲಿನಲ್ಲಿ ಜನರು ಬಹಳ ಗಡಿಬಿಡಿಯಿಂದ ತಮ್ಮ ಬೆಳಗ್ಗಿನ ತಿಂಡಿಯನ್ನು ತಿನ್ನುತ್ತಿದ್ದರು.ಕೈತೊಳೆದು ಬರುವಷ್ಟರಲ್ಲಿ ವಸುಧಾ ಫೇಸ್ ಭುಕ್ ನಲ್ಲಿ ಷ್ಟೇಟಸ್ ಅಪ್ ಡೇಟ್ ಮಾಡುತ್ತಿದ್ದಳು.ನಿರನ್ನು ತಂದಿಟ್ಟ ವೇಟರ್ ಗೆ ತಿಂಡಿಯನ್ನು ಆರ್ಡರ ಮಾಡಿ ವಸುಧಾಳನ್ನು ಮಾತಿಗೆಳೆದೆ. ಮದುವೆಗೆ ಇನ್ನು ಕೆವಲ ತಿ೦ಗಳು ಮಾತ್ರ ಇದ್ದರಿ೦ದ ನಿನ್ನೆಯಷ್ಟೇ ಶಾಪಿಂಗ್ ಮೂಗಿಸಿದ್ದ ವಸುಧಾ ನಿರಾಳವಾಗಿದ್ದಳು. ತುಂಬ ಗೆಲುವಾಗಿ ತನ್ನ ಬ್ಯಾಗಿಂದ ಖರಿದಿಸಿದ ಚಿನ್ನದಬಳೆಗಳನ್ನು ಮತ್ತು ನೆಕ್ಲೆಸ್ ಅನ್ನು ತೆಗೆದಿಟ್ಟಳು.ಮನೆಯಲ್ಲಿ ಸಾಕಷ್ಟು ಸ್ಥಿತಿವಂತರಗಿದ್ದರೂ ಸ್ವಾವಲಂಭಿಯಾಗಬೇಕೆಂಬ ಅತೀವ ಹಂಬಲದಿಂದ ಕಾಮರ್ಸ ಮುಗಿಸಿ ಬೆಂಗಳೂರಿನ ಪ್ರತಿಷ್ಠಿತ ರಿಯಲ್ ಎಷ್ಟೇಟ್ ಕಂಪನಿಯೊಂದರಲ್ಲಿ ಅಕೌಂಟೆಂಟ ಆಗಿ ಸೆರಿಕೊಂಡಿದ್ದಳು.ತಾನುಳಿದುಕೊಂಡಿದ್ದ ಪಿಜಿಯಲ್ಲಿ ಮಾಡುವ ಕಲಸಿದ ಸಿಮೆಂಟಿನಂತಿರುವ ಉಪ್ಪಿಟ್ಟನ್ನು ಬೈಯುತ್ತಾ ವೆಟರ್ ತಂದಿಟ್ಟ ಬಿಸಿ ಬೇಳೆ ಭಾತನ್ನು ತಿನ್ನತೊಡಗಿದಳು.ರಿಯಲ್ ಎಸ್ಟೇಟ್ ಕಂಪನಿಯಲ್ಲಿಕೆಲಸಮಾಡುವವರಿಗೆ ಕಲಸಿದ ಸಿಮೆಂಟಿನ ಮೇಲೆ ಅಷ್ಟೊಂದು ಸಿಟ್ಟಿರಬಾರದೆಂದು ನಾನು ಜೋಕ್ ಮಾಡಿದ್ದು ಅವಳಿಗೆ ನಗು ತರಿಸಲಿಲ್ಲ.
ನಾನು ಹೇಳಬೇಕೆ೦ದಿದ್ದನ್ನು ಹೇಗೆ ಶುರು ಮಾಡಬೇಕೆಂದು ತಿಳಿಯದೇ ಅಧೀರನಾಗತೊಡಗಿದೆ.ಬೆಂಗಳೂರಿನ ಝಗ ಮಗಕ್ಕೆ ಮಾರುಹೋದ,ಹಳ್ಳಿಯ ಜೀವನವನ್ನು ತಾತ್ಸಾರವಾಗಿ ಕಾಣುವ ಇಂಗ್ಲೀಷ್ ಮಾತನಾಡುವ ಇವಳನ್ನು ನಾನು ಮದುವೆಯಾಗಹೊರಟಿರುವುದು ಕೂಡ ನನ್ನ ಕಿಳರಿಮೆಯನ್ನು ಮೀರುವ ಮತ್ತೊಂದು ಪ್ರಯತ್ನವಿರಬಹುದೇ ಎಂದುಕೊಂಡು ಮತ್ತೂ ದಿಗಿಲಾಯಿತು.ಇನ್ನೂ ಸೋಲುವುದರ ಮೊದಲು ನಿರ್ಧಾರವನ್ನು ಹೇಳಿಯೇ ಬಿಡಬೇಕೆಂದೆನಿಸಿ ಮೆಲ್ಲನೆಯಧ್ವನಿಯಲ್ಲಿ ಧ್ವನಿಯಲ್ಲಿ ಹೇಳಿದೆ.”ನಾನೊಂದ್ವಿಷಯ ಹೆಳ್ಬೇಕು ಅಂದ್ಕೊಂಡಿದಿನಿ.ನಿನ್ನ ಅಭಿಪ್ರಾಯ ನಾಳೆ ತಿಳಿಸು. ಅದೇನೆ ಇದ್ರೂ ನನ್ನ ನಿರ್ಧಾರ ಬದಲಾಗಲ್ಲ. ಯಾಕ೦ದ್ರೆ ಇದು ನನ್ನ ಬಹಳ ದಿನದ ಕನಸು. ಕಳೆದ ಎ೦ಟು ವರ್ಷದಿ೦ದ ಕೂಡಿಟ್ಟ ಇಪ್ಪತ್ತು ಲಕ್ಷದಿ೦ದ ನನ್ನಪ್ಪ ಮಾರಿದ ಮೂರೆಕರೆ ತೋಟವನ್ನು ವಾಪಸ್ ಕೊ೦ಡುಕೊಳ್ಳಬೇಕೆ೦ದಿದ್ದೇನೆ”. ತಲೆ ಎತ್ತಿದೆ. ಅವಳು ನನ್ನ ಮಾತಿನಿ೦ದ ಆಶ್ಚರ್ಯಗೊ೦ಡ೦ತೆನಿಸಲಿಲ್ಲ. ಮು೦ದುವರೆಸಿದೆ. “ಗೋಪಾಲಭಟ್ಟರು ಹೇಳಿದ ಜ್ಯೋತಿಷ್ಯವೊ೦ದಿತ್ತ೦ತೆ.ನನ್ನಪ್ಪನಿಗೆ ಅವರ ಮಾವನಿ೦ದ ಬಳುವಳಿಯಾಗಿ ಸಿಕ್ಕಿದ ಈ ಜಮೀನನ್ನು ಅನುಭವಿಸುವ ಯೋಗ ಕೇವಲ ಅಳಿಯನಿಗೆ ಮಾತ್ರ ಇರುವ೦ತಹದ್ದು. ಆದ್ದರಿ೦ದ ಎಲ್ಲಿಯವರೆಗೆ ಈ ಜಮೀನನ್ನು ಅಪ್ಪ ಮಾರುವುದಿಲ್ಲವೋ ಅಲ್ಲಿಯವರಿಗೆ ಅಪ್ಪನಿಗೆ ಗ೦ಡು ಸ೦ತಾನವಾಗುವುದಿಲ್ಲ ಅನ್ನುವುದು. ಇದರಿ೦ದ ನೊ೦ದ ಅಪ್ಪ ಊರಿನ ಶ್ರೀಮ೦ತರಾದ ತಿಮ್ಮಣ್ಣ ಭಟ್ಟರಿಗೆ ಮಾರಿ ಹನ್ನೆರಡು ಕಿಲೋಮೀಟರ್ ಆಚೆಗಿರುವ ಮತ್ತೊ೦ದು ಊರಿನ ದೇವಸ್ಥಾನದಲ್ಲಿ ಅರ್ಚಕರಾಗಿ ಸೇರಿಕೊ೦ಡರ೦ತೆ. ಅದಾಗಿ ಕೇವಲ ಎರಡು ವರ್ಷಕ್ಕೇ ನಾನು ಹುಟ್ಟಿದ್ದ೦ತೆ”. ವಿಷಯವನ್ನು ಆದಷ್ಟು ಸ೦ಕ್ಷಿಪ್ತವಾಗಿರಿಸಿ ಅವಳ ಮುಖದ ಮೇಲಿನ ಭಾವನೆಯನ್ನು ನೋಡಲು ಕಾತುರನಾಗಿ ತಲೆ ಎತ್ತುವಷ್ಟರಲ್ಲಿ ಅವಳು ತನ್ನ ಪರ್ಸಿನಿ೦ದ ತಿ೦ಡಿಯ ಬಿಲ್ ಪಾವತಿಸಲು ಹಣ ತೆಗೆಯುತ್ತಿದ್ದಳು. ಅವಳ ಸ್ಫೋಟಕ್ಕಾಗಿಯೇ ಕಾಯುತ್ತಿದ್ದ ನಾನು ಅ೦ತಹದ್ದೇನೂ ಆಗದೇ ಇದ್ದುದರಿ೦ದ ಆತ೦ಕಗೊ೦ಡಿದ್ದೆ.
ನೀರು ತು೦ಬಿದ ಕಣ್ಣುಗಳಿ೦ದ ಹೊರಡೋಣ ಎ೦ದಳು. ಬೆ೦ಗಳೂರಿನಲ್ಲೊ೦ದು ಮನೆ, ಓಡಾಡಲೊ೦ದು ಕಾರು, ಸ್ವಿಟ್ಜರ್ ಲ್ಯಾ೦ಡಿನಲ್ಲಿ ಹನೀಮೂನಿನ ಕನಸು ಕಾಣುತ್ತಿದ್ದವಳು ಇ೦ದಿನ ನನ್ನ ಕ್ರಷಿ ಮಾಡುವ ನಿರ್ಧಾರದಿ೦ದ ನೊ೦ದಿದ್ದು ಸಹಜವಿತ್ತು. ಆದರೆ ಅದು ಕೇವಲ ಒ೦ಚೂರು ಕಣ್ಣೀರಿನಲ್ಲಿ ಮುಗಿಯುವ ನೋವಲ್ಲ ಅ೦ದುಕೊ೦ಡಿದ್ದ ನಾನು ಅವಳನ್ನು ಪೀಜಿಯ ಗೇಟಿನಲ್ಲಿ ಬಿಟ್ಟು ಅವಳು ಏನಾದರೂ ಹೇಳಬಹುದೇನೋ ಎ೦ದು ನಿರೀಕ್ಷಿಸುತ್ತ ಅಲ್ಲೇ ನಿ೦ತೆ. ಹಿ೦ತಿರುಗಿ ಕೂಡ ನೋಡದೆ ಹೋದ ಅವಳನ್ನು ನೋಡಿ ಕೊನೆಗೆ ಇಷ್ಟಾದರೂ ಅವಳ ಭಾವನೆ ಗೊತ್ತಾಯಿತಲ್ಲ ಎನ್ನುವ ಸಮಾಧಾನದಿ೦ದ ಅಲ್ಲಿ೦ದ ಹೊರಟೆ. ಮನೆಗೆ ಬ೦ದು ನನ್ನಿಷ್ಟದ ಲೇಖಕರ ಕಾದ೦ಬರಿಯನ್ನು ಓದುತ್ತಾ ಇಡೀ ಶನಿವಾರವನ್ನು ಕಳೆದೆ.

ಮರುದಿನ ಬೆಳಿಗ್ಗೆ ಅವಳ ಫೋನಿಗಾಗಿಯೇ ಕಾಯುತ್ತಿದ್ದ ನನಗೆ ಅವಳ ಕೆಳಗೆ ಕಾಯುತ್ತಿದ್ದೇನೆ೦ಬ ಮೆಸೇಜಿನಿ೦ದ ಬಹಳ ಆಶ್ಚರ್ಯವಾಗಿತ್ತು.ಗಡಿಬಿಡಿಯಲ್ಲಿ ತಯಾರಾಗಿ ರೂಮನ್ನು ಲಾಕ್ ಕೂಡ ಮಾಡದೇ ಕೆಳಗಿಳಿದು ಬ೦ದೆ. ಅವಳ ಮುಖದ ಮೇಲಿನ ಮುಗುಳ್ನಗೆ ಮಾತ್ರ ಎಲ್ಲ ಸರಿಯಾಗಿಲ್ಲವೇನೋ ಅನ್ನುವ ಅನುಮಾನ ತರಿಸಿತ್ತು. ಅವಳು ತನ್ನ ಬ್ಯಾಗಿನಿ೦ದ ಎರಡು ಬಸ್ ಟಿಕೇಟ್ ಗಳನ್ನು ತೆಗೆದು ಕೊಟ್ಟಾಗ ಮಾತ್ರ ಎಲ್ಲಿಲ್ಲದ ಪ್ರೀತಿಯಿ೦ದ ಅವಳನ್ನು ಆಲ೦ಗಿಸಿದ್ದೆ. ನಾವಿಬ್ಬರೂ ಮು೦ದಿನ ಗುರುವಾರದ ಜಮೀನು ನೋ೦ದಣಿಯ ಶುಭ ಕಾರ್ಯಕ್ಕೆ ಒಟ್ಟಿಗೆ ಹೋಗುವುದು ಖಾತ್ರಿಯಾಗಿತ್ತು. ಇದು ಮೊದಲನೇ ಗೆಲುವಿನ ಸ೦ಭ್ರಮ.ಇನ್ನುಳಿದಿರುವುದು ಕೊನೆಯ ಮತ್ತು ಅತೀ ಪ್ರಮುಖವಾದ ಯುದ್ಧ. ಊರ ಶ್ರೀಮ೦ತರಿ೦ದ ಆ ಜಮೀನನ್ನು ಮರಳಿ ಪಡೆಯುವುದು. ಮೊದಲ ಸುತ್ತಿನ ಮಾತುಕತೆ ಮುಗಿದಿದ್ದರೂ ದುಡ್ಡು ಕಾಸಿನ ವಿಷಯದ ಬಗ್ಗೆ ಹೆಚ್ಚೇನೂ ಚರ್ಚಿಸಿರಲಿಲ್ಲ. ರಾತ್ರಿ ಒ೦ಭತ್ತರ ಬಸ್ಸಿಗೆ ಹೋಗಲು ತಯಾರಾಗೆ೦ದು ಹೇಳಿ ರೂಮಿಗೆ ವಾಪಸ್ ಬ೦ದೆ.
ನನ್ನ ನಿರ್ಧಾರದ ಪರಿಣಾಮಗಳ ಬಗ್ಗೆ ಆಲೋಚಿಸುತ್ತಾ ಸ್ನಾನ ಮುಗಿಸಿದೆ. ಸ೦ಧ್ಯಾ ವ೦ದನೆ ನನಗೆ ಕೇವಲ ದೇವರ ಜಪವಲ್ಲ. ಅದೊ೦ದು ಚಿಕ್ಕ ಪ್ರಯಾಣ. ನನ್ನ ಗಮ್ಯ ತಲುಪಲು ಆರಿಸಿಕೊ೦ಡ ಹಾದಿಯ ಅವಲೋಕನ. ಹಾಗಾದರೆ ನನ್ನ ಸಧ್ಯದ ನಿರ್ಧಾರವಾದ ಕ್ರಷಿಯೇ ಒ೦ದು ಗಮ್ಯವೋ ಅಥವ ಅದೊ೦ದು ನಿಲ್ದಾಣ ಮಾತ್ರವೋ? ಏನೇ ಆದರೂ ಚಿ೦ತೆಯಿಲ್ಲ. ಮನಸ್ಸಿನ ಮೂಲೆಯಲ್ಲೊ೦ದು ಅನುಮಾನ ಹಾಗೇ ಸರಿದು ಹೋಯಿತು. ಇದೊ೦ದು ಉಪಾಯ ಇರಬಹುದೇ? ನನ್ನ ವೈರುಧ್ಯಗಳೇ ತು೦ಬಿದ ತು೦ಬಿದ ಜೀವನದಲ್ಲಿ ಯಾವಾಗಲೂ ಯಾರಿಗೋ ಏನನ್ನೋ ಹೇಳುವ ಆತುರದಲ್ಲಿರುವ ನನಗೆ ತಾನಾಗೇ ಸಿಕ್ಕ ಅವಕಾಶವೇ? ಅಷ್ಟಕ್ಕೂ ಇ೦ತಹದ್ದೊ೦ದು ಅನುಮಾನಕ್ಕೆ ಕಾರಣಗಳೇನು? ಕ್ರಷ್ಣ ಭಟ್ಟರು ಹೇಳಿದ ಜ್ಯೋತಿಷ್ಯವನ್ನು ಸುಳ್ಳು ಮಾಡುವ ಪ್ರಯತ್ನವೋ ಅಥವಾ ಊರಿನ ಶ್ರೀಮ೦ತರಿಗೆ ನನ್ನ ಅಸ್ತಿತ್ವವನ್ನು ಹೇಳುವ ಆಸೆಯೋ? ನನ್ನ ಉದ್ದೇಶ ಇವುಗಳಲ್ಲಿ ಯಾವುದೊ೦ದಾದರೂ ಆಗಿದ್ದ ಪಕ್ಷದಲ್ಲಿ ಅದು ನನ್ನ ಗುರಿಯನ್ನು ತಲುಪಲು ಒ೦ದು ಅಡಚಣೆಯೇ ಹೊರತು ಬೇರೇನೂ ಅಲ್ಲ. ಹಾಗಾದರೆ ನಾನು ಸಾಧಿಸ ಹೊರಟಿದ್ದಾದರೂ ಏನು? ಒ೦ದು ದೊಡ್ಡ ನಿದ್ದೆಯಿ೦ದೆದ್ದ೦ತೆನಿಸಿ ಆಚಮ್ಯದ ನೀರಿನ ಬಟ್ಟಲನ್ನು ಚೆಲ್ಲಿ ಹೊರಬ೦ದೆ.
ಬಸ್ಸು ಹೊರಡುವ ಅರ್ಧ ಘ೦ಟೆಗೂ ಮು೦ಚೆ ಇಬ್ಬರೂ ಬಸ್ ನಿಲ್ದಾಣಕ್ಕೆ ಸೇರಿದ್ದೆವು. ವಸುಧಾ ತು೦ಬಾ ಗೆಲುವಾಗಿದ್ದಳು.ಊರಿಗೆ ಹೋಗುವದಾದ್ದರಿ೦ದ ಸಾಧ್ಯವಾದಷ್ಟು ಸರಳವಾಗಿ ಡ್ರೆಸ್ ಮಾಡಿಕೊ೦ಡಿದ್ದಳು. ಬಸ್ಸಿನಲ್ಲಿ ಕುಳಿತುಕೊ೦ಡಾಗ ಬಹಳ ಕಣ್ಣುಗಳು ನಮ್ಮನ್ನೇ ನೋಡುತ್ತಿವೆ ಅ೦ತ೦ದುಕೊಳ್ಳಬೇಕು ಯಾಕೆ? ಅದೂ ಕೂಡ ಸ್ವಕೇ೦ದ್ರಿತ ಮನಸ್ಥಿತಿಯ ಒ೦ದು ಭಾಗವೇ ಇರಬಹುದು ಅಥವ ನನ್ನೂರಿನವರ ಬಗ್ಗೆ ನನಗಿರುವ ಪೂರ್ವಾಗ್ರಹ? ಅವಳು ಯಾರೊಟ್ಟಿಗೋ ನನ್ನ ಹುಚ್ಚು ತನದ ಬಗ್ಗೆ ಮಾತನಾಡತೊಡಗಿದಳು. ತು೦ಬಾ ಆಲೋಚಿಸಿ ದಣಿದಿದ್ದ ಮನಸ್ಸು ನಿದ್ದೆಗೆ ಜಾರಿತ್ತು. ಆರು ಘ೦ಟೆಗೇ ಊರು ಸೇರಿದ ಬಸ್ಸಿನಿ೦ದ ಜನ ಒಬ್ಬೊಬ್ಬರಾಗಿ ಇಳಿಯತೊಡಗಿದರು. ನಾವಿಬ್ಬರೂ ಮದುವೆಯಾಗುವ ಸುದ್ದಿ ಈಗಾಗಲೇ ಸಾಕಷ್ಟು ಪ್ರಚಾರವಾಗಿದ್ದರಿ೦ದ ಅಷ್ಟೇನೂ ಮುಜುಗರವಿಲ್ಲದೇ ವ್ಯವಹರಿಸಬಹುದಾದ್ದು ನನ್ನ ಧೈರ್ಯವಾಗಿತ್ತು. ಮಧ್ಯಾಹ್ನವೇ ನಾವಿಬ್ಬರೂ ಊರಿನ ಶ್ರೀಮ೦ತರಾದ ತಿಮ್ಮಣ್ಣ ಭಟ್ಟರ ಮನೆಯಲ್ಲಿ ಸಿಗುವುದೆ೦ದು ನಿರ್ಧರಿಸಿ ನಮ್ಮ ನಮ್ಮ ಮನೆಗಳಿಗೆ ಹೊರಟೆವು.
ದೇವಸ್ಥಾನದ ಜಗುಲಿಯನ್ನು ಗುಡಿಸಿ, ಒರೆಸಿ, ರ೦ಗೋಲಿ ಇಟ್ಟು ಹಿ೦ದೆಯೇ ಇರುವ ಮನೆಗೆ ಹೊರಡುವ ತವಕದಲ್ಲಿದ್ದ ಅಮ್ಮ ಆಗಷ್ಟೇ ಗೇಟು ತೆಗೆಯುತ್ತಿದ್ದ ನನ್ನ ಕ೦ಡೊಡನೆ ಬ೦ದು ಬ್ಯಾಗನ್ನೆತ್ತಿಕೊ೦ಡಳು. ಘ೦ಟೆ ಏಳಾದರೂ ಹಾಸಿಗೆಯಿ೦ದೇಳದ ನನ್ನ ಅಪ್ಪನ ಆಲಸ್ಯದ ಬಗ್ಗೆ, ಕೇವಲ ದೇವಸ್ಥಾನದ ತೋಟದ ಮೇಲಿನ ಹಕ್ಕಿಗೋಸ್ಕರ ಮಾತ್ರ ಮಾಡುವ ಪೂಜೆಯ ಮೇಲಿನ ನಿರಾಸಕ್ತಿಯ ಬಗ್ಗೆ ತನ್ನ ಯಾವತ್ತಿನ ಸಿಟ್ಟಿನಲ್ಲಿಯೇ ಮಾತಾಡತೊಡಗಿದಳು. ನಾನು ಅವಳ ಪ್ರತೀ ಮಾತನ್ನೂ ವಿಷ್ಲೇಷಿಸತೊಡಗಿದೆ. ಯಾವುದೊ೦ದನ್ನೂ ನೇರವಾಗಿ ಒಪ್ಪಿಕೊಳ್ಳದ೦ತೆ ಅಪ್ರಯತ್ನವಾಗಿ ಬರುವ ಆಲೋಚನೆಗಳು ಕೆಲವೊಮ್ಮೆ ಒಳ್ಳೆಯದನ್ನು ಮಾಡಿದ್ದೂ ಇವೆ. ಅಷ್ಟಕ್ಕೂ ಅಮ್ಮನ ಆಶಯವೇನು? ಕೇವಲ ದೇವಸ್ಥಾನದ ಉತ್ಪನ್ನ ಮಾತ್ರವಲ್ಲ, ಅಪ್ಪ ಬೇಗ ಎದ್ದು ಅನುಷ್ಠಾನ ಮುಗಿಸಿ ಅನ೦ತ ಭಟ್ಟರ ಜೊತೆ ಪೌರೊಹಿತ್ಯಕ್ಕೆ ಹೋದರೆ ನಾಲ್ಕು ಕಾಸು ಜಾಸ್ತಿ ಮಾಡಬಹುದಲ್ಲವೇ? ಯಾವ ಖರ್ಚಿಗೂ ಆಲೋಚನೆಮಾಡಬೇಕಾದ ಅವಶ್ಯಕತೆ ಈಗ ಇರದೇ ಇರುವಷ್ಟು ಆರ್ಥಿಕ ಸಧ್ರಡತೆ ಇದ್ದರೂ ಅಮ್ಮ ಯಾಕೆ ಚಿಕ್ಕ ಪುಟ್ಟ ನೆಮ್ಮದಿಯನ್ನು ಕಳೆದುಕೊಳ್ಳುತ್ತಾಳೆ. ಉತ್ತರ ಸಿಗದ ಈ ಪ್ರಶ್ನೆಗಳಿ೦ದ ಸಧ್ಯಕ್ಕ೦ತೂ ನನಗೆ ಲಾಭಗಳಿರಲಿಲ್ಲ.
ಹಿತ್ತಿಲು ಕೊಟ್ಟಿಗೆಗಳನ್ನೆಲ್ಲ ಸುತ್ತಿ, ಸ್ನಾನ ಮುಗಿಸಿ ಮಧ್ಯಾಹ್ನ ಊಟಕ್ಕೆ ಏಳಿಸೆ೦ದು ಹೇಳಿ ಮಲಗಿದೆ. ಎರಡು ಘ೦ಟೆಗೇ ಊಟ ಮುಗಿಸಿ ಅಪ್ಪನ ಓಡಟಕ್ಕೆ ನಾನೇ ತೆಗೆಸಿಕೊಟ್ಟ ಸ್ಕೂಟರನ್ನೇರಿ ತಿಮ್ಮಣ್ಣ ಭಟ್ಟರ ಮನೆಗೆ ಹೊರಟೆ. ಆಗಷ್ಟೇ ಊಟ ಮುಗಿಸಿ ಜಗುಲಿಯ ಮೇಲಿನ ಮರದ ಕುರ್ಚಿಯ ಮೇಲೆ ಒ೦ದು ಕಾಲನ್ನು ಮೇಲಿಟ್ಟು ಕುಳಿತಿದ್ದ ತಿಮ್ಮಣ್ಣ ಭಟ್ಟರು ತಮ್ಮ ಪ೦ಚೆಯ ಒ೦ದು ತುದಿಯನ್ನು ಬತ್ತಿಯಾಗಿಸಿ ಕಿವಿಯನ್ನು ಸ್ವಚ್ಚಗೊಳಿಸುತ್ತಿದ್ದರು. ನನ್ನ ಕ೦ಡೊಡನೆ ಏನೋ ನಿರೀಕ್ಷಿಸಿದ್ದ೦ತೆ ಮಾತನಾಡಿಸಿ ತನ್ನ ಹೆ೦ಡತಿಗೆ ಜಗುಲಿಯ ಮೇಲೆ ಕ೦ಬಳಿ ಹಾಸೆ೦ದು ಹೇಳಿದರು. ಇಬ್ಬರೂ ಕ೦ಬಳಿಯ ಮೇಲೆ ಕುಳಿತು ಮಾತು ಶುರುಮಾಡಿದಾಗ ಮಾತ್ರ ಭಟ್ಟರ ಮುಖದ ಮೇಲಿಲ್ಲದ ಆಶ್ಚರ್ಯದಿ೦ದ ಅಳುಕಾಯಿತು.”ನಾಳೆಯೇ ಪೇಟೆಗೆ ಹೋಗೋಣ. ಹಳಿಯಾಳದಿ೦ದ ಬರುವ ಸಬ್ ರಜಿಷ್ಟ್ರಾರ್ ಮ೦ಗಳವಾರ ಮಾತ್ರ ತಾಲೂಕಾಫೀಸಿನಲ್ಲಿ ಸಿಗುವ ವಿಚಾರ ನಿನಗೂ ಗೊತ್ತಿರಬಹುದು. ಜಮೀನು ರೆಕಾರ್ಡಿನ ಮೇಲೆ ಸಹಿ ಹಾಕುವುದನ್ನೆಲ್ಲಾ ಮುಗಿಸಿಬಿಡೊಣ. ಇನ್ನೇನಾದರೂ ಬಾಕಿ ಇದ್ದರೆ ನಾನೇ ಮು೦ದಿನವಾರದೊಳಗೆಲ್ಲಾ ಮುಗಿಸಿಟ್ಟಿರುತ್ತೇನೆ”. ವೀಳ್ಯದೆಲೆಗಳ ನಡುವೆ ಕಳೆದು ಹೋದ ಅಡಕತ್ತರಿಯನ್ನು ಹುಡುಕತೊಡಗಿದರು. ಭಟ್ಟರ ನಿರ್ಧಾರಗಳು ನನ್ನನ್ನು ಇನ್ನಷ್ಟು ಬಿಗಿಯಾಗಿ ಸುತ್ತಿಕೊಳ್ಳುವುದರ ಮೊದಲು ಅದರಿ೦ದ ಕೊಡವಿಕೊಳ್ಳಲು ಪ್ರಯತ್ನಿಸಿದೆ. “ಅದೆಲ್ಲ ಸರಿ ಆದರೆ ನಾನು ಕೊಡಬೇಕಾದ ಇಪ್ಪತ್ತು ಲಕ್ಷವನ್ನು ಒ೦ದೇ ಸಲ ಕೊಡಲಾಗದು. ಅದನ್ನು ಎರಡು ಕ೦ತುಗಳಲ್ಲಿ ಬರುವ ದೀಪಾವಳಿಯೊಳಗೆ ಕೊಡುತ್ತೇನೆ”. ಧ್ವನಿಯಲ್ಲಿ ಯಾವ ಆಪ್ತತೆಯನ್ನೂ ತೋರದೇ ಹೇಳಬೇಕಾದ್ದನ್ನು ಹೇಳಿಮುಗಿಸಿದ ನಿರಾಳತೆಯಿತ್ತು. “ಪರವಾಗಿಲ್ಲ. ಗಣಪತಿ ಭಟ್ಟರು ದೊಡ್ಡ ಮನುಷ್ಯರು. ಅವರು ಅಡಿಕೆ ಹಾಕುವ ಸೊಸೈಟಿಯಲ್ಲಿ ಹೇಳಿಟ್ಟಿದ್ದಾರ೦ತೆ. ನಾನು ಯಾವಾಗ ಹೋದರೂ ನನಗೆ ಹತ್ತು ಲಕ್ಷ ಸಿಗುತ್ತದೆ”. “ನೋಡೂ ನನಗೆ ವಯಸ್ಸಾಯಿತು. ನನ್ನ ಹದಿನೇಳೆಕರೆ ಭೂಮಿಯನ್ನೇ ನೋಡಿಕೊಳ್ಳಲು ಕಷ್ಟ…..” ನನಗೆ ಅವರ ಮಾತಿನಲ್ಲಿ ಸ್ಪಷ್ಟತೆ ಕಾಣದೇ ಆಲೋಚಿಸುವ೦ತಾದಾಗ ಅ೦ಗಳದಲ್ಲಿ ನಲ್ಲಿಯಿ೦ದ ನೀರು ಸೋರಿದ ಶಬ್ಧ ಬ೦ದ೦ತಾಗಿ ನೋಡಿದರೆ ವಸುಧಾ ತನ್ನ ಅಪ್ಪನ ಜೊತೆಯೇ ಬ೦ದಿದ್ದಳು. ವಸುಧಾಳ ಅಪ್ಪ ಯಾಕೆ ಹತ್ತು ಲಕ್ಷ ಹೆಚ್ಚಿಗೆ ಕೊಡಲು ಒಪ್ಪಿದರು ಅನ್ನುವ ವಿಚಾರಕ್ಕಿ೦ತಲೂ ಇವರೆಲ್ಲ ಸೇರಿ ನಡೆಸುವ ಸ೦ಚಿನ ಒ೦ದು ಭಾಗವಾ ನಾನು ಎನ್ನುವ ಆಲೋಚನೆ ಬ೦ದಾಗ ಮಾತ್ರ ಇನ್ನಿಲ್ಲದ ಧೈರ್ಯದಿ೦ದ ಮಾತನಾಡತೊಡಗಿದೆ. ತನ್ನ ಅಳಿಯನಾಗುವವನಿಗೆ ಸಾಲ ಕೊಟ್ಟು ದೊಡ್ಡವರಾಗಿದ್ದ ಗಣಪತಿ ಭಟ್ಟರು, ನಿನ್ನ ಆದರ್ಶಕ್ಕೂ ಕೂಡ ನನ್ನ ವ್ಯವಹಾರ ಚತುರತೆಯ ಹ೦ಗಿದೆ ಅನ್ನುವ ವ್ಯ೦ಗ್ಯತು೦ಬಿದ ಖುಷಿಯಲ್ಲಿದ್ದ ವಸುಧಾ, ತನ್ನ ಜಮೀನಿಗೆ ಹತ್ತು ಲಕ್ಷ ಹೆಚ್ಚಿಗೆ ಬ೦ದ ಸ೦ತೋಷದಲ್ಲಿದ್ದ ತಿಮ್ಮಣ್ಣ ಭಟ್ಟರು ಇವರೆಲ್ಲರ ಸ೦ಭ್ರಮಾಚರಣೆಗಳಲ್ಲಿ ನನ್ನ ಪ್ರಶ್ನೆಗಳು ನನ್ನ ಮನಸ್ಸಿನಲ್ಲೇ ಉಳಿದುಹೋದವು.
ನನ್ನ ಕರ್ಮಗಳ ಮೇಲಿನ ಮೋಹ ನನ್ನನ್ನು ಪದೇ ಪದೇ ಅಶಕ್ತನನ್ನಾಗಿಸುತ್ತಿದೆ. ಯಾಕ೦ದರೆ ನನ್ನ ಆದರ್ಶ ನನ್ನ ಆಲೋಚನೆಗಳಷ್ಟೇ ಆಗಿ ನನ್ನ ಗುರಿಯನ್ನು ನಿಯ೦ತ್ರಿಸುವಷ್ಟು ಶಕ್ತವಾಗಿರದೇ ಇದ್ದುದೇ ಅದಕ್ಕೆ ಕಾರಣವಿರಬಹುದು. ಕೊನೆಗೆ ನಾನು ಒಪ್ಪಬೇಕಾಗಿರುವುದೇನು? ಕ್ರಷ್ಣ ಭಟ್ಟರ ಜ್ಯೋತಿಷ್ಯವನ್ನೇ? ಈ ಜಮೀನನ್ನು ಅನುಭವಿಸುವ ಯೋಗ ಇರುವುದು ಅಳಿಯ ಸ೦ತಾನಕ್ಕೆ ಮಾತ್ರ ಅನ್ನುವುದು ಯಾವ ಕಾಲಕ್ಕೂ ಸತ್ಯವೇ? ಆದ್ದರಿ೦ದಲೇ ನನ್ನ ಅಪ್ಪನಿಗೆ ಅವರ ಮಾವನಿ೦ದ ಬಳುವಳಿಯಾಗಿ ಬ೦ದ ಜಮೀನಿನ ಮೇಲೆ ಇನ್ನೆರಡೇ ದಿನದಲ್ಲಿ ನಾನು ಹಕ್ಕುದಾರನಾಗುವುದು ಹೌದಾದರೂ ಅದಕ್ಕೂ ನನಗೆ ಹೆಣ್ಣು ಕೊಡುವ ಮಾವನ ಕ್ರಪೆಯೇ ಬೇಕಾಯಿತೇ? ನಾನು ನನ್ನ ಮಾವ ಸಾಲ ಕೊಡುವ ಸಾಧ್ಯತೆ ಮೊದಲೇ ಗೊತ್ತಿದ್ದರೆ ಜಮೀನು ಖರೀದಿಸುವ ಸಾಹಸಕ್ಕೆ ನಾನು ಹೋಗುತ್ತಿದ್ದೆನೇ? ಅಷ್ಟಕ್ಕೂ ನನಗೆ ಸಿಗುತ್ತಿರುವ ಈ ಸಹಾಯ ಸಾಲವೇ ಅಲ್ಲದಿದ್ದರೆ ಕ್ರಷ್ಣ ಭಟ್ಟರ ಜ್ಯೋತಿಷ್ಯ ನಿಜವಾದ್ದು ನನಗೆ ಖುಷಿಯೇ ಇರಬಹುದೇನೋ? ಅದು ನನಗೆ ಜಮೀನು ಸಿಕ್ಕಿದ ಲೌಕಿಕದ ಖುಷಿಯಾಗಿರದೇ ನಡೆಯಬೇಕಾದ್ದು ಸ೦ಭವಿಸುವುದರ ಹಿ೦ದಿನ ಮರ್ಮವನ್ನು ಅರಿಯುವ ಪಕ್ವತೆ ನನ್ನ ತರ್ಕಕ್ಕೆ ಬ೦ದಿರದೇ ಇದ್ದಾಗ ಸಿಗುವ ಅಲೌಕಿಕ ಭದ್ರತೆಯ ಖುಷಿಯೇ ಇರಬಹುದೇನೋ?

‍ಲೇಖಕರು G

June 2, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: