ಸಮದ್ಯತಾ ವೆಂಕಟರಾಮು ಓದಿದ ‘ಒಂದೊಂದು ತಲೆಗೂ ಒಂದೊಂದು ಬೆಲೆ’

ಸಮದ್ಯತಾ ವೆಂಕಟರಾಮು

ಎಂ ಆರ್ ದತ್ತಾತ್ರಿಯವರ ಕಾದಂಬರಿ. ಶೀರ್ಷಿಕೆಯೂ ವಿಶೇಷವಾಗಿದೆ. ಅವರ ಮೂರು ಕಾದಂಬರಿಗಳನ್ನು ಓದಿದ ನನಗೆ ಇದರ ಬಗ್ಗೆ ಬಹಳ ಕುತೂಹಲವಿತ್ತು. ಹಾಗಾಗಿ ತಕ್ಷಣವೇ ತರಿಸಿ ಓದಿದೆ. ನಿರಾಶೆಯಾಗಲಿಲ್ಲ. ತುಂಬಾ ಇಷ್ಟವಾಯಿತು.

ಮೊದಲಿಗೆ ಸುದೀರ್ಘವೆನಿಸದ ಕಥನ. ಸರಳವಾದ ಬರವಣಿಗೆ. ಯಾವುದೂ ಅತಿ ಎನಿಸದಂತಿದೆ.
“ಎಲ್ಲಿ ಹುಟ್ಟು ಸಂಭವಿಸುತ್ತದೋ ಅದು ಮನೆ, ಎಲ್ಲಿ ಸಾವು ಸಂಭವಿಸುತ್ತದೆಯೋ ಅದೂ ಮನೆಯೇ
ಮನೆ ತನ್ನಷ್ಟಕ್ಕೆತಾನೇ ಮನೆಯಾಗುವುದಿಲ್ಲ‌. ಕಟ್ಟಿದ್ದಕಷ್ಟೇ ಮನೆಯಾಗುವುದಿಲ್ಲ ಬದುಕಿದ್ದಾಗ ಮನೆಯಾಗುತ್ತದೆ. ಮನೆ ತನ್ನದಾಗುವುದಕ್ಕೆ ಒಡೆತನವೇ ಬೇಕಿಲ್ಲ. ಸೇಲ್ಸ್ ಡೀಡ್ ರಿಜಿಸ್ಟ್ರೇಶನ್ ಖಾತಾ ಟ್ಯಾಕ್ಸ್ ರಶೀದಿ ಎಂಥದ್ದೂ ಬೇಕಿಲ್ಲ. ಕಿಟಕಿಯಾಚೆಗೆ ಬಿದ್ದರೆ ಒಂದು ಸಣ್ಣ ಮಳೆಗೆ ಅವೆಲ್ಲ ರದ್ದಿ ಕಾಗದಗಳಾಗುತ್ತವೆ. ಪೂರ್ತಿಯಾಗಿ ಲೌಕಿಕ ಬದುಕಿನ ದೋಣಿಯೊಳಗೆ ಕಾಲಿಟ್ಟ ಶಿವಸ್ವಾಮಿ ಎಂಬ, ಒಂದು ಕಂಪನಿಯಿಂದ ನಿವೃತ್ತಿ ಹೊಂದಿ ಮತ್ತೆ ಮನೆ ಎಂಬ ಲೌಕಿಕದ ಗೂಡೊಂದನ್ನು ಸ್ವಂತವಾಗಿ ಹೊಂದಲು ಬಯಸುವ ಸಾಮಾನ್ಯ ಕುಟುಂಬಸ್ಥನೊಬ್ಬನ ಚಿಂತನೆಗಳು ಹೀಗೆ ಸಾಗುತ್ತಾ ಹೋಗುತ್ತವೆ. ಮನೆ ಇರಲಿಲ್ಲ, ಮನದ ತುಂಬ ಅಲ್ಲಮನಿದ್ದ.

ಮೂವತ್ತೈದು ವರ್ಷಗಳ ಕಾಲ ಫಾಝಿಯಾಬಾದ್ ನಲ್ಲಿ ಪಬ್ಲಿಕ್ ಸೆಕ್ಟರ್ ಕಂಪನಿ ಬಿ ಇ ಎಲ್ ನಲ್ಲಿ ಕೆಲಸಮಾಡಿ ನಿವೃತ್ತಿ ಯ ನಂತರ ಬೆಂಗಳೂರು ಸೇರಿದ ಶಿವಸ್ವಾಮಿ ಮತ್ತೆ ಉದ್ಯೋಗಕ್ಕೆಂದು ಸಾಫ್ಟ್‌ವೇರ್ ಕಂಪನಿಯೊಂದಕ್ಕೆ ಸಂದರ್ಶನಕ್ಕೆಂದು ಬರುವುದರಿಂದ ಕಥೆ ಆರಂಭವಾಗುತ್ತದೆ.

ವಿದೇಶದಲ್ಲಿ ನೆಲೆಸಿರುವ ಮಗಳ ಹೆರಿಗೆ ಸಮಯಕ್ಕೆಂದು ಹೋದ ಪತ್ನಿ ರೇವತಿ, ಅಮೇರಿಕಾದಲ್ಲಿಯೇ ಎಂ ಎಸ್ ಮಾಡುತ್ತಿರುವ ಮಗ, ಹೀಗೊಂದು ಪುಟ್ಟ ಸಂಸಾರದ ಸದಸ್ಯರೆಲ್ಲ ದೂರದಲ್ಲಿ. ಅಪಾರ್ಟ್ಮೆಂಟ್ ನ ಹಲವಾರು ಹಳವಂಡಗಳ ನಡುವೆ ಶಿವಸ್ವಾಮಿ. ಸಣ್ಣ ಕಂಪನಿಯಿಂದ ಶುರುಮಾಡಿ ದೊಡ್ಡದಾಗಿ ಬೆಳಸಿ ಡಿ ಟಿ ಗ್ರೂಪ್ ಎಂಬ ಸಾಮ್ರಾಜ್ಯ ಕಟ್ಟಿದ ಗುಜರಾತಿ ಧಾವಲ್ ಥಕ್ಕರ್, ಸಂದರ್ಶನದಲ್ಲಿ ನಪಾಸಾಗಿದ್ದ ಶಿವಸ್ವಾಮಿಯನ್ನು ತಮ್ಮ ಹಿತಾಸಕ್ತಿಯೆಂಬಂತೆ ಸೇರಿಸಿಕೊಳ್ಳುವುದು, ಅವರ ಮಗ ರವಿರಾಜ ಥಕ್ಕರ್ ಸೊಸೆ ಧೃತಿ, ಇವರನ್ನೇ ಬೆಂಬಲಿಸುವ ಶ್ಯಾಮಲಾ, ಪ್ರಭು, ಕಂಡೂ ಕಾಣದಂತಹಾ ಸಂಘರ್ಷ ಗಳ ದಾರಿಯಲ್ಲಿ ಸಾಗುವ ಕಥೆ.

ಅಪಾರ್ಟ್‌ಮೆಂಟ್ ನಲ್ಲಿ ಮನೆಯೊಂದನ್ನು ಕೊಂಡರೂ ಅದನ್ನು ತನ್ನದಾಗಿಸಿಕೊಂಡು ಅಲ್ಲಿ ನೆಲೆಯಾಗಲು ಪಡುವ ಕಷ್ಟಗಳು. ಬಿಲ್ಡರ್ ಗಳ ಚಾಲಾಕಿ ತನವೋ ದಗಲ್ಬಾಜಿ ತನವೋ ಒಟ್ಟಿನಲ್ಲಿ ಸರಳವಾಗಿ ಸಾತ್ವಿಕವಾಗಿ ಬದುಕಿದ ಶಿವಸ್ವಾಮಿಯಂತವರಿಗೆ ಬದುಕು ನಿರಾಳವಾಗಿರಲು ಬಿಡಲಾರದು. ದುಡಿತ ಅನಿವಾರ್ಯ ವೆಂಬಂತೆ.
ಎಲ್ಲವೂ ಹೆಚ್ಚಾಗಿಯೇ ಇದ್ದ ಧಾವಲ್ ರಿಗೆ ತಮ್ಮ ಹಿಡಿತದಿಂದ ಯಾವುದೂ ಜಾರಬಾರದೆಂಬಂತೆ. ಅದಕ್ಕಾಗಿ ಹೋರಾಟ. ಅವರೇ ಕಟ್ಟಿ ಬೆಳೆಸಿದ ಕಂಪನಿಗಳು ಕೊಂಡ ಮನೆಗಳು. ದೊಡ್ಡದೊಂದು ಸಾಮ್ರಾಜ್ಯದ ಒಡೆಯ, ಶಿವ ಸ್ವಾಮಿಯಲ್ಲಿ ಆಪ್ತತೆ ಕಂಡುಕೊಳ್ಳುತ್ತಾ ತೆರೆದುಕೊಳ್ಳುತ್ತಾ ಹೋಗುತ್ತಾನೆ.

ಡಿಟಿಗ್ರೂಪ್, ಸಾಫ್ಟ್‌ವೇರ್ ಜಗತ್ತು, ಅನೂಪ್ ಗಾರ್ಡೇನಿಯಾದೊಂದಿಗೆ ಅಲ್ಲಮನನ್ನೂ ಹೊತ್ತು ಶಿವಸ್ವಾಮಿ ಯವರು ಸಾಗುವುದೇ ವಿಶೇಷವಾಗಿದೆ. ಆಧುನಿಕ ಜಗತ್ತಿನೊಂದಿಗೆ ಇಲ್ಲೊಂದು ಆಧ್ಯಾತ್ಮದ ಜಗತ್ತೂ ತೆರೆದುಕೊಳ್ಳುತ್ತಾ ಹೋಗುತ್ತದೆ. ಮೇಲ್ನೋಟಕ್ಕೆ ಕಾಣಿಸುವುದರ ಹಿಂದೆ ಅಡಗಿರುವ ಬೇರೆ ಮುಖಗಳು ಸತ್ಯಗಳು ಶಿವಸ್ವಾಮಿಯಂತಹ ಸರಳ ಸಾದಾರಣ ಬದುಕನ್ನು ಬಾಳಿದವರಿಗೆ ಅರಿವಾಗುವುದು ಎಷ್ಟು ಕಷ್ಟವೋ ಹಾಗೇ
ಧಾವಲ್ ನ ಸೊಸೆ ಧೃತಿ ಯಂತವರಿಗೆ ಶಿವಸ್ವಾಮಿಯ ಪುಟ್ಟ ಮಗಳ ಸೊಳ್ಳೆಪರದೆ ಸಂಸಾರವೆಂಬ ಕಲ್ಪನೆಯೇ ಬೆರಗುಮೂಡಿಸುವಂತದ್ದು. ಪರಸ್ಪರ ಬದುಕಿನ ಕ್ರಮಗಳೇ ಬೇರೆಯಾದಾಗ ಚಿಂತನೆಗಳೂ ವಿಭಿನ್ನವಾಗುತ್ತ ಹೋಗುತ್ತವೆ.

“ಅಸ್ತಿತ್ವಕ್ಕೆ ಮನೆ ಬೇಕು ಆದರೆ ವಿಚಿತ್ರವಾಗಿ, ಅಸ್ತಿತ್ವಕ್ಕೂ ಮನೆಗೂ ವಿಲೋಮ ಸಂಬಂಧವಿದೆ. ಮನೆ ದೊಡ್ಡದಾದಷ್ಟು ಅಸ್ತಿತ್ವ ಕುಗ್ಗುತ್ತದೆ” ಶಿವಸ್ವಾಮಿಯವರದ್ದು ಸರಳವಾದ ಸಂಬಂಧಗಳ ಕುಟುಂಬವಾದರೆ ಧಾವಲ್ ರದ್ದು ಬಹಳ ಸಂಕೀರ್ಣವಾದ, ವ್ಯವಹಾರಕ್ಕೆ ಅಂಟಿಕೊಂಡಿದ್ದು ಬಹು ದೊಡ್ಡ ಅಂತರವೇ ಅಲ್ಲಿದೆ.
ತಾನೇ ಕಟ್ಟಿ ಬೆಳೆಸಿದ ಮೋಹವೋ ಅಸುರಕ್ಷಿತ ಭಾವವೋ ಅಭದ್ರತೆಯ ಭಯವೋ ಬಿಟ್ಟು ಕೊಡಲೊಲ್ಲದ ತಂದೆ,ತಮ್ಮದಾಗಿಸಿಕೊಳ್ಳಲೇಬೇಕೆಂಬ ಬಯಕೆಯ ಮಗ ಸೊಸೆ ಇವರ ನಡುವೆ ಸಿಕ್ಕಿದ ಶಿವಸ್ವಾಮಿ
“ಅವರವರ ಆಂತರ್ಯ ಅವರವರಿಗಷ್ಟೇ ತಿಳಿದಿರುತ್ತದೆ. ಅವರವರ ಕತ್ತಲೆಗೆ ಅವರವರು ಬೆಳಕು ಕಂಡುಕೊಳ್ಳಬೇಕು. ಅವರವರ ಮನದೊಳಗಿನ ಕ್ಲೇಶದ ಮಂಜನ್ನು ಅವರವರು ನಿರಭ್ರಗೊಳಿಸುಕೊಳ್ಳಬೇಕು”

“ಒಂದೇ ತೊರೆಯಲ್ಲಿ ಎರಡು ದೋಣಿಗಳಿದ್ದರೂ ಒಂದರಿಂದ ಮತ್ತೊಂದಕ್ಕೆ ಹಾರಿಕೊಳ್ಳಲು ಮಹಾ ಎದೆಗಾರಿಕೆ ಬೇಕು .ಒತ್ತದೇ ಹಣ್ಣಾಗಿರಬೇಕು” ಬೆಳಕಿನ ಕೊರತೆಗೆ ಹೇಗೆ ಕೆಲವು ಖಾಯಿಲೆಗಳು ಕಾಣಿಸಿಕೊಳ್ಳುತ್ತವೋ ಹಾಗೆಯೇ ಬೆಳಕಿನ ಯಥೇಚ್ಚಕ್ಕೂ ರೋಗಗಳಿರಬೇಕು . ಕೆಲವು ಹುಣ್ಣುಗಳು ಕತ್ತಲೆಯಲ್ಲಿ ವಾಸಿಯಾಗುತ್ತವೆ ಮತ್ತು ಬೆಳಕಿಗೆ ವ್ರಣವಾಗುತ್ತವೆ.”

ಈ ರೀತಿಯ ಸಾಲುಗಳು ತುಂಬಾ ಇಷ್ಟವಾಗುತ್ತವೆ. ಶಿವಸ್ವಾಮಿ ಬದುಕಿನೊಳಗಿನ ಅದೊಂದು ಕಹಿಸತ್ಯವನ್ನು ಎಲ್ಲೂ ತೆರೆದುಕೊಳ್ಳಲು ಇಚ್ಚಿಸಲಾರ. ಗಾಯ ಮಾದರೂ ಉಳಿದ ಕಲೆಯಂತೆ ಅವನ ಉಸಿರಲ್ಲಿ ನಿಟ್ಟುಸಿರಾಗಿ
ಹಾವೊಂದು ಮತ್ತೆ ಬಿಲ ಸೇರಲಾರದಂತೆ ಹುಡುಗರು ಅದನ್ನು ಕೊಂದುಬಿಡುವ ದೃಶ್ಯ ಅದೆಷ್ಟು ಕಲಕಿಬಿಡುತ್ತದೆ ಶಿವಸ್ವಾಮಿಯನ್ನು. ಹಾವಿಗೂ ಭಯ ಮನುಷ್ಯರಿಗೂ ಭಯ.

ನಗರಪ್ರದೇಶದಲ್ಲಿ ಕಂಡೂ ಕಾಣದಂತಹಾ ಕೆಲವು ಕ್ರೌರ್ಯಗಳು ಹಾಸು ಹೊಕ್ಕಾಗಿರುವ ಒತ್ತಡಗಳು ಲಾಲಸೆಗಳು ಆದುನಿಕ ಬದುಕಿನ ಪರಿಕ್ರಮದಲ್ಲಿ ಬದುಕಲೇಬೇಕಾದ ಅನಿವಾರ್ಯತೆಗಳು ಕಾದಂಬರಿಯ ಎಲ್ಲ ಪಾತ್ರಗಳನ್ನು ಒಂದಿಲ್ಲೊಂದು ತರದಲ್ಲಿ ಬಳಸಿಕೊಂಡಿವೆ.

ಮನುಷ್ಯ ವಿದ್ಯಾವಂತನಾದಷ್ಡು ಬುದ್ದಿವಂತನಾದಷ್ಡು ಸಂಬಂಧಗಳು ಸಂಕೀರ್ಣ ವಾಗುತ್ತವೆಯೇ ಎಂದು ಧಾವಲ್ ರ ಪರಿವಾರ ನೋಡಿದಾಗ ಅನಿಸುವುದು. ಸಂಬಂಧಗಳೂ ವ್ಯಾವಹಾರಿಕವಾಗಿ ವರ್ತಿಸತೊಡಗಿಬಿಡುತ್ತವಲ್ಲ!

ಧಾವಲ್ ತಮ್ಮ ಸಾಮ್ರಾಜ್ಯದ ಒಡೆತನವನ್ನು ಪೂರ್ತಿಯಾಗಿ ಮಗನಿಗೆ ಬಿಟ್ಟುಕೊಟ್ಟು ಮತ್ತೆ ತಮ್ಮ ಹಳೆಯ ಮನೆಗೇ ಹೋಗುತ್ತೇನೆಂದು ಹೇಳಿ ನಿರಾಳವಾಗಿಬಿಡುತ್ತಾರೆ.

ಅಲ್ಲಮನನ್ನು ಹೊತ್ತು ಸಾಗಿದ‌ ಶಿವಸ್ವಾಮಿ ಕೊನೆಯಲ್ಲಿ ಕಳೆದುಕೊಂಡನಾ? ಇಲ್ಲ ಪಡೆದುಕೊಂಡನಾ?.
ಕೊನೆಗೆ ಅಲ್ಲಮನನ್ನೂ!!

ನನ್ನ ಗ್ರಹಿಕೆಗೆ ದಕ್ಕಿದಂತೆ ಕೆಲವು ಸಾಲುಗಳ ಮೂಲಕ ಹಂಚಿಕೊಂಡಿದ್ದೇನೆ. ಒಳ್ಳೆಯದೊಂದು ಓದಿಗೆ ಕಾರಣವಾದ ಪುಸ್ತಕ.

‍ಲೇಖಕರು Admin

August 30, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: