ದಾಂತೇವಾಡದಲ್ಲಿ ಅಲೆಮಾರಿಗಳು!

ಆನಂದ ತೀರ್ಥ ಪ್ಯಾಟಿ

ಕೈಯಲ್ಲಿ ಉಪಾಹಾರದ ಪಾರ್ಸೆಲ್ ಹಿಡಿದುಕೊಂಡು, “ಎರಡು ಜಗದಲಪುರ” ಎಂದು ಹೇಳಿ ಟಿಕೆಟ್ ಪಡೆದೆವು. “ಪ್ಲಾಟ್ ಫಾರಂ ದೋ” ಎಂಬ ಮಾತು ಕೇಳಿ, ಒಳಗೆ ಬಂದಾಗ ನಿರ್ಜನ ವಾತಾವರಣ! ರೈಲಿಗಾಗಿ ಕಾಯುತ್ತಿದ್ದವರು ನಾವಿಬ್ಬರೇ!!

ಅದು ದಾಂತೇವಾಡಾ (ದಂತೇವಾಡಾ, ದಂತೇವಾರಾ) ರೈಲು ನಿಲ್ದಾಣ. ದಶಕಗಳಷ್ಟು ಹಳೆಯ ಕಟ್ಟಡವನ್ನು ಹಾಗೇ ಬಿಟ್ಟು, ತುಸುಮುಂದೆ ‘ಆಧುನಿಕ’ ನಿಲ್ದಾಣ ಕಟ್ಟಲಾಗಿದೆ. ಭತ್ತದ ಗದ್ದೆಗಳ ಮಧ್ಯೆ ಇರುವ ನಿಲ್ದಾಣದ ನೋಟವೇ ಬಲು ಚೆಂದ.

ನಿಲ್ದಾಣಕ್ಕೆ ಬರುವ ಮುನ್ನ ಚಹಾ ಕುಡಿಯಲು ಪಟ್ಟ ಶ್ರಮ ಅಷ್ಟಿಷ್ಟಲ್ಲ. ವಸತಿಗೃಹದಲ್ಲಿ ನಸುಕಿನ ಜಾವ ಸಿದ್ಧರಾಗಿ, ನಿಲ್ದಾಣದಲ್ಲಿ ಚಹಾ ಸೇವಿಸಿ, 7 ಗಂಟೆಯ ರೈಲು ಹತ್ತೋಣ ಎಂದು ಪಾದಯಾತ್ರೆ ಹೊರಟರೆ, ಒಂದೂ ಟೀ ಸ್ಟಾಲ್ ಯಾನೇ ಹೋಟೆಲ್ ಕಾಣಬಾರದೇ! “ಅಯ್ಯೋ ದೇವರೇ!” ಎಂದು ಹಣೆಬರಹವನ್ನು ಶಪಿಸುತ್ತ ನಿಲ್ದಾಣದಲ್ಲಾದರೂ ಚಹಾ ಸಿಕ್ಕೀತೆಂದು ಬಂದರೆ, ಹೋಟೆಲ್ ಇರಲಿ; ಅಲ್ಲಿ ಜನರೇ ಇಲ್ಲ! ಇಬ್ಬರು ಸಿಬ್ಬಂದಿ ಮಾತ್ರ ಕಂಡಿದ್ದು. “ಈ ಸ್ಟೇಷನ್ನಿಗೆ ಬರೋದೇ ಎರಡು ರೈಲು. ಅರ್ಧ ತಾಸಿಗೊಂದು ಬರುವ ಗೂಡ್ಸ್ ಇಲ್ಯಾಕೆ ನಿಲ್ಲುತ್ತವೆ? ಹೀಗಾಗಿ ಹೋಟೆಲ್ ಅನಗತ್ಯ” ಎಂಬ ವಾದವನ್ನು ವಿಧಿಯಿಲ್ಲದೇ ಇಬ್ಬರೂ ಒಪ್ಪಿಕೊಂಡೆವು. ಕೊನೆಗೆ ಟಿಕೆಟ್ ಪಡೆಯಲು ಹೋದಾಗ 110 ರೂಪಾಯಿ ಚಿಲ್ಲರೆ ಕೊಡದ ಹೊರತೂ ಟಿಕೆಟ್ ಸಿಗಲಿಲ್ಲ. ನಾವು ಕೊಟ್ಟ ಹಣವಷ್ಟೇ ಅವತ್ತಿನ ‘ನಗದು ಕಲೆಕ್ಷನ್’ ಆಗಿರಬಹುದು!

ಹೊಟ್ಟೆ ಸಿಕ್ಕಾಪಟ್ಟೆ ಚುರುಗುಡುತ್ತಿತ್ತು. ಸ್ಟೇಷನ್ ಹೊರಗೆ ಹೋಟೆಲ್ ಇದೆ ಎಂಬ ಆ ನೌಕರನ ಮಾತಿನಂತೆ ಅರ್ಧ ಕಿ.ಮೀ ದೂರ ಹೋದರೂ ಆ ಸುಳಿವೇ ಸಿಗಲಿಲ್ಲ. ನಡೆದೂ ನಡೆದೂ ಸುಸ್ತು ಬೇರೆ… ದಾರಿಯಲ್ಲಿ ಬೈಕ್ ಮೇಲೆ ಬರುತ್ತಿದ್ದ ಗಡ್ಡಧಾರಿ ಯುವಕನನ್ನು ನಿಲ್ಲಿಸಿ ವಿಚಾರಿಸಿದೆವು. ಸ್ಟೇಷನ್ ಎದುರಿಗೇ ಇದೆ ಎಂದು ಹಿಂದೆ ಕೈತೋರಿಸಿ, ಗಾಡಿ ಮೇಲೆ ಭರ್… ಅಂತ ಹೋಗಿಯೇ ಬಿಟ್ಟ. ಕೊನೇ ಪ್ರಯತ್ನವೆಂದು ಆ ದಿಕ್ಕಿನತ್ತ ಕಾಲು ಎಳೆದು ಹಾಕುತ್ತ ಬಂದರೆ, ಅದೇ ಗಡ್ಡಧಾರಿಯು ಬಂಡಿ ಮೇಲೆ ಒಲೆ, ಹೆಂಚು, ನೀರು, ಪ್ಲೇಟ್, ಲೋಟ ಇತರ ಸಾಮಗ್ರಿ ಜೋಡಿಸುತ್ತಿದ್ದ!! ಆತನ ಹೆಸರು ಶಿವ ಬಾಬು.

“ರಾಂಡಿ… ಇಡ್ಲಿ ದೊರಕ್ತುಂದಿ” ಎನ್ನುತ್ತ ಪ್ಲೇಟಿನಲ್ಲಿ ಇಡ್ಲಿ ಹಾಕಲು ಮುಂದಾದ ಆತನನ್ನು ತಡೆದು, ಪಾರ್ಸೆಲ್ ಕೊಡಲು ಹೇಳಿದೆ. ಅದಾಗಲೇ ರೈಲು ಬರುವ ಸೂಚನೆ ಸಿಕ್ಕಿತ್ತು. ಆತ ಚಕಚಕನೇ ಎರಡು ಪ್ಲೇಟ್ ಇಡ್ಲಿ+
ಸಾಂಬಾರ್+ಚಟ್ನಿ ಕಟ್ಟಿಕೊಟ್ಟ. ಹೇಳಬೇಕಿಲ್ಲ- ಚಹಾ ಮಾಡುವುದು ತಡವಾಗುತ್ತದೆಂದು ಶಿವಬಾಬು ಹೇಳಿದ್ದ. ನಿರಾಶೆ ದುಪ್ಪಟ್ಟಾಯಿತು.

ಪಾರ್ಸೆಲ್ ಹಿಡಿದು, ಪ್ಲಾಟ್ ಫಾರಂಗೆ ಬಂದು ಕೂತಾಗಲೂ ಅಲ್ಲಿದ್ದುದ್ದು ನಾವಿಬ್ಬರೇ! ಗೂಡ್ಸ್ ರೈಲು ಬಂದು ಹೋದ ಮೇಲೆ, ನಮ್ಮ ವಿದ್ಯುತ್ ಎಂಜಿನ್ ರೈಲು ಸದ್ದಿಲ್ಲದೇ ಆಗಮಿಸಿತು. ಗಡಿಬಿಡಿ ಇಲ್ಲ; ಗದ್ದಲ ಇಲ್ಲ; ಸೀಟು ಸಿಗದ ಆತಂಕವೂ ಇಲ್ಲ.

ಒಳಹೊಕ್ಕು ಎಲ್ಲಿ ಕೂಡೋಣ ಅಂತ ನಾನು ಕೇಳಿದಾಗ, ಮಿತ್ರ ಮಲ್ಲಿಕ್ “ಇಡೀ ಬೋಗೀನೇ ನಮ್ದಲ್ವಾ! ಎಲ್ಲಿ ಕೂತರೂ ಯಾವ ನನ್ಮಗಾನೂ ಕೇಳಲ್ಲ, ಕೆಮ್ಮಂಗಿಲ್ಲ” ಎಂದ! ಸೀಟಿನ ಮೇಲೆ ಬ್ಯಾಗ್ ಇಟ್ಟು, ದಾಂತೇವಾಡಾ ನಿಲ್ದಾಣಕ್ಕೆ ಬೈ ಬೈ ಹೇಳಲು ಬಾಗಿಲಲ್ಲಿ ನಿಂತು ಹೊರಗೆ ನೋಡಿದೆ. ನಮ್ಮ ಬೋಗಿಯ ಮುಂದೆಯೇ ಎಂಜಿನ್.‌ ಅದರ ಚಾಲಕರಿಗೆ ಇದೇ ಶಿವಬಾಬು ಇದೇ ಎರಡು ಸೆಟ್ ಟಿಫಿನ್ (ಇಡ್ಲಿ+ ಸಾಂಬಾರ್+ ಚಟ್ನಿ) ಪಾರ್ಸೆಲ್ ತಂದುಕೊಟ್ಟಿದ್ದು ಕಾಣಿಸಿತು.

ಎಲಾ… ಎಲಾ…!

‍ಲೇಖಕರು Admin

August 30, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: