ಹಾಡ್ಲಹಳ್ಳಿ ನಾಗರಾಜ್ ಅಂಕಣ – ಎಂ ಓ ಲಿಸ್ಟ್…

ಹಾಡ್ಲಹಳ್ಳಿ ನಾಗರಾಜ್ ಹೆಸರು ಕೇಳಿದಾಕ್ಷಣ ಮಲೆನಾಡು ಕಣ್ಮುಂದೆ ಹಾದುಹೋದಂತೆ.

ಬಿ.ಎಸ್ಸಿ ಪದವೀಧರರಾಗಿದ್ದು, ಎನ್.ಸಿ.ಸಿ ಇಲಾಖೆಯಲ್ಲಿ 36 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಅವರ ಕಾರ್ಯ ವೈಖರಿಯಿಂದಾಗಿ ಮುಖ್ಯಮಂತ್ರಿಗಳ ಶ್ಲಾಘನಾ ಪತ್ರಕ್ಕೆ ಪಾತ್ರರಾಗಿದ್ದಾರೆ. ಗೆಜೆಟೆಡ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ಪ್ರಸ್ತುತ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ.

ದೇವರಬೆಟ್ಟ, ಗುದ್ದಿನಿಂದ ತೆಗೆದ ಹೆಣ, ನಕ್ರ ಹಾಗೂ ನಾನು, ಕುಂಭದ್ರೋಣ (ಕತಾಸಂಕಲನಗಳು), ಬಾಡಿಗೆಬಂಟರು, ಬಿಂಗಾರೆಕಲ್ಲು, ಬೆಂಕಿಯಸುಳಿ, ಗೃಹ ಪುರಾಣ, ಕಡವೆಬೇಟೆ, ನಿಲುವಂಗಿಯ ಕನಸು ಕಾದಂಬರಿಗಳು ಪ್ರಕಟವಾಗಿವೆ.

‘ಕಾಡುಹಕ್ಕಿಯ ಹಾದಿನೋಟ’ ಎಂಬ ಆತ್ಮಕಥನ ಸ್ವರೂಪದ ಪ್ರಬಂಧ ಸಂಕಲನವಾಗಿದೆ. ಸುಮಾರು ನಾಲ್ಕು ದಶಕಗಳಿಂದಲೂ ಮಿತ್ರರೊಡಗೂಡಿ ಹಾಸನದಲ್ಲಿ ಹೊಯ್ಸಳ ಕಲಾ ಸಂಘ ಎಂಬ ಸಾಂಸ್ಕ್ರತಿಕ ಸಂಘಟನೆ ನಡೆಸುತ್ತಿದ್ದು, ಸಾಹಿತ್ಯಿಕ ಚಟುವಟಿಕೆ, ನಾಟಕ ಹಾಗೂ ಜನಪದ ಗೀತ ಗಾಯನ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.

ಸಾಹಿತ್ಯ ಪ್ರಕಾರದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಕೊಡಮಾಡುವ ಕಿರಂ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಸಿದ್ದಗಂಗಾ ಮಠ ಅನ್ನ ದಾಸೋಹ, ಅಕ್ಷರ ದಾಸೋಹ ಮುಖೇನ ವಿದ್ಯಾದಾನಕ್ಕೆ ಕಾರಣವಾಗಿ ನಾಡಿನ ಲಕ್ಷಾಂತರ ಬಡ ವಿದ್ಯಾರ್ಥಿಗಳ ಬದುಕಿನಲ್ಲಿ ಬೆಳಕು ಮೂಡಿಸಿದೆ.

ವಿದ್ಯೆಯಿಂದ ವಂಚಿತರಾಗಿ ಎಲ್ಲೋ ಮೂಲೆ ಗುಂಪಾಗಬೇಕಾಗಿದ್ದ ಬಡ ಗ್ರಾಮೀಣ ಮಕ್ಕಳು ಮಠದ ಮಡಿಲಿಗೆ ಬಿದ್ದ ಕಾರಣ ಸಮಾಜದ ಹಲವಾರು ರಂಗಗಳಲ್ಲಿ ತಮ್ಮ ಪ್ರತಿಭೆ ಮೆರೆಯಲು ಸಾಧ್ಯವಾಗಿದೆ. ಅಲ್ಲಿ ವಿದ್ಯೆ ಕಲಿತು ಹೋದವರು ಸಾಹಿತಿಗಳಾಗಿದ್ದಾರೆ, ಶಿಕ್ಷಣ ತಜ್ಙರಾಗಿದ್ದಾರೆ, ವಿಶ್ವವಿದ್ಯಾನಿಲಯದ ಕುಲಪತಿಗಳಾಗಿದ್ದಾರೆ, ಐ ಎ ಎಸ್, ಐ ಪಿ ಎಸ್ ಅಧಿಕಾರಿಗಳಾಗಿದ್ದಾರೆ, ನಾಟಕ, ಸಿನಿಮಾರಂಗಗಳಲ್ಲಿ ಮಿಂಚಿದ್ದಾರೆ.

ಹೀಗೆ ಮಠದ ಅನ್ನ ದಾಸೋಹ, ಅಕ್ಷರ ದಾಸೋಹಗಳು ಲಕ್ಷಾಂತರ ಬಡಮಕ್ಕಳ ಬದುಕಿನಲ್ಲಿ ‘ದಾಟು ಹಲಗೆ’ಯಾಗಿ ಪರಿಣಮಿಸಿದೆ. ಈ ಶ್ರೀ ಮಠದಲ್ಲಿ ವಿದ್ಯಾರ್ಜನೆ ಮಾಡಿ ಬದುಕು ರೂಪಿಸಿಕೊಂಡ ಹಾಡ್ಲಹಳ್ಳಿ ನಾಗರಾಜ್ ಕತೆಗಾರರಾಗಿಯೂ, ಕಾದಂಬರಿಕಾರರಾಗಿಯೂ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ.

ಸಿದ್ದಗಂಗೆಯಲ್ಲಿನ ಅವರ ಅನುಭವ ಕಥನಗಳನ್ನು ಇಲ್ಲಿ ನಿರೂಪಿಸಿದ್ದಾರೆ.

7

ಮಠದ ಹುಡುಗರು ತಮ್ಮ ಪಠ್ಯ ಪುಸ್ತಕಗಳನ್ನು ಗಮನವಿಟ್ಟು ಓದುತ್ತಿದ್ದರೋ ಬಿಡುತ್ತಿದ್ದರೋ! ಆದರೆ ಪ್ರತಿನಿತ್ಯ ಒಂದು ಸಾಲೂ ಬಿಡದೆ ಕುತೂಹಲದ ಕಣ್ಣುಗಳಿಂದ ಅತ್ಯಂತ ಶ್ರದ್ಧೆಯಿಂದ ಓದುತ್ತಿದ್ದ ದಾಖಲೆಯೊಂದು ಇತ್ತು.
ಅದು ಎಂ.ಓ.ಲಿಸ್ಟ್!

ನಾವು ಬೆಳಗಿನ ನಿತ್ಯ ಕರ್ಮಗಳನ್ನು ಮುಗಿಸಿ ಕಾವಿ ಪಂಚೆ ಉಟ್ಟು, ಅಂಚುಗಳು ಎದೆಯ ಮೇಲೆ ಬರುವಂತೆ ಭುಜದ ಮೇಲೆ ಕಾವಿ ಟವೆಲ್‌ ಹಾಕಿಕೊಂಡು, ಹಣೆಯ ತುಂಬಾ ವಿಭೂತಿ ಧರಿಸಿ, ಕಂಕುಳಲ್ಲಿ ತಟ್ಟೆ ಇರಕಿಕೊಂಡು ಬೆಳಗ್ಗೆ ಒಂಬತ್ತಕ್ಕೆಲ್ಲಾ ರೂಮಿನಿಂದ ಹೊರ ಬರುವ ವೇಳೆಗೆ ಮಠದ ಮುಖ್ಯ ಆವರಣದಲ್ಲೇ ಸ್ವಾಮೀಜಿಯವರ ಆಫೀಸಿನಿಂದ ತುಸು ದೂರದ ಒಂದು ಕಟ್ಟಡದ ಗೋಡೆಗೆ ಈ ಲಿಸ್ಟನ್ನು ಅಂಟಿಸಲಾಗಿರುತ್ತಿತ್ತು. ಅದನ್ನು ಅಷ್ಟು ಬೇಗ ಅಲ್ಲಿ ಯಾರು ಅಂಟಿಸಿ ಹೋಗಿರುತ್ತಾರೆ ಎಂದು ಮೊದಮೊದಲು ನಮಗೆ ಕುತೂಹಲವಾಗುತ್ತಿತ್ತು.

ಹಸಿವಿನಿಂದ ಹೊಟ್ಟೆ ಚುರುಗುಡುತ್ತಿದ್ದರೂ ಊಟದ ಹಾಲ್‌ಗೆ ಹೋಗುವ ಮೊದಲು ಪ್ರತಿಯೊಬ್ಬರೂ ಇಲ್ಲಿಗೆ ಒಂದು ಭೇಟಿ ಕೊಟ್ಟೇ ಹೋಗುತ್ತಿದ್ದರು. ಆ ದಾಖಲೆಯಲ್ಲಿ ಅಂದು ಮನಿಯಾರ್ಡರ್‌ ಬಂದಿರುವವರ ಹೆಸರು ತರಗತಿ ನಮೂದಿಸಲಾಗಿರುತ್ತಿತ್ತು. ನೂರಾರು ಹೆಸರಿರುತ್ತಿದ್ದ ಆ ಯಾದಿಯನ್ನು ಆಸೆಯಿಂದ, ಶ್ರದ್ಧೆಯಿಂದ, ಭಕ್ತಿಯಿಂದ ಒಂದೂ ಸಾಲು ಬಿಡದಂತೆ ಓದುತ್ತಿದ್ದೆವು.

ಅದರಲ್ಲಿ ನಮ್ಮ ಹೆಸರಿದ್ದರೆ ಆಕಾಶವೇ ಭೂಮಿಗೆ ಬಂದಷ್ಟು ಆನಂದ. ಇಲ್ಲವೇ ತಮಗೆ ತೀರ ಆಪ್ತರಾದವರ ಹೆಸರಿದ್ದರೆ ಒಂದು ಬಗೆಯ ಸಮಾಧಾನ. ಮನಿಯಾರ್ಡರ್‌ ಲಿಸ್ಟಿನಲ್ಲಿ ಹೆಸರಿದ್ದವರು ಕುಣಿದು ಕುಪ್ಪಳಿಸುತ್ತ ಊಟದ ಹಾಲ್‌ ಕಡೆ ಓಡಿದರೆ, ಹೆಸರಿಲ್ಲದವರು ಮುಖ ಇಳಿ ಹಾಕಿಕೊಂಡು ಅಲ್ಲಿಂದ ನಿರ್ಗಮಿಸುತ್ತಿದ್ದರು. ಲಿಸ್ಟಿನಲ್ಲಿ ಹೆಸರಿದ್ದವರು ಬೇಗ ಬೇಗ ಮುದ್ದೆ ನುಂಗಿ ಮುಗಿಸಿ, ಅನ್ನವನ್ನು ಎರಡೇ ಗುಕ್ಕಿಗೆ ನುಂಗಿ ಓಡೋಡಿ ಬಂದು ಆ ಎಂ.ಓ ಲಿಸ್ಟ್‌ ಎದುರಿಗೆ ಕ್ಯೂ ನಿಲ್ಲುತ್ತಿದ್ದರು.

ಅಷ್ಟರಲ್ಲಿ ಆ ಕಟ್ಟಡದ ಕಟ್ಟೆಯ ಮೇಲೆ ಒಂದು ಕಡೆ ಎದುರಿಗೆ ತನ್ನ ಸಣ್ಣ ಟ್ರಂಕ್‌ ಇಟ್ಟುಕೊಂಡು ಖಾಕಿ ದಿರಿಸಿಸ ಪೋಸ್ಟ್‌ ಮ್ಯಾನ್‌ ಲೇವಾದೇವಿ ಅಂಗಡಿಯ ಮಾರ್ವಾಡಿಯಂತೆ ಕುಳಿತಿರುತ್ತಿದ್ದ.

ಉಪಾಧ್ಯಾಯರಿರಲಿ, ತಮ್ಮ ಮುಖ್ಯೋಪಾಧ್ಯರ ಕೊಠಡಿಯ ಎದುರು ಸಹಾ ಹುಡುಗರು ಅಷ್ಟು ಶಿಸ್ತಿನಿಂದ ನಿಲ್ಲುತ್ತಿರಲಿಲ್ಲ. ಅಷ್ಟು ಭಯ ಭಕ್ತಿಯಿಂದ, ನಿಶ್ಶಬ್ಧದಿಂದ ನಿಲ್ಲುತ್ತಿದ್ದರು.

ಮೊದಲಿಗೆ ಆತ ನಿನ್ನ ಹೆಸರೇನು ಎಂದು ಹುಡುಗನಿಗೆ ಕೇಳುತ್ತಿದ್ದ. ನಂತರ ಲಿಸ್ಟಿನಲ್ಲಿ ನಿನ್ನ ಹೆಸರಿದೆಯಾ ಎನ್ನುತ್ತಿದ್ದ ನಂತರ ತನ್ನ ಟ್ರಂಕಿನಿಂದ ಆ ಹೆಸರಿನ ಎಂ.ಓ. ಫಾರ್ಮ್‌ ತೆಗೆದು ಆಚೀಚೆ ಮಗುಚಿ ನೋಡುತ್ತಾ ಎದುರು ನಿಂತ ಹುಡುಗನ ಮುಖವನ್ನೊಮ್ಮೆ ಅವಲೋಕಿಸುತ್ತಿದ್ದ.

ಮಠದಲ್ಲಿರುವ ಸಾವಿರಾರು ಹುಡುಗರಲ್ಲಿ ಮನಿಯಾರ್ಡರ್‌ ಪಡೆಯಬೇಕಾದ ಹುಡುಗ ಇವನೇ ಎಂದು ಸಾಬೀತಾಗಬೇಕಲ್ಲ!.

ಅವನು ಪ್ರಶ್ನೆಗಳ ಮಳೆಗೆರಯತೊಡಗುತ್ತಿದ್ದ. ಹುಡುಗ ಪರೀಕ್ಷೆಗೆ ಸಿದ್ಧವಾದವನಂತೆ ಎದೆಸೆಟೆಸಿ ನಿಲ್ಲುತ್ತಿದ್ದ.
ಯಾರು ಮನಿಯಾರ್ಡರ್‌ ಕಳಿಸಬೇಕು?
ಅವರು ನಿನಗೇನು ಆಗಬೇಕು?
ಯಾವ ಊರಿಂದ?
ಯಾವ ಪೋಸ್ಟ್‌ ಆಫೀಸಿನಿಂದ?
ಎಷ್ಟು ಹಣ ಬರಬೇಕು?
ಹುಡುಗ ಎಂ.ಓ ಫಾರ್ಮಿನಲ್ಲಿರುವಂತೆ ಸಮರ್ಪಕ ಉತ್ತರ ಕೊಟ್ಟನೋ ಸರಿ….

ಗುರುತು ಖಚಿತಪಡಿಸಿಕೊಂಡ ಫೋಸ್ಟ್‌ಮ್ಯಾನ್‌ ಬಾ ಇಲ್ಲಿ ಸೈನ್‌ ಹಾಕು ಎಂದು ಫಾರ್ಮ್‌ ಮುಂದೆ ಹಿಡಿಯುತ್ತಿದ್ದ. ಟ್ರಂಕಿನ ತಳದಿಂದ ನೋಟುಗಳನ್ನು ಎಳೆದು ಆ ಹುಡುಗನಿಗೆ ಬಂದಿದ್ದ ಎರಡೋ, ಐದೋ, ಹತ್ತೋ ರೂಪಾಯಿ ಎಣಿಸಿ ಕೈಗಿಟ್ಟು ಫಾರ್ಮಿನ ಕೆಳಭಾಗವನ್ನು ಹರಿದು ಅವನ ಕೈಗಿಡುತ್ತಿದ್ದ.

ಮುಖ ಅರಳಿದ ಹುಡುಗ ಆ ತುಣುಕಿನಲ್ಲಿ ಮನೆಯವರು ಬರೆದಿದ್ದ ಒಕ್ಕಣಿಯನ್ನು ಓದಿಕೊಳ್ಳುತ್ತ ತನ್ನ ಗೆಳೆಯರೊಂದಿಗೆ ತನ್ನ ಕೊಠಡಿಯ ಕಡೆಗೆ ಕುಣಿಯುತ್ತಾ ಓಡುತ್ತಿದ್ದ.

ಆ ರೂಮಿನಲ್ಲಿ 15 ಜನರಿದ್ದರೂ ನಮ್ಮ ಕಡೆಯ ಬೋರೇಗೌಡನನ್ನು ಬಿಟ್ಟರೆ ಬೇರಾರ ಜತೆಗೂ ಅದೇಕೋ ಸಲುಗೆಯೇ ಬೆಳೆಯಲಿಲ್ಲ. ಬಯಲು ಸೀಮೆಯ ಕಡೆಯ ಹುಡುಗರು ಊರಿನಿಂದ ಬರುವಾಗಲೇ ರಾಗಿ ಹುರಿಹಿಟ್ಟು, ಕೋಡುಬಳೆ, ಚಕ್ಕುಲಿ ಮುಂತಾದ ಬಾಳಿಕೆ ಬರುವ ತಿಂಡಿ ಪದಾರ್ಥಗಳನ್ನು ತಂದು ಟ್ರಂಕಿನಲ್ಲಿಟ್ಟುಕೊಂಡಿರುತ್ತಿದ್ದರು. ಅವರು ಅದನ್ನು ಯಾವಾಗ ತಿನ್ನುತ್ತದ್ದರೋ ತಿಳಿಯುತ್ತಿರಲಿಲ್ಲ. ಮಲೆ ಸೀಮೆಯ ನಮಗೆ ಆ ತಿಂಡಿ ಪರಿಚಯವೇ ಇರಲಿಲ್ಲ. ಸ್ನೇಹ ಮಾಡಿಕೊಂಡರೆ, ಟ್ರಂಕಿನಲ್ಲಿರುತ್ತಿದ್ದ ತಿಂಡಿ ನಮಗೂ ಕೊಡಬೇಕಾಗುತ್ತದೆಂದೋ ಏನೋ ಅವರು ನಮ್ಮೊಂದಿಗೆ ಅಪರಿಚಿತರಂತೆಯೇ ನಡೆದುಕೊಳ್ಳುತ್ತಿದ್ದರು.
ರಾತ್ರಿ ದೀಪ ಆರಿದ ಮೇಲೆ ಆ ಎಣ್ಣೆ ತಿಂಡಿಯ ಗಮ ನಮ್ಮ ಮೂಗಿಗೂ ಬಡಿಯುತ್ತಿತ್ತು. ಕೆಲವೊಮ್ಮೆ ʼಕಟುಂ ಕಟುಂʼ ಎಂಬ ಸದ್ದು ನಮ್ಮ ಕಿವಿಗೆ ಅಪ್ಪಳಿಸಿ ನಮಗೆ ನಿದ್ದೆಗೇಡಾಗುತ್ತಿತ್ತು.

ನಾವು ಶಾಲೆಯಲ್ಲಿರುತ್ತಿದ್ದ ವಾರದ ದಿನಗಳು ಹೇಗೋ ಕಳೆದು ಹೋಗುತ್ತಿದ್ದವು. ನಮಗೆ ಕಷ್ಟವಾಗುತ್ತಿದ್ದುದು ಭಾನುವಾರಗಳಂದು. ಮಾವಿನ ತೋಪಿಗೆ ಹೋಗುವಾಗ ದಾರಿಯಲ್ಲೋ, ಇಲ್ಲ ಸಮೀಪದ ಬಂಡೆಪಾಳ್ಯದಲ್ಲೋ ರಜಾದ ದಿನ ತಿರುಗಾಡುವಾಗ ಗೂಡಂಗಡಿಗಳಲ್ಲಿ ಜೋಡಿಸಿಟ್ಟುರುತ್ತಿದ್ದ ವಿವಿಧ ರೀತಿಯ ತಿಂಡಿಗಳು ನಮ್ಮನ್ನು ಸೆಳೆದು ಬಾಯಲ್ಲಿ ನೀರೂರುವಂತೆ ಮಾಡುತ್ತಿದ್ದವು.

ಬಂಡೆಪಾಳ್ಯದ ದಾರಿ ಬದಿಯಲ್ಲಿ ಕೆಲ ಹೆಂಗಸರು ನೆಲಗಡಲೆ, ಪೆಪ್ಪರುಮೆಂಟು, ನಿಪ್ಪಟ್ಟು, ಕೋಡುಬಳೆ, ಖಾರಖಾರವಾದ ಹಸಿಮೆಣಸಿನಕಾಯಿ ಚಟ್ನಿ ಹಾಕಿದ ತಟ್ಟೆ ಇಡ್ಲಿ ಮುಂತಾದುವನ್ನು ಕುಕ್ಕೆಯಲ್ಲಿ ಇಟ್ಟುಕೊಂಡು ಮಾರುತ್ತಿದ್ದರು.

ಕ್ಯಾತ್ಸಂದ್ರ ಹಾಗೂ ಬಿ.ಎಚ್‌.ರಸ್ತೆಯ ಅಂಗಡಿಗಳಿಗೆ ಹೋಲಿಸಿದರೆ ಬಂಡೆಪಾಳ್ಯದ ಹಾದಿ ಬದಿಯ ತಿಂಡಿ ಬಹಳ ಅಗ್ಗವಾಗಿರುತ್ತಿತ್ತು. ಬಹು ಸಂಖ್ಯಾತ ಹುಡಗರು ಭಾನುವಾರ ಆ ಕಡೆಯೇ ಅಡ್ಡಾಡುತ್ತಿರುತ್ತಿದ್ದರು.
ನಾನು ಬೋರೇಗೌಡ ಹಾಗೂ ಇತರ ರೂಮುಗಳಲ್ಲಿದ್ದ ನಮ್ಮ ಕಡೆಯ ಹುಡುಗರೂ ಒಟ್ಟಾಗಿ ಬಂಡೇಪಾಳ್ಯಕ್ಕೆ ಹೋಗಿ ನಾಲಿಗೆ ಚಪಲ ತೀರಿಸಿಕೊಂಡು ಬರುತ್ತಿದ್ದೆವು.

ಅವರವರ ಜೇಬಿನ ಶಕ್ತ್ಯಾನುಸಾರ ಅವರವರು ತಿನ್ನುವ ಪರಿಪಾಠ. ಜೇಬಲ್ಲಿ ಕಾಸಿಲ್ಲದವರಿಗೆ ಕಾಸಿದ್ದವರು ಅನುಕಂಪದ ಆಧಾರದಲ್ಲಿ ಸಾಲ ಕೊಡುವ ನಿಯಮ. ಸಾಲ ಪಡೆದುಕೊಂಡವನು ಊರಿನಿಂದ ಎಂ.ಓ.ತರಿಸಿ ಋಣ ಮುಕ್ತನಾಗಬೇಕಾದುದು ಕಡ್ಡಾಯ.

ಬರೀ ಇಷ್ಟೇ ಅಲ್ಲ. ಬಟ್ಟೆ ಒಗೆಯುವ ಸೋಪಿಗೆ, ಮೈ ಸೋಪಿಗೆ, ಪೇಸ್ಟಿಗೆ, ತಲೆಗೆ ಹಾಕುವ ಹರಳೆಣ್ಣೆಗೆ, ಇರುವ ಒಂದೆರಡು ಬಟ್ಟೆ ಹರಿದರೆ ಹಾಗೂ ಚಪ್ಪಲಿ ಕಿತ್ತು ಹೋದರೆ ರಿಪೇರಿ ಮಾಡಿಸಿಕೊಳ್ಳಲು ಹೀಗೆ ಈ ಎಲ್ಲಾ ಖರ್ಚಿನ ಬಾಬ್ತಿಗೆ ಹಣದ ಅವಶ್ಯಕತೆ ಬೀಳುತ್ತಿತ್ತು.

ಊರಿನಲ್ಲಿ ಮನೆಯವರು ಒಂದೊಂದು ಆಣೆ ಹೊಂದಿಸಲೂ ಪಡಿಪಾಟಲು ಪಡುತ್ತಿದ್ದುದ್ದು ತಿಳಿದೇ ಇದ್ದುದರಿಂದ ಹಣಕ್ಕೆ ಬೇಡಿಕೆ ಒಡ್ಡಿ ಅವರನ್ನು ಮತ್ತಷ್ಟು ತೊಂದರೆಗೆ ಸಿಲುಕಿಸುವ ಮನಸ್ಸಾಗುತ್ತಿರಲಿಲ್ಲ.
ಆದರೇನು ಮಾಡುವುದು? ಅನಿವಾರ್ಯ ಖರ್ಚುಗಳನ್ನು ತಡೆಯಲಾದೀತೆ?.

ನಾನೂ ಕೆಲ ಸ್ನೇಹಿತರ ಬಳಿ ಪುಡಿಗಾಸಿನ ಸಾಲ ಮಾಡಿಕೊಂಡಿದ್ದೆ. ಊರಿಗೆ ಪತ್ರ ಬರೆದು ಹಣಕ್ಕೆ ಬೇಡಿಕೆ ಇಡದೇ ವಿಧಿಯೇ ಇರಲಿಲ್ಲ. ಆದರೆ ನೇರವಾಗಿ ಕೇಳಿ ಮನೆಯವರ ಮನಸ್ಸು ನೋಯಿಸುವ ಮನಸ್ಸಾಗಲಿಲ್ಲ. ಮಠದ ವಾತಾವರಣದ ಬಗ್ಗೆ ಬರೆದೆ. ಅದಕ್ಕೆ ಒಗ್ಗಿಕೊಂಡಿರುವುದೂ, ಸಂತೋಷವಾಗಿರುವುದೂ, ಹಲವಾರು ಸ್ನೇಹಿತರು ದೊರೆತಿರುವುದೂ, ತರಗತಿಯಲ್ಲಿ ಚೆನ್ನಾಗಿ ಓದುತ್ತಿರುವುದೂ ಇಲ್ಲಿಯೂ ಬಹುತೇಕ ಹುಡುಗರು ಒಳ್ಳೆಯ ಸ್ಥಿತಿಯಲ್ಲಿರುವುದು, ಸ್ವಲ್ಪ ದುಡ್ಡಿದ್ದರೆ ನಾನೂ ಅವರಂತೆಯೇ ಚೆನ್ನಾಗಿರಬಹುದಾಗಿರುವುದೂ, ಸ್ನೇಹಿತರು ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿರುವುದೂ, ದುಡ್ಡಿಗೆ ತೊಂದರೆಯಾದಾಗ ಹೊಂದಿಸಿ ಸಾಲವಾಗಿ ಕೊಟ್ಟು ನಿಧಾನವಾಗಿ ಊರಿನಿಂದ ತರಿಸಿಕೊಡು ಎಂದು ಹೇಳಿರುವುದೂ, ಈ ಎಲ್ಲಾ ವಿಚಾರಗಳನ್ನು ಸುತ್ತು ಬಳಸಿನ ಹಾದಿಯಲ್ಲಿ ಹೇಳಿ ನನ್ನ ಅಗತ್ಯವೇನು ಎಂಬುದನ್ನು ಅರ್ಥಮಾಡಿಕೊಳ್ಳಲು ಅವರಿಗೇ ಬಿಟ್ಟಿದ್ದೆ. ಆ ಕಾಗದದ ಬಗ್ಗೆ ಈಗ ಯೋಚಿಸಿದರೆ ಅದೊಂದು ಸಣ್ಣ ಕತೆಯಂತಿತ್ತು ಎನ್ನಿಸುತ್ತದೆ.

ಅವರು ನನ್ನನ್ನು ಕೈ ಬಿಡಲಾರರು ಎಂದು ಮನಸ್ಸಿನಲ್ಲಿ ಆಸೆ ಇಟ್ಟುಕೊಂಡು ಪ್ರತಿದಿನ ಬೆಳಗ್ಗೆ ಎಂ.ಓ ಲಿಸ್ಟ್‌ ಎಂಬ ಮಹಾಕಾವ್ಯದ ಎದುರು ನಿಂತು ಒಂದು ಸಾಲೂ ಬಿಡದೆ ಓದುತ್ತಿದ್ದೆ. ಆದರೆ ಪ್ರತಿದಿನವೂ ನಿರಾಸೆಯೇ!
ಒಂದು ತಿಂಗಳು ಕಳೆಯಿತು. ಮೊದಲ ಕಾಗದ ಅರ್ಥವಾಗಿಲ್ಲವೇನೋ ಅಂದುಕೊಂಡು ಸ್ವಲ್ಪ ನೇರವಾಗಿ ನನ್ನ ಸಮಸ್ಯೆ, ಹಣದ ಅಗತ್ಯ ಎಲ್ಲದರ ಬಗ್ಗೆ ವಿವರವಾಗಿ ಬರೆದೆ.

ಮತ್ತೊಂದು ತಿಂಗಳು ಕಳೆಯಿತು. ಎಂ.ಓ.ಲಿಸ್ಟ್‌ ನನ್ನ ಪಾಲಿಗೆ ಅರ್ಥವಾಗದ ಮಹಾಕಾವ್ಯದಂತೆ ಆಗಿಹೋಯಿತು.
ಯಾವಾಗ ಎಂ.ಓ ಲಿಸ್ಟಿನಲ್ಲಿ ನನ್ನ ಹೆಸರು ಮೂಡಲಿಲ್ಲವೋ, ಮನೆಯವರೇಕೋ ನನ್ನನ್ನು ಕೈ ಬಿಟ್ಟರೇನೋ ಎಂದು ದಿಗಿಲಾಗತೊಡಗಿತು.

ಸ್ನೇಹಿತರಿಗೆ ಸಾಲ ಕೊಡಬೇಕಾಗಿರುವುದು, ಮುಂದಿನ ತಿಂಗಳು ರಜಾಕ್ಕೆ ಊರಿಗೆ ಬರಲು ಬಸ್‌ ಚಾರ್ಜಿಗೆ ಸಹಾ ದುಡ್ಡಿಲ್ಲದಿರುವುದು ಎಲ್ಲವನ್ನೂ ಬರೆದು ಮತ್ತೊಂದು ಪತ್ರ ಕಳಿಸಿದೆ.

ಹಿಂದಿನ ಬಾರಿ ವಿಳಾಸವನ್ನೇನಾದರೂ ತಪ್ಪಾಗಿ ಬರೆದಿರಬಹುದೇ ಎಂದು ಬೋರೇಗೌಡನಿಗೆ ತೋರಿಸಿ ಓದಿಸಿದೆ.
ʼಗುರುಶಾಂತಗೌಡ, ಹಾಡ್ಲಹಳ್ಳಿ, ಹೆತ್ತೂರು ಅಂಚೆ, ಸಕಲೇಶಪುರ ತಾಲೂಕು, ಹಾಸನ ಜಿಲ್ಲೆʼ.
ಇಂಗಿಷಿನಲ್ಲಿದ್ದ ವಿಳಾಸವನ್ನು ಓದಿದ ಬೋರೇಗೌಡ ಅಡ್ರೆಸ್‌ ಸರಿಯಾಗೇ ಬರೆದಿದ್ದೀಯಲ್ಲ ಎಂದ.
ಅದಾಗಿ ಒಂದು ವಾರಕ್ಕೆ ಊರಿಂದ ಒಂದು ಪತ್ರ ಬಂತು. ಕುತೂಹಲದಿಂದ ಒಡೆದು ಓದಿದೆ.
ಅಪ್ಪ ಬರೆದಿದ್ದರು.

ʼನಾವೆಲ್ಲಾ ಕ್ಷೇಮ. ನೀನು ಚೆನ್ನಾಗಿದ್ದೀಯಾ ತಾನೆ? ನಿನ್ನ ಕ್ಷೇಮ ಸಮಾಚಾರಕ್ಕಾಗಿ ನಿನ್ನ ಕಾಗದ ಎದುರು ನೋಡಿ ನೋಡಿ ನಮಗೆ ನಿರಾಸೆಯಾಗಿದೆ. ನೀನು ಯಾಕೆ ಹೀಗೆ ನಮ್ಮನ್ನು ನಿರಾಸೆಗೊಳಿಸುತ್ತೀಯಾ? ನಮ್ಮನೇಕೆ ಮರೆತು ಬಿಟ್ಟೆ? ಒಂದು ಕಾಗದ ಬರೆಯಲಾಗದಷ್ಟು ತೊಂದರೆ ಇರುವುದಾದರೂ ಏನು? ಹಣದ ತೊಂದರೆ ಯೇನಾದರೂ ಇದ್ದರೆ ನಮಗೆ ಬರೆದು ತಿಳಿಸುವುದಲ್ಲವಾ?

ನಾವೆಲ್ಲಾ ಬಹಳ ಚಿಂತೆಗೆ ಒಳಗಾಗಿದ್ದೇವೆ, ನಿಮ್ಮ ಅವ್ವನಂತೂ ಸರಿಯಾಗಿ ಊಟ ನಿದ್ರೆಯನ್ನು ಮಾಡುತ್ತಿಲ್ಲ. ಕೂಡಲೇ ಕಾಗದ ಬರೆಯುವುದು.

ಇಂತಿ ನಿನ್ನ ಕ್ಷೇಮ ಸಮಾಚಾರಕ್ಕಾಗಿ ಎದುರು ನೋಡುತ್ತಿರುವ….

ಕಾಗದ ದ ಒಕ್ಕಣೆ ಓದಿ ದಿಗ್ಭ್ರಮೆಯಾಯಿತು. ಇದೇಕೆ ಹೀಗಾಯಿತು ಎಂದು ಎಷ್ಟು ಯೋಚಿಸಿದರೂ ಹೊಳೆಯದಾಯಿತು. ಮನೆಯವರ ಪರಿಸ್ಥಿತಿ ತಿಳಿದು ದುಃಖ ಒತ್ತರಿಸಿ ಬಂತು. ಕಾಗದ ಹಿಡಿದು ಅಳುತ್ತಾ ಕೂತಿದ್ದ ನನ್ನ ಬಳಿಗೆ ಬಂದ ಬೋರೇಗೌಡ, ಕಾಗದ ಕೈಗೆ ತೆಗೆದುಕೊಂಡು ನೋಡಿ ಅವನೂ ತಬ್ಬಿಬ್ಬಾದ.

ʼನೋಡು ಹ್ಯಾಗೂ ನಾಡಿದ್ದರಿಂದ ರಜಾ ಶುರುವಾಗುತ್ತೆ ನೀನು ಯೋಚನೆ ಮಾಡ್ತಾ ಕೂರ ಬ್ಯಾಡ.ದುಡ್ಡು ಅಡ್ಜಸ್ಟ್‌ ಮಾಡಿಕೊಂಡು ಊರು ತಲುಪು. ನಾನೂ ಊರಿಗೆ ಹೋಗಿ ಟ್ರಂಕ್‌ ಇಟ್ಟು ನಿಮ್ಮ ಊರಿಗೆ ಬರುತ್ತೇನೆ. ಈಗ ಧೈರ್ಯ ತಂದುಕೋ ಎಂದು ಹೇಳುತ್ತಾ ದುಡ್ಡು ಹೊಂದಿಸಲು ಸ್ನೇಹಿತರನ್ನು ಹುಡುಕಿಕೊಂಡು ಹೋಗಿದ್ದ…
ನಾನು ರಜಾ ಶುರುವಾದ ದಿನವೇ ತಲೆ ಮೇಲೆ ಟ್ರಂಕ್‌ ಹೊತ್ತುಕೊಂಡು ಬಸ್‌ ಹಿಡಿಯಲು ತುಮಕೂರು ಕಡೆ ಹೊರಟೆ….

ನಾನು ಊರು ತಲುಪಿದಾಗ ಸಂಜೆಯಾಗಿತ್ತು. ಆಗ ತಾನೇ ಗದ್ದೆಯಿಂದ ಬಂದಿದ್ದ ಅವ್ವ, ಟ್ರಂಕ್‌ ಹೊತ್ತುಕೊಂಡು ಬರುತ್ತಿದ್ದ ನನ್ನ ಬಳಿಗೆ ಓಡಿ ಬಂದು ಉದ್ವೇಗದಿಂದ ತಬ್ಬಿಕೊಂಡು ಬೋರಾಡಿ ಅಳ ತೊಡಗಿದಳು. ಕ್ಷಣಕಾಲ ತಡೆದು ನನ್ನ ಕೆನ್ನೆ ಕೆನ್ನೆಗೆ ಹೊಡೆಯತೊಡಗಿದಳು.

ಅದನ್ನು ಕಂಡ ಅಪ್ಪ ಅಲ್ಲಿಗೆ ಬಂದು ʼಅದ್ಯಾಕೆ ಹಂಗೆ ಹುಚ್ಚಿಯಂಗೆ ಆಡ್ತೀಯ… ಅವನು ಸುಧಾರಿಸಿಕೊಳ್ಲಿ… ಕೇಳಾನ ತಡಿ ಎನ್ನುತ್ತಾ ಟ್ರಂಕ್‌ ಇಳಿಸಿಕೊಂಡರು. ಮಠದಲ್ಲಿ ಚೆನ್ನಾಗಿ ಊಟ ಬೀಳುತ್ತೆ… ನೀನು ನಮ್ಮನ್ನೆಲ್ಲಾ ಮರ್ತು ಬಿಟ್ಟು ನೆಮ್ಮದಿ ಹಾಳು ಮಾಡಿದೀಯ ಎಂದು ಅಪ್ಪ…. ನಾನು ನನ್ನ ಗೋಳು ಹೇಳಿಕೊಂಡು ಅಷ್ಟೆಲ್ಲಾ ಕಾಗದ ಬರೆದರೂ ದುಡ್ಡು ಕಳಿಸಲು ಆಗದ ಕಾರಣಕ್ಕೆ ಕಾಗದವೇ ತಲಪಿಲ್ಲ ಎಂಬ ನೆಪ ತಾಳುತ್ತೀರಿ ಎಂದು ನಾನು…
ಹೀಗೆ ರಾತ್ರಿಯೆಲ್ಲಾ ವಾದ ವಿವಾದವಾದರೂ ನನ್ನ ಕಾಗದಗಳ ವಿಚಾರ ಮಾತ್ರ ನಿಗೂಢವಾಗಿಯೇ ಉಳಿದು ಬಿಟ್ಟಿತು.

ಮಗ ತಿರುಗಿ ಬಂದ ಕಾರಣಕ್ಕೆ ಮನೆಯವರು, ಮತ್ತೆ ತಂದೆ ತಾಯಿಯರ ಮಡಿಲು ಸೇರಿದ್ದ ನಾನು. ಬೆಳಗಿನ ಜಾವದ ವೇಳೆಗೆ ನೆಮ್ಮದಿಯ ಸುಖನಿದ್ರೆಗೆ ಜಾರಿದ್ದೆವು.
ಒಂದೆರಡು ದಿನ ಕಳೆದಿತ್ತು.
ʼಹಡ್ಲಳ್ಳಿ ಚಿಗವ್ವ ನೀನ್‌ ರಜಕ್ಕೆ ಬಂದಾಗ ಕಳ್ಸಕೆ ಹೇಳಿದಾಳೆ. ಈವತ್ತು ಹಂಗೇ ತಿರುಗಾಡಿಕೊಂಡು ಹೋಗಿ ಮಾತಾಡಿಸಿಕೊಂಡು ಬಾ. ಅವರಿಗೂ ಖುಷಿಯಾಗುತ್ತೆ.
ಅವ್ವ ಹೇಳಿದ್ದಳು.

ಅವ್ವನ ಆ ತಂಗಿ ಅವಳ ಮದುವೆಗೆ ಮುಂಚೆ, ನಾವೆಲ್ಲಾ ಚಿಕ್ಕ ಮಕ್ಕಳಿದ್ದಾಗ ಕೆಲ ವರ್ಷ ನಮ್ಮಲ್ಲಿಯೇ ಇದ್ದು ಅವ್ವನ ನೆರವಿಗೆ ನಿಂತಿದ್ದವಳು. ನಾವು ಎಂದರೆ ಅವಳಿಗೆ ಬಹಳ ಪ್ರೀತಿ.

ನಾಲ್ಕು ಮೈಲಿಯ ಕಾಲುದಾರಿ. ನಡೆದುಕೊಂಡು ಹೋಗಿ ಬರುವುದರಿಂದ ನನಗೂ ಬಾಲ್ಯದ ನೆನಪು ಮರುಕಳಿಸಿ ಖುಷಿಯಾದೀತು ಎಂದು ಯೋಚಿಸುತ್ತಾ “ಹೂಂ ಸರಿʼ ಎಂದೆ.

ದಾರಿ ನಡೆಯುತ್ತಾ ಯೋಚಿಸತೊಡಗಿದೆ. ಹಾಡ್ಲಹಳ್ಳಿ…. ಹಡ್ಲಹಳ್ಳಿ
ಇದೇಕೆ ಈ ಎರಡು ಊರುಗಳಿಗೆ ಒಂದೇ ತರದ ಹೆಸರಿಟ್ಟರು. ಎರಡಕ್ಕೂ ಒಂದು ʼದೀರ್ಘʼ ವ್ಯತ್ಯಾಸ ಅಷ್ಟೇ… ಇಂಗಿಷ್‌ನಲ್ಲಿ ಬರೆದರೆ ಒಂದೇ ಸ್ಪೆಲ್ಲಿಂಗ್‌…
ಈ ಊರಿಗೆ ಈ ತರದ ಹೆಸರು ಬರಲು ಯಾವುದೇ ಸ್ಥಳ ಪುರಾಣ, ಐತಿಹ್ಯ ಇರುವುದು ಯಾರಿಗೂ ತಿಳಿಯದು.
ಮಠದಲ್ಲಿದ್ದ ಕರ್ನಾಟಕದ ಇತರ ಭಾಗದ ಹುಡುಗರು ತಮ್ಮ ತಮ್ಮ ಊರುಗಳಿಗೆ ಆ ಹೆಸರು ಬಂದದ್ದು ಹೇಗೆ ಎಂಬುದನ್ನು ಪ್ರಚಲಿತ ಐತಿಹ್ಯ ಹಾಗೂ ಸ್ಥಳ ಪುರಾಣಗಳ ನೆರವಿನಿಂದ ವಿವರಿಸಿ ಹೇಳುವುದನ್ನು ಕೇಳಿ ಅಚ್ಚರಿ ಪಟ್ಟಿದ್ದೆ….

ಹಡ್ಲಹಳ್ಳಿಯ ಚಿಗವ್ವನ ಮನೆಯಲ್ಲಿ ಮಧ್ಯಾಹ್ನದ ಊಟಕ್ಕೆ ಕುಳಿತಿದ್ದೆವು. ಮುದುಕರೊಬ್ಬರು ಓಣಿಯಲ್ಲಿ ಕೋಲೂರಿಕೊಂಡು ಚಿಗವ್ವನ ಮನೆಯ ಕಡೆಗೇ ನಡೆದುಕೊಂಡು ಬರುತ್ತಿದ್ದರು.

ʼಗುರುಶಾಂತಗೌಡರು ನಮ್ಮನೆ ಕಡೆಲೇ ಬರ್ತಿದಾರಲ್ಲʼ ಎಂದುಮನೆಯವರೆಲ್ಲಾ ಆಶ್ಚರ್ಯ ಪಟ್ಟರು. ಒಳಗೆ ಬಂದ ಆ ವೃದ್ಧರನ್ನು ಕೂರಲು ಹೇಳಿದರು. ಆವರು ʼಇಲ್ಲ ಇಲ್ಲ ಈ ಹಾಡ್ಲಹಳ್ಳಿ ಹುಡುಗ ಬಂದಿರದು ಗೊತ್ತಾಯ್ತು… ಇವೊಂದಿಷ್ಟು ಕಾಗದ ನಮ್ಮನೆಲೇ ಇದ್ವು… ನೋಡು ಮಗ ಇವು ನಿಮ್ಮಪ್ಪಗೆ ಬಂದ ಕಾಗದಾನಾ? ಎಂದು ಮಡಚಿದ ಇನ್‌ಲ್ಯಾಂಡ್‌ ಲೆಟರ್‌ಗಳನ್ನು ನನ್ನ ಕೈಗೆ ನೀಡಿದರು.

ಬಿಡಿಸಿ ನೋಡಿದೆ.. ಹೌದು ನಾನೇ ಬರೆದಿದ್ದ ಕಾಗದಗಳು….. ಇಂಗ್ಲಿಷಿನಲ್ಲಿ ಬರೆದಿದ್ದ ವಿಳಾಸ ಓದಿಕೊಂಡೆ
Gurushantha Gowda
Hadlahally….
ಅದರ ಮೇಲೆ ಹಡ್ಲಹಳ್ಳಿ ಅಂಚೆ ಕಚೇರಿಯ ಠಸ್ಸೆ ಬಿದ್ದಿದೆ.
ನನಗೆ ಪಕ್ಕನೆ ಅರಿವಾಯಿತು. ನಮ್ಮ ಊರು ಹಾಡ್ಲಹಳ್ಳಿಗೆ ಹೆತ್ತೂರಿನ ಅಂಚೆ ಕಚೇರಿ. ಆದರೆ ಹಡ್ಲಹಳ್ಳಿಗೆ ಅದರದೇ ಅಂಚೆ ಕಚೇರಿ ಇದೆ.

ಸಾರ್ಟಿಂಗ್‌ ಆಫೀಸಿನಲ್ಲಿ ಪತ್ರ ವಿಂಗಡನೆ ಮಾಡುವಾಗ ಮೊದಲಿಗೇ ಇದ್ದ Hadlahally ಎಂಬುದನ್ನು ಓದಿಕೊಂಡು ಪತ್ರಗಳನ್ನು ಹಡ್ಲಹಳ್ಳಿ ಅಂಚೆಗೆ ಕಳಿಸಿದ್ದಾರೆ. ʼಹೀಗೂ ಆಗಬಹುದಲ್ಲʼ ಎಂದು ಅಚ್ಚರಿಯಾಯಿತು. ಬೋರೋಗೌಡ ಅವನು ಹೇಳಿದ್ದಂತೆ ನಮ್ಮೂರಿಗೆ ಬಂದು ಒಂದೆರಡು ದಿನ ಕಾಡುಮೇಡು ಅಲೆದು ಖುಷಿಪಟ್ಟು ಹೋಗಿದ್ದ.

ರಜಾ ಮುಗಿಸಿ ನಾನು ಹೊರಡುವ ದಿನ ಅವ್ವ ಐವತ್ತು ರೂಪಾಯಿನ ನೋಟೊಂದನ್ನು ತಂದು ಪ್ಯಾಂಟಿನ ಸೀಕ್ರೆಟ್‌ ಜೇಬಿಗೆ ತುರುಕಿ ʼಜ್ವಾಪಾನ… ಯಾರ್‌ ಯಾರ್‌ ತಾವ್ಲೊ ಈಸಗಂಡಿದೀನಿ ಅಂದಲ್ಲ, ಅದ ತೀರ್ಸಿ ಬಾಕಿದ ಹುಷಾರಾಗಿ ಇಟ್ಕ .. ಮುಂದಿನ ಖರ್ಚಿಗೆ ಆಗುತ್ತೆ… ಇದೇನಾದ್ರೂ ಸಾಲ್ದೆ ಬಂದ್ರೆ ಆಗ ಕಾಗ್ದ ಬರಿ… ಎಷ್ಟೇ ಕಷ್ಟಾದ್ರೂ ಕಳುಸ್ತಿವಿ…. ಈ ದುಡ್ಡು ಆಚೆ ಮನೆ ಹೆಂಗಸಿನ ಹತ್ರ ಸಾಲ ತಂದಿರದು. ಎಚ್ಚರಿಕೆಲಿ ಬಳಸು… ಎಂದಿದ್ದಳು.
ʼತಗಾ ಈ ಚಿಲ್ರೆ ದುಡ್ಡು ಎಣಿಸಿ ಅಂಗಿ ಜೇಬಿಗೆ ಇಟ್ಗಾ. ಬಸ್‌ ಚಾರ್ಜಿಗೆ ಆಗವಷ್ಟು ಐತೆʼ ಎಂದು ಮತ್ತಷ್ಟು ಚಿಲ್ಲರೆ ಹಣ ಕೈಗೆ ಹಾಕಿದ್ದಳು.

ಬಸ್ಸು ತುಮಕೂರು ಬಸ್‌ ನಿಲ್ದಾಣ ಸಮೀಪಿಸಿದಂತೆ ನನಗೆ ಚಿಂತೆ ಶುರುವಾಯಿತು. ಜೇಬಿನಲ್ಲಿ ಐವತ್ತರ ನೋಟು ಬಿಟ್ಟರೆ ಮತ್ತೆ ಚಿಲ್ಲರೆ ಕಾಸಿಲ್ಲ. ಟಿಕೆಟ್‌ಗೆ ಕೊಟ್ಟು ಉಳಿದಿದ್ದ ಚಿಲ್ಲರೆ ಕಾಸು, ಬಸ್‌ ಹೊರಟಾಗ ಟ್ರಂಕ್‌ ಮೇಲೆ ಹಾಕಿದ ಕೂಲಿಯ ಪಾಲಾಗಿತ್ತು .ನಾನೇ ಹೇಗಾದರೂ ಮಾಡಿ ಬಸ್ಸಿನ ಟಾಪ್‌ ಏರಿ ಟ್ರಂಕನ್ನು ಇಳಿಸಿಕೊಳ್ಳುವುದೆಂದು ನಿರ್ಧರಿಸಿಕೊಂಡೆ.

ಬಸ್‌ ನಿಂತ ಕೂಡಲೇ ಬಸ್ಸಿನ ಹಿಂಬದಿಯ ಏಣಿ ಏರತೊಡಗಿದೆ.

ʼಯಾಕಪ್ಪಾ ಏಣಿ ಮೇಲೆ ಹತ್ತುತಾ ಇದೀಯಾʼ ದೂರದಲ್ಲಿ ಕುಳಿತ ನಿಲ್ದಾಣಾಧಿಕಾರಿ ಕೂಗಿದ.

ಅದೆಲ್ಲಿದ್ರೋ ಕೂಲಿಗಳು ಬಸ್ಸಿನ ಬಳಿ ಓಡಿ ಬಂದು “ಏಯ್‌ ಇಳಿ ಇಳಿʼ ಎಂದು ಜೋರು ಮಾಡತೊಡಗಿದರು. ಇಲ್ಲ ಬಿಡಿ ಮೇಲೆ ನನ್ನ ಟ್ರಂಕ್‌ ಇದೆ. ನಾನೇ ಇಳಿಸಿಕೊಳ್ಳುತ್ತೇನೆ. ಎನ್ನುತ್ತಾ ಒಂದು ಎರಡು ಹೆಜ್ಜೆ ಮೇಲೇರಿದೆ.
ʼಬಸ್‌ ಸ್ಟಾಂಡ್‌ ಕೂಲಿಗಳು ನಾವಿರುವಾಗ ನೀನು ಹೇಗೆ ಹತ್ತುತ್ತೀಯಾʼ ಎಂದು ಜಬರಿಸುತ್ತಾ ಒಬ್ಬ ಕೂಲಿ ನನ್ನನ್ನು ಎಳೆದು ಕೆಳಗೆ ನೂಕಿ ಸರಸರ ಮೇಲೇರಿ ನನ್ನ ಟ್ರಂಕ್‌ ತೆಗೆದುಕೊಂಡು ಬಂದು ನನ್ನ ಮುಂದಿಟ್ಟು ʼಎಲ್ಲಿ ಕಾಸು ತೆಗಿʼ ಎಂದು ಕೈ ಚಾಚಿದ.

ನನಗೆ ಏನು ಮಾಡಬೇಕೆಂದು ತೋಚಲಿಲ್ಲ. ʼನನ್ನ ಬಳಿ ಕಾಸಿಲ್ಲʼ ಎಂದು ತಡವರಿಸುತ್ತಾ ಹೇಳಿದೆ. ʼಹಂಗಂದ್ರೆ? ನಾವೇನು ಪುಕ್ಸಟ್ಟೆ ಕೂಲಿ ಮಾಡ್ತೀವಿ ಅಂತಾ ತಿಳ್ದಿದೀಯಾ… ಈಗ ತಾನೇ ಊರ್‌ ಕಡೆಯಿಂದ ಬರ್ತಿದೀಯಾ ನನಗೇ ಸುಳ್‌ ಹೇಳ್ತಿಯಲ್ಲʼ ಎಂದು ಗದರಿಸಿದ.

ಕೂಲಿಗಳೆಲ್ಲಾ ಅವನ ಪರವಾಗಿ ಸುತ್ತುವರೆದದ್ದು ನೋಡಿ ಗಾಬರಿಯಾಯಿತು.
ʼನನ್ನ ಹತ್ತ ಚಿಲ್ಲರೆ ಕಾಸಿಲ್ಲ. ಐವತ್ತು ರೂಪಾಯಿ ನೋಟೈತೆ. ಅದ ಹೆಂಗೆ ಕೊಡ್ಲಿʼ ಎಂದು ಅಂಗಲಾಚುವವನಂತೆ ಹೇಳಿದೆ.

ʼಎಲ್ಲಿ ತಗಿ ಚಿಲ್ರೆ ಮಾಡಿಸ್ಗೊಂಡ್‌ ಬತ್ತಿನಿʼ ಎನ್ನುತ್ತಾ ನನ್ನೆದುರಿಗೆ ಅಡ್ಡ ನಿಂತ.
ನನಗೆ ಏನು ಮಾಡಬೇಕೆಂದು ತೋಚಲಿಲ್ಲ. ಅವ್ವ ಊರಲ್ಲಿ ಹೇಳಿದ ಮಾತು ನೆನಪಾಗಿ ಅಳು ಬರುವಂತಾಯಿತು.
ಎದುರು ನಿಂತವನು ಕಾಸು ಕೊಡದೆ ಬಿಡುವುದಿಲ್ಲ ಎಂದು ಖಾತ್ರಿಯಾಗಿ ವಿಧಿಯಿಲ್ಲದೆ ಜೇಬಿನಿಂದ ಐವತ್ತರ ನೋಟು ಹೊರಗೆಳೆದೆ.

ಅದನ್ನು ಕಿತ್ತುಕೊಂಡ ಕೂಲಿ ʼಟ್ರಂಕ್‌ ಇಟ್ಕಂಡು ಇಲ್ಲೇ ನಿಂತಿರು. ಚಿಲ್ರೆ ಮಾಡಿಸ್ಗಂಡ್‌ ಬತ್ತೀನಿʼ ಎಂದು ಅಂಗಡಿ ಸಾಲಿನಲ್ಲಿ ನಡೆಯುತ್ತಾ ಕಣ್ಮರೆಯಾದ.

ಅವನು ಹೋದ ದಿಕ್ಕಿನಲ್ಲೇ ಗಮನವಿಟ್ಟು ನೋಡುತ್ತಾ ಅವನ ಬರವಿಗಾಗಿ ಕಾದೆ. ಹತ್ತು ನಿಮಿಷವಾಯಿತು. ಅರ್ಧ ಗಂಟೆಯಾಯಿತು. ಒಂದು ಗಂಟೆಯೂ ಆಯಿತು. ಅವನು ಬರುವ ಸೂಚನೆ ಕಾಣಲಿಲ್ಲ. ನನಗೆ ಗಾಬರಿಯಾಯಿತು. ಅಳು ಒತ್ತರಿಸಿ ಬರತೊಡಗಿತು. ಅವನೊಂದಿದ್ದ ಕೂಲಿಗಳು ಅಲ್ಲೇ ಎದುರಿಗೆ ನಿಂತು ಬೀಡಿ ಸೇದುತ್ತಿದ್ದರು. ಅವನ ಬಗ್ಗೆ ಅವರನ್ನು ಕೇಳಿದೆ.

ʼನಮಗೇನ್‌ ಗೊತ್ತು. ಹೋಗಲೇ’ ಎಂದು ದಬಾಯಿಸಿದರು. ಕತ್ತಲಾಗುತ್ತಿತ್ತು. ಅವ್ವ ಕಷ್ಟದಲ್ಲಿ ಹೊಂದಿಸಿಕೊಟ್ಟಿದ್ದ ಐವತ್ತು ರೂಪಾಯಿ ಕೂಲಿಯ ಪಾಲಾಗಿತ್ತು. ನಾನು ಮೋಸ ಹೋಗಿದ್ದು ಖಾತ್ರಿಯಾಯಿತು.

ಅಳುತ್ತಲೇ ಟ್ರಂಕು ತಲೆಯ ಮೇಲಿಟ್ಟುಕೊಂಡು ಬಂಡೆಪಾಳ್ಯದ ಮಾರ್ಗವಾಗಿ ಮಠದ ದಿಕ್ಕಿಗೆ ದಾರಿ ಸವೆಸತೊಡಗಿದೆ.

ಸಂಜೆಯ ಪ್ರಾರ್ಥನೆ ಮಗಿಸಿ ಭೋಜನ ಶಾಲೆಗೆ ಹೋಗುವ ಅವರಸರದಲ್ಲಿದ್ದ ನನ್ನ ಸ್ನೇಹಿತರು ನಾನು ಟ್ರಂಕು ಹೊತ್ತು ಅಳುತ್ತಾ ಬರುತ್ತಿರುವುದು ಕಂಡು ನನ್ನನ್ನು ಸುತ್ತುವರಿದರು.

ನಾನು ಅಳುತ್ತಲೇ ನಡೆದದ್ದೆಲ್ಲವನ್ನು ಹೇಳಿದೆ.
ʼಮನೆಯವರು ಕಷ್ಟದಲ್ಲಿ ಹೊಂದಿಸಿಕಟ್ಟಿದ್ದ ದುಡ್ಡು ಅದು. ಈ ವಿಚಾರವನ್ನು ಅವರಿಗೆ ನಾನು ಹೇಗೆ ಹೇಳುವುದು? ಎಂದು ಗೋಳಾಡಿದೆ.

ʼಈಗ ಬಾ. ಊಟಕ್ಕೆ ಹೋಗೋಣ. ನಾನು ಕಾಗದ ಬರೆದು ಎಲ್ಲಾ ಅವರಿಗೆ ಮನವರಿಕೆ ಮಾಡಿಕೊಡುತ್ತೇನೆʼ ಎಂದು ಬೋರೇಗೌಡ ನನ್ನನ್ನು ಊಟದ ಹಾಲ್‌ಗೆ ಕರೆದುಕೊಂಡು ಹೋದ.

ಮರುದಿನ ಅವನೇ ನಮ್ಮ ಮನೆಗೊಂದು ಸವಿಸ್ತಾರವಾದ ಪತ್ರ ಬರೆದು, ಓದಿ ಹೇಳಿ ನನ್ನ ಒಪ್ಪಿಗೆ ಪಡೆದ.
ಹಿಂದಿನ ಅನುಭವದಿಂದ ಪಾಠ ಕಲಿತಿದ್ದರಿಂದ ಕನ್ನಡದಲ್ಲೇ ವಿಳಾಸ ಬರೆದ. ಗುರುಶಾಂತಗೌಡ, ಹೆತ್ತೂರು ಅಂಚೆ, ಹಾಡ್ಲಹಳ್ಳಿ ಗ್ರಾಮ… ಎಂದು ಬರೆದು ಹೆತ್ತೂರು ಎಂಬುದಕ್ಕೆ ಕೆಂಪಿಂಕಿನಲ್ಲಿ ಅಂಡರ್‌ಲೈನ್‌ ಮಾಡಿ ಅಂಚೆ ಡಬ್ಬಕ್ಕೆ ಹಾಕಿ ಬಂದ.

ಸಧ್ಯಕ್ಕೆ ಊರಿಂದ ಮತ್ತೆ ಹಣ ದೊರೆಯುವ ಭರವಸೆಯಿರಲಿಲ್ಲ. ಯಾಂತ್ರಿಕವಾಗಿ ಎಂಬಂತೆ ಮಿತ್ರರೊಡನೆ ಹೋಗಿ ಎಂ.ಓ ಲಿಸ್ಟ್‌ ಎದುರು ನಿಂತು ಬರುತ್ತಿದ್ದೆ.

ಒಂದು ವಾರ ಕಳೆದು ಊರಿಂದ ಪತ್ರ ಬಂತು.

ʼಆಗಿ ಹೋದದ್ದಕ್ಕೆ ಏನು ಮಾಡಲು ಆಗುತ್ತೆ. ಇಪ್ಪತ್ತು ರೂಪಾಯಿ ಹೊಂದಿಸಿ ಮನಿಯಾರ್ಡರ್‌ ಮಾಡಿದ್ದೇವೆ. ಜೋಪಾನ. ಓದಿನ ಕಡೆ ಗಮನ ಕೊಡು. ಕಾಗದ ಬರೆಯುತ್ತಾ ಇರುʼ ಎಂದು ಬರೆದಿದ್ದರು. ಆ ಕಾಗದ ಓದಿ ನನಗಿಂತ ಖುಷಿಪಟ್ಟವನೆಂದರೆ ಬೋರೇಗೌಡ.

ಮರುದಿನ ಬೇಗ ಹೋಗಿ ಕಾತರದಿಂದ ಎಂ.ಓ ಲಿಸ್ಟ್‌ ಮುಂದೆ ನಿಂತುಕೊಂಡೆವು. ಆ ಮಹಾಕಾವ್ಯದ ಮಧ್ಯ ಭಾಗದಲ್ಲಿ ನನ್ನ ಹೆಸರು ಪ್ರಕಟವಾಗಿದ್ದುದು ವಿಶೇಷವಾಗಿ ಕಂಡಿತು. ಬೇಗ ಊಟ ಮುಗಿಸಿ ಬಂದು ಪೋಸ್ಟ್‌ ಮ್ಯಾನ್‌ ಮುಂದೆ ಕ್ಯೂ ನಿಲ್ಲುವ ಉತ್ಸಾಹದಿಂದ ಡ್ರೈನಿಂಗ್‌ ಹಾಲ್‌ ಕಡೆ ಓಡಿದೆವು. ಹಾಲ್‌ ತುಂಬಿ ಹೋಗಿತ್ತು. ಮುಂದಿನ ಸಾಲಿನಲ್ಲಿ ಗೆಳೆಯನೊಬ್ಬ ಬೋರೇಗೌಡನಿಗೆ ಜಾಗ ಮಾಡಿಕೊಟ್ಟ.ನಾನು ಕೊನೆಯ ಸಾಲಿನಲ್ಲಿ ಕೂರಬೇಕಾಯಿತು.
ಬೇಗ ಬೇಗ ಊಟ ಮುಗಿಸಿ ಹೊರ ಬಂದ ಮುಂದಿನ ಸಾಲಿನ ಹುಡುಗರೆಲ್ಲಾ ನನಗಿಂತ ಮುಂಚಿತವಾಗಿಯೇ ರೂಮಿನ ಕಡೆ ಹೋಗಿದ್ದರು.

ಓಡಿ ಹೋಗಿ ಅಂಚೆಯವನೆದುರು ಕ್ಯೂನಲ್ಲಿ ನಿಂತೆ. ನನ್ನ ಸರದಿ ಬಂದಾಗ ಅವನ ಪ್ರಶ್ನಾವಳಿಗೆ ಉತ್ತರಿಸಲು ಗಂಟಲು ಸರಿಮಾಡಿಕೊಂಡು ಶಿಸ್ತಾಗಿ ನಿಂತೆ.

ಏನು ಹೆಸರು? ಎಂದ, ಹೇಳಿದೆ.

ಫಾರಂಗಾಗಿ ತಡಕಾಡಿದ. ಬೇಗ ಸಿಕ್ಕಲಿಲ್ಲ.

ಲಿಸ್ಟಲಿ ಹೆಸರಿದೆಯಾ? ಎಂದ ʼಹೂಂʼ ಎಂದೆ.

ಏನೋ ಸಂಶಯ ಬಂದವನಂತೆ ಇನ್ನೊಂದು ಕಂತೆಯೊಳಗಿಂದ ಒಂದು ಫಾರಂ ತೆಗೆದ.

ʼಯಾರು ಕಳಿಸಬೇಕುʼ ಎಂದ, ಹೇಳಿದೆ.

ತಳಭಾಗದ ತುಣುಕು ಹರಿದಿದ್ದ ಫಾರಂ ನನ್ನ ಮುಂದೆ ಹಿಡಿದು ʼಎಷ್ಟ್‌ ಸಾರಿ ಕೊಡ್ತಾರೆ ನಿನಗೆ ದುಡ್ಡು? ಇಷ್ಟುದ್ದ ಇದೀಯಾ! ನನಗೇ ಮೋಸ ಮಾಡ್ತಿಯಾ! ಸ್ವಾಮೀಜಿ ಅವರಿಗೆ ಹೇಳಿ ಬಿಡ್ತೀನಿ ನೋಡುʼ ಎಂದು ಗದರಿಸಿದ.
ಅಳು ಬಂದು ಅಲ್ಲಿಯೇ ಕುಸಿಯುವಂತಾಯಿತು. ಅಸರೆಗೆ ಕಟ್ಟೆ ಹಿಡಿದುಕೊಂಡೆ. ಅಲ್ಲಿಯೇ ಇದ್ದ ನನ್ನ ಗೆಳೆಯ ಕೈ ಹಿಡಿದುಕೊಂಡು ರೂಮಿಗೆ ಕರೆದುಕೊಂಡು ಹೋದ. ಬೋರೇಗೌಡ ತರಗತಿಗೆ ಹೋಗಲು ರೆಡಿಯಾಗುತ್ತಿದ್ದ .ನನ್ನ ನೋವನ್ನೆಲ್ಲಾ ಅವನ ಬಳಿ ಹೇಳಿಕೊಳ್ಳಬೇಕು ಎಂದುಕೊಳ್ಳುತ್ತಾ ಅವನ ಬಳಿ ಹೋದೆ.

ಅವನು ತನ್ನ ಪ್ಯಾಂಟಿನ ಜೇಬಿನಿಂದ ಇಪ್ಪತ್ತು ರೂಪಾಯಿ ತೆಗೆದು ನನ್ನ ಕೈಗಿಡುತ್ತಾ ‘ತಗಾ ನಿನ್ನ ಮನಿಯಾರ್ಡರ್‌ ನಾನು ಬಿಡಿಸಿಕೊಂಡು ಬಂದಿದೀನಿ.ಕ್ಲಾಸಿಗೆ ಲೇಟಾಗುತ್ತೆ ರೆಡಿಯಾಗು’ಎಂದ.

ನಾನು ಅಂಗೈಯಲ್ಲಿದ್ದ ಇಪ್ಪತ್ತು ರೂಪಾಯಿನ ನೋಟನ್ನು ನೋಡುತ್ತಾ ನಿಂತುಕೊಂಡಿದ್ದೆ.

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

August 31, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: