‘ಸಫಾ’ಳ ಓದು ಹೀಗೆ ಕಾಡಿ..

ಹೇಮಾ ಖುರ್ಸಾಪೂರ

ಲೇಖಕರು ಖ್ಯಾತ ಪ್ರಕಾಶನ ಸಂಸ್ಥೆ’ ಪ್ರಥಮ್ ಬುಕ್ಸ್’ ನ ಕನ್ನಡ ವಿಭಾಗದ ಸಂಪಾದಕರು.

‘ಅವಧಿ’ಯ ಅಂಕಣಕಾರರು

‘ಸಫಾ’ ಎಂಬ ಸುಟ್ಟುಸುರು ವ್ಯವಸ್ಥೆಯ ಸಾಕ್ಷಿಪ್ರಜ್ಞೆಯಾಗಲಿ…

ನಾನು ಇಷ್ಟಪಟ್ಟು ಮಾಡುವ ಕೆಲಸಗಳಲ್ಲಿ ಅನುವಾದವೂ ಒಂದು. ಮೊನ್ನೆ ಹೀಗೆ ಅನುವಾದ ಮಾಡಬೇಕಾದ ಯಾವುದೋ ಒಂದು ಸಾಲನ್ನು ತಲೆಯಲ್ಲಿಟ್ಟುಕೊಂಡು ಕಣ್ಣುಗಳು ಲ್ಯಾಪ್ ಟಾಪ್ ಪರದೆ ನೋಡುತ್ತಿದ್ದವು. ಯೋಗಿ ಬಂದು ಈ ಪುಸ್ತಕ ನಿಮಗಂತೆ ಎಂದು ಟೇಬಲ್ಲಿನ ಮೇಲಿಟ್ಟಾಗ ಮಾಡುತ್ತಿದ್ದ ಕೆಲಸ ಬಿಟ್ಟು ದೃಷ್ಟಿ ಆ ಕಡೆ ಹೊರಳಿತು.

ಪುಟ ತಿರುಗಿಸಿದರೆ ಈ ‘ಸಫಾ’ ಹೇಮಾಗೆ ಎನ್ನುವ ಒಕ್ಕಣೆಯೊಂದಿಗೆ ಕಾಲದಿಂದ ಮನದಲ್ಲಿದ್ದ ‘ಸಫಾ’ ಕೈಯಲ್ಲಿದ್ದಳು. ನಾನು ಹೆಚ್ಚಾಗಿ ಮಕ್ಕಳ ಜೊತೆಯೇ ಒಡನಾಡುವುದರಿಂದ ನನಗೆ ಮಕ್ಕಳ ದೃಷ್ಟಿಯಿಂದ ಜಗತ್ತನ್ನು ನೋಡುವುದು ಇಷ್ಟ. ಅದನ್ನು ಮಾಡುತ್ತೇನೆ ಕೂಡ.

ಮೊದಲ ಸಲ ‘ಸಫಾ’ ನನ್ನೊಳಗೆ ಬಂದಾಗ, ತಮ್ಮ ಪರಿಚಿತರಿಂದಲೇ ಚಿಕ್ಕ ವಯಸ್ಸಿನಲ್ಲಿ ದೌರ್ಜನ್ಯಕ್ಕೆ ಒಳಗಾದ ಹೆಣ್ಣುಮಕ್ಕಳ ಆತ್ಮಸ್ಥೈರ್ಯ ಹೆಚ್ಚಿಸುವ ಕೆಲಸ ಮಾಡುತ್ತಿದ್ದೆ ನಾನು.

‘ಸಫಾ’ಳ ಕುರಿತಾಗಿಯಾಗಲಿ, ವಾರಿಸ್ ಡಿರೀ ಬಗ್ಗೆಯಾಗಲಿ ನಾನು ಇಲ್ಲಿ ಏನನ್ನೂ ಹೇಳುವುದಿಲ್ಲ. ಅದು ನೀವೇ ಓದಬೇಕಾದದ್ದು. ನಾನು ಓದಿದ ಮೇಲೆ, ಓದದಿದ್ದವರು ‘ಸಫಾ’ಳನ್ನ ಓದಿಸುವಲ್ಲಿಗೆ ಕರೆದುಕೊಂಡು ಬಂದು ನಿಲ್ಲಿಸಬೇಕು ಎನ್ನುವುದು ನನ್ನ ನೈತಿಕ ಜವಾಬ್ದಾರಿ ಎನಿಸಿತು.

ಅದಕ್ಕಾಗಿ ನಾನು ಎಂದೂ ಮಾಡದ, ಮಾಡಬಾರದು ಎಂದ ನಿರ್ಧರಿಸಿದ ಕೆಲಸ ‘ಪುಸ್ತಕ ಪರಿಚಯ’ಕ್ಕೆ ಕೈ ಹಾಕಿದ್ದು.

ಎರಡು ಭಾಷೆಗಳು ಚೆನ್ನಾಗಿ ಗೊತ್ತಿದ್ದಾಗ ಅನುವಾದದ ಸಾಧ್ಯತೆ ಮತ್ತು ಮಿತಿ ಎರಡೂ ಅನುವಾದಕರಿಗೆ ಸವಾಲಿನ ಕೆಲಸ. ಅದರ ಬಗ್ಗೆ ಕೂಡ ನಾನು ಮಾತನಾಡುವುದಿಲ್ಲ.

ಕೆಲವು ಆಚರಣೆ ಕಟ್ಟಳೆಗಳು ಧರ್ಮಾಚರಣೆಯ ಭಾಗವಾಗಿರಬಹುದು ಅಥವಾ ವ್ಯವಸ್ಥೆ ಪ್ರೇರಿತ ಇರಬಹುದು. ಮಾಡುತ್ತಿರುವುದು ಏನು ಎನ್ನುವುದು ಗೊತ್ತಿರದಿದ್ದಾಗ ಅದು ಅಪರಾಧವಲ್ಲ. ಆದರೆ, ಅದು ತಪ್ಪು ಎನ್ನುವುದು ಗೊತ್ತಾದಾಗಲೂ ಒಂದು ಲೇಬಲ್ಲಿನ ಅಡಿಯಲ್ಲಿ ಅದನ್ನು ಮುಂದುವರಿಸುವುದು, ಅದಕ್ಕೊಂದು ಘನತೆ ಘೌರವ ಆರೋಪಿಸುವುದಿದೆಯಲ್ಲ ಅದು ಆತ್ಮವಿನಾಶದ ಹಾದಿ.

ಅದರಿಂದ ಹೊರ ನಡೆದು ಒಂದು ಸ್ವಸ್ಥ ಸಮಾಜದಲ್ಲಿ ಬದುಕುವ ನಿರ್ಧಾರ ಒಬ್ಬರಿಂದ ಆಗುವ ಮಾತಲ್ಲ. ಅದೊಂದು ವಿಶ್ವಮಾನವ ಪ್ರಜ್ಞೆಯಲ್ಲಿ ಜರುಗಬೇಕಾದ ಕರ್ತವ್ಯ.

ಈ ಭಯದ ಹಾದಿಯಲ್ಲಿ ‘ಸಫಾ’ಳ ಹಿರಿಯರು ಸಮವಯಸ್ಕರರು ಕಿರಿಯರು ಮಾತ್ರ ನಡೆದಿಲ್ಲ. ನೋಡಬಲ್ಲವರಿಗೆ ಆಡುವ ಮಕ್ಕಳ ಕಣ್ಣೊಳಗಿನ ಈ ಭಯ ಕಂಡೇ ಕಾಣುತ್ತದೆ.

2001-2002ರ ಸಮಯ. ನಮ್ಮ ಊರಿಗೆ ನೀರು ಸರಬರಾಜು ಮಾಡಲು, ಊರ ಹೊರಗೆ ಒಂದು ದೊಡ್ಡ ನೀರಿನ ಟ್ಯಾಂಕ್ ನಿರ್ಮಾಣವಾಗುತ್ತಿತ್ತು. ಅದರ ಕೆಲಸಕ್ಕಾಗಿ ಬಂದವರು ಓಡಿಸ್ಸಾದ ರೂರ್ಕೆಲಾದವರು. ಕಪ್ಪನೆಯ ಮೈಬಣ್ಣದ ದುಂಡು ದುಂಡಗಿನ ಚಿಕ್ಕವಯಸ್ಸಿನ ಚೆಂದದ ಹೆಣ್ಣುಮಕ್ಕಳು.

ನಮ್ಮೂರಿನ ದೊಡ್ಡ ಕೆರೆಯ ದಂಡೆಯ ಮೇಲೆ ನೀರಿನ ಟ್ಯಾಂಕ್ ನಿರ್ಮಾಣವಾಗುತ್ತಿತ್ತು. ಹೊಲ ಗದ್ದೆಗಳೇ ಜಾಸ್ತಿ ಇದ್ದ ಆ ಪ್ರದೇಶಕ್ಕೆ ಸಂಜೆ ಮೇಲೆ ಹೆಣ್ಣುಮಕ್ಕಳು ಹೋಗುತ್ತಿರಲಿಲ್ಲ. ಆದರೆ ಈ ಕಾಮಗಾರಿ ಶುರುವಾದ ಮೇಲೆ ಅಲ್ಲೊಂದು ತಾತ್ಕಾಲಿಕ ಊರೇ ಎದ್ದು ನಿಂತಿದ್ದರಿಂದ ನನಗೂ ಸ್ನೇಹಿತೆಗೂ ನಿತ್ಯವೂ ಕೆರೆಯ ಏರಿಯ ಮೇಲೆ ಕನಸ ಕಾಲ್ನಿಡಿಗೆ.

ಒಡ್ಡಿನ ಮೇಲೆ ಕೂರುತ್ತಿದ್ದ ನಮ್ಮ ಜೊತೆ ತುಸು ಸಲಿಗೆ ಬೆಳದಿದ್ದಕ್ಕೆ ಒಂದಿಷ್ಟು ಹೆಣ್ಣುಮಕ್ಕಳು ನಮ್ಮೊಂದಿಗೆ ಮಾತನಾಡುತ್ತಿದ್ದರು. ಒಂದು ಸಂಜೆ ಇಪ್ಪತ್ತೈದಕ್ಕೆಲ್ಲಾ ಹತ್ತು ವರ್ಷದ ಮಗಳ ತಾಯಿಯಾಗಿದ್ದವಳೊಬ್ಬಳು ಉರಿವಕೊಳ್ಳಿ ಹಿಡಿದುಕೊಂಡು ಮಗಳನ್ನು ಅಟ್ಟಾಡಿಸುತ್ತಿದ್ದಳು. ಅದನ್ನು ತಪ್ಪಿಸಿ ಮಗಳನ್ನು ಬೆನ್ನ ಹಿಂದೆ ನಿಲ್ಲಿಸಿಕೊಂಡು ತಾಯಿಯನ್ನು ಏನು ಎತ್ತ ಎಂದು ವಿಚಾರಿಸಿದೆ.

ಎಷ್ಟು ಕಾಯ್ದರೂ ಎಷ್ಟೋ ತಿಂಗಳಿಂದ ಒಬ್ಬೊಬ್ಬಂಟಿಯಾಗಿರುವ ಜೀವಗಳ ಕಣ್ಣುಗಳು, ಕೈಗಳು ಮರೆಮೋಸದಲ್ಲಿ ಈ ಕೂಸಿನ ಮೈಮೇಲೆ ಬಿದ್ದು ಮೊಲೆಗಳು ಹಚ್ಚಗಾಗಿ ಬಾವು ಬಂದಿದ್ದವು. ಇವು ಇದ್ದರೆ ತಾನೇ ಇದೆಲ್ಲ, ಸುಟ್ಟೇ ಹಾಕುತ್ತೇನೆ ನೀ ಸತ್ತರೂ ಚಿಂತೆಯಿಲ್ಲ ಎನ್ನುವಂತೆ ಆ ತಾಯಿಯ ಅಂತರಂಗ ಜ್ವಲಿಸುತ್ತಿತ್ತು.

ನನ್ನ ಬೆನ್ನು ಅವಚಿ ಹಿಡಿದಿದ್ದ ಆ ಕೂಸು ಥರಥರ ನಡಗುತ್ತಿತ್ತು. ಬೆನ್ನಿಗೆ ತಾಕಿದ್ದ ಅದರ ಎದೆಗಳ ಬಿಸಿ ನನ್ನ ಬೆನ್ನುಹುರಿಯಲ್ಲಿ ಚಳಿ ಮೂಡಿಸಿತ್ತು. ಹತ್ತು ವರ್ಷದ ಹಿಂದೆ ನಸುಕಿನಲ್ಲಿ ಹೊಟೇಲಿನ ಒಲೆಯ ಮೇಲಿನ ಪಾತ್ರೆಗೆ ಹಾಲು ಹಾಕುತ್ತಿದ್ದಾಗ ಹಿಂದೆ ಬಂದ ಕೆಲಸಗಾರರ ನೋಟ ಸರಿಯಾಗಿಲ್ಲ ಎನ್ನುವುದರ ಅರಿವಾಗಿ ಉರಿವ ಜಾಲಿ ಕಟ್ಟಿಗೆ ಹೊರಗೆ ಹಿರಿದು ನಿಲ್ಲುವ ಧೈರ್ಯ ನನಗೆ ಬರದೆ ಹೋಗಿದ್ದರೆ, ಬಹುಶಃ ನಾನೂ ಯಾಕಿರಬೇಕು ಇವು, ಸುಟ್ಟುಕೊಂಡರಾಯಿತು ಎಂತಲೇ ಯೋಚಿಸುತ್ತಿದ್ದೆ ಎನಿಸುತ್ತದೆ.

ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯದ ವಿಷಯಕ್ಕೆ ಬಂದರೆ ವಿಕೃತಿ ಮನುಷ್ಯನ ಪ್ರಕೃತಿಯ ಅಂಗವಾಗಿಯೇ ಕೆಲಸ ಮಾಡುತ್ತ ನೈಸರ್ಗಿಕವೆನ್ನಿಸಿಕೊಂಡು ಕ್ರೌರ್ಯದೊಂದಿಗೆ ಮಿಲನಗೊಳ್ಳುವ ಅಪಾಯ ಸದಾ ಇರುತ್ತದೆ. ಇದನ್ನು ಮೀರಲು ಸಾಧ್ಯವಾಗುವುದು ನಮ್ಮ ನಮ್ಮ ನೈತಿಕ ಎಚ್ಚರ ನಮ್ಮನ್ನು ಎಚ್ಚರವಾಗಿಟ್ಟಾಗಲೇ.

ಈ ಬಗ್ಗೆ ನಾ ಕಂಡ ಇನ್ನೊಂದು ಸಂಗತಿ ಹೇಳಿ ಮುಗಿಸುತ್ತೇನೆ. ಚಿಕೇನಕೊಪ್ಪದ ದೃಷ್ಟಿ ವಿಶೇಷ ಚೇತನರ ಶಾಲೆಯಲ್ಲಿ ನಾನು ಕೆಲಸ ಮಾಡುತ್ತಿದ್ದಾಗ ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬರು ಅವರ ಮಗಳನ್ನು ಕರೆದುಕೊಂಡು ಹೋಗಲು ಬರುತ್ತಿದ್ದರು. ಆ ಮಗು ಬೈಕ್ ಮೇಲೆ ಕೂತ ಅಪ್ಪನ ಜೇಬು ಹಿಡಿದು ಬೈಕಿನ ಮೇಲೆ ಹತ್ತಿ, ಆ ಕಡೆ ಈ ಕಡೆ ಒಂದು ಕಾಲು ಹಾಕಿ ಕುಳಿತು ಹೊಟ್ಟೆ ಬಳಸಿದ ಮೇಲೆ, ಮುಂದೆ ಮುಖ ಮಾಡಿ ಕೂತ ಹಾಗೇ ಅಪ್ಪ ಎರಡೂ ಕೈಯ್ಯನ್ನು ಹಿಂದೆ ತೆಗೆದುಕೊಂಡು ಹೋಗಿ ಮಗುವಿನ ಫ್ರಾಕ್ ಎರಡೂ ತೊಡೆ ದಾಟಿ ಕೆಳಗೆ ಬಂದಿರುವುದನ್ನು ಪಕ್ಕಾ ಮಾಡಿಕೊಂಡು ಗಾಡಿ ಶುರು ಮಾಡುತ್ತಿದ್ದರು.

ಇಷ್ಟೇ, ಕಾಣದಿದ್ದವರರು ನೋಡಲಾರರು, ಸರಿ. ಆದರೆ, ನೋಡಬಲ್ಲವರಾದರೂ ಕಾಣಬಹುದಲ್ಲ..!

‘ಸಫಾ’ಳಂಥ ಎಲ್ಲ ಮುದ್ದುಗೌರಿಯರೂ ಕ್ಷೇಮವಾಗಿರಲಿ.

‍ಲೇಖಕರು avadhi

August 24, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: